varthabharthi


ವಿಶೇಷ-ವರದಿಗಳು

ಉಪ್ಪಿನಕಾಯಿ ಯಶಸ್ಸಿನ ಹಿಂದೆ...

ವಾರ್ತಾ ಭಾರತಿ : 19 Jan, 2022
ಹಿಮಾಂಶು ನಿತ್ನಾವರೆ

ಇಬ್ಬರು ಸಹೋದರರಾದ ಸುರೇಶ್ ಮತ್ತು ಪ್ರಫುಲ್ ಸಾಂಘವಿ ಆರಂಭಿಸಿದ ಬಾಯಿ ಚಪ್ಪರಿಸುವ ಉಪ್ಪಿನಕಾಯಿ ಬ್ರಾಂಡ್ ನಿಲೋನ್ಸ್ ಇಂದು ಮನೆ ಮಾತಾಗಿದೆ. ಉಪ್ಪಿನಕಾಯಿ ಯಶಸ್ಸಿನ ಬಳಿಕ ಅವರು ಸಾಸ್‌ಗಳು, ಮಸಾಲೆಗಳು, ಪೇಸ್ಟ್‌ಗಳು ಹಾಗೂ ಇನ್ನೂ ಅನೇಕ ಉತ್ಪನ್ನಗಳನ್ನು ಹೊರತಂದರು. ಅವುಗಳೆಲ್ಲವೂ ಈಗ ಭಾರತ ಮತ್ತು ಇತರ 30 ದೇಶಗಳಲ್ಲಿ ಜನಪ್ರಿಯವಾಗಿವೆ.

ಇಂದು ಬಹುಕೋಟಿ ರೂಪಾಯಿ ಮೌಲ್ಯದ ಕಂಪೆನಿಯಾಗಿರುವ ಹಾಗೂ ಭಾರತದಾದ್ಯಂತ ತನ್ನ ಉಪಸ್ಥಿತಿಯನ್ನು ಹೊಂದಿರುವ ನಿಲೋನ್ಸ್ ಆರಂಭವಾಗಿದ್ದು ಸಣ್ಣ ಪ್ರಮಾಣದಲ್ಲಿ.

‘‘ನನ್ನ ತಂದೆ ಸುರೇಶ್ ಸಾಂಘವಿ ಮತ್ತು ದೊಡ್ಡಪ್ಪಪ್ರಫುಲ್ ಈ ಉಪ್ಪಿನಕಾಯಿ ಉದ್ಯಮವನ್ನು 1962ರಲ್ಲಿ ಮಹಾರಾಷ್ಟ್ರದ ಜಲಗಾಂವ್‌ನ ಉತ್ರಾನ್ ಗ್ರಾಮದ ಮನೆಯೊಂದರ ಅಡುಗೆ ಕೋಣೆಯಿಂದ ಆರಂಭಿಸಿದರು’’ ಎಂದು ಈಗ ಕಂಪೆನಿಯ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ದೀಪಕ್ ಹೇಳುತ್ತಾರೆ.

‘‘1962ರಲ್ಲಿ ನನ್ನ ತಂದೆ ಕೃಷಿಯಲ್ಲಿ ಪದವಿ ಪಡೆದರು. ಆದರೆ, ಅವರ ತಂದೆಯ ಅಕಾಲಿಕ ಸಾವಿನಿಂದಾಗಿ ಅವರ ಅಣ್ಣ ಪ್ರಫುಲ್‌ಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಅವರು ಕೃಷಿಯಲ್ಲಿ ತೊಡಗಿದರು. ಅದು ಅವರ ಏಕೈಕ ಆದಾಯದ ಮೂಲವಾಗಿತ್ತು. ಪದವಿಯಲ್ಲಿ ಕಲಿತ ಜ್ಞಾನವನ್ನು ಕೃಷಿ ಸಂಸ್ಕರಣೆಯಲ್ಲಿ ಬಳಸುವಂತೆ ಅವರು ನನ್ನ ತಂದೆಗೆ ಸೂಚಿಸಿದರು’’ ಎಂದು 44 ವರ್ಷದ ದೀಪಕ್ ಹೇಳಿದರು.

ದ್ವಿತೀಯ ಮಹಾಯುದ್ಧದ ಅವಧಿಯಲ್ಲಿ ಆಹಾರ ಸಂಸ್ಕರಣೆಯ ಅನುಭವ ಅವರಿಗೆ ಇತ್ತು ಹಾಗಾಗಿ, ಅದರ ಮೌಲ್ಯವನ್ನು ಅವರ ಕುಟುಂಬ ಅರ್ಥಮಾಡಿಕೊಂಡಿತ್ತು. ನಮ್ಮ ಕುಟುಂಬವು 1,500 ಎಕರೆ ನಿಂಬೆಹಣ್ಣಿನ ತೋಟವನ್ನು ಹೊಂದಿತ್ತು. ನಾವು ನಿಂಬೆ ಸಿರಪ್ ಮತ್ತು ಲಿಂಬೆ ಶರಬತ್ತನ್ನು ಬ್ರಿಟಿಷ್ ಮತ್ತು ಭಾರತೀಯ ಸೇನೆಗೆ ಪೂರೈಸುತ್ತಿದ್ದೆವು. ಅದು ಗಾಯಗೊಂಡ ಸೈನಿಕರಿಗೆ ರೋಗನಿರೋಧಕ ಶಕ್ತಿ ಮತ್ತು ಇತರ ಆರೋಗ್ಯ ಲಾಭಗಳನ್ನು ನೀಡುತ್ತಿತ್ತು. ನಾವು ಈ ಉತ್ಪನ್ನವನ್ನು ಗಮನಾರ್ಹ ಪ್ರಮಾಣದಲ್ಲಿ ರಫ್ತು ಮಾಡಿ ಸಾಕಷ್ಟು ಹಣವನ್ನೂ ಗಳಿಸಿದ್ದೆವು’’ ಎಂದು ಅವರು ಹೇಳಿದರು.

ಆದರೆ, ಜಮೀನು ಒಡೆತನಗಳ ಮೇಲೆ ನಿರ್ಬಂಧ ಹೇರುವುದಕ್ಕಾಗಿ 1961ರಲ್ಲಿ ಜಾರಿಗೆ ತರಲಾದ ಮಹಾರಾಷ್ಟ್ರ ಕೃಷಿ ಜಮೀನುಗಳ (ಒಡೆತನದ ಮೇಲೆ ನಿರ್ಬಂಧ) ಕಾಯ್ದೆಯಿಂದಾಗಿ ಅವರ ಕುಟುಂಬವು 90 ಶೇಕಡಕ್ಕೂ ಅಧಿಕ ಜಮೀನನ್ನು ಕಳೆದುಕೊಂಡಿತು. ಅವರು ಉಳಿದ ಜಮೀನಿನಲ್ಲೇ ಕೃಷಿ ಮುಂದುವರಿಸಿದರು. ಗ್ರಾಹಕರು ಇಷ್ಟ ಪಡುವಂತಹ ಸರಿಯಾದ ಮಿಶ್ರಣವನ್ನು ಪತ್ತೆ ಹಚ್ಚಲು ಸಾಧ್ಯವಾದರೆ ಉತ್ತಮ ವ್ಯಾಪಾರವನ್ನು ಮಾಡಲು ಸಾಧ್ಯ ಎನ್ನುವುದು ಅವರಿಗೆ ಗೊತ್ತಿತ್ತು.

ಹಾಗಾಗಿ, ಊಟದ ಟೇಬಲ್ ಅವರ ಪ್ರಯೋಗಾಲಯವಾಯಿತು. ಇಬ್ಬರು ಸಹೋದರರು ವಿವಿಧ ಉತ್ಪನ್ನಗಳನ್ನು ಪಡೆದು ಮಿಶ್ರ ಹಾಗೂ ಹೋಲಿಕೆ ಮಾಡಲು ಆರಂಭಿಸಿದರು. ಅವರು ವಿವಿಧ ಪದಾರ್ಥಗಳೊಂದಿಗೆ ಪ್ರಯೋಗ ಮಾಡಿದರು. ಸುರೇಶ್ ಕುಟುಂಬದ ಒಡೆತನದ ಹಣ್ಣಿನ ತೋಟಗಳಿಂದ ತಾಜಾ ಉತ್ಪನ್ನಗಳನ್ನು ತರುತ್ತಿದ್ದರು. ಅವರು ಅನಾನಸು, ಮಲ್ಬೆರಿ, ಮಾವಿನ ಹಣ್ಣು ಮತ್ತು ಇತರ ಹಣ್ಣುಗಳ ಸ್ಕ್ವಾಶ್ ತಯಾರಿಸಿದರು. ಬಳಿಕ ಅವರು ಜೆಲ್ಲಿ, ಜಾಮ್, ಕೆಚಪ್ ಮತ್ತು ಇತರ ಉತ್ಪನ್ನಗಳನ್ನು ಉತ್ಪಾದಿಸಲು ಆರಂಭಿಸಿದರು ಹಾಗೂ ‘ನಿಲೋನ್ಸ್’ ಎಂಬ ಬ್ರಾಂಡ್ ಹೆಸರಲ್ಲಿ ಮಾರಾಟ ಮಾಡಲು ಆರಂಭಿಸಿದರು.

ಆ ಸಮಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ನೈಲಾನ್ ಫೈಬರ್‌ನ ಹೆಸರನ್ನೇ ಅವರು ತಮ್ಮ ಬ್ರಾಂಡ್ ಆಗಿ ಆರಿಸಿದ್ದರು. ಅದು ಜಗತ್ತಿನ ಮೊದಲ ಮಾನವ ನಿರ್ಮಿತ ಫೈಬರ್ ಆಗಿತ್ತು. ಅದು ಜಗತ್ತಿನಾದ್ಯಂತ ಕೈಗಾರಿಕೆಗಳು ಮತ್ತು ಜನರ ಜೀವನಶೈಲಿಗಳಲ್ಲಿ ಕ್ರಾಂತಿ ಉಂಟು ಮಾಡಿತ್ತು.

ಹೀಗೆ ಅವರಿಬ್ಬರು ತಮ್ಮ ಕಾರಿನಲ್ಲಿ ಹೊಸತಾಗಿ ತಯಾರಿಸಿದ ಉತ್ಪನ್ನಗಳನ್ನು ತುಂಬಿಸಿಕೊಂಡು ಗ್ರಾಹಕರನ್ನು ಹುಡುಕಿಕೊಂಡು ಹೊರಟರು. ಆದರೆ, ಅವರಿಗೆ ಸಿಕ್ಕಿದ ಪ್ರತಿಕ್ರಿಯೆ ಸಾಧಾರಣವಾಗಿತ್ತು. ಅವರ ವ್ಯಾಪಾರ ಏಳಿಗೆ ಕಾಣಲಿಲ್ಲ.

‘‘ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ನನ್ನ ತಂದೆ ಸುಮಾರು 50 ಉತ್ಪನ್ನಗಳನ್ನು ತಯಾರಿಸಿದರು’’ ಎಂದು ದೀಪಕ್ ಹೇಳುತ್ತಾರೆ. ಅವುಗಳ ಪೈಕಿ ಕೆಲವಾದರೂ ಯಶಸ್ವಿಯಾಗಬಹುದು ಎನ್ನುವುದು ಅವರ ನಿರೀಕ್ಷೆಯಾಗಿತ್ತು. ಹಲವು ವರ್ಷಗಳು ನಷ್ಟ ಅನುಭವಿಸಿದ ಬಳಿಕ, 1965ರಲ್ಲಿ, ಉದ್ಯಮವನ್ನು ಮುಚ್ಚುವ ಬಗ್ಗೆ ಪರಿಶೀಲಿಸೋಣವೇ ಎಂಬುದಾಗಿ ಪ್ರಫುಲ್, ಸುರೇಶ್‌ರನ್ನು ಕೇಳಿದರು. ಆದರೆ, ಸುರೇಶ್‌ರ ನಿಲುವು ಅಚಲವಾಗಿತ್ತು: ಯಾವ ಉದ್ಯಮದಲ್ಲಿ ಹೂಡಿಕೆ ಮಾಡಲಾಗಿದೆಯೋ ಅದೇ ಉದ್ಯಮವು ನಷ್ಟವನ್ನು ತುಂಬುತ್ತದೆ’’ ಎಂಬುದನ್ನು ಅವರು ದೃಢವಾಗಿ ನಂಬಿದ್ದರು. ‘‘ಇನ್ನೊಂದು ಉದ್ಯಮವನ್ನು ಪರಿಗಣಿಸುವ ಪ್ರಶ್ನೆಯೇ ಇಲ್ಲ’’ ಎನ್ನುವುದು ಸುರೇಶ್‌ರ ಉತ್ತರವಾಗಿತ್ತು.

1966ರಲ್ಲಿ, ಅವರು ತಮ್ಮ ಉತ್ಪನ್ನಗಳ ಪಟ್ಟಿಗೆ ಮನೆಯಲ್ಲಿ ತಯಾರಾದ ಉಪ್ಪಿನಕಾಯಿಯನ್ನು ಸೇರ್ಪಡೆಗೊಳಿಸಿದಾಗ ಪರಿಸ್ಥಿತಿ ಬದಲಾಯಿತು.
ಆ ವರ್ಷಗಳಲ್ಲಿ, ಸೇನಾ ಕ್ಯಾಂಟೀನ್‌ಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರುವುದಕ್ಕಾಗಿ ಸರಕಾರವು ಕಂಪೆನಿಗಳಿಂದ ಟೆಂಡರ್‌ಗಳನ್ನು ಆಹ್ವಾನಿಸುತ್ತಿತ್ತು. ಹಾಗಾಗಿ, ಸಹೋದರರು ಎಲ್ಲ ನಾಲ್ಕು ವಿಧದ ಉಪ್ಪಿನಕಾಯಿಗಳಿಗಾಗಿ ಟೆಂಡರ್ ಸಲ್ಲಿಸಿದರು. ನಾಲ್ಕು ಮಾದರಿಯ ಉಪ್ಪಿನಕಾಯಿಗಳೆಂದರೆ: ಮೆಣಸು, ಮಾವು, ಮಿಶ್ರ ಮತ್ತು ನಿಂಬೆ. ಉದ್ಯಮವು ಸಣ್ಣ ಮಟ್ಟದಲ್ಲಿದ್ದುದರಿಂದ ಅತ್ಯಂತ ಸ್ಪರ್ಧಾತ್ಮಕವಾಗಿ ದರವನ್ನು ಸೂಚಿಸಲಾಯಿತು. ಅದೃಷ್ಟವಶಾತ್, ಅವರಿಗೆ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಎಲ್ಲ ನಾಲ್ಕು ಗುತ್ತಿಗೆಗಳು ಲಭಿಸಿದವು ಎಂದು ದೀಪಕ್ ಹೇಳಿದರು.
ಆದರೆ, ಈ ಗುತ್ತಿಗೆಯು ಅವರಿಗೆ ದೊಡ್ಡ ಸವಾಲನ್ನು ಒಡ್ಡಿತು. ಅವರು ಈವರೆಗೆ ದೊಡ್ಡ ಕಾರ್ಖಾನೆಯನ್ನು ಹೊಂದಿರಲಿಲ್ಲ. ಹಾಗಾಗಿ, ಅವರು ಸಾಲ ಪಡೆದು ತಕ್ಷಣ 7,000 ಚದರ ಅಡಿ ವಿಸ್ತೀರ್ಣದಲ್ಲಿ ಕಾರ್ಖಾನೆಯೊಂದನ್ನು ನಿರ್ಮಿಸಿದರು. ಅದರಲ್ಲಿ ಉಪ್ಪಿನಕಾಯಿಯನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಲು ಆರಂಭಿಸಿದರು. 1969-70ರ ವೇಳೆಗೆ, ಅವರ ಕಂಪೆನಿಯ ಒಟ್ಟು ಮಾರಾಟದಲ್ಲಿ ನಿಲೋನ್ಸ್ ಉಪ್ಪಿನಕಾಯಿಯ ಭಾಗ ಶೇ. 95 ಆಗಿತ್ತು. ಅಂದಿನಿಂದ ಕಂಪೆನಿಯು ಹಿಂದಿರುಗಿ ನೋಡಲಿಲ್ಲ.

ಕೃಪೆ: thebetterindia.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)