varthabharthi


ನಿಮ್ಮ ಅಂಕಣ

ಹೆಣ್ಣು ಮಕ್ಕಳ ಶಿಕ್ಷಣದ ವಿರುದ್ಧ ಸಂಚು

ವಾರ್ತಾ ಭಾರತಿ : 24 Jan, 2022
ಪೂರ್ಣಿಮಾ ಅರ್ತಿಕಜೆ, ಪುತ್ತೂರು

ಮಾನ್ಯರೆ, ಇತ್ತೀಚೆಗೆ ತಮ್ಮ ಪತ್ರಿಕೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಪೊಲೀಸ್ ಅಧಿಕಾರಿಗಳಾಗಿ ಆಯ್ಕೆಯಾದ ವರದಿ ಓದಿ ನಿಜಕ್ಕೂ ಸಂತೋಷವಾಯಿತು. ಮುಸ್ಲಿಮ್ ಮಹಿಳೆಯರು ಹತ್ತನೇ ತರಗತಿ ಕಲಿಯುವುದೇ ದೊಡ್ಡ ಸಂಗತಿಯಾಗಿದ್ದ ಕಾಲವೊಂದಿತ್ತು. ಇಂದು ಮುಸ್ಲಿಮ್ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ತೋರುತ್ತಿರುವುದು ಅಭಿನಂದಾನರ್ಹ. ಬಹುಶಃ ಈ ಸಾಧನೆಗಳೇ ಹಲವರಿಗೆ ನುಂಗಲಾರದ ತುತ್ತಾಗಿರಬೇಕು. ಆದುದರಿಂದಲೇ ಅವರನ್ನು ಶಾಲೆಯಿಂದ ತಡೆಯುವ ಬೇರೆ ಬೇರೆ ಪ್ರಯತ್ನಗಳು ನಡೆಯುತ್ತಿವೆ. ಸೇನೆಯಲ್ಲಿ ಸೈನಿಕರು ಸಿಖ್ ಟರ್ಬನ್ ಹಾಕಬಹುದಾದಲ್ಲಿ, ಯಕಶ್ಚಿತ್ ಶಾಲೆಯಲ್ಲಿ ಹೆಣ್ಣು ಮಕ್ಕಳು ತಲೆಗೆ ತಲೆವಸ್ತ್ರ ಹಾಕುವುದರಿಂದ ಯುನಿಫಾರ್ಮ್ ಉಲ್ಲಂಘನೆಯಾಗುವುದು ಹೇಗೆ? ಉಲ್ಲಂಘನೆಯಾಗುವುದಾದರೆ ಸೇನೆಯಲ್ಲಿ ಟರ್ಬನ್ ಹಾಕುವ ಹಕ್ಕನ್ನೇ ಸಿಖ್ಖರು ಕಳೆದುಕೊಳ್ಳುತ್ತಿದ್ದರು. ಆದರೆ ಇದರಿಂದಾಗಿ ಸೇನೆಯಲ್ಲಿರುವ ಅಪಾರ ದೇಶಪ್ರೇಮಿ ಸೈನಿಕರನ್ನು ಸೇನೆ ಕಳೆದುಕೊಳ್ಳಬೇಕಾಗುತ್ತಿತ್ತು.

ಸ್ಕಾರ್ಫ್‌ನ ಹೆಸರಲ್ಲಿ ಶಿಕ್ಷಣಕ್ಕೆ ಅಡ್ಡಿ ಪಡಿಸುವುದರಲ್ಲೂ ಇದೇ ರೀತಿಯ ಅನ್ಯಾಯವಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಬಹುದಾಗಿದ್ದ ಮಹಿಳೆಯರು ಶಿಕ್ಷಣದ ಹಕ್ಕನ್ನೇ ಕಳೆದುಕೊಳ್ಳುತ್ತಾರೆ. ಮಹಿಳೆಯರು ಶಿಕ್ಷಣ ಪಡೆಯಬಾರದು ಎನ್ನುವುದು ಹೆಚ್ಚಿನ ಧಾರ್ಮಿಕ ಮುಖಂಡರ ಒಳ ಅಜೆಂಡಾ ಆಗಿರುತ್ತದೆ. ಆರೆಸ್ಸೆಸ್ ನಾಯಕರು ಕೂಡ, ಮಹಿಳೆಯರು ಹೆಚ್ಚಿನ ಶಿಕ್ಷಣ ಪಡೆಯುವುದನ್ನು ಇಚ್ಛಿಸುವುದಿಲ್ಲ. ಬಾಲಗಂಗಾಧರ ತಿಲಕರು ಇದನ್ನು ಸ್ಪಷ್ಟವಾಗಿ ಹೇಳಿದ್ದರು. ಮಹಿಳೆಯರಿಗೆ ಪಾಶ್ಚಾತ್ಯ ಶಿಕ್ಷಣ ನೀಡಬಾರದು ಎನ್ನುವುದು ತಿಲಕರ ವಾದವಾಗಿತ್ತು. ತಿಲಕರು ಆರೆಸ್ಸೆಸ್‌ನ ಜನರಿಗೆ ಆದರ್ಶಪ್ರಾಯರಾದವರು. ಮೊದಲು ಮುಸ್ಲಿಮ್ ಮಹಿಳೆಯರನ್ನು ಶಿಕ್ಷಣದಿಂದ ತಡೆದು, ಬಳಿಕ ಹಂತ ಹಂತವಾಗಿ ಬೇರೆ ಬೇರೆ ಜಾತಿಯ ಮಹಿಳೆಯರನ್ನು ವಿವಿಧ ನೆಪಗಳನ್ನು ಒಡ್ಡಿ ಶಿಕ್ಷಣದಿಂದ ತಡೆಯುವುದು ಅವರ ಗುರಿಯಾಗಿದೆ. ಆದುದರಿಂದ, ಸ್ಕಾರ್ಫ್ ಜೊತೆಗೆ ಶಿಕ್ಷಣ ಕಲಿಯುವ ವಿದ್ಯಾರ್ಥಿನಿಯರ ಹಕ್ಕುಗಳ ಜೊತೆಗೆ ಎಲ್ಲರು ಒಂದಾಗಿ ನಿಲ್ಲಬೇಕಾಗಿದೆ.

ಪೂರ್ಣಿಮಾ ಅರ್ತಿಕಜೆ, ಪುತ್ತೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)