varthabharthi


ಅಂತಾರಾಷ್ಟ್ರೀಯ

ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿಯ ಮೃತದೇಹ ಗೋಣಿಚೀಲದಲ್ಲಿ ಪತ್ತೆ

ವಾರ್ತಾ ಭಾರತಿ : 19 Jan, 2022

ನಟಿ ರೈಮಾ ಇಸ್ಲಾಂ (Photo: shethepeople.tv)

ಢಾಕಾ: ಆಘಾತಕಾರಿ ಘಟನೆಯೊಂದರಲ್ಲಿ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು ಅವರ ಮೃತದೇಹವು ಢಾಕಾದ ಕೆರಾನಿಗಂಜ್ ಪ್ರದೇಶದ ಸೇತುವೆಯ ಸಮೀಪ ಗೋಣಿಚೀಲದಲ್ಲಿ ಪತ್ತೆಯಾಗಿದೆ.

ಪೊಲೀಸರ ಪ್ರಕಾರ, ಸೋಮವಾರ ಬೆಳಗ್ಗೆ ಅಲಿಪುರ ಸೇತುವೆ ಬಳಿ ಮೃತದೇಹವಿರುವ ಬಗ್ಗೆ ಕೆಲವು ಸ್ಥಳೀಯರು ತಿಳಿಸಿದ್ದಾರೆ. ಮೃತದೇಹದಲ್ಲಿ ಹಲವು ಗಾಯದ ಗುರುತುಗಳಿದ್ದ ಕಾರಣ ನಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

ಮೃತದೇಹ ಪತ್ತೆಯಾದ ಬಳಿಕ ಕಲಬಾಗನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ ರೈಮಾ ಅವರ ಪತಿ ಶಖಾವತ್ ಅಲಿ ಹಾಗೂ ಆತನ ಚಾಲಕನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ರೈಮಾಳ ಪತಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಕೊಲೆಯ ಉದ್ದೇಶವು ಇನ್ನೂ ಸ್ಪಷ್ಟವಾಗಿಲ್ಲ. ರೈಮಾ ಪತಿ ಶಖಾವತ್ ಅಲಿ  3 ದಿನಗಳ ರಿಮಾಂಡ್‌ನಲ್ಲಿದ್ದಾನೆ ಎಂದು ವರದಿಯಾಗಿದೆ.

ಏತನ್ಮಧ್ಯೆ, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

ರೈಮಾ ಬಾಂಗ್ಲಾದೇಶದ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿದ್ದರು. ನಟಿ 1998 ರಲ್ಲಿ 'ಬರ್ತಮನ್' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದರು. ಆ ನಂತರ 25 ಚಲನಚಿತ್ರಗಳು ಹಾಗೂ ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು