varthabharthi


ಅನುಗಾಲ

ಚಂಪಾ ನೆನಪುಗಳು

ವಾರ್ತಾ ಭಾರತಿ : 20 Jan, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ವ್ಯವಸ್ಥೆಯ ರಾಜಕಾರಣದ ವಿರುದ್ಧ ಅವರು ಸ್ಪಂದಿಸುತ್ತಿದ್ದ ವೈಖರಿ ಒಂದು ರೀತಿಯಲ್ಲಿ ಅವರು ಕನ್ನಡ ಸಾಹಿತ್ಯದ ಪ್ರತಿಪಕ್ಷ ನಾಯಕರಂತೆ ಚಿತ್ರಿಸಿತ್ತು. ಮೈಸೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಪಡೆದರೂ ಅದನ್ನು ಕನ್ನಡ ಸಾಹಿತ್ಯದ ಮೈಲಿಗಲ್ಲೆಂದು ಹೇಳಿಕೊಂಡು ಅವರು ಸುತ್ತಲಿಲ್ಲ. ಪ್ರಾಯಶಃ ಅವರ ಅನೇಕ ಓದುಗರು ಅವರ ಸಾಹಿತ್ಯಕ್ಕಿಂತ ಅವರ ಈ ಚಳವಳಿಯ ಮುಖವನ್ನೇ ಹೆಚ್ಚು ಹೆಚ್ಚು ಕಾಣುತ್ತಿದ್ದುದರಿಂದ ಅವರ ಸಾಹಿತ್ಯಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ; ಪಂಪ ಪ್ರಶಸ್ತಿ ಸಿಕ್ಕಿದರೂ ಅವರ ಪ್ರತಿಭೆಗೆ, ವಿದ್ವತ್ತಿಗೆ, ಹಿರಿತನಕ್ಕೆ, ತಕ್ಕುದಾದ ಗಂಭೀರವಾದ ವಿಮರ್ಶೆ ಅವರಿಗೆ ಇನ್ನೂ ಲಭಿಸಿಲ್ಲ.



ಆವತ್ತು ಮಂಗಳವಾರ. ಜನವರಿ 10, 2022. ಬೆಳಗ್ಗೆಯೇ ಚಂಪಾ ತೀರಿಕೊಂಡ ಸುದ್ದಿ ಪ್ರಕಟವಾಯಿತು. ಬೆಂಗಳೂರಿಗೆ ದೂರವೆಂದು ಹೇಳಬಹುದಾದ ಮಡಿಕೇರಿಯಲ್ಲಿರುವ ನಾನು ಅವರ ಕೊನೆಯ ದರ್ಶನಕ್ಕೆ ಹೋಗುವುದು ಅಸಾಧ್ಯವೆಂದೇ ಅರಿತೆ. (ಈಗೀಗ ಬೆಂಗಳೂರಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಬರುವವರನ್ನು ‘ದೂರದ ...ದಿಂದ ಬಂದಿದ್ದಾರೆ’ ಎಂದು ಪರಿಚಯಿಸುತ್ತಾರೆ!) ಆ ದಿನವೆಲ್ಲ ಸಾಮಾಜಿಕ ಜಾಲತಾಣದಲ್ಲಿ, ಮರುದಿನದ ಪತ್ರಿಕೆಗಳಲ್ಲಿ ಅವರದೇ ಸುದ್ದಿ. ಟಿವಿ ಚಾನೆಲ್‌ಗಳಲ್ಲೂ ಅವರ ಕುರಿತೇ ಸುದ್ದಿ ಪ್ರಕಟವಾಯಿತೆಂದು ಕೇಳಿದೆ. (ನಾನು ಕೇಬಲ್ ಸಂಪರ್ಕ ಹಾಕಿಸಿಕೊಂಡಿಲ್ಲದ ಕಾರಣ ನನಗದು ಸಿಕ್ಕುವುದಿಲ್ಲ.) ಗುರುವಾರ ನನ್ನ ಈ ಅಂಕಣ ಪ್ರಕಟವಾಗುವುದು ಮತ್ತು ನನಗೆ ಚಂಪಾ ಕುರಿತ ಸ್ನೇಹ ಮತ್ತು ಅಭಿಮಾನದ ಪರಿಚಯವಿದ್ದ ಒಂದಷ್ಟು ಗೆಳೆಯರು, ಪರಿಚಿತರು ‘‘ಈ ಬಾರಿ ಚಂಪಾ ಅವರ ಕುರಿತು ನಿಮ್ಮ ಅಂಕಣವಾ?’’ ಎಂದು ಕೇಳಿದರು. ‘‘ಅವರ ಬಗ್ಗೆ ಬರಿ ಮಾರಾಯಾ’’ ಎಂದವರೂ ಇದ್ದರು. ನಾನು ಸಾಮಾನ್ಯವಾಗಿ ಯಾರೇ ಆಪ್ತರು ಸತ್ತರೂ ತಕ್ಷಣ ಪ್ರತಿಕ್ರಿಯಿಸಲು ಸಾಧ್ಯವಾಗದ ಮನಸ್ಥಿತಿಯವನು; ಅಥವಾ ಅಂತಹ ಮನಸ್ಥಿತಿಯನ್ನು ಬೆಳೆಸಿಕೊಂಡವನು. ಸುಮ್ಮನೆ ನೆನಪುಗಳನ್ನು ಮೆಲುಕು ಹಾಕುತ್ತ ಒಂದು ರೀತಿಯ ಖಾಲಿತನವನ್ನು ಅನುಭವಿಸುವವನು. ಬಿಡುವಿಲ್ಲದ ಕೋರ್ಟು ಕೆಲಸವಿರುವುದರಿಂದ ಸಿಎಲ್ ಹಾಕಿ ಅಳುವುದಕ್ಕೂ ಅವಕಾಶವಿಲ್ಲ. ಅಂಥದ್ದರಲ್ಲಿ ಲೇಖನ ಬರೆಯುವ ಪ್ರಶ್ನೆಯೇ ಇರುವುದಿಲ್ಲ. ‘‘ಅವರ ಬಗ್ಗೆ ಬರೀಬೇಕು, ಈಗಲ್ಲ’’ ಎಂದೆ. (ಈ ಅವಧಿಯಲ್ಲಿ ಸಾಕಷ್ಟು ಲೇಖನಗಳು ಬಂದಿದ್ದವು.) ಶ್ರದ್ಧಾಂಜಲಿಗೂ ಎಷ್ಟೊಂದು ಅವಸರ!

ಇರಲಿ. ಚಂಪಾ ಅವರಿಗೆ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಜರುಗಿತು. ಪ್ರಾಯಶಃ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹೀಗೆ ಸರಕಾರದ ಅಧಿಕೃತ ಸ್ಥಾನಮಾನಗಳನ್ನು ಪಡೆದಿದ್ದರಿಂದ ಈ ನಮಸ್ಕಾರ ಸಿಕ್ಕಿರಬೇಕು. ಅಗಲಿಕೆಯ ಗೌಜಿ ಈಗ ಕಡಿಮೆಯಾಗಿದೆ. ಅವರ ಕುಟುಂಬದವರಷ್ಟೇ ಇನ್ನು ಅವರ ನೆನಪನ್ನು ಹೊತ್ತು ಸಾಗುವವರು. ಉಳಿದವರಿಗೆ ಅವರ ನೆನಪಿರುತ್ತದೆ: ಎಲ್ಲ ಅಗಲಿದ ಪೂರ್ವಸೂರಿಗಳ ನೆನಪಿನ ಹಾಗೆ. ಚಂಪಾ, ಗಿರಡ್ಡಿ, ಪಟ್ಟಣಶೆಟ್ಟಿ ಸೇರಿ ‘ಸಂಕ್ರಮಣ’ ಸಾಹಿತ್ಯ ನಿಯತಕಾಲಿಕವನ್ನು ಆರಂಭಿಸಿದ ಕೆಲವು ವರ್ಷಗಳ ಅನಂತರ ಚಂಪಾ ಒಬ್ಬರೇ ಅದನ್ನು ಮುನ್ನಡೆಸಿದರು. ಈ ‘ಸಂಕ್ರಮಣ’ ಕಾಲದಿಂದ ನನಗೆ ಚಂಪಾ ಪರಿಚಯ. ಅವರ ಕವಿತೆಗಳನ್ನು, ನಾಟಕಗಳನ್ನು 1960-70ರ ದಶಕದಿಂದ, ನವ್ಯದ ಉಚ್ಛ್ರಾಯ ಸ್ಥಿತಿಯಲ್ಲಿ ಓದುತ್ತಿದ್ದವನು. ಬಂಡಾಯದ ಧ್ವನಿ ಆಗ ಟಿಸಿಲೊಡೆದಿತ್ತು. ಅವರು ಬಂಡಾಯದ ನಾಯಕರಲ್ಲೊಬ್ಬರು. ನನ್ನ ಪದ್ಯಗಳೂ ಅವರ ಸಂಕ್ರಮಣದಲ್ಲಿ ಪ್ರಕಟವಾಗಿದ್ದವು. ಅವರದೇ ಪದಗಳನ್ನು ಬಳಸುವುದಾದರೆ ‘ಡಾನ್’. ಗೋಕಾಕ್ ಚಳವಳಿಯಲ್ಲಿ ಅವರು ವಹಿಸಿದ ಪಾತ್ರವು ಅವರನ್ನು ಕನ್ನಡ ಸಾಹಿತ್ಯ ಮತ್ತು ಭಾಷೆಯ ದೃಷ್ಟಿಯಿಂದ ಐತಿಹಾಸಿಕವಾಗಿಸಿತು. (ಅವರು ಆಂಗ್ಲ ಪ್ರಾಧ್ಯಾಪಕರು; ಭಾಷಾ ಶಾಸ್ತ್ರದಲ್ಲಿ ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದವರು. ಹಾಗೆಂದು ವಿದ್ವಾಂಸರ ಪೊಳ್ಳು ಠೀವಿಯನ್ನು ಯಾವತ್ತೂ ಧರಿಸಿದವರಲ್ಲ.) 1975ರ ತುರ್ತು ಪರಿಸ್ಥಿತಿಯಲ್ಲಿ ಅವರು ದಸ್ತಗಿರಿಯಾದರೆಂಬ ಸುದ್ದಿಯೊಂದಿಗೆ ನನ್ನಂತಹ ಕಿರಿಯರಿಗೆ ಅವರೊಬ್ಬ ಮಹಾನ್ ಕ್ರಾಂತಿಕಾರಿಯಾಗಿ ಕಂಡರು. ಅವರು ಈ ಕುರಿತು 26 ಹಗಲು 25 ರಾತ್ರಿ ಎಂಬ ಪುಸ್ತಕವನ್ನೂ ತಂದಿದ್ದರು. ಕನ್ನಡದ ಹಿರಿಯ ಸಾಹಿತಿಯೊಬ್ಬರು ತಾನು ದಸ್ತಗಿರಿಯಾಗುವ ನಿರೀಕ್ಷೆಯಿಂದ ಸೂಟ್‌ಕೇಸು ಸಿದ್ಧಪಡಿಸಿಟ್ಟದ್ದಾಗಿ ಹೇಳಿದ ಸಂದರ್ಭ ಅದು. ಆದರೆ ಅವರು ಜೈಲು ಸೇರಲಿಲ್ಲ.

ಕನ್ನಡದ ಸಾಹಿತಿಗಳ ಆಷಾಢಭೂತಿತನವನ್ನು ಜನಸಾಮಾನ್ಯ ಸಾಹಿತ್ಯಾಭಿಮಾನಿಗಳು, ಸಾಹಿತ್ಯಾಸಕ್ತರು ಅರ್ಥಮಾಡಿಕೊಳ್ಳಲು ಈ ಅವಧಿ ಒಂದು ಸಂದರ್ಭವನ್ನು ಸೃಷ್ಟಿಸಿತು. ಮುಖ್ಯವಾಗಿ ‘ಸಂಕ್ರಮಣ’ದ ಮೂಲಕ ಅವರು ದೊಡ್ಡ ದೊಡ್ಡ ಮಾತು ಬೆಲೂನು ಹಿಗ್ಗುವಾಗೆಲ್ಲ ನಿಜದ ಸೂಜಿಮೊನೆ ತಾಗಿಸಿದರು. 1979ರಲ್ಲಿ ಮಡಿಕೇರಿಯಲ್ಲಿ ನಾವೊಂದಷ್ಟು ಗೆಳೆಯರು ಕನ್ನಡ ಸಾಹಿತ್ಯ ಪರಿಷತ್ತಿಗೆ ಸೆಡ್ಡೊಡೆದು ‘ಬಂಡಾಯ ಸಾಹಿತ್ಯ ಸಮ್ಮೇಳನ’ವನ್ನು ನಡೆಸಿದ್ದೆವು. ಅದು ನಮ್ಮ ಮಾನಾಪಮಾನದ ಪ್ರಶ್ನೆಯೂ ಆಗಿತ್ತು. ಹೀಗಾಗಿ ನಾವು ‘ಬಂಡಾಯ ಮಠದ ಎಲ್ಲ ಪೀಠಾಧೀಶರನ್ನೂ’ (ಇವೂ ಚಂಪಾ ಪದಗಳೇ!) ಕೃಷ್ಣಪ್ಪ, ದೇವನೂರು, ಸಿದ್ದಲಿಂಗಯ್ಯ, ಕೀರಂ, ಡಿ.ಆರ್., ವಾಲಿಕಾರ, ಚಂಪಾ ಮುಂತಾದ (ಇನ್ನೂ ಅನೇಕ ಅತಿರಥ ಮಹಾರಥರಿದ್ದರು. ಎಲ್ಲ ಹೆಸರುಗಳು ತಕ್ಷಣಕ್ಕೆ ನೆನಪಾಗುತ್ತಿಲ್ಲ.) ನಾಡಿನ ಪ್ರಖ್ಯಾತ ಸಾಹಿತಿಗಳನ್ನು, ಚಳವಳಿಗಾರರನ್ನು ಆಹ್ವಾನಿಸಿದ್ದೆವು. ಎಲ್ಲರೂ ಬಂದಿದ್ದರು ಕೂಡಾ. 2 ದಿನಗಳ ಈ ಸಮ್ಮೇಳನದ ಸಮಾರೋಪ ಭಾಷಣವನ್ನು ಚಂಪಾ ಬಹಳ ಪರಿಣಾಮಕಾರಿಯಾಗಿ ಮಾಡಿದ್ದರು. ‘ಸಂಕ್ರಮಣ’ದ ಚಾಟಿಯೇಟಿನ ಮಾತುಗಳಿಗೂ ಆ ದಿನ ಅವರು ಮಾಡಿದ ಸೈದ್ಧಾಂತಿಕ, ಗಂಭೀರ ಭಾಷಣಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಚಂಪಾರನ್ನು ಭೇಟಿಯಾಗುವ ಅವಕಾಶಗಳು ಹೆಚ್ಚು ಇರಲಿಲ್ಲ. ಈಗಿನಷ್ಟು ರಾಜ್ಯವ್ಯಾಪಿ ಬಸ್ ಪ್ರಯಾಣದ ಸೌಕರ್ಯಗಳೂ ಇರಲಿಲ್ಲ. ಮೇಲಾಗಿ ನನ್ನ ಹೊಟ್ಟೆಪಾಡಿನ ವಕೀಲ ವೃತ್ತಿಯ ಸಮಯನಿಬಿಡತೆ ಬೇರೆ. ಆದ್ದರಿಂದ ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ನಾನು ಭಾಗಿಯಾಗುತ್ತಿರಲಿಲ್ಲ. ಆದರೆ ಅವರ ಬರಹಗಳ ಮೂಲಕ ಮತ್ತು ಆಗ ಪ್ರಖ್ಯಾತವಾಗಿದ್ದ ಅವರ ನಾಟಕಗಳ ಮೂಲಕ ಅಲ್ಲಿಂದ ಅವರನ್ನು ಗಮನಿಸಿಕೊಂಡೇ ಬಂದವನು (ಅನುಸರಿಸಿಕೊಂಡು ಅಲ್ಲ) ನಾನು.

ವ್ಯವಸ್ಥೆಯ ರಾಜಕಾರಣದ ವಿರುದ್ಧ ಅವರು ಸ್ಪಂದಿಸುತ್ತಿದ್ದ ವೈಖರಿ ಒಂದು ರೀತಿಯಲ್ಲಿ ಅವರು ಕನ್ನಡ ಸಾಹಿತ್ಯದ ಪ್ರತಿಪಕ್ಷ ನಾಯಕರಂತೆ ಚಿತ್ರಿಸಿತ್ತು. ಮೈಸೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಪಡೆದರೂ ಅದನ್ನು ಕನ್ನಡ ಸಾಹಿತ್ಯದ ಮೈಲಿಗಲ್ಲೆಂದು ಹೇಳಿಕೊಂಡು ಅವರು ಸುತ್ತಲಿಲ್ಲ. ಪ್ರಾಯಶಃ ಅವರ ಅನೇಕ ಓದುಗರು ಅವರ ಸಾಹಿತ್ಯಕ್ಕಿಂತ ಅವರ ಈ ಚಳವಳಿಯ ಮುಖವನ್ನೇ ಹೆಚ್ಚು ಹೆಚ್ಚು ಕಾಣುತ್ತಿದ್ದುದರಿಂದ ಅವರ ಸಾಹಿತ್ಯಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ; ಪಂಪ ಪ್ರಶಸ್ತಿ ಸಿಕ್ಕಿದರೂ ಅವರ ಪ್ರತಿಭೆಗೆ, ವಿದ್ವತ್ತಿಗೆ, ಹಿರಿತನಕ್ಕೆ, ತಕ್ಕುದಾದ ಗಂಭೀರವಾದ ವಿಮರ್ಶೆ ಅವರಿಗೆ ಇನ್ನೂ ಲಭಿಸಿಲ್ಲ. ಅವರ ಸಹಪಾಠಿಗಳು, ಸಮವರ್ತಿಗಳು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಲೇ ಇರುವಾಗಲೂ ಅವರು ಆ ಬಗ್ಗೆ ಮುನಿಸಿಕೊಳ್ಳದೆ ಲೇವಡಿ ಮಾಡಿ ಸುಮ್ಮನಾಗುತ್ತಿದ್ದರು. ಅವರ ಸಾಹಿತ್ಯ ಪರಿಚಾರಕತನಕ್ಕೆ ಸಿಗಬೇಕಾದ ಗಂಭೀರ ಮೆಚ್ಚುಗೆಯೂ ಸಿಗಲಿಲ್ಲ. ಆದರೆ ಅವರನ್ನು ಒಪ್ಪದ ಕನ್ನಡದ ಅತ್ಯಂತ ‘ಜನಪ್ರಿಯ’ ಸಾಹಿತಿಗಳೂ ಅವರನ್ನು ಅಲಕ್ಷಿಸುವ ಸ್ಥಿತಿಯಲ್ಲಿ ಇರಲಿಲ್ಲ. 1997ರಲ್ಲಿ ನನ್ನ ಚೊಚ್ಚಲ ಕವನ ಸಂಕಲನ ‘ಸ್ವಯಂಪ್ರಭೆ’ ಪ್ರಕಟವಾಯಿತು. ಅವರಿಗೆ ಫೋನ್ ಮೂಲಕ ಸಂಪರ್ಕಿಸಿ ಪುಸ್ತಕ ಬಿಡುಗಡೆ ಮಾಡಿಕೊಡಬೇಕೆಂದು ಕೋರಿದೆ. ಅವರು ಸಂತೋಷದಿಂದ ಬೆಂಗಳೂರಿನಿಂದ (ದೂರದ!) ಸುಳ್ಯಕ್ಕೆ ಬಂದರು. ಮುನ್ನಾ ದಿನ ಉಳಿಯುವ ವ್ಯವಸ್ಥೆಯ ಕುರಿತು ಕೆಳಿದಾಗ ‘‘ಅವರು ನಿಮಗ್ಯಾಕೆ ಚಿಂತೆ? ನೀವೋ ಅನ್ನಸಾರಿನವರು. ನಮಗೋ ನವರಸಭರಿತ ಮತ್ತು ವರ್ಣರಂಜಿತ ಊಟ ಬೇಕು. ಅದಕ್ಕೆ ನನ್ನ ಸ್ನೇಹಿತ ಸಂಪಾಜೆಯ ದೇವಿಪ್ರಸಾದ್ ಇದ್ದಾರೆ. ಅವರಲ್ಲಿ ಉಳಿದು ಬೆಳಗ್ಗೆ ಬರುತ್ತೇನೆ’’ ಎಂದರು. ನಾನು ನಿರಾಳನಾದೆ. ಹಾಗೆಯೇ ಅವರು ನಡಕೊಂಡರು. (ದೇವಿಪ್ರಸಾದ್ ನನಗೂ ಸ್ನೇಹಿತರು. ಅವರೂ ಬಂದಿದ್ದರು. ಮೊನ್ನೆ ಚಂಪಾ ಗತಿಸಿದ ದಿನವೇ ಅವರೂ ಗತಿಸಿದ್ದು ಆಕಸ್ಮಿಕ/ಯೋಗಾಯೋಗ!)

ಸಮಾರಂಭದಲ್ಲಿ ಅವರು ತಮ್ಮ ಬಿಡುಗಡೆ/ಉದ್ಘಾಟನಾ ಭಾಷಣದ ನಡುವೆ ನಾನು ತುರ್ತುಸ್ಥಿತಿಯ ಕುರಿತು ಬರೆದ ಒಂದು ಕವನವನ್ನು ಪೂರ್ತಿಯಾಗಿ ಓದಿದ್ದರು. ಅನಂತರ ಅನೇಕ ಸಭೆ-ಸಮಾರಂಭಗಳಲ್ಲಿ ಅವರು ಸಿಕ್ಕರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಾಗ ನನ್ನನ್ನು ಪ್ರಕಟಣಾ ಸಮಿತಿಯ ಸದಸ್ಯರಾಗಿ ಆಯ್ಕೆಮಾಡಿದ್ದರು. ಆ ಸಮಿತಿಯ ಸಭೆಯೊಂದರಲ್ಲಿ ಪ್ರವೃತ್ತ (ಅಥವಾ ನಿವೃತ್ತ) ಪ್ರಾಧ್ಯಾಪಕರೊಬ್ಬರು ಕನ್ನಡದಲ್ಲಿನ ಎಲ್ಲ ಪಿಎಚ್‌ಡಿ ಪ್ರಬಂಧಗಳನ್ನು ಕಸಾಪ ಪ್ರಕಟಿಸಬೇಕೆಂದು ಒತ್ತಾಯಿಸಿದ್ದರು. ಚರ್ಚೆ ನಡೆಯಿತು. ನಾನು ‘‘ಅನೇಕ ಪ್ರಬಂಧಗಳು ಹೈಸ್ಕೂಲು ಪ್ರಬಂಧಗಳಿಗಿಂತಲೂ ಕಳಪೆಯಾಗಿವೆಯೆಂಬುದನ್ನು ನಾನೂ ಓದಿ ತಿಳಿದಿದ್ದೇನೆ. ಅವನ್ನು ಪ್ರಕಟಿಸಿ ಕನ್ನಡಕ್ಕೆ ಏನು ಸೇವೆ ಮಾಡುವುದು ನಾವು?’’ ಎಂದೆ. ಕೊನೆಗೆ ಅರ್ಹ ಪ್ರಬಂಧಗಳನ್ನು ಮಾತ್ರ ಪ್ರಕಟಿಸಬೇಕೆಂದು ನಿರ್ಣಯವಾಯಿತೆಂದು ನೆನಪು. ಆ ಸದಸ್ಯರಿಗೆ ನನ್ನ ಮೇಲೆ ಅಸಮಾಧಾನವಾದಂತಿತ್ತು. ಮಾತನಾಡುತ್ತ ‘‘ಎಲ್ಲರೂ ಪಿಎಚ್‌ಡಿ ಪ್ರಬಂಧಗಳನ್ನು ಮೌಲ್ಯಮಾಪನ ಮಾಡುವ ಹಂತಕ್ಕೆ ತಲುಪಿದೆ ನಮ್ಮ ಶಿಕ್ಷಣ. ಪಿಎಚ್‌ಡಿ ಪ್ರಬಂಧಗಳೆಂದರೆ ಎಷ್ಟು ಕಷ್ಟವೆಂಬುದು ಅದನ್ನು ಸಾಧಿಸಿದವರಿಗೇ ಗೊತ್ತು’’ ಎಂದರು. ನಾನು ಚಂಪಾರಿಗೆ ಹೇಳಿದೆ: ‘‘ನಾನು ಹೇಳಿ ಇಷ್ಟು ಗೊಂದಲವಾಯಿತಲ್ಲ!’’ ಅದಕ್ಕವರು ‘‘ಹೀಗೆ ಚಾಟಿ ಬೀಸುವವವರು ಒಬ್ಬರಾದರೂ ನನಗೆ ಬೆಂಬಲಕ್ಕೆ ಬೇಕು ಎಂದೇ ನಿಮ್ಮನ್ನು ಆಯ್ಕೆ ಮಾಡಿದ್ದೆ!’’ ಎಂದರು. ಚಂಪಾ 11 ನಾಟಕಗಳನ್ನು ಬರೆದಿದ್ದಾರೆ. ಕೊಡೆಗಳು (1968), ಕುಂಟಾ ಕುಂಟಾ ಕುರುವತ್ತಿ (1970)ಟಿಂಗರ ಬುಡ್ಡಣ್ಣ (1971), ಗೋಕರ್ಣದ ಗೌಡಶಾನಿ (1972) ಇವು ಅವರಿಗೆ ಪ್ರಸಿದ್ಧಿ ತಂದ ಮತ್ತು ಸಾಹಿತಿಗಳ ಮತ್ತು ರಂಗಪ್ರದರ್ಶಕರ ಮೆಚ್ಚುಗೆಗೆ ಪಾತ್ರವಾದ ನಾಟಕಗಳು. ಅಸಂಗತ ಪ್ರಪಂಚವನ್ನು ಅವರು ಶಕ್ತವಾಗಿ ತೆರೆದಿಟ್ಟಿದ್ದಾರೆ. ರಂಗಪ್ರಯೋಗದ ಸಾಧ್ಯತೆಯನ್ನೂ ಅವರು ಸಾಧಿಸಿದ್ದಾರೆ. ಆಮೂರರು ಹೇಳಿದಂತೆ ‘‘ಅವರ ನಾಟಕಗಳಲ್ಲಿ ಕಂಡು ಬರುವ ಸಾಧ್ಯತೆ ‘ಅಸಂಗತ’ದ ಕಲ್ಪನೆಗಿಂತ ವಿಶಾಲವಾದುದು.

ಇನ್ನು ಕೆಲವು ನಾಟಕಗಳು (ಉದಾ: ‘ನಳಕವಿಯ ಮಸ್ತಾಭಿಷೇಕ’) ತೀವ್ರ ವಾಚ್ಯತೆಯಿಂದ ಒಂದು ಪಂಗಡದ ಹೊಗಳಿಕೆಗೂ ಇನ್ನೊಂದು ಪಂಗಡದ ಟೀಕೆಗೂ ಒಳಗಾದವು.’’ ಆದರೂ ಮೂಲತಃ ಚಂಪಾ ಕವಿ. ಕಾವ್ಯಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ, ಪೂರಕವಾಗಿ ಬೆಳೆದ ಕವಿ. ‘ಗಾಂಧಿ ಸ್ಮರಣೆ’, ‘ಶಾಲ್ಮಲಾ ನನ್ನ ಶಾಲ್ಮಲಾ’ ಮುಂತಾದ ಕವಿತೆಗಳನ್ನು ಮರೆತೇನೆಂದರೆ ಮರೆಯಲಿ ಹೇಗೆ? ಸಾಮಾಜಿಕ ಮತ್ತು ರಾಜಕೀಯ ವಾತಾವರಣಗಳೊಂದಿಗೆ ಅವರು ಸಂವಹಿಸಿದ ರೀತಿ ಇಂದ್ರಿಯಗಳನ್ನೇ ಮುಚ್ಚಿಕೊಂಡು ಸಸ್ಯಾಹಾರಿ ಸಾಹಿತ್ಯ ರಚಿಸಿದವರಿಗೆ ರುಚಿಸದಾಯಿತು. ಚಂಪಾ ಅವರ ಭಾಷೆ, ನುಡಿಗಟ್ಟುಗಳು, ರೂಪಕಗಳು, ಉಪಮೆಗಳು ಹಾಸ್ಯ ಮತ್ತು ವ್ಯಂಗ್ಯದ ಗದ್ಯ ಗದ್ದಲದಲ್ಲಿ ಪೋಲಾದ್ದರಿಂದಲೇ ಪ್ರಾಯಶಃ ಅವರನ್ನು ಕನ್ನಡದ ಒಬ್ಬ ಉತ್ತಮ ಕವಿಯೆಂದೂ ಅವರ ಸಾಕಷ್ಟು ಕವನಗಳು ಕನ್ನಡದ ಅತ್ಯುತ್ತಮ ಕಾವ್ಯವೆಂದೂ ಕನ್ನಡ ಸಾಹಿತ್ಯ ಪ್ರಪಂಚ ಮರೆತೇಬಿಟ್ಟಿತು. ‘ನೂರು ಮರ ನೂರು ಸ್ವರ’ದ ಕುರ್ತಕೋಟಿಯವರಿಗೆ ಚಂಪಾ ಅವರ ಕಾವ್ಯಮಾರ್ಗವನ್ನು ಶೋಧಿಸಬೇಕೆಂದು ಅನ್ನಿಸಲೇ ಇಲ್ಲ. ಲಂಕೇಶ್ ಮಾತ್ರ ಒಂದು ಕಡೆ ‘‘ಚಂದ್ರಶೇಖರ ಪಾಟೀಲರ ಧ್ವನಿ ನಮ್ಮ ಈ ಕಷ್ಟದ ವರ್ಷಗಳಲ್ಲಿ ಧೈರ್ಯದ, ಘನತೆಯ, ಸ್ವಾತಂತ್ರ್ಯಕ್ಕೆ ಹತ್ತಿರ ಬರಲೆಳೆಸುವ ಏಕಮಾತ್ರ ಧ್ವನಿ ಎಂದು ಮತ್ತೊಮ್ಮೆ ಹೇಳಬಯಸುವೆ.’’ ಎಂದಿದ್ದಾರೆ. ಲಂಕೇಶ್ ಈಗ ಇದ್ದಿದ್ದರೂ ಅದನ್ನೆ ಮತ್ತೆ ಹೇಳುತ್ತಿದ್ದರು. ಈಗ ಮತ್ತು ಮುಂದೆ ಅವರಿಬ್ಬರು ಇದ್ದಿದ್ದರೆ ಇದನ್ನೇ ಮತ್ತೆ ಮತ್ತೆ ಹೇಳಬೇಕಿತ್ತು. ಇಂತಹ ಧ್ವನಿ ನಮ್ಮಿಂದ ಮರೆಯಾಗಿದೆ. ಹಾಸ್ಯ ಮತ್ತು ವ್ಯಂಗ್ಯದ ನಡುವೆ ಫಲಾಪೇಕ್ಷೆಯಿಲ್ಲದ ಮುಗ್ಧ ಕವಿಮನಸ್ಸು ಅವರದಿತ್ತು. ಎಕ್ಕುಂಡಿಯವರು ಅನುವಾದಿಸಿದ ಮುಸ್ತಾಯಿ ಕರೀಮ್ ಅವರ ಒಂದು ಕವಿತೆ ನೆನಪಾಗುತ್ತದೆ: ‘‘ಬರಿಗಾಲಿನಲ್ಲೊಬ್ಬ ಹುಡುಗ ಓಡುವನು
ಶುಭ್ರ ನೀಲಿಯ ಕಡಲ ದಂಡೆಗುಂಟ
ಬಣ್ಣಬಣ್ಣದ ಕಲ್ಲು ಹೊಳೆಯುತಿಹವು
ಅವನ ಕಾಲಡಿಗೆ ನಕ್ಷತ್ರದಂತೆ.
ವರುಷ ಉರುಳಿವೆ ಕರೆಯು ಬಂತು ಹುಡುಗನಿಗೆ
ದೂರದಲಿ ತಾರೆಗಳ ಕ್ಷೀರಪಥಕೆ,
ಸೂರೆ ಮಾಡಿದೆ ಮುಗಿಲು
ತಾರೆಗಳ ಅಲ್ಲಿ ಅವನ ದಾರಿಯೊಳಗೆ’’

‘ಹೂವು ಹೆಣ್ಣು ತಾರೆ’ಯನ್ನೂ ಬರೆಯಬಲ್ಲ ಹುಡುಗುತನದ ಪ್ರೊ.ಚಂದ್ರಶೇಖರ ಪಾಟೀಲ ಅಂತಹ ಒಬ್ಬ ಹುಡುಗ. ‘‘ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ’’ ಎಂದು ಹೇಳಿದ್ದಾರೆ. ಅವರ ಸಾವಿನೊಂದಿಗೆ ಚಂಪಾಯಣವೆಂಬ ಕನ್ನಡ ಭಾಷೆಯ ಸಾಹಿತ್ಯದ, ಬಂಡಾಯದ, ಹೋರಾಟದ ಒಂದು ಪ್ರಮುಖ ಧ್ವನಿ ನಿಂತಿದೆ. ಅಗತ್ಯವಿದ್ದಾಗ ಉರಿಸಬೇಕಾದ ಪ್ರತಿಭಟನೆಯ ದೀಪವನ್ನು ಅವರು ಹಚ್ಚಿ ಹೋಗಿದ್ದಾರೆ. ಅದು ಆರದಂತೆ ನೋಡಿಕೊಳ್ಳುವ ಹೊಣೆ ನಮಗಿದೆ. ಚಂಪಾ ಅವರ ಒಂದು ಕವನ ‘ನಾವು ಒಂದೇ’ ಹೀಗಿದೆ:
‘‘ನಾವು ಒಂದೇ
ಮರದಿಂದ ಹಾರಿ ಹೋದ ಹಕ್ಕಿಗಳು
ಮರಳಬೇಕೆಂದರೆ ಮರವೇ ಇಲ್ಲ
ಮತ್ತೊಂದು ಮರ ಬೆಳೆಸೋಣ ಅಂದರೆ
ಅದು ಬೆಳೆಯುವಷ್ಟರಲ್ಲಿ
ನಾವೇ
ಇರುವುದಿಲ್ಲ’’

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)