varthabharthi


ನಿಮ್ಮ ಅಂಕಣ

ಇಲ್ಲಿನ ಸಾಂಪ್ರದಾಯಿಕ ಉಡುಪುಗಳ ಮೂಲ ಯಾರದ್ದು?

ವಾರ್ತಾ ಭಾರತಿ : 19 Jan, 2022
ಉದಯರಾಜ್ ಆಳ್ವಾ, ಕೃಷ್ಣಾಪುರ

ಕಿನ್ನಿಗೋಳಿ ಹತ್ತಿರದ ಪೊಂಪೈ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತಲೆಗೆ ಸ್ಕಾರ್ಫ್/ಹಿಜಾಬ್ ತೊಡುವುದನ್ನು ವಿರೋಧಿಸುತ್ತಾ ಹಿಂದೂ ವಿದ್ಯಾರ್ಥಿನಿಯರು ತಾವೂ ಹಿಂದೂ ಧರ್ಮದ ಸಂಕೇತವಾದ ಕೇಸರಿ ದುಪಟ್ಟಾ ಕೊರಳಿಗೆ ಸುತ್ತಿಕೊಂಡು ಬರುವುದಾಗಿ ಹೇಳಿದ್ದ ಸುದ್ದಿ ವೈರಲ್ ಆಗಿತ್ತು. ಕೊರಳಿಗೆ ಕೇಸರಿ ದುಪಟ್ಟಾ ಸುತ್ತಿಕೊಳ್ಳುವುದು ಹಿಂದೂ ಪದ್ದತಿ ಎಂದು ಈ ವಿದ್ಯಾರ್ಥಿನಿಯರಿಗೆ ಹೇಳಿದ್ದು ಯಾರು? ಈ ಹುಡುಗಿಯರೆಲ್ಲ ತೊಟ್ಟಿದ್ದ ಸಲ್ವಾರ್ ಕಮೀಜ್ ಮೂಲತಃ ಭಾರತೀಯ ಡ್ರೆಸ್ ಅಲ್ಲವೇ ಅಲ್ಲ. ಇದಕ್ಕೆ ಕೆಲವೆಡೆ ಪಂಜಾಬಿ ಡ್ರೆಸ್ ಎಂದು ಕರೆಯುತ್ತಾರಾದರೂ ಮೂಲತಃ ಇದು ಪಂಜಾಬಿ ಅಥವಾ ಕಾಶ್ಮೀರಿ ಡ್ರೆಸ್ ಅಲ್ಲವೇ ಅಲ್ಲ. ಪಂಜಾಬ್ ಮತ್ತು ಕಾಶ್ಮೀರಕ್ಕೆ ಸಲ್ವಾರ್ ಕಮೀಜ್ ಬಂದಿದ್ದು ಮೊಘಲರ ಕಾಲದಲ್ಲಿ ಅಫ್ಘಾನಿಸ್ತಾನ-ತಜಕಿಸ್ತಾನದಿಂದ. ಮಹಿಳೆಯರ ಸಂಪೂರ್ಣ ಮೈಮುಚ್ಚುವ ಬಟ್ಟೆಯಾದ ಲೆಹೆಂಗಾ-ಚೋಲಿ ಹೆಸರೇ ಸೂಚಿಸುವಂತೆ ಪರ್ಷಿಯನ್ ಶಬ್ದ, ಲೆಹಂಗಾದಿಂದ ಕನ್ನಡದ ಲಂಗ-ಚೋಳಿ, ಲಂಗ-ಧಾವಣಿ, ಲಂಗ-ರವಿಕೆ ಶಬ್ದ ಹುಟ್ಟಿದ್ದು.

ಹತ್ತನೇ ಶತಮಾನಕ್ಕೆ ಮೊದಲು ಭಾರತ ಗಂಡಸರು ಮತ್ತು ಹೆಂಗಸರು ಕೇವಲ ಎರಡು ತುಂಡು ಬಟ್ಟೆಯಿಂದ ತಮ್ಮ ಮಾನ ಮುಚ್ಚಿಕೊಳ್ಳುತ್ತಿದ್ದರು. ಭಾರತದ ಯಾವುದೇ ಮೂಲೆಯ ಶಿಲ್ಪಅಥವಾ ಭಿತ್ತಿಚಿತ್ರಗಳನ್ನು ನೋಡಿದರೂ ಎಲ್ಲದರಲ್ಲಿಯೂ ಮಹಿಳೆಯರು ಸೊಂಟದ ಮೇಲೆ ಪೂರ್ತಿ ಬೆತ್ತಲೆ! 1,500 ವರ್ಷಗಳ ಹಿಂದೆ ರಚಿಸಿದ ಬಾದಾಮಿಯ ಗುಹೆಗಳಲ್ಲಿರುವ ಶಿಲ್ಪ ಮತ್ತು ಭಿತ್ತಿಚಿತ್ರಗಳಲ್ಲಿ ಗಂಡಸರು ಮತ್ತು ಹೆಂಗಸರು ಕೇವಲ ಸೊಂಟದ ಸುತ್ತ ಒಂದು ತುಂಡು ಬಟ್ಟೆ ಕಟ್ಟಿಕೊಂಡು ಮಾನ ಮುಚ್ಚಿಕೊಂಡಿದ್ದಾರೆ ಅಷ್ಟೇ. ಹನ್ನೊಂದನೇ ಶತಮಾನದಲ್ಲಿ ರಚಿಸಿದ ಬೇಲೂರು-ಹಳೇಬೀಡು ಶಿಲ್ಪದಲ್ಲಿರುವಂತೆ ಮಹಿಳೆಯರು ಒಂದು ತುಂಡು ಬಟ್ಟೆಯಿಂದ ಮತ್ತು ಆಭರಣಗಳಿಂದ ಸೊಂಟದಿಂದ ಕೆಳಗೆ ಮೊಣಕಾಲವರೆಗೆ ಮರ್ಯಾದೆ ಮುಚ್ಚಿಕೊಳ್ಳುತಿದ್ದರೆ, ಇನ್ನೊಂದು ಸಣ್ಣ ತುಂಡು ಬಟ್ಟೆಯಿಂದ ಎದೆಯ ಮಾನ ಮುಚ್ಚಿಕೊಳ್ಳುತ್ತಿದ್ದರು. ಕೇರಳದಲ್ಲಿಯಂತೂ 19ನೇ ಶತಮಾನದಲ್ಲಿಯೂ ನಾರಾಯಣ ಗುರುಗಳ ಕಾಲದಲ್ಲಿಯೂ ಕೆಳಜಾತಿಯ ಮಹಿಳೆಯರು ಮುಖ್ಯವಾಗಿ ದಲಿತರು ಮತ್ತು ಈಳವರು (ಬಿಲ್ಲವರು) ಎದೆ ಮುಚ್ಚಿಕೊಳ್ಳುವಂತೆಯೇ ಇರಲಿಲ್ಲ. ಯಾಕೆಂದರೆ ಆಗ 12 ವರ್ಷಕ್ಕೆ ಮೇಲ್ಪಟ್ಟ ಹುಡುಗಿಯರಿಗೆ ಅವರ ಸ್ತನದ ಗಾತ್ರಕ್ಕೆ ತಕ್ಕಂತೆ ಸ್ತನ-ತೆರಿಗೆ ಇತ್ತು. ಇದನ್ನು ನಾರಾಯಣ ಗುರುಗಳ ಜೀವನ ಚರಿತ್ರೆಯಲ್ಲಿ ಬರೆಯಲಾಗಿದೆ. ನಂಗೆಲಿ ಎಂಬ ಈಳವ ಜಾತಿಯ ಮಹಿಳೆ ಸ್ತನ ತೆರಿಗೆ ವಸೂಲು ಮಾಡಲು ಬಂದ ತ್ರಾವಣಕೋರ್ ವರ್ಮಾ ರಾಜನ ಸೈನಿಕರ ಕೈಗೆ ತನ್ನ ಮೊಲೆಯನ್ನೇ ಕೊಯ್ದು ಕೊಟ್ಟಳು ಎಂಬುದು ಇತಿಹಾಸದಲ್ಲಿ ನಮೂದಾಗಿದೆ (ಗೂಗಲ್‌ನಲ್ಲಿ ನಂಗೆಲಿ- ಬ್ರೆಸ್ಟ್ ಟ್ಯಾಕ್ಸ್ ಎಂದು ಟೈಪ್ ಮಾಡಿ ಹುಡುಕಬಹುದು). 1885ರಲ್ಲಿ ಕೇರಳಕ್ಕೆ ಬಂದಿದ್ದ ಸ್ವಾಮಿ ವಿವೇಕಾನಂದರು ಇಲ್ಲಿಯ ಮಹಿಳೆಯರ ದುಸ್ಥಿತಿ ನೋಡಿ ಕೇರಳವನ್ನು ಹುಚ್ಚಾಸ್ಪತ್ರೆ ಎಂದು ಕರೆದಿದ್ದರು. ಕೇರಳಕ್ಕೆ ತಾಗಿರುವ ನಮ್ಮ ತುಳುನಾಡಲ್ಲಿಯೂ ಇದೇ ಸಾಮಾಜಿಕ ಸ್ಥಿತಿ ಆಗ ಇದ್ದಿರಬಹುದೇನೋ! ಮಹಿಳೆಯರು ಸಂಪೂರ್ಣ ಮೈಮುಚ್ಚುವಂತೆ ಬಟ್ಟೆ ಉಡುವ ಪದ್ಧತಿ ಉತ್ತರ ಭಾರತದಲ್ಲಿ ಮೊದಲು ಶುರುವಾಗಿದ್ದು ಹತ್ತನೇ ಶತಮಾನದಲ್ಲಿ ಅಫ್ಘಾನರು, ತುರ್ಕರು, ಪರ್ಷಿಯನ್ನರು ಭಾರತದ ಮೇಲೆ ದಾಳಿ ಮಾಡಿ ಇಲ್ಲಿಯ ಜನರ ಬಟ್ಟೆ ಉಡುವ ಪದ್ಧತಿಯನ್ನು ಸಂಪೂರ್ಣ ಬದಲಿಸಿದ ನಂತರ. ಅದಕ್ಕೆ ಮುಂಚೆ ಭಾರತಿಯರಿಗೆ ಉತ್ತಮ ಬಟ್ಟೆ ನೇಯುವ ಕಲೆ ಗೊತ್ತಿತ್ತೇ ಹೊರತು ದೇಹದ ಆಕಾರಕ್ಕೆ ತಕ್ಕಂತೆ ಬಟ್ಟೆ ಕತ್ತರಿಸಿ ಸೂಜಿಯಿಂದ ಜೋಡಿಸಿ ಹೊಲಿಯುವ ಕಲೆ ಗೊತ್ತಿರಲಿಲ್ಲ. ಕತ್ತರಿ ಎಂಬ ಸಾಧನ ಆಗ ಭಾರತದಲ್ಲಿ ಇರಲಿಲ್ಲ. ಪರ್ಷಿಯನ್ ದರ್ಜಿಗಳೇ ಬಟ್ಟೆ ಕತ್ತರಿಸಿ ವಿವಿಧ ರೀತಿಯಲ್ಲಿ ಕೈಯಿಂದ ಹೊಲಿಯುವ ಕಲೆ ಭಾರತಕ್ಕೆ ಪರಿಚಯಿಸಿದ್ದು. ಚಂದ್ರಗುಪ್ತನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಇತಿಹಾಸಕಾರ ಮೆಗಾಸ್ತನಿಸ್ ಮೌರ್ಯ ಸಾಮ್ರಾಜ್ಯದಲ್ಲಿ ಹೆಂಗಸರ ಸಹಿತ ಸಾಮಾನ್ಯ ಜನರು ಕೇವಲ ಒಂದು ಸಣ್ಣ ತುಂಡು ಬಟ್ಟೆಯಿಂದ ಸೊಂಟದ ಕೆಳಗಿನ ಮಾನ ಮಾತ್ರ ಮುಚ್ಚಿಕೊಳ್ಳುತ್ತಾರೆ ಎಂದು ಬರೆದಿದ್ದನು. ‘‘ಭಾರತದ ನಾರಿಗೆ ಸೀರೆಯೇ ಸರಿ’’ ಎಂದು ಅಲಂಕಾರಪ್ರಿಯರು ಹೇಳುವುದನ್ನು ಎಲ್ಲರೂ ಕೇಳಿರಬಹುದು. ರವಿಕೆ-ಕುಪ್ಪಸ-ಕಂಚುಕ ಎಂದು ಕರೆಯಲಾಗುವ ಮಹಿಳೆಯರ ಮೇಲ್ಬದಿಯ ಮಾನ ಮುಚ್ಚುವ ವಸ್ತ್ರ ಭಾರತದ ಮೂಲದ್ದು ಅನ್ನುವುದಕ್ಕೆ ಪುರಾವೆಯೇ ಇಲ್ಲ. ಯಾಕೆಂದರೆ ಭಾರತದಲ್ಲಿ ಈಗ ಲಭ್ಯ ಇರುವ ಅತ್ಯಂತ ಹಳೆಯ ಭಿತ್ತಿ ಚಿತ್ರಗಳೆಂದರೆ 2,200 ವರ್ಷಗಳ ಹಿಂದೆ ಬೌದ್ಧ ಭಿಕ್ಷುಗಳು ಕೊರೆದ ಮಹಾರಾಷ್ಟ್ರದ ಅಜಂತಾ ಗುಹೆಯಲ್ಲಿರುವ ಭಿತ್ತಿಚಿತ್ರಗಳು. ಅಲ್ಲಿಯ ಭಿತ್ತಿಚಿತ್ರದಲ್ಲಿ ಆ ಕಾಲದಲ್ಲಿ ಇದ್ದ ಜನಜೀವನ ಮತ್ತು ಉಡುತ್ತಿದ್ದ ಬಟ್ಟೆಯ ಶೈಲಿ ಕಾಣಸಿಗುತ್ತದೆ. ಅಜಂತಾದ ಯಾವುದೇ ಚಿತ್ರದಲ್ಲಿಯೂ ಈಗಿನ ಶೈಲಿಯಲ್ಲಿ ಬಲಗಡೆ ಅಥವಾ ಎಡಗಡೆ ಹೆಗಲಿಗೆ ಸೆರಗು ಹಾಕಿ ಪಾದದ ವರೆಗೆ ಸೀರೆ ಉಟ್ಟು ಕುಪ್ಪಸ ತೊಟ್ಟ ಹೆಂಗಸಿನ ಒಂದೇ ಒಂದು ಚಿತ್ರ ಇಲ್ಲ! ಯಾಕೆಂದರೆ ಈಗಿನ ಸೀರೆ ಉಡುವ ಶೈಲಿಯೂ ಭಾರತ ಮೂಲದ್ದು ಅಲ್ಲವೇ ಅಲ್ಲ. ಗ್ರೀಕ್ ಮತ್ತು ರೋಮನ್ ಶಿಲ್ಪಗಳಲ್ಲಿ ಗಂಡಸರು ನಮ್ಮ ಸೀರೆಯ ರೀತಿ ಬಟ್ಟೆ ಉಡುವ ಪದ್ಧತಿಯನ್ನು ತೋರಿಸಲಾಗಿದೆ! (ಗ್ರೀಕ್-ರೋಮನ್-ಈಜಿಪ್ಟ್ ಕಥೆ ಆಧಾರಿತ ಐತಿಹಾಸಿಕ ಚಲಚಿತ್ರಗಳನ್ನು ನೋಡಿ). ಆಗಿನ ಗ್ರೀಕ್-ರೋಮನ್-ಈಜಿಪ್ಟ್ ಹೆಂಗಸರು ಈಗಿನ ಶರಾರಾ-ಗಾಘ್ರಾ ಶೈಲಿಯ ಬಟ್ಟೆ ಉಡುತ್ತಿದ್ದರು. ಗೌತಮ ಬುದ್ಧನ ಗಾಂಧಾರ-ರೋಮನ್ ಶೈಲಿಯ ಶಿಲ್ಪಗಳಲ್ಲಿ ಈಗಿನ ಮಹಿಳೆಯರ ರೀತಿಯಲ್ಲಿ ಎಡಗಡೆಗೆ ಸೆರಗು ಹಾಕಿ ಬಟ್ಟೆಯಿಂದ ಸಂಪೂರ್ಣ ಮೈ ಮುಚ್ಚಿಕೊಂಡಿರುವ ಬುದ್ಧನ ಶಿಲ್ಪಗಳು ಇವೆ. ನಂತರ ಅದನ್ನು ಭಾರತೀಯ ಬೌದ್ಧ ಹೆಂಗಸರು ಅನುಕರಿಸಿರಬಹುದು. ಧೋತಿ-ವೇಸ್ಟಿ-ಮುಂಡು ಮಾತ್ರ ಭಾರತೀಯ ಗಂಡಸರ ಮೂಲ ಡ್ರೆಸ್. ಸೊಂಟದ ಮೇಲೆ ಗಂಡಸರು ಕೇವಲ ಶಾಲು ಹೊದ್ದುಕೊಳ್ಳುತ್ತಿದ್ದರು. ಅಂಗಿ-ಜುಬ್ಬ ಹೊಲಿಯುವ ಕಲೆಯೂ ಪರ್ಷಿಯಾದಿಂದ ಬಂದಿದ್ದು. ಪೈಜಾಮ-ಪೈರನ್-ಜುಬ್ಬ-ಶೇರ್ವಾನಿ ಈ ವಸ್ತ್ರಗಳು ಅವುಗಳ ಹೆಸರೇ ಸೂಚಿಸುವಂತೆ ಪರ್ಷಿಯನ್ ಮೂಲದವು. ಟೊಪ್ಪಿ-ಮುಂಡಾಸುಗಳ ಹೆಚ್ಚಿನ ವಿನ್ಯಾಸಗಳು ಅಫ್ಘಾನ್ ಮೂಲದವು. ಶರ್ಟ್-ಪ್ಯಾಂಟ್-ಹ್ಯಾಟ್ ಅಂತೂ ಬ್ರಿಟಿಷರು ತಂದಿದ್ದು. 19ನೇ ಶತಮಾನಕ್ಕೆ ಮುಂಚೆ ಯುರೋಪ್‌ನಲ್ಲಿ ಕೂಡ ಮೇಲ್ವರ್ಗದ ಕ್ರೈಸ್ತ ಮಹಿಳೆಯರು ಹೊರಗೆ ಹೋಗುವಾಗ ಕಡ್ಡಾಯವಾಗಿ ತಲೆಗೆ ಸ್ಕಾರ್ಫ್ ಕಟ್ಟಿಕೊಳ್ಳುವ ಪದ್ಧ್ದತಿ ಇತ್ತು. ಅರಿಸ್ಟ್ರೋಕ್ರೆಟಿಕ್ ಕುಟುಂಬದ ಮಹಿಳೆಯರು ತಮ್ಮ ಮೊಣಕಾಲು ಕಾಣದಂತೆ ಲಂಗ ಮಾದರಿಯ ಉದ್ದನೆಯ ಸ್ಕರ್ಟ್ ಅಥವಾ ಕಾಲುಚೀಲ ಉಡಲೇಬೇಕಿತ್ತು. ಮೊಣಕಾಲು ಕಾಣುವಂತೆ ಬಟ್ಟೆ ತೊಡುವವರನ್ನು ಇಂಗ್ಲೆಂಡ್‌ನಲ್ಲಿ ಪೀಜಂಟ್ (ಗಮಾರ, ಹಳ್ಳಿಗ) ಎಂದು ಹೀಯಾಳಿಸಲಾಗುತ್ತಿತ್ತು. ಆನಂತರ ವಿವಿಧ ಮಾದರಿಯ ಆಧುನಿಕ ಹ್ಯಾಟುಗಳು ಬಂದ ಮೇಲೆ ಯುರೋಪಿನ ಮೇಲ್ವರ್ಗದ ಮಹಿಳೆಯರು ಸ್ಕಾರ್ಫ್ ಧರಿಸುವುದನ್ನು ಬಿಟ್ಟು ಹ್ಯಾಟ್ ತೊಡಲು ಶುರು ಮಾಡಿದರು. ನಮ್ಮ ಗಾಂಧಿ ಟೋಪಿಸಹ ಜರ್ಮನ್ ನಾಝಿ ಮೂಲದ್ದು!

ನಮ್ಮ ಉತ್ತರ ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಹಿಂದೂ/ಜೈನ ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗೆಲ್ಲಾ ಈಗಲೂ ತಮ್ಮ ಸೆರಗಿನಿಂದಲೇ ತಲೆ ಮುಚ್ಚಿಕೊಳ್ಳುತ್ತಾರೆ. ಹಾಗಾಗಿ ಪೊಂಪೈ ಕಾಲೇಜಿನ ಹುಡುಗಿಯರೂ ಕೇಸರಿ ಶಾಲನ್ನು ಕೊರಳಿಗೆ ಸುತ್ತಿಕೊಳ್ಳುವ ಬದಲು ಅದರಿಂದ ತಲೆಯನ್ನು ಸಂಪೂರ್ಣ ಮುಚ್ಚಿಕೊಂಡರೆ ಅದಕ್ಕೊಂದು ಅರ್ಥವಿದೆ. ಗಂಡು ಹುಡುಗರೂ ಕ್ರೈಸ್ತ ದೇಶದ ಶರ್ಟ್-ಪ್ಯಾಂಟ್ ಬಿಟ್ಟು ಶುದ್ಧ ಭಾರತೀಯ ಮುಂಡು, ವೇಷ್ಟಿ ತೊಟ್ಟು ಶರ್ಟ್ ಹಾಕದೆ ಶಾಲು ಹೊದ್ದು ಮುಂಡಾಸು ತೊಟ್ಟು ಕಾಲೇಜಿಗೆ ಬರಬಹುದೇನೋ.

ಇನ್ನು ಕೇಸರಿ/ಕಾವಿ ಬಣ್ಣದ ಬಗ್ಗೆ ಹೇಳಬೇಕೆಂದರೆ, ಇದರ ಮೂಲ ಬೌದ್ಧ ಧರ್ಮದಲ್ಲಿದೆ. ಬುದ್ಧನಿಗಿಂತ ಮೊದಲು ಜೈನರು, ವೈದಿಕರು ಎಲ್ಲಾ ಸಂತರು, ಪುರೋಹಿತರು ಬಿಳಿ ಬಣ್ಣದ ಬಟ್ಟೆ ಮಾತ್ರ ತೊಡುತ್ತಿದ್ದರು. ಮೇಲಾಗಿ ಬಿಳಿ ಹತ್ತಿಯಿಂದ ಬಿಳಿ ಬಟ್ಟೆ ತಯಾರಿಸುವುದು ಸುಲಭವಾಗಿತ್ತು. ವೈದಿಕರು ಯಜ್ಞಯಾಗದ ಸಮಯದಲ್ಲಿ ಕೇವಲ ಬಿಳಿ ಬಟ್ಟೆ ಮಾತ್ರ ಉಡುತ್ತಿದ್ದರಂತೆ. ಕಾರಣ ಅದು ಪಾವಿತ್ರ್ಯತೆ ಮತ್ತು ಪರಿಶುದ್ಧತೆಯ ಪ್ರತೀಕವೆಂದು ನಂಬಲಾಗುತ್ತಿತ್ತು. ಕೇವಲ ಭಾರತ ಮಾತ್ರವಲ್ಲ ಯಹೂದೀ, ಕ್ರೈಸ್ತ, ಇಸ್ಲಾಂ ಧರ್ಮಗಳ ಸಂತರು, ಧರ್ಮಗುರುಗಳು, ಪುರೋಹಿತರು ಕೇವಲ ಬಿಳಿ ಬಟ್ಟೆ ಮಾತ್ರ ತೊಡುತ್ತಿದ್ದರು. ಬುದ್ಧ ಮತ್ತು ಅವನ ಶಿಷ್ಯರು ಭಿಕ್ಷುಗಳು ಮೊತ್ತ ಮೊದಲಿಗೆ ಕಾವಿ/ಕೇಸರಿ ಬಟ್ಟೆ ಉಡಲು ಶುರು ಮಾಡಿದ್ದು. ಕಾರಣ ಅದು ತ್ಯಾಗದ ಸಂಕೇತವಾಗಿತ್ತು. 2,100 ವರ್ಷಗಳ ಹಿಂದೆ ಪುಷ್ಯಮಿತ್ರ ಶುಂಗ ವಂಶದ ಆಡಳಿತ ಶುರುವಾದ ಮೇಲೆ ಬೌದ್ಧರನ್ನು ವೈದಿಕ ಧರ್ಮದಲ್ಲಿ ಬಲಾತ್ಕಾರದಿಂದ ಸಮ್ಮಿಳಿತಗೊಳಿಸಿದ ಮೇಲೆ ವೈದಿಕರೂ ಕಾವಿ ಉಡಲು ಶುರು ಮಾಡಿದ್ದು. ಹೀಗೆ ಮೂಲ ಬೌದ್ಧ ಧರ್ಮದ ತ್ಯಾಗದ ಪ್ರತೀಕವಾದ ಕಾವಿ ಬಣ್ಣ ಇಂದು ಸ್ವಾರ್ಥ, ದ್ವೇಷ ಮತ್ತು ಧಾರ್ಮಿಕ ತೀವ್ರವಾದದ ಸಂಕೇತವಾಗಿರುವುದು ಖೇದಕರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)