ಕರ್ನಾಟಕ
ನಾರಾಯಣ ಗುರುಗಳ ಸ್ತಬ್ಧಚಿತ್ರ ವಿಚಾರ; ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ನಾಯಕರಿಂದ ಹೇಳಿಕೆ: ಸಚಿವ ಸುನೀಲ್‍ಕುಮಾರ್

ಬೆಂಗಳೂರು, ಜ. 19: `ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇರಳ ಕಳುಹಿಸಿದೆ ಎಂಬ ಕಾರಣಕ್ಕೆ ಕೇಂದ್ರ ಸರಕಾರ ತಿರಸ್ಕರಿಸಿಲ್ಲ. ನಾರಾಯಣ ಗುರುಗಳ ವಿಷಯದಲ್ಲಿ ಪ್ರಧಾನಿ ಮೋದಿಯವರಿಗೆ ಮತ್ತು ಬಿಜೆಪಿಗೆ ಅತಿ ಹೆಚ್ಚು ಗೌರವವಿದೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಪ್ರಧಾನಿಯಾದ ಬಳಿಕ 2015ರ ಡಿಸೆಂಬರ್ 15ರಂದು ನಾರಾಯಣ ಗುರುಗಳ ಸಂಕಲ್ಪ ಕೇಂದ್ರವಾದ ಶಿವಗಿರಿಗೆ ಮೋದಿಯವರು ಭೇಟಿ ಕೊಟ್ಟಿದ್ದರು. `ಒಂದು ಕಾಲದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಕೇರಳದಲ್ಲಿ ಮೇಲು-ಕೀಳು, ಜಾತಿ-ಧರ್ಮಗಳ ತಾರತಮ್ಯದ ನೆಲೆವೀಡಾಗಿದ್ದ ನೆಲದಲ್ಲಿ, ನಾರಾಯಣ ಗುರುಗಳು ತಂದ ಸಾಮಾಜಿಕ ಪರಿವರ್ತನೆಯಿಂದಾಗಿ ಕೇರಳವಿಂದು ಸಮಾನತೆಯ ಸಂದೇಶ ಸಾರುವ ನಾಡಾಗಿದೆ. ನಾರಾಯಣ ಗುರುಗಳ ಆದರ್ಶವು ಜಗತ್ತಿಗೇ ಬೆಳಕು ನೀಡಬಲ್ಲದು' ಎಂದು ಹೇಳಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ ಅನಾವರಣ ಮಾಡಿದ್ದರು ಎಂದು ಅವರು ಸ್ಮರಿಸಿದ್ದಾರೆ.
ಈ ಹಿಂದೆ ಯಾವ ಕಮ್ಯೂನಿಸ್ಟ್ ಪಾರ್ಟಿ ನಾರಾಯಣ ಗುರುಗಳ ಮೂರ್ತಿಯನ್ನು ಭಗ್ನಗೊಳಿಸಿತ್ತೋ ಅವರೇ ಈಗ ರಾಜಕೀಯ ಕಾರಣಕ್ಕಾಗಿ ನಾರಾಯಣ ಗುರುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಪೂರ್ಣ ವಿಷಯ ತಿಳಿದು ಹೇಳಿಕೆ ನೀಡಬೇಕು. ಅದನ್ನು ಬಿಟ್ಟು ಬೆಂಕಿ ಹಚ್ಚುವ ಕೆಲಸ ಮಾಡುವುದು ಸರಿಯಲ್ಲ. ರಾಜ್ಯದಲ್ಲಿರುವ ನಾರಾಯಣ ಗುರುಗಳ ಭಕ್ತರ ಮತ್ತು ಅನುಯಾಯಿಗಳಿಗೆ ತಪ್ಪು ಸಂದೇಶ ನೀಡಲಾಗಿದೆ ಎಂದು ಸುನೀಲ್ ಕುಮಾರ್ ಆಕ್ಷೇಪಿಸಿದ್ದಾರೆ.
ಸುದ್ದಿಯ ಸತ್ಯಾಸತ್ಯತೆ ತಿಳಿಯುವ ಮೊದಲೇ ಇದರ ವಿರುದ್ಧ ತಪ್ಪು ಮಾಹಿತಿ ನೀಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲು ರಕ್ಷಣಾ ಸಚಿವಾಲಯದ ಪರಿಣತರ ಸಮಿತಿ ಇದೆ. ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿ ಶಂಕರಾಚಾರ್ಯರ ಸ್ತಬ್ಧಚಿತ್ರವನ್ನು ಕಳುಹಿಸುವಂತೆ ಕೇಂದ್ರ ಹೇಳಿದೆ ಎಂಬುದು ಶುದ್ಧ ಸುಳ್ಳು. ಸಿದ್ದರಾಮಯ್ಯ ಕೊಳಕು ರಾಜಕೀಯ ಷಡ್ಯಂತ್ರವನ್ನು ಮಾಡುತ್ತಿದ್ದಾರೆ ಎಂದಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರಕಾರವು ಶಂಕರಾಚಾರ್ಯರ ಸ್ತಬ್ಧಚಿತ್ರ ಕಳುಹಿಸಲು ಸೂಚಿಸಿದೆ ಎನ್ನುವುದು ಸುಳ್ಳು. ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸುವ ಸ್ತಬ್ಧಚಿತ್ರ ಮೆರವಣಿಗೆಗೆ ಕೆಲವು ಅಲಿಖಿತ ನಿಯಮಗಳಿವೆ. ಕೇರಳ ಸರಕಾರವು ಈಗಾಗಲೇ ಒಮ್ಮೆ ಸ್ತಬ್ಧಚಿತ್ರ ನೀಡಿದೆ. ಇತರ ರಾಜ್ಯಗಳಿಗೆ ಅವಕಾಶ ನೀಡಬೇಕು. ಅಲ್ಲದೆ, ಸ್ತಬ್ಧಚಿತ್ರದ ಕೆಲವು ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಈ ಕಾರಣಕ್ಕೆ ಕೇರಳದ ಸ್ತಬ್ಧಚಿತ್ರ ಬೇಡ ಎಂದು ತಿಳಿಸಿದೆ ಎಂದು ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ಸ್ಪಷ್ಟಣೆ ನೀಡಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ