varthabharthi


ಸಂಪಾದಕೀಯ

ಐದು ರಾಜ್ಯಗಳ ಚುನಾವಣೆ: ವೈರಸ್‌ಗಳಿವೆ ಎಚ್ಚರ!

ವಾರ್ತಾ ಭಾರತಿ : 10 Jan, 2022

ಐದು ರಾಜ್ಯಗಳಲ್ಲಿ ಚುನಾವಣೆಗಳು ಘೋಷಣೆಯಾಗಿವೆ. ಈ ಐದು ರಾಜ್ಯಗಳಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ ಕೂಡ ಸೇರಿಕೊಂಡಿರುವುದರಿಂದ, ಈ ಬಾರಿಯ ಚುನಾವಣೆಯ ಫಲಿತಾಂಶ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ದೊರೆಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ. ಈಗಾಗಲೇ ಆದಿತ್ಯನಾಥ್ ಅವರ ಆಡಳಿತದಿಂದ ಕ್ರಿಮಿನಲ್‌ಗಳ ಅಡ್ಡೆಯಾಗಿ ಕುಖ್ಯಾತಿ ಪಡೆದಿರುವ ಉತ್ತರ ಪ್ರದೇಶವನ್ನು ಬಿಜೆಪಿ ಶತಾಯಗತಾಯ ಗೆಲ್ಲಲೇ ಬೇಕಾಗಿದೆ. ಬಿಜೆಪಿಯ ಮಂದಿರ ರಾಜಕೀಯವೇನಾದರೂ ಉತ್ತರಪ್ರದೇಶದಲ್ಲಿ ವಿಫಲವಾದರೆ ಭವಿಷ್ಯದ ಸಾರ್ವತ್ರಿಕ ಚುನಾವಣೆಯ ಮೇಲೆ ತನ್ನ ಪರಿಣಾಮ ಬೀರಲಿದೆ. ಇದೇ ಸಂದರ್ಭದಲ್ಲಿ, ರೈತರ ಹೋರಾಟಗಳಿಂದ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಪ್ರಧಾನಿ ಮೋದಿಯವರು, ಪಂಜಾಬ್‌ನಲ್ಲೂ ಮುಖ ಉಳಿಸಿಕೊಳ್ಳುವುದಕ್ಕಾಗಿ ಗರಿಷ್ಠ ಪ್ರಯತ್ನ ನಡೆಸಲಿದ್ದಾರೆ. ಪಂಜಾಬ್‌ನಲ್ಲಿ ಸ್ಪಷ್ಟ ಅಜೆಂಡಾಗಳಿಲ್ಲದೆ ಬಿಜೆಪಿ ಗೊಂದಲದಲ್ಲಿದೆ.

ಪ್ರಾದೇಶಿಕ ಭಿನ್ನಮತಗಳನ್ನು ಅದು ತನಗೆ ಪೂರಕವಾಗಿ ಬಳಸಲು ಪ್ರಯತ್ನಿಸುತ್ತಿದೆ. ಅಭಿವೃದ್ಧಿ ವಿಷಯಗಳಿಗೆ ಸಂಪೂರ್ಣ ಎಳ್ಳು ನೀರು ಬಿಟ್ಟಿರುವ ಬಿಜೆಪಿ ನಾಯಕರು, ಉತ್ತರ ಪ್ರದೇಶದಲ್ಲಿ ಮಂದಿರ, ಮತಾಂತರ, ಗೋಹತ್ಯೆ ಮೊದಲಾದವುಗಳನ್ನೇ ವಿಷಯವಾಗಿರಿಸಿಕೊಂಡು ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಬಿಜೆಪಿಯ ವಿರುದ್ಧ ಒಂದಾಗಿ ಚುನಾವಣೆಯನ್ನು ಎದುರಿಸುವಲ್ಲಿ ವಿರೋಧ ಪಕ್ಷಗಳು ಇನ್ನೂ ಮಾನಸಿಕವಾಗಿ ಸಿದ್ಧವಾಗಿಲ್ಲ. ಬಿಎಸ್‌ಪಿಯು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಬಿ ಟೀಮ್‌ನಂತೆ ಕಾರ್ಯನಿರ್ವಹಿಸುತ್ತಿದೆ. ಕಾಂಗ್ರೆಸ್ ಮತ್ತು ಎಸ್‌ಪಿ ಜಾತ್ಯತೀತ ಮತಗಳನ್ನು ಒಡೆಯದಂತೆ ಹೇಗೆ ನೋಡಿಕೊಳ್ಳುತ್ತದೆ ಎನ್ನುವುದು ಇನ್ನೂ ಒಗಟಾಗಿಯೇ ಇದೆ. ಅಧಿಕಾರಕ್ಕೇರಿಯೇ ಬಿಟ್ಟಂತೆ ಹೇಳಿಕೆ ನೀಡುತ್ತಿರುವ ಎಸ್‌ಪಿಗೆ ತನ್ನ ಮುಂದಿರುವ ಸವಾಲಿನ ಬಗ್ಗೆ ಅರಿವಿಲ್ಲದೇ ಇಲ್ಲ. ಬಿಜೆಪಿಯ ಹಣ, ಕ್ರಿಮಿನಲ್ ಹಿನ್ನೆಲೆ, ಭಾವನಾತ್ಮಕ ರಾಜಕೀಯಗಳನ್ನು ಎಸ್‌ಪಿ ಒಂಟಿಯಾಗಿ ಎದುರಿಸಿ ಗೆಲ್ಲಲು ಹೊರಟರೆ, ಮುಂದಿನ ಫಲಿತಾಂಶವನ್ನು ಸೋಲು ಎಸ್‌ಪಿಯ ಆತ್ಮಹತ್ಯೆಯಾಗಿ ಗುರುತಿಸಲ್ಪಡುತ್ತದೆ.

ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಜನಸಾಮಾನ್ಯರು ಆತಂಕಕ್ಕೀಡಾಗಿದ್ದಾರೆ. ಒಂದೆಡೆ ಕೊರೋನ ವೈರಸ್. ಇನ್ನೊಂದೆಡೆ ದ್ವೇಷದ ವೈರಸ್‌ಗಳು. ಎರಡೂ ವೈರಸ್‌ಗಳನ್ನು ಏಕಕಾಲದಲ್ಲಿ ಎದುರಿಸಬೇಕಾಗಿರುವ ಭಯಾನಕ ಸ್ಥಿತಿ ಜನಸಾಮಾನ್ಯರದ್ದಾಗಿದೆ. ಕೆಲವೊಮ್ಮೆ ಈ ಕೊರೋನ ಮತ್ತು ಕೋಮು ವೈರಸ್‌ಗಳು ವಿಲೀನಗೊಂಡರೆ ಅದು ಜನ ಸಾಮಾನ್ಯರ ಮೇಲೆ ಇನ್ನಷ್ಟು ಭೀಕರ ಪರಿಣಾಮ ಬೀರಲಿದೆ. ಆದುದರಿಂದ, ಜನಸಾಮಾನ್ಯರ ಹೊಣೆಗಾರಿಕೆ ಬಹುದೊಡ್ಡದಿದೆ. ಚುನಾವಣೆ ಘೋಷಣೆಯಾದರೆ ಕೊರೋನ ತಲೆಮರೆಸಿ ಓಡಾಡುವುದು ಸಾಮಾನ್ಯ. ರಾಜಕಾರಣಿಗಳೊಂದಿಗೆ ಕೊರೋನ ಹೊಂದಿರುವ ಅನೈತಿಕ ಒಪ್ಪಂದ ಇದಕ್ಕೆ ಕಾರಣವಿರಬಹುದು. ಅಥವಾ, ರಾಜಕಾರಣಿಗಳ ಜೊತೆಗೆ ಅದು ಕೌಟುಂಬಿಕ ಸಂಬಂಧಗಳನ್ನು ಹೊಂದಿರುವ ಸಾಧ್ಯತೆಗಳನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದುದರಿಂದ ಜನಸಾಮಾನ್ಯರು ಚುನಾವಣೆ ಮುಗಿಯುವವರೆಗೆ ಯಾವುದೇ ಲಾಕ್‌ಡೌನ್‌ಗಳ ಆತಂಕವಿಲ್ಲದೆ ದಿನಗಳನ್ನು ಕಳೆಯಬಹುದಾಗಿದೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗ ಕೂಡ ಮಾರ್ಗಸೂಚಿಗಳನ್ನು ಹೊರಡಿಸಿದೆೆ. ಆಯೋಗ ಇಂತಹ ಮಾರ್ಗಸೂಚಿಗಳನ್ನು ಹೊರಡಿಸುವುದೇ ರಾಜಕೀಯ ಪಕ್ಷಗಳು ಉಲ್ಲಂಘಿಸಲಿ ಎನ್ನುವ ಕಾರಣಕ್ಕೆ. ಆಯೋಗ ಯಾವೆಲ್ಲ ನೀತಿ ಸಂಹಿತೆಗಳನ್ನು ಜಾರಿಗೊಳಿದೆಯೋ ಅವುಗಳನ್ನೆಲ್ಲ ಉಲ್ಲಂಘಿಸುವ ಸರ್ವ ಅಧಿಕಾರಗಳನ್ನು ರಾಜಕೀಯ ಪಕ್ಷಗಳು ಹೊಂದಿರುತ್ತವೆ. ಹೀಗೆಂದು ಜನಸಾಮಾನ್ಯರು ಸಂಪೂರ್ಣ ನಿರಾಳವಾಗಬೇಕಾಗಿಲ್ಲ. ಯಾಕೆಂದರೆ, ಚುನಾವಣೆ ಮುಗಿದ ಬೆನ್ನಿಗೇ ಲಾಕ್‌ಡೌನ್ ಮೇಲೆ ಲಾಕ್‌ಡೌನ್‌ಗಳನ್ನು ವಿಧಿಸಿ, ಬಡ್ಡಿ, ಚಕ್ರಬಡ್ಡಿ ಸಮೇತ ಸರಕಾರ ಜನಸಾಮಾನ್ಯರನ್ನು ಕಿರುಕುಳಕ್ಕೀಡು ಮಾಡಲಿದೆ. ಆದುದರಿಂದ, ಜನಸಾಮಾನ್ಯರು ಚುನಾವಣೆಯ ಸಂದರ್ಭದ ‘ಸ್ವಾತಂತ್ರ’ದ ಕುರಿತಂತೆ ಹೆಚ್ಚು ಜಾಗೃತವಾಗಿರಬೇಕಾಗಿದೆ.

ಇದೇ ಸಂದರ್ಭದಲ್ಲಿ ಕೊರೋನಕ್ಕಿಂತಲೂ ಭೀಕರವಾದ ಕೋಮು ವೈರಸ್ ಬಗ್ಗೆ ಜನಸಾಮಾನ್ಯರು ಎಚ್ಚರವಹಿಸಬೇಕಾಗಿದೆ. ಕೊರೋನ ವೈರಸ್‌ನಿಂದ ಲಾಕ್‌ಡೌನ್‌ಗಳು ಘೋಷಣೆಯಾಗಬಹುದು. ಆದರೆ ಕೋಮು ವೈರಸ್‌ನಿಂದ ಅಘೋಷಿತ ಲಾಕ್‌ಡೌನ್‌ಗಳನ್ನು ನೀವು ಅನುಭವಿಸಬೇಕಾಗುತ್ತದೆ ಮಾತ್ರವಲ್ಲ, ಈ ವೈರಸ್ ನಿಮ್ಮ ಮನೆಯೊಳಗೂ ನುಗ್ಗಿ ಹಾನಿಯುಂಟು ಮಾಡಬಹುದು. ನಿಮ್ಮ ದೇಹವನ್ನು ಮಾತ್ರವಲ್ಲ, ಮನಸ್ಸನ್ನೂ ಆವರಿಸಿ ಇಡೀ ಸಮಾಜವನ್ನು ವಿಚ್ಛಿದ್ರಗೊಳಿಸಬಹುದು. ಚುನಾವಣೆಯ ಬಳಿಕವೂ ಇದರ ದುಷ್ಪರಿಣಾಮಗಳನ್ನು ನಾವು ಅನುಭವಿಸುತ್ತಲೇ ಇರಬೇಕಾಗುತ್ತದೆ. ಆದುದರಿಂದ ಚುನಾವಣೆ ಮುಗಿಯುವವರೆಗೂ ಐದು ರಾಜ್ಯಗಳು ಮಾತ್ರವಲ್ಲ, ಇಡೀ ದೇಶವೇ ಈ ಕೋಮು ವೈರಸ್‌ಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಬಗೆಯ ಕುರಿತಂತೆ ಗಂಭೀರವಾಗಿ ಯೋಚಿಸಬೇಕಾಗಿದೆ. ಈ ವೈರಸ್ ಚುನಾವಣಾ ಸಭೆಗಳಲ್ಲಿ ಹುಟ್ಟಿಕೊಳ್ಳುತ್ತವೆ. ಮೊದಲು ಅದು ನಮ್ಮ ಮೆದುಳನ್ನು ಆವರಿಸಿ ಬಳಿಕ ನಮ್ಮ ಹೃದಯವನ್ನು ಕೊರೆಯತೊಡಗುತ್ತದೆ.

ಈ ವೈರಸ್‌ಗೆ ಯಾವುದೇ ಲಸಿಕೆಗಳನ್ನು ಈವರೆಗೆ ಕಂಡು ಹಿಡಿದಿಲ್ಲ ಎನ್ನುವ ಎಚ್ಚರಿಕೆ ನಮಗಿರಬೇಕು. ಕೊರೋನ ವೈರಸ್‌ಗಿಂತ ಅಪಾರ ಸಾವು ನೋವುಗಳು ಈ ಕೋಮು ವೈರಸ್‌ಗಳಿಂದ ಸಂಭವಿಸಿವೆ. ಈ ದೇಶ ಇನ್ನಿಲ್ಲದಷ್ಟು ನಾಶ ನಷ್ಟಗಳನ್ನು ಅನುಭವಿಸಿವೆ. ಈ ದೇಶದ ಅಭಿವೃದ್ಧಿಯನ್ನು ತಡೆದು ನಿಲ್ಲಿಸಿದೆ. ಈ ವೈರಸ್‌ನ್ನು ಜನಸಾಮಾನ್ಯರು ಗೆಲ್ಲುವುದೆಂದರೆ ಪರೋಕ್ಷವಾಗಿ ಈ ದೇಶವನ್ನೇ ಗೆಲ್ಲಿಸಿದಂತೆ. ಈ ಕೋಮು ವೈರಸ್‌ಗೆ ಲಸಿಕೆಗಳೇ ಇಲ್ಲವೆಂದಲ್ಲ. ಅದು ನಮ್ಮಿಳಗಿನ ಪ್ರತಿರೋಧ ಶಕ್ತಿಯನ್ನು, ಚಿಂತನಾ ಶಕ್ತಿಯನ್ನು ಅವಲಂಬಿಸಿದೆ. ಆ ಶಕ್ತಿ ನಮ್ಮಿಳಗಿದ್ದರೆ, ನಾವು ಚಲಾಯಿಸುವ ಮತಗಳೇ ಕೋಮು ವೈರಸ್‌ಗೆ ಪರಿಣಾಮಕಾರಿ ಲಸಿಕೆಯಾದೀತು. ಈ ಐದು ರಾಜ್ಯಗಳ ಚುನಾವಣೆಯಲ್ಲಿ, ಅಂತಹದೊಂದು ಪರಿಣಾಮಕಾರಿ ಲಸಿಕೆಗಳನ್ನು ನಮ್ಮ ರಾಜಕೀಯ ನಾಯಕರುಗಳಿಗೆ ನೀಡುವ ಅಗತ್ಯವಿದೆ. ಆ ಮೂಲಕ ಕೋಮುವೈರಸ್, ಕೊರೋನ ವೈರಸ್‌ಗಳೆರಡನ್ನೂ ಗೆದ್ದು ದೇಶವನ್ನೂ ಗೆಲ್ಲಿಸುವ ಕಡೆಗೆ ನಾವು ಹೆಜ್ಜೆಯಿಡಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)