varthabharthi


ವಿಶೇಷ-ವರದಿಗಳು

ಸಮಾನ ‘ಸ್ವಚ್ಛ ಭಾರತ’ ನಿರ್ಮಾಣ ಯತ್ನ ವಿಫಲ

ವಾರ್ತಾ ಭಾರತಿ : 20 Jan, 2022
ಪ್ರಜ್ಞಾ ಅಖಿಲೇಶ್ ಮತ್ತು ಅಜಯ್ ಗುಡವರ್ತಿ

ಭಾರತೀಯ ಪ್ರಜಾಸತ್ತೆ ಮತ್ತು ಅದರ ನಾಗರಿಕತೆಯ ಮೂಲಗಳು ಜಾತಿ ಮತ್ತು ‘ಶುದ್ಧ’ ಮತ್ತು ‘ಅಶುದ್ಧ’ ಎಂಬ ಕಲ್ಪನೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ‘ಸ್ವಚ್ಛ ಭಾರತ’ ಮತ್ತು ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯು ಜಾತಿ ಆಧಾರಿತ ತಾರತಮ್ಯದ ವಿರುದ್ಧ ಸಂಘಟಿತ ಹೋರಾಟ ಮತ್ತು ಉತ್ತಮ ಆರೋಗ್ಯ ಲಭ್ಯತೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿರಬೇಕಾಗಿತ್ತು. ಈ ಗುರಿಯನ್ನು ತಲುಪುವಲ್ಲಿ ನಾವು ವಿಫಲರಾಗಿದ್ದೇವೆ. ಹಾಗಾಗಿ, ಸಮಾನ ಪೌರತ್ವಕ್ಕೆ ನಾವು ಹೊಂದಿರುವ ಬದ್ಧತೆಯೂ ದುರ್ಬಲವಾಗಿದೆ.

ಜನರ ಪ್ರಜ್ಞೆಯಲ್ಲಿ ನಾಗರಿಕತೆಯ ಭಾವ ಸೇರ್ಪಡೆಯಾಗದೆ ಇದ್ದರೆ ಭಾರತದಲ್ಲಿ ಯಾವುದೇ ಪೌರತ್ವ ಯೋಜನೆಯು ಪೂರ್ಣಗೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಉದ್ದೇಶದ ‘ಸ್ವಚ್ಛ ಭಾರತ’ ಮಹತ್ವದ ಹೆಜ್ಜೆಯಾಗಿದೆ. ಮೂಲ ಶೌಚಾಲಯ ಸೌಲಭ್ಯಗಳನ್ನು ಒದಗಿಸಲು ಹಾಗೂ ಜನರಿಗೆ ಘನತೆಯ ಬದುಕನ್ನು ನೀಡಲು ರೂಪಿಸಲಾದ ಯೋಜನೆ ಅದಾಗಿತ್ತು. ತಾವು ಅನ್ಯರಲ್ಲ ಎಂಬ ಭಾವನೆಯನ್ನು ಶೌಚ ಸೌಲಭ್ಯದ ಲಭ್ಯತೆಯು ಜನರಲ್ಲಿ ಮೂಡಿಸುತ್ತದೆ.

ಆದರೆ, ‘ಸ್ವಚ್ಛ ಭಾರತ್ ಮಿಶನ್’ (ಎಸ್‌ಬಿಎಮ್) ಯೋಜನೆಗೆ ಅಸಮರ್ಪಕ ಅನುಷ್ಠಾನವು ಒಂದು ತಡೆಯಾಗಿದೆ. ಅಷ್ಟೇ ಅಲ್ಲ, ನಿಧಿ ದುರುಪಯೋಗ ಮತ್ತು ಸುಳ್ಳು ಅಂಕಿ-ಅಂಶಗಳು ಯೋಜನೆ ಎದುರಿಸುತ್ತಿರುವ ಇತರ ಸಮಸ್ಯೆಗಳಾಗಿವೆ. ಈ ಯೋಜನೆಯ ಫಲಿತಾಂಶದ ಬಗ್ಗೆ ಸೌತ್ ಏಶ್ಯನ್ ಲೇಬರ್ ನೆಟ್‌ವರ್ಕ್‌ಗೆ ಸಂಬಂಧಿಸಿದವರು ಅತ್ಯಂತ ವಿವರವಾದ ಸಮೀಕ್ಷೆಗಳನ್ನು ನಡೆಸಿದ್ದಾರೆ. ಅದರ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ಕೊಡಲಾಗಿದೆ.

‘SBM-Urban’ ಮತ್ತು ‘SBM-Gramin’ ವೆಬ್‌ಸೈಟ್‌ಗಳ ಶೇ.30ಕ್ಕೂ ಅಧಿಕ ಅಂಕಿಅಂಶಗಳು ಕೃತಕವಾಗಿವೆ. 2014 ಮತ್ತು 2020ರ ನಡುವೆ 12 ಲಕ್ಷಕ್ಕೂ ಅಧಿಕ ಶೌಚಾಲಯಗಳನ್ನು ಕಟ್ಟಲಾಗಿದೆ ಎಂದು ಅವು ಹೇಳಿಕೊಳ್ಳುತ್ತವೆ. ಆದರೆ, ಈ ಶೌಚಾಲಯಗಳು ವಾಸ್ತವದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಫಲಾನುಭವಿಗಳ ಮನೆಗಳಲ್ಲಿ ಈ ಶೌಚಾಲಯಗಳಿವೆ ಎಂಬುದಾಗಿ ಹೇಳಲಾಗುತ್ತದೆ. ಆದರೆ, ತಮ್ಮ ಮನೆಗಳಲ್ಲಿರುವ ಶೌಚಾಲಯಗಳ ಬಗ್ಗೆ ಫಲಾನುಭವಿಗಳಿಗೆ ಮಾಹಿತಿಯೇ ಇಲ್ಲ! ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ಬಗ್ಗೆ ಸಾವಿರಾರು ತಪ್ಪು ತಪಾಸಣಾ ವರದಿಗಳಿವೆ. ಫಲಾನುಭವಿಗಳೆನ್ನಲಾದವರು ಶೌಚಾಲಯಗಳ ಎದುರುಗಡೆ ನಿಂತು ಫೋಟೊ ತೆಗೆದುಕೊಟ್ಟಿದ್ದಾರೆ. ಆದರೆ, ಆ ಶೌಚಾಲಯಗಳು ಎಲ್ಲಿಯೂ ಕಾಣಲು ಸಿಗುವುದಿಲ್ಲ. ಹೆಚ್ಚಿನವರು ಹಿಂದೆಯೇ ಕಟ್ಟಲಾಗಿರುವ ನೆರೆಯವರ ಶೌಚಾಲಯಗಳ ಎದುರು ನಿಂತು ಫೋಟೊ ತೆಗೆದು ಕೊಟ್ಟಿದ್ದಾರೆ. ಆ ಚಿತ್ರಗಳಲ್ಲಿ ಹಿಂದಿನದೇ ಎಸ್‌ಬಿಎಮ್ ಗೋಡೆ ಬಣ್ಣ (ಆರ್‌ಆರ್‌ಐ, ಭಾರತ)ವಿದೆ.

ಇಷ್ಟೇ ಅಲ್ಲ, ಹಲವು ಜಿಲ್ಲೆಗಳ ಒಡಿಎಫ್ (ಬಹಿರ್ ಶೌಚಾಲಯ ಮುಕ್ತ) ಸ್ಥಿತಿಗತಿಯನ್ನೂ ಕೃತಕವಾಗಿ ಸೃಷ್ಟಿಸಲಾಗಿದೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ 2 ಕೋಟಿಗೂ ಅಧಿಕ ಮಂದಿ ಬಹಿರಂಗ ಸ್ಥಳಗಳಲ್ಲೇ ಮಲ ವಿಸರ್ಜನೆ ಮಾಡುತ್ತಿದ್ದಾರೆ. ಒಡಿಎಫ್ ಸ್ಥಿತಿಗತಿಯು ಬಿಹಾರ, ಒಡಿಶಾ ಮತ್ತು ತ್ರಿಪುರಾ ರಾಜ್ಯಗಳಲ್ಲಿ ತೀರಾ ಕಳಪೆಯಾಗಿದೆ. ಆದರೆ, ಆ ರಾಜ್ಯಗಳ ವೆಬ್‌ಸೈಟ್‌ಗಳು ಬೇರೆಯೇ ಕತೆ ಹೇಳುತ್ತವೆ.

ಕೊರೋನ ವೈರಸ್ ಸಾಂಕ್ರಾಮಿಕ ಆರಂಭಗೊಂಡಂದಿ ನಿಂದ 6,723 ಕೈಯಿಂದ ಸ್ವಚ್ಛಗೊಳಿಸಬೇಕಾದ ಶೌಚಾಲಯಗಳನ್ನು ಖಗಾರಿಯ, ಬೆಗುಸರಾಯಿ, ಸುಪೌಲ್, ಚಂದೌಲಿ, ಬದೌನ್ ಮತ್ತು ಸೀತಪುರ ಎಂಬ ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ. ಇದರೊಂದಿಗೆ ಬಿಹಾರ ಮತ್ತು ಉತ್ತರ ಪ್ರದೇಶಗಳು ಇಂತಹ ಶೌಚಾಲಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಹೊಂದಿದ ರಾಜ್ಯಗಳಾದವು. ಕೈಯಿಂದ ಮಲಸ್ವಚ್ಛತೆ ನಿಷೇಧ ಮತ್ತು ಇಂತಹ ಕೆಲಸಗಾರರ ಪುನರ್ವಸತಿ ಕಾಯ್ದೆ, 2013 ಜಾರಿಯಲ್ಲಿರುವ ಹೊರತಾಗಿಯೂ ಇಂತಹ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇಲ್ಲಿರುವ ಪ್ರಶ್ನೆಯೆಂದರೆ, ಕೈಯಿಂದ ಸ್ವಚ್ಛ ಮಾಡಬೇಕಾದ ಶೌಚಾಲಯಗಳನ್ನು ಈಗಲೂ ಯಾಕೆ ನಿರ್ಮಿಸಲಾಗುತ್ತಿದೆ?

ಕಳೆದ ಏಳು ವರ್ಷಗಳಲ್ಲಿ 70 ಲಕ್ಷಕ್ಕೂ ಅಧಿಕ ಗೃಹ ಬಳಕೆಯ, ಸಮುದಾಯ ಬಳಕೆಯ ಮತ್ತು ಸಾರ್ವಜನಿಕ ಬಳಕೆಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಗೃಹ ನಿರ್ಮಾಣ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಕ ನೀಡಲಾದ ಸ್ವಚ್ಛ ಭಾರತ್ ಮಿಶನ್‌ನ ಹೇಳಿಕೆಯೊಂದು ತಿಳಿಸಿದೆ. ಈ ಮೂಲಕ, ಸರ್ವರಿಗೂ ಸುರಕ್ಷಿತ ಹಾಗೂ ಘನತೆಯ ಶೌಚಾಲಯ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಹೇಳಿಕೆ ಹೇಳಿಕೊಂಡಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಭರವಸೆ ನೀಡಿರುವ ಹಣ ತಮಗೆ ಇನ್ನೂ ಸಿಕ್ಕಿಲ್ಲ ಎಂಬುದಾಗಿ ಹಲವು ಫಲಾನುಭವಿಗಳು ಹೇಳಿದ್ದಾರೆ. ಇಲ್ಲಿ 1,440 ಕೋಟಿ ರೂಪಾಯಿಗೂ ಹೆಚ್ಚು ಹಣ ಲೆಕ್ಕಕ್ಕೆ ಸಿಕ್ಕಿಲ್ಲ.

‘‘ಹಣ ಖರ್ಚು ಮಾಡಲಾಗಿದೆ, ಆದರೆ ಶೌಚಾಲಯ ನಿರ್ಮಾಣ ಆಗಿಲ್ಲ’’ ಎನ್ನುವುದಕ್ಕೆ ಸಂಬಂಧಿಸಿದ ಗರಿಷ್ಠ ಸಂಖ್ಯೆಯ ದೂರುಗಳು ಒಡಿಶಾ ಮತ್ತು ಜಾರ್ಖಂಡ್‌ಗಳಲ್ಲಿ ದಾಖಲಾಗಿವೆ ಎಂದು ಎಸ್‌ಎಎಸ್‌ಎಲ್‌ಎನ್ ಅಧ್ಯಯನ ತಿಳಿಸಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ‘ನಾಪತ್ತೆ’ಯಾಗಿರುವ ಶೌಚಾಲಯಗಳ ಸಂಖ್ಯೆ ಗರಿಷ್ಠವಾಗಿದೆ. ಎಸ್‌ಬಿಎಮ್-ಜಿ ಮೂಲಕ ತಮ್ಮ ಹೆಸರುಗಳಲ್ಲಿ ನಿರ್ಮಿಸಲಾದ ಶೌಚಾಲಯಗಳ ಬಗ್ಗೆ 3.2 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಅರಿವಿಲ್ಲ. ಅದೇ ವೇಳೆ, ಸಾವಿರಾರು ಮನೆಗಳಲ್ಲಿ ಶೌಚಾಲಯಗಳಿರುವ ಹೊರತಾಗಿಯೂ, ಅವುಗಳ ಪೈಕಿ ಸುಮಾರು 30 ಶೇಕಡಾವನ್ನು ಯಾವತ್ತೂ ಬಳಸಲಾಗಿಲ್ಲ ಎಂದು 2017ರ ಬಳಿಕ ನಡೆದಿರುವ ಹಲವು ಸಮೀಕ್ಷೆಗಳು ತಿಳಿಸಿವೆ. ಇದು ಒಡಿಎಫ್ ಅಂಕಿ-ಸಂಖ್ಯೆಗಳು ಮತ್ತು ಸರಕಾರದ ವರದಿಗಳ ನಡುವೆ ತಾಳಮೇಳ ಇಲ್ಲವೆನ್ನುವುದನ್ನು ಸೂಚಿಸುತ್ತದೆ.

ಇನ್ನೊಂದು ಪ್ರಶ್ನೆಯೆಂದರೆ, ನಿಜವಾಗಿಯೂ ಇರುವ ಶೌಚಾಲಯಗಳನ್ನು ಅಷ್ಟೊಂದು ಜನರು ಏಕೆ ಉಪಯೋಗಿಸುತ್ತಿಲ್ಲ ಎನ್ನುವುದು. 2021ರಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ, ಭಾರತದ ಜನಸಂಖ್ಯೆಯ ಶೇ. 45ಕ್ಕೂ ಅಧಿಕ ಭಾಗ ಈಗಲೂ ಬಹಿರಂಗ ಮಲವಿಸರ್ಜನೆಯಲ್ಲಿ ತೊಡಗಿದೆ. ಕಟ್ಟಲಾಗಿರುವ ಶೌಚಾಲಯಗಳನ್ನು ಸರಿಯಾಗಿ ನಿರ್ವಹಿಸದಿರುವುದು ಹಾಗೂ ಅವುಗಳ ನಿರ್ಮಾಣದಲ್ಲಿ ಕಳಪೆ ಸಾಮಗ್ರಿಗಳನ್ನು ಬಳಸಿರುವುದು ಇದಕ್ಕೆ ಕಾರಣವಾಗಿದೆ.

‘‘5.5 ಲಕ್ಷ ನೈರ್ಮಲ್ಯ ಕೆಲಸಗಾರರನ್ನು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಸೇರ್ಪಡೆಗೊಳಿಸಲಾಗಿದೆ’’ ಎನ್ನುವ ಸರಕಾರದ ಸುಳ್ಳು ಹೇಳಿಕೆಗಳು ಅವರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಯ ಕಳಪೆ ಅನುಷ್ಠಾನದಿಂದಾಗಿ ಮೂರು ಲಕ್ಷಕ್ಕೂ ಅಧಿಕ ನೈರ್ಮಲ್ಯ ಕೆಲಸಗಾರರು ಮತ್ತು ತ್ಯಾಜ್ಯ ವಿಲೇವಾರಿ ಕೆಲಸಗಾರರು ಈ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗಿರುವ ಶೌಚಾಲಯಗಳಿಂದ ಅಪಾಯಗಳನ್ನು ಎದುರಿಸುತ್ತಿದ್ದಾರೆ, ಪ್ರಯೋಜನಗಳನ್ನಲ್ಲ. ಯಾಕೆಂದರೆ, ಈ ಕೆಲಸಗಾರರು ತ್ಯಾಜ್ಯ ಎಸೆಯುವ ಸ್ಥಳಗಳ ಸುತ್ತಮುತ್ತಲಿನಲ್ಲಿ ವಾಸಿಸುತ್ತಾರೆ. ಕುಡಿಯುವ ನೀರಿನ ಮೂಲಗಳ ಸಮೀಪದ ಚರಂಡಿಗಳಲ್ಲಿ ತ್ಯಾಜ್ಯ ಪೈಪ್‌ಗಳು ತೆರೆದಿರುವುದು ಅತಿ ದೊಡ್ಡ ಸವಾಲಾಗಿದೆ, ಇದರಿಂದಾಗಿ ಮಲವು ಕುಡಿಯುವ ನೀರಿನ ಮೂಲಗಳನ್ನು ಸೇರುವ ಸಾಧ್ಯತೆಯಿದೆ.

ತಮ್ಮ ಪ್ರದೇಶಗಳಲ್ಲಿ 70,942 ಏಕ ಗುಂಡಿ ಶೌಚಾಲಯಗಳಿರುವುದನ್ನು 23 ರಾಜ್ಯಗಳ ನೈರ್ಮಲ್ಯ ಕೆಲಸಗಾರರು ಗುರುತಿಸಿದ್ದಾರೆ. ಈ ಗುಂಡಿಗಳನ್ನು ಕಳೆದ ಏಳು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ತೆರೆಯಲಾಗಿಲ್ಲ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು- ಎರಡು ರಾಜ್ಯಗಳಲ್ಲೇ ಇಂತಹ 9,631 ಶೌಚಾಲಯಗಳಿವೆ. ಗ್ರಾಮೀಣ ಮನೆಗಳಲ್ಲಿ ಶೌಚಾಲಯಗಳನ್ನು ಬಳಸದಿರಲು ಇದು ಕೂಡ ಒಂದು ಪ್ರಮುಖ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಶೇ. 20ಕ್ಕೂ ಅಧಿಕ ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳಿಗೆ ನಳ್ಳಿ ನೀರಿನ ಸಂಪರ್ಕವಿಲ್ಲ.

2019ರಲ್ಲಿ ನಡೆದ ಎನ್‌ಎಸ್‌ಎಸ್ ಸುತ್ತಿನ ಸಮೀಕ್ಷೆಯ ಬಳಿಕ ಹಲವು ದೂರುಗಳು ಕೇಳಿಬಂದರೂ, ಅಂಕಿ-ಸಂಖ್ಯೆಗಳಲ್ಲಿನ ಅವ್ಯವಹಾರಗಳನ್ನು ಮುಚ್ಚಿಹಾಕುವಂತೆ ತಮಗೆ ಮೇಲಧಿಕಾರಿಗಳಿಂದ ನಿಯಮಿತವಾಗಿ ಒತ್ತಡಗಳು ಬರುತ್ತವೆ ಎಂಬುದಾಗಿ ಅಂಕಿ-ಸಂಖ್ಯೆ ಸಚಿವಾಲಯ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧೀನದಲ್ಲಿ ಬರುವ ಅಧಿಕಾರಿಗಳು ಹೇಳುತ್ತಾರೆ. ಬದಲಿಗೆ, ಈ ಯೋಜನೆಗಳಿಂದ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಫಲಾನುಭವಿಗಳು ಹೆಚ್ಚಿನ ಸಂದರ್ಭಗಳಲ್ಲಿ ಸುಳ್ಳು ಮಾಹಿತಿಗಳನ್ನು ನೀಡುತ್ತಾರೆ ಎಂಬುದಾಗಿ ಹೇಳುವಂತೆ ಈ ಅಧಿಕಾರಿಗಳಿಗೆ ಸೂಚಿಸಲಾಗಿದೆ.

‘ಎಸ್‌ಬಿಎಮ್ 2.0’ದ ಮುಖ್ಯ ಉದ್ದೇಶ ‘ಈಗಾಗಲೇ ಕಟ್ಟಲಾಗಿರುವ’ ಶೌಚಾಲಯಗಳ ಮರುಮೌಲ್ಯಮಾಪನವಾಗಬೇಕಾಗಿತ್ತು. ಆದರೆ, ಅದರ ಜೊತೆಗೆ ಅದು ರಾಷ್ಟ್ರವ್ಯಾಪಿ ಸಮೀಕ್ಷೆ ಮತ್ತು ಭೌತಿಕ ತಪಾಸಣೆ ಅಭಿಯಾನವನ್ನೂ ನಡೆಸುತ್ತಿದೆ. ಎಸ್‌ಬಿಎಮ್ ಮಾಹಿತಿ ಕೋಶದಲ್ಲಿ ತುಂಬಾ ತಪ್ಪುಗಳು ಇರುವುದರಿಂದ, 2014ರ ಬಳಿಕದ ಎಸ್‌ಬಿಎಮ್ ಅನುಮೋದನೆಗಳ ಬಗ್ಗೆ ಪರಿಶೀಲನೆ ನಡೆಸಲು ವಿಸ್ತೃತ ತನಿಖೆಯೊಂದರ ಅಗತ್ಯವೂ ಇದೆ. ಲಕ್ಷಾಂತರ ಶೌಚಾಲಯಗಳ ಬಗ್ಗೆ ಯಾಕೆ ಕೃತಕ ಅಂಕಿ-ಸಂಖ್ಯೆಗಳನ್ನು ತಯಾರಿಸಲಾಗುತ್ತಿದೆ ಎಂಬ ಬಗ್ಗೆಯೂ ಸರಕಾರವು ವಿಸ್ತೃತ ವಿವರಣೆಯೊಂದನ್ನು ನೀಡಲು ಇದು ಸಕಾಲವಾಗಿದೆ. ಇಂತಹ ಹಲವಾರು ನಿರ್ಲಕ್ಷಿತ ಶೌಚಾಲಯಗಳು ಮತ್ತು ಕಳಪೆ ನೈರ್ಮಲ್ಯ ವ್ಯವಸ್ಥೆಗಳು ಇರುವಾಗ ಮುಂದಿನ ಕೆಲವು ವರ್ಷಗಳಲ್ಲಿ ಅವು ರೋಗ ಪ್ರಸರಣದ ಕೇಂದ್ರವಾಗುವ ಸಾಧ್ಯತೆಯೂ ಇದೆ.

ಭಾರತೀಯ ಪ್ರಜಾಸತ್ತೆ ಮತ್ತು ಅದರ ನಾಗರಿಕತೆಯ ಮೂಲಗಳು ಜಾತಿ ಮತ್ತು ‘ಶುದ್ಧ’ ಮತ್ತು ‘ಅಶುದ್ಧ’ ಎಂಬ ಕಲ್ಪನೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ‘ಸ್ವಚ್ಛ ಭಾರತ’ ಮತ್ತು ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯು ಜಾತಿ ಆಧಾರಿತ ತಾರತಮ್ಯದ ವಿರುದ್ಧ ಸಂಘಟಿತ ಹೋರಾಟ ಮತ್ತು ಉತ್ತಮ ಆರೋಗ್ಯ ಲಭ್ಯತೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿರಬೇಕಾಗಿತ್ತು. ಈ ಗುರಿಯನ್ನು ತಲುಪುವಲ್ಲಿ ನಾವು ವಿಫಲರಾಗಿದ್ದೇವೆ. ಹಾಗಾಗಿ, ಸಮಾನ ಪೌರತ್ವಕ್ಕೆ ನಾವು ಹೊಂದಿರುವ ಬದ್ಧತೆಯೂ ದುರ್ಬಲವಾಗಿದೆ.

ಕೃಪೆ : thewire.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)