varthabharthi


ವಿಶೇಷ-ವರದಿಗಳು

ಬಲವಂತದ ಮತಾಂತರ: ಗೃಹ ಇಲಾಖೆಯಲ್ಲಿ ಚರ್ಚೆಗಳೇ ನಡೆದಿಲ್ಲ!

ವಾರ್ತಾ ಭಾರತಿ : 22 Jan, 2022
ಜಿ.ಮಹಾಂತೇಶ್

ಬೆಂಗಳೂರು, ಜ.21: ಮತಾಂತರ ನಿಷೇಧ ಮಸೂದೆ ಮಂಡನೆಗೂ ಮುನ್ನ ಮಸೂದೆ ಜಾರಿಯಿಂದಾಗುವ ಸಾಮಾಜಿಕ ಪರಿಣಾಮ, ರಾಜ್ಯದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಬಲವಂತದ ಮತಾಂತರ ಪ್ರಕರಣಗಳ ಅಂಕಿ ಸಂಖ್ಯೆ ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ಗೃಹ ಇಲಾಖೆಯಲ್ಲಿ ಚರ್ಚೆಗಳೇ ನಡೆದಿಲ್ಲ!

ರಾಜ್ಯದಲ್ಲಿ ಬಲವಂತ ಮತ್ತು ಸಾಮೂಹಿಕ ಮತಾಂತರ ಕೃತ್ಯಗಳು ನಡೆಯುತ್ತಿರುವುದರಿಂದಲೇ ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ ಮಂಡಿಸಲಾಗಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಅವರು ಸಮರ್ಥಿಸಿಕೊಂಡಿದ್ದಾರಾದರೂ ಒಳಾಡಳಿತ ಇಲಾಖೆಯ ಕಾನೂನು ಸುವ್ಯವಸ್ಥೆ ಶಾಖೆಯಲ್ಲಿ ಈ ವಿಧೇಯಕ ಕುರಿತಂತೆ ಯಾವುದೇ ಮಾಹಿತಿಯೂ ಲಭ್ಯವಿಲ್ಲ.

ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ ಕುರಿತಂತೆ ಒಳಾಡಳಿತ ಇಲಾಖೆಯಲ್ಲಿ ಅಧಿಕಾರಿಗಳೊಂದಿಗೆ ನಡೆದಿರುವ ಚರ್ಚೆಗಳು, ಸಭೆಗಳು ಸೇರಿದಂತೆ ಒಟ್ಟಾರೆ ಇಡೀ ಪ್ರಕ್ರಿಯೆ ಕುರಿತು ತೆರೆದಿರುವ ಸಮಗ್ರ ಕಡತಕ್ಕಾಗಿ ‘ಠಿಛ್ಛಿಜ್ಝಿಛಿ.ಜ್ಞಿ ’ 2021ರ ಡಿಸೆಂಬರ್ 23ರಂದು ಸಲ್ಲಿಸಿದ್ದ ಆರ್‌ಟಿಐಗೆ ಉತ್ತರಿಸಿರುವ ಇಲಾಖೆಯ ಕಾನೂನು ಸುವ್ಯವಸ್ಥೆಯ ಸರಕಾರದ ಅಧೀನ ಕಾರ್ಯದರ್ಶಿ ರಾಜಶೇಖರ ಎಂ.ಜೆ. ಅವರು ‘ತಾವು ಕೋರಿರುವ ಮಾಹಿತಿಯು ಕಾನೂನು ಮತ್ತು ಸುವ್ಯವಸ್ಥೆ ಶಾಖೆಯಲ್ಲಿ ಪರಿಶೀಲಿಸಲಾಗಿ ಯಾವುದೇ ಮಾಹಿತಿಯು ಲಭ್ಯವಿರುವುದಿಲ್ಲ’ ಎಂದು 2022 ಜನವರಿ 14ರಂದು ಉತ್ತರಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಆಮಿಷಗಳು, ಬಲ ಪ್ರಯೋಗ, ದುರ್ಮಾರ್ಗಗಳ ಮೂಲಕ ಮತಾಂತರ ಮತ್ತು ಸಾಮೂಹಿಕ ಮತಾಂತರ ಕೃತ್ಯಗಳು ನಡೆದಿರುವ ಬಗ್ಗೆ ಅನೇಕ ಪ್ರಕರಣಗಳು ಬೆಳಕಿಗೆ ಬಂದಿರುತ್ತವೆ. ಇಂತಹ ಕೃತ್ಯಗಳು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿ ಸಾಮಾಜಿಕ ಕ್ಷೋಭೆಗಳಿಗೆ ಕಾರಣವಾಗಲಿದೆ. ಇದು ಸಾರ್ವಜನಿಕ ರಕ್ಷಣೆ ಹೊತ್ತಿರುವ ಸಿಬ್ಬಂದಿಗೆ ಸವಾಲಿನ ಕೆಲಸವೂ ಆಗಿರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟಿಪ್ಪಣಿ ಹೊರಡಿಸಿದ್ದರು.

 ಸಾಮಾಜಿಕ ಕ್ಷೋಭೆ, ಕಾನೂನು, ಸುವ್ಯವಸ್ಥೆ, ಸಮಾಜದ ಶಾಂತಿಗೆ ಧಕ್ಕೆ ಉಂಟಾಗಲಿದೆ ಎಂದು ಮತಾಂತರ ನಿಷೇಧ ಮಸೂದೆಯನ್ನು ಪ್ರಸ್ತಾವನೆ ಸಲ್ಲಿಸಿರುವ ಒಳಾಡಳಿತ ಇಲಾಖೆಯಲ್ಲಿಯೇ ಈ ಸಂಬಂಧ ಯಾವುದೇ ಮಾಹಿತಿ ಇಲ್ಲವೆಂದು ಕಾನೂನು ಸುವ್ಯವಸ್ಥೆ ಶಾಖೆಯೇ ಉತ್ತರಿಸಿರುವುದು ಸರಕಾರದ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

 ರಾಜ್ಯದಲ್ಲಿ ನಿಜಕ್ಕೂ ದೊಡ್ಡಪ್ರಮಾಣದಲ್ಲಿ ಬಲವಂತವಾಗಿ ಮತಾಂತರ ನಡೆಯುತ್ತಿದೆ ಎಂದು ಹೇಳುತ್ತಿರುವ ಸರಕಾರವು ಈ ಬಗ್ಗೆ ಒಳಾಡಳಿತ ಇಲಾಖೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಮತ್ತು ಸಾಮಾಜಿಕ ಕ್ಷೋಭೆಗೆ ಕಾರಣವಾಗಿದೆಯೇ, ಸಮಾಜದಲ್ಲಿ ಅಶಾಂತಿ ಉಂಟಾಗಿದೆಯೇ ಎಂಬ ಕುರಿತು ಅಧಿಕಾರಿಗಳೊಂದಿಗೆ, ಪೊಲೀಸ್ ಮಹಾನಿರ್ದೇಶಕರು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು, ತಹಶೀಲ್ದಾರರೊಂದಿಗೆ ಸಮಾಲೋಚನೆ ನಡೆಸಬೇಕಿತ್ತು. ಆದರೆ ಈ ಯಾವ ಪ್ರಕ್ರಿಯೆಗಳೂ ಒಳಾಡಳಿತ ಇಲಾಖೆಯಲ್ಲಿ ನಡೆದಿಲ್ಲ ಎಂಬುದಕ್ಕೆ ಸರಕಾರ ಕೊಟ್ಟಿರುವ ಉತ್ತರವೇ ಉತ್ತಮ ನಿದರ್ಶನವಾಗಿದೆ.

  ರಾಜ್ಯದಲ್ಲಿ 2018, 2019, 2020, 2021ರ ಫೆಬ್ರವರಿ ಅಂತ್ಯಕ್ಕೆ 16 ಪ್ರಕರಣಗಳಷ್ಟೇ ದಾಖಲಾಗಿವೆ. ವಿಶೇಷವೆಂದರೆ ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ ತರಲು ವಿಧಾನಸಭೆ ಅಧಿವೇಶನದಲ್ಲಿ ಕೂಗೆಬ್ಬಿಸಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು 2021ರ ಫೆಬ್ರವರಿ 2ರಂದು ಕೇಳಿದ್ದ ಪ್ರಶ್ನೆಗೆ ಅಂದಿನ ಗೃಹ ಸಚಿವ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಅಂಕಿ ಅಂಶಗಳ ಸಹಿತ ಸದನಕ್ಕೆ ಉತ್ತರಿಸಿದ್ದರು.

   ಮತ್ತೊಂದು ವಿಶೇಷ ಸಂಗತಿ ಎಂದರೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕಳೆದ 10, 15 ವರ್ಷಗಳಿಂದ ಬಲವಂತವಾಗಿ ಜನರನ್ನು ಮತಾಂತರಗೊಳಿಸಲಾಗುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಸದನದಲ್ಲಿ ಎತ್ತರಿಸಿದ ದನಿಯಲ್ಲಿ ಮಾತನಾಡಿದ್ದರು. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಬಲವಂತವಾಗಿ ಮತಾಂತರ ಮಾಡಿರುವ ಬಗ್ಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಇನ್ನು ಗೂಳಿಹಟ್ಟಿ ಶೇಖರ್ ಅವರ ಸ್ವಕ್ಷೇತ್ರ ಹೊಸದುರ್ಗ ತಾಲೂಕಿನಲ್ಲಿ ಬಲವಂತವಾಗಿ ಅಥವಾ ಆಮಿಷವೊಡ್ಡಿ ಮತಾಂತರವನ್ನು ಮಾಡಿದ ಬಗ್ಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರು ಲಿಖಿತ ಉತ್ತರ ನೀಡಿದ್ದನ್ನು ಸ್ಮರಿಸಬಹುದು.

ಮತಾಂತರ ಪ್ರಕರಣಗಳ ವಿವರ

  2018ರಲ್ಲಿ 3, 2019ರಲ್ಲಿ 7, 2020ರಲ್ಲಿ 5, 2021ರಲ್ಲಿ 1 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 2018ರಲ್ಲಿ 1, 2019ರಲ್ಲಿ 1, 2020ರಲ್ಲಿ 2 ಪ್ರಕರಣಗಳು ದಾಖಲಾಗಿವೆ. ಮಂಗಳೂರು ನಗರ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಈ ಮೂರೂ ವರ್ಷದಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಮೈಸೂರು ಜಿಲ್ಲೆಯಲ್ಲಿ 2020ರಲ್ಲಿ 1 ಪ್ರಕರಣ ಮಾತ್ರ ದಾಖಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ 2019ರಲ್ಲಿ 1, 2020ರಲ್ಲಿ 2 ಮತ್ತು 2021ರಲ್ಲಿ 1 ಪ್ರಕರಣ, ರಾಮನಗರದಲ್ಲಿ 2019ರಲ್ಲಿ 2, ಹಾಸನ ಜಿಲ್ಲೆಯಲ್ಲಿ 2018ರಲ್ಲಿ 2, ಧಾರವಾಡದಲ್ಲಿ 2019ರಲ್ಲಿ 1, ಉಡುಪಿಯಲ್ಲಿ 2019ರಲ್ಲಿ 1 ಪ್ರಕರಣವು ದಾಖಲಾಗಿದೆ ಎಂಬುದು ಸಿಎಂ ಬೊಮ್ಮಾಯಿ ಅವರು ಉತ್ತರಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)