varthabharthi


ವಿಶೇಷ-ವರದಿಗಳು

ಆರೋಗ್ಯ ಸಹಾಯಕಿಯೊಬ್ಬರ ಆರೋಗ್ಯ ಕ್ರಾಂತಿ

ವಾರ್ತಾ ಭಾರತಿ : 19 Jan, 2022
ಮಲ್ಲಿಕಾರ್ಜುನ ಕಡಕೋಳ

ಆರೋಗ್ಯ ಸಹಾಯಕಿಯೊಬ್ಬರು ಶ್ರದ್ಧೆಯಿಂದ ಕೆಲಸ ಮಾಡಿದರೆ ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಬಲ್ಲರು ಎಂಬುವುದಕ್ಕೆ ಪ್ರಸ್ತುತ ಸುಮನಾ ಕ್ರಾಸ್ತರ ಕೆಲಸವೇ ಪ್ರತ್ಯಕ್ಷ ನಿದರ್ಶನ. ಬರೋಬ್ಬರಿ ಮೂರೂವರೆ ವರ್ಷಗಳ ಹಿಂದೆ ಸುಮನಾ ಕ್ರಾಸ್ತಾ ಆರೋಗ್ಯ ಸಹಾಯಕಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾರ್ನಬೈಲು ವ್ಯಾಪ್ತಿಯ ಸಜೀಪ ಮುನ್ನೂರು ಆರೋಗ್ಯ ಉಪಕೇಂದ್ರಕ್ಕೆ ವರ್ಗವಾಗಿ ಬಂದಾಗ ಹಾಳಾಗಿ ಹುಲ್ಲು ಪೊದೆಗಳು ಬೆಳೆದಿದ್ದ, ಖಾಲಿಬಿದ್ದ ಎರಡು ಕೊಳಕು ಕೋಣೆಗಳು. ಗಬ್ಬುನಾತ ಬೀರುವ ಅನಾರೋಗ್ಯದ ಉಪಕೇಂದ್ರ ಅದಾಗಿತ್ತು. ಹಾಗೆ ನೋಡಿದರೆ ಸರಕಾರದ ಬಹುಪಾಲು ಆರೋಗ್ಯ ಉಪಕೇಂದ್ರಗಳ ಪರಿಸ್ಥಿತಿ ಹೀಗೆಯೆೀ ಇರುವುದು ಸುಳ್ಳಲ್ಲ.

ಅಷ್ಟಕ್ಕೂ ಸರಕಾರ ಆರೋಗ್ಯ ಸಹಾಯಕಿ ಯರ ವಾಸಕ್ಕೆಂದು ಉಪಕೇಂದ್ರಗಳನ್ನು ಉಚಿತವಾಗಿ ಒದಗಿಸುತ್ತಿಲ್ಲ. ಪ್ರತಿತಿಂಗಳು ಅವರ ಮೂಲವೇತನದ ಶೇಕಡಾ ಹತ್ತರಷ್ಟು ಹಣವನ್ನು ಅವರ ಸಂಬಳದಿಂದ ಸರಕಾರ ಪಡೆಯುತ್ತದೆ. ಕನಿಷ್ಠವೆಂದರೂ ರೂ. ನಾಲ್ಕೈದು ಸಾವಿರದಿಂದ ಹತ್ತು ಸಾವಿರದವರೆಗೂ ಪ್ರತಿಯೊಬ್ಬ ಆರೋಗ್ಯ ಸಹಾಯಕಿ ಪ್ರತಿ ತಿಂಗಳು ಉಪಕೇಂದ್ರದ ಬಾಡಿಗೆ ಹಣವೆಂದು ಸರಕಾರಕ್ಕೆ ನೀಡುತ್ತಾರೆ.

ಉಪಕೇಂದ್ರದ ಪೂರ್ಣ ದುರಸ್ತಿಗಾಗಿ ಸರಕಾರ, ಇಲಾಖೆಗಳನ್ನೇ ನಂಬಿ ಕುಳಿತರೆ ಬೇಗ ಕೆಲಸವಾಗದೆಂಬ ಅರಿವು ಅವರಿಗಿತ್ತು. ಹಾಗಂತ ಇಲಾಖೆಯ ನೆರವು ಮತ್ತು ಸಹಕಾರ ನಿರಾಕರಿಸಲಿಲ್ಲ. ಅದರೊಂದಿಗೆ ಅತ್ಯಗತ್ಯವೆಂಬಂತೆ ಜನರ ಸಹಭಾಗಿತ್ವ ಪಡೆಯುವ ಸತ್ಸಂಕಲ್ಪಸುಮನಾ ಮಾಡುತ್ತಾರೆ. ಜನಪ್ರತಿನಿಧಿಗಳ ಅನುದಾನವೂ ಸೇರಿದಂತೆ ದಾನಿಗಳ ನೆರವಿನ ಮೂಲಕ ಆರೋಗ್ಯ ಉಪಕೇಂದ್ರದ ಪೂರ್ಣ ಚಿತ್ರಣವನ್ನೇ ಪವಾಡ ಸದೃಶದಂತೆ ಕಳೆದ ಲಾಕ್‌ಡೌನ್ ಅವಧಿಯಲ್ಲಿ ಬಲಿಸಿದ್ದಾರೆೆ.

ಚಿಕಿತ್ಸಾಲಯ ವಿಭಾಗ ಸೇರಿದಂತೆ ವಾಸದ ಕೋಣೆ, ಅಡುಗೆಕೋಣೆ, ನೀರು, ವಿದ್ಯುತ್, ಬಚ್ಚಲು, ಶೌಚಾಲಯ ಇತ್ಯಾದಿ ಯಾವುದೇ ಕನಿಷ್ಠ ಮೂಲ ಸೌಲಭ್ಯಗಳ ವಂಚಿತ ಸಜೀಪ ಮುನ್ನೂರು ಉಪಕೇಂದ್ರದ ಸ್ವರೂಪವೇ ಇಂದು ಸಂಪೂರ್ಣ ಬದಲಾವಣೆಗೊಂಡಿದೆ. ಅದೊಂದು ಸಕಾರಾತ್ಮಕ ಸ್ಥಿತ್ಯಂತರ. ಆರೋಗ್ಯಪೂರ್ಣ ಬೆಳವಣಿಗೆ. ಅದೀಗ ಪರಿಪೂರ್ಣ ಮತ್ತು ಮಾದರಿ ಆರೋಗ್ಯ ಉಪಕೇಂದ್ರವಾಗಿದೆ.

ಸುಮನಾ ಸಿಸ್ಟರ್ ಅವರ ಕಾಯಕನಿಷ್ಠೆಗೆ ದಕ್ಕಿದ ಜನಸ್ಪಂದನ ಅಮೋಘವಾದುದು. ಅದು ಸಮುದಾಯ ಕೈಂಕರ್ಯಕ್ಕೆ ದೊರೆತ ದಿವಿನಾದ ಫಲ. ಈ ಮಾತುಗಳನ್ನು ಸ್ಥಳೀಯರೇ ಹೇಳುತ್ತಾರೆ. ಆದರೆ ಸಾರ್ವಜನಿಕರು ತೋರಿದ ಸಹೃದಯ ಸಹಕಾರ ಅದಕ್ಕೆಲ್ಲ ಕಾರಣ ಎಂಬ ಸಜ್ಜನಿಕೆ ಸುಮನ ಕ್ರಾಸ್ತಾ ಅವರದ್ದು.

ಜೀರ್ಣಾವಸ್ಥೆಯ ವಾಸದ ಕೋಣೆ, ಅಡುಗೆ ಕೋಣೆ, ಕ್ಲಿನಿಕ್ ವಿಭಾಗ ದುರಸ್ತಿಗೊಂಡಿವೆ. ಉಪಕೇಂದ್ರ ಕಟ್ಟಡಕ್ಕೆ ಲಗತ್ತಾಗಿ ಚೆಂದದ ಮುಂಚಾವಣಿ ವಿಸ್ತರಣೆಗೊಂಡಿದೆ. ಸುತ್ತಲೂ ಕಂಪೌಂಡ್ ಗೋಡೆ, ಸುರಕ್ಷಿತ ಗೇಟ್ ನಿರ್ಮಾಣ, ವಿಶಾಲವಾದ ಗೋಡೆಗೆ ವರ್ಲಿ ಶೈಲಿಯ ಸುಂದರ ಕಲಾತ್ಮಕ ವರ್ಣಚಿತ್ರಗಳು. ಈ ವರ್ಣಚಿತ್ರಗಳ ಉಚಿತ ಕೊಡುಗೆ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾದ ತಾರಾನಾಥ ಕೈರಂಗಳ ಮತ್ತು ಅವರ ತಂಡದ್ದು. ತರಹೇವಾರಿ ಹೂ ಗಿಡಗಳು, ತೆಂಗು, ಹಲಸೆ, ಬಾಳೆ, ಮಾವು ಮುಂತಾದ ಗಿಡ ಮರಗಳ ಕಣ್ತಣಿಸುವ ಹಸಿರು.

ಸುಮಾರು ಹದಿನೈದು ಲಕ್ಷಗಳಷ್ಟು ಹಣದ ನೆರವಿನಿಂದ ಉಪಕೇಂದ್ರ ಸಂಪೂರ್ಣ ಸದೃಢಗೊಂಡಿದೆ. ಗ್ರಾಮ ಪಂಚಾಯತ್, ತಾ.ಪಂ. ಮತ್ತು ಜಿ.ಪಂ. ಸದಸ್ಯರ ಅನುದಾನ ಸೇರಿದಂತೆ ಸ್ಥಳೀಯ ಕೊಡುಗೈ ದಾನಿ ಡಾ. ಗೋಪಾಲಕೃಷ್ಣ ಆಚಾರ್ಯ ಅವರು ರೂ. ಆರು ಲಕ್ಷದಷ್ಟು ಹಣ ನೀಡಿದ್ದಾರೆ. ಆರೋಗ್ಯ ಸೇವೆಯ ಫಲಾನುಭವಿಗಳಿಗೆ ಈಗ ಸಜೀಪಮುನ್ನೂರು ಉಪಕೇಂದ್ರ ಸುಸ್ಥಿರ ಸ್ವಾಸ್ಥ್ಯತಾಣ ಮಾತ್ರವಲ್ಲ ಅದೊಂದು ನೆಮ್ಮದಿಯ ಮಿನಿ ಆರೋಗ್ಯಧಾಮ.

ಕಟ್ಟಡದ ಭೌತಿಕ ದುರಸ್ತಿ ಮಾತ್ರವಾಗಿದ್ದರೆ ಅಲ್ಲಿನ ಸಮಸ್ತ ಸಮುದಾಯಕ್ಕೆ ನಿರಂತರ ದೊರಕುತ್ತಿರುವ ಮೂಲಭೂತ ಆರೋಗ್ಯ ಸೇವೆಗಳು ನಿಜಕ್ಕೂ ಶ್ಲಾಘನೀಯ. ಪುಟ್ಟದಾದ ಆರೋಗ್ಯ ಉಪಕೇಂದ್ರದಲ್ಲಿ ಇ.ಸಿ.ಜಿ. ಟೆಲಿ ಕನ್ಸಲ್ಟೇಷನ್ ಯಂತ್ರ, ಹಿಮೋಗ್ಲೊಬಿನ್ ಪರೀಕ್ಷೆ ಉಪಕರಣ, ಮಧುಮೇಹ ಪರೀಕ್ಷೆ ಉಪಕರಣ, ರಕ್ತದೊತ್ತಡ ಪರೀಕ್ಷೆ ಉಪಕರಣಗಳು ಹೀಗೆ ಮೂಲಭೂತ ಮತ್ತು ಅಗತ್ಯ ಆರೋಗ್ಯ ಸೇವೆಗಳು ಅಲ್ಲಿ ದೊರಕುತ್ತವೆ. ಅಲ್ಲದೆ ಆರೋಗ್ಯ ಉಪಕೇಂದ್ರ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ. ಅದು ಸಹಿತ ಸ್ಥಳೀಯ ದಾನಿಗಳೊಬ್ಬರ ಉಡುಗೊರೆ. ಓರ್ವ ಆರೋಗ್ಯ ಸಹಾಯಕಿ ತನ್ನ ಸೇವಾಸಂಕಲ್ಪದಿಂದ ಸಾರ್ವಜನಿಕರ ಸಹಕಾರದೊಂದಿಗೆ ಹಳ್ಳಿಯೊಂದರ ಆರೋಗ್ಯ ಉಪಕೇಂದ್ರವೊಂದನ್ನು ಗರಿಷ್ಠ ಮಟ್ಟದಲ್ಲಿ ಮಾದರಿಯಾಗಿಸಬಲ್ಲರು ಎಂಬುದಕ್ಕೆ ಸುಮನಾ ಸಾಕ್ಷಿಯಾಗಿದ್ದಾರೆ.

ಸುಮನಾರ ಸೇವಾ ಸಂಕಲ್ಪ ಅಲ್ಲಿಗೆ ನಿಲ್ಲುವುದಿಲ್ಲ. ಉಪಕೇಂದ್ರ ವ್ತಾಪ್ತಿ ಪ್ರದೇಶಗಳಾದ ನಂದಾವರ, ಮಾರ್ನಬೈಲು, ಆಲಾಡಿ, ಮಲಯಬೆಟ್ಟು ಸ್ಥಳಗಳ 1,600 ಅಧಿಕ ಸಂಖ್ಯೆಯ ಪ್ರತಿಯೊಂದು ಮನೆಗೂ ಭೇಟಿ ನೀಡಿ ಕುಟುಂಬದ ಸಮಗ್ರ ಸ್ವಾಸ್ಥ್ಯ ಸಂರಕ್ಷಣೆ, ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರ ಆರೋಗ್ಯ, ಹದಿಹರೆಯದ ಮಕ್ಕಳ ಶಾಲಾ ಆರೋಗ್ಯ, ಶಿಕ್ಷಣ ಸೇರಿದಂತೆ ನಲವತ್ತಕ್ಕೂ ಅಧಿಕ ಸಂಖ್ಯೆಯ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಹಳ್ಳಿಯ ಮನೆಬಾಗಿಲಿಗೆ ಮುಟ್ಟಿಸುವ ಕೈಂಕರ್ಯ ಸುಮನಾ ಅವರದು.

ಅಲ್ಲದೆ ತನ್ನ ಉಪಕೇಂದ್ರ ವ್ಯಾಪ್ತಿಯ ಆರು ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಪ್ರತಿರೋಧಕ ಲಸಿಕೆ ನೀಡಿದ ಹೆಗ್ಗಳಿಕೆ ಸುಮನಾ ಕ್ರಾಸ್ತಾ ಅವರದು. ನೂರಾರು ಮಂದಿ ಕೊರೋನ ಪೀಡಿತರಿಗೆ ಆಪ್ತ ಸಮಾಲೋಚಕಿಯಾಗಿ ಆಕೆ ನೀಡುತ್ತಿರುವ ಆರೋಗ್ಯ ಶಿಕ್ಷಣಕ್ಕೆ ಮಾರು ಹೋಗದವರಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)