varthabharthi


ವಿಶೇಷ-ವರದಿಗಳು

ಕನಕನ ಉಡುಪಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗಾಗಿ ಕಿಂಡಿ ತೆರೆಯುವರೇ?

ವಾರ್ತಾ ಭಾರತಿ : 23 Jan, 2022
ಹವ್ವಾ, ಪುತ್ತಿಗೆ

ಹುಡುಗಿಯರು ಕ್ಲಾಸಿನ ಅವಧಿಯುದ್ದಕ್ಕೂ ಕೊಠಡಿಯ ಹೊರಗೆ ನಿಂತಿರುವ ದೃಶ್ಯವು ಒಂದು ಕಾಲದಲ್ಲಿ ಅದೇ ಉಡುಪಿಯಲ್ಲಿ ಕೃಷ್ಣದರ್ಶನಕ್ಕೆ ಮಠ ಪ್ರವೇಶ ನಿರಾಕರಿಸಲ್ಪಟ್ಟು ಮಠದ ಹೊರಗೆ ನಿಂತಿದ್ದ ಕನಕ ದಾಸರ ಕಥೆಯನ್ನು ನೆನಪಿಸುತ್ತಿದೆ. ಕ್ರಿ.ಶ. ಹದಿನಾರನೇ ಶತಮಾನದಲ್ಲಿ ಮಠದ ಹೊರಗೆ ನಿಲ್ಲಲು ನಿರ್ಬಂಧಿತರಾಗಿದ್ದ ಕನಕದಾಸರು ಪಾಪ ಈಗಲೂ ಅಲ್ಲಿ ಹೊರಗೆಯೇ ನಿಂತಿದ್ದಾರೆ. ಸ್ಕಾರ್ಫ್‌ಧಾರಿ ಹುಡುಗಿಯರನ್ನು ಕ್ಲಾಸಿನೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವವರು, ತರಗತಿಯ ಹಿಂಭಾಗದಲ್ಲಿ ಆ ಹುಡುಗಿಯರಿಗಾಗಿ ಒಂದು ಕಿಟಕಿ ತೆರೆದು ಕೊಡುವ ಪ್ರಸ್ತಾವ ಮಂಡಿಸುವರೇ ಎಂಬ ಕುತೂಹಲ ಕೆರಳಿದೆ.

ಯಾವುದೂ ‘ಸಮ’ವಾಗಿಲ್ಲದ ಸಮಾಜದಲ್ಲಿ, ಮಾತ್ರವಲ್ಲ, ಇಂದು ಕೂಡಾ ದೊಡ್ಡ ಪ್ರಮಾಣದಲ್ಲಿ ಸರ್ವತೋಮುಖ ಅಸಮಾನತೆಯನ್ನು ಪಾಲಿಸುತ್ತಿರುವ ಸಮಾಜವೊದರಲ್ಲಿ ‘ಸಮವಸ್ತ್ರ’ದ ಹೆಸರಲ್ಲಿ ಒಂದು ವಿವಾದ ಏರ್ಪಟ್ಟಿರುವುದು ಕ್ರೂ ರ ವಿಡಂಬನೆ ಎಂಬಂತೆ ಕಾಣಿಸುತ್ತಿದೆ.

ಉಡುಪಿಯ ಸರಕಾರಿ ಮಹಿಳಾ ಕಾಲೇಜೊಂದರ ನಿಯಂತ್ರಕರು, ಸ್ಕಾರ್ಫ್ ಧರಿಸಿದ ಮುಸ್ಲಿಮ್ ಹುಡುಗಿಯರಿಗೆ ತರಗತಿಗಳಲ್ಲಿ ಪ್ರವೇಶ ನಿರಾಕರಿಸಿ ಅವರನ್ನು ಹೊರಗೆ ನಿಲ್ಲಿಸಿರುವ ದೃಶ್ಯ ಇದೀಗ ಎಲ್ಲರ ಗಮನ ಸೆಳೆದಿದೆ. ಸಂಸ್ಥೆಯೊಳಗೇ ಬಗೆಹರಿಯಬೇಕಿದ್ದ ಮತ್ತು ಹೆಚ್ಚೆಂದರೆ ಸ್ಥಳೀಯವಾಗಿ ಪರಿಹಾರ ಕಾಣಬೇಕಾಗಿದ್ದ ಈ ಬಿಕ್ಕಟ್ಟು ಇದೀಗ ರಾಷ್ಟ್ರೀಯ ಮಾತ್ರವಲ್ಲ ಅಂತರ್‌ರಾಷ್ಟ್ರೀಯ ಚರ್ಚೆಗೊಳಗಾಗಿದೆ. ಹುಡುಗಿಯರು ಕ್ಲಾಸಿನ ಅವಧಿಯುದ್ದಕ್ಕೂ ಕೊಠಡಿಯ ಹೊರಗೆ ನಿಂತಿರುವ ದೃಶ್ಯವು ಒಂದು ಕಾಲದಲ್ಲಿ ಅದೇ ಉಡುಪಿಯಲ್ಲಿ ಕೃಷ್ಣದರ್ಶನಕ್ಕೆ ಮಠ ಪ್ರವೇಶ ನಿರಾಕರಿಸಲ್ಪಟ್ಟು ಮಠದ ಹೊರಗೆ ನಿಂತಿದ್ದ ಕನಕ ದಾಸರ ಕಥೆಯನ್ನು ನೆನಪಿಸುತ್ತಿದೆ. ಕ್ರಿ.ಶ. ಹದಿನಾರನೇ ಶತಮಾನದಲ್ಲಿ ಮಠದ ಹೊರಗೆ ನಿಲ್ಲಲು ನಿರ್ಬಂಧಿತರಾಗಿದ್ದ ಕನಕದಾಸರು ಪಾಪ ಈಗಲೂ ಅಲ್ಲಿ ಹೊರಗೆಯೇ ನಿಂತಿದ್ದಾರೆ. ಸ್ಕಾರ್ಫ್ ಧಾರಿ ಹುಡುಗಿಯರನ್ನು ಕ್ಲಾಸಿನೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವವರು, ತರಗತಿಯ ಹಿಂಭಾಗದಲ್ಲಿ ಆ ಹುಡುಗಿಯರಿಗಾಗಿ ಒಂದು ಕಿಟಕಿ ತೆರೆದು ಕೊಡುವ ಪ್ರಸ್ತಾವ ಮಂಡಿಸುವರೇ ಎಂಬ ಕುತೂಹಲ ಕೆರಳಿದೆ.

ಒಂದು ಕಾಲದಲ್ಲಿ ‘ಮುಸ್ಲಿಮ್ ಹುಡುಗಿ ಶಾಲೆ ಕಲಿತದ್ದು’ ಎಂಬ ಶೀರ್ಷಿಕೆಯ ಆತ್ಮಕತೆಯೊಂದು, ಒಂದು ಕಾದಂಬರಿಯ ಭಾಗವಾಗಿತ್ತು. ಮುಸ್ಲಿಮ್ ಹೆಣ್ಣು ಶಾಲೆ ಕಲಿತರೆ ಅದರಲ್ಲಿ ಅಂತಹ ದೊಡ್ಡ ವಿಶೇಷತೆ ಏನಿದೆ? ಅದರಲ್ಲೂ ಒಂದು ಆತ್ಮಕತೆಯ ಶೀರ್ಷಿಕೆಯಾಗಬಲ್ಲಷ್ಟು ಅನುಪಮ ವಿಶೇಷತೆ ಅದರಲ್ಲೇನಿದೆ? ಮುಸ್ಲಿಮ್ ಹುಡುಗಿಯೊಬ್ಬಳು ಶಾಲೆಗೆ ಹೋದರೆ ಅದೇನು, ಆಡು ಹುಲಿಯನ್ನು ನುಂಗಿತು ಎಂಬಷ್ಟು ವಿಲಕ್ಷಣ ಘಟನೆಯೇ? ಹೀಗೆಲ್ಲ ಹಲವು ಪ್ರಶ್ನೆಳನ್ನು ಈ ಕುರಿತು ಕೇಳಬಹುದು.

 ‘‘ಭಾರತವೆಂದರೆ ಏಕಕಾಲದಲ್ಲಿ ಹಲವು ಶತಮಾನಗಳಲ್ಲಿ ಬದುಕುವ ದೇಶ’’ ಎಂದು ಆರುಂಧತಿ ರಾಯ್ ಒಮ್ಮೆ ಕುಟುಕಿದ್ದರು. ಪ್ರಸ್ತುತ ‘ಮುಸ್ಲಿಮ್ ಹೆಣ್ಣು ಶಾಲೆ ಕಲಿತ’ ಕಥೆ ನಿಜವಾಗಿ ಹಲವು ಶತಮಾನಗಳ ಹಿಂದಿನ ಕಾಲಕ್ಕೆ ಸಂಬಂಧಿಸಿದ ಕಥೆಯೇನೂ ಆಗಿರಲಿಲ್ಲ. ಕೆಲವೇ ದಶಕಗಳ ಹಿಂದಿನ ಕಥೆಯಾಗಿತ್ತು. ಅದು ಇಪ್ಪತ್ತನೇ ಶತಮಾನದ ಕೊನೆಯಲ್ಲೂ, ಸಾಮಾಜಿಕ ಸ್ಥಿತಿಗತಿಗಳ ದೃಷ್ಟಿಯಿಂದ, ಅನೇಕ ಶತಮಾನಗಳಷ್ಟು ಹಿಂದಿನ ಸನ್ನಿವೇಶದಲ್ಲಿ ಬದುಕುತ್ತಿದ್ದ ನಮ್ಮ ದೇಶದ ಸಾವಿರಾರು ಗ್ರಾಮಗಳನ್ನು, ಅಲ್ಲಿನವರ ಮುಗ್ಧ ಮಾನಸವನ್ನು ಮತ್ತು ಅವರನ್ನು ಕಟ್ಟಿಟ್ಟಿರುವ ಸಂಕೋಲೆಗಳನ್ನು ಬಿಂಬಿಸು ಒಂದು ಶ್ಲಾಘನೀಯ ಶ್ರಮವಾಗಿತ್ತು.

  ಆದರೆ ತಲೆಗೆ ಹುಷಾರಿಲ್ಲದ ಕೆಲವರು ಆ ಕಥೆಯನ್ನು ಮತ್ತು ಆತರದ ಇತರ ಕಥೆಗಳನ್ನೆಲ್ಲ ತಮ್ಮ ವಿಘ್ನ ಸಂತೋಷಿ ಚಪಲಗಳನ್ನು ತೀರಿಸುವುದಕ್ಕೆ ಬಳಸಿಕೊಂಡರು. ಒಂದೆಡೆ ಮುಸ್ಲಿಮ್ ಹೆಣ್ಣು ಮಕ್ಕಳ ಬಗ್ಗೆ ಅಪಾರ ಸಹಾನುಭೂತಿ ಉಳ್ಳವರಂತೆ ನಟಿಸುತ್ತಾ ಇನ್ನೊಂದೆಡೆ ಇಸ್ಲಾಮ್ ಧರ್ಮ ಮತ್ತು ಮುಸ್ಲಿಮ್ ಸಮಾಜವೇ ಸಂಪೂರ್ಣವಾಗಿ ಮಹಿಳಾ ಶಿಕ್ಷಣವನ್ನು ವಿರೋಧಿಸುತ್ತವೆ ಎಂಬಂತೆ ಹಂಗಿಸಿ ಮಾತನಾಡಲು ಆರಂಭಿಸಿದರು. ಬೇರೆಲ್ಲ ಮಹಿಳೆಯರೂ, ಪುರುಷರೂ ಡಾಕ್ಟರೇಟ್ ಮಾಡಿ ಮುಗಿಸಿರುವ ಭಾರತದಲ್ಲಿ ಮುಸ್ಲಿಮರು ಮಾತ್ರ ಶಾಲೆಗಳನ್ನು ಬಹಿಷ್ಕರಿಸುವುದು ಸರಿಯಲ್ಲ ಎಂಬಂತಹ ಧಾಟಿಯಲ್ಲಿ ಕಿಡಿಕಾರತೊಡಗಿದರು. ಮುಸ್ಲಿಮರನ್ನುದ್ದೇಶಿಸಿ, ನೀವು ಆಧುನಿಕ ಶಿಕ್ಷಣ ಪಡೆಯಬೇಕು, ಧರ್ಮದ ಶೃಂಖಲೆಯಿಂದ ಬಿಡುಗಡೆ ಪಡೆಯಬೇಕು, ಪ್ರಧಾನ ಧಾರೆಗೆ ಧುಮುಕಬೇಕು, ಆಧುನಿಕ, ವೈಜ್ಞಾನಿಕ ಸ್ಫೂರ್ತಿಯನ್ನು ಬೆಳೆಸಿಕೊಳ್ಳಬೇಕು ಎಂದೆಲ್ಲ ಪುಂಖಾನುಪುಂಖವಾಗಿ ಉಪದೇಶಗಳ ಸರಮಾಲೆಯನ್ನು ಉದುರಿಸತೊಡಗಿದರು.

ಆ ಕೃತಿ ಪ್ರಕಟವಾಗುತ್ತಿದ್ದ ದಿನಗಳಲ್ಲೂ ಭಾರತದ ಎಲ್ಲ ಮುಸ್ಲಿಮ್ ಹುಡುಗಿಯರ ಪಾಲಿಗೆ ಶಿಕ್ಷಣ ನಿಷಿದ್ಧವಾಗಿರಲಿಲ್ಲ. ಹಾಗೆಯೇ ಹೆಣ್ಮಕ್ಕಳ ಶಿಕ್ಷಣಕ್ಕೆ ನಿರ್ಬಂಧ ಎಂಬುದು ಕೇವಲ ಮುಸ್ಲಿಮ್ ಹೆಣ್ಣುಮಕ್ಕಳಿಗೆ ಸೀಮಿತವಾಗಿದ್ದ ಸಮಸ್ಯೆಯೂ ಆಗಿರಲಿಲ್ಲ. ಆ ಕಥೆ ಪ್ರಕಟವಾಗುತ್ತಿದ್ದ ದಿನಗಳಲ್ಲೇ ಉಡುಪಿಯಲ್ಲಿ, ತಲೆಬೋಳಿಸಿಕೊಂಡು, ಕೆಂಪು ಸೀರೆ ಉಟ್ಟುಕೊಂಡು, ರವಿಕೆ ಮತ್ತು ಘನತೆಯಿಂದ ವಂಚಿತರಾಗಿ ಬದುಕಲು ನಿರ್ಬಂಧಿತರಾಗಿದ್ದ ಸಂಸ್ಕಾರ ಪೀಡಿತ ವಿಧವೆುರು ಅಲ್ಲಲ್ಲಿ ಕಾಣಲು ಸಿಗುತ್ತಿದ್ದರು.

ಈಗಲೂ ಪರಿಸ್ಥಿತಿ ಸಂಪೂರ್ಣ ಬದಲಾಗಿಲ್ಲ. ಮಹಿಳೆಯರ ಶಿಕ್ಷಣ, ಪ್ರಾತಿನಿಧ್ಯ, ಸಬಲೀಕರಣ ಇತ್ಯಾದಿ ವಿವಿಧ ವಿಷಯಗಳಲ್ಲಿ ಮುಸ್ಲಿಮ್ ಮಹಿಳೆಯರು ಮಾತ್ರವಲ್ಲ ಒಟ್ಟು ಭಾರತೀಯ ಸಮಾಜದ ಮಹಿಳೆಯರು ಕಳವಳಕಾರಿ ಎನ್ನುವಷ್ಟು ಹಿಂದಿದ್ದಾರೆ. 2011ರಲ್ಲಿ ಜಾಗತಿಕ ಮಟ್ಟದಲ್ಲಿ ಮಹಿಳಾ ಸಾಕ್ಷರತೆ ಶೇ. 80.33ರಷ್ಟಿದ್ದಾಗ ಭಾರತದಲ್ಲಿ ಮಹಿಳಾ ಸಾಕ್ಷರತೆಯ ಮಟ್ಟ ಕೇವಲ ಶೇ.65.46ರಷ್ಟಿತ್ತು. 1951ರಲ್ಲಿ ನಮ್ಮ ದೇಶದಲ್ಲಿ ಮಹಿಳಾ ಸಾಕ್ಷರತೆ ಕೇವಲ ಶೇ. 8.86ರಷ್ಟಿತ್ತು ಎಂಬ ಸತ್ಯವನ್ನು ನೆನಪಿಸಿಕೊಂಡರೆ, ಮಹಿಳಾ ಸಾಕ್ಷರತೆಯ ರಂಗದಲ್ಲಿ ನಮ್ಮ ಇಡೀ ದೇಶವೇ ಬಹಳ ತಡವಾಗಿ ತನ್ನ ಪ್ರಯಾಣವನ್ನು ಆರಂಭಿಸಿತ್ತೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. 21ನೇ ಶತಮಾನದಲ್ಲೂ ನಮ್ಮ ದೇಶದಲ್ಲಿ ಮಹಿಳೆಯರಲ್ಲಾಗಲಿ ಪುರುಷರಲ್ಲಾಗಲಿ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಲು ನಮಗೆ ಸಾಧ್ಯವಾಗಿಲ್ಲವಲ್ಲ ಎಂದು ನಾಚಿಕೆ ಪಟ್ಟುಕೊಂಡು ಸಾಮೂಹಿಕವಾಗಿ ತಲೆ ಜಜ್ಜಿಕೊಳ್ಳಬೇಕಾಗುತ್ತದೆ. ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ (NSO) ವರದಿ ಪ್ರಕಾರ 2021ರಲ್ಲಿ ಭಾರತದಲ್ಲಿ ಸಾಕ್ಷರತೆಯ ಒಟ್ಟು ಪ್ರಮಾಣ ಶೇ. 84.70. ಕೇವಲ ಮಹಿಳೆಯರ ಸ್ಥಿತಿ ನೋಡಿದರೆ ಅವರಲ್ಲಿ ಸಾಕ್ಷರತೆಯ ಪ್ರಮಾಣ ಶೇ. 70.30 ಮಾತ್ರ. ಅಂದರೆ ದೇಶದ ಸುಮಾರು ಶೇ. 30 ಮಹಿಳೆಯರು ಇನ್ನೂ ಅಕ್ಷರ ವಂಚಿತರು.

ಸಾಕ್ಷರತೆ ಒಂದೇ ಅಲ್ಲ, ನಾವು ಭಾರತೀಯರೆಲ್ಲ ತಲೆಜಜ್ಜಿಕೊಳ್ಳುವುದಕ್ಕೆ ನಿರ್ಬಂಧಿಸುವ ಇನ್ನೂ ಹಲವು ಕಹಿ ಸತ್ಯಗಳು ಶಿಕ್ಷಣರಂಗದಲ್ಲೇ ಇವೆ. ನಮ್ಮ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ದಾಖಲಾತಿ ಪ್ರಮಾಣ 2010-2011ರ ಸಾಲಲ್ಲಿ ಕೇವಲ ಶೇ. 17.9 ಇತ್ತು. 2018-2019ರ ಸಾಲಲ್ಲಿ ಅದು ಶೇ. 26.4 ತಲುಪಿದೆ. ಏನಿದರ ಅರ್ಥ? ದೇಶದ ಬಹುತೇಕ ಮುಕ್ಕಾಲು ಭಾಗ ಮಹಿಳೆಯರು ಉನ್ನತ ಶಿಕ್ಷಣದಿಂದ ವಂಚಿತರು.

ಯೂನಿವರ್ಸಿಟಿ ಗ್ರಾಂಟ್ಸ್ ಕಮಿಶನ್ (UGC)ನವರು 2015ರಲ್ಲಿ ಪ್ರಕಟಿಸಿದ ಒಂದು ವರದಿಯನುಸಾರ ದೇಶದ 725 ವಿಶ್ವವಿದ್ಯಾನಿಲಯಗಳ ಪೈಕಿ ಉಪಕುಲಪತಿ ಹುದ್ದೆಯಲ್ಲಿರುವ ಮಹಿಳೆಯರ ಸಂಖ್ಯೆ ಕೇವಲ 13.

ನಮ್ಮ ಲೋಕ ಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಪ್ರಮಾಣ ಕೇವಲ ಶೇ. 14. ರಾಜ್ಯ ಸಭೆಯಲ್ಲಿ ಮಹಿಳಾ ಸದಸ್ಯರ ಪ್ರಾತಿನಿಧ್ಯದ ಪ್ರಮಾಣ ಸುಮಾರು ಶೇ. 10 ಮಾತ್ರ. ದೇಶದ ವಿವಿಧ ರಾಜ್ಯಗಳ ವಿಧಾನ ಸಭಾ ಸದಸ್ಯರಾಗಿರುವವರ ಅಂದರೆ ಶಾಸಕರ ಒಟ್ಟು ಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ. 9 ಮಾತ್ರ.

ಈ ರೀತಿ ಎಲ್ಲೆಂದರಲ್ಲಿ ಪರಮ ಸ್ವರೂಪದ ತಾರತಮ್ಯ ಎದುರಿಸುತ್ತಿರುವವರು ಮುಸ್ಲಿಮ್ ಅಥವಾ ಯಾವುದಾದರೂ ಒಂದು ಸಮುದಾಯದವರಲ್ಲ. ಇದು ನಮ್ಮ ಎಲ್ಲ ಭಾರತೀಯ ಮಹಿಳೆಯರ ಬವಣೆಯನ್ನು ಬಿಂಬಿಸುವ ವಾಸ್ತವ. ನಿರ್ದಿಷ್ಟವಾಗಿ ಯಾರನ್ನಾದರೂ ನಿಂದಿಸಲು ಅಥವಾ ಹಂಗಿಸಲು ಇಂತಹ ವಿಷಯಗಳನ್ನು ೆಪವಾಗಿ ಬಳಸಿಕೊಂಡು ತಮ್ಮ ತೀಟೆ ತೀರಿಸಲು ಹೊರಡುವವರು ಸಮಸ್ಯೆಯನ್ನು ಮತ್ತಷ್ಟು ಜಟಿಲ ಗೊಳಿಸುತ್ತಾರೆ. ಆ ಹುಡುಗಿಯರು ವಸ್ತ್ರದ ಬಗ್ಗೆ ಅಷ್ಟೊಂದು ಹಠ ತೋರುವುದೇಕೆ? ಈ ಕಾಲದಲ್ಲಿ ಸ್ಕಾರ್ಫ್‌ನಂತಹ ವಿಷಯದಲ್ಲಿ ಕಟ್ಟುನಿಟ್ಟು ಪಾಲಿಸುವ ಅಗತ್ಯವಿದೆಯೇ? ನಿಮಗೆ ಶಿಕ್ಷಣ ಮುಖ್ಯವೇ ಅಥವಾ ವಸ್ತ್ರನಿಯಮ ಮುಖ್ಯವೇ? ನಿಮಗೆ ವಿದ್ಯೆಗಿಂತ ನಿಮ್ಮ ಧರ್ು ದೊಡ್ಡದಾಗಿ ಬಿಟ್ಟಿತೇ? ಶಿಕ್ಷಣಕ್ಕಾಗಿ ಸ್ವಲ್ಪ ರಾಜಿಮಾಡಿಕೊಂಡರೇನಾಗುತ್ತದೆ? ಎಂಬಿತ್ಯಾದಿ ತರ್ಕಗಳನ್ನು ಮಂಡಿಸಿ ಆ ಹುಡುಗಿಯರಲ್ಲಿ ಅಪರಾಧ ಮನೋಭಾವ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ.

  ಸಮಾಜದಲ್ಲಿ ಯಾರು ಏನನ್ನು ಯಾತಕ್ಕಾಗಿ ಮಾಡುತ್ತಾರೆ ಎಂಬುದನ್ನು ಗುರುತಿಸುವುದು ಹೆಚ್ಚು ಕಷ್ಟದ ಕೆಲಸವೇನೂ ಅಲ್ಲ. ತುಸು ಸಹನೆಯಿಂದ ಬೆಳವಣಿಗೆಗಳನ್ನು ವೀಕ್ಷಿಸುತ್ತಿದ್ದರೆ ಸಾಕು. ಎಲ್ಲವೂ ಕ್ರಮೇಣ ಸ್ಪಷ್ಟವಾಗಿ ಬಿಡುತ್ತದೆ. ಮುಸ್ಲಿಮ್ ಹುಡುಗಿಯರು ಶಾಲೆಯಿಂದ ದೂರ ಉಳಿದಿದ್ದಾಗ ಅದಕ್ಕಾಗಿ ಆ ಹುಡುಗಿಯರ ಸಮುದಾಯ ಮತ್ತು ಧರ್ಮವನ್ನು ದೂಷಿಸಿದವರು, ಇದೀಗ ಅದೇ ಹುಡುಗಿಯರು ತಮ್ಮ ಸಾಂಪ್ರದಾಯಿಕ ದಿರಿಸುಗಳನ್ನು ಧರಿಸಿ ದೊಡ್ಡ ಸಂಖ್ಯೆಯಲ್ಲಿ ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತು ರ್ಯಾಂಕುದಾರರ ಹಾಗೂ ಸಾಧಕರ ಪಟ್ಟಿಗಳಲ್ಲಿ ಕಾಣಿಸಿಕೊಳ್ಳತೊಡಗಿದಾಗ ‘ಯುಪಿಎಸ್ಸಿ ಜಿಹಾದ್’ ನಡೆಯುತ್ತಿದೆ, ದೇಶದ ಆಡಳಿತವನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದೆಲ್ಲಾ ಅರಚಾಡುತ್ತಾ ತಮ್ಮದೇ ಮುಖ ಪರಚಿಕೊಳ್ಳಲು ಆರಂಭಿಸಿದ್ದಾರೆ. ಮುಸ್ಲಿಮ್ ಹುಡುಗಿಯರು ಶಿಕ್ಷಣ, ಉದ್ಯೋಗ ಮುಂತಾದ ರಂಗಗಳಿಗೆ ಬರಬೇಕಿದ್ದರೆ ತಮ್ಮ ಧರ್ಮ, ಸಂಪ್ರದಾಯ, ವ್ಯಕ್ತಿಗತ ಪ್ರಾಶಸ್ತ್ಯಗಳು ಮಾತ್ರವಲ್ಲ ಸಾಕ್ಷಾತ್ ತಮ್ಮ ಅಸ್ಮಿತೆ, ಸ್ತ್ರೀ ಸ್ವಾಭಿಮಾನ ಮತ್ತು ತಮ್ಮ ಹೆಣ್ಣುತನವನ್ನೇ ತ್ಯಜಿಸಿ ಗಂಡಸರಂತಹ ವೇಷ ಕಟ್ಟಿಕೊಂಡು ಬರಬೇಕು, ಗಂಡಸರು ಧರಿಸುವ ಉಡುಗೆ ಧರಿಸಬೇಕು ಎಂಬಿತ್ಯಾದಿ ಅಸಂಬದ್ಧ ಷರತ್ತುಗಳನ್ನು ಒಡ್ಡತೊಡಗಿದ್ದಾರೆ.

ಮುಸ್ಲಿಮ್ ಹುಡುಗಿಯರು ಮಾತ್ರವಲ್ಲ, ತೀರಾ ಭಿನ್ನ ಜಾತಿ, ಧರ್ಮಗಳ ಹಿನ್ನೆಲೆ ಇರುವ ಅದೆಷ್ಟೋ ಹೆಣ್ಣುಮಕ್ಕಳು ಕೇವಲ ಉಡುಗೆ ತೊಡುಗೆಗಳಿಗೆ ಸಂಬಂಧಿಸಿದ ಅಸಮರ್ಪಕ ಪೂರ್ವಷರತ್ತುಗಳಿಂದಾಗಿ ಶಿಕ್ಷಣ, ಕ್ರೀಡೆ, ಉದ್ಯೋಗ, ಮನರಂಜನೆ ಮುಂತಾದ ಹಲವು ರಂಗಗಳಿಂದ ದೂರ ಉಳಿಯಲು ನಿರ್ಬಂಧಿತರಾಗಿದ್ದಾರೆ. ಇದರಿಂದಾಗಿ ನಮ್ಮ ದೇಶದಲ್ಲಿ ಲಕ್ಷಾಂತರ ಸ್ತ್ರೀ ಪ್ರತಿಭೆಗಳು ಕತ್ತಲಲ್ಲಿ ಉಳಿದುಬಿಟ್ಟಿವೆ. ದೇಶಕ್ಕೆ ಚಿನ್ನದ ಪದಕಗಳನ್ನು ಗೆದ್ದು ತರಬಲ್ಲ ಎಷ್ಟೋ ಶಕ್ತ, ಸಮರ್ಥ ಹೆಣ್ಣುಮಕ್ಕಳು, ತಮಗೆ ಸ್ತ್ರೀಸಹಜವಾದ ಮತ್ತು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಲು ಅವಕಾಶವಿಲ್ಲದ ಕಾರಣ ಅಜ್ಞಾತರಾಗಿ ಉಳಿದಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಬಲ್ಲಷ್ಟು ಸಂವೇದನೆಯುಳ್ಳ ಸ್ತ್ರೀ ಹಿತೈಷಿಗಳಿಗೆ ಮತ್ತು ವಿಮೋಚಕ ಮಹಾಶಯರಿಗೆ ತಮ್ಮ ವಿಮೋಚನಾ ಹೋರಾಟ, ಹಾರಾಟಗಳನ್ನೆಲ್ಲ ನಡೆಸುವುದಕ್ಕೆ ಈ ರಂಗದಲ್ಲಿ ಧಾರಾಳ ಅವಕಾಶವಿದೆ. ಈ ಕ್ಷೇತ್ರದಲ್ಲಿ ಹೋರಾಟದ ಅಗತ್ಯವೂ ಇದೆ.

 ಕಳೆದ ನಾಲ್ಕು ದಶಕಗಳಲ್ಲಿ ಕನಿಷ್ಠ 15 ದೇಶಗಳಲ್ಲಿ ಮುಸ್ಲಿಮ್ ಮಹಿಳೆಯರು ತಮ್ಮ ದೇಶದ ಪ್ರಧಾನಿ ಅಥವಾ ರಾಷ್ಟ್ರಪತಿ ಎಂಬ ಅಧಿಕಾರದ ಪರಮೋಚ್ಚ ಪದವನ್ನು ಅಲಂಕರಿಸಿದ್ದಾರೆ. (ಈ ರಾಷ್ಟ್ರಪತಿ ಎಂಬ ಪದವೇ ನಮ್ಮ ಪುರುಷಪಾತಿತ್ವದ ದ್ಯೋತಕ). ತಲೆಮುಚ್ಚುವ ವಸ್ತ್ರ ಧರಿಸುವುದರಿಂದ ಯಾರದೆೀ ಪ್ರಗತಿ ಕುಂಠಿತವಾದ ದಾಖಲೆ ಇಲ್ಲ.

 ಪಾಕಿಸ್ತಾನ, ಬಾಂಗ್ಲಾದೇಶ, ಮಾಲಿ, ಸಿಂಗಾಪುರ, ತಾಂಜಾನಿಯಾ ಮುಂತಾದ ದೇಶಗಳಲ್ಲಿ ಮಹಿಳೆಯರು ತಲೆಮುಚ್ಚುವ ಉಡುಗೆ ಧರಿಸಿಕೊಂಡೇ, ಪುರುಷ ಪುಡಾರಿಗಳನ್ನು ಮತ್ತು ದಂಡನಾಯಕರನ್ನು ಸೋಲಿಸಿ, ತಮ್ಮ ದೇಶದ ಆಡಳಿತ ಸೂತ್ರವನ್ನು ಕೈಗೆತ್ತಿಕೊಂಡು ಸುಸೂತ್ರವಾಗಿ ಸರಕಾರವನ್ನು ನಡೆಸಿದ್ದಾರೆ. ಸ್ವತಃ ನಮ್ಮ ದೇಶದಲ್ಲಿ ಮೂರು ಬಾರಿ ಪ್ರಧಾನಮಂತ್ರಿಯಾಗಿದ್ದು, ತಮ್ಮ ಕೊನೆಯುಸಿರ ತನಕ, ಅಂದರೆ ಸುಮಾರು 17 ವರ್ಷ ಆ ಹುದ್ದೆಯಲ್ಲಿದ್ದ ಇಂದಿರಾಗಾಂಧಿಯವರು ಹೆಚ್ಚಿನವೇಳೆ, ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಸೆರಗಿನಿಂದ ತಲೆಯನ್ನು ಮುಚ್ಚಿಕೊಂಡಿರುತ್ತಿದ್ದರು. ದಿಲ್ಲಿಯ ಬಿಸಿಯಲ್ಲಿ ಮಾತ್ರವಲ್ಲ ಚಿಕ್ಕಮಗಳೂರಿನ ಚಳಿಯಲ್ಲೂ ಅವರು ಈ ಸಂಪ್ರದಾಯವನ್ನು ಪಾಲಿಸಿದ್ದರು. ಈ ರೀತಿ ತಲೆಮೇಲೆ ‘ಪಲ್ಲೂ’ (ಸೆರಗು) ಎಳೆದುಕೊಂಡದ್ದರಿಂದ ಅವರ ದಕ್ಷತೆಗೇನೂ ಕೊರತೆ ಬಂದಿರಲಿಲ್ಲ. ರಾಜಕೀಯವಾಗಿ ಅವರ ನಿಲುವುಗಳನ್ನು ವಿರೋಧಿಸುತ್ತಿದ್ದವರು ಕೂಡ ಅವರ ದಕ್ಷತೆಗೆ ತಲೆದೂಗುತ್ತಿದ್ದರು. ಅವರ ಸಂಪುಟದಲ್ಲಿ ಮಹಿಳಾ ಸದಸ್ಯರಿಲ್ಲ ಎಂದು ಯಾರೋ ಆಕ್ಷೇಪಿಸಿದಾಗ ಆ ಕಾಲದ ಬರಹಗಾರರೊಬ್ಬರು, ‘ಸ್ವತಃ ಆಕೆಯೇ ಆಕೆಯ ಸಂಪುಟದಲ್ಲಿರುವ ಏಕಮಾತ್ರ ಪುರುಷ’ ಎಂದು ಚಟಾಕಿಹರಿಸಿದ್ದರು. (ಇದು ಮತ್ತೆ, ದಕ್ಷತೆಯನ್ನು ಪುರುಷರಿಗೆ ಮೀಸಲಾಗಿಡುವ ಭಾಷೆ ಎಂಬುದು ಬೇರೆ ವಿಷಯ).

ಇಂದಿರಾಗಾಂಧಿಯವರ ಪ್ರಸ್ತುತ 17 ವರ್ಷಗಳ ದಾಖಲೆಯನ್ನು ಮುರಿದವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಎಂಬ ಮುಸ್ಲಿಮ್ ಮಹಿಳೆ. ಆಕೆ ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ಸ್ಥಾನದಲ್ಲಿ 18 ವರ್ಷ ಪೂರ್ತಿಗೊಳಿಸಿ ಹೊಸ ವಿಶ್ವದಾಖಲೆ ನಿರ್ಮಿಸಿದರು. ಗಮ್ಮತ್ತೆಂದರೆ, ಆಕೆ ಕೂಡ ಸದಾ ಸೆರಗಿನಿಂದ ತಲೆ ಮುಚ್ಚಿಕೊಂಡಿರುವವರು.

ಭಾರತದಲ್ಲಿ ಮಾತ್ರವಲ್ಲ, ಏಷಿಯಾ ಮತ್ತು ಆಫ್ರಿಕಾ ಖಂಡದ ಹೆಚ್ಚಿನ ಜಾಗಗಳಲ್ಲಿ ತಲೆ ಮುಚ್ಚಿಕೊಳ್ಳುವ ಸಂಪ್ರದಾಯ ಮುಸ್ಲಿಮರಿಗಾಗಲಿ ಸ್ತ್ರೀಯರಿಗಾಗಲಿ ಸೀಮಿತವಾಗಿಲ್ಲ. ಅಲ್ಲಿ ವಿವಿಧ ಧಾರ್ಮಿಕ ಮತ್ತು ಜನಾಂಗೀಯ ಹಿನ್ನೆಲೆಯ ಪುರುಷರು ಮತ್ತು ಮಹಿಳೆಯರು ತಮ್ಮದೇ ಆದ ರೀತಿಯಲ್ಲಿ ವಿವಿಧ ವಿನ್ಯಾಸ ಶಿರವಸ್ತ್ರಗಳನ್ನು ಧರಿಸುತ್ತಾರೆ.

ಪ್ರಖ್ಯಾತ ಅಂತರ್‌ರಾಷ್ಟ್ರೀಯ ಅಧ್ಯಯನ ಸಂಸ್ಥೆ ಪೀವ್ (PEW) ಫೋರಮ್‌ನವರು ಕಳೆದ ವರ್ಷ ಪ್ರಕಟಿಸಿದ ಸಮೀಕ್ಷಾ ವರದಿಯ ಪ್ರಕಾರ ಭಾರತದಲ್ಲಿ ಹಿಂದೂ ಸಮಾಜದಲ್ಲಿ ಹೆಚ್ಚಿನ ಮಹಿಳೆಯರು ಮನೆಯ ಹೊರಗೆ ತಮ್ಮ ತಲೆಯನ್ನು ಮುಚ್ಚಿಕೊಂಡಿರುತ್ತಾರೆ. ಭಾರತದಲ್ಲಿ ಈ ರೀತಿ ವಸ್ತ್ರದಿಂದ ತಮ್ಮ ತಲೆಯನ್ನು ಮರೆಸುವ ಮಹಿಳೆಯರ ಸಂಖ್ಯೆ ಮುಸ್ಲಿಮರಲ್ಲಿ ಶೇ. 89, ಸಿಖ್ಖರಲ್ಲಿ ಶೇ. 86 ಮ್ತು ಹಿಂದೂಗಳಲ್ಲಿ ಶೇ. 59ರಷ್ಟಿದೆ.

 ಇಂತಹ ಸಮಾಜದಲ್ಲಿ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಕ್ರೀಡೆ ಇತ್ಯಾದಿಗಳಲ್ಲಿ ಪ್ರಾತಿನಿಧ್ಯ ಬೇಕಿದ್ದರೆ ಅವರು ಹಠಾತ್ತನೆ ತಮ್ಮ ಸಂಪ್ರದಾಯಗಳನ್ನೆಲ್ಲ ತ್ಯಜಿಸಿ ಪುರುಷರಾಗಿ ಮಾರ್ಪಡಬೇಕು ಎಂಬ ನಿಲುವನ್ನು ತೀರಾ ಸಂವೇದನಾ ರಹಿತವಾದ ಸ್ತ್ರೀ ವಿರೋಧಿ ನಿಲುವೆಂದೇ ಕರೆಯಬೇಕಾಗುತ್ತದೆ.

2018ರಲ್ಲಿ ನಮ್ಮ ರಾಜ್ಯ ಪೊಲೀಸ್ ಇಲಾಖೆಯು ತನ್ನ ಮಹಿಳಾ ಸಿಬ್ಬಂದಿಯ ಪಾಲಿಗೆ, ಸೀರೆ, ಚೂಡಿದಾರ್‌ಗಳನ್ನು ನಿಷೇಧಿಸಿ ಅವರ ಮೇಲೆ ಪುರುಷರ ಸಮವಸ್ತ್ರವನ್ನು ಹೇರಿದಾಗ ಹೆಚ್ಚಿನ ಮಹಿಳಾ ಅಧಿಕಾರಿಗಳು ಆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಕೊನೆಗೂ ಅವರ ಸದ್ದು ಅಡಗಿ ಬಿಟ್ಟಿತು. ಎಷ್ಟು ಮುಜುಗರವಾದರೂ ಗಂಡಸರ ವೇಷವನ್ನೇ ಧರಿಸಲು ಮಹಿಳಾ ಸಿಬ್ಬಂದಿ ನಿರ್ಬಂಧಿತರಾದರು. ಈಗಲೂ ಅವರು ಮನಸ್ಸು ಮಾಡಿದರೆ ತಮ್ಮ ಬೇಡಿಕೆಯನ್ನು ಮುಂದಿಟ್ಟು, ಕೆಲಕಾಲ ಗಟ್ಟಿ ನಿಂತರೆ ಅವರಿಗೆ ಅವರಿಚ್ಛೆಯ ಸಹಜ ಸಮವಸ್ತ್ರ ಉಡುವ ಅವಕಾಶ ಖಂಡಿತ ಸಿಗುತ್ತದೆ. ಸದ್ಯ ಉಡುಪಿಯಲ್ಲಿರುವಂತಹ ಸನ್ನಿವೇಶಗಳಲ್ಲಿ ನಿಜವಾದ ಸಾಮಾಜಿಕ ಕಳಕಳಿ ಉಳ್ಳವರು ಆ ಹುಡುಗಿಯರ ಭಾವನೆಗಳಿಗೆ ಗುಣಾತ್ಮಕವಾಗಿ ಸ್ಪಂದಿಸುತ್ತಾರೆ. ತರ್ಕಗಳ ಬಾಣದಿಂದ ಭಾವನೆಗಳನ್ನು ಚುಚ್ಚುವ ಬದಲು ಸಾಮಾಜಿಕ ವಾಸ್ತವಗಳನ್ನು ಮತ್ತು ಸಾಂಪ್ರದಾಯಿಕ, ಧಾರ್ಮಿಕ, ಸಾಂಸ್ಕೃತಿಕ ಸಂವೇದನೆಗಳನ್ನು ಗಣನೆಗೆ ತೆಗೆದುಕೊಂಡು ಜೀವಂತ ಮನಸ್ಸಿನೊಂದಿಗೆ ತಮ್ಮ ಧೋರಣೆಯನ್ನು ನಿರ್ಧರಿಸುತ್ತಾರೆ. ಮಹಿಳೆಯರ ಶಿಕ್ಷಣ ಮತ್ತು ಸಬಲೀಕರಣ ಮುಖ್ಯವಾದ್ದರಿಂದ ಅದರ ಹಾದಿಯಲ್ಲಿ ಅಡೆತಡೆಗಳು ಬರದಂತೆ ಎಲ್ಲ ಬಗೆಯ ಅವಶ್ಯಕ ರಿಯಾಯಿತಿ ಹಾಗೂ ಪ್ರೋತ್ಸಾಹವನ್ನು ಕೊಡಬೇಕೆಂದು ಅವರು ಪ್ರತಿಪಾದಿಸತೊಡಗುತ್ತಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಅವರನ್ನು ಪುರುಷರಾಗಿಸಬೇಕಾಗಿಲ್ಲ ಎಂಬುದು ಅವರ ಸಳ ತರ್ಕವಾಗಿರುತ್ತದೆ.

 ಮುಸ್ಲಿಮ್ ಹುಡುಗಿಯರು ಸ್ಕಾರ್ಫ್ ಧರಿಸಿದರೆ ಇತರ ಸಮುದಾಯಗಳ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುತ್ತಾರೆ ಎಂಬೊಂದು ವಾದ ಕೇಳಿ ಬರುತ್ತಿದೆ. ಮುಸ್ಲಿಮ್ ಹುಡುಗಿಯರು ಸ್ಕಾರ್ಫ್ ಧರಿಸಲಿ, ಧರಿಸದೇ ಇರಲಿ, ಅವರವರ ಸಂಪ್ರದಾಯಾನುಸಾರ ಬಿಳಿ, ಹಸಿರು, ಕೇಸರಿ, ಹಳದಿ ಅಥವಾ ಶಾಲಾ ಸಮವಸ್ತ್ರದ ಬಣ್ಣಕ್ಕೆ ವಿರುದ್ಧವಲ್ಲದ ಬೇರಾವುದೇ ಬಣ್ಣದ ಶಾಲು ಮುಂಡಾಸು ಇತ್ಯಾದಿಗಳನ್ನು ಧರಿಸುವ ಹಕ್ಕು ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಖಂಡಿತ ಇದೆ. ಅದನ್ನು ಸಮಾಜ ಮತ್ತು ಶಿಕ್ಷಣಸಂಸ್ಥೆಗಳು ಗೌರವಿಸಲೇಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)