varthabharthi


ರಾಷ್ಟ್ರೀಯ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಕಾಳಿಚರಣ್ ಮಹಾರಾಜ್ ಬಂಧನ

ವಾರ್ತಾ ಭಾರತಿ : 21 Jan, 2022

ಥಾಣೆ, ಜ. 20: ಮಹಾತ್ಮಾ ಗಾಂಧಿ ಅವರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಇಲ್ಲಿ ದಾಖಲಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಳಿಚರಣ್ ಮಹಾರಾಜ್ ನನ್ನು ಮಹಾರಾಷ್ಟ್ರದ ಥಾಣೆ ನಗರದ ಪೊಲೀಸರು ಛತ್ತೀಸ್‌ಗಡದಿಂದ ಬಂಧಿಸಿದ್ದಾರೆ. ಇದೇ ರೀತಿಯ ಪ್ರಕರಣಕ್ಕೆ ಸಂಬಂಧಿಸಿ ಛತ್ತೀಸ್‌ಗಢದ ರಾಯಪುರ ಕಾರಾಗೃಹದಲ್ಲಿರುವ ಕಾಳಿಚರಣ್ ಮಹಾರಾಜ್ ನನ್ನು ಬುಧವಾರ ರಾತ್ರಿ ಥಾಣೆ ನಗರ ಪೊಲೀಸರು ಬಂಧಿಸಿದರು. ವರ್ಗಾವಣೆ ರಿಮಾಂಡ್‌ನಲ್ಲಿ ಅವರನ್ನು ಇಲ್ಲಿಗೆ ಕರೆ ತರಲಾಗಿದ್ದು, ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಇಲ್ಲಿನ ನೌಪಾಡ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಛತ್ತೀಸ್‌ಗಢದ ರಾಜಧಾನಿಯಲ್ಲಿ ಕಳೆದ ವರ್ಷ ಡಿಸೆಂಬರ್ 26ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ರಾಯಪುರ ಪೊಲೀಸರು ಈ ಹಿಂದೆ ಕಾಳಿಚರಣ್ ಮಹಾರಾಜ್ ಅವರನ್ನು ಬಂಧಿಸಿದ್ದರು.

ಇಲ್ಲಿ ಅವರ ವಿರುದ್ಧ ದಾಖಲಾಗಿದ್ದ ಇದೇ ರೀತಿಯ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ವಾರ್ಧಾದ ಪೊಲೀಸರು ಜನವರಿ 12ರಂದು ಅವರನ್ನು ಬಂಧಿಸಿದ್ದರು. ಮಹಾತ್ಮಾ ಗಾಂಧಿ ಅವರ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆ ಕುರಿತಂತೆ ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಸಚಿವ ಜಿತೇಂದ್ರ ಅವದ್ ನೀಡಿದ ದೂರಿನ ಆಧಾರದಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ಕಾಳಿಚರಣ್ ಮಹಾರಾಜ ಅವರನ್ನು ರಾಯಪುರದಿಂದ ಬಂಧಿಸಲಾಗಿದೆ ಎಂದು ನೌಪಾಡ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಚತ್ರಪತಿ ಶಿವಾಜಿ ಮಹಾರಾಜ 1659ರಲ್ಲಿ ಆದಿಲ್‌ಶಾಹಿ ಕಮಾಂಡರ್ ಅಪ್ಝಲ್ ಖಾನ್ ಅವರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ 2021 ಡಿಸೆಂಬರ್ 19ರಂದು ಆಯೋಜಿಸಲಾಗಿದ್ದ ‘ಶಿವ ಪ್ರತಾಪ್ ದಿನ್’ ಕಾರ್ಯಕ್ರಮದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಈ ಹಿಂದೆ ಪುಣೆ ಪೊಲೀಸರು ಕೂಡ ಕಾಳಿಚರಣ್ ಮಹಾರಾಜ ಅವರನ್ನು ಬಂಧಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)