ಬೆಂಗಳೂರು
ಬೆಂಗಳೂರು: 'ಬ್ಯಾಂಕ್ ಸಾಲ ತೀರಿಸಲು ಬ್ಯಾಂಕಿನಲ್ಲಿಯೇ ದರೋಡೆʼಗೈದ ಆರೋಪ; ಇಂಜಿನಿಯರ್ ಬಂಧನ

ಬಂಧಿತ ಆರೋಪಿ ಧೀರಜ್
ಬೆಂಗಳೂರು, ಜ.22: ಬ್ಯಾಂಕಿನಿಂದ ಪಡೆದಿದ್ದ ಲಕ್ಷಾಂತರ ರೂಪಾಯಿ ಸಾಲವನ್ನು ತೀರಿಸಲು ಬ್ಯಾಂಕಿನಲ್ಲಿಯೇ ಕಳ್ಳತನ ಮಾಡಿರುವ ಆರೋಪದಡಿ ಮೆಕ್ಯಾನಿಕಲ್ ಇಂಜಿನಿಯರ್‍ನೋರ್ವನನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಮಾಕ್ಷಿ ಪಾಳ್ಯದ ಮೆಕ್ಯಾನಿಕಲ್ ಇಂಜಿನಿಯರ್ ಧೀರಜ್(28) ಎಂಬಾತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವಜೋಷಿ ಮಾಹಿತಿ ನೀಡಿದರು.
ಜ.14 ರಂದು ಸಂಜೆ 6ರ ವೇಳೆ ಇಲ್ಲಿನ ಮಡಿವಾಳದ ಎಸ್‍ಬಿಐ ಬ್ಯಾಂಕಿನ ಶಾಖೆ ಬಳಿ ಮಾಸ್ಕ್ ಹಾಕಿಕೊಂಡು ಬಂದಿದ್ದ ಆರೋಪಿಯು ಮನೆಗೆ ಹೊರಡಲು ಸಿದ್ಧತೆಯಲ್ಲಿದ್ದ ಬ್ಯಾಂಕಿನ ವ್ಯವಸ್ಥಾಪಕ, ಕಚೇರಿಯ ಭದ್ರತಾ ಮುಖ್ಯಸ್ಥ ಸೇರಿ ಇಬ್ಬರ ಕತ್ತಿನ ಬಳಿ ಚಾಕು ಇಟ್ಟು ಬ್ಯಾಂಕಿನ ಬಾಗಿಲು ತೆರೆಸಿ ಬ್ಯಾಂಕಿನಲ್ಲಿರುವ ಹಣ ತುಂಬಿಕೊಡುವಂತೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.
ಆನಂತರ, ಹರೀಶ್ ಸೇರಿ ಇಬ್ಬರು ಸಿಬ್ಬಂದಿ ಭಯದಿಂದ ಬಾಗಿಲು ತೆರೆದಿದ್ದಾರೆ. ಕೂಡಲೇ ಅವರನ್ನು ನಗದು ಕೊಠಡಿಯ ಕಡೆ ಕರೆದುಕೊಂಡು ಹೋಗಿ ಅದರಲ್ಲಿದ್ದ 1 ಕೆಜಿ 805 ಗ್ರಾಂ ತೂಕದ ಚಿನ್ನಾಭರಣಗಳಿದ್ದ 16 ಪ್ಯಾಕೆಟ್‍ಗಳನ್ನು ಹಾಗೂ ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದ.
ಈ ಸಂಬಂಧ ವ್ಯವಸ್ಥಾಪಕ ಹರೀಶ್ ದೂರು ನೀಡಿದ ಬಳಿಕ ಪೊಲೀಸರು ಪರಿಶೀಲನೆ ನಡೆಸಿ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಎಸಿಪಿಗಳಾದ ಸುಧೀರ್ ಎಂ.ಹೆಗಡೆ, ಕರಿಬಸವನಗೌಡ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಗಳಾದ ಪೌಲ್ ಪ್ರಿಯಕುಮಾರ್, ರವಿ, ನಟರಾಜು ಮತ್ತವರ ಸಿಬ್ಬಂದಿಯ 2 ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ತಂಡಗಳು ಕಾರ್ಯಾಚರಣೆ ನಡೆಸಿ ಖಚಿತ ಮಾಹಿತಿಯಾಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಸರಿಯಾದ ಉದ್ಯೋಗವಿಲ್ಲದೆ ಅಮೆರಿಕ ಮೂಲದ ಓಎಲ್‍ವೈಎಂಪಿ ಆನ್‍ಲೈನ್ ಟ್ರೇಡಿಂಗ್‍ನಲ್ಲಿ 26 ಲಕ್ಷ ರೂ. ಹಣ ತೊಡಗಿಸಿ ಸಂಪೂರ್ಣ ನಷ್ಟುವುಂಟು ಮಾಡಿಕೊಂಡಿದ್ದನು. ಕ್ರೆಡಿಟ್‍ಕಾರ್ಡ್, ಬಜಾಜ್ ಫೈನಾನ್ಸ್ ಹಾಗೂ ಸ್ನೇಹಿತರಿಂದ 35 ಲಕ್ಷದವರೆಗೆ ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಎಂದರು.
ಆರ್ಥಿಕ ಸಂಕಷ್ಟದಿಂದ ಪಾರಾಗಲು ಆರೋಪಿಯು ಬ್ಯಾಂಕ್ ಕಳವು ಮಾಡಲು ಸಂಚು ರೂಪಿಸಿ ಕೃತ್ಯ ನಡೆಸಿದ್ದು, ಆತನಿಂದ 6 ಲಕ್ಷ 50 ಸಾವಿರ ನಗದು, 1 ಕೆಜಿ 805 ಗ್ರಾಂ ಚಿನ್ನಾಭರಣ, 1 ಪ್ಲಸ್ ಮೊಬೈಲ್, 85,38,320 ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ