varthabharthi


ಅಂತಾರಾಷ್ಟ್ರೀಯ

ಇಂಡೋನೇಶ್ಯಾ: 6.6 ತೀವ್ರತೆಯ ಭೂಕಂಪ; ಜೀವಭಯದಿಂದ ಹೊರಗೋಡಿ ಬಂದ ಜನರು

ವಾರ್ತಾ ಭಾರತಿ : 14 Jan, 2022

ಇಂಡೋನೇಶ್ಯಾ: 6.6 ತೀವ್ರತೆಯ ಭೂಕಂಪ; ಜೀವಭಯದಿಂದ ಹೊರಗೋಡಿ ಬಂದ ಜನರು

 ಜಕಾರ್ತ, ಜ.14: ಇಂಡೋನೇಶ್ಯಾದ ಜಾವಾ ದ್ವೀಪದಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 6.6 ಡಿಗ್ರಿ ತೀವ್ರತೆಯ ಭೂಕಂಪ ಸಂಭವಿಸಿದ್ದು ರಾಜಧಾನಿ ಜಕಾರ್ತದಲ್ಲೂ ಭೂಮಿ ಮತ್ತು ಕಟ್ಟಡಗಳು ಕಂಪಿಸಿದ್ದು ಜನತೆ ಭಯಭೀತಗೊಂಡರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಾವಾದ್ವೀಪದ ನೈಋತ್ಯದಲ್ಲಿ , ಭೂಮಿಯ 37 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಇಂಡೋನೇಶ್ಯಾದ ಭೂಕಂಪಶಾಸ್ತ್ರ ಇಲಾಖೆ ಹೇಳಿದೆ. ಭೂಕಂಪದ ಹಿನ್ನೆಲೆಯಲ್ಲಿ ತ್ಸುನಾಮಿ ಎಚ್ಚರಿಕೆಯನ್ನು ನೀಡಿಲ್ಲ ಮತ್ತು ತಕ್ಷಣಕ್ಕೆ ಯಾವುದೇ ಪ್ರಾಣಹಾನಿ ಅಥವಾ ನಾಶ,ನಷ್ಟದ ಬಗ್ಗೆ ವರದಿಯಾಗಿಲ್ಲ. ಜಕಾರ್ತದಲ್ಲಿ ಭೂಕಂಪ ತೀವ್ರವಾಗಿದ್ದು ಕಟ್ಟಡಗಳು ಅಲುಗಾಡಿದಾಗ ಜನ ಜೀವಭಯದಿಂದ ಹೊರಗೋಡಿ ಬಂದಿದ್ದಾರೆ. ತಕ್ಷಣ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
 
ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಒಮ್ಮಿಂದೊಮ್ಮೆಯೇ ಲ್ಯಾಪ್ಟಾಪ್ ಅಲ್ಲಾಡಲಾರಂಭಿಸಿತು. ಬಳಿಕ ಬಾಗಿಲುಗಳು ಅಲ್ಲಾಡತೊಡಗಿದವು ಮತ್ತು ನೇತು ಹಾಕಿದ್ದ ವಸ್ತುಗಳು ಕಂಪಿಸತೊಡಗಿವೆ. ತಕ್ಷಣ ಕೋಣೆಯಲ್ಲಿದ್ದ ಇತರ ಸ್ನೇಹಿತರೊಡನೆ ಕಟ್ಟಡದಿಂದ ಹೊರಗೋಡಿ ಬಂದೆವು ಎಂದು ಕಲಿಬಾತ ಸಿಟಿ ಅಪಾರ್ಟ್‌ಮೆಂಟ್‌  ನಿವಾಸಿ ನೂರ್ ಲತೀಫಾ ವಿವರಿಸಿದ್ದಾರೆ.

ಜಪಾನ್ನಿಂದ ಆಗ್ನೇಯ ಏಶ್ಯಾದ ಮೂಲಕ ಮತ್ತು ಪೆಸಿಫಿಕ್ ಜಲಾನಯನ ಪ್ರದೇಶದಾದ್ಯಂತ ವ್ಯಾಪಿಸಿರುವ ತೀವ್ರ ಭೂಕಂಪನ ಸಂಭವಿಸುವ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾರಣ ಇಂಡೊನೇಶ್ಯಾದಲ್ಲಿ ಆಗಿಂದಾಗ್ಗೆ ಭೂಕಂಪನ ಸಂಭವಿಸುತ್ತಿರುತ್ತದೆ.‌

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)