varthabharthi


ಕಾಲಮಾನ

ಗುಜರಾತ್ 2002: ಎಂದೂ ವಾಸಿಯಾಗದ ಗಾಯ

ವಾರ್ತಾ ಭಾರತಿ : 12 Jan, 2022
ರಾಮಚಂದ್ರ ಗುಹಾ

2002ರಲ್ಲಿದ್ದಂತೆ ಈಗಲೂ ಗುಜರಾತ್‌ನ ಮುಸ್ಲಿಮರನ್ನು ಭಯ ಹಾಗೂ ಅಭದ್ರತೆಯ ಭಾವನೆಯು ಬಹುಶಃ ಹಿಂದೆಂಗಿಂತಲೂ ಹೆಚ್ಚಾಗಿ ಕಾಡುತ್ತಿದೆ. ಬಹುಶಃ ನರೇಂದ್ರ ಮೋದಿ ಅಥವಾ ಇತರ ಯಾವುದೇ ಬಿಜೆಪಿ ನಾಯಕರು ಈತನಕ ಯಾವುದೇ ಪಶ್ಚಾತ್ತಾಪ ಅಥವಾ ಕ್ಷಮಾಯಾಚನೆಯ ಒಂದೇ ಒಂದು ಸಂಕೇತವನ್ನೂ ನೀಡಿಲ್ಲ. ಮೋದಿ ಹಾಗೂ ಅವರ ಪಕ್ಷವು ಡಾ.ಸಿಂಗ್ ಹಾಗೂ ಕಾಂಗ್ರೆಸ್ ಅವರಿಗಿಂತ ವ್ಯತಿರಿಕ್ತವಾದ ಪಾಠವೊಂದನ್ನು ಕಲಿತುಕೊಂಡಿದೆ. ಬಹಿರಂಗ ಹಿಂಸಾಚಾರ, ಮುಸ್ಲಿಂ ಸಮುದಾಯವನ್ನು ದಮನಿಸುವ ಹಾಗೂ ಬೆದರಿಸುವ ಮೂಲಕ ತಾವು ತಮಗಿರುವ ಬಹುಸಂಖ್ಯಾತರ ಬೆಂಬಲವನ್ನು ದ್ವಿಗುಣಗೊಳಿಸಬಹುದಾಗಿದೆ ಮತ್ತು ನಿರ್ದಿಷ್ಟವಾಗಿ ಮುಸ್ಲಿಮರು ಸೇರಿದಂತೆ ಇತರ ಧರ್ಮಗಳ ಭಾರತೀಯರ ಮೇಲೆ ಹಿಂದೂಗಳ ಇಚ್ಛೆಯನ್ನು ದೃಢವಾಗಿ ಹೇರಲು ಆಡಳಿತ ಯಂತ್ರವನ್ನು ಬಳಸಿಕೊಳ್ಳಬೇಕೆಂಬ ಭಾವನೆಯನ್ನು ಬೆಳೆಸಿಕೊಂಡಿದೆ.

2022ನೇ ಇಸವಿಯು ವರ್ಷಾಚರಣೆಗಳ ವರ್ಷವಾಗಿದೆ. ಇದು ಶ್ರೀ ಅರಬಿಂದೋ ಅವರ ಹುಟ್ಟುಹಬ್ಬದ 150ನೇ ವರ್ಷಾಚರಣೆಯಾಗಿದೆ. ಅಸಹಕಾರ ಚಳವಳಿಯ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರ ಶತಮಾನೋತ್ಸವದ ಆಚರಣೆ ಕೂಡಾ ಈ ವರ್ಷವೇ ನಡೆಯಲಿದೆ. ಕ್ವಿಟ್ ಇಂಡಿಯಾ ಚಳವಳಿಯ 80ನೇ ವರ್ಷಾಚರಣೆಯ ಆರಂಭ ಇದಾಗಿದೆ. ಬ್ರಿಟಿಷ್ ಆಡಳಿತದಿಂದ ಭಾರತವು ಸ್ವಾತಂತ್ರ ಪಡೆದ 75ನೇ ವರ್ಷಾಚರಣೆಯನ್ನು ಆಚರಿಸಲಿದೆ. ದೇಶದ ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯ 70ನೇ ವರ್ಷಾಚರಣೆಯೂ ಹೌದು. ಭಾರತ-ಚೀನಾ ಯುದ್ಧದ 60ನೇ ವರ್ಷಾಚರಣೆಯೂ ನಡೆಯಲಿದೆ.

ಈ ವರ್ಷಾಚರಣೆಗಳನ್ನು ಖಂಡಿತವಾಗಿಯೂ ಪ್ರಧಾನಿ ಹಾಗೂ ಅವರ ಸರಕಾರವು ಭಾರೀ ಅದ್ದೂರಿ ಹಾಗೂ ಪ್ರಚಾರದೊಂದಿಗೆ ಆಚರಿಸಲಿದೆ. ಪ್ರತಿಯೊಂದು ಕಾರ್ಯಕ್ರಮವನ್ನೂ ನರೇಂದ್ರ ಮೋದಿಯವರ ವ್ಯಕ್ತಿಪೂಜೆಯನ್ನು ಉತ್ತೇಜಿಸಲು ಬಳಸಿಕೊಳ್ಳಲಾಗುತ್ತಿದೆ. ಶ್ರೀ ಅರಬಿಂದೊ ಅವರ ಆಧ್ಯಾತ್ಮಿಕ ಉದಾತ್ತತೆಯ ಬಗ್ಗೆ, ನಮ್ಮ ಸ್ವಾತಂತ್ರ ಹೋರಾಟಗಾರರ ತ್ಯಾಗ, ಬಲಿದಾನ, ಭಾರತದಲ್ಲಿ ಆಳವಾಗಿ ಬೇರುಬಿಟ್ಟಿರುವ ಪ್ರಜಾತಾಂತ್ರಿಕ ಪರಂಪರೆ, ವಿದೇಶಿ ಎದುರಾಳಿಯನ್ನು ದಿಟ್ಟತನದಿಂದ ಎದುರಿಸುವಾಗ ಭಾರತೀಯ ಪಡೆಗಳು ಸರ್ವಸನ್ನದ್ಧರಾಗಿರುವಂತೆ ಮಾಡುವ ತನ್ನ ಸರಕಾರದ ದೃಢ ನಿರ್ಧಾರದ ಬಗ್ಗೆ ಪ್ರಧಾನಿಯವರು ಪ್ರಚೋದನಾಕಾರಿ ಭಾಷಣಗಳನ್ನು ಮಾಡಲಿದ್ದಾರೆ.

ಆದಾಗ್ಯೂ ಪ್ರಧಾನಿಯವರ ಅಧಿಕೃತ ಕ್ಯಾಲೆಂಡರ್‌ನಿಂದ ಒಂದು ವರ್ಷಾಚರಣೆ ಮಾತ್ರ ತಪ್ಪಿಹೋಗುವ ಸಾಧ್ಯತೆಯಿದೆಯೆಂಬ ಸಂದೇಹ ನನಗಿದೆ. 2002ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಗುಜರಾತ್ ಗಲಭೆಯ 20ನೇ ವರ್ಷಾಚರಣೆ ಇದಾಗಿದೆ. ವಾಸ್ತವಿಕವಾಗಿ ‘ಗಲಭೆ’ ಎಂಬ ಪದವು ಒಂದು ಬಗೆಯ ಸೌಮ್ಯೋಕ್ತಿಯಾಗಿದೆ. ಆದರೆ ಆಗ ಏನು ನಡೆದಿತ್ತೊ, ಅದಕ್ಕೆ ‘ನರಮೇಧ’ ಎಂಬುದು ನಿಖರವಾದ ಪದವಾಗಿದೆ. ಈ ಹಿಂಸಾಚಾರವನ್ನು ಮುಖ್ಯವಾಗಿ ಒಂದೇ ಸಮುದಾಯವನ್ನು ಅಂದರೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಸಲಾಗಿತ್ತು.

2002ರಲ್ಲಿ ಗುಜರಾತ್‌ನಲ್ಲಿ ಮುಸ್ಲಿಮರ ವಿರುದ್ಧ ನಡೆದ ನರಮೇಧಕ್ಕೂ ಹಾಗೂ ಅದಕ್ಕಿಂತ 18 ವರ್ಷಗಳ ಹಿಂದೆ ದಿಲ್ಲಿಯಲ್ಲಿ ನಡೆದ ಸಿಖ್ ಹತ್ಯಾಕಾಂಡಕ್ಕೂ ನೇರಾನೇರ ಸಾಮ್ಯತೆಯಿದೆ. 1984ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರನ್ನು ಅವರ ಅಂಗರಕ್ಷಕರು ಹತ್ಯೆಗೈದ ಘಟನೆಗೆ ಪ್ರತೀಕಾರವಾಗಿ ಈ ಕಗ್ಗೊಲೆಯೊಂದಿಗೆ ಯಾವುದೇ ಸಂಬಂಧವೇ ಇಲ್ಲದ ಸಾವಿರಾರು ಅಮಾಯಕ ಸಿಖ್ಖರ ನರಮೇಧವನ್ನು ನಡೆಸಲಾಯಿತು. 2002ರಲ್ಲಿ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ 59 ಮಂದಿ ಯಾತ್ರಿಕರ ಜೀವಂತದಹನದ ಘಟನೆಯು, ಅದಕ್ಕೆ ಸಂಬಂಧವೇ ಇಲ್ಲದ ಸಾವಿರಾರು ಅಮಾಯಕ ಮುಸ್ಲಿಮರ ವಿರುದ್ಧ ಬರ್ಬರವಾದ ಪ್ರತೀಕಾರಕ್ಕೆ ಪ್ರಚೋದನೆಯು ನೀಡಿತು. ಈ ಎರಡೂ ಪ್ರಕರಣಗಳಲ್ಲಿ ಸರಕಾರ ಹಾಗೂ ಆಳುವ ಪಕ್ಷವು ಹಿಂಸಾಚಾರವು ಹರಡುವುದಕ್ಕೆ ಹಾಗೂ ಗಲಭೆಯು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಯೋಜಿತವಾದ ನರಮೇಧವಾಗಿ ಪರಿವರ್ತನೆಗೊಳ್ಳುವುದಕ್ಕೆ ಅವಕಾಶ ನೀಡಿದವು. ಇವೆರಡೂ ಹತ್ಯಾಕಾಂಡ ನಡೆದಾಗ ಆಯಾ ಕಾಲದಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಹಾಗೂ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಹಿಂಸಾಚಾರದಿಂದ ರಾಜಕೀಯ ಲಾಭ ಮಾಡಿಕೊಂಡರು. ಸ್ವಲ್ಪ ಸಮಯದ ಬಳಿಕ ನಡೆದ ಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದರು. ಈ ಎರಡೂ ನಾಯಕರ ಚುನಾವಣಾ ಪ್ರಚಾರಗಳು ಹುಸಿ ಎಚ್ಚರಿಕೆಗಳು ಹಾಗೂ ಅಲ್ಪಸಂಖ್ಯಾತರ ವಿರುದ್ಧ ಅಪಪ್ರಚಾರದಿಂದ ಕೂಡಿದ್ದವು.

ಈ ಎರಡೂ ನರಮೇಧಗಳ ನಡುವೆ ಗೋಚರನೀಯವಾದ ಸಾಮ್ಯತೆಗಳ ಜೊತೆಗೆ, ಕೆಲವು ಗಮನಾರ್ಹ ವ್ಯತ್ಯಾಸಗಳು ಕೂಡಾ ಇದ್ದವು. 1984ರಲ್ಲಿ ಸಿಖ್ಖರನ್ನು ವಿಷಪೂರಿತ ಖಳರೆಂಬಂತೆ ಬಿಂಬಿಸುತ್ತಿದ್ದ ತನ್ನ ಧೋರಣೆಯಲ್ಲಿ ಕಾಂಗ್ರೆಸ್ ಕ್ರಮೇಣ ತಿದ್ದಿಕೊಂಡಿತು. ಆದರೆ ಅದಕ್ಕೆ ತುಂಬಾ ಸಮಯವೇ ಹಿಡಿಯಿತು. 1999ರಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅಧಿಕಾರ ಸ್ವೀಕರಿಸಿದ ಸ್ವಲ್ಪ ಸಮಯದ ಬಳಿಕ, ಪಶ್ಚಾತ್ತಾಪದ ನಡೆಯೆಂಬಂತೆ ಅಮೃತಸರದ ಸುವರ್ಣ ದೇವಾಲಯಕ್ಕೆ ಭೇಟಿ ನೀಡಿದರು. ಆದರೆ ನೇರವಾಗಿ ಕ್ಷಮೆಯಾಚನೆ ಮಾಡುವುದರಿಂದ ದೂರವುಳಿದರು. ಆದಾಗ್ಯೂ 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟವು ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಳಿಕ ಆಗಿನ ಪ್ರಧಾನಿ (ಮನಮೋಹನ್‌ಸಿಂಗ್) ಅವರು ಹಿಂದಿನ ಕಾಂಗ್ರೆಸ್ ಪ್ರಧಾನಿಯವರ ಗಮನಕ್ಕೆ ಬಂದೇ ನಡೆದಿದ್ದ ದಿಲ್ಲಿ ಗಲಭೆಗಾಗಿ ಬಹಿರಂಗ ಕ್ಷಮೆಯಾಚಿಸಿದರು. 2005ರ ಆಗಸ್ಟ್ ನಲ್ಲಿ ಸಂಸತ್ತನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮನಮೋಹನ್‌ಸಿಂಗ್ ಅವರು ಹೀಗೆ ಹೇಳಿದ್ದರು. ‘‘ಸಿಖ್ ಸಮುದಾಯದಿಂದ ಕ್ಷಮೆಯಾಚಿಸುವುದರಲ್ಲಿ ನನಗೆ ಯಾವುದೇ ಹಿಂಜರಿಕೆಯಿಲ್ಲ. ನಾನು ಸಿಖ್ ಸಮುದಾಯದಿಂದ ಮಾತ್ರವಲ್ಲದೆ ಇಡೀ ಭಾರತ ದೇಶದ ಕ್ಷಮೆ ಯಾಚಿಸುತ್ತೇನೆ. ಯಾಕೆಂದರೆ 1984ರಲ್ಲಿ ಏನು ನಡೆದುಹೋಗಿತ್ತೋ ಅದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ರಾಷ್ಟ್ರೀಯತೆಯ ಪರಿಕಲ್ಪನೆಯ ನಿರಾಕರಣೆಯಾಗಿದೆ.

ವಾಸ್ತವಿಕವಾಗಿ ಡಾ. ಮನಮೋಹನ್‌ಸಿಂಗ್ ಅವರು ಕ್ಷಮೆಯಾಚನೆಯನ್ನು ಮಾಡುವ ವೇಳೆಗೆ ಸಿಖ್ಖರು ಬಹುತೇಕವಾಗಿ ದೇಶದೊಂದಿಗೆ ಸಮನ್ವಯತೆ ಸಾಧಿಸಿಯಾಗಿತ್ತು. 2005ರ ಎಪ್ರಿಲ್‌ನಲ್ಲಿ ನಾನು ಪಂಜಾಬ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ನನಗೆ ಸಿಖ್ ಪ್ರಾಧ್ಯಾಪಕರ ಗುಂಪಿನೊಂದಿಗೆ ಸುದೀರ್ಘ ಸಂಭಾಷಣೆಯನ್ನು ನಡೆಸಿದ್ದೆ. ಪ್ರಧಾನಿಯಾಗಿ ಮನಮೋಹನ್‌ಸಿಂಗ್, ಸೇನಾ ವರಿಷ್ಠರಾಗಿ ಜನರಲ್ ಜೆ.ಜೆ.ಸಿಂಗ್ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರ ನೇಮಕದೊಂದಿಗೆ ತಮ್ಮನ್ನು ಕೊನೆಗೂ ಈ ನೆಲದ ಸಮಾನ ನಾಗರಿಕರಾಗಿ ನೋಡಿಕೊಳ್ಳಲಾಗುತ್ತಿದೆಯೆಂಬುದು ಸಿಖ್ಖರಿಗೆ ಕೊನೆಗೂ ಖಾತರಿಯಾಗಿದೆ. ಕಾಂಗ್ರೆಸ್ ಪಕ್ಷವು ಈ ನೇಮಕಗಳನ್ನು ಯೋಜಿತವಾಗಿ ನಡೆಸಿಲ್ಲವೆಂಬುದು ಖಂಡಿತ. ಆದರೆ ಅದು ರಾಜಕೀಯ, ಮಿಲಿಟರಿ ಹಾಗೂ ಆರ್ಥಿಕ ಅಧಿಕಾರದ ಹುದ್ದೆಗಳಿಗೆ ಮೂವರು ಸಿಖ್ಖರನ್ನು ನೇಮಿಸಿರುವುದು ಸಾಂಕೇತಿಕವಾಗಿ ಮಹತ್ವವನ್ನು ಪಡೆದಿತ್ತು.

 ಸಿಖ್ಖರ ವಿರುದ್ಧದ ನರಮೇಧದ 20 ವರ್ಷಗಳ ಬಳಿಕ, ಈ ಅಲ್ಪಸಂಖ್ಯಾತ ಸಮುದಾಯದ ಭಾವನೆಗಳು ಗಣನೀಯವಾಗಿ ಉಪಶಮನಗೊಂಡವು. ಇನ್ನೊಂದೆಡೆ 2002ರಲ್ಲಿದ್ದಂತೆ ಈಗಲೂ ಗುಜರಾತ್‌ನ ಮುಸ್ಲಿಮರನ್ನು ಭಯ ಹಾಗೂ ಅಭದ್ರತೆಯ ಭಾವನೆಯು ಬಹುಶಃ ಹಿಂದೆಂಗಿಂತಲೂ ಹೆಚ್ಚಾಗಿ ಕಾಡುತ್ತಿದೆ. ಬಹುಶಃ ನರೇಂದ್ರ ಮೋದಿ ಅಥವಾ ಇತರ ಯಾವುದೇ ಬಿಜೆಪಿ ನಾಯಕರು ಈತನಕ ಯಾವುದೇ ಪಶ್ಚಾತ್ತಾಪ ಅಥವಾ ಕ್ಷಮಾಯಾಚನೆಯ ಒಂದೇ ಒಂದು ಸಂಕೇತವನ್ನೂ ನೀಡಿಲ್ಲ. ಮೋದಿ ಹಾಗೂ ಅವರ ಪಕ್ಷವು ಡಾ.ಸಿಂಗ್ ಹಾಗೂ ಕಾಂಗ್ರೆಸ್ ಅವರಿಗಿಂತ ವ್ಯತಿರಿಕ್ತವಾದ ಪಾಠವೊಂದನ್ನು ಕಲಿತುಕೊಂಡಿದೆ. ಬಹಿರಂಗ ಹಿಂಸಾಚಾರ, ಮುಸ್ಲಿಂ ಸಮುದಾಯವನ್ನು ದಮನಿಸುವ ಹಾಗೂ ಬೆದರಿಸುವ ಮೂಲಕ ತಾವು ತಮಗಿರುವ ಬಹುಸಂಖ್ಯಾತರ ಬೆಂಬಲವನ್ನು ದ್ವಿಗುಣಗೊಳಿಸಬಹುದಾಗಿದೆ ಮತ್ತು ನಿರ್ದಿಷ್ಟವಾಗಿ ಮುಸ್ಲಿಮರು ಸೇರಿದಂತೆ ಇತರ ಧರ್ಮಗಳ ಭಾರತೀಯರ ಮೇಲೆ ಹಿಂದೂಗಳ ಇಚ್ಛೆಯನ್ನು ದೃಢವಾಗಿ ಹೇರಲು ಆಡಳಿತ ಯಂತ್ರವನ್ನು ಬಳಸಿಕೊಳ್ಳಬೇಕೆಂಬ ಭಾವನೆಯನ್ನು ಬೆಳೆಸಿಕೊಂಡಿದೆ.

ಬಿಜೆಪಿ ಆಡಳಿತದ ಭಾರತದಲ್ಲಿ ಮುಸ್ಲಿಂ ಪ್ರಧಾನಿ ಅಥವಾ ಮುಸ್ಲಿಂ ಸೇನಾ ವರಿಷ್ಠರನ್ನು ಕಲ್ಪಿಸಿಕೊಳ್ಳುವುದು ಒಂದು ವೇಳೆ ಅವರು ಈ ಸ್ಥಾನಗಳಿಗೆ ಅತ್ಯುತ್ತಮ ಅರ್ಹತೆಯ ಅಭ್ಯರ್ಥಿಗಳಾಗಿದ್ದರೂ ಕೂಡಾ ಅಸಾಧ್ಯವಾಗಿದೆ. ಈ ತಾರತಮ್ಯವು ಇನ್ನಷ್ಟೂ ಮುಂದಕ್ಕೆ ಹಾಗೂ ಆಳವಾಗಿ ಸಾಗುತ್ತಾ ಹೋಗಿದೆ. ಲೋಕಸಭೆಯಲ್ಲಿ ಬಿಜೆಪಿಯ ಮುನ್ನೂರಕ್ಕೂ ಅಧಿಕ ಲೋಕಸಭಾ ಸದಸ್ಯರ ಪೈಕಿ ಬಿಜೆಪಿಯು ಒಬ್ಬನೇ ಒಬ್ಬ ಮುಸ್ಲಿಮನಿಲ್ಲ. ಇದಕ್ಕಿಂತಲೂ ಹೆಚ್ಚಾಗಿ ಆ ಪಕ್ಷವು ತನ್ನ ಚುನಾವಣಾ ಪ್ರಚಾರಗಳಲ್ಲಿ ಮುಸ್ಲಿಮರನ್ನು ತನ್ನ ಸಂಭಾವ್ಯ ಮತದಾರರಿಂದ ಸಂಪೂರ್ಣವಾಗಿ ಹೊರಗಿಡಲು ಬಯಸಿದೆ. ಪ್ರತಿಯೊಂದು ರಾಷ್ಟ್ರೀಯ ಹಾಗೂ ರಾಜ್ಯ ಚುನಾವಣೆಗಳಲ್ಲಿ (ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಕಂಡುಬಂದಿರುವಂತೆ) ಅದು ‘‘ಹಿಂದೂ ಖತ್ರೆ ಮೇ ಹೈ (ಹಿಂದೂ ಅಪಾಯದಲ್ಲಿದ್ದಾನೆ)’’ ಎಂಬ ತನ್ನ ಘೋಷಣೆಯನ್ನು ಬೇರೆ ಬೇರೆ ಧ್ವನಿಗಳಲ್ಲಿ ನುಡಿಸುತ್ತಾ ಬರುತ್ತಿದೆ. ದೈನಂದಿನ ಬದುಕಿನಲ್ಲಿ ಆಡಳಿತರೂಢ ಸರಕಾರದ ಜೊತೆ ನಂಟು ಹೊಂದಿರುವ ಸಂಘಟನೆಗಳ ಬೆಂಬಲಿಗರು, ತಾವು ನಿಂದಿಸಬಲ್ಲ, ಬೆದರಿಸಬಲ್ಲ ಹಾಗೂ ಅಪಮಾನಗೊಳಿಸಲು ಸಾಧ್ಯವಿರುವಂತಹ ಮುಸ್ಲಿಮರನ್ನು ಹುಡುಕಾಡಲು ಹಾಗೂ ಅವರ ಜೀವನೋಪಾಯವನ್ನು ಕಸಿಯಲು ಬೀದಿಗಳಲ್ಲಿ ಅಡ್ಡಾಡುತ್ತಿವೆ.

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಡೆಯುವ ಸಮಾವೇಶಗಳಲ್ಲಿ ಆಡಳಿತಾರೂಢ ಪಕ್ಷದ ರಾಜಕಾರಣಿಗಳಿಗೆ ನಿಕಟವಾಗಿರುವವರು ಮುಸ್ಲಿಮರ ಸಾಮೂಹಿಕ ನರಮೇಧಕ್ಕಾಗಿ ಕರೆ ನೀಡಿದ್ದಾರೆ.

ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 2002ರಲ್ಲಿ ಗುಜರಾತ್‌ನಲ್ಲಿ ನಡೆದ ಹಿಂಸಾಚಾರವು ರಾಜಧರ್ಮವನ್ನು ಪಾಲಿಸದೆ ಇದ್ದ ಪರಿಣಾಮವೆಂದು ಭಾವಿಸಿದ್ದರು. ಆದಾಗ್ಯೂ ನರೇಂದ್ರ ಮೋದಿಯವರ ತರುವಾಯದ ರಾಜಕೀಯ ಜೀವನದಲ್ಲಿ, ಅವರು ಅಧಿಕಾರದಲ್ಲಿರುವ ರಾಜಕಾರಣಿ ಏನು ಮಾಡಬೇಕೆಂಬುದು ತಿಳಿದುಕೊಂಡಿದ್ದುದು ಹಿಂದಿನ ಪ್ರಧಾನಿಗಳ ಚಿಂತನೆಗಿಂತ ತೀರಾ ವಿಭಿನ್ನವಾದುದಾಗಿತ್ತು. ಮೋದಿ ಹಾಗೂ ಶಾ ಆಳ್ವಿಕೆಯಡಿ ಬಿಜೆಪಿಯು ಹಿಂದೂಗಳ ಪಕ್ಷವೆಂಬುದಾಗಿಯೇ ತಿಳಿಯಲ್ಪಟ್ಟಿತ್ತು. ಈ ವಿಷಯದಲ್ಲಿ ಗುಜರಾತ್‌ನಲ್ಲಿ 2002ರಲ್ಲಿ ನಡೆದ ಘಟನೆಯು, ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನದ ಪ್ರಾಯೋಗಿಕ ಪರೀಕ್ಷೆಯಾಗಿತ್ತು.

1984ರ ದಿಲ್ಲಿ ಗಲಭೆಯ ಪ್ರಮಾದವನ್ನು ಒಪ್ಪಿಕೊಂಡ ಮನಮೋಹನ್‌ಸಿಂಗ್ ಅವರು ಈ ಗಲಭೆಗಳು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ರಾಷ್ಟ್ರೀಯತೆಯ ಪರಿಕಲ್ಪನೆಯ ನಿರಾಕರಣೆಯಾಗಿದೆ ಎಂದು ಹೇಳಿದ್ದರು. ಏನಾಗಿದೆಯೆಂಬುದರ ಬಗ್ಗೆ ತಾನು ಕ್ಷಮೆಯಾಚಿಸುವ ಅಗತ್ಯವಿದೆಯೆಂದು ಮೋದಿ ಭಾವಿಸಿಲ್ಲ. ಭಾಗಶಃ ಈ ಅಹಮಿಕೆಯಿಂದಾಗಿ ಹಾಗೂ ಬಹುತೇಕವಾಗಿ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿದ್ದ ರಾಷ್ಟ್ರೀಯ ಪರಿಕಲ್ಪನೆಯು ಅವರು ಭಾವಿಸಿರುವ ರಾಷ್ಟ್ರೀಯತೆಯ ಮಾದರಿಗಿಂತ ವಿರೋಧಾತ್ಮಕವಾದುದಾಗಿದೆ.

ಹದಿನೇಳನೆ ಶತಮಾನದ ಫ್ರೆಂಚ್ ಸಾಹಿತಿ ಲಾ ರೊಶೆಫೌಕಾಲ್ಡ್ ಅವರು ಹಿಪಾಕ್ರಸಿಯನ್ನು ‘ದುರ್ಗುಣವು ಸದ್ಗುಣಕ್ಕೆ ಸಲ್ಲಿಸುವ ಶ್ರದ್ಧಾಂಜಲಿಯಾಗಿದೆ’ ಎಂಬುದಾಗಿ ಬಣ್ಣಿಸಿದ್ದರು. 2022ನೇ ಇಸವಿಯಲ್ಲಿ ಭಾರತೀಯರು ಅದನ್ನು ಗರಿಷ್ಠ ಸಂಖ್ಯೆಯಲ್ಲಿ ಕಾಣಲಿದ್ದಾರೆ. ಸ್ವಾತಂತ್ರ ಹೋರಾಟಕ್ಕೆ ನರೇಂದ್ರ ಮೋದಿಯವರಾಗಲಿ ಹಾಗೂ ಆರೆಸ್ಸೆಸ್ ಆಗಲಿ ಯಾವುದೇ ಕೊಡುಗೆಯನ್ನು ನೀಡದೆ ಇದ್ದರೂ, ಪ್ರಧಾನಿಯವರು ಹಲವಾರು ಸಂದರ್ಭಗಳಲ್ಲಿ ಸ್ವಾತಂತ್ರ ಹೋರಾಟದ ಬಗ್ಗೆ ಜಪಿಸುವುದನ್ನು ನೀವು ಈ ವರ್ಷ ಕಾಣುವಿರಿ. ಅವರ ಹಿಂದುತ್ವ ಪರ ಬಹುಸಂಖ್ಯಾತವಾದವು ಗಾಂಧೀಜಿಯವರ ಎಲ್ಲರನ್ನೂ ಒಳಗೊಂಡ ನಂಬಿಕೆಗಿಂತ ತೀರಾ ಭಿನ್ನವಾಗಿದ್ದರೂ, ಅವರು ಗಾಂಧೀಜಿಯವರ ಗುಣಗಾನ ಮಾಡುವುದನ್ನೂ ನಾವು ಕೇಳಲಿದ್ದೇವೆ. ಸಂಸತ್‌ನ ಪ್ರಾಮುಖ್ಯತೆಯನ್ನು ಕಡೆಗಣಿಸಲಾಗುತ್ತಿದ್ದರೂ (ಹೊಸದಿಲ್ಲಿ ಹೆಚ್ಚು ಹೆಚ್ಚು ಮಾಲಿನ್ಯಗೊಳ್ಳುತ್ತಿದೆ), ‘ಪ್ರಜಾಪ್ರಭುತ್ವದ ಚೈತನ್ಯ’ ಹಾಗೂ ‘ನವ ಭಾರತ’ವನ್ನು ಪ್ರತಿನಿಧಿಸಲಿದೆಯೆಂಬಂತೆ ಬಿಂಬಿಸಲಾಗುತ್ತಿರುವ ವಿಶಾಲವಾದ ನೂತನ ಸಂಸತ್ ಕಟ್ಟಡವನ್ನು ಪ್ರಧಾನಿಯವರು ಉದ್ಘಾಟಿಸುವುದನ್ನು ಕಾಣಬಹುದಾಗಿದೆ. ನೈತಿಕ ಹಾಗೂ ಬೌದ್ಧಿಕ ನೆಲೆಗಟ್ಟಿನಲ್ಲಿ, ನಮ್ಮ ಪ್ರಚಾರದಾಹಿಯಾದ ಪ್ರಧಾನಿಯವರಿಗೂ ಶ್ರೀ ಅರಬಿಂದೊ ಅವರಿಗೂ ಆಳವಾದ ಕಂದರವಿದ್ದರೂ ಈ ಉಜ್ವಲ ಹಾಗೂ ಏಕಾಂತವಾಸಿ ಸನ್ಯಾಸಿಯಾಗಿದ್ದ ಮಹರ್ಷಿ ಅರಬಿಂದೊ ಜೊತೆಗೆ ಬಾಂಧವ್ಯವನ್ನು ಘೋಷಿಸಿಕೊಳ್ಳಲಿದ್ದಾರೆ.

2002ರಲ್ಲಿ ಈ ವಿವಿಧ ವರ್ಷಾಚರಣೆಗಳನ್ನು ನಡೆಸುವ ಮೂಲಕ ನರೇಂದ್ರ ಮೋದಿಯವರು ವೈಭವವನ್ನು ಪ್ರತಿಫಲಿಸಲು ಯತ್ನಿಸುವ ಜೊತೆಗೆ ತನ್ನ ರಾಜಕೀಯ ರ್ಚಸ್ಸನ್ನು ಬೆಳೆಸಲು ಯತ್ನಿಸಲಿದ್ದಾರೆ. ಇದೇ ವೇಳೆ ಅವರು ರಾಜಕೀಯ ಹಾಗೂ ವೈಯಕ್ತಿಕ ನೆಲೆಗಟ್ಟಿನಲ್ಲಿ ವ್ಯಾಪಕವಾಗಿ ಪ್ರತಿಕ್ರಿಯೆಗಳನ್ನು ನೀಡುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ವಾಸ್ತವವಾಗಿ ಈ ವರ್ಷ ಗುಜರಾತ್ ಹಿಂಸಾಚಾರದ 20ನೇ ವರ್ಷಾಚರಣೆಯು ಅವರಿಗೆ ಅತ್ಯಂತ ಪ್ರಮುಖವಾದ ವರ್ಷಾಚರಣೆಯಾಗಿದೆ. ಈ ಭಯಾನಕ ದುರಂತವು ಅವರ ಕಣ್ಗಾವಲಿನಲ್ಲೇ ನಡೆದಿತ್ತು ಹಾಗೂ ಅದರ ಕರಿನೆರಳು ಇನ್ನೂ ನಮ್ಮ ಗಣರಾಜ್ಯದ ಮೇಲೆ ಆವರಿಸಿದೆ.

ಉಪಸಂಹಾರ:

2002ರ ಗುಜರಾತ್ ಹಿಂಸಾಚಾರದಲ್ಲಿ ನಿಜಕ್ಕೂ ಏನು ನಡೆದಿತ್ತು ಎಂಬುದರ ಬಗ್ಗೆ ಹೆಚ್ಚು ತಿಳಿಯಲು ಆಸಕ್ತಿಯಿರುವವರು ರೇವತಿ ಲೌಲ್ ಅವರ ‘ಅನಾಟಮಿ ಆಫ್ ಹೇಟ್’, ಆಶೀಶ್ ಖೇತಾನ್‌ರ ‘ಅಂಡರ್‌ಕವರ್: ಮೈ ಜರ್ನಿ ಇಂಟೂ ದಿ ಹಿಸ್ಟರಿ ಆಫ್ ಹಿಂದುತ್ವ’, ಆರ್.ಬಿ.ಶ್ರೀಕುಮಾರ್ ಅವರ ‘ಗುಜರಾತ್: ಬಿಹೈಂಡ್ ದಿ ಕರ್ಟೈನ್’; ವರದರಾಜನ್ ಅವರ ‘ಗುಜರಾತ್: ದಿ ಮೇಕಿಂಗ್ ಆಫ್ ಟ್ರಾಜಿಡಿ’ ಈ ಮಹತ್ವದ ದಾಖಲೆ ಹಾಗೂ ವಿಶ್ಲೇಷಣಾತ್ಮಕ ಕೃತಿಗಳನ್ನು ಅಧ್ಯಯನ ಮಾಡಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)