varthabharthi


ಅನುಗಾಲ

ಆತ್ಮಾರಾಧನೆಯ ಹೊಸ ರೂಪ

ವಾರ್ತಾ ಭಾರತಿ : 6 Jan, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಮುಖ್ಯ ಪ್ರಶ್ನೆಯಿರುವುದು ಒಬ್ಬ ಹಿರಿಯ ಹುದ್ದೆಯನ್ನು ಅಲಂಕರಿಸಿ ದೇಶದ ಗೌರವಕ್ಕೆ ಹೊಣೆಯಾಗಿರುವವರು ತಮ್ಮ ವೈಯಕ್ತಿಕ ವರ್ಚಸ್ಸಿಗೆ ಎಷ್ಟು ಸಮಯ, ಶಕ್ತಿ ಮತ್ತು ಹಣವನ್ನು ಖರ್ಚು ಮಾಡಬೇಕು ಎನ್ನುವುದು. ಒಂದು ಹುದ್ದೆಯ ಗೌರವವಿರುವುದು ಅದರ ಪ್ರದರ್ಶನದಲ್ಲಿ ಅಲ್ಲ. ಉಡುಪುತೊಡುಪು, ಶೃಂಗಾರದಲ್ಲಿ, ಕೃತಕ ಅಚ್ಚುಕಟ್ಟಿನಲ್ಲಿ ಅಲ್ಲ. ಬದಲಾಗಿ ದೇಶದ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆತ ಪಡುವ ಶ್ರಮದಲ್ಲಿ. ವರ್ಚಸ್ಸಿಗೆ ಹುದ್ದೆಯೇ ಬೇಕೆಂದಿಲ್ಲ. ಗಾಂಧಿಗೆ ಯಾವ ಹುದ್ದೆಯೂ ಇರಲಿಲ್ಲ. ನೆಹರೂ ಪ್ರಧಾನಿಯಾಗಿದ್ದಾಗ ಕಾನೂನು ಮಂತ್ರಿಯಾಗಿದ್ದ ಡಾ.ಅಂಬೇಡ್ಕರ್ ಇಂದು ಶ್ರೇಷ್ಠತೆ ಮತ್ತು ಜನಪ್ರಿಯತೆಯಲ್ಲಿ ಗಾಂಧಿಯೊಡನೆ ಹೋಲಿಸಬಹುದಾದ ವ್ಯಕ್ತಿತ್ವಕ್ಕೆ ಪಾತ್ರರಾಗಿದ್ದಾರೆ.


ಮೊನ್ನೆ ಮೊನ್ನೆ ಪ್ರಧಾನಿ ಮೋದಿ ಕಾಶಿಯಲ್ಲಿ ಗಂಗೆಗೆ ಆರತಿಯನ್ನೊಪ್ಪಿಸುವ ಒಂದು ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅವರು ಕೈಯಲ್ಲಿ ಆರಾಧನಾ ವಸ್ತುಗಳನ್ನು ಹಿಡಿದುಕೊಂಡು ಒಬ್ಬರೇ ಗಂಗೆಯಲ್ಲಿ ನಡೆಯುವ ಆ ಚಿತ್ರದಲ್ಲಿ ಗಂಗೆಯ ದಡದಲ್ಲಿ ಅನುಯಾಯಿಗಳು ಮತ್ತು ಅಧಿಕಾರಿಗಳಿರುವುದನ್ನು ತೋರಿಸಲಾಗಿತ್ತು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಆ ಎಲ್ಲ ವೀಡಿಯೊಗಳೂ ಫೋಟೊಗಳೂ ಅವರ ಎದುರಿನಿಂದ ತೆಗೆದದ್ದಾಗಿದ್ದವು. ಅಂದರೆ ವ್ಯವಸ್ಥಿತವಾದ ಒಂದು ಫೋಟೊ ಸೆಷನ್ ಅದಾಗಿತ್ತು. ಅವರೆಲ್ಲರೂ ಇನ್ನೊಂದು ದೋಣಿಯಲ್ಲೋ ಅಥವಾ ಬೇರ್ಯಾವುದೋ ಸಾಧನದಲ್ಲಿ ಮೊದಲೇ ಹೋಗಿ ಆನಂತರ ಪ್ರಧಾನಿಯವರನ್ನು ಜಾಗರೂಕತೆಯಿಂದ ನಡೆಯಲು ಹೇಳಿದ್ದು ಸ್ಪಷ್ಟವಾಗಿತ್ತು. ಇಂತಹ ದೃಶ್ಯಗಳು ಕೇದಾರನಾಥದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ, ಮೆಟ್ರೋ ರೈಲಿನಲ್ಲಿ, ವಿಮಾನದಲ್ಲಿ, ವಿದೇಶಗಳಲ್ಲೂ ಎಲ್ಲೆಂದರಲ್ಲಿ ಸೃಷ್ಟಿಯಾಗುತ್ತಿವೆ. ರೈಲು ಸುರಂಗಮಾರ್ಗದಲ್ಲಿ ಹೋಗುವಾಗಲೂ ಪ್ರಧಾನಿ ಕೈ ಬೀಸುವುದನ್ನು ತೊರಿಸುವ ವೀಡಿಯೊ ವೈರಲ್ ಆಗುತ್ತಿದ್ದವು. ಇದರ ಸಾರ್ಥಕತೆಗೆ ಯಾರು ಹೊಣೆಯೋ ಗೊತ್ತಿಲ್ಲ. ಸಹಜವಾಗಿಯೇ (!) ಚಲನಚಿತ್ರಗಳಲ್ಲಿ ವಿವಿಧ ರೀತಿಯ ತಂತ್ರಗಳನ್ನು ಬಳಸಿ ಕೃತಕವನ್ನು ಸಹಜವಾಗಿ ಪರಿವರ್ತಿಸಲಾಗುತ್ತದೆ. ‘ಟೈಟಾನಿಕ್’ ಚಿತ್ರದ ಕೊನೆಯ ದೃಶ್ಯದಲ್ಲಿ ನಾಯಕನು ಕೊರೆವ ಚಳಿಯ ನೀರಿನಲ್ಲಿ ನಾಯಕಿ ಕುಳಿತ ದೋಣಿಗೆ ಆತುಕೊಂಡು ತನ್ನ ಕೊನೆಯ ಕ್ಷಣಗಳನ್ನು ಕಾಯುವ ಹೃದಯವಿದ್ರಾವಕ ದೃಶ್ಯವಿದೆ. ಅದು ಈಜುಕೊಳದಲ್ಲಿ ಚಿತ್ರಿಸಲ್ಪಟ್ಟ ದೃಶ್ಯ. ಆದರೆ ಪ್ರೇಕ್ಷಕರಿಗೆ ಅದು ಕೃತಕವೆಂದು ಅನ್ನಿಸುವುದೇ ಇಲ್ಲ. ಬಾಲಿವುಡ್ ತಾರೆ ಕಂಗನಾ ರಣಾವತ್ ಝಾನ್ಸಿಯ ರಾಣಿ ಲಕ್ಷ್ಮ್ಮೀಬಾಯಿಯಾಗಿ ಅಭಿನಯಿಸಿದ ಸಿನೆಮಾವೊಂದರಲ್ಲಿ ಆಕೆ ಕುದುರೆಸವಾರಿ ಮಾಡುವ ದೃಶ್ಯವಿದೆ. ಅದು ಚಲಿಸದ ಕುದುರೆಯೆಂಬ ಭಾವ ವೀಕ್ಷಕರಿಗೆ ಬರುವುದಿಲ್ಲ. ಇವೆಲ್ಲ ವ್ಯಕ್ತಿ ಅಥವಾ ವಸ್ತು/ವಿಚಾರ ವೈಭವಕ್ಕಾಗಿ ನಡೆಸುವ ತಂತ್ರಗಳು. ಇಂದ್ರಿಯಗಳಿಗೆ ಭ್ರಮೆ ಹುಟ್ಟಿಸುವ ಚಮತ್ಕಾರಗಳು. ಅದು ನಿಜವಲ್ಲವೆಂದು ತಿಳಿದಿದ್ದರೂ ನೈಜವೆಂದು ಕೊಂಡಾಡುತ್ತೇವೆ. ಗ್ಲಿಸರಿನ್ ಕಣ್ಣೀರನ್ನು ನೋಡಿ ಕಣ್ಣೀರಿಡುತ್ತೇವೆ. ಇವೆಲ್ಲ ಕೃತಕ ಜಗತ್ತಿನ ಭಾವಭಂಗಿಗಳು. ನಾಟಕದಲ್ಲಿ ಮಾಲಕ ಸೇವಕನ ಪಾತ್ರವನ್ನೂ ಊಳಿಗದವನೊಬ್ಬ ಮಾಲಕನ ಪಾತ್ರವನ್ನೂ ವಹಿಸಿದರೆ ಆ ಅಸಮಾನತೆ ನಾಟಕರಂಗದಲ್ಲಿ ಮಾತ್ರ. ನೇಪಥ್ಯದಲ್ಲಿ ಮಾಲಕ ಮಾಲಕನೇ, ಊಳಿಗದವನು ಊಳಿಗದವನೇ. ಆದರೆ ಇಂತಹ ತಂತ್ರಗಳನ್ನು ನಿಜಜೀವನದಲ್ಲಿ ಬಳಸಲಾಗದು. ಸಾಧ್ಯವಾದರೂ ಬಳಸಬಾರದು. ರೀಲ್ ಲೈಫನ್ನು ರಿಯಲ್ ಲೈಫಲ್ಲಿ ಒಡಮೂಡಿಸಬಾರದು. ಬಾಲ್ಯದಲ್ಲಿ ಫೋಟೊ ತೆಗೆದಿಲ್ಲವೆಂದು ವಯಸ್ಕನೊಬ್ಬ ಹಾಗೆ ಹುಟ್ಟುಡುಗೆಯಲ್ಲಿ ಫೋಟೊ ತೆಗೆಸಲು ಸಾಧ್ಯವೇ? ತೆಗೆದರೂ ಅದು ಬಾಲ್ಯದ ಫೋಟೊ ಆದೀತೇ?

ಆದರೆ ನಮ್ಮ ಸಮಾಜ ಮತ್ತು ರಾಜಕಾರಣ ಮತ್ತು ಅದರ ಆಶ್ರಿತ ಮಾಧ್ಯಮಗಳು ಜೊತೆ ಸೇರಿ ಅಧಿಕಾರಬದುಕಿನಲ್ಲಿ ತಂತ್ರಮುಖೇನ ಕೃತಕ ಜಗತ್ತನ್ನು ಸ್ಥಾಪಿಸುತ್ತವೆ. ಸರ್ವಾಧಿಕಾರಿಗಳು ತಮ್ಮ ಬದುಕಿಗನುಗುಣವಾಗಿ ಪ್ರಜೆಗಳೂ ಬದುಕಬೇಕೆಂದು ಮಾಡುವ ತೀರ್ಮಾನಗಳು ನಗೆಪಾಟಲಿಗೀಡಾದರೂ ಅವರಿಗದು ಹಾಗನಿಸುವುದಿಲ್ಲ. ಈಚೆಗೆ ಉತ್ತರ ಕೊರಿಯಾದ ಅಧ್ಯಕ್ಷ ತನ್ನ ತಂದೆ ಮತ್ತು ಹಿಂದಿನ ಸರ್ವಾಧಿಕಾರಿಯ ನೆನಪಿನ ಕಾರ್ಯಕ್ರಮದ ದಿನಗಳಲ್ಲಿ ತನ್ನ ಪ್ರಜೆಗಳಾರೂ ನಗಬಾರದೆಂದು ಆದೇಶಿಸಿದ. ಮನುಷ್ಯನ ಮೂಲ ಪ್ರವೃತ್ತಿಯನ್ನು ನಿಯಂತ್ರಿಸುವ ಇಂತಹ ಆದೇಶವು ಪ್ರಜೆಗಳ ಪಾಲಿಗೆ ನರಕಯಾತನೆಯನ್ನು ತಂದಿರಬಹುದು. ಈಗ ಕೋವಿಡ್-19ರ ಬಳಿಕ ನಗುವನ್ನು ಸದ್ದಿನ ಹೊರತಾಗಿ ಮುಖಮುಸುಕಿನ ಮೂಲಕ ಬಚ್ಚಿಡಬಹುದು. ಆದರೆ ನಗಬಾರದೆಂಬುದು ಕೃತಕತೆಯ ಪರಮನೀಚತನ. ಸಾಮಾನ್ಯವಾಗಿ, ಬಟ್ಟೆಯಂಗಡಿ, ಆಭರಣಗಳ ಅಂಗಡಿ ಮತ್ತಿತರ ಮಹಿಳಾ ಪ್ರಾಮುಖ್ಯತೆಯ ಸರಕುಗಳ ಕೇಂದ್ರಗಳಲ್ಲಿ ಮಹಿಳೆಯರ ದೊಡ್ಡ ಗೊಂಬೆಗಳನ್ನು ನಿಲ್ಲಿಸಿ ಅವಕ್ಕೆ ಸರಕುಗಳನ್ನು ಪೋಣಿಸಿ ಆಕರ್ಷಿಸುವುದು ವಾಡಿಕೆ. ಆದರೆ ತಾಲಿಬಾನ್ ತನ್ನ ದೇಶದ ಅಂಗಡಿ ಮಳಿಗೆಗಳಲ್ಲಿ ಪ್ರದರ್ಶನಕ್ಕಾಗಿ ಇಡುವ ಸ್ತ್ರೀಯರ ಗೊಂಬೆಗಳ ತಲೆಯನ್ನು ಕತ್ತರಿಸಬೇಕೆಂದು ಆದೇಶಿಸಿದೆ. ಈಗ ಅಲ್ಲಿ ಕತ್ತು ಕತ್ತರಿಸುವ ಮಹಾಕಾರ್ಯಕ್ರಮ ನಡೆಯುತ್ತಿದೆ. ಆಳುವವರಿಗೆ ಹೇಗೂ ಇಲ್ಲದ ತಲೆ ಪ್ರದರ್ಶನದ ಗೊಂಬೆಗಳಿಗೂ ಇರಬಾರದೆಂದು ಅಲ್ಲಿನ ಸರಕಾರ ಯೋಚಿಸಿರಬೇಕು. ಅಂಗುಲಿಮಾಲಾನು ಸಂಗ್ರಹಿಸಿದ ಬೆರಳುಗಳ ಹಾಗೆ ಇವನ್ನೂ ಸಂಗ್ರಹಿಸಿಡುವ ಮ್ಯೂಸಿಯಂಗಳು ಬಂದರೆ ಅಚ್ಚರಿಯಿಲ್ಲ.

ಅಧಿಕಾರಸ್ಥರು ಸ್ವಭಾವತಃ ದಪ್ಪ ಚರ್ಮದವರು. ಇನ್ನೊಬ್ಬರು ಅವರಿಗೆ ಬೈದರೆ ಅವರಿಗೆ ನಾಟುವುದಿಲ್ಲ. ಹಾಗೆಂದು ಅವರೇನೂ ಸುಮ್ಮನಿರುವುದಿಲ್ಲ. ಅಷ್ಟೇ ಅಥವಾ ಅದಕ್ಕೂ ಕೀಳುತರದ ಬೈಗುಳಗಳು ಅವರ ಬತ್ತಳಿಕೆಯಲ್ಲಿರುತ್ತವೆ. ಹಾಗೆಂದು ಅವರ ಜನಪ್ರಿಯತೆಯ ಸೊಗಸಿರುವುದು ಪ್ರಾಜ್ಞರ ನಡುವಿನಲ್ಲಿ ಅಲ್ಲ; ಬದಲಾಗಿ ಮೂಢರ ನಡುವೆ. ತಮ್ಮ ಮೇಲ್ಮೆಯನ್ನು ಹೇಳಿಕೊಳ್ಳುವುದಕ್ಕಾಗಿ ಅವರು ಸಭೆ-ಸಮಾರಂಭಗಳನ್ನು ಯಥೇಚ್ಛವಾಗಿ ನಡೆಸುತ್ತಾರೆ. ಅದಕ್ಕಾಗಿ ಧಾರಾಳವಾಗಿ ಹಣ ವೆಚ್ಚ ಮಾಡುತ್ತಾರೆ. ಇದರಿಂದಾಗಿ ಅವರಿಗೆ ಮುಜುಗರವಾಗುವುದಿಲ್ಲ. ಏಕೆಂದರೆ ಇವೆಲ್ಲವನ್ನೂ ಅವರು ಮಾಡುವುದು ಇದರ ಮುಂದಿನ ಹಂತವಾಗಿ ನಾಯಕತ್ವವನ್ನು ಸಂಪಾದಿಸುವುದಕ್ಕೆ ಇಲ್ಲವೇ ಸಂಪಾದಿಸಿದ ನಾಯಕತ್ವವನ್ನು ಉಳಿಸಿಕೊಳ್ಳುವುದಕ್ಕೆ!

ಆತ್ಮಾರಾಧನೆ ಒಂದು ವಿಕೃತ ಪ್ರವೃತ್ತಿ. ಇದಕ್ಕಾಗಿ ಅವರು ಯಾವ ಹಂತಕ್ಕೂ ಇಳಿಯಬಲ್ಲರು. ದಿನನಿತ್ಯ ಮಾಧ್ಯಮಗಳು ತಮ್ಮ ಕುರಿತು ಬರೆಯುತ್ತಾರಾದರೆ, ಸುದ್ದಿ ಮಾಡುತ್ತಾರಾದರೆ, ತಮ್ಮ ಭಾವಚಿತ್ರ ಒಂದಲ್ಲ ಒಂದು ರೂಪದಲ್ಲಿ ಪ್ರಕಟವಾಗುವುದಾದರೆ ಅವರು ಯಾವುದಕ್ಕೂ ತಯಾರು. ಆತ್ಮರತಿಗೆ ‘ನಾರ್ಸಿಸಿಸಂ’ ಎಂಬ ಪದ ಬಳಕೆಯಾಗಿದೆ. ಗ್ರೀಕ್ ಪುರಾಣದ ಒಬ್ಬ ವ್ಯಕ್ತಿಯ ಬದುಕಿನ ಸುತ್ತ ಇಂತಹ ಒಂದು ಕತೆ ಕಟ್ಟಲಾಗಿದೆ. ಆತ ಸ್ಫುರದ್ರೂಪಿ. ಆದರೆ ರೂಪಮದದಿಂದಾಗಿ ತನ್ನನ್ನು ಒಲಿದು ಬಂದವರನ್ನೆಲ್ಲ ತಿರಸ್ಕರಿಸಿದನಂತೆ. ಕೊನೆಗೆ ‘ಇಖೋ’ ಎಂಬ ದೇವತೆ ಒಲಿದಾಗಲೂ ತಿರಸ್ಕರಿಸಿದನಂತೆ. ‘ಇಖೋ’ ಎಂದರೆ ಪ್ರತಿಧ್ವನಿ. ಆಗ ದೇವತೆಗಳು ಆತನಿಗೆ ತನ್ನ ಪ್ರತಿಬಿಂಬವನ್ನೇ ಪ್ರೀತಿಸುವಂತೆ ಶಾಪ ನೀಡಿದರಂತೆ. ತಾನು ಪ್ರೀತಿಸುವ ವಸ್ತು ತನ್ನನ್ನು ಪ್ರೀತಿಸದಾದಾಗ ನಿರಾಶೆಯಿಂದ ಆತ ಕುಗ್ಗಿ ಸತ್ತನಂತೆ.

ಕಾಲಕ್ರಮೇಣ ಈ ಪ್ರತಿಮೆ ಆತ್ಮ ಪ್ರತ್ಯಯದ ರೂಪಕವಾಗಿದೆ; ಸಂಕೇತವಾಗಿದೆ. ತನ್ನ ಬಗ್ಗೆ ಅಭಿಮಾನವಿರುವುದು ತಪ್ಪಲ್ಲ. ಒಂದು ಹಂತದವರೆಗೆ ಅದು ಆತ್ಮವಿಶ್ವಾಸದ ಪ್ರತೀಕ. ಆದರೆ ಇದು ಅತಿಯಾದಾಗ ಹಾಸ್ಯಾಸ್ಪದವಾಗುತ್ತದೆ. ನೆಹರೂ ಸದಾ ಗುಲಾಬಿ ಹೂವನ್ನು ಕೋಟಿಗೆ ಸಿಕ್ಕಿಸಿಕೊಳ್ಳುತ್ತಿದ್ದರು. ಆದರೆ ಇದು ಒಂದು ಭ್ರಮೆಯಂತೆ ಅವರನ್ನು ಕಾಡಲಿಲ್ಲ. ಸದ್ಯದ ನಮ್ಮ ಪ್ರಧಾನಿ ತನ್ನ ಸುತ್ತ ಒಂದು ಕೋಟೆ ಕಟ್ಟಿಕೊಂಡಿದ್ದಾರೆ. ಅವರು ತಮ್ಮ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ. ತಾನು ಮಾಡುವುದೇ ಸರಿಯೆಂಬ ಹುಚ್ಚು ನಿರ್ಣಯ ಅವರಲ್ಲಿದೆ. ತನ್ನ ಕೃತಕ ಜಗತ್ತೇ ಸಹಜವಾದದ್ದು ಎಂಬ ಭ್ರಮೆ ಅವರನ್ನು ಆವರಿಸಿದೆ. ಇದಕ್ಕೆ ತಕ್ಕುದಾಗಿ ಅವರ ಅಭಿಮಾನಿಗಳು ಅವರನ್ನು ಹೊಗಳುವುದು, ಓಲೈಸುವುದು, ಪೂಜಿಸುವುದು ಮುಂತಾದ ತಂತ್ರಗಳಿಂದ ಅವರನ್ನು ವೈಭವೀಕರಿಸುತ್ತಿದ್ದಾರೆ. ಯಾರೂ ಅವರಿಗೆ ಈ ನಡೆ ತಪ್ಪುಮತ್ತು ಹೀಗೆ ಹೋಗುವುದು ಸರಿ ಎಂದು ಉಪದೇಶಿಸುವುದಿಲ್ಲ. ಅವರ ಸಲಹೆಗಾರರೂ ಅವರ ಭಟ್ಟಂಗಿಗಳಂತೆ ವರ್ತಿಸುವುದರಿಂದ ಮತ್ತು ಅವರ ತಪ್ಪುನಿರ್ಣಯಗಳಿಗೆ ತರ್ಕಬದ್ಧವಾದ ರೂಪು, ಆಕಾರಗಳನ್ನು ನೀಡುವುದರಿಂದ ಪ್ರಾಯಃ ಅವರಿಗೆ ತನ್ನ ನಿರ್ಣಯಗಳು ತರ್ಕಾತೀತವೇ ಎಂದು ಅನ್ನಿಸುವುದೇ ಇಲ್ಲ. ಅವರ ಸುತ್ತ ಸೇರಿದ ಮಂದಿಗೆ ಹೀಗೆ ಮಾಡುವುದರಿಂದ ಸಮಾಜಕ್ಕೆ, ದೇಶಕ್ಕೆ ಹಾನಿಯಾದೀತೆಂದು ಗೊತ್ತಿದ್ದರೂ ತತ್ಕಾಲೀನ ಲಾಭಕ್ಕಾಗಿ ಇಂತಹ ಕಸರತ್ತುಗಳು ಅವಶ್ಯವೆನಿಸಿವೆ. ಈಚೆಗೆ ಮೋದಿಯವರ ರಾಜಕೀಯ ಜೀವನದ ಎರಡು ದಶಕಗಳನ್ನು ಎಲ್ಲೆಡೆ ಆಚರಿಸಲಾಯಿತು. ಆರು ದಶಕಗಳ ಅಡ್ವಾಣಿಯವರು ಮೂಲೆಗುಂಪಾದರು.

ಭಾರತೀಯ ಜನತಾ ಪಾರ್ಟಿ ಮತ್ತು ಸಂಘ ಪರಿವಾರವು ಮೋದಿಯವರಿಗೆ ಎಷ್ಟು ದೊಡ್ಡ ಕಿರೀಟ ಸಾಧ್ಯವೋ ಅಷ್ಟೂ ಅಥವಾ ಅದಕ್ಕಿಂತ ದೊಡ್ಡ ಕಿರೀಟವನ್ನು ಇಡಲು ತೊಡಗಿದೆ. ಇದು ಮೋದಿಯವರ ತಲೆ ಮತ್ತು ಮುಖವನ್ನು ಮುಚ್ಚತೊಡಗಿದೆಯೇನೋ ಎಂಬಂತೆ ಈಚೆಗಿನ ಬೆಳವಣಿಗೆಗಳಿವೆ. ದೇಶದ ಗೃಹಮಂತ್ರಿಗಳು ತಾವು ಹೋದಲ್ಲೆಲ್ಲ ಪ್ರಧಾನಿಯವರ ಪರವಾಗಿ ತುತ್ತೂರಿ ಊದತೊಡಗಿದ್ದಾರೆ. ನಿಜಕ್ಕೂ ಒಬ್ಬ ವ್ಯಕ್ತಿ ಶ್ರೇಷ್ಠನಾಗಿದ್ದರೆ ಆತ ಜನರ ಅರ್ಥಾತ್ ಪ್ರಜೆಗಳ ಮನಸ್ಸಿನಲ್ಲಿ ನೆಲೆಗೊಳ್ಳುತ್ತಾನೆ. ಗಾಂಧಿ ಊರಿದ್ದು ಇಂತಹ ಅಸಂಖ್ಯಾತ ಮನಸ್ಸುಗಳಲ್ಲಿ. ಮುಖ್ಯ ಪ್ರಶ್ನೆಯಿರುವುದು ಒಬ್ಬ ಹಿರಿಯ ಹುದ್ದೆಯನ್ನು ಅಲಂಕರಿಸಿ ದೇಶದ ಗೌರವಕ್ಕೆ ಹೊಣೆಯಾಗಿರುವವರು ತಮ್ಮ ವೈಯಕ್ತಿಕ ವರ್ಚಸ್ಸಿಗೆ ಎಷ್ಟು ಸಮಯ, ಶಕ್ತಿ ಮತ್ತು ಹಣವನ್ನು ಖರ್ಚು ಮಾಡಬೇಕು ಎನ್ನುವುದು. ಒಂದು ಹುದ್ದೆಯ ಗೌರವವಿರುವುದು ಅದರ ಪ್ರದರ್ಶನದಲ್ಲಿ ಅಲ್ಲ. ಉಡುಪುತೊಡುಪು, ಶೃಂಗಾರದಲ್ಲಿ, ಕೃತಕ ಅಚ್ಚುಕಟ್ಟಿನಲ್ಲಿ ಅಲ್ಲ. ಬದಲಾಗಿ ದೇಶದ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆತ ಪಡುವ ಶ್ರಮದಲ್ಲಿ. ವರ್ಚಸ್ಸಿಗೆ ಹುದ್ದೆಯೇ ಬೇಕೆಂದಿಲ್ಲ. ಗಾಂಧಿಗೆ ಯಾವ ಹುದ್ದೆಯೂ ಇರಲಿಲ್ಲ. ನೆಹರೂ ಪ್ರಧಾನಿಯಾಗಿದ್ದಾಗ ಕಾನೂನು ಮಂತ್ರಿಯಾಗಿದ್ದ ಡಾ.ಅಂಬೇಡ್ಕರ್ ಇಂದು ಶ್ರೇಷ್ಠತೆ ಮತ್ತು ಜನಪ್ರಿಯತೆಯಲ್ಲಿ ಗಾಂಧಿಯೊಡನೆ ಹೋಲಿಸಬಹುದಾದ ವ್ಯಕ್ತಿತ್ವಕ್ಕೆ ಪಾತ್ರರಾಗಿದ್ದಾರೆ. ಆದರೆ ನಮ್ಮ ಪ್ರಧಾನಿ ಅಂತರಂಗ-ಬಹಿರಂಗಕ್ಕೆ ಎರಡು ಮನೆಗಳನ್ನು ಹುಡುಕಿಕೊಂಡಿದ್ದಾರೆ. ಇವು ಪ್ರಾಮಾಣಿಕವಾಗಿದ್ದರೆ ಆ ವಿಚಾರ ಬೇರೆ. ಅವರು ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ವಿದೇಶೀಯರ ಸಂಗಾತದಲ್ಲಿ ಜಾತ್ಯತೀತತೆಯ ಪ್ರತೀಕದಂತೆ, ಕೊನೆಗೆ ಸರ್ವ ಧರ್ಮ ಸಮನ್ವಯಕರಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಎಲ್ಲ ಧರ್ಮಗಳ ಸಂದರ್ಭಗಳಲ್ಲಿ ಶುಭಾಶಯಗಳನ್ನು ಹೇಳಲು ಮರೆಯುವುದಿಲ್ಲ. ಆದರೆ ದೇಶದೊಳಗೆ ನಡೆಯುವ ಬಹಳಷ್ಟು ಧರ್ಮಧಾರಿತ ಹಿಂಸೆ ಅವರ ಗಮನಕ್ಕೆ ಬಂದಿಲ್ಲವೆಂದಲ್ಲ. ಆದರೆ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಇಂತಹ ಕೋಮು ಹಿಂಸೆಗಳನ್ನು ಅವರು ಗಮನಿಸದಂತಿರುತ್ತಾರೆ. ಎಲ್ಲೋ ಯಾರಿಗೋ ನಡೆದ ಅಕ್ರಮ, ಅನ್ಯಾಯಗಳಿಗೆ ಪ್ರತಿಕ್ರಿಯಿಸುವಾಗ ಅವರ ದೃಷ್ಟಿ ರಾಜಕೀಯ ಲಾಭದತ್ತಲೇ ಇರುತ್ತದೆಯೆಂದು ತಿಳಿದರೆ ಅದು ರಾಜಕಾರಣದ ಸ್ವಾಭಾವಿಕ ಅಂಶವೆಂದು ತಿಳಿಯಬಹುದು. ಆದರೆ ಅವರ ಪ್ರತಿಕ್ರಿಯೆಗಳು ಅಷ್ಟನ್ನೂ ಹೊಂದಿರುತ್ತದೆ ಮತ್ತು ಅದಕ್ಕೂ ಮೇಲಾದ ಆತ್ಮರತಿಯನ್ನು ಹೊಂದಿರುತ್ತದೆ. ತನ್ನ ವೈಯಕ್ತಿಕ ಅಗತ್ಯಗಳ ಕಡೆಗೆ ಗಮನ ನೀಡುವುದು ಮನುಷ್ಯ ಸಹಜ ಪ್ರವೃತ್ತಿ. ಆದರೆ ಇದು ನಾಟಕೀಯವಾಗುತ್ತ ಹೋದಂತೆ ಒಳಗಣ ಟೊಳ್ಳುತನವನ್ನು ಅಭಿವ್ಯಕ್ತಿಸುತ್ತದೆ ಮತ್ತು ವ್ಯಕ್ತಿ ಪೊಳ್ಳಾಗುತ್ತ ಹೋಗುತ್ತಾನೆ. ಭಾರತದಾದ್ಯಂತ ಪ್ರವಾಸ ಮಾಡುವಾಗ ಪ್ರಧಾನಿ ತನ್ನ ವಿಚಾರಗಳಿಗಿಂತ ಪರದೂಷಣೆಗಳನ್ನೂ ವೈಯಕ್ತಿಕ ಆಡಂಬರವನ್ನೂ ಪ್ರದರ್ಶಿಸುವುದು ಈಗ ಸಾಮಾನ್ಯ ದೃಶ್ಯವಾಗಿದೆ.

ಇನ್ನೊಬ್ಬರನ್ನು ದೂಷಿಸುವುದು ಅವರ ತಪ್ಪುಗಳನ್ನೇನೂ ಕಡಿಮೆಮಾಡುವುದಿಲ್ಲ. ಸಂಘಪರಿವಾರ ವ್ಯಕ್ತಿಪೂಜೆ ಮಾಡುವುದಕ್ಕೆ ವಿರೋಧವಾಗಿತ್ತು. ಅದಕ್ಕಾಗಿಯೇ ಭಗವಾಧ್ವಜಕ್ಕೆ ಮಾತ್ರ ನಮಸ್ಕರಿಸಲಾಗುತ್ತಿತ್ತು. ನಿಧಾನಕ್ಕೆ ಈ ಪ್ರವೃತ್ತಿ ಬದಲಾಗಿ ಈಗ ತನ್ನ ಮೂಲ ಅಶಯಗಳಿಗೆ ವಿರುದ್ಧವಾಗಿ (ಅದು ಸರಿಯೋ ತಪ್ಪೋ ಬೇರೆ ವಿಚಾರ!) ಜನರನ್ನು ಎತ್ತಿಕಟ್ಟುವುದಕ್ಕೆ ಭಾವನಾತ್ಮಕವಾಗಿ ಯಾವ ತಂತ್ರವನ್ನು ಅನುಸರಿಸಬೇಕೋ ಅದನ್ನು ಅನುಸರಿಸಲಾಗುತ್ತಿದೆ. ಈಚೆಗೆ ಸೇನಾ ಮುಖ್ಯಸ್ಥ ಜನರಲ್ ರಾವತ್ ಮತ್ತಿತರರು ಅಪಘಾತದಲ್ಲಿ ತೀರಿಕೊಂಡಾಗ ಶ್ರದ್ಧಾಂಜಲಿ, ಗೌರವ ಇವೆಲ್ಲ ಸಾಲದೆಂಬಂತೆ ಅವರ ಗೌರವಾರ್ಥ ‘ಯೋಧ ನಮನ ರಥಯಾತ್ರೆ’ಯನ್ನು ಕೆಲವೆಡೆ ಸಂಘ ಪರಿವಾರ ನಡೆಸಿತು. ಇದರ ಉದ್ದೇಶ ಸ್ಪಷ್ಟವಾಗಿ ರಾಜಕೀಯವಾಗಿತ್ತು. ಜನರ ನಾಡಿಯನ್ನು ಮಿಡಿಯಿಸಿ ವ್ಯಕ್ತಿಯ ಹೆಸರಿನಲ್ಲಿ ಮತಪಡೆಯುವುದೇ ಇದರ ದುರುದ್ದೇಶ. (ರಾಜಕೀಯ ಪಕ್ಷಗಳು ಮೃತ ಅಭ್ಯರ್ಥಿಯ ಪತ್ನಿಯನ್ನೋ, ಮಕ್ಕಳನ್ನೋ ಚುನಾವಣೆಗೆ ನಿಲ್ಲಿಸಿದ ಹಾಗೆ!) ಇದೇ ಪ್ರವೃತ್ತಿ ಮುಂದುವರಿದರೆ ಫೀ.ಮಾ.ಕಾರ್ಯಪ್ಪನವರಿಗೆ ಭಾರತರತ್ನ ಸಿಗುತ್ತದೋ ಇಲ್ಲವೊ ಗೊತ್ತಿಲ್ಲ, ಆದರೆ ಜನರಲ್ ರಾವತ್‌ರಿಗೆ ಸಿಗುವ ಅವಕಾಶವಿದೆ. 2024ರ ಮೊದಲು ಪ್ರಧಾನಿಯವರಿಗೂ ಭಾರತರತ್ನ ಸಿಗಬಹುದು. ವ್ಯಕ್ತಿವಿಶೇಷದ ಚರಮ ಸೀಮೆಯಲ್ಲಿ ನಾವಿದ್ದೇವೆ. ‘ದಡ್ಡಾರಾಧನೆ’ಯೆಂದರೆ ಇದೇ ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)