varthabharthi


ಉಡುಪಿ

ನಾಲ್ಕನೇ ಬಾರಿ ಕೃಷ್ಣಾಪುರಶ್ರೀಗಳಿಂದ ಸರ್ವಜ್ಞ ಪೀಠಾರೋಹಣ

ವಾರ್ತಾ ಭಾರತಿ : 18 Jan, 2022

ಉಡುಪಿ, ಜ.18: ಸುಮಾರು 800 ವರ್ಷಗಳ ಹಿಂದೆ ಮಧ್ವ ಮತ ಸಂಸ್ಥಾಪಕ ಶ್ರೀಮಧ್ವಾಚಾರ್ಯರು ಸ್ಥಾಪಿಸಿದ್ದ ಉಡುಪಿ ಶ್ರೀಕೃಷ್ಣ ಮಠದ ಶ್ರೀಕೃಷ್ಣ ಮುಖ್ಯಪ್ರಾಣರ ಪೂಜಾ ಕೈಂಕರ್ಯವನ್ನು ಇಂದು ಬೆಳಗಿನ ಜಾವ ಅದಮಾರು ಮಠಾಧೀಶರಿಂದ ನಾಲ್ಕನೇ ಬಾರಿಗೆ ಪಡೆದ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಿದರು.

ಕೋವಿಡ್ ಕಾರಣದಿಂದ ಯಾವುದೇ ಗೌಜಿಗದ್ದಲ, ಆಡಂಬರ, ವೈಭವಗಳಿ ಲ್ಲದೇ ಅತ್ಯಂತ ಸರಳವಾಗಿ ನಡೆದ ಪರ್ಯಾಯ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠಾಧೀಶರು, ತನ್ನ ಚೊಚ್ಚಲ ಪರ್ಯಾಯೋತ್ಸವವನ್ನು ಯಶಸ್ವಿಯಾಗಿ ನಡೆಸಿದ ಅದಮಾರು ಮಠದ ಶ್ರೀಈಶಪ್ರಿಯತೀರ್ಥರ ಮೂಲಕ ಇಂದು ಮುಂಜಾನೆ 5:55ಕ್ಕೆ ಸರ್ವಜ್ಞ ಪೀಠಾರೋಹಣ ಮಾಡಿ ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಕೃಷ್ಣನ ಪೂಜಾ ಕೈಂಕರ್ಯ ದೀಕ್ಷೆಯನ್ನು ಸ್ವೀಕರಿಸಿದರು.

1522ರಲ್ಲಿ ಸೋದೆ ಮಠದ ವಾದಿರಾಜರು ಆರಂಭಿಸಿದ ಎರಡು ವರ್ಷಗಳ ಪರ್ಯಾಯ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುತಿದ್ದು, ಪರ್ಯಾಯದ 32ನೇ ಚಕ್ರದ ಮೂರನೇ ಪರ್ಯಾಯ ಇದಾಗಿದೆ. 64 ವರ್ಷ ಪ್ರಾಯದ ಆಶ್ರಮ ಸ್ವೀಕರಿಸಿದ ಆಧಾರದಲ್ಲಿ ಶ್ರೀಕೃಷ್ಣ ಮಠದ ಅತ್ಯಂತ ಹಿರಿಯ ಯತಿಗಳಾಗಿರುವ ಕೃಷ್ಣಾಪುರಶ್ರೀಗಳು ಇದೀಗ ನಾಲ್ಕನೇ ಬಾರಿಗೆ ಶ್ರೀಕೃಷ್ಣನ ಪೂಜಾ ಹಾಗೂ ಮಠದ ಆಡಳಿತ ಅಧಿಕಾರವನ್ನು ಪಡೆದುಕೊಂಡರು. ಇವರ ಅಧಿಕಾರಾವಧಿ 2024ರ ಜ.18ರವರೆಗೆ ಇರಲಿದೆ.

ಕರಾವಳಿ ಭಾಗದ ನಾಡಹಬ್ಬವೆಂದು ಪರಿಗಣಿಸಲಾಗುವ ಪರ್ಯಾಯ ಮಹೋತ್ಸವ, ಕೋವಿಡ್ ಕಾರಣದಿಂದ ಹಿಂದಿನ ಅಬ್ಬರ ಹಾಗೂ ವೈಭವವನ್ನು ಕಳೆದುಕೊಂಡಿತ್ತು. ಮಠಕ್ಕೆ ಸೀಮಿತವಾಗಿ ನಡೆಯುವ ಧಾರ್ಮಿಕ ವಿಧಿವಿಧಾನಗಳನ್ನು ಹೊರತು ಪಡಿಸಿ ಸಾರ್ವಜನಿಕರು ಪಾಲ್ಗೊಳ್ಳುವ ಮೆರವಣಿಗೆ ಅಥವಾ ಶೋಭಾ ಯಾತ್ರೆ ರಾತ್ರಿ ಕರ್ಫ್ಯೂ ಕಾರಣದಿಂದ ಸಂಪೂರ್ಣ ಸೊರಗಿತ್ತು.

ಜನಸಂಚಾರಕ್ಕೆ ನಿರ್ಬಂಧವಿದ್ದರೂ, ಸಾಂಪ್ರದಾಯಿಕ ರೀತಿಯಲ್ಲಿ ನಗರದ ಜೋಡುಕಟ್ಟೆ ಬಳಿ ಪ್ರಾರಂಭಗೊಂಡ ಪರ್ಯಾಯ ಪೀಠವೇರುವ ಸ್ವಾಮೀಜಿ ಅವರನ್ನು ಒಳಗೊಂಡಂತೆ ಅಷ್ಟಮಠಾಧೀಶರ ಮೆರವಣಿಗೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು.

ಮಧ್ವಾಚಾರ್ಯರು ವಿದ್ಯಾಭ್ಯಾಸ ಮಾಡಿದ ಕಾಪು ಸಮೀಪದ ದಂಡತೀರ್ಥ ದಲ್ಲಿ ಸ್ನಾನ ಮುಗಿಸಿದ ಬಂದ ಕೃಷ್ಣಾಪುರ ಶ್ರೀಗಳು, ಅಷ್ಟಮಠಗಳ ಪೈಕಿ ಆರು ಮಠಗಳ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿನ ವಿವಿಧ ಧಾರ್ಮಿಕ ವಿಧಿಗಳನ್ನು ಪೂರ್ಣಗೊಳಿಸಿದ ಬಳಿಕ ಎಲ್ಲಾ ಸ್ವಾಮೀಜಿಗಳು ಅಲಂಕೃತ ವಾಹನ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ರಥಬೀದಿಗೆ ಬಂದರು.

ಕನಕನ ಕಿಂಡಿಯಿಂದ ದರ್ಶನ: ಮೆರವಣಿಗೆ ರಥಬೀದಿ ತಲುಪಿದಾಗ ಮಠಾಧೀಶರು ಪಲ್ಲಕ್ಕಿಯಿಂದ ಇಳಿದು ನೆಲಕ್ಕೆ ಹಾಸಿದ ಬಿಳಿ ನಡೆಮುಡಿಯ ಮೇಲೆ ಸಾಗಿ ಕನಕಗೋಪುರದ ಬಳಿ ಬಂದರು. ಕೃಷ್ಣಾಪುರಶ್ರೀಗಳು ಕನಕನ ಕಿಂಡಿ ಮೂಲಕ ಮೊದಲು ಕೃಷ್ಣನ ದರ್ಶನ ಪಡೆದರು. ಬಳಿಕ ಅವರು ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಮುಂಜಾನೆ 5:25ರ ಸುಮಾರಿಗೆ ಶ್ರೀಕೃಷ್ಣ ಮಠ ಪ್ರವೇಶಿಸಿದರು.

ಅಧಿಕಾರ ಹಸ್ತಾಂತರ: ಶ್ರೀಮಠದ ಪ್ರವೇಶ ದ್ವಾರದಲ್ಲಿ ಅದಮಾರುಶ್ರೀಗಳು ಕೃಷ್ಣಾಪುರಶ್ರೀಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಮಠದೊಳಗೆ ಕರೆತಂದು ನವಗ್ರಹ ಕಿಂಡಿಯ ಮೂಲಕ ಅವರಿಗೆ ಕೃಷ್ಣನ ದರ್ಶನ ಮಾಡಿಸಿದರು. ಬಳಿಕ ಶ್ರೀವಿದ್ಯಾಸಾಗರ ತೀರ್ಥರನ್ನು ಅವರು 5:45ಕ್ಕೆ ಗರ್ಭಗುಡಿಯೊಳಗೆ ಕರೆತಂದು ಮಠದ ಪಟ್ಟದ ದೇವರನ್ನು ಕೃಷ್ಣನ ಎದುರು ಇಟ್ಟು ಶ್ರೀಕೃಷ್ಣಪೂಜೆಯ ಅಧಿಕಾರದ ಸಂಕೇತವಾದ ಅಕ್ಷಯ ಪಾತ್ರೆ, ಗರ್ಭಗುಡಿಯ ಕೀಲಿಕೈ ಹಾಗೂ ಬೆಳ್ಳಿ ಸಟುಗವನ್ನು ಹಸ್ತಾಂತರಿಸಿದರು.

ಅನಂತರ 5:55ಕ್ಕೆ ಸರಿಯಾಗಿ ಉಳಿದೆಲ್ಲಾ ಸ್ವಾಮಿಗಳ ಉಪಸ್ಥಿತಿಯಲ್ಲಿ ಅದಮಾರುಶ್ರೀಗಳು, ಕೃಷ್ಣಾಪುರಶ್ರೀಗಳನ್ನು ಸರ್ವಜ್ಞ (ಮ್ವ)ಪೀಠದಲ್ಲಿಕುಳ್ಳಿರಿಸಿಶುಹಾರೈಸಿದರು. ಈ ಮೂಲಕ ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಕೃಷ್ಣ ಮಠದ ಅಧಿಕಾರವನ್ನು ಶ್ರೀವಿದ್ಯಾಸಾಗರತೀರ್ಥರು ವಹಿಸಿಕೊಂಡರು.

ಮುಂದಿನ ಧಾರ್ಮಿಕ ವಿಧಿಗಳು ಬಡಗು ಮಳಿಗೆಯಲ್ಲಿ ನಡೆದವು. ಬಡಗು ಮಳಿಗೆಯಲ್ಲಿ ನಿರ್ಮಿಸಿದ ಅರಳುಗದ್ದಿಗೆಯಲ್ಲಿ ಉಪಸ್ಥಿತ ಮಠಾಧೀಶರುಗಳಿಗೆ ಕೃಷ್ಣಾಪುರ ಮಠದ ದಿವಾನರು ಮಾಲಿಕಾ ಮಂಗಳಾರತಿ ಬೆಳಗಿ ಗಂದಾದ್ಯುಪಚಾರ, ಅಷ್ಟ ಮಠಾಧೀಶರಿಂದ ಪಟ್ಟಕಣಿಕೆ ಹಾಗೂಮಾಲಿಕೆ ಮಂಗಳಾರತಿ ನಡೆಯಿತು. ಈ ಮೂಲಕ ಪೀಠಾರೋಹಣದ ಧಾರ್ಮಿಕ ವಿಧಿವಿಧಾನಗಳು ಮುಕ್ತಾಯಗೊಂಡವು.

ನಂತರ ರಾಜಾಂಗಣದಲ್ಲಿ ದರ್ಬಾರ್, ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮಗಳು ನಡೆದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)