varthabharthi


ವಿಶೇಷ-ವರದಿಗಳು

ಭಾರತದ ಪ್ರಜಾತಂತ್ರ ಶಿಥಿಲವಾಗುತ್ತಿದೆ -ಅಮರ್ತ್ಯ ಸೇನ್

ವಾರ್ತಾ ಭಾರತಿ : 22 Jan, 2022
ಮೂಲ: ಮಿತಾಲಿ ಮುಖರ್ಜಿ- ಕನ್ನಡಕ್ಕೆ: ನಾ. ದಿವಾಕರ

ಅಮರ್ತ್ಯ ಸೇನ್

ಭಾರತ ತಾನು ನಡೆದು ಬಂದ ಹಾದಿಯ ಬಗ್ಗೆ ಹೆಮ್ಮೆ ಪಡಲು ಸಾಕಷ್ಟು ಕಾರಣಗಳಿವೆ. ಆದರೆ ನಾವು ಹೆಮ್ಮೆ ಪಡದೆ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಾ ಹೋಗುವುದು ಇತಿಹಾಸಕ್ಕೆ ಅಪಚಾರ ಎಸಗಿದಂತಾಗುತ್ತದೆ, ಭಾರತಕ್ಕೆ ನಿಷ್ಠೆ ತೋರದಂತಾಗುತ್ತದೆ. ನಾನು ಭಾರತೀಯ ಪಾಸ್‌ಪೋರ್ಟ್ ಏಕೆ ಇನ್ನೂ ಉಳಿಸಿಕೊಂಡಿದ್ದೇನೆ ಎಂದರೆ ನನಗೆ ಭಾರತೀಯನೆಂಬ ಹೆಮ್ಮೆ ಇದೆ. ನಾವು ಯಾವುದಕ್ಕೆ ಬದ್ಧರಾಗಿದ್ದೇವೆ ಯಾವುದಕ್ಕೆ ಬದ್ಧರಾಗಬಲ್ಲೆವು ಎನ್ನುವುದರ ಬಗ್ಗೆ ನನಗೆ ಹೆಮ್ಮೆ ಇದೆ. ಈ ಹೆಮ್ಮೆ ಪಡುವುದರ ಬದಲು ಕಣ್ಣೆದುರಿನ ತಾರತಮ್ಯಗಳಿಗೆ ಮುಖಾಮುಖಿಯಾದಾಗ ನಾವು ಜಾಗೃತರಾಗಬೇಕಾಗುತ್ತದೆ. ನನಗೆ 88 ವರ್ಷ ವಯಸ್ಸಾಗಿದೆ, ದುರ್ಬಲನಾಗಿದ್ದೇನೆ. ಆದರೂ ನಾನು ಎದ್ದು ನಿಲ್ಲಬಲ್ಲೆ ಎಂಬ ದೃಢ ವಿಶ್ವಾಸ ನನ್ನಲ್ಲಿದೆ. ಭಾರತದಲ್ಲಿ ಪ್ರತಿಯೊಬ್ಬರಿಗೂ ಈ ಆತ್ಮವಿಶ್ವಾಸ ಇರಬೇಕು. ಇದು ನಮ್ಮ ಜವಾಬ್ದಾರಿಯ ಒಂದು ಭಾಗ ಮತ್ತು ಒಂದು ಅಸಾಧಾರಣ ಶ್ರೀಮಂತ ರಾಷ್ಟ್ರದ ವಾರಸುದಾರರಾಗಿ ಇದು ನಮ್ಮ ಕರ್ತವ್ಯವೂ ಹೌದು.

ಶಾಲಾ ಶಿಕ್ಷಣ

ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳ ಕಾಲ ಸತತವಾಗಿ ಶಾಲೆಗಳನ್ನು ಮುಚ್ಚಿರುವುದೇ ಅಲ್ಲದೆ ಅನ್ಯ ಕಾರಣಗಳಿಗಾಗಿಯೂ ಎಳೆ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತದೆ. ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆ ಎಷ್ಟು ದುರವಸ್ಥೆಯಿಂದ ಕೂಡಿದೆ ಎಂದರೆ ಸಾಂಕ್ರಾಮಿಕ ಇಲ್ಲದೆಯೂ ವ್ಯವಸ್ಥೆಯು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಬೋಧನೆಯೂ ಕಟ್ಟುಪಾಡುಗಳಿಗೊಳಗಾಗಿದ್ದು ನೈಜ ಜ್ಞಾನಾಭಿವೃದ್ಧಿಗೆ ಪೂರಕವಾಗಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಮುಕ್ತ ವಾತಾವರಣ ಇರಬೇಕಾಗುತ್ತದೆ ಆದರೆ ಗಣಿತ ಬೋಧನೆಯನ್ನು ರಾಷ್ಟ್ರೀಯತೆಯ ಮೂಸೆಯಲ್ಲಿ ನಡೆಸಿದರೆ ಅದು ಪ್ರಮಾದವಾಗುತ್ತದೆ. ಈ ಸಮಸ್ಯೆ ಆರಂಭದಿಂದಲೂ ಇರುವುದಾದರೂ ಕಳೆದ ಒಂದು ದಶಕದಲ್ಲಿ ತೀವ್ರತೆ ಪಡೆಯುತ್ತಿದೆ. ಸ್ವತಂತ್ರವಾಗಿ ಆತ್ಮಚೈತನ್ಯಕ್ಕೆ ಅವಕಾಶ ನೀಡುವ ರೀತಿಯಲ್ಲಿ ಶಿಕ್ಷಣ ನೀತಿಯನ್ನು ರೂಪಿಸಬೇಕಿದೆ. ಶಾಲೆಗಳನ್ನು ಮುಚ್ಚುವುದು ಮತ್ತು ಬೋಧಕರ ಕೊರತೆ ಕೋವಿಡ್ ಸಮಸ್ಯೆಯಿಂದಾಗಿ ಉಲ್ಬಣಿಸಿದೆಯಾದರೂ ಇದಷ್ಟೇ ಸಮಸ್ಯೆಯಲ್ಲ ಎನ್ನುವುದನ್ನೂ ಮನಗಾಣಬೇಕಿದೆ.

ಯುಎಪಿಎ ಕಾಯ್ದೆ

ನರೇಂದ್ರ ಮೋದಿ ಸರಕಾರ ಯುಎಪಿಎ ಕರಾಳ ಶಾಸನವನ್ನು ವ್ಯಾಪಕವಾಗಿ ಬಳಸುತ್ತಿರುವುದು ಆತಂಕಕಾರಿಯಾಗಿದೆ. ಬ್ರಿಟಿಷರ ಆಡಳಿತದಲ್ಲಿ ನನ್ನ ಪೂರ್ವಿಕರು, ಯಾವುದೇ ಅಪರಾಧ ಮಾಡದಿದ್ದರೂ, ಮಾಡಬಹುದು ಎಂಬ ಅನುಮಾನದ ಮೇಲೆ ನಿರ್ಬಂಧಕ ಬಂಧನಕ್ಕೊಳಗಾಗಿ ಸೆರೆವಾಸ ಅನುಭವಿಸುತ್ತಿದ್ದುದು ಈಗ ನೆನಪಾಗುತ್ತದೆ. ಈ ನೀತಿ ಸ್ವಾತಂತ್ರ್ಯಾನಂತರವೂ ಮುಂದುವರಿಯುವುದನ್ನು ನಾನು ನಿರೀಕ್ಷಿಸರಲಿಲ್ಲ ಆದರೆ ಇಂದಿಗೂ ಮುಂದುವರಿದಿದೆ. ಯುಎಪಿಎ ಕಾಯ್ದೆಯ ಬಳಕೆ ಕೇವಲ ವ್ಯಕ್ತಿ ಸ್ವಾತಂತ್ರ್ಯಕ್ಕಷ್ಟೇ ಮಾರಕವಲ್ಲ, ಶಿಕ್ಷಣದಲ್ಲಿ ಏನಿರಬೇಕು ಮತ್ತು ಪ್ರಜಾಪ್ರಭುತ್ವ ಎಂದರೇನು ಎಂದು ಅರ್ಥಮಾಡಿಕೊಳ್ಳುವುದಕ್ಕೂ ಇದು ಅಡ್ಡಿಪಡಿಸುತ್ತದೆ. ಯಾವುದೇ ಅಪರಾಧ ಎಸಗದ ವ್ಯಕ್ತಿಗಳನ್ನೂ ಅವರು ಅಪರಾಧಗೆಯ್ಯಬಹುದು ಎಂಬ ಅನುಮಾನದ ಮೇಲೆ ಬಂಧಿಸಿ ಜೈಲುಶಿಕ್ಷೆ ವಿಧಿಸಲಾಗುತ್ತದೆ ಇದು ನ್ಯಾಯಯುತವಲ್ಲ. ಭಾರತ ಸ್ವತಂತ್ರ ರಾಷ್ಟ್ರವಾಗಿ 75 ವರ್ಷಗಳನ್ನು ಪೂರೈಸುತ್ತಿದೆ ಆದರೂ ಅಸಮಾನತೆಯ ಭೀತಿ ನಮ್ಮನ್ನು ಕಾಡುತ್ತಲೇ ಇದೆ. ಸರಕಾರಗಳು ಸಮಾನತೆಯನ್ನು ಸಾಧಿಸುವಲ್ಲಿ ಯಾವ ರೀತಿ ಕ್ರಮಿಸುತ್ತವೆ ಮತ್ತು ತಮ್ಮ ಸಮಸ್ಯೆಗಳನ್ನು ನೀಗಿಸುವುದಕ್ಕೆ ಸರಕಾರಗಳು ಯಾವ ಕ್ರಮಗಳನ್ನು ಕೈಗೊಂಡಿವೆ ಎಂಬ ಜನರ ಗ್ರಹಿಕೆಯ ಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆಯೂ ಅವಲಂಬಿಸಿರುತ್ತದೆ. ಕೋವಿಡ್ ಸಂದರ್ಭ ಲಾಕ್‌ಡೌನ್ ಆಗಿದ್ದಾಗ ಜನರಿಗೆ ತಮ್ಮ ಮನೆಯಿಂದ ಹೊರಗೆ ಹೋಗುವ ಅವಕಾಶವೇ ಇಲ್ಲ ಎಂದು ಏಕಾಏಕಿ ಹೇಳಲಾಯಿತು. ದಿನಗೂಲಿ ನೌಕರರನ್ನು ಈ ರೀತಿ ನಿರ್ಬಂಧಿಸುವುದರಿಂದ ಅವರನ್ನು ಹಸಿವಿನ ಕೂಪಕ್ಕೆ ತಳ್ಳಿದಂತಾಗುತ್ತದೆ. ಬಿಹಾರದ ವಲಸೆ ಕಾರ್ಮಿಕರೂ ಹೊರಗೆ ಹೋಗಲು ಸಾಧ್ಯವಾಗದಿದ್ದರೆ, ತಮ್ಮ ತವರಿಗೆ ತೆರಳಲು ಸಿದ್ಧರಾಗುತ್ತಾರೆ ಆದರೆ ಅವರಿಗೆ ಅದು ಸಾಧ್ಯವಾಗಲೇ ಇಲ್ಲ.

ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ, ಈ ಸಮಸ್ಯೆಗಳು ಏಕೆ ನಿರೀಕ್ಷಿಸಿದಷ್ಟು ಗಮನಸೆಳೆಯಲಿಲ್ಲ? ರಾಜಕೀಯ ಪ್ರಕ್ರಿಯೆಯಲ್ಲಿ ಬಡಜನತೆಯ ಹಿತಾಸಕ್ತಿಗಳಿಗೆ ಪ್ರಾಮುಖ್ಯತೆ ನೀಡದೆ ಹೋದರೆ ಏನಾಗುತ್ತದೆ? ಇದು ಪ್ರಜಾಪ್ರಭುತ್ವದ ಕೊರತೆಯ ಸಂಕೇತವಾಗಿ ಕಾಣುತ್ತದೆ. ಕಳೆದ ಒಂದು ದಶಕದಲ್ಲಿ ದೇಶ ಯಾವ ದಿಕ್ಕಿನಲ್ಲಿ ಸಾಗಿದೆ ಎಂದು ಗಮನಿಸಿದಾಗ, ಪ್ರಜಾಪ್ರಭುತ್ವವನ್ನು ಬಲಪಡಿಸುವುದಕ್ಕಿಂತಲೂ ಶಿಥಿಲಗೊಳಿಸುವ ದಿಕ್ಕಿನಲ್ಲೇ ಸಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆರ್ಥಿಕ ಸಮಾನತೆಯನ್ನು ಕೊನೆಗಾಣಿಸಿ, ಯಾವುದೇ ರಾಜಕೀಯ ಪರಿಹಾರಗಳನ್ನೂ ಸೂಚಿಸದ ಈ ಪ್ರಕ್ರಿಯೆ ಅಪೇಕ್ಷಣೀಯವಲ್ಲ. ಮೂಲ ಸಮಸ್ಯೆ ಇರುವುದು ಕಡು ಬಡವರು ಮತ್ತು ಅವರ ಅವಶ್ಯಕತೆಗಳ ಬಗ್ಗೆ ಕೇಂದ್ರ ಸರಕಾರ ತೋರಿದ ನಿರ್ಲಕ್ಷ್ಯದಲ್ಲಿ. ಪ್ರಜಾತಂತ್ರ ನೀತಿಗಳಲ್ಲಿ ನಾವು ಕಾಣುತ್ತಿರುವ ಅಧಃಪತನ ಅಪಾಯಕಾರಿಯಾಗಿ ಕಾಣುತ್ತದೆ. ಬಡ ಜನತೆಯ ಹಿತಾಸಕ್ತಿಗಳ ಬಗ್ಗೆ ಸರಕಾರದ ಗಮನ ಸೆಳೆಯುವುದೇ ದುಸ್ತರವಾಗಿದೆ. ಈ ಜನತೆಗೆ ಅಷ್ಟೊಂದು ಬಲವೂ ಇಲ್ಲವಾಗಿದೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆ ಶಿಥಿಲವಾದಾಗ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಈ ಸಂದರ್ಭದಲ್ಲಿ ಪ್ರಜಾತಂತ್ರ ಶಿಥಿಲವಾಗುತ್ತಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಜನತೆಯ ಹಿತಾಸಕ್ತಿಯ ದೃಷ್ಟಿಯಿಂದ ಮುಖ್ಯವಾಗುತ್ತದೆ.

ಪ್ರಜಾತಂತ್ರದ ಮೌಲ್ಯಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಗ್ಗೆ ಹೇಳುವುದಾದರೆ, ಬಹುಪಕ್ಷೀಯ ಪ್ರಜಾಪ್ರಭುತ್ವ ಬಹಳ ಮುಖ್ಯವಾಗುತ್ತದೆ. ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ತನ್ನಿಚ್ಛೆಯಂತೆ ಆಡಳಿತ ನಡೆಸುವುದೇ ಅಲ್ಲದೆ ಶಾಸಕಾಂಗವನ್ನು ನ್ಯಾಯಾಂಗ ಮತ್ತು ಇತರ ಸಂಸ್ಥೆಗಳಿಗಿಂತಲೂ ಬಲಿಷ್ಠವಾಗಿಬಿಡುತ್ತದೆ. ನ್ಯಾಯಾಲಯಗಳಲ್ಲೇ ನಮಗೆ ಸಾಕಷ್ಟು ಅನುಭವ ಆಗಿದೆ. ಕಾರ್ಯಾಂಗ ಮತ್ತು ನ್ಯಾಯಾಂಗದ ದೃಷ್ಟಿಯಿಂದ ಪ್ರಜಾಪ್ರಭುತ್ವದ ಮಹತ್ವವನ್ನು ನಾವು ಮನಗಾಣಬೇಕಿದೆ. ಈ ಸಂಸ್ಥೆಗಳು ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಗಮನನೀಡಬೇಕಿದೆ. ಶಾಸಕಾಂಗವು ಸಮತೋಲನವಿಲ್ಲದ, ನ್ಯಾಯಯುತವಲ್ಲದ ಮಾರ್ಗಗಳಲ್ಲಿ ಅಧಿಕಾರ ಚಲಾಯಿಸಲು ಆರಂಭಿಸಿದರೆ ವ್ಯವಸ್ಥೆಯಲ್ಲಿ ತೀವ್ರತೆರನಾದ ಪಲ್ಲಟಗಳು ಸಂಭವಿಸುತ್ತವೆ. ಕಾಂಗ್ರೆಸ್ ಆಳ್ವಿಕೆಯ ಸಂದರ್ಭದಲ್ಲೂ ಹಲವು ಸಂಸ್ಥೆಗಳು ಇದೇ ಸಮಸ್ಯೆ ಎದುರಿಸಿದ್ದನ್ನು ನೋಡಿದ್ದೇವೆ. ಈ ಹಿಂದೆಯೂ ಅನೇಕ ರೀತಿಯ ಅನ್ಯಾಯಗಳು ನಡೆದಿವೆ ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರದ ಕಾರ್ಯನಿರ್ವಹಣೆಯ ಮೂಲಕ ಈ ಸಂಸ್ಥೆಗಳನ್ನು ಆಕ್ರಮಿಸುತ್ತಿರುವುದನ್ನು ಕಾಣುತ್ತದೆ. ಇಲ್ಲಿ ಸ್ವಾತಂತ್ರ್ಯ, ಶಿಕ್ಷಣ ಹಿನ್ನಡೆ ಅನುಭವಿಸುತ್ತದೆ ಮತ್ತು ಸಾಮಾಜಿಕವಾದ, ರಾಜಕೀಯವಾದ ರುಜುಮಾರ್ಗಗಳು ಹಿನ್ನಡೆ ಅನುಭವಿಸುತ್ತವೆ. ಕೆಳಶ್ರೇಣಿಯಲ್ಲಿರುವ ತಳಸಮುದಾಯಗಳು, ದಲಿತರು ಮತ್ತು ಆದಿವಾಸಿ ಸಮುದಾಯಗಳು ದುರ್ಭರ ಹಾದಿಯಲ್ಲಿ ನಡೆಯುತ್ತಿವೆ. ಇದರಿಂದ ಅಸಮಾನತೆ ಮತ್ತು ಅನ್ಯಾಯಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಇದು ಬದಲಾಗಬೇಕಿದೆ. ಕೊಂಚ ಮಟ್ಟಿಗಾದರೂ ನಾವು ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದೇವೆ, ಉದಾಹರಣೆಗೆ ಪಶ್ಚಿಮ ಬಂಗಾಲದಲ್ಲಿ. ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಒಂದು ಶಕ್ತಿ ಇದೆ. ಆದಾಗ್ಯೂ ಚುನಾವಣಾ ಆಯೋಗವು, ಒಂದು ಪಕ್ಷದ ಅನುಕೂಲಕ್ಕಾಗಿ ಚುನಾವಣೆಗಳನ್ನು ಆಯೋಜಿಸುವ ಮೂಲಕ, ತನ್ನ ಕರ್ತವ್ಯವನ್ನು ನ್ಯಾಯಯುತವಾಗಿ ನಿಭಾಯಿಸಿಲ್ಲ ಎಂಬ ಆರೋಪ ಕೇಳಿಬರುತ್ತದೆ. ಹಾಗಾಗಿ ನಾವು ಇಂದು ಸಂಪೂರ್ಣ ದಿವಾಳಿಯಾಗದಂತಹ ಒಂದು ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಆದರೂ ಈ ವಿಚಾರಗಳ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಆದ್ದರಿಂದಲೇ ಪ್ರಜಾಪ್ರಭುತ್ವವು ಅರ್ಥವ್ಯವಸ್ಥೆ, ಶಿಕ್ಷಣ, ಸಾಮಾಜಿಕ ನ್ಯಾಯ ಹೀಗೆ ಎಲ್ಲ ವಲಯಗಳಿಗೂ ಕೇಂದ್ರ ಬಿಂದು ಆಗುತ್ತದೆ. ದುರಂತ ಎಂದರೆ ಪರಿಸ್ಥಿತಿ ಅನೇಕ ರೀತಿಯಲ್ಲಿ ಹೀನಾಯವಾಗುತ್ತಿದೆ.

ರಾಜಕೀಯ ನಾಯಕತ್ವ

ರಾಜಕೀಯ ನಾಯಕತ್ವ ಮತ್ತು ರೈತ ಮುಷ್ಕರದಂತಹ ಜನಾಂದೋಲನಗಳ ಯಶಸ್ಸಿನ ಬಗ್ಗೆ ಹೇಳುವುದಾದರೆ ನಮಗೆ ಎರಡೂ ಅವಶ್ಯಕತೆ ಇದೆ. ಒಂದು ಸಮಸ್ಯೆ ಉದ್ಭವಿಸಿದಾಗ ಅದಕ್ಕೆ ಮೂಲ ಕಾರಣಗಳೇನು ಎಂದು ಶೋಧಿಸಬೇಕು. ವೈಜ್ಞಾನಿಕವಾಗಿ, ತರ್ಕಬದ್ಧವಾಗಿ ವಿಶ್ಲೇಷಣೆ ಮಾಡಿ ಪರಿಶೋಧನೆ ನಡೆಸಬೇಕು. ಅಷ್ಟೇ ಅಲ್ಲದೆ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಕ್ರಮ ಹೇಗಿರಬೇಕು ಮತ್ತು ಹೇಗೆ ನಡೆಸಲಾಗುತ್ತದೆ ಎಂಬ ಪರಿವೆಯೂ ಇರಬೇಕು. ಹಾಗೆಯೇ ನಮಗೆ ಉತ್ತಮ ನಾಯಕತ್ವವೂ ಅಗತ್ಯ. ಈ ನಾಯಕತ್ವ ಎಲ್ಲಿಂದ ಬರುತ್ತದೆ? ಈ ನಿಟ್ಟಿನಲ್ಲಿ ನ್ಯಾಯಾಂಗದ ಪಾತ್ರ ಬಹಳ ಮಹತ್ವ ಪಡೆಯುತ್ತದೆ, ಕೆಲವು ಸಂದರ್ಭಗಳಲ್ಲಿ ನ್ಯಾಯಾಂಗ ಇದನ್ನು ನಿರ್ವಹಿಸಿರುವುದೂ ಉಂಟು. ಆದರೆ ಕೆಲವೊ್ಮೆು ವಿಫಲವಾಗಿರುವುದು ವಿಷಾದಕರ.

ಸಾರ್ವಜನಿಕರ ಪ್ರತಿಭಟನೆಗಳೂ ಕೆಲವೊಮ್ಮೆ ಗಮನ ಸೆಳೆಯುತ್ತವೆ. ನಾವು ಏನು ಮಾಡಬೇಕೋ ಅದನ್ನು ಮಾಡುತ್ತಿಲ್ಲ ಎಂದು ನೆನಪಿಸುವಂತೆ ಈ ಪ್ರತಿರೋಧಗಳು ವ್ಯಕ್ತವಾಗುತ್ತವೆ. ನನ್ನ ಅಭಿಪ್ರಾಯದಲ್ಲಿ, ಸಂಕುಚಿತ ಮನೋಭಾವದ, ಬಹುಸಂಖ್ಯಾತವಾದದ ನಾಯಕರಿದ್ದು, ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸುವಂತಿದ್ದರೆ ಜನಸಾಮಾನ್ಯರಲ್ಲಿ ಪರಿವರ್ತನೆಯನ್ನು ನಿರೀಕ್ಷಿಸಲಾಗುವುದಿಲ್ಲ. ಈ ಬೆಳವಣಿಗೆಯಾಗಿರುವುದು ದುರದೃಷ್ಟಕರ. ಆದರೂ ಈ ಸಂಕುಚಿತ ಬಹುಸಂಖ್ಯಾತವಾದ ನಶಿಸುತ್ತದೆ ಎಂದು ಭಾವಿಸಲು ಕಾರಣಗಳೂ ಇವೆ. ಬಹುಪಾಲು ಸಂದರ್ಭಗಳಲ್ಲಿ ನಾವು ಕಂಡಿರುವಂತೆ, ಈ ಬೆಳವಣಿಗೆಯನ್ನು ಬಹುಸಂಖ್ಯಾತವಾದ ಎನ್ನಲೂ ಆಗುವುದಿಲ್ಲ ಏಕೆಂದರೆ ಕಳೆದ ಹಲವು ವರ್ಷಗಳಲ್ಲಿ ಭಾರತದ ಬಹುಸಂಖ್ಯಾತ ಜನತೆ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನಿಸುವ ಧೋರಣೆಯನ್ನು ತೋರಿರುವುದು ಕಂಡುಬರುವುದಿಲ್ಲ. ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರೈಸ್ತ ಸಮುದಾಯಗಳು ನೂರಾರು ವರ್ಷಗಳ ಕಾಲ ಯಾವುದೇ ಸಮಸ್ಯೆ ಇಲ್ಲದೆ ಸಮನ್ವಯತೆಯೊಂದಿಗೆ ಬಾಳಿಬದುಕಿವೆ. ಸಮಾನತೆ ಮತ್ತು ನ್ಯಾಯದ ಪರಿಕಲ್ಪನೆಯೊಂದಿಗೆ, ಗಾಂಧಿ ಅಥವಾ ರವೀಂದ್ರನಾಥ ಠಾಗೋರ್ ಆಶಿಸಿದಂತೆ ಒಂದು ಬಹುಸಂಖ್ಯಾತ ಪ್ರಜ್ಞೆಯನ್ನು ಮೂಡಿಸುವುದು ಸಾಧ್ಯ.

ಕೆಲವು ಸಂದರ್ಭಗಳಲ್ಲಿ ಒಂದು ನಿರ್ದಿಷ್ಟ ಸ್ವರೂಪದ ನಾಯಕತ್ವ ಅನಿವಾರ್ಯವಾಗಿಬಿಡುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧಿ ವಸಾಹತು ವಿರೋಧಿ ಧೋರಣೆಯ ಎಲ್ಲರನ್ನೂ ಒಂದುಗೂಡಿಸಿ ನಾಯಕತ್ವ ನೀಡದೆ ಹೋಗಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಬೇಕಾಗುತ್ತದೆ. ನಾಯಕತ್ವದ ಅವಶ್ಯಕತೆಯನ್ನು ಹೋಗಲಾಡಿಸಲಾಗುವುದಿಲ್ಲ. ಆದರೆ ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು. ಠಾಗೋರರ ಹಾಡಿನಲ್ಲಿ ಹೇಳುವಂತೆ ‘‘ಜನರು ನಿಮ್ಮ ಕರೆಗೆ ಸ್ಪಂದಿಸದೆ ಹೋದರೆ ನೀವು ಏಕಾಂಗಿಯಾಗಿ ಸಾಗಲು ಸಿದ್ಧವಾಗಬೇಕು, ನೀವು ಏಕಾಂಗಿಯಾಗಿ ಸಾಗಲು ಸಜ್ಜಾಗಬೇಕು ಆದರೆ ನಮ್ಮನ್ನು ರುಜುಮಾರ್ಗದಲ್ಲಿ ಕರೆದೊಯ್ಯುವಂತಹ ನಾಯಕತ್ವವನ್ನು ರೂಪಿಸಲು ಶ್ರಮಿಸಬೇಕು.’’ ಆರ್ಥಿಕ ಸಮಾನತೆಯ ಸಂಚಕಾರ ತರುವ ರೀತಿಯಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಯೇ ತೊಡಕಾದ ಸಂದರ್ಭದಲ್ಲಿ ರೈತ ಬಾಂಧವರು ಮತ್ತು ಇತರ ಗುಂಪುಗಳು, ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲ ಸಮಸ್ಯೆಗಳಿಗೂ ಒಂದೇ ಪರಿಹಾರ ಮಾರ್ಗ ಇದೆ ಎಂದು ನಾನು ಹೇಳುವುದಿಲ್ಲ, ನಮ್ಮ ಮುಂದೆ ಹಲವು ಮಾರ್ಗಗಳಿವೆ. ಪ್ರಜಾತಂತ್ರದ ಕೊರತೆ ಇದ್ದಾಗ, ತರ್ಕಬದ್ಧ ನಿರ್ಣಯ ಕೈಗೊಳ್ಳಲು ವಿಫಲವಾದಾಗ ಇಂತಹ ಪ್ರತಿರೋಧಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಹಲವಾರು ಸಮಸ್ಯೆಗಳು ಬ್ರಿಟಿಷ್ ಆಡಳಿತದಲ್ಲೇ ಸೃಷ್ಟಿಯಾಗಿವೆ. ಅದೇ ಮಾರಣಾಂತಿಕ ಪ್ರಮಾದಗಳನ್ನು ನಾವು ಮತ್ತೆ ಮತ್ತೆ ಮಾಡುತ್ತಲೇ ಇದ್ದೇವೆ.

ಭವಿಷ್ಯದ ದಿನಗಳು

ಭಾರತದ ಭವಿಷ್ಯದ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ. ನಾನು ಭಾರತೀಯ ಎನ್ನಲು ಹೆಮ್ಮೆಯಾಗುತ್ತದೆ ಹಾಗೂ ವಿಭಿನ್ನ ಗುಂಪುಗಳು ಪರಸ್ಪರ ಸಂವಹನದಲ್ಲಿ ತೊಡಗುವ ಈ ಸಾಮರ್ಥ್ಯ ಹೆಮ್ಮೆ ತರುವಂತಹುದು. ಇದರ ಬಗ್ಗೆ ಸಾಮ್ರಾಟ್ ಅಶೋಕ ತನ್ನ ಶಾಸನಗಳಲ್ಲಿ ಬರೆದಿದ್ದಾನೆ. ರೋಮ್ ಸಾಮ್ರಾಜ್ಯದಲ್ಲಿ ನಾಸ್ತಿಕರನ್ನು ಸುಟ್ಟುಹಾಕಿದ್ದರು ಆದರೆ ಇತ್ತ ಭಾರತದಲ್ಲಿ ಮೊಘಲ್ ದೊರೆ ಅಕ್ಬರ್, ಎಲ್ಲ ಧರ್ಮಗಳ ಬಗ್ಗೆಯೂ ಸಮಾನ ಧೋರಣೆ ತಾಳುವ ಪ್ರಭುತ್ವ ನೀತಿಯನ್ನು ಪ್ರತಿಪಾದಿಸಿದ್ದ, ಧಾರ್ಮಿಕ ವಿಚಾರಗಳಲ್ಲಿ ಪ್ರಭುತ್ವದ ಹಸ್ತಕ್ಷೇಪ ಇರಕೂಡದು ಎಂದೂ ಬೋಧಿಸಿದ್ದ. ಇತ್ತೀಚಿನ ದಿನಗಳಲ್ಲಿ ಈ ಹಸ್ತಕ್ಷೇಪ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಒಂದು ಸಮುದಾಯದ ಜನರಿಗೆ ಅನನುಕೂಲ ಉಂಟುಮಾಡುವಂತಹ ಧೋರಣೆಯನ್ನೂ ಕಾಣುತ್ತಿದ್ದೇವೆ. ಹೀಗಾದಾಗ ನ್ಯಾಯಾಂಗ ಹೊಣೆ ಹೊರಬೇಕಾಗುತ್ತದೆ, ವಿರೋಧ ಪಕ್ಷಗಳು ಇದನ್ನು ಟೀಕಿುವ ಶಕ್ತಿ ಹೊಂದಿರಬೇಕಾಗುತ್ತದೆ.

ಇದು ಕೇವಲ ಅರ್ಥವ್ಯವಸ್ಥೆ ಅಥವಾ ಆದಾಯ ಮತ್ತು ಸಂಪತ್ತನ್ನು ಒಳಗೊಂಡ ಸಮಾನತೆಯ ಪ್ರಶ್ನೆ ಎನಿಸುವುದಿಲ್ಲ. ಇಲ್ಲಿ ರಾಜಕೀಯ ಮತ್ತು ಸಾಮಾಜಿಕ ಶಕ್ತಿಯೂ ಮುಖ್ಯವಾಗುತ್ತದೆ. ಯಾವುದೇ ಒಂದು ಸಮುದಾಯದ ವಿರುದ್ಧ ಸಾಮಾಜಿಕ ತಾರತಮ್ಯಗಳು ಇಲ್ಲದಿರುವುದೂ ಮುಖ್ಯವಾಗುತ್ತದೆ. ಈ ಪರಿಹಾರ ಮಾರ್ಗಗಳನ್ನೊಳಗೊಂಡ ಪ್ರಕ್ರಿಯೆ ಇಂದಿನ ತುರ್ತು ಅಗತ್ಯ. ಭಾರತ ತಾನು ನಡೆದು ಬಂದ ಹಾದಿಯ ಬಗ್ಗೆ ಹೆಮ್ಮೆ ಪಡಲು ಸಾಕಷ್ಟು ಕಾರಣಗಳಿವೆ. ಆದರೆ ನಾವು ಹೆಮ್ಮೆ ಪಡದೆ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಾ ಹೋಗುವುದು ಇತಿಹಾಸಕ್ಕೆ ಅಪಚಾರ ಎಸಗಿದಂತಾಗುತ್ತದೆ, ಭಾರತಕ್ಕೆ ನಿಷ್ಠೆ ತೋರದಂತಾಗುತ್ತದೆ. ನಾನು ಭಾರತೀಯ ಪಾಸ್ ಪೋರ್ಟ್ ಏಕೆ ಇನ್ನೂ ಉಳಿಸಿಕೊಂಡಿದ್ದೇನೆ ಎಂದರೆ ನನಗೆ ಭಾರತೀಯನೆಂಬ ಹೆಮ್ಮೆ ಇದೆ. ನಾವು ಯಾವುದಕ್ಕೆ ಬದ್ಧರಾಗಿದ್ದೇವೆ ಯಾವುದಕ್ಕೆ ಬದ್ಧರಾಗಬಲ್ಲೆವು ಎನ್ನುವುದರ ಬಗ್ಗೆ ನನಗೆ ಹೆಮ್ಮೆ ಇದೆ. ಈ ಹೆಮ್ಮೆ ಪಡುವುದರ ಬದಲು ಕಣ್ಣೆದುರಿನ ತಾರತಮ್ಯಗಳಿಗೆ ಮುಖಾಮುಖಿಯಾದಾಗ ನಾವು ಜಾಗೃತರಾಗಬೇಕಾಗುತ್ತದೆ. ನನಗೆ 88 ವರ್ಷ ವಯಸ್ಸಾಗಿದೆ, ದುರ್ಬಲನಾಗಿದ್ದೇನೆ. ಆದರೂ ನಾನು ಎದ್ದು ನಿಲ್ಲಬಲ್ಲೆ ಎಂಬ ದೃಢ ವಿಶ್ವಾಸ ನನ್ನಲ್ಲಿದೆ. ಭಾರತದಲ್ಲಿ ಪ್ರತಿಯೊಬ್ಬರಿಗೂ ಈ ಆತ್ಮವಿಶ್ವಾಸ ಇರಬೇಕು. ಇದು ನಮ್ಮ ಜವಾಬ್ದಾರಿಯ ಒಂದು ಭಾಗ ಮತ್ತು ಒಂದು ಅಸಾಧಾರಣ ಶ್ರೀಮಂತ ರಾಷ್ಟ್ರದ ವಾರಸುದಾರರಾಗಿ ಇದು ನಮ್ಮ ಕರ್ತವ್ಯವೂ ಹೌದು.

ಕೃಪೆ: thewire.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)