varthabharthi


ಅಂತಾರಾಷ್ಟ್ರೀಯ

ಯುಎಇ ಧ್ವಜಧಾರಿ ಹಡಗು ಬಿಡುಗಡೆಗೊಳಿಸುವ ವಿಶ್ವಸಂಸ್ಥೆ ಮನವಿಗೆ ಹೌದಿ ತಿರಸ್ಕಾರ‌

ವಾರ್ತಾ ಭಾರತಿ : 16 Jan, 2022

ಸನಾ, ಜ.16: ಈ ತಿಂಗಳ ಆರಂಭದಲ್ಲಿ ವಶಪಡಿಸಿಕೊಂಡಿದ್ದ ಯುಎಇ ಧ್ವಜವಿರುವ ಹಡಗನ್ನು ಬಿಡುಗಡೆಗೊಳಿಸಬೇಕೆಂಬ ವಿಶ್ವಸಂಸ್ಥೆಯ ಮನವಿಯನ್ನು ಯೆಮನ್‌ನ ಹೌದಿ ಬಂಡುಗೋರರು ತಿರಸ್ಕರಿಸಿದ್ದು, ಈ ಹಡಗು ಸೇನೆಯ ಸೊತ್ತುಗಳನ್ನು ಸಾಗಿಸುತ್ತಿತ್ತು ಎಂದಿದ್ದಾರೆ.

 ಹಡಗನ್ನು ಸಿಬಂದಿ ಸಹಿತ ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಶುಕ್ರವಾರ ಒತ್ತಾಯಿಸಿರುವ ವಿಶ್ವಸಂಸ್ಥೆಯ ಭದ್ರತಾ ಸಮಿತಿ, ಏಡನ್ ಕೊಲ್ಲಿ ಮತ್ತು ಕೆಂಪು ಸಮುದ್ರದಲ್ಲಿ ಸಮುದ್ರಯಾನದ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿಹೇಳಿದೆ. ಬ್ರಿಟನ್ ಮಂಡಿಸಿದ ಮತ್ತು ಸರ್ವಾನುಮತದಿಂದ ಅನುಮೋದಿಸಲ್ಪಟ್ಟ ಹೇಳಿಕೆಯಲ್ಲಿ ‘ ಹಡಗು ಮತ್ತು ಅದರ ಸಿಬಂದಿಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಮತ್ತು ಸಿಬಂದಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತರಿಪಡಿಸುವ ಅಗತ್ಯವನ್ನು 15 ಸದಸ್ಯರ ಭದ್ರತಾ ಸಮಿತಿ ಉಲ್ಲೇಖಿಸಿದೆ. ಅಲ್ಲದೆ, ಯೆಮನ್‌ನಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಸಂಬಂಧಿತ ಬಣಗಳೆಲ್ಲವೂ ಸಹಕರಿಸಬೇಕು ಮತ್ತು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿ ಮಾತುಕತೆಗೆ ಮುಂದಾಗಬೇಕು ಎಂದು ಹೇಳಿಕೆ ಆಗ್ರಹಿಸಿದೆ.
 11 ಸಿಬಂದಿಗಳ ಸಹಿತ ಹಡಗಿನ್ನು ಹೌದಿ ಬಂಡುಗೋರರು ವಶಕ್ಕೆ ಪಡೆದಿದ್ದರು. ರ್ವಾಬೀ ಎಂಬ ಹೆಸರಿನ ನಾಗರಿಕ ಸಾರಿಗೆ ಹಡಗನ್ನು ಸೌದಿ ಅರೆಬಿಯಾದ ಸಂಸ್ಥೆಯೊಂದು ಲೀಸ್‌ಗೆ ನೀಡಿದ್ದು ಇದು ಆಸ್ಪತ್ರೆಯ ಬಳಕೆಯ ಸಾಧನಗಳನ್ನು ಸಾಗಿಸುತ್ತಿದ್ದಾಗ ಅಂತರಾಷ್ಟ್ರೀಯ ಸಮುದ್ರವ್ಯಾಪ್ತಿಯಲ್ಲಿ ಅದನ್ನು ಹೌದಿ ಬಂಡುಗೋರರು ವಶಕ್ಕೆ ಪಡೆದಿದ್ದಾರೆ ಎಂದು ಯುಎಇ ಹೇಳಿದೆ.


ಆದರೆ ಇದನ್ನು ತಳ್ಳಿಹಾಕಿರುವ ಹೌದಿ ಅಧಿಕಾರಿ ಹುಸೈನ್ ಅಲ್ ಅಝೀ, ರ್ವಾಬೀ ಹಡಗು ಮಕ್ಕಳಿಗಾಗಿ ಆಟಿಕೆಯನ್ನು ಸಾಗಿಸುತ್ತಿರಲಿಲ್ಲ, ಅದರಲ್ಲಿ ಉಗ್ರಗಾಮಿಗಳಿಗೆ ಆಯುಧವಿತ್ತು ಎಂದಿದ್ದಾರೆ. ವಿಶ್ವಸಂಸ್ಥೆಯು ಅಂತರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದ ಕೊಲೆಗಾರರ ಪಕ್ಷ ವಹಿಸಿದೆ. ನಮ್ಮ ಜನರ ವಿರುದ್ಧ ನಡೆಯುವ ಆಕ್ರಮಣದಲ್ಲಿ ಭಾಗವಹಿಸಿರುವ ದೇಶಕ್ಕೆ ಸೇರಿದ ರ್ವಾಬೀ ಹಡಗು ಯೆಮನ್‌ನ ಸಮುದ್ರವ್ಯಾಪ್ತಿಯನ್ನು ಅಕ್ರಮವಾಗಿ ಪ್ರವೇಶಿಸಿದೆ ಎಂದವರು ಆರೋಪಿಸಿದ್ದಾರೆ.
 ಯೆಮನ್ನಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರಕ್ಕೆ ಬೆಂಬಲವಾಗಿ ಸೌದಿ ನೇತೃತ್ವದ ಮಿತ್ರರಾಷ್ಟ್ರಗಳ ಸೇನೆ 2015ರ ಮಾರ್ಚ್‌ನಿಂದ ಯೆಮನ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ರ್ವಾಬೀ ಹಡಗನ್ನು ಜನವರಿ 3ರಂದು ಇರಾನ್ ಬೆಂಬಲಿತ ಹೌದಿ ಬಂಡುಗೋರರು ವಶಕ್ಕೆ ಪಡೆದಿದ್ದು, ಈ ಹಡಗಿನಲ್ಲಿ ರೈಫಲ್‌ಗಳು, ಸೇನೆಯ ಬಳಕೆಗಾಗಿ ತೆಪ್ಪಗಳು ಮತ್ತಿತರ ಸಾಧನಗಳಿರುವುದಕ್ಕೆ ಪುರಾವೆ ಎಂದು ವೀಡಿಯೊ ಒಂದನ್ನು ಬಿಡುಗಡೆಗೊಳಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)