varthabharthi


ಅಂತಾರಾಷ್ಟ್ರೀಯ

ವಿಶ್ವಸಂಸ್ಥೆ ಮಾನವ ಹಕ್ಕು ತಜ್ಞರ ಕಳವಳ

''ಅಫ್ಘಾನಿಸ್ತಾನದಲ್ಲಿ ಸಾರ್ವಜನಿಕ ಬದುಕಿನಿಂದ ಮಹಿಳೆಯರು, ಬಾಲಕಿಯರನ್ನು ದೂರವಿಡಲಾಗುತ್ತಿದೆ''

ವಾರ್ತಾ ಭಾರತಿ : 18 Jan, 2022

 ಜಿನೇವಾ,ಜ.18: ಸಾರ್ವಜನಿಕ ಜೀವನದಿಂದ ಮಹಿಳೆಯರನ್ನು ಹಾಗೂ ಮಹಿಳೆಯರನ್ನು ಅಫ್ಘಾನ್‌ನ ತಾಲಿಬಾನ್ ಆಡಳಿತವು ಸ್ಥಿರವಾಗಿ ದೂರವಿಡುತ್ತಿದೆಯೆಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

   ‘‘ಅಫ್ಘಾನಿಸ್ತಾನದ್ಯಂತ ಮಹಿಳೆಯರನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಿಂದ ಹೊರಗಿಡಲು ನಿರಂತರವಾದ ಹಾಗೂ ವ್ಯವಸ್ಥಿತವಾದ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ನಾವು ಕಳವಳಗೊಂಡಿದ್ದೇವೆ’’ ಎಂದು ವಿಶ್ವಸಂಸ್ಥೆಯ 35 ಸ್ವತಂತ್ರ ಮಾನವಹಕ್ಕುಗಳ ತಜ್ಞರು ಸೋಮವಾರ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.


‘‘ಹಝಾರಾ, ತಾಜಿಕ್, ಹಿಂದೂ ಮತ್ತಿತರ ಜನಾಂಗೀಯ, ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರ ವಿಷಯದಲ್ಲಿ ಈ ಆತಂಕ ಇನ್ನೂ ಹೆಚ್ಚಾಗಿದೆ’’ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

  ‘‘ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಹಾಗೂ ಅವರಿಗೆ ನೆರವಾಗುವುದಕ್ಕಾಗಿ ಸ್ಥಾಪಿಸಲಾದ ಸಂಸ್ಥೆಗಳು ಹಾಗೂ ಕಾರ್ಯವಿಧಾನಗಳು ಅಪಾಯದಲ್ಲಿವೆ. ಅಫ್ಘಾನಿಸ್ತಾನದಲ್ಲಿ ಸಾರ್ವಜನಿಕ ಬದುಕಿನಿಂದ ಮಹಿಳೆಯರನ್ನು ಸ್ಥಿರವಾಗಿ ದೂರವಿರಿಸುವಂತಹ ಪ್ರಯತ್ನಗಳನ್ನು ನಾವೀಗ ಕಾಣುತ್ತಿದ್ದೇವೆ. ಅಫ್ಘಾನಿಸ್ತಾನದ ಮಹಿಳಾ ವ್ಯವಹರಗಳ ಸಚಿವಾಲಯದ ಮುಚ್ಚುಗಡೆ ಹಾಗೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಅಫ್ಘಾನಿಸ್ತಾನದ ಮಾನವಹಕ್ಕುಗಳ ಆಯೋಗದ ಕಾರ್ಯಾಲಯದ ಆವರಣವನ್ನು ತಾಲಿಬಾನ್ ಆಕ್ರಮಿಸಿರುವ ಬಗ್ಗೆಯೂ ಅವರು ತಮ್ಮ ಹೇಳಿಕೆಯಲ್ಲಿ ಪ್ರಸ್ತಾವಿಸಿದ್ದಾರೆ.

 ಹಜಾರಾದಂತಹ ಅಲ್ಪಸಂಖ್ಯಾತ ಬುಡಕಟ್ಟು ಪಂಗಡಗಳನ್ನು ಕಾನೂನುಬಾಹಿರ ಹತ್ಯೆಗಳು ನಡೆಯುತ್ತಿರುವ ಬಗ್ಗೆಯೂ ತಾನು ಕಳವಳಗೊಂಡಿರುವುದಾಗಿ ತಜ್ಞರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 2021ರ ಆಗಸ್ಟ್ನಲ್ಲಿ ತಾಲಿಬಾನ್ ಅಧಿಕಾರಕ್ಕೇರಿದಾಗಿನಿಂದ ಮಹಿಳೆಯರು ಹಾಗೂ ಬಾಲಕಿ.ರ ಹಕ್ಕುಗಳಿಗೆ ಸಂಬಂಧಿಸಿದಂತೆ ಸರಣಿ ನಿರ್ಬಂಧಾತ್ಮಕ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿರುವ ಬಗ್ಗೆ ತಾವು ಕಳವಳಗೊಂಡಿರುವುದಾಗಿ ತಜ್ಞರು ತಿಳಿಸಿದ್ದಾರೆ.
  ಬಾಲ್ಯ ವಿವಾಹ ಹಾಗೂ ಬಲವಂತದ ವಿವಾಹಕ್ಕಾಗಿ ಮಹಿಳೆಯರು ಹಾಗೂ ಬಾಲಕಿಯರ ಕಳ್ಳಸಾಗಣೆ ನಡೆಯುತ್ತಿರುವ ಅಪಾಯವೂ ಅಫ್ಘಾನಿಸ್ತಾನದಲ್ಲಿ ಹೆಚ್ಚಿದೆಯೆಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)