varthabharthi


ಬೆಂಗಳೂರು

ಪ್ರೊ.ಚಂಪಾ ಪ್ರಗತಿಪರ ಹೋರಾಟಗಳಿಗೆ ಪ್ರೇರಣೆಯಾಗಿದ್ದಾರೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ವಾರ್ತಾ ಭಾರತಿ : 23 Jan, 2022

 ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು, ಜ. 23: `ದೇಶದ ರಾಜಕೀಯ ಪಲ್ಲಟಗಳಿಗೆ ಸದಾ ಪ್ರತಿಕ್ರಿಯೆ ನೀಡಿದವರಲ್ಲಿ ಚಂಪಾ ಮೊದಲಿಗರಾಗಿದ್ದರು. ಕಳೆದ ಎರಡು ವರ್ಷಗಳಿಂದ ಅವರು ಮಾತು ಕಳೆದುಕೊಂಡಿದ್ದರೂ, ಪ್ರಗತಿಪರ ಹೋರಾಟಗಳಿಗೆ ಪ್ರೇರಣೆ ನೀಡುತ್ತಿದ್ದರು, ಈಗಲೂ ಪ್ರೇರಣೆಯಾಗಿದ್ದಾರೆ' ಎಂದು ಹಿರಿಯ ಚಿಂತಕ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು. 

ರವಿವಾರ ಬೆಂಗಳೂರು ನಗರ ಜಿಲ್ಲೆ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಚಂದ್ರಶೇಖರ ಪಾಟೀಲ ಅವರಿಗೆ ಶ್ರದ್ಧಾಂಜಲಿ ಆನ್‍ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಪ್ರಸ್ತುತ ನಾವು ಕೋಮುವಾದದ ಭಾರತದಲ್ಲಿ ಜೀವಿಸುತ್ತಿದ್ದೇವೆ. ಚಂಪಾ ಮಾತು ಕಳೆದುಕೊಂಡಿದ್ದರೂ, ಬಂಡಾಯ-ಹೋರಾಟಗಳಿಗೆ ಪ್ರಚೋದನೆ ನೀಡುತ್ತಿದ್ದರು. ತಮ್ಮ ಸಾಹಿತ್ಯದ ಮೂಲಕ ಮರಣ ಹೊಂದಿದ ಮೇಲೆಯೂ ಹೋರಾಟಗಳಿಗೆ ಸ್ಪೂರ್ತಿ ನೀಡುತ್ತಿದ್ದಾರೆ' ಎಂದು ತಿಳಿಸಿದರು. 

`ಚಂಪಾ ಆಂಗ್ಲ ಭಾಷೆ ಕಲಿತು, ಆಂಗ್ಲವನ್ನು ಭೋಧನೆ ಮಾಡಿದವರು. ಆದರೆ ತಮ್ಮ ಕನ್ನಡದ ಸಾಹಿತ್ಯ ಪ್ರಕಾರಗಳಲ್ಲಿ ಪಾಶ್ಚಿಮಾತ್ಯವನ್ನು ತಂದವರಲ್ಲ. ಸಂಕ್ರಮಣವನ್ನು ಸ್ಥಾಪಿಸಿ, ಸಾಹಿತ್ಯಕ್ಕೆ ಮತ್ತು ವೈಚಾರಿಕಾ ಹೋರಾಟಗಳಿಗೆ ಹೊಸ ಆಯಾಮವನ್ನು ಅವರು ತಂದು ಕೊಟ್ಟರು' ಎಂದು ಅವರು ಹೇಳಿದರು. 

`ನವ್ಯ ಮತ್ತು ನವೋದಯ ಕಾಲ ಘಟ್ಟದ ಬರಹಗಾರೊಂದಿಗೆ ಸದಾ ಒಡನಾಟ ಇಟ್ಟುಕೊಂಡಿದ್ದ ಚಂಪಾ ಆತ್ಮವಿಮರ್ಶಾ ಗುಣವನ್ನು ಹೊಂದಿದ್ದರು. ಹೊರಗಿನವರೊಂದಿಗೆ ನಡೆಯುವ ಹೋರಾಟ ಸಾಮಾನ್ಯವಾದುದು, ಆದರೆ ಒಳಗಿನವರೊಂದಿಗೆ ಹೋರಾಟ ಮಾಡಿದರೆ, ನಮ್ಮಲ್ಲಿ ನೈತಿಕತೆ ಇರಬೇಕು. ಇದನ್ನು ಚಂಪಾ ಅಳವಡಿಕೊಂಡಿದ್ದರು' ಎಂದು ಅವರು ಚಂಪಾ ಹೋರಾಟದ ಗುಣವನ್ನು ವಿವರಿಸಿದರು.

ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಮಾತನಾಡಿ, `1991ರಲ್ಲಿ ಕೇಂದ್ರ ಸರಕಾರವು ಡಂಕೇಲ್ ಪ್ರಸ್ತಾವನೆಯನ್ನು ತಂದಾಗ, ರಾಜ್ಯದಲ್ಲಿ ಆಗುವ ದುಷ್ಪರಿಣಾಮಗಳನ್ನು ಚಂಪಾ ಮೊದಲಿಗೆ ತಿಳಿದರು. ಸಾಂಸ್ಕೃತಿಕ ಸಂಸ್ಥೆಗಳು ಸೇರಿದಂತೆ ಎಲ್ಲವೂ ಕಾರ್ಪೊರೇಟ್ ಹಿಡಿತಕ್ಕೆ ಸಿಗುವುದನ್ನು ಅವರು ಮನಗಂಡರು. ವೇದಿಕೆಗಳಲ್ಲಿ ಇದನ್ನು ವಿರೋಧಿಸುವ ಹೋರಾಟಗಾರರ ಪೈಕಿ ಚಂಪಾ ಮೊದಲಿಗರಾಗಿದ್ದರು' ಎಂದು ಕವಿಯೊಂದಿಗಿನ ತಮ್ಮ ಒಡನಾಟವನ್ನು ವಿವರಿಸಿದರು.     

ಹಿರಿಯ ಚಿಂತಕ ಗೊ.ರು ಚನ್ನಬಸಪ್ಪ ಮಾತನಾಡಿ, `ಕನ್ನಡ ಸಾಹಿತ್ಯದಲ್ಲಿ ಚಂಪಾ ಬಂಡಾಯದ ಬೀಜವನ್ನು ಬಿತ್ತಿದರು. ಜೊತೆಗೆ ಅರ್ಥವಿಲ್ಲದ ಕರ್ಮಗಳನ್ನು ವಿರೋಧಿಸಿದರು. ಸಂಕ್ರಮಣದ ಸಂಪುಟಗಳನ್ನು ಹೊರತಂದು ವೈಚಾರಿಕತೆಯನ್ನು ಸಾಹಿತ್ಯದ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ಸಲ್ಲಿಸಿದ್ದಾರೆ' ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆರ್.ಜಿ.ಹಳ್ಳಿ ನಾಗರಾಜ್, ಮಮತ ಸಾಗರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)