varthabharthi


ಅನುಗಾಲ

ಗುಮ್ಮನ ಕರೆಯದಿರೆ...

ವಾರ್ತಾ ಭಾರತಿ : 13 Jan, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ವಿಶ್ವದ ಅನೇಕ ರಾಷ್ಟ್ರಗಳು ಕೊರೋನದಿಂದ ತತ್ತರಿಸಿದ್ದು ನಿಜ. ಅವು ತಮ್ಮ ಶ್ಲಾಘನೆಗೆ ಈ ಸಂದರ್ಭವನ್ನು ಬಳಸಿಕೊಳ್ಳಲಿಲ್ಲ. ನೆರವು ನೀಡಬೇಕಾದಲ್ಲಿ ನೀಡಿದವು; ನೆರವು ಪಡೆಯಬೇಕಾದಲ್ಲಿ ಪಡೆದವು. ಆದರೆ ಭಾರತ ಸರಕಾರವು ಲಸಿಕೆಯನ್ನು ಸಂಶೋಧಿಸಿ ಉಚಿತವಾಗಿ ನೀಡುವ ಪ್ರಹಸನವನ್ನು ಮಾಡಿ ಬೀಗಿತು. ಕೊರೋನ ಸೋಂಕಿನ ನಿಯಂತ್ರಣದಲ್ಲಿ ಮತ್ತು ಲಸಿಕಾ ಪ್ರಯೋಗದಲ್ಲಿ ತಾನು ವಿಶ್ವನಾಯಕನೆಂಬಂತೆ ಬಿಂಬಿಸಿತು. ವಿನಯ, ಸೌಜನ್ಯದ ಬದಲು ಅಹಂಕಾರ ಮತ್ತು ಆಡಂಬರ ವಿಜೃಂಭಿಸಿದವು.


ಪಂಜಾಬ್‌ನಲ್ಲಿ ಸಂಭವಿಸಿದ ಪ್ರಧಾನಿಯವರ ಭದ್ರತಾ ಲೋಪವೆಂಬ ಕಿರುಚಿತ್ರವು ಒಂದು ರಾಷ್ಟ್ರೀಯ ಮತ್ತು ಚಾರಿತ್ರಿಕ ದುರಂತದಂತೆ ಪ್ರಸಾರ-ಪ್ರಚಾರವಾಗುತ್ತಿದೆ. ಗಾಂಧಿ, ಇಂದಿರಾ, ರಾಜೀವ್ ಮಾತ್ರವಲ್ಲ ಶ್ಯಾಮಪ್ರಸಾದ ಮುಖರ್ಜಿ, ದೀನದಯಾಳ್ ಮುಂತಾದ ನಾಯಕರು ಹತ್ಯೆಯಾದ ಘಟನೆಗಳಿಗಿಂತಲೂ, ಇಂದಿರಾ, ಮನಮೋಹನ್‌ಸಿಂಗ್ ಮುಂತಾದವರ ಹಲ್ಲೆಗೆ ನಡೆದ ಪ್ರಯತ್ನಗಳಿಗಿಂತಲೂ ಹೆಚ್ಚಾಗಿ ಈ 15-20 ನಿಮಿಷಗಳ, ಪತ್ರಿಕೆಯ ಒಂದು ಕಾಲಮಿನಲ್ಲಿ ವರದಿಯಾಗಬೇಕಾಗಿದ್ದ ಘಟನೆಯು ಕಿರೀಟವಿಟ್ಟು ಕುಣಿಯುತ್ತಿದೆ. ಎಲ್ಲಕ್ಕಿಂತಲೂ ವಿಶೇಷವೆಂದರೆ ದೇಶದಲ್ಲಿ ಶ್ರೀಸಾಮಾನ್ಯರಿಗೆ ಒದಗಿ ಬರುತ್ತಿರುವ, ಅನುದಿನ ನಡೆಯುತ್ತಿರುವ ಅಪಘಾತಗಳು, ದುರ್ಘಟನೆಗಳು, 700 ರೈತರ ಸಾವು ಮುಂತಾದವು ಭೂಗತವಾಗುತ್ತಿವೆ. ಹಳ್ಳಿಯ ಗಾದೆ ಮಾತು ‘ಬಡವನಿಗಾದರೆ ಹಸಿವಿಗೆ, ಶ್ರೀಮಂತನಿಗಾದರೆ ಔಷಧಿಗೆ’ ಎಂಬುದು ಧುತ್ತನೆ ಎದುರಾಗುತ್ತದೆ. ದೇಶವನ್ನು ಮತ್ತೆ ಮತ್ತೆ ಕಾಡುತ್ತಿರುವ ಕೊರೋನ ಸೋಂಕು ರಾಜಕೀಯ ಎದುರಾಳಿಗಳನ್ನು ಬಗ್ಗುಬಡಿಯಲು ಮಾತ್ರ ಉಪಯೋಗವಾಗುತ್ತಿದೆಯೇ ಹೊರತು ಜೀವರಕ್ಷಣೆಗಲ್ಲ. ಊಟ-ಕಾಫಿಯ ‘ಮೆನು’ ಕೂಡಾ ರಾಜಕೀಯಕ್ಕೆ ಒತ್ತುಕೊಡುವಂತೆ ಸೃಷ್ಟಿಯಾಗುತ್ತಿದೆ. ಕಾನೂನು ತನ್ನ ಪಾಡಿಗೆ ತಾನು ಮುಂದುವರಿಯಲು ಅವಕಾಶ ನೀಡುವ ಬದಲು ಪಕ್ಷದ ನಿಷ್ಠ ಕುರುಡು ಕಾರ್ಯಕರ್ತರ ಮೂಲಕ ಈ ಕಳಚಿ ಬಿದ್ದ ಆಕಾಶವನ್ನು ಮನೆಮನೆಗೆ ತಲುಪಿಸಲಾಗುತ್ತಿದೆ. ಮಠಾಧೀಶರು, ಅಧಿಕಾರದಲ್ಲಿರುವ ಮತ್ತು ಇಲ್ಲದ ಯೋಗಿಗಳು, ಸಂತವೇಷದ ರಾಜಕಾರಣಿಗಳು ಯಥಾನುಶಕ್ತಿ ಬೆಂಕಿ ಹಚ್ಚುವ ಮಾತುಗಳನ್ನಾಡುತ್ತಿದ್ದಾರೆ. ವ್ಯಕ್ತಿ-ಸರಕಾರ-ದೇಶ ಎಂಬ ವ್ಯತ್ಯಾಸವನ್ನು ಅಳಿಸಲು ಸರ್ವ ಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಟೀಕಿಸುವವರು ದೇಶದ್ರೋಹಿಗಳಾಗಿ ಚಿತ್ರಿತವಾದಾರು. ಅದೇನೇ ಇರಲಿ, ಈ ಭದ್ರತಾ ಲೋಪದ ಘಟನೆಯು ಇದೀಗ ಸರ್ವೋಚ್ಚ ನ್ಯಾಯಾಲಯದ ಹೊಸ್ತಿಲಲ್ಲಿರುವುದರಿಂದ ಇದನ್ನು ವಿವರವಾಗಿ ಚರ್ಚಿಸುವುದು ಅನುಚಿತವಾದೀತು.

ದೇಶದ ಇತರೆಡೆಗಳಲ್ಲಿ ಕಳೆದ ಕೆಲವು ವಾರ/ತಿಂಗಳುಗಳಿಂದ ಕೊರೋನ ಸೋಂಕು ವ್ಯಾಪಕವಾಗಿದೆ. ಕರ್ನಾಟಕದಲ್ಲೂ 2022ರ ಮೊದಲ ದಿನಗಳಲ್ಲೇ ‘ಲಾಕ್‌ಡೌನ್’, ‘ರಾತ್ರಿ ಕರ್ಫ್ಯೂ’, ‘ವಾರಾಂತ್ಯದ ಕರ್ಫ್ಯೂ’ ಎಂಬ ಅಭಿದಾನಗಳೊಂದಿಗೆ ಪ್ರತ್ಯಕ್ಷವಾಗಿದೆ. ಕೋವಿಡ್-19 ಎಂಬ ಕೊರೋನ ರೋಗ ತನ್ನ ಪರಿಣಾಮದ ತನ್ನ ಕಾಲಮಿತಿಯನ್ನು ಹಿಗ್ಗಿಸಿಕೊಂಡಿದೆ. ಅದೀಗ ಗವಾಕ್ಷಿಯಲ್ಲಿ ಮರಳಿ ಬಂದ ಪಿಶಾಚಿಯಂತಿದೆ. ಕಾಲಾತೀತವಾಗುವ ಭಯಾನಕ ಭೂತದಂತೆ ಗೋಚರಿಸುತ್ತಿದೆ. 2019ರಲ್ಲಿ ಉಲ್ಕೆಯಂತೆ ಪ್ರತ್ಯಕ್ಷವಾದ ಕೋವಿಡ್ ಮನುಷ್ಯ ಕುಲವನ್ನೇ ಒಮ್ಮೆ ಬಲವಾಗಿ ಅಲ್ಲಾಡಿಸಿತು. ಈ ಭೀಮ ಬಲಕ್ಕೆ ಜೀವಗಳು ತರಗೆಲೆಗಳಂತೆ ಉದುರಿದವು. ಆಳುವವರು ಪ್ರಜೆಗಳನ್ನು ಕಾಪಾಡುವ ನೈಜ ಹೆಜ್ಜೆಗಳನ್ನು ಹಾಕುವ ಬದಲಿಗೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಗುಂಗಿನಲ್ಲಿ ಮುಮ್ಮುಖದ ಬದಲು ಹಿಮ್ಮುಖವಾಗಿ ಚಲಿಸಿದರು. ರೋಗಕ್ಕಿಂತಲೂ ತೀವ್ರ ನೋವನ್ನು ಚಿಕಿತ್ಸೆ ನೀಡಿತು. ಸಾವೆಂಬುದು ಸಂಖ್ಯೆಯ ಆಟವಾಯಿತೇ ವಿನಾ ನೊಂದವರ ಪಾಲಿಗೆ ಅಮೃತಪಥವಾಗಲಿಲ್ಲ. ಜನರ ನೆನಪು ಕ್ಷೀಣ ಎಂಬುದನ್ನೇ ಬಂಡವಾಳವಾಗಿಸಿ ಚುನಾವಣೆಗಳನ್ನೆದುರಿಸಿ ಮತದಾರರನ್ನು ಅಧಿಕಾರವನ್ನೇರುವ ನಿಚ್ಚಣಿಕೆಯಾಗಿಸುವ ಮಂದಿಗೆ ಇನ್ನಷ್ಟು ಜನ ಸಾವು-ನೋವಿಗೆ ತುತ್ತಾದರೆ ಅದು ಏನೂ ಅಲ್ಲ ಎಂಬ ದೃಢತೆಯಲ್ಲಿ ಕಾಲಯಾಪನೆ ಮಾಡುತ್ತಿದ್ದಾರೆ. ಹಿಂದೆ ನೋಡಿ ಅನುಭವವನ್ನೂ, ಮುಂದೆ ನೋಡಿ ಭರವಸೆಯನ್ನೂ, ಸುತ್ತ ನೋಡಿ ವಾಸ್ತವವನ್ನೂ ತನ್ನೊಳಗನ್ನು ನೋಡಿ ಆತ್ಮವಿಶ್ವಾಸವನ್ನೂ ಪಡೆಯಬಹುದೆಂಬ ಮಾತಿದೆ. ಈ ಮಾತಿನಲ್ಲೇ ವಾಸ್ತವದ ನೆಲೆಗಟ್ಟು ಬೇರೆಯೇ ಇದೆ ಮತ್ತು ಅದಕ್ಕೂ ಮಿಗಿಲಾಗಿ ನಾವು ನಿಲುಕಿ ನೋಡಬಯಸುವ ಆದರ್ಶ ಬೇರೆಯೇ ಇದೆ ಎಂಬ ಸೂಚನೆಯಿದೆ. ಇಂತಹ ಸೂತ್ರವಾಕ್ಯಗಳ ಹಿನ್ನೆಲೆಯಲ್ಲಿ ಬಡತನದ, ರೋಗರುಜಿನಗಳ, ಹಸಿವಿನ ಕರಾಳ ವಾಸ್ತವವಿದೆ. ಭಾರತದಂತಹ ಭಾರೀ ಜನಸಂಖ್ಯೆಯ ದೇಶದಲ್ಲಿ ಏನು ನಡೆದರೂ ಅದನ್ನು ಅಲಕ್ಷಿಸಬಹುದು.

ಜಗನ್ನಾಥ ರಥಯಾತ್ರೆಯಂತೆ ನುಜ್ಜುಗುಜ್ಜಾ ದ ಅಂಕೆಸಂಖ್ಯೆಗಳು ವರದಿಗಿಂತ ಹೆಚ್ಚೇನೂ ನಾಟುವುದಿಲ್ಲ. ಮನುಷ್ಯ ಸಂವೇದನೆಗೆ ಏನನ್ನೂ ನೀಡುವುದಿಲ್ಲ. ನ್ಯೂಯಾರ್ಕ್ ಪೇಟೆ ಅರಳೆ ಧಾರಣೆಯ, 1960-70ರ ದಶಕಗಳ ಪಶ್ಚಿಮ ಬಂಗಾಳದ ನಕ್ಸಲ್ ಸಾವುಗಳ ಅಂಕಿ-ಸಂಖ್ಯೆಗಳು ದಿನಪತ್ರಿಕೆಗಳ ಮೊದಲ ಪುಟದ ಮೇಲ್ಭಾಗದಲ್ಲಿ ನಮೂ ದಾಗುವ ಕಾಲವೊಂದಿತ್ತು. ಅದೇ ರೀತಿ ಈಗ ಜನರ ಸಾವುಗಳನ್ನು ದಾಖಲಿಸ ಬಹುದು. ಕೊರೋನದ ದುರ್ಬಳಕೆಯಲ್ಲಿಯೇ ಸಂತೋಷ, ಸಮಾಧಾನ ಮತ್ತು ಲಾಭವನ್ನು ಕಾಣುವ ಮಂದಿಯೇ ಹೆಚ್ಚು. ಹೀಗಾಗಿ ಕೊರೋನ ಎಂಬುದು ಒಂದು ದೈನಂದಿನ ವ್ಯವಹಾರವಾಗಿದೆಯೆಂದು ನಂಬಬಹುದು. ಕಳೆದ ಎರಡು ವರ್ಷಗಳ ಕೊರೋನ ವ್ಯವಹರಣೆಯನ್ನು ಸ್ವಲ್ಪ ನೆನಪುಮಾಡಿಕೊಂಡರೆ ಕೆಲವು ಸಂಗತಿಗಳು ಸಾಂಕೇತಿಕವಾದರೂ ಮಹತ್ವದ್ದೆನಿಸಬಹುದು. ಮೊದಲ ಬಾರಿ ಕೊರೋನದ ವ್ಯಾಪಕತೆಯನ್ನು ಮನಗಂಡು ದೇಶದ ಪ್ರಧಾನಿ ತಾವೇ ಮೈಕ್ ಹಿಡಿದು ‘ಲಾಕ್‌ಡೌನ್’ ಎಂಬ ಪ್ರಜೆಗಳ ಪಾಲಿನ ಹೆಡೆಮುರಿಯನ್ನು ಘೋಷಿಸಿದರು. 21 ದಿನಗಳ ಮಹಾಭಾರತವೆಂದು ಮತ್ತು ಅಂತಿಮ ಜಯ ನಮ್ಮದೇ ಎಂದು ಪ್ರಧಾನಿ ಹೇಳಿದರು. ಅದನ್ನು ಗುಂಪಾಗಿ ಶಂಖ-ಜಾಗಟೆ-ಆರತಿ-ಪಟಾಕಿಗಳೊಂದಿಗೆ ಹಾಡಲಾಯಿತು. ಆರಂಭದಲ್ಲಿ ಇದು ಕೇವಲ ಕೆಲವೇ ದಿನಗಳ ಒಂದು ನಿರ್ಬಂಧವೆಂದು ನಂಬಿದವರಿಗೆ ಸರಕಾರ ಸುಳ್ಳು ಹೇಳಿತು. ಬಳಿಕ ಅದನ್ನು ಅನಿರ್ದಿಷ್ಟಾವಧಿಯ ವರೆಗೆ ಅಂದರೆ ಆಗಾಗ ದಿನಾಂಕವನ್ನು ನಮೂದಿಸಿ ವಿಸ್ತರಿಸಲಾಯಿತು. ಮೊದಲಿಗೆ ಇದು ದೇಶದ ಪ್ರಧಾನಿಯೇ ಘೋಷಿಸುವ ಮಹಾನ್ ಘಟನೆಯಾಗಿದ್ದರೆ ಆನಂತರ ಅದು ಇತರ ಸಚಿವರ, ‘ಹಿರಿಯ’ ಅಧಿಕಾರಿಗಳ ಪಾಲಾಯಿತು. ಮುಂದೆ ಅದನ್ನು ರಾಜ್ಯಗಳಿಗೆ ವಹಿಸಲಾಯಿತು. ಈಗ ಒಂದೊಂದು ಕಡೆ ಒಂದೊಂದು ನೀತಿಯೆಂಬುದನ್ನು ಒಕ್ಕೂಟ ಸರಕಾರದ ವ್ಯವಸ್ಥೆ ಸೂಚಿಸಿ ಜಿಲ್ಲಾ ಮಟ್ಟಕ್ಕೆ ತಲುಪಿಸಿದೆ.

ಈ ಲಾಕ್‌ಡೌನ್ ಬಡವರಿಗೆ, ದಿನಗೂಲಿಗಳಿಗೆ, ವೃತ್ತಿಪರರಿಗೆ ಶಾಪವಾದರೆ ವೈದ್ಯಕೀಯ ಮತ್ತು ಪೊಲೀಸ್ ಇಲಾಖೆಯ ಹೊರತು ಸರಕಾರದ ಮತ್ತು ಅದರ ಅಧೀನ ಸಂಸ್ಥೆಗಳ ಇತರ ಅಧಿಕಾರಿಗಳಿಗೆ/ನೌಕರರಿಗೆ ಶಾಪದ ಬದಲು ವರವಾಯಿತು. ವೇತನ/ಪಿಂಚಣಿ ಸಹಿತ ವಿಶ್ರಾಂತಿ ಪಡೆಯಲು ಯೋಗ್ಯ ಅವಕಾಶವಾಯಿತು. ಸರಕಾರವೂ ಅಷ್ಟೇ: ಬಡವರ ಬದುಕಿನ ಕುರಿತು ಚಿಂತನೆ ನಡೆಸುವ ಬದಲು ಚಿಂತೆಯನ್ನು ವ್ಯಕ್ತಪಡಿಸಿ ಕೆಲವು ತಾತ್ಕಾಲಿಕ ಪರಿಹಾರಗಳ ನಾಟಕವನ್ನು ಮಾಡಿ ವಿರಮಿಸಿತು. ವಲಸೆ ಕಾರ್ಮಿಕರು ಪಟ್ಟ ಯಾತನೆ ವಸ್ತುನಿಷ್ಠ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೊರೋನದಿಂದ ಸಾವಿಗೀಡಾದವರ ಅಂತಿಮ ದರ್ಶನದ ಭಾಗ್ಯವೂ ಬಡವರಿಗೆ ಇಲ್ಲದಾಯಿತು. ಸಾವು ಬರಿಯ ಅಂಕೆ-ಸಂಖ್ಯೆಗಳ ವರದಿಯಾದರೆ ಬದುಕಿನ ಅರ್ಥವೇನು?

ಗ್ರಾಮೀಣ ಪ್ರದೇಶದಲ್ಲಿರುವ ಒಬ್ಬ ಆಟೋ ಚಾಲಕ 5 ಸಾವಿರ ರೂಪಾಯಿಗಳ ಪರಿಹಾರಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಹತ್ತಾರು ಬಾರಿ ಅಲೆದು ಸರಕಾರವು ವಿವಿಧ ಹಂತದಲ್ಲಿ ಅಪೇಕ್ಷಿಸಿದ ದಾಖಲೆಗಳನ್ನು ಸಂಗ್ರಹಿಸಲಾರದೆ ಸುಮಾರು 2 ಸಾವಿರ ರೂಪಾಯಿಗಳನ್ನು ಮತ್ತು ಆ ದಿನಗಳಲ್ಲಿ ಆಗಬಹುದಾಗಿದ್ದ ತನ್ನ ಕಿಂಚಿತ್ ಆದಾಯವನ್ನೂ ಕಳೆದುಕೊಂಡು ಕೈಚೆಲ್ಲಿ ಕುಳಿತ ಘಟನೆ ನನ್ನ ಮುಂದಿದೆ. ತಬರನ ಕಥೆ ಎಲ್ಲ ಅನಪೇಕ್ಷಿತರ ಕಥೆಯಾಗುತ್ತಿದೆ. ಈಗಾಗಲೇ ಇಂತಹ ಘಟನೆಗಳು ಜನರ ಮುಂದಿವೆ. ನೂರಾರು ಉದಾಹರಣೆಗಳನ್ನು, ನಿದರ್ಶನಗಳನ್ನು ನೀಡಬಹುದು. ಒಂದು ಜಿಲ್ಲೆಯಲ್ಲಿ ವಾಸಿಸುವ ವ್ಯಕ್ತಿ ಇನ್ನೊಂದು ಜಿಲ್ಲೆಯಲ್ಲಿರುವ ತನ್ನ ಭೂಮಿಯನ್ನು ವ್ಯವಸಾಯಮಾಡಬೇಕಾದರೆ ಹೋಗುವ ಬಗೆ ಹೇಗೆ? ಇದಕ್ಕೆ ಸೂಕ್ತ ಉತ್ತರವಿಲ್ಲ. ನಿಮ್ಮ ಹಿತಕ್ಕಾಗಿ, ನಿಮ್ಮ ಭವ್ಯ ಭವಿಷ್ಯಕ್ಕಾಗಿ, ನಿಮ್ಮನ್ನು ಹಿಂಸಿಸಲಾಗುವುದು ಎಂಬುದೇ ಈಗ ಘೋಷವಾಕ್ಯ.

ವಿಶ್ವದ ಅನೇಕ ರಾಷ್ಟ್ರಗಳು ಕೊರೋನದಿಂದ ತತ್ತರಿಸಿದ್ದು ನಿಜ. ಅವು ತಮ್ಮ ಶ್ಲಾಘನೆಗೆ ಈ ಸಂದರ್ಭವನ್ನು ಬಳಸಿಕೊಳ್ಳಲಿಲ್ಲ. ನೆರವು ನೀಡಬೇಕಾದಲ್ಲಿ ನೀಡಿದವು; ನೆರವು ಪಡೆಯಬೇಕಾದಲ್ಲಿ ಪಡೆದವು. ಆದರೆ ಭಾರತ ಸರಕಾರವು ಲಸಿಕೆಯನ್ನು ಸಂಶೋಧಿಸಿ ಉಚಿತವಾಗಿ ನೀಡುವ ಪ್ರಹಸನವನ್ನು ಮಾಡಿ ಬೀಗಿತು. ಕೊರೋನ ಸೋಂಕಿನ ನಿಯಂತ್ರಣದಲ್ಲಿ ಮತ್ತು ಲಸಿಕಾ ಪ್ರಯೋಗದಲ್ಲಿ ತಾನು ವಿಶ್ವನಾಯಕನೆಂಬಂತೆ ಬಿಂಬಿಸಿತು. ವಿನಯ, ಸೌಜನ್ಯದ ಬದಲು ಅಹಂಕಾರ ಮತ್ತು ಆಡಂಬರ ವಿಜೃಂಭಿಸಿದವು. ಪುಟಗಟ್ಟಲೆ ಜಾಹೀರಾತು, ಕೋಟ್ಯಂತರ ರೂಪಾಯಿ ವೆಚ್ಚದ ರಾಜಫಲಕಗಳು ಹಬ್ಬದೋಪಾದಿಯಲ್ಲಿ ಬೀದಿಬೀದಿಗಳಲ್ಲಿ, ಮಾಧ್ಯಮಗಳಲ್ಲಿ ಎಲ್ಲೆಂದರಲ್ಲಿ ರಾರಾಜಿಸಿದವು. ಸಾಮಾಜಿಕ ಜಾಲತಾಣಗಳು ಸುಳ್ಳಿನ ಸಂತೆಯನ್ನು ನಡೆಸಿದವು. ಇದೇ ವೇಳೆ ತೈಲ ಬೆಲೆ ನಭೂತೋ ಏರಿತು. ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳು, ಸುಂಕಗಳು ಮುಖ್ಯವಾಗಿ ಜಿಎಸ್‌ಟಿ ಏರಿದವು. ಎಲ್ಲ ಜನೋಪಯೋಗಿ ಮತ್ತು ಬಳಕೆದಾರ ಸಾಮಗ್ರಿಗಳ ಬೆಲೆ ಆಕಾಶಕ್ಕೇರಿತು. ಜನಸಾಮಾನ್ಯರನ್ನೂ ಬಾಧಿಸಿದ ಈ ಬೆಳವಣಿಗೆಗೆ ಸರಕಾರ ನೀಡಿದ ಕಾರಣವೆಂದರೆ ಕೋಟ್ಯಂತರ ಪ್ರಜೆಗಳಿಗೆ ಉಚಿತ ಲಸಿಕೆ ಪ್ರಯೋಗಕ್ಕೆ ಹಣ ಬೇಕಲ್ಲ ಎಂಬುದೇ ಆಗಿತ್ತು. ಹಾಗಾದರೆ ಉಚಿತ ಯಾವುದು? ಸರಕಾರದ ಬಳಿ ಈ ಪ್ರಶ್ನೆಗೆ ಉತ್ತರವಿಲ್ಲ. ಅವರ ಬೆಂಬಲಿಗರಿಗೆ ಉತ್ತರ ಬೇಕಾಗಿಲ್ಲ. ಸರಕಾರದ ಅಂಕಿ-ಅಂಶಗಳಿಗೂ ಅಧಿಕಾರದಲ್ಲಿರುವ ರಾಜಕಾರಣಿಗಳು ಹೇಳುವ ಅಂಕಿ-ಸಂಖ್ಯೆಗಳಿಗೂ ಅಗಾಧ ವ್ಯತ್ಯಾಸವಿದೆ.

ಸಾವು ನೋವಿನ ಸಂಖ್ಯೆಯ ಶ್ವೇತಪತ್ರ ಬಂದರೂ ಅನೇಕರ ಸಾವು-ನೋವು ಬೆಳಕು ಕಾಣದು. ಈಚೆಗೆ ಪ್ರಕಟವಾದ ಒಮೈಕ್ರಾನ್‌ನ ಪರಿಣಾಮವೂ ಸರಕಾರ ಹೇಳುವುದಕ್ಕಿಂತ 60-90 ಪಾಲು ಹೆಚ್ಚಿದೆಯೆಂದು ಸರಕಾರಿ ಮೂಲಗಳೇ ಹೇಳುತ್ತಿವೆ. ಸ್ವವೈಭವೀಕರಣದಲ್ಲಿ ಪ್ರಾಯಃ ಭಾರತ ಎಲ್ಲ ರಾಷ್ಟ್ರಗಳಿಗಿಂತಲೂ ಮುಂದಿದೆ. ನಮ್ಮ ರಾಜಕಾರಣಿಗಳೂ ಅಷ್ಟೇ: ಪರಮ ನಿಸ್ವಾರ್ಥಿಗಳು. ತಮ್ಮ ದೋಷಗಳು ಅವರಿಗೆ ಕಾಣವು. ಪಾಪಿಗಳು ಸ್ವಕೀಯ ಪರಾಗಸ್ಪರ್ಶದ ಸೃಷ್ಟಿಗಳು. ಪರನಿಂದೆಯೇ ಅಂತರಂಗ ಶುದ್ಧಿ; ಬಹಿರಂಗ ಶುದ್ಧಿ. ಇವೆಲ್ಲ ಪ್ರಜೆಗಳಿಗೆ ಅರ್ಥವಾಗುವುದಿಲ್ಲವೆಂದಲ್ಲ. ಆದರೆ ಬಹುಪಾಲು ಜನರು ರಾಜಕೀಯ ಅನುಕೂಲಗಳನ್ನು ಇಲ್ಲವೇ ವ್ಯಾವಹಾರಿಕ ಅನುಕೂಲಗಳನ್ನು ಮಾತ್ರ ನೋಡುತ್ತಾರೆ. ಇವನ್ನು ಅರ್ಥಮಾಡಿಕೊಂಡವರ ಪೈಕಿ ರಾಜಕೀಯ ಕಾರಣಗಳಿಗಾಗಿ ನಿದ್ರಿಸಿದಂತೆ ನಟಿಸಿದವರೇ ಹೆಚ್ಚು. ಇನ್ನೊಂದಷ್ಟು ಜನರು ಇವುಗಳಿಗೆ ಕುರುಡರಾಗಿ ಕಿವುಡರಾಗಿ ಸುರಕ್ಷತಾ ತಾಣದಲ್ಲಿರುತ್ತಾರೆ. ಕೆಲವೇ ಕೆಲವು ಮಂದಿ ಮಾತ್ರ ಈ ವಿಷಾದ ಘಳಿಗೆಗಳಿಗೆ ಸ್ಪಂದಿಸಿ ಪ್ರತಿಕ್ರಿಯಿಸುತ್ತಾರೆ. ಈ ಬಾರಿ ಸರಕಾರ ನಿಯಮಗಳನ್ನು ಬಿಗಿಗೊಳಿಸುವ, ಸಡಿಲಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ನಿರಾಳವಾಗಿದೆ. ರಾಜಕಾರಣವೆಂದರೆ ಇದು. ತನ್ನಿಂದ ಅಸಾಧ್ಯವಾದದ್ದನ್ನು ಅಧಿಕಾರಿಗಳಿಗೆ ಹೇಳಿ ವೈಫಲ್ಯಕ್ಕೆ ಅವರನ್ನು ಬೊಟ್ಟು ಮಾಡಿ ತೋರಿಸುವುದು. ಮೇಲಾಗಿ ಅಧಿಕಾರಿಗಳು ನಿಷ್ಠುರವಾಗಿಯೇ ಈ ಆದೇಶಗಳನ್ನು ಪಾಲಿಸುತ್ತಾರೆ. ಏಕೆಂದರೆ ಅವರಿಗೆ ಜನಮೆಚ್ಚುಗೆ ಬೇಡ. ಏನಿದ್ದರೂ ಆಳರಸರ ಮೆಚ್ಚುಗೆ ಮಾತ್ರ. ಸರಕಾರದ ಹೊಣೆಯೇನಿದ್ದರೂ ರಾಜಕೀಯ ಮಾತ್ರ. ಈಗಾಗಲೇ ಆ ನಿಟ್ಟಿನಲ್ಲಿ ರಾಜಕಾರಣ ಸಾಗಿದೆ.

ಪ್ರಯಾಣಿಸಲು ಬೇಕಾದ ನಿಯಮಗಳನ್ನು ಪಾಲಿಸುವ ಬದಲು ಒಂದಷ್ಟು ಲಂಚ ನೀಡಿದರೆ ಸುಲಭವೆನ್ನುವ ವಾತಾವರಣವನ್ನು ಅಧಿಕಾರಶಾಹಿಯು ನಿರ್ಮಿಸಿತು. ಅನುಮತಿ/ರಹದಾರಿ ಪಡೆಯಿರಿ ಎಂದು ರಾಜಕಾರಣಿಗಳು ಹೇಳಿದರೂ ಅದನ್ನು ಪಡೆಯುವ ಬಗೆ ಹೇಗೆ ಎಂಬುದನ್ನು ಅರಿಯಲು ಹೊಸ ಬದುಕೇ ಬೇಕಾದೀತು. ಈಗ ಒಕ್ಕೂಟ ಸರಕಾರದ ದೃಷ್ಟಿ ಏನಿದ್ದರೂ 5 ರಾಜ್ಯಗಳ ಚುನಾವಣೆಯತ್ತ. ಹಿಂದೆ ಪಶ್ಚಿಮ ಬಂಗಾಳದ ಚುನಾವಣೆಯ ಸಂದರ್ಭದಲ್ಲಿ ಪ್ರಜೆಯಿಂದ ಪ್ರಧಾನಿಯ ವರೆಗೆ ಎಲ್ಲರೂ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದರು. ಇಷ್ಟಾದರೂ ಏನೂ ಆಗದವರಂತೆ ವರ್ತಿಸಿದರು. ರಾಜಕಾರಣದಿಂದ ದೂರವಿದ್ದು ಕಾನೂನನ್ನು ಗೌರವಿಸುವವರಷ್ಟೇ ನರಳಿದರು. ಈಗಲೂ ಜಾಣನಡೆಯಲ್ಲಿ ಸರಕಾರಗಳು ‘ನಿಮಗಿಂತ ನಾವು ಪವಿತ್ರ’ವೆಂಬ ಧೋರಣೆಯಲ್ಲಿವೆ. ಎಲ್ಲವೂ ರಾಜಕೀಯಕ್ಕಾದರೆ ಪ್ರಜೆಗಳಿಗೇನು? ತಾಯಿ ತನ್ನ ಮಗುವಿಗೆ ಗುಮ್ಮನೆಂಬ ಇಲ್ಲದ ಅಪಾಯವನ್ನು ತೋರಿಸಿ ಊಟ ಮಾಡಿಸುತ್ತಾಳೆಂಬ ಹೇಳಿಕೆಯಿದೆ. ಅದು ಪ್ರೀತಿಯ ಅನಿವಾರ್ಯ ಕರ್ಮ. ಆದರೆ ಇಲ್ಲಿ ಸರಕಾರವು ಗುಮ್ಮಗಳನ್ನು ತೋರಿಸಿ ಹೆದರಿಸಿ ಬೆಂಬಲವನ್ನೂ ಮತಗಳನ್ನೂ ಗಳಿಸಲು ಅಹರ್ನಿಶಿ ದುಡಿಯುತ್ತಿವೆ. ಇದೊಂದೇ ಅಧಿಕಾರದ ದುಡಿಮೆ. ಪ್ರಜ್ಞೆ ಕಳಚಿಹೋಗುವ ಮುನ್ನ ಸಮಾಜವು ಕೊರೋನ/ಒಮೈಕ್ರಾನ್ ಮಾತ್ರವಲ್ಲ ಸಮೂಹ ಹಿಂಸೆ ಮುಂತಾದ ಸಾಂಕ್ರಾಮಿಕಗಳಿಂದ ಸಾಯಬೇಕೇ ಅಥವಾ ಹಸಿವು, ಬಡತನದಿಂದ ಸಾಯಬೇಕೇ ಅಥವಾ ಸಾಮಾಜಿಕ ಕ್ಷೋಭೆಯಿಂದ ಎಂಬುದನ್ನು ಮನಗಾಣಬೇಕು. ಅದಲ್ಲದಿದ್ದರೆ ದಯಾಮರಣವನ್ನು ಕಾನೂನಾಗಿ ಮಾಡಬೇಕಾದ ಅನಿವಾರ್ಯತೆ ಎದುರಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)