varthabharthi


ವಿಶೇಷ-ವರದಿಗಳು

1,000 ಮಕ್ಕಳ ಪೈಕಿ 60 ಮಕ್ಕಳು 5 ವರ್ಷಕ್ಕಿಂತ ಮೊದಲೇ ಸಾವು

ಉತ್ತರಪ್ರದೇಶದ ಶಿಶು ಮರಣ ದರ ಅಫ್ಘಾನಿಸ್ತಾನದ ದರಕ್ಕೆ ಸಮ

ವಾರ್ತಾ ಭಾರತಿ : 20 Jan, 2022
ನುಶೈಬಾ ಇಕ್ಬಾಲ್

ಉತ್ತರಪ್ರದೇಶದಲ್ಲಿ ಜನಿಸುವ 1,000 ಮಕ್ಕಳ ಪೈಕಿ 60 ಮಕ್ಕಳು ಐದನೇ ವರ್ಷಕ್ಕೆ ಕಾಲಿಡುವ ಮೊದಲೇ ಸಾಯುತ್ತಾರೆ. ಇದು ಅಫ್ಘಾನಿಸ್ತಾನದ ಶಿಶು ಮರಣ ದರಕ್ಕೆ ಸಮವಾಗಿದೆ ಎಂಬುದಾಗಿ ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ ಮತ್ತು ವಿಶ್ವ ಬ್ಯಾಂಕ್‌ನ ನೂತನ ಅಂಕಿ-ಅಂಶಗಳು ಹೇಳುತ್ತವೆ.

ಭಾರತದಾದ್ಯಂತ, 1,000 ಮಕ್ಕಳ ಪೈಕಿ 42 ಮಕ್ಕಳು ತಮ್ಮ ಐದನೇ ಹುಟ್ಟು ಹಬ್ಬ ಆಚರಿಸುವ ಮೊದಲೇ ಈ ಪ್ರಪಂಚದಿಂದ ನಿರ್ಗಮಿಸುತ್ತಾರೆ ಎಂಬುದಾಗಿ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5’ ಹೇಳಿದೆ. ಏಶ್ಯ ಖಂಡದಲ್ಲಿ ಶಿಶು ಮರಣ ದರವು ಭಾರತದ ದರಕ್ಕಿಂತ ಹೆಚ್ಚಿರುವ ದೇಶಗಳೆಂದರೆ ಅಫ್ಘಾನಿಸ್ತಾನ (ಇಲ್ಲಿ 1,000 ಮಕ್ಕಳ ಪೈಕಿ 60.3 ಮಕ್ಕಳು 5ನೇ ವರ್ಷಕ್ಕೆ ಕಾಲಿಡುವ ಮೊದಲೇ ಸಾಯುತ್ತಾರೆ) ಮತ್ತು ಪಾಕಿಸ್ತಾನ (67.2/1,000).

ಭಾರತದಲ್ಲಿ ಉತ್ತರಪ್ರದೇಶದಂತೆ ಬಿಹಾರ (ಪ್ರತಿ 1,000 ಮಕ್ಕಳಿಗೆ 56.4 ಸಾವು) ಮತ್ತು ಛತ್ತೀಸ್‌ಗಢ (50.4/1000)ದಲ್ಲಿ ಅಧಿಕ ಶಿಶು ಮರಣ ದರಗಳಿವೆ. ಪುದುಚೇರಿ (3.9/1,000), ಗೋವಾ (10.6/1,000) ಮತ್ತು ಕೇರಳ (5.6/1,000)ದಲ್ಲಿ ಕನಿಷ್ಠ ಶಿಶು ಮರಣ ದರಗಳಿವೆ ಎನ್ನುವುದನ್ನು ಅಂಕಿ-ಅಂಶಗಳು ಹೇಳುತ್ತವೆ.

ಭಾರತದ 10 ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಶಿಶು ಮರಣ ದರವಿದ್ದು, ಅಫ್ಘಾನಿಸ್ತಾನ ಮತ್ತು ಪೂರ್ವ ಮತ್ತು ದಕ್ಷಿಣ ಆಫ್ರಿಕದ ದೇಶಗಳ ಅಂಕಿಸಂಖ್ಯೆಗಳೊಂದಿಗೆ ತುಲನೆ ಮಾಡಬಹುದಾಗಿದೆ ಎಂದು ವಿಶ್ವ ಬ್ಯಾಂಕ್‌ನ ವರದಿ ಹೇಳಿದೆ. ಭಾರತದ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ 16 ಶಿಶು ಮರಣ ದರಗಳನ್ನು ಆಫ್ರಿಕದ ಸಹಾರ ಉಪಖಂಡದ ದೇಶಗಳೊಂದಿಗೆ ಹೋಲಿಸಬಹುದಾಗಿದೆ.
2019ರ ಅಂಕಿಸಂಖ್ಯೆಗಳ ಪ್ರಕಾರ, ಜಗತ್ತಿನ 194 ದೇಶಗಳ ಪೈಕಿ ಕೇವಲ 27 ದೇಶಗಳ ಶಿಶು ಮರಣ ದರಗಳು ಭಾರತದ ರಾಜ್ಯಗಳಿಗಿಂತ ಹೆಚ್ಚಾಗಿದೆ.

ಈ ಸಮೀಕ್ಷೆಯು ಲಕ್ಷದ್ವೀಪ ಮತ್ತು ಚಂಡೀಗಢವನ್ನು ಒಳಗೊಂಡಿಲ್ಲ. ಅಲ್ಲಿನ ಶಿಶು ಮರಣ ದರವನ್ನು ಲೆಕ್ಕಹಾಕಲು ಬೇಕಾಗುವಷ್ಟು ಸಂಖ್ಯೆಯ ಮನೆಗಳ ಸಮೀಕ್ಷೆಯನ್ನು ನಡೆಸಲಾಗಿಲ್ಲ.

ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವುದು (Stunting) ಮತ್ತು ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವುದು (wasting) ಮಕ್ಕಳಲ್ಲಿರುವ ಅಪೌಷ್ಟಿಕತೆಯ ಮಟ್ಟವನ್ನು ಸೂಚಿಸುವ ಎರಡು ಪ್ರಮುಖ ಅಂಶಗಳು. ಅಧಿಕ ಶಿಶು ಮರಣ ದರಕ್ಕೆ ಅಪೌಷ್ಟಿಕತೆಯು ಪ್ರಮುಖ ಕಾರಣವಾಗಿದೆ ಎಂಬುದಾಗಿ ಪರಿಣತರು ಹೇಳುತ್ತಾರೆ. ಇತ್ತೀಚಿನ ಆರೋಗ್ಯ ಸಮೀಕ್ಷೆಯ ಆಧಾರದಲ್ಲಿ ಭಾರತದಲ್ಲಿನ ಶಿಶು ಪೌಷ್ಟಿಕತೆ ಮತ್ತು ಆರೋಗ್ಯವನ್ನು ಗಮನಿಸೋಣ.

ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವುದು

2019 ಮತ್ತು 2021ರ ನಡುವೆ ಮಾಡಲಾದ ಆರೋಗ್ಯ ಸಮೀಕ್ಷೆಯ ಪ್ರಕಾರ, ಭಾರತೀಯ ಮಕ್ಕಳ ಪೈಕಿ ಮೂರನೇ ಒಂದು (ಶೇ. 35.5) ಭಾಗಕ್ಕಿಂತಲೂ ಹೆಚ್ಚಿನ ಮಕ್ಕಳು ವಯಸ್ಸಿಗೆ ತಕ್ಕ ಎತ್ತರವನ್ನು ಹೊಂದಿಲ್ಲ. ಈ ಪೈಕಿ ಹೆಚ್ಚಿನ ಮ್ಕಕಳು, ಅಂದರೆ ಈ ಸಮಸ್ಯೆಯನ್ನು ಎದುರಿಸುತ್ತಿರುವ ಒಟ್ಟು ಮಕ್ಕಳ ಪೈಕಿ 46.5 ಶೇಕಡಾ ಮಕ್ಕಳು 2019-2021ರ ಅವಧಿಯಲ್ಲಿ ಮೇಘಾಲಯವೊಂದರಲ್ಲೇ ಪತ್ತೆಯಾಗಿದ್ದಾರೆ ಎಂದು ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5’ ಹೇಳುತ್ತದೆ. ಬಿಹಾರದಲ್ಲಿ ಈ ಸಂಖ್ಯೆ 43 ಶೇಕಡಾ ಆಗಿದೆ.

ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವುದು

ಭಾರತದಲ್ಲಿರುವ ಮಕ್ಕಳ ಪೈಕಿ ಸುಮಾರು ಐದನೇ ಒಂದು ಭಾಗ (19.3 ಶೇಕಡಾ)ದಷ್ಟು ಮಕ್ಕಳು, ವಿಶ್ವಸಂಸ್ಥೆಯ ಮಾನದಂಡಗಳ ಪ್ರಕಾರ ಎತ್ತರಕ್ಕೆ ತಕ್ಕ ತೂಕ ಹೊಂದಿಲ್ಲ.

2015-16ರ ಮತ್ತು 2019-20ರ ನಡುವಿನ ಅವಧಿಯಲ್ಲಿ ಈ ಸಮಸ್ಯೆಯನ್ನು (ವೇಸ್ಟಡ್) ಹೊಂದಿದ ಮಕ್ಕಳ ಪ್ರಮಾಣ ಕಡಿಮೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಈ ಸಮಸ್ಯೆಯ ಗಂಭೀರ ಸ್ವರೂಪ (ಸೀವಿಯರ್ಲಿ ವೇಸ್ಟಡ್)ವನ್ನು ಮಕ್ಕಳ ಪ್ರಮಾಣದಲ್ಲಿ ಅಲ್ಪಏರಿಕೆಯಾಗಿದೆ.
ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವ ಸಮಸ್ಯೆಯ ಗಂಭೀರ ಸ್ವರೂಪವು (ಸೀವಿಯರ್ಲಿ ವೇಸ್ಟಡ್) 2015-16ರಲ್ಲಿದ್ದ ಶೇ. 7.5ರಿಂದ 2019-20ರಲ್ಲಿ ಶೇ. 7.7ಕ್ಕೆ ಏರಿತು. ಅದೇ ವರ್ಷ ಶೇ. 19 ಮಕ್ಕಳು ವೇಸ್ಟಡ್ ಸಮಸ್ಯೆಯಿಂದ ಬಳಲಿದರು. ಇದು 2015-16ರ ಶೇ. 21ಕ್ಕಿಂತ ಕಡಿಮೆಯಾಗಿದೆ.

ಇಂದು ಮಹಾರಾಷ್ಟ್ರ (ಶೇ. 25.66) ಮತ್ತು ಗುಜರಾತ್ (ಶೇ. 25.1)ನಲ್ಲಿ ಕ್ರಮವಾಗಿ ದೇಶದ ಅತಿ ಹೆಚ್ಚು ‘ವೇಸ್ಟಡ್’ ಮತ್ತು ‘ಸೀವಿಯರ್ಲಿ ವೇಸ್ಟಡ್’ ಮಕ್ಕಳಿದ್ದಾರೆ.

‘‘ದೇಶದಲ್ಲಿ ಆರ್ಥಿಕವಾಗಿ ಮುಂದುವರಿದ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಸ್ಟಂಟಡ್ ಮತ್ತು ವೇಸ್ಟಡ್ ಮಕ್ಕಳು ಕಾಣ ಸಿಕ್ಕಿದ್ದಾರೆ’’ ಎಂದು ‘ಚೈಲ್ಡ್ ರೈಟ್ಸ್ ಆ್ಯಂಡ್ ಯೂ’ ಎಂಬ ಸರಕಾರೇತರ ಸಂಘಟನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂಜಾ ಮರ್ವಾಹ ಹೇಳುತ್ತಾರೆ. ‘‘ಸಾಮಾಜಿಕ ಮತ್ತು ಮಾನವ ಬೆಳವಣಿಗೆಯಲ್ಲಿ ಪ್ರಗತಿಯಿಲ್ಲದೆ, ಕೇವಲ ಆರ್ಥಿಕ ಬೆಳವಣಿಗೆಯು ಮಕ್ಕಳಿಗೆ ಉತ್ತಮ ಪೌಷ್ಟಿಕತೆಯನ್ನು ಒದಗಿಸಬೇಕೆಂದೇನೂ ಇಲ್ಲ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ’’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಅಪೌಷ್ಟಿಕತೆ

ಭಾರತೀಯರಲ್ಲಿ ಅಪೌಷ್ಟಿಕತೆ ಇದೆ ಎನ್ನುವುದನ್ನು ಸ್ಟಂಟಿಂಗ್ ಮತ್ತು ವೇಸ್ಟಿಂಗ್ ದರಗಳು ಸೂಚಿಸುತ್ತವೆ ಎಂದು ‘ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯ’ದಲ್ಲಿ ಸಾರ್ವಜನಿಕ ಆರೋಗ್ಯ ಪೌಷ್ಟಿಕಾಂಶ ಸಲಹಾಕಾರ್ತಿಯಾಗಿ ಕೆಲಸ ಮಾಡುತ್ತಿರುವ ಶ್ವೇತಾ ಖಂಡೇಲ್ವಾಲ್ ಹೇಳುತ್ತಾರೆ. ಆದರೆ, ‘‘ಅವು ಮಾತ್ರ ಪೌಷ್ಟಿಕಾಂಶದ ಕೊರತೆಯನ್ನು ತಿಳಿಯಲು ಬಳಸುವ ವಿಧಾನಗಳಲ್ಲ’’ ಎಂದು ಅವರು ನುಡಿಯುತ್ತಾರೆ. ‘‘ಪೌಷ್ಟಿಕತೆಯ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತವೆ: ನೇರವಾಗಿ ಪರಿಣಾಮ ಬೀರುವಂತಹ ಅಂಶಗಳೆಂದರೆ ಆಹಾರ ಮತ್ತು ಅದನ್ನು ತಿನ್ನಿಸುವ ವಿಧಾನ ಮತ್ತು ಪರೋಕ್ಷವಾಗಿ ಪ್ರಭಾವ ಬೀರುವುದು ತಾಯಿಯ ಶಿಕ್ಷಣ, ಆಕೆಯ ಮಾನಸಿಕ ಆರೋಗ್ಯ, ಆದಾಯ ಮಟ್ಟ, ನೀರು, ನೈರ್ಮಲ್ಯ, ಮಾಲಿನ್ಯ, ಕೃಷಿ ಮತ್ತು ಆಡಳಿತ, ನಾಯಕತ್ವ, ಕಷ್ಟ ಕಾಲದಲ್ಲಿ ಪರಿಹಾರ ಒದಗಿಸುವ ಸರಕಾರದ ಸಾಮರ್ಥ್ಯ ಮತ್ತು ಸರಕಾರದ ನೀತಿಗಳು ಮುಂತಾದ ಪೂರಕ ಪರಿಸರ’’.

ಮಗುವಿನ ಬೆಳವಣಿಗೆ, ಆಹಾರದ ಗುಣಮಟ್ಟ ಮತ್ತು ಜ್ಞಾನ ಗಳಿಕೆಗೆ ಅವಕಾಶ ಕೂಡ ಶಿಶು ಆರೋಗ್ಯದ ಪ್ರಮುಖ ಸೂಚ್ಯಂಕಗಳಾಗಿವೆ.
‘‘ಸಾಮಾಜಿಕ ಸುರಕ್ಷತಾ ಕಾರ್ಯಕ್ರಮಗಳ ಮೂಲಕ ನೀಡಲಾಗುವ ಧಾನ್ಯಗಳು ಅಥವಾ ಪಡಿತರ ಅಥವಾ ಬಿಸಿಯೂಟಗಳ ಮೂಲಕ ಬಹು ರೂಪಿ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ’’ ಎಂದು ಖಂಡೇಲ್ವಾಲ್ ಹೇಳುತ್ತಾರೆ.

ಇದಕ್ಕೆ ಹೆಚ್ಚುವರಿಯಾಗಿ ಕೋವಿಡ್-19 ಆರೋಗ್ಯ ಸೇವೆಗಳನ್ನು ಅಸ್ತವ್ಯಸ್ತಗೊಳಿಸಿರಬಹುದು. ‘‘ಮನೆ ಮನೆ ಕೋವಿಡ್-19 ಕಣ್ಗಾವಲಿಗಾಗಿ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಮುಂಚೂಣಿ ಕಾರ್ಯಕರ್ತರನ್ನು ನಿಯೋಜಿಸಲಾಯಿತು. ಹಾಗಾಗಿ, ಅವರಿಗೆ ತಮ್ಮ ಮೂಲ ಕರ್ತವ್ಯವಾದ ಜನರಿಗೆ ಸಲಹೆ ಮತ್ತು ಚಿಕಿತ್ಸೆಗಳನ್ನು ನೀಡುವ ಕೆಲಸಗಳನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ’’ ಎಂದು ಮರ್ವಾಹ ಹೇಳುತ್ತಾರೆ.
‘‘ಉದಾಹರಣೆಗೆ; ಈ ಆರೋಗ್ಯ ಕಾರ್ಯಕರ್ತರಿಗೆ ಶಿಶುಗಳಿಗೆ ಆಹಾರ ತಿನಿಸುವ ಮತ್ತು ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಡಿಯಲ್ಲಿ ನೆರವು ನೀಡುವ ಪಾತ್ರಗಳನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ’’ ಎಂದು ಅವರು ಹೇಳುತ್ತಾರೆ. ಗರ್ಭಿಣಿ ಮಹಿಳೆಯರು ಮತ್ತು 30 ದಿನಗಳ ಒಳಗಿನ ಮಕ್ಕಳಿಗೆ ಉಚಿತ ಮತ್ತು ನಗದುರಹಿತ ಸೇವೆಗಳನ್ನು ನೀಡಲು ಜನನಿ ಶಿಶು ಸುರಕ್ಷಾ ಕಾರ್ಯಕ್ರಮವನ್ನು ಸರಕಾರ ಜಾರಿಗೆ ತಂದಿದೆ.

ರೋಗನಿರೋಧಕ ಚುಚ್ಚು ಮದ್ದುಗಳನ್ನು ನೀಡುವುದು, ವಿಟಮಿನ್-ಎ ನೀಡಿಕೆ, ಮಕ್ಕಳ ಕಾಯಿಲೆಗಳನ್ನು ತಡೆಯುವುದು ಮತ್ತು ನಿಭಾಯಿಸುವುದು, ರಕ್ತಹೀನತೆಯನ್ನು ತಡೆಗಟ್ಟುವುದು ಮತ್ತು ಶಿಶು ಅಪೌಷ್ಟಿಕತೆಯನ್ನು ನಿಭಾಯಿಸುವ ಕೆಲಸಗಳನ್ನೂ ಈ ಆರೋಗ್ಯ ಕಾರ್ಯಕರ್ತರಿಗೆ ಮಾಡಲು ಸಾಧ್ಯವಾಗಲಿಲ್ಲ.

ಕೃಪೆ: IndiaSpend.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)