varthabharthi


ವಿಶೇಷ-ವರದಿಗಳು

ಪ್ರಧಾನಿಯವರಿಗೊಂದು ಪತ್ರ

ಅಲ್ಪಸಂಖ್ಯಾತರ ವಿರುದ್ಧ ದಾಳಿ: ಪ್ರಧಾನಿ ಮೌನವೇಕೆ?

ವಾರ್ತಾ ಭಾರತಿ : 15 Jan, 2022
ಮಾರ್ಗರೆಟ್ ಆಳ್ವ

ಪ್ರಿಯ ಪ್ರಧಾನಿಯವರೇ,

ಜಾತಿ, ಬಣ್ಣ, ಜನಾಂಗ ಅಥವಾ ವಂಶವನ್ನು ಗಣನೆಗೆ ತೆಗೆದುಕೊಳ್ಳದೆ ಭಾರತದ ಎಲ್ಲ ನಾಗರಿಕರಿಗೆ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ನೀಡಿರುವ ಸಂವಿಧಾನದ ಆಡಳಿತವಿರುವ ನಮ್ಮ ಶ್ರೇಷ್ಠ ಪ್ರಜಾಸತ್ತಾತ್ಮಕ, ಜಾತ್ಯತೀತ, ಸಮಾಜವಾದಿ ಭಾರತ ಗಣರಾಜ್ಯದ ನಾಯಕರಾಗಿರುವ ನಿಮಗೆ, ಈ ದೇಶಕ್ಕೆ 50 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ನಾಗರಿಕಳಾದ ನಾನು ಕಳವಳದಿಂದ ಈ ಪತ್ರ ಬರೆಯುತ್ತಿದ್ದೇನೆ.

ನೀವು ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಲ್ಪಡುವ ನಾಯಕ. ನೀವು ವಿಶ್ವಾದ್ಯಂತ ಪ್ರವಾಸ ಮಾಡಿ ವಿಶ್ವ ನಾಯಕರನ್ನು ಭೇಟಿ ಮಾಡುತ್ತೀರಿ ಹಾಗೂ ಭಾರತವು ಸ್ವತಂತ್ರ ಪ್ರಜಾಸತ್ತಾತ್ಮಕ ಜಾತ್ಯತೀತವಾದಿ ರಾಷ್ಟ್ರ ಎಂಬುದಾಗಿ ಈ ಭೇಟಿಯ ಸಂದರ್ಭಗಳಲ್ಲಿ ಘೋಷಿಸುತ್ತೀರಿ. ಇತ್ತೀಚೆಗೆ ರೋಮ್‌ನಲ್ಲಿ ಪೋಪ್‌ರನ್ನೂ ಭೇಟಿಯಾಗಿದ್ದೀರಿ. ಜಾಗತಿಕ ಮಾಧ್ಯಮಗಳು ನಿಮ್ಮ ಭಾಷಣಗಳು ಮತ್ತು ಹೇಳಿಕೆಗಳನ್ನು ಶ್ಲಾಘಿಸಿವೆ ಹಾಗೂ ಅವುಗಳಿಗೆ ವ್ಯಾಪಕ ಪ್ರಚಾರ ನೀಡಿವೆ. ಆದರೆ, ದುರದೃಷ್ಟವಶಾತ್ ಇಲ್ಲಿನ ವಾಸ್ತವ ಪರಿಸ್ಥಿತಿಯು, ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಜಾತ್ಯತೀತತೆಗೆ ಸಂಬಂಧಿಸಿದ ಸ್ಥಿತಿಗತಿಗಳು ನೀವು ಜಾಗತಿಕ ಮಟ್ಟದಲ್ಲಿ ಚಿತ್ರಿಸಿರುವ ಭಾರತದ ಚಿತ್ರಣಕ್ಕಿಂತ ತುಂಬಾ ಭಿನ್ನವಾಗಿವೆ.

ಮಾನ್ಯ ಪ್ರಧಾನಿಯವರೇ, ಭಾರತದಾದ್ಯಂತ ಅತ್ಯಂತ ಸಂಘಟಿತ ಉಗ್ರವಾದಿ ಬಲಪಂಥೀಯ ಗುಂಪುಗಳು ಧರ್ಮದ ಹೆಸರಿನಲ್ಲಿ ಅಮಾಯಕ ನಾಗರಿಕರನ್ನು ಹೆದರಿಸುತ್ತಿವೆ, ಅವರ ಮೇಲೆ ದಾಳಿ ನಡೆಸುತ್ತಿವೆ ಹಾಗೂ ಕೊಲ್ಲುತ್ತಿವೆ. ಹಿಂದೂ ರಾಷ್ಟ್ರವೊಂದರ ನಿರ್ಮಾಣಕ್ಕಾಗಿ ಹಿಂದೂಯೇತರರ ಜನಾಂಗೀಯ ಹತ್ಯೆಗೆ ಕರೆ ನೀಡುವ ಕೆಲವು ಧಾರ್ಮಿಕ ನಾಯಕರ ಹೇಳಿಕೆಗಳನ್ನು ಕೇಳಿ ನಾನು ಆಘಾತಗೊಂಡಿದ್ದೇನೆ. ಇದಕ್ಕಿಂತಲೂ ಹೆಚ್ಚಿನ ಆಘಾತಕಾರಿ ಸಂಗತಿಯೆಂದರೆ, ಇಂತಹ ಹೇಳಿಕೆಗಳಿಗೆ ನಿಮ್ಮ ಕೇಂದ್ರ ಸರಕಾರವಾಗಲಿ, ಬಿಜೆಪಿಯ ನಿಯಂತ್ರಣದಲ್ಲಿರುವ ರಾಜ್ಯ ಸರಕಾರವಾಗಲಿ, ಸ್ಥಳೀಯಾಡಳಿತವಾಗಲಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು. ಈ ದೇಶದಲ್ಲಿ ವಾಸಿಸುತ್ತಿರುವ ಕೋಟ್ಯಂತರ ಅಲ್ಪಸಂಖ್ಯಾತರಲ್ಲಿ ಅಭದ್ರತೆ ಮತ್ತು ಹೆದರಿಕೆ ಹುಟ್ಟಿಸಲು ವಿನ್ಯಾಸಗೊಳಿಸಲಾದ ಈ ವಿಷಕಾರಿ ದ್ವೇಷ ಭಾಷಣವನ್ನು ದೃಢವಾಗಿ ಮಟ್ಟಹಾಕಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ.

ನಮ್ಮ ಸ್ವಾತಂತ್ರ ಹೋರಾಟದ ಆರಂಭಿಕ ದಿನಗಳಿಂದಲೂ ಮುಸ್ಲಿಮರು, ಸಿಖ್ಖರು ಮತ್ತು ಕ್ರೈಸ್ತರು ಹಾಗೂ ಇತರ ಹಲವಾರು ಧಾರ್ಮಿಕ ಪಂಥಗಳ ಜನರು ಸ್ವಾತಂತ್ರಕ್ಕಾಗಿ ಹಾಗೂ ನಮ್ಮ ತಾಯ್ನಾಡನ್ನು ರಕ್ಷಿಸುವುದಕ್ಕಾಗಿ ಹಿಂದೂ ಸಹೋದರ- ಸಹೋದರಿಯರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದಾರೆ. ನನ್ನ ಮಾವ ದಿವಂಗತ ಜೋಕಿಮ್ ಮತ್ತು ಅತ್ತೆ ವಾಯಲೆಟ್ ಆಳ್ವ ಸ್ವಾತಂತ್ರ ಹೋರಾಟಗಾರರಾಗಿದ್ದಾರೆ. ಸ್ವಾತಂತ್ರ ಹೋರಾಟಕ್ಕಾಗಿ ಅವರು ಜೈಲಿಗೆ ಹೋಗಿದ್ದಾರೆ. ಅವರು ಭಾರತೀಯ ಸಂಸತ್ತಿಗೆ ಹೋಗಿರುವ ಮೊದಲ ದಂಪತಿಯೂ ಆಗಿದ್ದಾರೆ. ನನ್ನ ಅತ್ತೆ ಸಂಸತ್ತಿನ ಮೊದಲ ಪ್ರಿಸೈಡಿಂಗ್ ಆಫೀಸರ್ ಕೂಡ ಆಗಿದ್ದಾರೆ. ಇಂದು ದೇಶದಲ್ಲಿ ಸಾವಿರಾರು ಅಲ್ಪಸಂಖ್ಯಾತರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ನಮ್ಮನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸಲಾಗುವುದೇ?

ಮಾನ್ಯ ಪ್ರಧಾನಿಯವರೇ, ಭಾರತದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವಾಗ ನೀವು ಕಣ್ಣುಗಳನ್ನು ಮುಚ್ಚಿಕೊಂಡು ಮೌನವಾಗಿರಲು ಹೇಗೆ ಸಾಧ್ಯ? ಮಾನ್ಯ ಪ್ರಧಾನಿಯವರೇ, ನಿಮ್ಮ ಮೌನವನ್ನು, ಭಾರತೀಯ ಅಲ್ಪಸಂಖ್ಯಾತರ ಮೇಲಿನ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಪರೋಕ್ಷ ಅನುಮೋದನೆ ಮತ್ತು ಪ್ರೋತ್ಸಾಹ ಎಂಬುದಾಗಿ ತಪ್ಪಾಗಿ ಅರ್ಥೈಸಲಾಗುತ್ತಿದೆ. ನೀವು ಯಾವಾಗ ಇದರ ವಿರುದ್ಧ ಮಾತನಾಡುತ್ತೀರಿ ಹಾಗೂ ಈ ಹುಚ್ಚು ಮತ್ತು ಹಿಂಸಾಚಾರವನ್ನು ನಿಲ್ಲಿಸುತ್ತೀರಿ?

ನಾನು ಹುಟ್ಟಿ ಬೆಳೆದ ಕರ್ನಾಟಕ ರಾಜ್ಯದಲ್ಲಿ ಶಾಂತಿಯುತ ಹಾಗೂ ಎಲ್ಲರನ್ನೂ ಒಳಗೊಳ್ಳುವ ವಾತಾವರಣವಿತ್ತು. ಅದಕ್ಕಾಗಿ ನಾವು ಹೆಮ್ಮೆ ಪಡುತ್ತಿದ್ದೆವು. ಅದು ವಿಶ್ವದ ಎಲ್ಲೆಡೆಯ ಜನರ ಗಮನ ಸೆಳೆದಿತ್ತು. ಈ ಕ್ರಿಸ್‌ಮಸ್‌ನಂದು ರಾಜ್ಯದ ಬಿಜೆಪಿ ಸರಕಾರವು ನಮ್ಮ ಸೇವೆಗಳನ್ನು ‘ಗುರುತಿಸಿ’ ನಮಗೆ ಕರಾಳ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕಿನ ರಕ್ಷಣಾ ಮಸೂದೆ’ಯನ್ನು ಉಡುಗೊರೆಯಾಗಿ ನೀಡಿತು. ಹಿಂದೆ ನ್ಯಾಯಾಲಯಗಳು ತೆಗೆದುಹಾಕಿರುವ ಹಲವು ವಿಧಿಗಳನ್ನು ಈ ಕಾಯ್ದೆಯು ಹೊಂದಿದೆ. ಅದು ಭಾರತೀಯ ಸಂವಿಧಾನವನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಅದು ಎಲ್ಲ ಅಲ್ಪಸಂಖ್ಯಾತರು, ನಮ್ಮ ಸಂಸ್ಥೆಗಳು, ಆಚರಣೆಗಳು, ಸೇವೆಗಳು ಮತ್ತು ಪರೋಪಕಾರಗಳನ್ನು ಸಂಶಯಾಸ್ಪದವನ್ನಾಗಿಸಿದೆ. ಖಾಸಗಿತನ, ಧರ್ಮ, ಮದುವೆ ಮತ್ತು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದೇ ಮುಂತಾದ ವ್ಯಕ್ತಿ ಸ್ವಾತಂತ್ರಗಳನ್ನು ಕಿತ್ತುಕೊಳ್ಳಲಾಗಿದೆ ಹಾಗೂ ಪ್ರಭುತ್ವವು ನಮ್ಮ ವೈಯಕ್ತಿಕ ಬದುಕುಗಳ ತೀರ್ಪುಗಾರನಾಗುತ್ತದೆ. ಪ್ರಭುತ್ವ ಮತ್ತು ಅದರ ಅಧಿಕಾರಿಗಳು ಕಾನೂನಿನ ವಿಧಿಗಳಿಗೆ ತಮಗೆ ಬೇಕಾದಂತೆ ವಿವರಣೆಗಳನ್ನು ನೀಡಿ ನಮ್ಮ ವಿರುದ್ಧ ತನಿಖೆ ನಡೆಸಬಹುದು, ಆರೋಪ ಹೊರಿಸಬಹುದು ಹಾಗೂ ವಿಚಾರಣೆಯಿಲ್ಲದೆ ಜೈಲಿಗೆ ಹಾಕಬಹುದು.

ನಾವು ಕ್ರೈಸ್ತರು ಶಿಸ್ತಿನ, ಅಹಿಂಸಾತ್ಮಕ ಹಾಗೂ ಸೇವಾ ಮನೋಭಾವದ ಸಮುದಾಯ. ನಾವು ಸಾಮೂಹಿಕ ಮತಾಂತರದಲ್ಲಿ ತೊಡಗಿದ್ದರೆ ನಮ್ಮ ಸಂಖ್ಯೆ ಈಗಲೂ 3 ಶೇಕಡಾಕ್ಕಿಂತ ಕೆಳಗೆ ಯಾಕಿದೆ? ಕ್ರೈಸ್ತ ವಸಾಹತುಶಾಹಿ ಶಕ್ತಿಗಳ 200 ವರ್ಷಗಳ ಆಳ್ವಿಕೆ ಮತ್ತು ತಥಾಕಥಿತ ‘‘ಬಲವಂತದ ಮತಾಂತರದಲ್ಲಿ ತೊಡಗಿರುವ ಮಿಶನರಿಗಳು’’ ಮಾಡಿರುವ ಕೆಲಸವು ನಮ್ಮ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ, ನಮ್ಮ ಸಂಖ್ಯೆಯು ಕುಸಿಯುತ್ತಿದೆ. ಹಾಗಾದರೆ, ನಮ್ಮ ವಿರುದ್ಧ ಈ ಅಪಪ್ರಚಾರ ಮತ್ತು ಹಿಂಸಾಚಾರ ಯಾಕೆ? ಕೋಲ್ಕತಾದ ಮದರ್ ತೆರೇಸಾ ಬಡವರು, ರೋಗಿಗಳು ಮತ್ತು ಪರಿತ್ಯಕ್ತರಿಗಾಗಿ ಮಾಡಿರುವ ಕೆಲಸವನ್ನು ಅಟಲ್ ಬಿಹಾರಿ ವಾಜಪೇಯೀಜಿ ಮತ್ತು ಅಡ್ವಾಣೀಜಿ ಶ್ಲಾಘಿಸಿದ್ದಾರೆ. ಅವರು ಭಾರತಕ್ಕೆ ಗೌರವ ಮತ್ತು ಕೀರ್ತಿ ತಂದಿದ್ದಾರೆ. ಆದರೆ, ಅವರನ್ನು ಮತ್ತು ಅವರ ಸಿಸ್ಟರ್‌ಗಳನ್ನೂ ಬಿಡಲಿಲ್ಲ. ಅವರ ನಿಧಿಗಳನ್ನು ಸ್ಥಗಿತಗೊಳಿಸಲಾಗಿದೆ. ಯಾಕೆ?

ಇದು ನಮ್ಮ ಸ್ವಾತಂತ್ರ ಹೋರಾಟಗಾರರು ಹೋರಾಡಿದ ಭಾರತವೇ? ನಮ್ಮ ಸಂವಿಧಾನ ನಿರ್ಮಾಪಕರು ನಿರ್ಮಿಸಲು ಬಯಸಿದ ಭಾರತವೇ? ಪ್ರತಿ ಕಣ್ಣಿನ ಪ್ರತಿಯೊಂದು ಹನಿ ಕಣ್ಣೀರನ್ನು ಒರೆಸುವಂತೆ ದೇಶದ ಜನರಿಗೆ ಮನವಿ ಮಾಡಿದ ನಮ್ಮ ರಾಷ್ಟ್ರಪಿತ ಕನಸು ಕಂಡ ಭಾರತವೇ? ಈ ಭಾರತವನ್ನು ಕಟ್ಟಲು ನಾವು 70 ವರ್ಷಗಳು ಹೋರಾಡಿದೆವೇ? ಶತಮಾನಗಳಿಂದಲೂ ಆಡಳಿತಗಾರರು ಮತ್ತು ಆಡಳಿತಗಳು ಕ್ರೈಸ್ತ ಧರ್ಮವನ್ನು ಕೊಲ್ಲಲು ಪ್ರಯತ್ನಿಸಿವೆ. ಆದರೆ ಅದು ಬದುಕುಳಿದು ವಿಶ್ವದ ಎಲ್ಲ ಜಾಗಗಳಿಗೆ ಹರಡಿದೆ. ಭಾರತದಲ್ಲಿ ಅದನ್ನು ನಾಶಪಡಿಸಲು ಸಾಧ್ಯವಿಲ್ಲ. ನಾವು ಈ ದೇಶದ ಚೌಕಟ್ಟಿನ ಭಾಗವಾಗಿದ್ದೇವೆ. ನಮ್ಮ ರಕ್ತನಾಳಗಳಲ್ಲಿ ಭಾರತೀಯ ರಕ್ತ ಹರಿಯುತ್ತಿದೆ ಹಾಗೂ ನಾವು ದೇಶಭಕ್ತ ನಾಗರಿಕರಾಗಿದ್ದೇವೆ. ನಾವು ಹಿಂದೆಯೂ ಜನರ ಸೇವೆ ಮಾಡಿದ್ದೇವೆ ಹಾಗೂ ನಮ್ಮ ತಾಯ್ನಿಡನ್ನು ಕಟ್ಟಲು ಹೋರಾಡಿದ್ದೇವೆ, ಮುಂದೆಯೂ ಅದನ್ನೇ ಮಾಡುತ್ತೇವೆ. ಕ್ರೈಸ್ತ ಧರ್ಮವು ಹುತಾತ್ಮರ ರಕ್ತದ ಮೂಲಕ ಜೀವಿಸಿದೆ ಹಾಗೂ ಹರಡಿದೆ. ಯೇಸು ಕ್ರಿಸ್ತರು ನಮಗೆ ನಮ್ಮ ಶತ್ರುಗಳನ್ನು ಪ್ರೀತಿಸುವುದನ್ನು, ನಮಗೆ ಹಾನಿ ಮಾಡಿದವರಿಗೆ ಒಳ್ಳೆಯದು ಮಾಡುವುದನ್ನು ಹಾಗೂ ನಮ್ಮನ್ನು ಕೊಲ್ಲುವವರನ್ನು ಕ್ಷಮಿಸುವುದನ್ನು ಕಲಿಸಿದ್ದಾರೆ. ನಾವು ಇದನ್ನೇ ಮಾಡುತ್ತೇವೆ ಹಾಗೂ ‘‘ತಂದೆಯೇ ಅವರನ್ನು ಕ್ಷಮಿಸು, ತಾವು ಏನು ಮಾಡುತ್ತಿದ್ದೇವೆ ಎನ್ನುವುದು ಅವರಿಗೆ ತಿಳಿದಿಲ್ಲ’’ ಎಂಬುದಾಗಿ ಪ್ರತಿ ದಿನ ಪ್ರಾರ್ಥಿಸುತ್ತೇವೆ.

ನನ್ನ ಪ್ರಧಾನಿಯವರೇ, ಯೇಸು ಕ್ರಿಸ್ತ ನಿಮ್ಮನ್ನು ಆಶೀರ್ವದಿಸಲಿ ಹಾಗೂ ನಿಮಗೆ ಮಾರ್ಗದರ್ಶನ ಮಾಡಲಿ. ಕ್ರಿಸ್ಮಸ್‌ನ ಪ್ರೀತಿ, ಸಂತೋಷ ಮತ್ತು ಶಾಂತಿ ಹೊಸ ವರ್ಷದುದ್ದಕ್ಕೂ ನಮ್ಮಿಂದಿಗಿರಲಿ.

ನಾನು ಹುಟ್ಟಿ ಬೆಳೆದ ಕರ್ನಾಟಕ ರಾಜ್ಯದಲ್ಲಿ ಶಾಂತಿಯುತ ಹಾಗೂ ಎಲ್ಲರನ್ನೂ ಒಳಗೊಳ್ಳುವ ವಾತಾವರಣವಿತ್ತು. ಅದಕ್ಕಾಗಿ ನಾವು ಹೆಮ್ಮೆ ಪಡುತ್ತಿದ್ದೆವು. ಅದು ವಿಶ್ವದ ಎಲ್ಲೆಡೆಯ ಜನರ ಗಮನ ಸೆಳೆದಿತ್ತು. ಈ ಕ್ರಿಸ್‌ಮಸ್‌ನಂದು ರಾಜ್ಯದ ಬಿಜೆಪಿ ಸರಕಾರವು ನಮ್ಮ ಸೇವೆಗಳನ್ನು ‘ಗುರುತಿಸಿ’ ನಮಗೆ ಕರಾಳ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕಿನ ರಕ್ಷಣಾ ಮಸೂದೆ’ಯನ್ನು ಉಡುಗೊರೆಯಾಗಿ ನೀಡಿತು. ಹಿಂದೆ ನ್ಯಾಯಾಲಯಗಳು ತೆಗೆದುಹಾಕಿರುವ ಹಲವು ವಿಧಿಗಳನ್ನು ಈ ಕಾಯ್ದೆಯು ಹೊಂದಿದೆ. ಅದು ಭಾರತೀಯ ಸಂವಿಧಾನವನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಅದು ಎಲ್ಲ ಅಲ್ಪಸಂಖ್ಯಾತರು, ನಮ್ಮ ಸಂಸ್ಥೆಗಳು, ಆಚರಣೆಗಳು, ಸೇವೆಗಳು ಮತ್ತು ಪರೋಪಕಾರಗಳನ್ನು ಸಂಶಯಾಸ್ಪದವನ್ನಾಗಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)