ರಾಷ್ಟ್ರೀಯ
ಪ್ರಧಾನಿ ಭದ್ರತಾ ಲೋಪ: ನಿವೃತ್ತ ಜಡ್ಜ್ ನೇತೃತ್ವದ ತನಿಖಾ ಸಮಿತಿ ರಚಿಸಲಿರುವ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಜ.10: ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಪ್ರಮುಖ ರಾಜಕೀಯ ವಿವಾದವಾಗಿ ಪರಿಣಮಿಸಿರುವ ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ಉಂಟಾಗಿದ್ದ ಲೋಪದ ಕುರಿತು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದ ಉನ್ನತಮಟ್ಟದ ಸಮಿತಿಯು ತನಿಖೆಯನ್ನು ನಡೆಸಲಿದೆ.
ಸರ್ವೋಚ್ಚ ನ್ಯಾಯಾಲಯವು ಸೋಮವಾರ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಪಂಜಾಬಿನಲ್ಲಿಯ ಕಾಂಗ್ರೆಸ್ ಸರಕಾರಗಳಿಗೆ ಘಟನೆಯ ಕುರಿತು ಅವು ಆದೇಶಿಸಿರುವ ತನಿಖೆಗಳನ್ನು ತಡೆಹಿಡಿಯುವಂತೆ ಸೂಚಿಸಿದೆ.
ನೂತನ ತನಿಖಾ ಸಮಿತಿಗೆ ಸಂಬಂಧಿಸಿದಂತೆ ವಿಸ್ತೃತ ಆದೇಶವನ್ನು ಶೀಘ್ರವೇ ಹೊರಡಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಹಿಮಾ ಕೊಹ್ಲಿ ಅವರ ಪೀಠವು ತಿಳಿಸಿತು.
ಚಂಡಿಗಡದ ಡಿಜಿಪಿ,ಎನ್ಐಎ ಐಜಿ,ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಮತ್ತು ಗುಪ್ತಚರ ಸಂಸ್ಥೆಯ ಎಡಿಜಿಪಿ ಸಮಿತಿಯಲ್ಲಿರಬಹುದು ಎಂದು ನ್ಯಾಯಾಲಯವು ಹೇಳಿತು.
ವಿಚಾರಣೆ ಸಂದರ್ಭ ಭದ್ರತಾ ಲೋಪಕ್ಕಾಗಿ ಪಂಜಾಬ್ ಸರಕಾರವನ್ನು ದೂರಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಗುಪ್ತಚರ ವ್ಯವಸ್ಥೆಯು ಸಂಪೂರ್ಣವಾಗಿ ವಿಫಲಗೊಂಡಿತ್ತು ಮತ್ತು ಎಸ್ಪಿಜಿ ಕಾಯ್ದೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಮಾರ್ಗದಲ್ಲಿ ಪ್ರತಿಭಟನಾಕಾರರಿದ್ದಾರೆ ಎಂಬ ಮಾಹಿತಿಯನ್ನು ರಾಜ್ಯ ಸರಕಾರವು ಪ್ರಧಾನಿಯವರ ಭದ್ರತಾ ತಂಡಕ್ಕೆ ನೀಡಿರಲಿಲ್ಲ ಎಂದರು.
ಭದ್ರತಾ ಲೋಪಕ್ಕೆ ಕಾರಣರಾಗಿದ್ದ ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರಕಾರವು ಸಮರ್ಥಿಸಿಕೊಳ್ಳುತ್ತಿದೆ,ಹೀಗಾಗಿ ಕೇಂದ್ರ ಸರಕಾರವು ತನಿಖಾ ಸಮಿತಿಯನ್ನು ರಚಿಸಬೇಕಾಯಿತು ಎಂದು ಅವರು ತಿಳಿಸಿದರು. ಪ್ರತಿಯಾಗಿ ಪಂಜಾಬ್ ಸರಕಾರದ ವಕೀಲ ಡಿ.ಎಸ್.ಪಟ್ವಾಲಿಯಾ ಅವರು,‘ಪಂಜಾಬ್ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿರುವ ಶೋಕಾಸ್ ನೋಟಿಸ್ನಲ್ಲಿ ಪ್ರತಿಯೊಂದೂ ನಮ್ಮ ವಿರುದ್ಧ ಪೂರ್ವಯೋಜಿತವಾಗಿದೆ ಮತ್ತು ನಮ್ಮ ವಿರುದ್ಧ ಕಲ್ಪಿತ ಆರೋಪಗಳನ್ನು ಮಾಡಲಾಗಿದೆ. ನೋಟಿಸಿಗೆ ಉತ್ತರಿಸಲು 24 ಗಂಟೆಗಳ ಸಮಯಾವಕಾಶವನ್ನು ನೀಡಲಾಗಿದೆ. ನ್ಯಾಯಯುತ ವಿಚಾರಣೆ ನಡೆಯುತ್ತದೆ ಎಂದು ನಾನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಸ್ವತಂತ್ರ ತನಿಖೆಯ ಅಗತ್ಯವಿದೆ ’ ಎಂದು ಹೇಳಿದರು.
ರಾಜ್ಯದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಕೇಂದ್ರವು ಬಯಸಿದರೆ ಈ ನ್ಯಾಯಾಲಯವು ಮಾಡುವುದು ಏನಿರುತ್ತದೆ ಎಂದು ಪ್ರಶ್ನಿಸಿದ ಮು.ನ್ಯಾ.ರಮಣ ಅವರು,‘ಇದನ್ನು ನಾವು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಭಾವಿಸಬೇಡಿ. ಇದು ಪ್ರಧಾನಿಯ ಭದ್ರತೆಯ ಕುರಿತಾಗಿದೆ ’ ಎಂದು ಒತ್ತಿ ಹೇಳಿದರು.
ಕೇಂದ್ರವನ್ನು ತರಾಟೆಗೆತ್ತಿಕೊಂಡ ನ್ಯಾ.ಸೂರ್ಯಕಾಂತ ಅವರು,ಅಧಿಕಾರಿಗಳು ತಪ್ಪಿತಸ್ಥರು ಎಂದು ಹೇಳಿದವರು ಯಾರು? ಅವರ ವಿಚಾರಣೆಯನ್ನು ಯಾರು ನಡೆಸಿದ್ದಾರೆ? ನ್ಯಾಯಯುತವಾದ ವಿಚಾರಣೆಯನ್ನು ನೀವು ವಿರೋಧಿಸುವಂತಿಲ್ಲ ಎಂದು ಹೇಳಿದರೆ,24 ಗಂಟೆಗಳಲ್ಲಿ ಉತ್ತರಿಸುವಂತೆ ಕೇಂದ್ರವು ಅಧಿಕಾರಿಗಳಿಗೆ ಸೂಚಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ನ್ಯಾ.ಹಿಮಾ ಕೊಹ್ಲಿ ಹೇಳಿದರು.
ಪ್ರತಿಭಟನಾಕಾರರಿಂದ ರಸ್ತೆ ತಡೆಯಿಂದಾಗಿ ಪಂಜಾಬಿನ ಬಠಿಂಡಾದಲ್ಲಿಯ ಫ್ಲೈಓವರ್ನಲ್ಲಿ ಪ್ರಧಾನಿಗಳ ವಾಹನಗಳ ಸಾಲು ಸುಮಾರು 20 ನಿಮಿಷಗಳ ಕಾಲ ನಿಲ್ಲುವಂತಾಗಿದ್ದು,ಇದು ಭಾರೀ ವಿವಾದವನ್ನು ಸೃಷ್ಟಿಸಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ