varthabharthi


ಬೆಂಗಳೂರು

ವಿಶ್ರಾಂತ ನ್ಯಾಯಮೂರ್ತಿ ಕೆ.ಎಲ್ ಮಂಜುನಾಥ್ ನಿಧನ

ವಾರ್ತಾ ಭಾರತಿ : 23 Jan, 2022

ಬೆಂಗಳೂರು, ಜ. 23: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕ ಗಡಿ ಮತ್ತು ರಾಜ್ಯ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ಎಲ್.ಮಂಜುನಾಥ್ (68) ಅವರು ಶನಿವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ತೋಟದ ಮನೆಯಲ್ಲಿ ಜ.22ರಂದು ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ತೀವ್ರ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕೆ.ಎಲ್.ಮಂಜುನಾಥ್ ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ತಡರಾತ್ರಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿರುವ ಅವರ ನಿವಾಸಕ್ಕೆ ತಂದು ರವಿವಾರ ಮಧ್ಯಾಹ್ನ 12 ಗಂಟೆಯ ವರೆಗೆ ಸಾರ್ವಜನಿಕರು ಹಾಗೂ ಕುಟುಂಬದ ಆಪ್ತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಸಂಜೆ ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿ ಬಳಿಯ ಯಲಚಗೆರೆಯ ಅವರ ತೋಟದಲ್ಲಿ ಅಪಾರ ಬಂಧು-ಮಿತ್ರರು, ಅಭಿಮಾನಿಗಳ ಅಶ್ರುತರ್ಪಣದೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ನ್ಯಾಯಮೂರ್ತಿ ಮಂಜುನಾಥ್ ಅವರು ಚನ್ನರಾಯಪಟ್ಟಣ ತಾಲೂಕಿನ ಕಾಂತರಾಜಪುರದಲ್ಲಿ 1953ರಲ್ಲಿ ಜನಿಸಿದ್ದು, 1974ರಲ್ಲಿ ವಕೀಲರಾಗಿ ಹೈಕೋರ್ಟ್‍ನ ಅಭ್ಯಾಸ ಆರಂಭಿಸಿ ಬಳಿಕ 2000ನೇ ಇಸವಿಯಲ್ಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. 2001ರಲ್ಲಿ ಪೂರ್ಣಪ್ರಮಾಣದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 2015ರ ಎಪ್ರಿಲ್ 21ರಂದು ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.

ಹೈಕೋರ್ಟ್ ನ್ಯಾಯಮೂರ್ತಿಗಳಾಗಿ 14 ವರ್ಷ 4 ತಿಂಗಳ ಕಾಲ ವಿವಿಧ ಸ್ಥರಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ವಿಭಾಗೀಯ ಪೀಠದ ನ್ಯಾಯಮೂರ್ತಿಯಾಗಿದ್ದಾಗಲೇ ಸುಮಾರು 10 ಸಾವಿರ ತೀರ್ಪುಗಳನ್ನು ನೀಡಿದ್ದರು. ವಕೀಲರಾಗಿ, ನ್ಯಾಯಮೂರ್ತಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದ ಅವರು ಹೈಕೋರ್ಟ್‍ನ ವಕೀಲರ ಗುಮಾಸ್ತರ ಸಂಘದ ಸ್ಥಾಪನೆಗೆ ಕಾರಣರಾಗಿದ್ದರು. ನಿವೃತ್ತ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರು ರಾಜ್ಯ ಗಡಿ ಆಯೋಗದ ಆಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಮಹಾರಾಷ್ಟ್ರ, ಕರ್ನಾಟಕ ಗಡಿ ವಿವಾದ ಬಗೆಹರಿಸುವ ಸಂಬಂಧದ ಹಲವು ಸಲಹೆಗಳನ್ನು ಪಡೆಯುವ ಸಲುವಾಗಿ ಸರಕಾರ ಈ ಆಯೋಗವನ್ನು ರಚನೆ ಮಾಡಿದ್ದು, ಸರಕಾರಕ್ಕೆ ನ್ಯಾಯಮೂರ್ತಿಗಳು ಉಪಯುಕ್ತ ಸಲಹೆ ಮತ್ತು ಶಿಫಾರಸುಗಳನ್ನು ನೀಡಿದ್ದರು.

ನ್ಯಾಯಮೂರ್ತಿ ಮಂಜುನಾಥ್ ಅವರು ವಕೀಲ ವೃತ್ತಿ ವೇಳೆಯಲ್ಲಿ ಬಡವರಿಗೆ, ದೀನದಲಿತರಿಗೆ ಉಚಿತ ಕಾನೂನು ಸೇವೆ ಒದಗಿಸಿದ್ದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು, ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಕಾನೂನು ಹೋರಾಟ ನಡೆಸಿದ್ದರು. ಕಾನೂನು ಚೌಕಟ್ಟಿನೊಳಗೆ ಜನಪರ ಕಾಳಜಿ ಹಾಗೂ ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳ ಮೂಲಕ ನ್ಯಾಯಾಂಗದ ಘನತೆ, ಗೌರವ ಎತ್ತಿ ಹಿಡಿದ ನ್ಯಾಯಮೂರ್ತಿಗಳು. 

ಶ್ರೀಯುತರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗನ್ಯರು ಕಂಬನಿ ಮಿಡಿದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)