ಸಿನಿಮಾ
ಮಿನ್ನಲ್ ಮುರಳಿಯ ‘ಸೆಲ್ವಂ’ ಪಾತ್ರ

ಲಾಕ್ಡೌನ್ ಸಂದರ್ಭದಲ್ಲಿ ಒಟಿಟಿಯಲ್ಲಿ ಅತಿ ಹೆಚ್ಚು ಮಿಂಚುತ್ತಿರುವ ನಟ ಟೊವಿನೋ ಥೋಮಸ್. ವಿಲನ್ ಮತ್ತು ನಾಯಕ ಎರಡೂ ಪಾತ್ರಗಳಿಗೂ ಸೈ ಎಂದು ಈಗಾಗಲೇ ಸಾಬೀತು ಮಾಡಿದವರು. ಇದೀಗ ನೆಟ್ಫ್ಲಿಕ್ಸ್ನಲ್ಲಿ ಇವರ ‘ಮಿನ್ನಲ್ ಮುರಳಿ’ ಸುದ್ದಿ ಮಾಡುತ್ತಿದೆ. ಬಾಸಿಲ್ ಜೋಸೆಫ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ಕತೆಯ ವಿಶೇಷವೆಂದರೆ, ಇದೊಂದು ‘ಸೂಪರ್ಮ್ಯಾನ್’ ಚಿತ್ರ. ಮೊತ್ತ ಮೊದಲ ಬಾರಿಗೆ ದೇಶೀ ಸೂಪರ್ ಮ್ಯಾನ್ ಮತ್ತು ದೇಶೀ ಸೂಪರ್ ವಿಲನ್ಗಳನ್ನು ನಿರ್ದೇಶಕರು ದಕ್ಷಿಣ ಭಾರತೀಯರಿಗೆ ಕಟ್ಟಿಕೊಟ್ಟಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ ಚಿತ್ರ ಸುದ್ದಿಯಲ್ಲಿರುವುದು ಟೊವಿನೋ ಥೋಮಸ್ ಕಾರಣಕ್ಕಾಗಿಯಲ್ಲ, ವಿಲನ್ ಪಾತ್ರವನ್ನು ನಿರ್ವಹಿಸಿರುವ ಗುರು ಸೋಮಸುಂದರ್ ಅವರ ಕಾರಣದಿಂದ. ತಮಿಳಿನ ‘ಜೋಕರ್’ ಚಿತ್ರದ ಮೂಲಕ ಈಗಾಗಲೇ ಖ್ಯಾತರಾಗಿರುವ ಗುರು ಸೋಮಸುಂದರ್ ‘ಮಿನ್ನಲ್ ಮುರಳಿ’ಯಲ್ಲಿ ಒಬ್ಬ ಗ್ರಾಮೀಣ ಪ್ರದೇಶದ ವಿಲಕ್ಷಣ, ಭಗ್ನ ಪ್ರೇಮಿಯಾಗಿ ಹೃದಯಸ್ಪರ್ಶಿ ಅಭಿನಯವನ್ನು ನೀಡಿದ್ದಾರೆ. ಬಾಲ್ಯದಲ್ಲಿ ಅವಮಾನದ ಗಾಯಗಳೊಂದಿಗೆ ಬದುಕಿದ ಅಂತರ್ಮುಖಿ ಸೆಲ್ವಂ, ತನ್ನೊಳಗಿನ ಪ್ರೀತಿಯನ್ನು ಒಂದು ಹಕ್ಕಿ ಗೂಡಿನಂತೆ ಜೋಪಾನ ಮಾಡಿಕೊಂಡು ಬಂದವನು. ಪ್ರೀತಿಸಿದ ಹುಡುಗಿ ಯಾರನ್ನೋ ಮದುವೆಯಾದರೂ, ಆಕೆಯ ನೆನಪುಗಳನ್ನು ತನ್ನೊಳಗೆ ಕಾಪಾಡಿಕೊಂಡು ಬಂದವನು. ಯಾವುದೋ ಒಂದು ಸಂದರ್ಭದಲ್ಲಿ ಆಕೆ ಮತ್ತೆ ತನಗೆ ದೊರಕುತ್ತಾಳೆ ಎನ್ನುವ ಸನ್ನಿವೇಶ ನಿರ್ಮಾಣವಾಗುತ್ತದೆ. ಅಲ್ಲಿಂದ ಚಿತ್ರ ತಿರುವು ಪಡೆದುಕೊಳ್ಳುತ್ತದೆ.
ತನ್ನ ಪ್ರೀತಿ ಜೀವಪಡೆದುಕೊಳ್ಳುತ್ತದೆ ಎನ್ನುವಷ್ಟರಲ್ಲಿ ಮತ್ತೆ ಅದಕ್ಕೆ ತೊಡಕುಗಳು ಎದುರಾಗುತ್ತಿರುವಂತೆಯೇ ಸೆಲ್ವಂ ಕ್ರೂರಿಯಾಗುತ್ತಾ ಹೋಗುತ್ತಾನೆ. ಆಕಸ್ಮಿಕ ಮಿಂಚಿನಿಂದ ಅತಿಮಾನವ ಶಕ್ತಿಯನ್ನು ಪಡೆದುಕೊಂಡ ಸೆಲ್ವಂ ಇಡೀ ಊರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಾನೆ. ಇಂತಹ ಸಂದರ್ಭದಲ್ಲಿ, ಜೈಸನ್ ಆ ಶಕ್ತಿಯನ್ನು ಎದುರಿಸುವ ಸೂಪರ್ ಮ್ಯಾನ್ ಆಗಿ ಗೋಚರಿಸುತ್ತಾನೆ. ‘ಮಿನ್ನಲ್ ಮುರಳಿ’ ಹೃದಯಸ್ಪರ್ಶಿ ಕಥಾನಕವಾಗಿ ಬದಲಾಗುವುದು ಸೋಮಸುಂದರ್ ಅವರ ನಟನೆಯ ಮೂಲಕ. ಪ್ರೀತಿ, ಅದನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಅವನೊಳಗಿನ ತುಮುಲಗಳು, ನಿರಾಸೆ, ಕ್ರೌರ್ಯ...ಎಲ್ಲವನ್ನು ಸೋಮಸುಂದರ್ ಅವರು ಅದ್ಭುತವಾಗಿ ಕಟ್ಟಿಕೊಡುತ್ತಾರೆ. ಮಿನ್ನಲ್ ಮುರಳಿ ಸೋಮಸುಂದರ್ ಚಿತ್ರ ಬದುಕಿಗೆ ಹೊಸ ತಿರುವನ್ನು ನೀಡುವುದರಲ್ಲಿ ಅನುಮಾನವಿಲ್ಲ.
ಜೈಸನ್ ಪಾತ್ರದಲ್ಲಿ ಟೊವಿನೋ ಥೋಮಸ್ ಅವರ ಚೆಲ್ಲು ಪಾತ್ರ ಇಷ್ಟವಾಗುತ್ತದೆ. ಚಿತ್ರದುದ್ದಕ್ಕೂ ಅವರು ಲವಲವಿಕೆಯಿಂದ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಒಟ್ಟಿನಲ್ಲಿ ‘ಮಿನ್ನಲ್ ಮುರಳಿ’ ಮೂಲಕ ನಮ್ಮದೇ ನೆಲದ ಸೂಪರ್ ಮ್ಯಾನ್ ನಮಗೆ ದಕ್ಕಿದಂತಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ