varthabharthi


ಅಂತಾರಾಷ್ಟ್ರೀಯ

ಉ.ಕೊರಿಯಾದಿಂದ ಮತ್ತೆ ಖಂಡಾಂತರ ಕ್ಷಿಪಣಿ ಪರೀಕ್ಷೆ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಅಮೆರಿಕ

ವಾರ್ತಾ ಭಾರತಿ : 14 Jan, 2022

Photo : PTI


ಪಾಂಗ್ಯಾಂಗ್, ಜ.14: ಉತ್ತರ ಕೊರಿಯಾ ಗುರುವಾರ ಮತ್ತೆ 2 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ್ದು ಇದು ಕಳೆದ 2 ವಾರದಲ್ಲಿ ನಡೆಸಿದ 3ನೇ ಖಂಡಾಂತರ ಕ್ಷಿಪಣಿ ಪರೀಕ್ಷೆಯಾಗಿದೆ. ಇದನ್ನು ಖಂಡಿಸಿರುವ ಅಮೆರಿಕ, ಉತ್ತರಕೊರಿಯಾದ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ರವಾನಿಸಿದೆ.
  
ಉತ್ತರಕೊರಿಯಾದ ಪಶ್ಚಿಮ ಕರಾವಳಿಯ ನಾರ್ಥ್ ಪಾಂಗ್ಯಾಂಗ್ ಪ್ರಾಂತದಿಂದ ಪೂರ್ವದೆಡೆ 2 ಕಡಿಮೆ ದೂರ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿರುವುದನ್ನು ಗಮನಿಸಲಾಗಿದೆ. ಈ ಕ್ಷಿಪಣಿಗಳು ಗರಿಷ್ಟ 36 ಕಿ.ಮೀ ಎತ್ತರದಲ್ಲಿ ಸುಮಾರು 430 ಕಿ.ಮೀ ದೂರದವರೆಗೆ ಚಲಿಸಿವೆ ಎಂದು ದಕ್ಷಿಣ ಕೊರಿಯಾ ರಕ್ಷಣಾ ಪಡೆಯ ಜಂಟಿ ಮುಖ್ಯಸ್ಥರು ಶುಕ್ರವಾರ ಹೇಳಿದ್ದಾರೆ.
  
ಉತ್ತರಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿರುವುದನ್ನು ಜಪಾನ್‌ನ ಕರಾವಳಿ ಭದ್ರತಾ ಪಡೆ ಕೂಡಾ ದೃಢಪಡಿಸಿದೆ. ನಿರಂತರ ಖಂಡಾಂತರ ಕ್ಷಿಪಣಿ ಪರೀಕ್ಷೆ ಸಹಿತ ಉತ್ತರಕೊರಿಯಾ ನಡೆಸುತ್ತಿರುವ ಸೇನಾ ಚಟುವಟಿಕೆಗಳು ಜಪಾನ್ ಮತ್ತು ಈ ವಲಯದ ಭದ್ರತೆಗೆ ಎದುರಾಗಿರುವ ದೊಡ್ಡ ಬೆದರಿಕೆಯಾಗಿದೆ ಮತ್ತು ಅಂತರಾಷ್ಟ್ರೀಯ ಸಮುದಾಯದ ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ಜಪಾನ್ ಸಚಿವ ಸಂಪುಟದ ಕಾರ್ಯದರ್ಶಿ ಹಿರೊಕಝು ಮಟ್ಸುನೊ ಹೇಳಿದ್ದಾರೆ.

ಉತ್ತರ ಕೊರಿಯಾ ಸೇನೆಯ ಚಳಿಗಾಲದ ಕವಾಯತಿನ ಭಾಗವಾಗಿ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿರಬಹುದು. ಜತೆಗೆ, ಅಮೆರಿಕಕ್ಕೆ ಸ್ಪಷ್ಟ ಸಂದೇಶ ರವಾನಿಸುವ ಉದ್ದೇಶವೂ ಇದರ ಹಿಂದೆ ಇರಬಹುದು ಎಂದು ದಕ್ಷಿಣ ಕೊರಿಯಾದ ಮಾಜಿ ನೌಕಾಸೇನಾಧಿಕಾರಿ ಕಿಮ್ ಡಾಂಗ್ ಯುಪ್ ಹೇಳಿದ್ದಾರೆ. ಜನವರಿ 5 ಮತ್ತು 11ರಂದು ಉತ್ತರ ಕೊರಿಯಾದ 2 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ್ದು ಇವು ಹೈಪರ್‌ಸಾನಿಕ್ ಕ್ಷಿಪಣಿಗಳಾಗಿವೆ ಎಂದು ಮೂಲಗಳು ಹೇಳಿವೆ. ಹೈಪರ್‌ಸಾನಿಕ್ ಕ್ಷಿಪಣಿಗಳು ಸಾಮಾನ್ಯ ಕ್ಷಿಪಣಿಗಳಿಗಿಂತ ಅತ್ಯಧಿಕ ವೇಗದಲ್ಲಿ ಚಲಿಸುತ್ತವೆ ಮತ್ತು ಹೆಚ್ಚು ನಿಖರತೆಯಿಂದ ಗುರಿಯೆಡೆಗೆ ಸಾಗುತ್ತವೆ. ಚೀನಾ, ರಶ್ಯಾ ಮತ್ತು ಅಮೆರಿಕ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಹೊಂದಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)