varthabharthi


ವಿಶೇಷ-ವರದಿಗಳು

ವಿಭಿನ್ನ ರಾಜಕಾರಣದ ವಿ.ಪಿ. ಸಿಂಗ್

ವಾರ್ತಾ ಭಾರತಿ : 18 Jan, 2022
ವಿದ್ಯಾಧರ್

ದೇಬಾಶಿಷ್ ಮುಖರ್ಜಿಯವರ ‘ದಿ ಡಿಸ್ರಪ್ಟರ್: ಹೌ ವಿಶ್ವನಾಥ್ ಪ್ರತಾಪ್ ಸಿಂಗ್ ಶುಕ್ ಇಂಡಿಯಾ’ ಎಂಬ ಹೊಸ ಪುಸ್ತಕ ಒಬಿಸಿ(ಇತರ ಹಿಂದುಳಿದ ವರ್ಗ) ಮೀಸಲಾತಿ ವಿಷಯ ಮತ್ತೆ ಸುದ್ದಿಯಲ್ಲಿರುವ ಪ್ರಸಕ್ತ ಸಂದರ್ಭದಲ್ಲೇ ಹೊರಬಂದಿದೆ. ಸುಮಾರು 40ಕ್ಕೂ ಅಧಿಕ ವರ್ಷ ಪತ್ರಕರ್ತರಾಗಿದ್ದ ಮುಖರ್ಜಿ ಈ ವಿಷಯದ ಬಗ್ಗೆ ಹೆಚ್ಚಿನ ಪರಿಜ್ಞಾನ ಹೊಂದಿದವರು.

1980ರ ದಶಕದಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗಾಗಿ ಮಹಾರಾಷ್ಟ್ರದಲ್ಲಿ ಒಬಿಸಿ ಚಳವಳಿಯ ವರದಿ ಮಾಡಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಎತ್ತಲು ಮತ್ತೊಂದು ಕಾರಣ ನನಗಿದೆ. ಅಲ್ಲದೆ ಅಂದಿನ ದಿನದಲ್ಲಿ ಅತ್ಯಂತ ಸಕ್ರಿಯವಾಗಿದ್ದ ಬಾಂಬೆ ಯೂನಿಯನ್ ಆಫ್ ಜರ್ನಲಿಸ್ಟ್‌ನ ಕಾರ್ಯಕ್ರಮವೊಂದರಲ್ಲಿ ವಿ.ಪಿ. ಸಿಂಗ್ ಭಾಷಣ ಮಾಡಿದ್ದರು ಮತ್ತು ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವ ಅವಕಾಶ ನನಗೆ ಒದಗಿ ಬಂದಿತ್ತು. ಆಗ ನಾನು ಬಾಂಬೆ ಯೂನಿಯನ್ ಆಫ್ ಜರ್ನಲಿಸ್ಟ್‌ನ ಅಧ್ಯಕ್ಷನಾಗಿದ್ದೆ.

ಮುಸ್ಲಿಂ ಒಬಿಸಿ ಪರ ಹೋರಾಡುವ ಸಂಘಟನೆ ಇದ್ದುದರಿಂದ ಒಬಿಸಿ ವಿಷಯ ಧಾರ್ಮಿಕ ಕ್ಷೇತ್ರವನ್ನೂ ಪ್ರವೇಶಿಸಿತು ಮತ್ತು ಚಿತ್ರನಟ ದಿಲೀಪ್ ಕುಮಾರ್ ಈ ವಿಷಯದ ಬಗ್ಗೆ ಮಾತನಾಡಿದ ಹಲವು ಸಭೆಗಳ ವರದಿ ಮಾಡಿದ್ದೇನೆ. ‘‘ಅಲ್ಲಾಹ್ ಈ ಭೂಮಿಯನ್ನು ಕೇವಲ ಮುಸ್ಲಿಮರಿಗಾಗಿ ಮಾತ್ರವಲ್ಲ, ಎಲ್ಲರಿಗೂ ಸೃಷ್ಟಿಸಿದ್ದಾನೆ’’ ಎಂದು ಅವರು ಸಭಿಕರನ್ನುದ್ದೇಶಿಸಿ ಹೇಳುತ್ತಿದ್ದ ಒಂದು ಮಾತು ನನಗೆ ನೆನಪಿದೆ.

ಮಾಹಿತಿ ಹಕ್ಕು ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ನರೆಗಾ) ಯೋಜನೆಗೆ ಚಾಲನೆ ನೀಡುವಲ್ಲಿ ವಿ.ಪಿ. ಸಿಂಗ್ ವಹಿಸಿದ ಮಹತ್ವದ ಪಾತ್ರದ ಬಗ್ಗೆ ಇಬ್ಬರು ಪ್ರಮುಖ ಹೋರಾಟಗಾರರಾದ ಅರುಣಾ ರಾಯ್ ಮತ್ತು ನಿಖಿಲ್ ಡೇ ಈ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಜನತಾ ರಾಜಕೀಯ ಎಂದು ನಾವು ಕರೆಯುವ ಉಪಕ್ರಮಗಳಿಗಾಗಿ ಇತಿಹಾಸವು ವಿ.ಪಿ. ಸಿಂಗ್‌ರನ್ನು ನೆನಪಿಸಿಕೊಳ್ಳುತ್ತದೆ ಎಂದವರು ಹೇಳಿದ್ದಾರೆ.

ವಾಸ್ತವವಾಗಿ ಈ ಹಿಂದೆ ದಕ್ಕಬೇಕಿದ್ದ ಹಕ್ಕುಗಳಿಂದ ವಂಚಿತರಾದವರಿಗೆ ಪ್ರಾತಿನಿಧ್ಯವನ್ನು ಒದಗಿಸಲು ಒಬಿಸಿ ವಿಷಯ ನೆರವಾಗಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ ಮರಾಠಾರ ಪ್ರಾಬಲ್ಯವಿದೆ. ತಮ್ಮ ಸಶಕ್ತ ಮಾತುಗಾರಿಕೆಯಿಂದಾಗಿ ತೋಟಗಾರಿಕಾ ತಜ್ಞ, ಮಾಲಿ ಸಮುದಾಯದ ಛಗನ್ ಭುಜಬಲ್ ಮಹಾರಾಷ್ಟ್ರದ ಒಬಿಸಿ ಚಳವಳಿಯ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದರು. ಆದರೆ ಬಳಿಕ ಅವರು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋದರು ಮತ್ತು ಈಗ ಮತ್ತೆ ಸಚಿವರಾಗಿದ್ದಾರೆ. ಅಂದಿನ ದಿನದಲ್ಲಿ ಒಬಿಸಿ ಚಳವಳಿಯ ಅತ್ಯಂತ ಸಕ್ರಿಯ ವಕ್ತಾರನೆಂದರೆ ಜನಾರ್ದನ್ ಪಾಟೀಲ್. ಕಡಿಮೆ ಆದಾಯದ ಜನರೇ ಹೆಚ್ಚಿರುವ ಮುಂಬೈಯ ಚುನ್ನಾಭಟ್ಟಿ ಪ್ರದೇಶದ ಜನಸಾಮಾನ್ಯರ ಪ್ರತಿನಿಧಿಯಾಗಿದ್ದ ತೆಳ್ಳನೆ ಕಾಯದ, ಸರಳ ವ್ಯಕ್ತಿಯಾಗಿದ್ದರು ಪಾಟೀಲ್. ಈಗ ಅತ್ಯಂತ ಅಬ್ಬರದ ವಕ್ತಾರರಾಗಿ ಕಾಣಿಸಿಕೊಂಡಿರುವ ಹರಿ ನರ್ಕೆ ಓರ್ವ ಶಿಕ್ಷಣ ತಜ್ಞನಾಗಿ ಡಾ. ಅಂಬೇಡ್ಕರ್ ಮತ್ತು ಮಹಾತ್ಮಾ ಜೋತಿರಾವ್ ಫುಲೆ, ಅವರ ಪತ್ನಿ ಸಾವಿತ್ರಿಬಾಯಿ ಫುಲೆ(19ನೇ ಶತಮಾನದಲ್ಲಿ ಪುಣೆಯಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಸಕ್ರಿಯ ಹೋರಾಟ ನಡೆಸಿದವರು)ಯವರ ಲೇಖನಗಳನ್ನು ಪ್ರಕಟಿಸುವ ಕಾರ್ಯ ಮಾಡಿದವರು.

ಇತರ ರಾಜಕಾರಣಿಗಳಿಗಿಂತ ಹಲವು ವಿಷಯಗಳಲ್ಲಿ ವಿ.ಪಿ. ಸಿಂಗ್ ಭಿನ್ನರಾಗಿದ್ದರು. ರಾಜಮನೆತನದ ಕುಟುಂಬ ಅವರನ್ನು ದತ್ತು ಪಡೆದುಕೊಂಡಿತ್ತು ಮತ್ತು ಹೆತ್ತವರಿಂದ ಹಠಾತ್ ಪ್ರತ್ಯೇಕಗೊಂಡಿದ್ದು ಅವರ ಎಳೆಯ ಮನಸ್ಸಿನ ಮೇಲೆ ಖಂಡಿತಾ ಕೆಲವೊಂದು ಪರಿಣಾಮ ಬೀರಿರಬಹುದು. ತಮ್ಮ ಬಹುತೇಕ ಜಮೀನನ್ನು ಅವರು ವಿನೋಬಾ ಭಾವೆಯವರ ಭೂದಾನ ಚಳವಳಿಗೆ(ಬಡವರಿಗೆ ಭೂಮಿ ನೀಡುವ ಉದ್ದೇಶದಿಂದ ಭಾವೆ 50ರ ದಶಕದಲ್ಲಿ ಆರಂಭಿಸಿದ್ದ ಅಭಿಯಾನ) ದಾನವಾಗಿ ನೀಡಿದರು. ಭಾವೆಯವರ ಮಹತ್ವವನ್ನು ಭಾರತದಲ್ಲಿ ಸರಿಯಾಗಿ ಅರ್ಥಮಾಡಿಕೊಂಡಿರಲಿಲ್ಲ. ಎಲ್ಲಾ ಭೂಮಿ ಜನರಿಗೆ ಸೇರಿದೆ ಎಂದು ಭೂಮಿಯ ಬಗ್ಗೆ ಅತ್ಯಂತ ಸೂಕ್ತವಾದ ಸಮಸ್ಯೆಯನ್ನು ಅವರು ಪ್ರಸ್ತಾವಿಸಿದರು. ಸರಕಾರಿ ಭೂಮಿಯನ್ನು ಸಾರ್ವಜನಿಕ ಸೌಕರ್ಯಗಳಿಗೆ ಬಳಸುವ ಬದಲು ದುರಾಸೆಯ ಖಾಸಗಿ ಉದ್ಯಮಿಗಳಿಗೆ ಮಾರುವ ನಮ್ಮ ದಿವಾಳಿ ಸರಕಾರದ ಧೋರಣೆಗೆ ಇದು ವ್ಯತಿರಿಕ್ತವಾಗಿದೆ. ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ಸಣ್ಣಪುಟ್ಟ ವಿವರಣೆಗಳು ಸಾಮಾನ್ಯ ಜೀವನವನ್ನು ಅರ್ಥ ಮಾಡಿಕೊಳ್ಳಲು ಮಹತ್ವದ್ದಾಗಿದೆ. ವಿ.ಪಿ. ಸಿಂಗ್ ಅವರ ಬದುಕಿನ ಅಂತಿಮ ವರ್ಷಗಳಲ್ಲಿ ಆಸ್ತಿಗಾಗಿ ಕುಟುಂಬದೊಳಗಿನ ವಿವಾದ ಅವರನ್ನು ಭ್ರಮನಿರಸನಗೊಳಿಸಿತು. ತಾನೊಬ್ಬ ಉತ್ತಮ ಕಾಲೇಜು ಅಧ್ಯಾಪಕ ಅಥವಾ ಅಂತಹ ಹುದ್ದೆಯಲ್ಲಿರಬೇಕಿತ್ತು ಎಂದು ಅವರು ಆಗ ಆಶಿಸಿದ್ದರು. ಆಗ ಮೇಲ್ವರ್ಗದ ಜನತೆ ಕಾಡುಪ್ರಾಣಿಗಳ ಬೇಟೆಯ ಹವ್ಯಾಸ ಹೊಂದಿದ್ದರು. ಒಮ್ಮೆ ವಿ.ಪಿ. ಸಿಂಗ್ ಅವರ ಸ್ವಂತ ಸಹೋದರ ಬೇಟೆಗೆಂದು ಹೋದವರು ಡಕಾಯಿತರೊಂದಿಗಿನ ಮುಖಾಮುಖಿಯಲ್ಲಿ ಹತ್ಯೆಯಾಗಿದ್ದರು. ಈ ವಿವಾದದ ಹಿನ್ನೆಲೆಯಲ್ಲಿ ವಿ.ಪಿ. ಸಿಂಗ್ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.

ವಿ.ಪಿ. ಸಿಂಗ್ ಕೇಂದ್ರ ಮಂತ್ರಿಮಂಡಲದಲ್ಲಿ ಪ್ರಥಮ ಬಾರಿಗೆ ಕಾರ್ಯನಿರ್ವಹಿಸಿದ್ದರ ಬಗ್ಗೆ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಜನತಾ ಪಕ್ಷದ ಆಡಳಿತದ ವಿರುದ್ಧ ಚಳವಳಿ ನಡೆಸಿದ್ದಕ್ಕಾಗಿ ವಿ.ಪಿ. ಸಿಂಗ್‌ರನ್ನು ಬಂಧನದಲ್ಲಿಟ್ಟಿದ್ದ ಜೈಲಿನ ಅಹಿತಕರ ಪರಿಸ್ಥಿತಿಯ ಬಗ್ಗೆಯೂ ಕೃತಿಯಲ್ಲಿ ವಿವರಿಸಲಾಗಿದೆ. ಜೈಲಿನ ಶೌಚಾಲಯದಲ್ಲಿ ಕೈದಿಗಳ ಮಲ, ಮೂತ್ರ ಪದರ ಪದರವಾಗಿ ಶೇಖರಗೊಂಡಿದ್ದರೂ ಅದನ್ನು ಶುಚಿಗೊಳಿಸುವವರು ಇರಲಿಲ್ಲ. ಆದರೂ ಜಾಮೀನು ಪಡೆಯಲು ನಿರಾಕರಿಸಿ ಒಂದು ವಾರ ಜೈಲಿನಲ್ಲಿದ್ದರು. ಮತ್ತೊಂದು ಆಸಕ್ತಿಯ ವಿಷಯವೆಂದರೆ ಅಮಿತಾಬ್ ಬಚ್ಚನ್ ಆಗ ಹಿಂದಿ ಸಿನೆಮಾದ ಸ್ಟಾರ್ ನಟರಾಗಿದ್ದರೂ ವಿ.ಪಿ. ಸಿಂಗ್‌ರಿಗೆ ಅಮಿತಾಬ್ ಬಗ್ಗೆ ತಿಳಿದೇ ಇರಲಿಲ್ಲ. ಮುಂದಿನ ದಿನದಲ್ಲಿ ಅಮಿತಾಬ್ ಅಲಹಾಬಾದ್ ಕ್ಷೇತ್ರದಲ್ಲಿ ವಿ.ಪಿ. ಸಿಂಗ್ ಅವರ ರಾಜಕೀಯ ಇದಿರಾಳಿಯಾಗಿ ಕಾಣಿಸಿಕೊಂಡರು.

ಅಂಬಾನಿಗಳು, ಕಪ್ಪುಹಣದ ವಿರುದ್ಧ ವಿ.ಪಿ. ಸಿಂಗ್ ಅವರ ಅಭಿಯಾನ ರಾಜೀವ್ ಗಾಂಧಿಯವರನ್ನು ತುಸು ಕೆರಳಿಸಿತು ಎಂದು ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಆಗ ಹಿರಿಯ ರಾಜಕಾರಣಿ ಉಮಾಶಂಕರ್ ದೀಕ್ಷಿತ್ ಅವರು ವಿ.ಪಿ. ಸಿಂಗ್‌ರನ್ನು ಕರೆದು ‘‘ಕಪ್ಪುಹಣ ರಾಜಕೀಯ ಪಕ್ಷಗಳಿಗೆ ನಿರ್ಣಾಯಕವಾಗಿದೆ. ರಾಜಕಾರಣಿಗಳಿಗೆ ವಾಕಿಂಗ್‌ಸ್ಟಿಕ್ ಇದ್ದ ಹಾಗೆ ನೀವು ಈ ವಿಷಯದಲ್ಲಿ ರಾಜೀವ್ ಗಾಂಧಿಯನ್ನು ಟೀಕಿಸುವುದು ಅವರ ವಾಕಿಂಗ್‌ಸ್ಟಿಕ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದಂತೆ’’ ಎಂದು ಹೇಳಿರುವುದಾಗಿ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

ಕೃಪೆ: (countercurrents)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)