varthabharthi


ರಾಷ್ಟ್ರೀಯ

ಒಂದು ತಿಂಗಳೊಳಗೆ ಟಿಎಂಸಿ ತೊರೆದ ಗೋವಾದ ಮಾಜಿ ಕಾಂಗ್ರೆಸ್ ನಾಯಕ

ವಾರ್ತಾ ಭಾರತಿ : 16 Jan, 2022

Photo : INC Twitter

ಪಣಜಿ: ಕಾಂಗ್ರೆಸ್‌ನಿಂದ ತೃಣಮೂಲ ಕಾಂಗ್ರೆಸ್‌ಗೆ ಪಕ್ಷಾಂತರವಾದ ಒಂದು ತಿಂಗಳ ನಂತರ , ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳಿರುವಾಗ ಗೋವಾದ ಮಾಜಿ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ರವಿವಾರ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ತೊರೆದಿದ್ದಾರೆ.

ಲೌರೆಂಕೊ ಅವರು ಕರ್ಟೋರಿಮ್‌ನ ಶಾಸಕರಾಗಿದ್ದರು ಹಾಗೂ  ಡಿಸೆಂಬರ್‌ನಲ್ಲಿ ಅವರು ಪಕ್ಷ ಮತ್ತು ಶಾಸಕ ಸ್ಥಾನ ತೊರೆದಾಗ ಗೋವಾ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿದ್ದರು.

ತೃಣಮೂಲ ಪಕ್ಷವನ್ನು ತೊರೆಯುವ ನಿರ್ಧಾರವನ್ನು ತಿಳಿಸಲು ಬ್ಯಾನರ್ಜಿ ಅವರಿಗೆ ಕಳುಹಿಸಿರುವ ಪತ್ರದಲ್ಲಿ ಅವರು ಯಾವುದೇ ಕಾರಣವನ್ನು ನೀಡಿಲ್ಲ.

ಗೋವಾ ಕಾಂಗ್ರೆಸ್ ಅನ್ನು ಬಲಗೊಳಿಸಲು ಹಾಗೂ 2022ರಲ್ಲಿ ಕಾಂಗ್ರೆಸ್ ಸರಕಾರವನ್ನು ರಚಿಸುವ ನಮ್ಮ ಉದ್ದೇಶವನ್ನು ಉತ್ತೇಜಿಸಲು ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ನಮ್ಮೊಂದಿಗೆ ಸೇರಬೇಕೆಂದು ವಿನಂತಿಸುವೆ ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕ ಮೈಕಲ್ ಲೋಬೊ ಟ್ವೀಟಿಸಿದ್ದರು. ಲೋಬೊ ಆಹ್ವಾನವನ್ನು ಸ್ವೀಕರಿಸಿ ಲೌರೆಂಕೊ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

"ಎಐಟಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಪತ್ರವನ್ನು ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಅವರಿಂದ ಸ್ವೀಕರಿಸಲಾಗಿದೆ. ನಾವು ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದೇವೆ. ಈಗ ಅವರು ತೊರೆಯಲು ಬಯಸುತ್ತಾರೆ, ನಾವು ಅವರಿಗೆ ಶುಭ ಹಾರೈಸುತ್ತೇವೆ" ಎಂದು ಟಿಎಂಸಿ ಗೋವಾ ಉಸ್ತುವಾರಿ ಮಹುವಾ ಮೊಯಿತ್ರಾ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)