varthabharthi


ವಿಶೇಷ-ವರದಿಗಳು

ಉ.ಪ್ರ: ಮುಸ್ಲಿಂ ವ್ಯಕ್ತಿಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವಂತೆ ಹಿಂದುತ್ವ ಗುಂಪುಗಳ ಒತ್ತಡಕ್ಕೆ ಬಗ್ಗದ ಯುವತಿ

ವಾರ್ತಾ ಭಾರತಿ : 23 Jan, 2022
ರಾಧಿಕಾ ಬೋರ್ಡಿಯಾ (scroll.in)

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥರ ಐದು ವರ್ಷಗಳ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಬೆಳೆಯುತ್ತಿರುವ ಇಸ್ಲಾಮೊಫೋಬಿಯಾದಿಂದಾಗಿ ಥಳಿಸಿ ಹತ್ಯೆಗಳು ಅಥವಾ ಲವ್ ಜಿಹಾದ್ ಕುರಿತು ಹೇಳಿಕೆಗಳಿಂದಾಗಿ ಅದು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಲೇ ಇದೆ.

ಆದರೆ ಈ ಘಟನೆಗಳ ಹಿನ್ನೆಲೆಯಲ್ಲಿ ತುಲನಾತ್ಮಕವಾಗಿ ಸಣ್ಣದಾದ,ಹೆಚ್ಚಾಗಿ ಕಪೋಲಕಲ್ಪಿತ ಘಟನೆಗಳ ನಿರಂತರ ಸರಣಿಯು ಮುಸ್ಲಿಮರ ವಿರುದ್ಧ ದ್ವೇಷ ಕುದಿಯುತ್ತಲೇ ಇರುವಂತೆ ಮಾಡಿದೆ. ಇವು ಎಷ್ಟೊಂದು ಸಾಮಾನ್ಯವಾಗಿದೆ ಎಂದರೆ ಅವುಗಳ ಬಗ್ಗೆ ತನಿಖೆ ನಡೆಯುವುದೇ ಅಪರೂಪ ಮತ್ತು ಅವು ಉಂಟು ಮಾಡುವ ಹಾನಿಯನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತಿದೆ.

ಮೀರತ್ ನ ಮಾರುಕಟ್ಟೆಯೊಂದರಲ್ಲಿ ಮುಸ್ಲಿಂ ವ್ಯಕ್ತಿಯೋರ್ವ ಹಿಂದು ಯುವತಿಗೆ ಕಿರುಕುಳ ನೀಡಿದ್ದ ಎಂದು ನಾಲ್ಕು ತಿಂಗಳುಗಳ ಹಿಂದೆ ಮಾಧ್ಯಮಗಳು ವರದಿ ಮಾಡಿದಾಗ ಅದು ಇಂತಹ ಇನ್ನೊಂದು ಘಟನೆಯೆಂಬಂತೆ ಕಂಡುಬಂದಿತ್ತು. ಆದರೆ ಈ ಲೇಖಕಿ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಯುವತಿ ಮತ್ತು ಆಕೆಯ ಕುಟುಂಬದ ಗಟ್ಟಿ ನಿಲುವು ಎದ್ದು ಕಂಡಿತ್ತು. ಮುಸ್ಲಿಂ ವ್ಯಕ್ತಿ ಜೊತೆಯಲ್ಲಿದ್ದ ಅಷ್ಟೇ,ಆದರೆ ಆತ ಅಂತಹುದೇನನ್ನೂ ಮಾಡಿರಲಿಲ್ಲ ಎಂದು ಯುವತಿ ಮತ್ತು ಕುಟುಂಬ ಸದಸ್ಯರು ಒತ್ತಿ ಹೇಳಿದರು.

ಹಿಂದುತ್ವ ಗುಂಪುಗಳು ಒತ್ತಡ ಹೇರುತ್ತಿದ್ದರೂ ಅವರು ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಲು ನಿರಾಕರಿಸಿದ್ದಾರೆ. ಇಂದಿನ ರಾಜಕೀಯ ವಾತಾವರಣದಲ್ಲಿ ಇದೊಂದು ಅಸಾಧಾರಣ ಧೈರ್ಯದ ನಿಲುವಾಗಿ ಕಂಡು ಬರುತ್ತಿದೆ. ಕಳೆದ ಸೆ.21ರಂದು ಹಿಂದಿ ದೈನಿಕ ಅಮರ್ ಉಜಾಲಾ ‘ಗೋಲ್ ಮಾರ್ಕೆಟ್ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ,ಆರೋಪಿಗೆ ಥಳಿತ ’ಎಂಬ ಶೀರ್ಷಿಕೆಯೊಂದಿಗೆ ಬರಹವೊಂದನ್ನು ಪ್ರಕಟಿಸಿತ್ತು. ಬರಹದೊಂದಿಗಿನ ಎರಡು ಚಿತ್ರಗಳ ಪೈಕಿ ಮುಖ ಕಾಣಿಸದ ಗುಲಾಬಿ ಸ್ಕಾಫ್ ಧರಿಸಿದ್ದ ಯುವತಿ ಆರೋಪಿಗೆ ಥಳಿಸುತ್ತಿರುವುದನ್ನು ಮತ್ತು ಇನ್ನೊಂದು ಚಿತ್ರವು ವ್ಯಕ್ತಿಯೋರ್ವ ಆರೋಪಿಗೆ ಎರಡೂ ಕಿವಿಗಳನ್ನು ಹಿಡಿದುಕೊಂಡು ಬಸ್ಕಿ ಹೊಡೆಸುತ್ತಿರುವುದನ್ನು ತೋರಿಸಿತ್ತು.

‘ಯುವತಿ ತನ್ನ ಸ್ನೇಹಿತೆಯೊಂದಿಗೆ ತಂಪು ಪಾನೀಯ ಸೇವಿಸುತ್ತಿದ್ದಾಗ ವ್ಯಕ್ತಿ ಆಕೆಗೆ ಕಿರುಕುಳ ನೀಡಿದ್ದ. ಈ ಸುದ್ದಿ ತಿಳಿದು ಹಿಂದು ಜಾಗರಣ ಮಂಚ್ನ ಕೆಲ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದಾಗ ಅದಾಗಲೇ ಯುವತಿ ವ್ಯಕ್ತಿಯನ್ನು ಹಿಡಿದುಕೊಂಡು ತನ್ನ ಚಪ್ಪಲಿಯಿಂದ ಹೊಡೆಯುತ್ತಿದ್ದಳು ಮತ್ತು ಕಾರ್ಯಕರ್ತರೂ ಆತನನ್ನು ಹಿಗ್ಗಾಮುಗ್ಗಾ ಥಳಿಸಿದರು ’ಎಂದು ಅಮರ ಉಜಾಲಾ ತನ್ನ ಬರಹದಲ್ಲಿ ವರ್ಣಿಸಿತ್ತು.

ಯುವಕ ತನ್ನ ಪುತ್ರಿಗೆ ಕಿರುಕುಳ ನೀಡುತ್ತಿದ್ದ ಎಂದು ಯುವತಿಯ ತಾಯಿ ತನ್ನ ಹೇಳಿಕೆಯಲ್ಲಿ ‘ಆರೋಪಿಸಿದ್ದಳು’. ವರದಿಯಲ್ಲಿ ಯುವಕನನ್ನು ಸಲ್ಮಾನ್ ಎಂದು ಗುರುತಿಸಲಾಗಿತ್ತು ಮತ್ತು ಆತ ‘ಅನ್ಯ ಸಮುದಾಯ’ಕ್ಕೆ ಸೇರಿದ್ದ ಎಂದು ಪದೇಪದೇ ಪ್ರಸ್ತಾವಿಸಲಾಗಿತ್ತು. ಹಿಂದು ಜಾಗರಣ ಮಂಚ್ ಕಾರ್ಯಕರ್ತನೋರ್ವನ ಹೇಳಿಕೆಯನ್ನು ಉಲ್ಲೇಖಿಸಿ ದೈನಿಕವು ಮಾರುಕಟ್ಟೆಯಲ್ಲಿ ಮುಸ್ಲಿಮರು ಹಿಂದು ಮಹಿಳೆಯರಿಗೆ ಕಿರುಕುಳ ನೀಡುವುದು ಮಾಮೂಲಾಗಿದೆ ಎಂದೂ ಬರೆದಿತ್ತು.

ಅಮರ್ ಉಜಾಲಾದಲ್ಲಿನ ವರದಿಯು ಮುಸ್ಲಿಂ ಪುರುಷರನ್ನು ರಾಕ್ಷಸೀಕರಿಸುವ ಮೂಲಕ ಹುಲುಸಾಗಿ ಬೆಳೆಯುತ್ತಿರುವ ಮುಖ್ಯ ವಾಹಿನಿ ಹಿಂದಿ ಮಾಧ್ಯಮಗಳ ಪ್ರವೃತ್ತಿಗೆ ಅನುಗುಣವಾಗಿಯೇ ಇತ್ತು.

ತನಗೆ ಕಿರುಕುಳ ನೀಡಿರಲಿಲ್ಲ ಎಂದು ಯುವತಿ ಪದೇಪದೇ ಹೇಳಿದ್ದರೂ ಅದನ್ನು ವರದಿಯು ಮರೆ ಮಾಚಿತ್ತು. ಹಿಂದುತ್ವ ಸಂಘಟನೆಗಳು ಮತ್ತು ಕೆಲವು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಪೊಲೀಸರು ಸಲ್ಮಾನ್ ಮತ್ತು ಯುವತಿಯರನ್ನು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಕರೆದೊಯ್ದು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು ಎಂದು ವರದಿಯು ಹೇಳಿತ್ತು. ಪೊಲೀಸರು ಸಲ್ಮಾನ್ ಪರವಾಗಿದ್ದರು ಮತ್ತು ಲೈಂಗಿಕ ಕಿರುಕುಳದ ಬದಲು ಸಾರ್ವಜನಿಕ ಶಾಂತಿಭಂಗದ ಹಗುರ ಆರೋಪವನ್ನು ಹೊರಿಸಿ ಬಿಟ್ಟು ಕಳುಹಿಸಿದ್ದಾರೆ ಎಂದು ಹಿಂದು ಜಾಗರಣ ಮಂಚ್ ಅನ್ನು ಉಲ್ಲೇಖಿಸಿ ವರದಿಯಲ್ಲಿ ಬರೆಯಲಾಗಿತ್ತು.
 ‌
ಯುವತಿಯರು ಮತ್ತು ಅವರ ಕುಟುಂಬಗಳನ್ನು ಪತ್ತೆ ಹಚ್ಚುವುದು ಸುಲಭವಾಗಿರಲಿಲ್ಲ,ಅವರ ವಿಶ್ವಾಸವನ್ನು ಗೆಲ್ಲುವುದು ಇನ್ನೂ ಕಷ್ಟವಾಗಿತ್ತು.
ಈ ಲೇಖಕಿಯು ಬಜರಂಗ ದಳ ಅಥವಾ ಹಿಂದು ಜಾಗರಣ ಮಂಚ್ನ ‘ರಹಸ್ಯ ದೂತೆ ’ಯಾಗಿರಬಹುದು ಎಂದು ಯುವತಿಯ ಕುಟುಂಬವು ಆತಂಕ ಹೊಂದಿತ್ತು. ಆದರೆ ನಿಜವನ್ನು ಅರಿತ ಬಳಿಕ ಯುವತಿಯ ತಾಯಿ ‘ಪ್ರೆಸ್ವಾಲಾ’ಗಳ ವಿರುದ್ಧ ತನ್ನ ಕ್ರೋಧವನ್ನು ಕಾರಿದ್ದರು.

‘ ಕಳೆದ ಮೂರು ತಿಂಗಳುಗಳಿಂದಲೂ ಬಜರಂಗಿಗಳು ಅಥವಾ ಹಿಂದು ಜಾಗರಣ ಮಂಚ್ ಅಥವಾ ಧರ್ಮದ ಗುತ್ತಿಗೆಯನ್ನು ಪಡೆದವರಿಂದ ನಮ್ಮ ಭೇಟಿಗಳಿಗೆ ಅಂತ್ಯವೇ ಇಲ್ಲ. ಸಲ್ಮಾನ್ ವಿರುದ್ಧ ಪ್ರಕರಣವನ್ನು ದಾಖಲಿಸಲು ಹಣದ ಆಮಿಷವನ್ನು ಅವರು ನಮಗೆ ಒಡ್ಡಿದ್ದರು. ನಾವು ನಿರಾಕರಿಸಿದಾಗ ನಮ್ಮನ್ನು ಬೆದರಿಸಿದ್ದರು ’ ಎಂದು ಹೇಳಿದರು.
 
ತಾನು ನೀಡಿದ್ದೆನ್ನಲಾದ ಹೇಳಿಕೆಯಲ್ಲಿರುವ ವಿಷಯ ಗೊತ್ತಾದಾಗ ಯುವತಿಯ ತಾಯಿ ದಿಗ್ಭ್ರಮೆಗೊಂಡಿದ್ದರು.‘ನನಗೆ ಓದಲು,ಬರೆಯಲು ಬರುವುದಿಲ್ಲ. ಈ ದೌರ್ಬಲ್ಯವನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರು ಸುಳ್ಳು ಆರೋಪವನ್ನು ಬರೆದು ನನ್ನ ಹೆಬ್ಬೆಟ್ಟು ಮುದ್ರೆಯನ್ನು ಪಡೆದಿದ್ದರು. ಸಲ್ಮಾನ್ ವಿರುದ್ಧ ನನ್ನ ಯಾವುದೇ ದೂರು ಇಲ್ಲ,ಇದನ್ನು ನಾನು ಪೊಲೀಸ್ ಠಾಣೆಯಲ್ಲಿ ಸ್ಪಷ್ಟಪಡಿಸಿದ್ದೇನೆ ’ ಎಂದರು.

ಯುವತಿಯ ಕುಟುಂಬ ವಾಸವಿದ್ದ ಓಣಿಯಲ್ಲಿಯ ಹೆಚ್ಚಿನ ಇತರರು ಅವರಂತೆಯೇ ದಿನಗೂಲಿ ಕಾರ್ಮಿಕರಾಗಿದ್ದರು ಮತ್ತು ಸಾಂಪ್ರದಾಯಿಕವಾಗಿ ಕುಂಬಾರಿಕೆಯನ್ನು ಮಾಡುವ ಪ್ರಜಾಪತಿ ಸಮುದಾಯಕ್ಕೆ ಸೇರಿದವರಾಗಿದ್ದರು.

‘ಹಿಂದು ಗೂಂಡಾಗಳ ಪೈಕಿ ಓರ್ವ ನಮ್ಮ ಜಾತಿಯವನೇ ಆಗಿದ್ದ. ಘಟನೆಯ ಬಳಿಕ ನಮ್ಮ ಮನೆಗೆ ಬಂದಿದ್ದ ಆತ ಈ ಹಗರಣ ನನ್ನ ಮಗಳ ಹೆಸರನ್ನು ಕೆಡಿಸಿದೆ ಮತ್ತು ಆಕೆಯನ್ನು ಮದುವೆಯಾಗುವ ಮೂಲಕ ಆಕೆಯನ್ನು ರಕ್ಷಿಸಲು ಸಿದ್ಧನಿದ್ದೇನೆ ಎಂದು ಹೇಳಿಕೊಂಡಿದ್ದ. ಆತನನ್ನು ನಾನು ಮನೆಯಿಂದ ಹೊರದಬ್ಬಿದ್ದೆ. ಆತ ನನ್ನ ಮಗಳ ಚಪ್ಪಲಿಯ ಧೂಳಿಗಿಂತ ಕಡೆಯಾಗಿದ್ದ ’ಎಂದು ತಾಯಿ ಹೇಳಿದರು.

‘ಸಲ್ಮಾನ್ ಪರಿಚಯ ನನಗಿರಲಿಲ್ಲ. ಆತ ಇಲ್ಲಿಯೇ ಸಮೀಪ ವಾಸವಿರುವ ನನ್ನ ಆತ್ಮೀಯ ಸ್ನೇಹಿತೆಯ ಕಾಲೇಜಿನಲ್ಲೇ ಓದುತ್ತಿದ್ದ. ಅಮರ್ ಉಜಾಲಾದಲ್ಲಿ ಬರೆದಿರುವಂತೆ ಸಲ್ಮಾನ್ ಮಾರುಕಟ್ಟೆಯ ಬಳಿ ಠಳಾಯಿಸುತ್ತಿರಲಿಲ್ಲ. ನಾವು ಅವನನ್ನು ಗುರುತಿಸಿದ ಬಳಿಕವಷ್ಟೇ ತನ್ನ ಪಾಡಿಗೆ ತಾನು ಹೋಗುತ್ತಿದ್ದ ಆತ ನಿಂತುಕೊಂಡಿದ್ದ. ನಾವೆಲ್ಲರೂ ಸೇರಿ ಪೆಪ್ಸಿ ಕುಡಿಯುತ್ತಿದ್ದೆವು ಅಷ್ಟೇ. ಇದಕ್ಕೆ ಯಾರು ಪ್ರಕರಣ ದಾಖಲಿಸುತ್ತಾರೆ? ಅದು ಹುಚ್ಚುತನ ಅಷ್ಟೇ ’ಎಂದು ಯುವತಿ ಹೇಳಿದಳು.

ವಿಷಯ ಗೊತ್ತಾದಾಗ ಪಂಜಾಬಿನಲ್ಲಿ ಕೆಲಸ ಮಾಡುತ್ತಿರುವ ಯುವತಿಯ ಅಣ್ಣ-ಅತ್ತಿಗೆ ತಾಯಿಯನ್ನು ತರಾಟೆಗೆತ್ತಿಕೊಂಡಿದ್ದರು. ಕುಟುಂಬ ಆತನಿಗೆ ವಿಷಯ ತಿಳಿಸುವ ಮೊದಲೇ ಹಿಂದು ಜಾಗರಣ ಮಂಚ್ನ ಕಾರ್ಯಕರ್ತರು ಆತನಿಗೆ ಕರೆ ಮಾಡಿ ‘ನಿನ್ನ ತಂಗಿ ಕುಟುಂಬದ ಮಾನ ಕಳೆಯುತ್ತಿದ್ದಾಳೆ ’ ಎಂದು ಕಿವಿ ಕಚ್ಚಿದ್ದರು.
 
ಘಟನೆಯ ಕುರಿತು ವರದಿಯನ್ನು ಪ್ರಕಟಿಸಿದ್ದ ನವಭಾರತ್ ಟೈಮ್ಸ್ ಮಹಿಳೆಯರ ಹೇಳಿಕೆಗಳ ಮೇರೆಗೆ ಸಚಿನ್ ಸಿರೋಹಿ ಮತ್ತು ಹಿಂದು ಜಾಗರಣ ಮಂಚ್ನ ಇತರ ಕಾರ್ಯಕರ್ತರ ವಿರುದ್ಧ ಹಲ್ಲೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣಾಧಿಕಾರಿ ಅಬ್ದುರ್ರಹಮಾನ್ ಸಿದ್ದಿಕಿ ಅವರನ್ನು ಉಲ್ಲೇಖಿಸಿ ವರದಿ ಮಾಡಿತ್ತು. ಇದಾದ ನಂತರ ಸಿದ್ದಿಕಿಯವರನ್ನು ಗಾಝಿಯಾಬಾದ್ಗೆ ಎತ್ತಂಗಡಿ ಮಾಡಲಾಗಿತ್ತು.

ಸಲ್ಮಾನ್ ನ ಗ್ರಾಮದಲ್ಲಿ ಸುಮಾರು 8,000 ಮತದಾರರಿದ್ದು,ಅರ್ಧಕ್ಕೂ ಹೆಚ್ಚಿನವರು ಮುಸ್ಲಿಮರಾಗಿದ್ದಾರೆ. ಗ್ರಾಮವು ಮೀರತ್ ಜಿಲ್ಲೆಯ ಕಿಥೋರೆ ವಿಧಾನಸಭಾ ಕ್ಷೇತ್ರದ ಭಾಗವಾಗಿದೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಮಾಜವಾದಿ ಪಕ್ಷದ ಶಾಹಿದ್ ಮಂಝೂರ್ ಅವರು 2012ರವರೆಗೆ ಸತತ ಮೂರು ಅವಧಿಗೆ ಕ್ಷೇತ್ರದ ಶಾಸಕರಾಗಿದ್ದರು. 2017ರಲ್ಲಿಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿಯ ಮುಸ್ಲಿಮರಲ್ಲಿ ಅಭದ್ರತೆಯ ಭಾವನೆ ಹೆಚ್ಚಾಗಿದೆ.

‘ನಾವು ರಜಪೂತ ಮುಸ್ಲಿಮರಾಗಿದ್ದೇವೆ,ಆದರೆ ಹಿಂದುಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಅವರಲ್ಲಿ ಹೆಚ್ಚಿನವರು ನನ್ನ ಮಗನನ್ನು ಬೆಂಬಲಿಸಿ ಮಾತನಾಡಿದ್ದಾರೆ ’ ಎಂದು ಹೇಳಿದ ಸಲ್ಮಾನ್ನ ತಾಯಿ, ‘ಅವರು ಆತನ ಮೇಲೆ ಮತ್ತೆ ಹಲ್ಲೆ ನಡೆಸಲು ಅಥವಾ ಇನ್ನೊಂದು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಾರೆ ಎಂಬ ಭೀತಿ ನನ್ನನ್ನು ಕಾಡುತ್ತಿದೆ. ಸಲ್ಮಾನ್ ಕೃಷಿಕಾರ್ಯದಲ್ಲಿ ನೆರವಾಗಲು ಇಲ್ಲಿದ್ದಾನೆ. ಅದು ಮುಗಿದ ತಕ್ಷಣ ಆತನನ್ನು ನಗರದಲ್ಲಿರುವ ಆತನ ಅಣ್ಣನ ಬಳಿಗೆ ಕಳುಹಿಸುತ್ತೇನೆ. ಆತ ಇಲ್ಲಿರುವುದು ಸುರಕ್ಷಿತವಲ್ಲ ’ ಎಂದರು.

 ದೂರವಾಣಿ ಮೂಲಕ ಹಿಂದು ಜಾಗರಣ ಮಂಚ್ನ ಸಚಿನ್ ಸಿರೋಹಿಯನ್ನು ಸಂಪರ್ಕಿಸಿದಾಗ,‘ಪೊಲೀಸರು ಯುವತಿಗೆ ಹೇಳಿಕೊಟ್ಟಿದ್ದಾರೆ.ಆಕೆ ನನ್ನನ್ನೆಂದೂ ಭೇಟಿಯಾಗಿಲ್ಲ,ಆಕೆಗೆ ನನ್ನ ಹೆಸರೂ ಗೊತ್ತಿಲ್ಲ. ಹೀಗಾಗಿ ನನ್ನ ಹೆಸರು ಎಫ್ಐಆರ್ನಲ್ಲಿ ಕಾಣಿಸಿಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿದ. ಹಿಂದು-ಮಸ್ಲಿಂ ಪ್ರಕರಣದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದ್ದಕ್ಕಾಗಿ ತಾನು ಹಿಂದೆ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದೆ,ಹೀಗಾಗಿ ಪೊಲೀಸರು ಈಗ ತನ್ನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದ ಆತ,ಒಂದು ಗಂಟೆಯಲ್ಲಿ ಸಲ್ಮಾನ್ನನ್ನು ಜಾಮೀನಿನಲ್ಲಿ ಬಿಟ್ಟಿದ್ದಾರೆ. ಬದಲಿಗೆ ಅವರು ಬಿಜೆಪಿ ಅಧಿಕಾರದಲ್ಲಿರುವಾಗ,ಅದೂ ಆರೆಸ್ಸೆಸ್ಸಿಗನಾದ ತನ್ನ ವಿರುದ್ಧ ನಿಂತಿದ್ದಾರೆ. ಏನಿದರ ಅರ್ಥ ಎಂದು ಇನ್ನೊಂದು ಪ್ರಶ್ನೆ ಹಾಕಿದ.

ಇಂದು ಯುವತಿಯ ಮನೆಯವರು ತನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾಳೆ ಅವಳ ಮದುವೆ ಮಾಡುವಾಗ ಅವರು ಅನುಭವಿಸುತ್ತಾರೆ ಎಂದ. ಹಿಂದುತ್ವ ಸಂಘಟನೆಗಳು ಆಡಳಿತದೊಂದಿಗೆ ನೇರವಾದ ನಂಟು ಹೊಂದಿರುವ ರಾಜ್ಯದಲ್ಲಿ ಸಿರೋಹಿ ಇಂತಹ ಬೆದರಿಕೆಗಳನ್ನು ಹಾಕುತ್ತಿರುವುದು ಅಚ್ಚರಿಯೇನಲ್ಲ,ಆದರೆ ಮಹಿಳೆಯರು ಆಘಾತಗೊಂಡಿರುವುದು ಮಾಧ್ಯಮಗಳ ಪಾತ್ರದ ಬಗ್ಗೆ. ಅವರು ಹಿಂದುತ್ವ ಸಂಘಟನೆಗಳಲ್ಲ.ಹೀಗಾಗಿ ಅವರೇಕೆ ಸತ್ಯವನ್ನು ವರದಿ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಕೃಪೆ: Scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)