varthabharthi


ರಾಷ್ಟ್ರೀಯ

ಬಿಜೆಪಿ ಕಾರ್ಯಕರ್ತನ ಕಲ್ಲೆಸೆದು ಹತ್ಯೆ ಪ್ರಕರಣ: 12 ಮಂದಿಯ ಬಂಧನ

ವಾರ್ತಾ ಭಾರತಿ : 16 Jan, 2022

ಜಾರ್ಖಂಡ್, ಸಿಮ್ಡೆಗಾ,ಜ.13: ಜಾರ್ಖಂಡ್ನ ಸಿಮ್ಡೆಗಾ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕಲ್ಲೆಸೆದು ಹತ್ಯೆಗೈದ ಬಳಿಕ ಆತನ ಮೃತದೇಹವನ್ನು ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 12ಕ್ಕೇರಿದೆ. ಕೊಲೆಬಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬೆಸ್ರಾಜಾರಾ ಬಝಾರ್ನಲ್ಲಿ ಜನವರಿ 4ರಂದು ಬಿಜೆಪಿ ಕಾರ್ಯಕರ್ತ 32 ವರ್ಷ ವಯಸ್ಸಿನ ಸಂಜುಪ್ರದಾನ್ನ ಹತ್ಯೆಯಾಗಿತ್ತು.   

ಸ್ಥಳೀಯ ಬುಡಕಟ್ಟು ಸಂಪ್ರದಾಯಗಳ ಪ್ರಕಾರ ಪವಿತ್ರವೆಂದು ಭಾವಿಸಲಾಗಿದ್ದ ಸ್ಥಳದಲ್ಲಿದ್ದ ಮರಗಳನ್ನು  ಸಂಜು ಪ್ರಧಾನ್ ಕಡಿದುರುಳಿಸಿದ್ದನೆನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಸುಮಾರು 1000 ಮಂದಿಯಿದ್ದ ಗುಂಪೊಂದು ಕಲ್ಲೆಸೆದು ಕೊಂದಿತ್ತು ಹಾಗೂ ಆತನ ಮೃತದೇಹವನ್ನು ಅದು ಸುಟ್ಟುಹಾಕಿತ್ತು. ಪ್ರಕರಣದ ಪ್ರಮುಖ ಆರೋಪಿ, ಗ್ರಾಮದ ಮುಖ್ಯಸ್ಥ ಸುನ್ಬುನ್ ಬುದ್ನನ್ನು ಜನವರಿ 9ರಂದು ಪೊಲೀಸರು ಬಂಧಿಸಿದ್ದರು.

ಬುಡಕಟ್ಟುಜನರ ಆರಾಧನಾ ಸ್ಥಳದಲ್ಲಿದ್ದ ಮರಗಳನ್ನು ಸಂಜುಪ್ರಧಾನ್ ಕಡಿದುಹಾಕಿದ್ದ. ಈ ಬಗ್ಗೆ ಗ್ರಾಮದ ವರಿಷ್ಠ ಸುನ್ಬುನ್ ಬುದ್ ಜನವರಿ 4ರಂದು ಸಭೆಯನ್ನು ಕರೆದಿದ್ದ. ಆದರೆ ಸಂಜು ಪ್ರದಾನ್ ಸಭೆಗೆ ಬಾರದೆ ಇದ್ದಾಗ, ಗುಂಪೊಂದು ಆತನನ್ನು ಮನೆಯಿಂದ ಹೊರಗೆಳೆದು ಥಳಿಸಿ ಹತ್ಯೆಗೈದಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದರು.
ಕೊಲೆ, ಮಾರಣಾಂತಿಕ ಆಯುಧಗಳೊಂದಿಗೆ ಗಲಭೆ ನಡೆಸಿದ ಹಾಗೂ ಕಾನೂನುಬಾಹಿರವಾಗಿ ಸಭೆ ಸೇರಿದ ಆರೋಪದಲ್ಲಿ 13 ಮಂದಿ ಗುರುತಿಸಲ್ಪಟ್ಟ ಹಾಗೂ 25 ಮಂದಿ ಅಜ್ಞಾತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಸ್ಥಳದಲ್ಲಿದ್ದರೂ ತನ್ನ ಪತಿಯನ್ನು ಉದ್ರಿಕ್ತ ಗುಂಪಿನಿಂದ ರಕ್ಷಿಸಲು ಪೊಲೀಸರು ಯಾವುದೇ ಪ್ರಯತ್ನ ಮಾಡಿಲ್ಲವೆಂದು ಸಂಜುಪ್ರಧಾನ್ನ ಪತ್ನಿ ಆರೋಪಿಸಿದ್ದಳು.
 
ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸಿಮ್ಡೆಗಾ ಜಿಲ್ಲೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ರಾಜ್ಯಾಧ್ಯಕ್ಷ ದೀಪಕ್ ಪ್ರಕಾಶ್, ಕೇಂದ್ರ ಸಚಿವ ಅರ್ಜುನ್ ಮುಂಡಾ ಹಾಗೂ ಮಾಜಿ ಮುಖ್ಯಮಂತ್ರಿ ರಘುಬೀರ್ ದಾಸ್ ಸೇರಿದಂತೆ ಬಿಜೆಪಿ ಮುಖಂಡರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಹಾಗೂ ರಾಜ್ಯದಲ್ಲಿ ಕಾನೂನುವ್ಯವಸ್ಥೆ ಕುಸಿದುಬಿದ್ದಿದೆ ಎಂದು ಆಪಾದಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)