varthabharthi


ತಿಳಿ ವಿಜ್ಞಾನ

ಅಂತರ್ಜಲದಲ್ಲೂ ಯುರೇನಿಯಂ ಮಾಲಿನ್ಯ

ವಾರ್ತಾ ಭಾರತಿ : 16 Jan, 2022
ಆರ್.ಬಿ.ಗುರುಬಸವರಾಜ

ಪ್ರತಿ ದೇಶವೂ ತನ್ನ ಪ್ರಜೆಗಳಿಗೆ ನಿತ್ಯಬಳಕೆಗೆ ಕನಿಷ್ಠ 50-100 ಲೀಟರ್ ನೀರನ್ನು ಒದಗಿಸಬೇಕೆಂದು ವಿಶ್ವಸಂಸ್ಥೆ ಹನ್ನೆರಡು ವರ್ಷಗಳ ಹಿಂದೆಯೇ ಹೇಳಿತ್ತು. ಆದರೆ ಈ ಹೇಳಿಕೆ ಇನ್ನೂ ಕಡತದಲ್ಲೇ ಉಳಿದಿದೆ. ಇದನ್ನು ಜಾರಿಗೆ ತರಲು ಹಲವಾರು ಅಡಚಣೆಗಳಿವೆ ಎಂದು ದೇಶಗಳು ಹೇಳಿಕೊಂಡಿವೆ. ನೀರು ಸರಬರಾಜಿನ ಬಹುತೇಕ ಮೂಲವು ಅಂತರ್ಜಲ ಆಗಿರುವುದರಿಂದಲೇ ಸರಬರಾಜಿನ ಸಮಸ್ಯೆ ಎದುರಿಸಲಾಗುತ್ತಿದೆ. ಭಾರತದಂತಹ ರಾಷ್ಟ್ರದಲ್ಲಿ ಬದಲಿ ಜಲಮೂಲಗಳಿಂದ ನೀರಿನ ಪೂರೈಕೆ ಪ್ರಮಾಣ ತೀರ ಕಡಿಮೆ ಎಂದೇ ಹೇಳಬಹುದು. ಭೂಮಿಯಲ್ಲಿ ಅಂತರ್ಜಲದಲ್ಲಿ ಶೇಕಡಾ 25ರಷ್ಟನ್ನು ಭಾರತವೇ ಬಳಸುತ್ತಿದೆ ಎಂದು ವಿಶ್ವಸಂಸ್ಥೆ ಆರೋಪಿಸಿದೆ. ಭೂಮಿಯ ಮೇಲೆ ಶೇಕಡಾ 75ರಷ್ಟು ನೀರು ಇದ್ದರೂ ಅದು ಬಳಕೆಗೆ ಬಾರದ ಸಮುದ್ರದ ನೀರು ಆಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಭೂಮಿಯಲ್ಲಿ ಕುಡಿಯಲು ಯೋಗ್ಯವಾದ ನೀರಿನ ಪ್ರಮಾಣ ಶೇಕಡಾ 0.03ರಷ್ಟು ಮಾತ್ರ. ಹೀಗಾಗಿ ನಿತ್ಯವೂ ಕುಡಿಯಲು, ಗೃಹಬಳಕೆ, ನೀರಾವರಿ, ಕೈಗಾರಿಕೆಗಳು ಹಾಗೂ ಇನ್ನಿತರ ಮಾನವ ಬಳಕೆಗೆ ಅಗತ್ಯವಿರುವ ನೀರಿಗಾಗಿ ಅಂತರ್ಜಲವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ.

ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲದ ಮಟ್ಟವೂ ಕುಸಿಯತೊಡಗಿರುವುದು ಇನ್ನಷ್ಟು ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಅಂತರ್ಜಲವೂ ಸಹ ಮಾಲಿನ್ಯದಿಂದ ಕೂಡಿರುವುದು ಸಮಸ್ಯೆಯ ಸ್ವರೂಪವನ್ನು ತಿಳಿಸುತ್ತದೆ. ಅದರಲ್ಲೂ ಮುಖ್ಯವಾಗಿ ಅಂತರ್ಜಲದಲ್ಲಿ ಫ್ಲೋರೈಡ್ ಮತ್ತು ಯುರೇನಿಯಂನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಇದುವರೆಗೂ ಅಂತರ್ಜಲದಲ್ಲಿ ಫ್ಲೋರೈಡ್ ಸೇರಿರುವ ಹಾಗೂ ಅದರ ತಾಪತ್ರಯಗಳನ್ನು ಅನುಭವಿಸಿದ್ದ ಜನರಿಗೆ, ಅಂತರ್ಜಲದಲ್ಲಿ ಯುರೇನಿಯಂ ಸೇರಿರುವುದು ಕಳವಳಕಾರಿಯಾಗಿದೆ. ಫ್ಲೋರೈಡ್ ಮಾನವರ ಮೂಳೆಗಳನ್ನು ಮೆತ್ತಗೆ ಮಾಡಿ, ಹಲ್ಲುಗಳಿಗೆ ಹಳದಿ ಬಣ್ಣ ಲೇಪಿಸಿ ಯೌವನಾವಸ್ಥೆಯಲ್ಲಿಯೇ ಮುಪ್ಪನ್ನು ತಂದೊಡ್ಡುತ್ತಿತ್ತು. ಈಗ ಅಂತರ್ಜಲದಲ್ಲಿ ಯುರೇನಿಯಂ ಸೇರಿರುವ ಬಗ್ಗೆ ವಿಶ್ವಸಂಸ್ಥೆ ಅಧಿಕೃತ ಮಾಹಿತಿಯೊಂದನ್ನು ಹೊರಹಾಕಿದೆ. ಯುರೇನಿಯಂ ಮೂಲತಃ ನಿಸರ್ಗದಲ್ಲಿ ದೊರೆಯುವ ಮೂಲವಸ್ತುವಾಗಿದ್ದು, ಬಾಂಬ್‌ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದು ಸದಾ ವಿಕಿರಣ ಸೂಸುವ ಖನಿಜವಾಗಿದ್ದು ಅತ್ಯಂತ ಅಪಾಯಕಾರಿ ಎನಿಸಿದೆ. ಯುರೇನಿಯಂ ನೈಸರ್ಗಿಕವಾಗಿ ಸಂಭವಿಸುವ ವಿಕಿರಣಶೀಲ ಅಂಶವಾಗಿದ್ದು ಅದು ಪ್ರಕೃತಿಯಲ್ಲಿ ಕಡಿಮೆ ಸಾಂದ್ರತೆಗಳಲ್ಲಿ ಕಂಡುಬರುತ್ತದೆ. ಇದು ಕೆಲವು ವಿಧದ ಮಣ್ಣು ಮತ್ತು ಬಂಡೆಗಳಲ್ಲಿ, ವಿಶೇಷವಾಗಿ ಗ್ರಾನೈಟ್‌ಗಳು ಮತ್ತು ಮೆಟಾಸೆಡಿಮೆಂಟರಿ ಬಂಡೆಗಳಲ್ಲಿ, ಹಾಗೆಯೇ ಕಿರಿಯ ಸೆಡಿಮೆಂಟರಿ ನಿಕ್ಷೇಪಗಳಲ್ಲಿ ನೈಸರ್ಗಿಕ ರೂಪದಲ್ಲಿ ಇರುತ್ತದೆ.

ಮಾನವ ಪ್ರೇರಿತ ಚಟುವಟಿಕೆಗಳಾದ ಕೈಗಾರಿಕೆಗಳು, ಪರಮಾಣು ಉದ್ಯಮದಿಂದ ನೈಟ್ರೇಟ್‌ಗಳ ಹೊರಸೂಸುವಿಕೆ ಮತ್ತು ಕಲ್ಲಿದ್ದಲು ಮತ್ತು ಇತರ ಇಂಧನಗಳ ಸುಡುವಿಕೆಯಿಂದಾಗಿ ಯುರೇನಿಯಂ ಕುಡಿಯುವ ನೀರಿನ ಮೂಲಗಳಲ್ಲಿ ಸಂಚಯವಾಗಿರಬಹುದು. ನೈಸರ್ಗಿಕವಾಗಿ ದೊರೆಯುವ ಯುರೇನಿಯಂ ಅತ್ಯಂತ ಕಡಿಮೆ ಮಟ್ಟದ ವಿಕಿರಣಶೀಲತೆಯನ್ನು ಹೊಂದಿದೆ ಮತ್ತು ಕುಡಿಯುವ ನೀರಿನಲ್ಲಿ ಯುರೇನಿಯಂನ ರಾಸಾಯನಿಕ ಗುಣಲಕ್ಷಣಗಳು ಹೆಚ್ಚಿನ ಆರೋಗ್ಯ ಕಾಳಜಿಯನ್ನು ಹೊಂದಿವೆ. ಈಗ ಇದು ಅಂತರ್ಜಲಕ್ಕೆ ಲಗ್ಗೆ ಹಾಕಿರುವುದು ಆಘಾತಕಾರಿಯಾಗಿದೆ. ಇದನ್ನು ಕೇಂದ್ರ ಅಂತರ್ಜಲ ಮಂಡಳಿ ಸಹ ಸಾಬೀತು ಮಾಡಿದೆ.

 ಭಾರತದ ಅನೇಕ ಜಲಮೂಲಗಳು ಜೇಡಿಮಣ್ಣು, ಹೂಳು ಮತ್ತು ಜಲ್ಲಿಕಲ್ಲುಗಳಿಂದ ಕೂಡಿದೆ. ಕೈಗಾರಿಕೆಗಳು ಬಿಡುವ ವಿಷಯುಕ್ತ ತ್ಯಾಜ್ಯ ನೀರಿನಲ್ಲಿ ಯುರೇನಿಯಂ ಸಹ ಸೇರಿರುತ್ತದೆ. ಇದು ಭೂಮಿಯ ಶಿಲೆಗಳಲ್ಲಿ ಆಳಕ್ಕೆ ಇಳಿದು ಸಮೃದ್ಧ ಗ್ರಾನೈಟ್ ಬಂಡೆಗಳಿಗಿಂತಲೂ ಕೆಳಕ್ಕೆ ಒಯ್ಯಲ್ಪಟ್ಟಿದೆ. ಅಂತರ್ಜಲದ ಅತಿಯಾದ ಬಳಕೆ ಸಂಭವಿಸಿದಾಗ ಮತ್ತು ಅಂತರ್ಜಲದ ನೀರಿನ ಮಟ್ಟಗಳು ಇಳಿಮುಖವಾದಾಗ, ಆ್ಯಕ್ಸಿಡೀಕರಣದ ಪ್ರಭಾವವೂ ಹೆಚ್ಚಾಗುತ್ತದೆ. ಅದು ಪ್ರತಿಯಾಗಿ ಅಂತರ್ಜಲದಲ್ಲಿ ಯುರೇನಿಯಂ ಪುಷ್ಟೀಕರಣವನ್ನು ಹೆಚ್ಚಿಸುತ್ತದೆ. ಕೃಷಿಯಲ್ಲಿ ಬಳಸುವ ಫಾಸ್ಫೇಟ್ ರಸಗೊಬ್ಬರದಲ್ಲಿಯೂ ಸಹ ಯುರೇನಿಯಂ ಇರುವುದು ಖಚಿತವಾಗಿದೆ. ಪ್ರತಿ ಕಿಲೋ ಫಾಸ್ಫೇಟ್‌ನಲ್ಲಿ ಒಂದು ಗ್ರಾಮ್‌ನಿಂದ 68 ಗ್ರಾಮ್‌ವರೆಗೆ ಯುರೇನಿಯಂ ಇರುವುದು ಪತ್ತೆಯಾಗಿದೆ. ಹೀಗಾಗಿ ಅನೇಕ ಮಾನವನ ಚಟುವಟಿಕೆಗಳ ಮೂಲಕ ಅಂತರ್ಜಲದಲ್ಲಿ ಯುರೇನಿಯಂ ಪ್ರಮಾಣ ಅಧಿಕವಾಗುತ್ತಿದೆ. ಇದನ್ನು ನಿರ್ಲಕ್ಷಿಸಿದರೆ ಅಪಾಯದ ಸುಳಿಯಲ್ಲಿ ಎಲ್ಲರೂ ಸಿಲುಕಬೇಕಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಸೂಚಿಸಿದ 30 μg/L (ppb)ಗಿಂತ ಹೆಚ್ಚು ಯುರೇನಿಯಂ ಸಾಂದ್ರತೆಯನ್ನು ಹೊಂದಿರುವ ಅಂತರ್ಜಲ ಮಾದರಿಗಳ ವರದಿಯನ್ನು ಬಿಡುಗಡೆ ಮಾಡಿದೆ. ಶೇಕಡಾವಾರು ಪ್ರಮಾಣದಲ್ಲಿ, ಹೆಚ್ಚು ಪರಿಣಾಮ ಬೀರುವ ರಾಜ್ಯಗಳಲ್ಲಿ ಪಂಜಾಬ್ ಶೇಕಡಾ 24.2ರಷ್ಟು ಮತ್ತು ಹರ್ಯಾಣ ಶೇಕಡಾ 19.6ರಷ್ಟು ಮತ್ತು ಇತರ ರಾಜ್ಯಗಳು ತೆಲಂಗಾಣ, ದಿಲ್ಲಿ, ರಾಜಸ್ಥಾನ, ಆಂಧ್ರ ಪ್ರದೇಶ ಮತ್ತು ಉತ್ತರ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು, ಜಾರ್ಖಂಡ್, ಛತ್ತೀಸ್‌ಗಡ, ಗುಜರಾತ್, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರದಂತಹ ಕೆಲವು ರಾಜ್ಯಗಳು 30 ಜ/ಔ ಮಿತಿಗಿಂತ ಹೆಚ್ಚಿನ ಯುರೇನಿಯಂ ಸಾಂದ್ರತೆಯನ್ನು ತೋರಿಸಿವೆ ಎಂದು ವರದಿ ತಿಳಿಸುತ್ತದೆ. ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಬಳ್ಳಾರಿ, ಕಲಬುರಗಿ, ಕೋಲಾರ, ಮಂಡ್ಯ, ರಾಯಚೂರು, ತುಮಕೂರು ಜಿಲ್ಲೆಗಳ ಹಲವು ಭಾಗಗಳಲ್ಲಿ ಅಂತರ್ಜಲದಲ್ಲಿ ಮಿತಿಮೀರಿದ ಯುರೇನಿಯಂ ಇರುವ ಬಗ್ಗೆ ವರದಿಯಾಗಿದೆ.

ಯುರೇನಿಯಂ ಲೋಹವು ಹೃದಯ, ರಕ್ತನಾಳದ ವ್ಯವಸ್ಥೆ, ಯಕೃತ್ತು, ಸ್ನಾಯುಗಳು ಮತ್ತು ನರಮಂಡಲದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಅಲ್ಲದೇ ಮೂತ್ರಪಿಂಡದ ಹಾನಿ ಹಾಗೂ ಕ್ಯಾನ್ಸರ್‌ಗೂ ಕಾರಣವಾಗಬಹುದು ಎಂದು ಕೆಲ ತಜ್ಞ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ಅಗತ್ಯ. ಯುರೇನಿಯಂ ಮಾಲಿನ್ಯವನ್ನು ತಡೆಯಲು ಏನು ಮಾಡಬಹುದು? ಎಂಬುದು ಪ್ರಸ್ತುತ ಚರ್ಚೆಯ ವಿಷಯವಾಗಿದೆ. ಇದನ್ನು ನಿವಾರಿಸಲು ಅನೇಕ ತಂತ್ರಗಳು ಇವೆಯಾದರೂ ಜಾರಿಗೊಳಿಸುವುದು ಬಹುದೊಡ್ಡ ಸವಾಲಾಗಿದೆ. ಸರಕಾರ ಜಾರಿಗೆ ತರಬಹುದಾದ ಕೆಲವು ಅಂಶಗಳು ಹೀಗಿವೆ. ಭಾರತದಲ್ಲಿ ಪ್ರಸ್ತುತ ನೀರಿನ ಗುಣಮಟ್ಟ ಮಾನಿಟರಿಂಗ್ ಪ್ರೋಗ್ರಾಂನಲ್ಲಿ ಯುರೇನಿಯಂ ಮಾನಿಟರಿಂಗ್ ಅನ್ನು ಸೇರಿಸುವುದು. ನೀರು ಮತ್ತು ಮಣ್ಣಿನಲ್ಲಿ ಹೆಚ್ಚಿನ ಯುರೇನಿಯಂ ಮಾಲಿನ್ಯವನ್ನು ಹೊಂದಿರುವ ಪ್ರದೇಶಗಳಿಗೆ ಸಂಬಂಧಿಸಿದ ಆರೋಗ್ಯದ ಅಪಾಯಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಸುವುದು. ಭವಿಷ್ಯದಲ್ಲಿ ಯುರೇನಿಯಂ ಮಾಲಿನ್ಯ ಮತ್ತು ವಿಷವನ್ನು ಹೇಗೆ ತಡೆಯಬಹುದು ಎಂಬುದರ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು ಹಾಗೂ ಸಲಹೆಗಳನ್ನು ಜಾರಿಗೊಳಿಸುವುದು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಲ್ಲಿ ಕುಡಿಯುವ ನೀರಿನ ನಿರ್ದಿಷ್ಟತೆಯಲ್ಲಿ ಯುರೇನಿಯಂ ಮಾನದಂಡವನ್ನು ನಿಗದಿಪಡಿಸುವುದು. ಅಪಾಯದಲ್ಲಿರುವ ಪ್ರದೇಶಗಳನ್ನು ಗುರುತಿಸಲು ಮೇಲ್ವಿಚಾರಣಾ ಕಾರ್ಯವಿಧಾನಗಳು ಮತ್ತು ವ್ಯವಸ್ಥೆಗಳನ್ನು ಸ್ಥಾಪಿಸುವುದು. ಸುರಕ್ಷಿತ ಕುಡಿಯುವ ನೀರಿಗಾಗಿ ಯುರೇನಿಯಂನಿಂದ ಕಲುಷಿತಗೊಂಡ ಅಂತರ್ಜಲವನ್ನು ಸಂಸ್ಕರಣೆ ಮಾಡುವುದು.

ಯುರೇನಿಯಂಯುಕ್ತ ಅಂತರ್ಜಲ ಸಂಸ್ಕರಣೆಗಾಗಿ ಹೊರಹೀರುವಿಕೆ ಅಥವಾ ಅಯಾನು ವಿನಿಮಯ, ಪ್ರತಿಕ್ರಿಯಾತ್ಮಕ ಸೋರ್ಪ್ಶನ್, ಮಳೆಕೊಯ್ಲು ವಿಧಾನ, ರಿವರ್ಸ್ ಆಸ್ಮೋಸಿಸ್, ಸ್ಟ್ರಿಪ್ಪಿಂಗ್, ರಾಸಾಯನಿಕ ಸ್ಥಿರೀಕರಣದ ಆಧಾರದ ಮೇಲೆ ಅಂತರ್ಜಲ ಮೂಲಗಳೊಂದಿಗೆ ಮಿಶ್ರಣದಿಂದ ಯುರೇನಿಯಂ ಪ್ರಮಾಣವನ್ನು ಕಡಿಮೆ ಮಾಡಬಹುದು. ಇವುಗಳ ಜೊತೆಗೆ ಭವಿಷ್ಯದಲ್ಲಿ ಅಂತರ್ಜಲದಲ್ಲಿ ಯುರೇನಿಯಂ ಸೇರುವಿಕೆಯನ್ನು ತಡೆಯುವುದು ಬಹಳ ಮುಖ್ಯ. ಅದಕ್ಕಾಗಿ ರೆಡಾಕ್ಸ್ ತಂತ್ರಜ್ಞಾನಗಳನ್ನು ಬಳಸಬಹುದು. ಈ ತಂತ್ರಜ್ಞಾನಗಳು ಜಲಮೂಲಗಳಲ್ಲ್ಲಿ ಯುರೇನಿಯಂ ಸೋರಿಕೆಯನ್ನು ಪ್ರಚೋದಿಸುವ ಆ್ಯಕ್ಸಿಡೀಕರಣವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತವೆ. ಆದರೆ ಈ ತಂತ್ರಜ್ಞಾನಗಳೊಂದಿಗಿನ ಸಮಸ್ಯೆಗಳೆಂದರೆ ಯುರೇನಿಯಂ ಅವಕ್ಷೇಪವು ಕಾಲಾನಂತರದಲ್ಲಿ ಮರು ಆ್ಯಕ್ಸಿಡೀಕರಣಗೊಳ್ಳಬಹುದು. ಆ್ಯಕ್ಸಿ ಹೈಡ್ರಾಕ್ಸೈಡ್ ತಂತ್ರಜ್ಞಾನವು ಮತ್ತೊಂದು ವಿಧಾನವಾಗಿದೆ. ಈ ತಂತ್ರಜ್ಞಾನವು ಅಲ್ಪಾವಧಿಯ ಫಲಿತಾಂಶಗಳನ್ನು ಮಾತ್ರ ನೀಡುತ್ತದೆ ಮತ್ತು ತಾತ್ಕಾಲಿಕ ಸ್ಥಿರತೆಗೆ ಕಾರಣವಾಗುತ್ತದೆ ಮತ್ತು ಅವಕ್ಷೇಪನ ವಯಸ್ಸಾದಂತೆ ಪ್ರತಿಕ್ರಿಯೆಯು ಹಿಂದಿರುಗುತ್ತದೆ. ಫಾಸ್ಫೇಟ್ ಅವಕ್ಷೇಪನ ತಂತ್ರಜ್ಞಾನಗಳು ಕರಗುವ ಯುರೇನಿಯಂ ಅನ್ನು ತೆಗೆದುಹಾಕಲು ಮತ್ತು ಯುರೇನಿಯಂನ ಮತ್ತಷ್ಟು ವಿಸರ್ಜನೆಯನ್ನು ತಡೆಗಟ್ಟಲು ಯುರೇನಿಲ್ (ಯುರೇನಿಯಂ VI) ರೂಪಗಳೊಂದಿಗೆ ಫಾಸ್ಫೇಟ್ ಅನ್ನು ಅನ್ವಯಿಸುತ್ತವೆ ಮತ್ತು ಮಾರ್ಪಡಿಸುತ್ತವೆ. ಆದರೆ ಈ ತಂತ್ರಜ್ಞಾನಗಳಿಗೆ ಇನ್ನಷ್ಟು ಅಭಿವೃದ್ಧಿಯ ಅಗತ್ಯವಿದೆ. ಫ್ಲಶಿಂಗ್ ತಂತ್ರಜ್ಞಾನವು ಘನ ಹಂತದ ಯುರೇನಿಯಂ ಅನ್ನು ಕರಗಿಸಲು ವಿವಿಧ ಲೀಚಿಂಗ್ ಪರಿಹಾರಗಳನ್ನು ಮತ್ತು ಕರಗುವ ಯುರೇನಿಯಂ ಅನ್ನು ತೆಗೆದುಹಾಕಲು ಹೈಡ್ರಾಲಿಕ್ ಮೂಲಕ ಹೊರ ತೆಗೆಯುವ ತಂತ್ರಗಳನ್ನು ಬಳಸುತ್ತದೆ. ಆದರೆ ಈ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಲು ಕಷ್ಟ. ಇವೆಲ್ಲ ತುಂಬಾ ದುಬಾರಿ ಹಾಗೂ ತ್ರಾಸದಾಯಕ ಕ್ರಮಗಳಾಗಿವೆ. ಆದರೆ ಮಾನವ ಆರೋಗ್ಯ ಮುಂದೆ ಇವೆಲ್ಲ ಗೌಣವಾಗಬೇಕು. ಅದರಲ್ಲೂ ಸಾಮಾನ್ಯರ ಆರೋಗ್ಯದ ರಕ್ಷಣೆಯನ್ನು ಸರಕಾರವೇ ಹೊರಬೇಕು. ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)