varthabharthi


ವಿಶೇಷ-ವರದಿಗಳು

ಯಾಕೆಂದರೆ, ಎಲ್ಲರೂ ಹಾಗೆ ಮಾಡುತ್ತಾರೆ!!

ಭಾರತೀಯರು ಸಾರಿಗೆ ನಿಯಮಗಳನ್ನು ಉಲ್ಲಂಘಿಸುತ್ತಾರೆ!

ವಾರ್ತಾ ಭಾರತಿ : 22 Jan, 2022
ಅನಿರುದ್ಧ ತಗತ್ ಮತ್ತು ಅಕ್ಷಯ ಬಾಲಾಜಿ

ಭಾರತದಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸುವುದು ಸಾಮಾನ್ಯ ಆಚರಣೆ ಎಂಬಂತೆ ಆಗಿದೆ. ಕೆಂಪು ದೀಪವನ್ನು ನಿರ್ಲಕ್ಷಿಸುವುದಾಗಲಿ, ಫೂಟ್‌ಪಾತ್‌ನಲ್ಲಿ ಮೋಟರ್‌ಸೈಕಲ್‌ಗಳನ್ನು ಚಲಾಯಿಸುವುದಾಗಲಿ- ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಯವುದಿಲ್ಲ. ಆದರೆ, ಇಂತಹ ಉಲ್ಲಂಘನೆಗಳ ಸಂಖ್ಯೆ ಹೆಚ್ಚಾದಾಗ, ಇಂತಹ ಉಲ್ಲಂಘನೆಗಳು ಸಾಮಾಜಿಕ ನಿಯಮವಾಗಿದೆಯೇ ಎನ್ನುವುದನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಇತ್ತೀಚೆಗೆ ‘ಇಂಡಿಯನ್ ಪಬ್ಲಿಕ್ ಪಾಲಿಸಿ ರಿವ್ಯೆ’ನಲ್ಲಿ ಪ್ರಕಟಗೊಂಡ ಪ್ರಬಂಧವೊಂದರಲ್ಲಿ, ಭಾರತೀಯ ರಸ್ತೆಗಳಲ್ಲಿ ಆಗುತ್ತಿರುವ ಸಾರಿಗೆ ನಿಯಮಗಳ ಉಲ್ಲಂಘನೆಗಳ ಬಗ್ಗೆ ಅಧ್ಯಯನ ಮಾಡಿದ್ದೇವೆ. ಇಂತಹ ಪ್ರಕರಣಗಳಲ್ಲಿ ಸಾಮಾಜಿಕ ಧೋರಣೆಗಳು ಹೇಗಿವೆ ಹಾಗೂ ಅವುಗಳು ಕಾನೂನುಗಳೊಂದಿಗೆ ಹೇಗೆ ವ್ಯವಹರಿಸುತ್ತವೆ ಎನ್ನುವುದರ ಆಧಾರದಲ್ಲಿ ಈ ಅಧ್ಯಯನವನ್ನು ಮಾಡಲಾಗಿದೆ.

ಭಾರತದಲ್ಲಿ ರಸ್ತೆ ಸಾರಿಗೆ ಉಲ್ಲಂಘನೆಗಳು ಮತ್ತು ರಸ್ತೆ ಸುರಕ್ಷತೆ

ಸಾರಿಗೆ ನಿಯಮಗಳನ್ನು ಉಲ್ಲಂಘಿಸುವ ಪ್ರಮುಖ ದುಷ್ಪರಿಣಾಮಗಳ ಪೈಕಿ ಒಂದು- ಅದು ರಸ್ತೆ ಬಳಕೆದಾರರ ಸುರಕ್ಷತೆಯನ್ನು ಅಪಾಯಕ್ಕೀಡು ಮಾಡುತ್ತದೆ. ಅತಿ ವೇಗ (ಶೇ. 66.5), ಮದ್ಯ ಸೇವನೆ ಮತ್ತು ವಾಹನ ಚಲಾಯಿಸುವಾಗ ಗಮನ ಬೇರೆಡೆಗೆ ಹರಿಸುವುದು- ಇವುಗಳು ಸಾವಿನಲ್ಲಿ ಅಂತ್ಯಗೊಳ್ಳುವ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ. ಅಪಘಾತಗಳಿಂದ ಸಂಭವಿಸುವ ಸಾವುಗಳಿಗೂ ಭಾರತೀಯ ರಸ್ತೆಗಳಲ್ಲಿ ಆಗಿರುವ ವಾಹನಗಳ ಹೆಚ್ಚಳಕ್ಕೂ ಸಂಬಂಧವಿದೆಯೇ? ಪ್ರತಿ 1,000 ವಾಹನಗಳಿಗೆ ಸಂಭವಿಸುವ ರಸ್ತೆ ಅಪಘಾತ-ಸಂಬಂಧಿ ಸಾವುಗಳ ಸಂಖ್ಯೆಯು 2005ರ ಬಳಿಕ ಅರ್ಧಕ್ಕೆ ಇಳಿದಿದೆ. ಇದಕ್ಕೆ ನೂತನ ರಸ್ತೆ ಕಾನೂನುಗಳು, ರಸ್ತೆಗಳ ಮೂಲಸೌಕರ್ಯ ಮತ್ತು ವಿನ್ಯಾಸದಲ್ಲಿನ ಬದಲಾವಣೆ, ಕಾನೂನು ಅನುಷ್ಠಾನ ಮತ್ತು ವಾಹನಗಳ ದಟ್ಟಣೆಯ ಪರಿಣಾಮದಿಂದಾಗಿ ಕಡಿಮೆಯಾಗಿರುವ ಸರಾಸರಿ ವೇಗ ಕಾರಣವೆಂದು ಹೇಳಬಹುದಾಗಿದೆ.

ಕಾನೂನು ಅನುಷ್ಠಾನಕ್ಕೆ ಸಂಬಂಧಿಸಿ ಹೇಳುವುದಾದರೆ, ಟ್ರಾಫಿಕ್ ಪೊಲೀಸರು ಒಟ್ಟು ಪೊಲೀಸ್ ಪಡೆಯ ಕೇವಲ ಶೇ. 3ರಷ್ಟು ಇದ್ದಾರೆ ಎಂಬುದಾಗಿ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್‌ಡಿ)ದ ಅಂಕಿಅಂಶಗಳು ಹೇಳುತ್ತವೆ. 2020ರಲ್ಲಿ ಭಾರತದಲ್ಲಿ 17,736 ಮಂದಿಗೆ ಓರ್ವ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮತ್ತು 2,920 ವಾಹನಗಳಿದ್ದವು. ಇದು ಇಂಡೋನೇಶ್ಯ ಮತ್ತು ಚೀನಾದಂತಹ ಏಶ್ಯದ ದೇಶಗಳು ಹಾಗೂ ಬ್ರೆಝಿಲ್ ಮತ್ತು ರಶ್ಯದಂತಹ ಇತರ ದೇಶಗಳಿಗಿಂತ ಸ್ವಲ್ಪಕಡಿಮೆಯಾಗಿದೆ. ಹಾಗಾಗಿ, ರಸ್ತೆ ಸಾರಿಗೆ ನಿಯಮಗಳ ಉಲ್ಲಂಘನೆಗಳಿಗಾಗಿ ವಿಧಿಸುವ ದಂಡಗಳ ಮೊತ್ತವನ್ನು ಅಗಾಧವಾಗಿ ಹೆಚ್ಚಿಸುವ ಮೋಟಾರು ವಾಹನ ಕಾಯ್ದೆ (2017)ಯು ವಾಹನ ಸವಾರರಿಗೆ ಕಠಿಣ ಸಂದೇಶವನ್ನು ತಲುಪಿಸಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಉದಾಹರಣೆಗೆ; ಕುಡಿದು ವಾಹನ ಚಲಾಯಿಸುವುದಕ್ಕೆ ವಿಧಿಸುವ ದಂಡದ ಮೊತ್ತವನ್ನು 2,000 ರೂಪಾಯಿಯಿಂದ 10,000 ರೂಪಾಯಿಗೆ ಹೆಚ್ಚಿಸಲಾಗಿದೆ. ಅದೇ ವೇಳೆ, ಅತಿ ವೇಗಕ್ಕೆ ಈಗ 5,000 ರೂಪಾಯಿ ದಂಡ ವಿಧಿಸಲಾಗುತ್ತಿದೆ.

ರಸ್ತೆಗಳಲ್ಲಿ ವರ್ತನೆಗೆ ನಿಯಮಗಳು

ರಸ್ತೆ ಬಳಕೆದಾರರ ವರ್ತನೆಗಳ ಬಗ್ಗೆ ಪ್ರಸಕ್ತ ನಡೆಯುತ್ತಿರುವ ಸಂಶೋಧನೆಯು ಹಲವು ವಿಷಯಗಳನ್ನು ಎತ್ತಿ ತೋರಿಸಿದೆ, ರಸ್ತೆ ನಿಯಮಗಳನ್ನು ನಿಯಮಿತವಾಗಿ ಯಾಕೆ ಉಲ್ಲಂಘಿಸಲಾಗುತ್ತದೆ ಎನ್ನುವುದನ್ನು ಅದು ವಿವರಿಸುತ್ತದೆ.

ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ತತ್ವಜ್ಞಾನಿ ಕ್ರಿಸ್ಟೀನಾ ಬಿಛೈರಿ, ಇಂತಹ ಸಾಮಾಜಿಕ ವಿಧಾನಗಳಿಗೆ ವ್ಯಾಖ್ಯೆಯೊಂದನ್ನು ನೀಡುತ್ತಾರೆ. ನಮ್ಮ ಹಿನ್ನೆಲೆಯಲ್ಲಿ ಅದನ್ನು ನೋಡುವುದು ಅಗತ್ಯವಾಗಿದೆ. ‘‘ಸಾಮಾಜಿಕ ಪದ್ಧತಿಯೊಂದನ್ನು ರೂಪಿಸಲು ರಸ್ತೆ ಬಳಕೆದಾರರ ಮಟ್ಟದಲ್ಲಿ ಸರಿಯಾದ ನಿರೀಕ್ಷೆಗಳನ್ನು ಹುಟ್ಟುಹಾಕುವುದು ಅಗತ್ಯ’’ ಎಂದು ಬಿಛೈರಿ ಹೇಳುತ್ತಾರೆ.

ಈ ಸಾಮಾಜಿಕ ನಿಯಮಾವಳಿಗಳು ಹಾಲಿ ಕಾನೂನುಗಳು ಮತ್ತು ನಿಯಂತ್ರಣಗಳೊಂದಿಗೆ ಹೇಗೆ ವ್ಯವಹರಿಸುತ್ತವೆ? ಕಾರ್ನೆಲ್ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ತನ್ನ ಪುಸ್ತಕ ‘ರಿಪಬ್ಲಿಕ್ ಆಫ್ ಬಿಲೀಫ್ಸ್’ನಲ್ಲಿ, ಕಾನೂನುಗಳು ಅದರಲ್ಲೂ ಮುಖ್ಯವಾಗಿ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆಯಂತಹ ನೂತನ ಕಾನೂನುಗಳು ಕೇವಲ ‘ಪುಸ್ತಕದ ಶಾಯಿ’ ಮಾತ್ರ ಎಂಬುದಾಗಿ ಹೇಳುತ್ತಾರೆ. ಇತರ ಜನರು ಏನು ಮಾಡಬಲ್ಲರು ಹಾಗೂ ಏನು ಮಾಡಲು ಸಾಧ್ಯವಿಲ್ಲ ಎನ್ನುವುದಕ್ಕೆ ಸಂಬಂಧಿಸಿದ ತಮ್ಮ ನಂಬಿಕೆಗಳನ್ನು ಜನರು ಬದಲಾಯಿಸಿದರೆ, ಜನರ ವರ್ತನೆಯಲ್ಲೂ ಬದಲಾವಣೆಗಳು ಬರಬಹುದಾಗಿದೆ.

ಕೃಪೆ : theprint.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)