ರಾಷ್ಟ್ರೀಯ
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರುವ ಸಾಧ್ಯತೆ

Photo: twitter
ಲಕ್ನೊ: ಸಮಾಜವಾದಿ ಪಕ್ಷದ ಧುರೀಣ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಬಿಜೆಪಿಗೆ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ಹಲವು ಪ್ರಮುಖ ನಾಯಕರನ್ನು ಕಳೆದುಕೊಂಡಿರುವ ಬಿಜೆಪಿ ಇದೀಗ ಸಮಾಜವಾದಿ ಪಕ್ಷದ ನಾಯಕರನ್ನು ಸೆಳೆಯಲು ಮುಂದಾಗಿದೆ.
ಅಪರ್ಣಾ ಯಾದವ್ ಅವರು ಮುಲಾಯಂ ಸಿಂಗ್ ಅವರ ಕಿರಿಯ ಮಗ ಪ್ರತೀಕ್ ಯಾದವ್ ಅವರ ಪತ್ನಿ. ಕೆಲ ದಿನಗಳಿಂದ ಬಿಜೆಪಿ ಹಾಗೂ ಅಪರ್ಣಾ ಯಾದವ್ ನಡುವೆ ಮಾತುಕತೆ ನಡೆಯುತ್ತಿದ್ದು, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೆ ದಿನಗಳು ಬಾಕಿ ಇರುವಂತೆಯೇ ಎರಡೂ ಕಡೆಯವರು ಒಪ್ಪಂದಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಪರ್ಣಾ ಯಾದವ್ ಅವರು 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋ ಕ್ಯಾಂಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರು ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ಜೋಶಿ ವಿರುದ್ಧ 33,796 ಮತಗಳ ಅಂತರದಿಂದ ಸೋತಿದ್ದರು.
ಅಪರ್ಣಾ ಯಾದವ್ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಾರೆ ಎಂಬ ಭರವಸೆಯ ಮೇರೆಗೆ ಬಿಜೆಪಿಗೆ ಸೇರುತ್ತಾರೆ ಎಂದು ನಂಬಲಾಗಿದೆ, ಆದರೂ ಬಿಜೆಪಿ ಈ ಬಾರಿ ಅವರನ್ನು ಬೇರೆ ಕ್ಷೇತ್ರದಿಂದ ಕಣಕ್ಕಿಳಿಸಲು ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿ 10 ಮತ್ತು 14 ರಂದು ನಡೆಯಲಿರುವ ಮೊದಲ ಎರಡು ಹಂತದ ಮತದಾನಕ್ಕೆ ಶನಿವಾರ ಬಿಜೆಪಿ 107 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ