varthabharthi


ವಿಶೇಷ-ವರದಿಗಳು

ಯುವಜನತೆಗೆ ತಲುಪಬೇಕಾದ ‘ಗಣರಾಜ್ಯ’

ವಾರ್ತಾ ಭಾರತಿ : 24 Jan, 2022
ರತೀಶ್ ಪಿಶರೊಡಿ

ಭಾಗ- 1

ಯುವಕರನ್ನು ಆಡಳಿತಕ್ಕೆ ಸೇರಿಸಿಕೊಳ್ಳದಿರುವ ಪ್ರವೃತ್ತಿಯು ಹಿಂದಿನಿಂದಲೇ ಬಂದಿದೆ. ಕಳೆದು ಹೋಗಿರುವ ಏಳು ದಶಕಗಳಲ್ಲಿ, ತಮ್ಮನ್ನು ಹೊರಗಿಟ್ಟಿರುವ ಭಾವನೆಯನ್ನು ಯುವಜನತೆ ಹೊಂದಿದ್ದಾರೆ. ಇಂದು ನಮ್ಮ ರಾಜಕೀಯ ಮತ್ತು ನಮ್ಮ ಆಡಳಿತವು ಸರ್ವಾಧಿಕಾರ ಮತ್ತು ಫ್ಯಾಶಿಸಮ್‌ನತ್ತ ವಾಲಿದ್ದರೆ, ಅದಕ್ಕೆ ಈ ಪ್ರವೃತ್ತಿಗಳು ನಮ್ಮ ಮನೆಗಳಲ್ಲಿ ಕಪಟತನದಿಂದ ನೆಲೆಯೂರಲು ನಾವು ಬಿಟ್ಟಿದ್ದೇ ಕಾರಣ.

ನಾವಿಂದು 73ನೇ ಗಣರಾಜ್ಯೋತ್ಸವ ದಿನಾಚರಣೆಯ ಹೊಸ್ತಿಲಲ್ಲಿದ್ದೇವೆ. ಈ ಸುದೀರ್ಘ ಯಾನವನ್ನು ನಾವು ಹಿಮಾಲಯದಲ್ಲಿ ಕೈಗೊಂಡ ಸುದೀರ್ಘ, ಆಯಾಸದಾಯಕ ಹಾಗೂ ಹಲವು ಸಂದರ್ಭಗಳಲ್ಲಿ ಅಪಾಯಕಾರಿ ಚಾರಣಕ್ಕೆ ಹೋಲಿಸುವುದಾದರೆ, ಒಮ್ಮೆ ಹಿಂದಿರುಗಿ ನೋಡಿದಾಗ, ಕೆಲವು ಅಪಾಯಕಾರಿ ಭೂಭಾಗಗಳನ್ನು ಹಾದು ಬಂದಿರುವುದು ಗೋಚರಿಸುತ್ತದೆ ಹಾಗೂ ಅದಕ್ಕಾಗಿ ನಾವು ಹೆಮ್ಮೆ ಪಡಬೇಕಾಗುತ್ತದೆ. ನಮ್ಮ ಯಾನದ ಆರಂಭದಲ್ಲಿಯೇ ಪರ್ವತಗಳಿದ್ದವು. ಅಲ್ಲಿ ನಮ್ಮನ್ನು ವಸಾಹತುಶಾಹಿ ಶಕ್ತಿಗಳು ಇಳಿಸಿಹೋಗಿದ್ದವು. ಆಗ ನಮ್ಮೆದುರು ಇದ್ದದ್ದು ಸಾವಿನ ವಲಯ. ಸರಿಯಾದ ತಯಾರಿಯ ಕೊರತೆಯಿಂದಾಗಿ ಹಿಮ ಮತ್ತು ಕಲ್ಲುಗಳನ್ನು ಗುರುತಿಸಲು ಕೆಲವು ತಿಂಗಳುಗಳು ಬೇಕಾದವು. ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಕೆಲವು ವರ್ಷಗಳೇ ಬೇಕಾದವು. ಕೆಟ್ಟ ಆಡಳಿತ, ರಾಜಕೀಯ ಮತ್ತು ಕ್ಷಾಮಗಳೆಂಬ ಕೊರಕಲು ದಾರಿಯಲ್ಲಿ, ಹಿಮಗಟ್ಟಿದ ತೊರೆಗಳನ್ನು ಹಾದು ಬರುವಲ್ಲಿ ನಾವು ಯಶಸ್ವಿಯಾದೆವು. ಮುಂದೆ ಹಸಿರು ಹುಲ್ಲುಗಾವಲುಗಳಿವೆ ಎಂಬ ಭರವಸೆಯನ್ನು ಇಟ್ಟುಕೊಂಡು ಬೃಹತ್ ಅಂತರಗಳನ್ನು ನಾವು ಕ್ರಮಿಸಿದೆವು. ಆ ಹುಲ್ಲುಗಾವಲುಗಳು ಹತ್ತಿರ ಇವೆ ಎಂಬ ಭ್ರಮೆ ಹುಟ್ಟಿಸಿದರೂ ಅವುಗಳನ್ನು ತಲುಪಲು ಇನ್ನೂ ಸಾಧ್ಯವಾಗಲಿಲ್ಲ.

ನಾವು ಏನನ್ನು ಹಾದು ಬಂದಿದ್ದೇವೆ ಎಂಬುದನ್ನು ನೋಡುವಾಗ, ಇನ್ನು ಏನು ಬರಲಿಕ್ಕಿದೆ ಎನ್ನುವುದನ್ನೂ ಪರಿಗಣಿ ಸಬೇಕಾಗುತ್ತದೆ. ಆದರೆ, ಸದ್ಯಕ್ಕೆ ಅದು ಕಷ್ಟದ ಕೆಲಸವಾಗಿದೆ. ಯಾಕೆಂದರೆ ನಾವೀಗ ಕಣಿವೆಯಲ್ಲಿದ್ದೇವೆ. ಇದು ನಾವು ನಿರೀಕ್ಷಿಸಿದ ಸುಂದರ ಹಸಿರು ಅಥವಾ ಹೂವುಗಳ ಮೈದಾನವಲ್ಲ. ಬದಲಿಗೆ, ಮುಳ್ಳಿನ ಪೊದೆಗಳಿಂದ ಕೂಡಿದ ಎತ್ತರದ ಹಸಿರು ಮರಗಳಿರುವ ಅರಣ್ಯ. ಹಾಗಾಗಿ, ನಮ್ಮ ಭವಿಷ್ಯದ ಹಾದಿ ನಿಗೂಢವಾಗಿದೆ. ಇಲ್ಲಿಂದ ಹೊರಹೋಗುವ ದಾರಿಗಾಗಿ ನಾವು ಕತ್ತಲಲ್ಲಿ ತಡಕಾಡುತ್ತಿದ್ದೇವೆ. ಆದರೆ, ಮುಂದೆ ಯಾವತ್ತೂ ಬೆಳಕನ್ನು ಕಾಣಲಾರೆವೋ ಎನ್ನುವ ಭಯ ಕಾಡುತ್ತಿದೆ.

ಪ್ರತಿ ರಾತ್ರಿ ನಾವು ನಕ್ಷತ್ರಗಳ ಅಡಿಯಲ್ಲಿ ಶಿಬಿರ ಹೂಡಿ ಉತ್ತರಗಳಿಗಾಗಿ ಎದುರು ನೋಡುತ್ತಿದ್ದೇವೆ. ಆದರೆ, ಇದು ಸಾಹಸಿ ಚಾರಣಿಗನೊಬ್ಬನಲ್ಲಿ ಯಾವತ್ತೂ ಇರುವ ಕ್ಷಣಿಕ ಕಾಲದ ಗೊಂದಲ ಅಥವಾ ಅನ್ಯಮನಸ್ಕತೆಯಾಗಿರಬಹುದು. ಮುಂದಿನ ದಾರಿಯನ್ನು ಕಂಡುಕೊಳ್ಳುವ ನಮ್ಮ ಸಾಮರ್ಥ್ಯ ಸಂಪೂರ್ಣ ಕುಸಿದಿದೆ ಎಂಬುದಾಗಿ ಭಾವಿಸಬಾರದು. ಮುಂದಕ್ಕೆ ಯಾವ ತಿರುವುಗಳು ಮತ್ತು ದಿಬ್ಬಗಳನ್ನು ನಿರೀಕ್ಷಿಸಬೇಕು ಎನ್ನುವುದರ ಅರಿವು ನಮಗಿದೆ. ಈಗ ನಾವು ಸ್ವಲ್ಪ ಬಳಲಿದ್ದೇವೆ ಅಷ್ಟೆ. ನಮಗೆ ಈಗ ಈ ಕಾಡಿನಿಂದ ಹೊರ ಹೋಗಲು ಸ್ವಲ್ಪ ಯುವ ಶಕ್ತಿ ಮತ್ತು ಉತ್ಸಾಹ ಬೇಕಾಗಿದೆ. ಮುಂದಿನ ದಿನಗಳಲ್ಲಿ ನಾವು ಪ್ರತಿ ದಿನ ಕಿರು ಯಾನಗಳನ್ನು ಕೈಗೊಳ್ಳುತ್ತೇವೆ. ಹಾಗಾಗಿ, ಈ ಕಗ್ಗತ್ತಲೆಯಿಂದ ಹೊರಬರಲು ವಾರಗಳು, ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು.

73ನೇ ಗಣರಾಜ್ಯೋತ್ಸವ ದಿನದ ಸಂದರ್ಭದಲ್ಲಿ ಭಾರತವು ಎಂದಿನಂತೆ ತನ್ನ ಆರ್ಥಿಕ ಮತ್ತು ರಾಜಕೀಯ ಶಕ್ತಿಯನ್ನು ಪ್ರದರ್ಶಿಸುತ್ತದೆ. ನಮ್ಮ ಏಕತೆ, ವೈವಿಧ್ಯತೆ, ಸಂಸ್ಕೃತಿ ಮತ್ತು ಪರಂಪರೆಯನ್ನು ತೋರಿಸುವ ನಿಟ್ಟಿನಲ್ಲಿ ಇದನ್ನು ಮಾಡಲಾಗುತ್ತದೆ. ಆದರೆ, ಈ 73 ವರ್ಷಗಳ ಅವಧಿಯ ಪ್ರತಿ ವರ್ಷವೂ ನಮ್ಮ ಸಂವಿಧಾನವನ್ನು ಮತ್ತಷ್ಟು ಬಲಪಡಿಸುತ್ತಾ ಬಂದಿದ್ದರೆ ನಾವು ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಉತ್ತಮ ಸಾಧನೆಯನ್ನು ಮಾಡಬಹುದಾಗಿತ್ತು. ನಮ್ಮ ಸಂವಿಧಾನವು ಹಲವು ಶ್ರೇಷ್ಠ ಆತ್ಮಗಳ ಕಠಿಣ ಪರಿಶ್ರಮದ ಫಲವಾಗಿದೆ. ತಾವು ವಸಾಹತುಶಾಹಿಗಳಿಂದ ಅತ್ಯಂತ ಅಮೂಲ್ಯವಾದುದನ್ನು ಮರಳಿ ಗಳಿಸಿದ್ದೇವೆ ಎಂಬುದಾಗಿ ಅವರು ಭಾವಿಸಿದ್ದರು. ಹೌದು ಅವರು ಗಳಿಸಿದ ಆ ಅಮೂಲ್ಯ ಕಲ್ಪನೆಗೆ ಮಾರ್ಗದರ್ಶನ ಮತ್ತು ದೀರ್ಘಾವಧಿಯ ಆರೈಕೆ ಬೇಕಾಗಿತ್ತು. ಆದರೆ, ಅದೇ ವೇಳೆ, ತಕ್ಷಣ ಅವರು ಕಾರ್ಯರೂಪಕ್ಕೆ ಇಳಿಯಬೇಕಾಗಿತ್ತು. ಹಾಗಾಗಿ, ಕೆಲವು ಕಾರ್ಯಗಳು ಪೂರ್ಣಗೊಳ್ಳದೆ ಉಳಿದವು. ಅದಕ್ಕೆ ಆಗಾಗ ನಿಂತು ನಿರ್ವಹಣೆಯ ಕಾರ್ಯವನ್ನು ಮಾಡಬೇಕಾಗಿತ್ತು.ನಮ್ಮ ಭಾರತ ಎನ್ನುವ ಕಲ್ಪನೆಯ ಉದ್ದೇಶ, ಅರ್ಥ ಮತ್ತು ವಿಧಾನಗಳನ್ನು ವಿವರಿಸುವ ದಾಖಲೆಯಾಗಿರುವ ಸಂವಿಧಾನವನ್ನು ಮತ್ತು ಅದರ ಆಧ್ಯಾತ್ಮಿಕ ಬೆಳವಣಿಗೆಯನ್ನು ಮಾತ್ರ ನಾವು ಗಣರಾಜ್ಯೋತ್ಸವ ದಿನದಂದು ಹೆಮ್ಮೆಯಿಂದ ಪ್ರದರ್ಶಿಸಬೇಕಾಗಿದೆ. ಆದರೆ ನಾವು ಮಾಡುತ್ತಿರುವುದೇನು? ನಮ್ಮ ಅಜ್ಞಾನವನ್ನು ಹಾಗೂ ನಾವು ಎದುರಿಸುತ್ತಿರುವ ಹಲವು ಸವಾಲುಗಳ, ಅದರಲ್ಲೂ ಮುಖ್ಯವಾಗಿ ಈ ದೇಶದ ಯುವಜನತೆಗೆ ಸಂಬಂಧಿಸಿದ ಪ್ರಶ್ನೆಯ ನಿರಾಕರಣೆಯನ್ನು ಗಣರಾಜ್ಯೋತ್ಸವ ಸಂದರ್ಭದಲ್ಲಿ ಮೊವಣಿಗೆ ಮಾಡುತ್ತೇವೆ.

ಭಾರತೀಯ ಸ್ವಾತಂತ್ರ ಚಳವಳಿಯಿಂದಲೇ ಆರಂಭಗೊಂಡಿರುವ ನಮ್ಮ ಪ್ರಯಾಣದುದ್ದಕ್ಕೂ ಮುಂಚೂಣಿಯಲ್ಲಿದ್ದವರು ನಮ್ಮ ದೇಶದ ಯುವಜನತೆ ಮತ್ತು ಅವರ ಚೈತನ್ಯ. ಆದರೆ, ಹಲವು ತಲೆಮಾರುಗಳ ಬಳಿಕ ನಾವು ಯುವಜನತೆಯನ್ನು ಸ್ಮರಿಸುತ್ತಿದ್ದೇವೆ ಹಾಗೂ ಅವರಿಗೆ ಹಿರಿತನವನ್ನು ನೀಡುವ ತಪ್ಪನ್ನು ಮಾಡುತ್ತಿದ್ದೇವೆ. ಆದರೆ ಹೀಗೆ ಮಾಡುವುದು ಅವರ ಅಸ್ತಿತ್ವವನ್ನೇ ನಿರಾಕರಿಸಿದಂತೆ ಹಾಗೂ ವ್ಯಕ್ತಿಗಳಾಗಿ ಹಾಗೂ ಇಡೀ ತಲೆಮಾರಾಗಿ ಅವರಿಗೆ ಮಾಡುತ್ತಿರುವ ಹಾನಿಯಾಗಿದೆ. ಯುವಜನ ಅಂದು ಚಳವಳಿಗಳಲ್ಲಿ ಪಾಲ್ಗೊಂಡು ಮನೆಮಾತಾದರು ಹಾಗೂ ಅವರು ಪಾಲ್ಗೊಂಡ ಚಳವಳಿಗಳು ಇತಿಹಾಸವನ್ನು ಮರುಬರೆದವು. ಆದರೆ, ಅದಕ್ಕಿಂತಲೂ ಮೊದಲು ಅವರು ಅಪಹಾಸ್ಯ, ಅವಮಾನ ಮತ್ತು ಚಾರಿತ್ರ ವಧೆಯ ಬಲಿಪಶುಗಳಾಗಿದ್ದರು. ಅವರನ್ನೂ ‘ಭಯೋತ್ಪಾದಕರು’ ಅಥವಾ ‘ದೇಶದ್ರೋಹಿಗಳು’ ಎಂಬುದಾಗಿ ಬಣ್ಣಿಸಲಾಗಿತ್ತು. ಆದರೆ, ಬಳಿಕ ಅವರನ್ನು ನಾವು ಗೌರವಿಸಿದ್ದೇವೆ ಹಾಗೂ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸಿದ್ದೇವೆ. ಅಂದಿನ ಮತ್ತು ಇಂದಿನ ಎಲ್ಲ ಯುವಕರಲ್ಲಿ ಹಾಗೂ ನಮ್ಮಿಳಗಿನ ಯುವ ಮನಸ್ಸುಗಳಲ್ಲಿ ಯುವಕರದೇ ಆದ ವಿಶೇಷ ಗುಣವೊಂದಿದೆ. ಅದೆಂರೆ, ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು, ಅಪಾಯ ಗಳನ್ನು ಎದುರಿಸುವುದು, ಅಧಿಕಾರದಲ್ಲಿರುವವರಿಗೆ ಸತ್ಯವನ್ನು ಮನವರಿಕೆ ಮಾಡಿಕೊಡುವುದು ಹಾಗೂ ಸಾಹಸ ಪ್ರವೃತ್ತಿ.

ಸ್ವಾತಂತ್ರಾ ನಂತರವೂ ಯುವಕರನ್ನು ಅರ್ಥಮಾಡಿಕೊಂಡ ಮತ್ತು ಸ್ವೀಕರಿಸಿದ ಸಮಾಜವಾಗಿ ನಾವು ಒಮ್ಮೆಲೇ ಪಡಿಮೂಡಲಿಲ್ಲ. ಯುವಜನತೆಯು ದೇಶದಲ್ಲಿನ ಆಡಳಿತಗಾರರ ವಿರುದ್ಧ ಯುದ್ಧದಲ್ಲಿ ತೊಡಗಿರುವಂತೆಯೇ ಹೊರಗಿನ ಶತ್ರುಗಳ ವಿರುದ್ಧದ ಹೋರಾಟವನ್ನೂ ಮುಂದುವರಿಸಿತು. ಒಳಗಿನ ಶತ್ರುಗಳಿಗಿಂತ ಹೊರಗಿನ ಶತ್ರುಗಳನ್ನು ನಿಭಾಯಿಸುವುದು ಯಾವಾಗಲೂ ಸುಲಭ. ಹಾಗಾಗಿ, ಭೌತಿಕವಾಗಿ ನಮ್ಮಿಂದ ದೂರವಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಆದರೆ, ಸಮೀಪದಲ್ಲಿರುವ ಸಮಸ್ಯೆಗಳನ್ನು ಎದುರಿಸುವುದು ಸುಲಭವಾಗಿರಲಿಲ್ಲ. ಅವರ ಹೋರಾಟ ಮನೋಭಾವದಿಂದಾಗಿ ನಮ್ಮ ಸಮಾಜವು ಪರಿವರ್ತನೆಗೊಂಡಿತು, ಹಲವು ಸಂಗತಿಗಳು ಪರಿವರ್ತನೆಗೊಂಡವು. ಆದರೆ, ಆಳವಾಗಿ ಬೇರುಬಿಟ್ಟಿದ್ದ ಕೆಲವು ವಿಷಯಗಳು ಹಾಗೆಯೇ ಉಳಿದವು. ಅಧಿಕಾರ ಚಲಾವಣೆ ಮತ್ತು ಪುರುಷಪ್ರಧಾನ ವ್ಯವಸ್ಥೆ ಉಳಿಯಿತು. ಆದರೆ, ದುರದೃಷ್ಟವಶಾತ್ ಇಂದಿಗೂ ನಮ್ಮ ಪರ್ಯಾಯ ಎನ್ನಲಾಗುವ ಹಲವಾರು ಚಳವಳಿಗಳು ವಿಫಲವಾಗುತ್ತಿವೆ. ಯಾಕೆಂದರೆ ನಾವು ಯುವಕರನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ, ಅವರಿಗೆ ಜವಾಬ್ದಾರಿಯನ್ನು ನೀಡುತ್ತಿಲ್ಲ, ಅವರನ್ನು ನಂಬುತ್ತಿಲ್ಲ. ಸಣ್ಣ ಉದ್ದಿಮೆಗಳಾಗಲಿ, ಸಹಕಾರ ಸಂಘ ಗಳಾಗಲಿ, ಎನ್‌ಜಿಒಗಳಾಗಲಿ, ಶಾಲೆಗಳಾಗಲಿ, ರಾಜಕೀಯ ಪಕ್ಷಗಳಾಗಲಿ, ಎಲ್ಲಿಯೂ ಎರಡನೇ ಹಂತದ ನಾಯಕತ್ವಕ್ಕೆ ಅವಕಾಶ ವಿಲ್ಲ. ಹಾಗಾದರೆ, ನಾವು ಪ್ರವಾಹದ ವಿರುದ್ಧ ಸಾಗುವುದು ಹೇಗೆ?

ಈ ನಾಯಕರು ತಾವು ಹೇಳಿದ್ದನ್ನು ಮಾಡುವ ಪ್ರವೃತ್ತಿಯನ್ನು ಹೊಂದಿಲ್ಲದಿರುವಾಗ ಹಾಗೂ ತಮ್ಮಿಳಗೆ ಪ್ರಜಾಪ್ರಭುತ್ವದ ತತ್ವಗಳನ್ನು ಅಳವಡಿಸಿಕೊಳ್ಳದಿರುವಾಗ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಪರವಾಗಿ ನಾವು ಹೇಗೆ ಕೆಲಸ ಮಾಡುವುದು? ‘ಯುವಕರು ನಮ್ಮ ಜೊತೆ ಬರುವುದಿಲ್ಲ’ ಎನ್ನುವ ದೂರು ಇದೇ ಪರ್ಯಾಯ ಕ್ಷೇತ್ರದಿಂದ ಪದೇ ಪದೇ ಬರುತ್ತದೆ ಎಂಬುದನ್ನು ನಾವು ಗಮನಿಸಬೇಕಾಗಿದೆ. ಆದರೆ, ನಾವೇ ಯುವಕರೊಂದಿಗೆ ಸೇರಬೇಕು, ಆಗ ನಮಗೆ ಬಹುಶಃ ಬೆಳಕನ್ನು ನೋಡಲು ಸಾಧ್ಯವಾಗುತ್ತದೆ.

ಈ ದೇಶದಲ್ಲಿ ಕಳೆದ ಹಲವು ದಶಕಗಳಿಂದ ನಾವು ಏನನ್ನು ಅನುಭವಿಸುತ್ತಿದ್ದೇವೋ ಅದನ್ನು ಒಂದು ಸಮಾಜವಾಗಿ ನಾವು ಮಾಡಿದ ಆಯ್ಕೆಯೇ ಫಲಿತಾಂಶ ಎಂಬುದಾಗಿ ಪರಿಗಣಿಸಬಹುದಾಗಿದೆ. ಅಂದರೆ, ಇತಿಹಾಸದ ಹಲವು ಮಜಲುಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಮತ್ತು ಕ್ರಾಂತಿಕಾರಿ ನಿಲುವುಗಳ ಫಲವಾಗಿದೆ. ಆಯಾಯ ಕಾಲಘಟ್ಟಗಳಲ್ಲಿ ಯಾವುದನ್ನು ಸಹಜ ಎಂಬಂತೆ ಸ್ವೀಕರಿಸಲಾಯಿತೋ ಅದರ ಫಲಿತಾಂಶವಾಗಿದೆ. ಹಾಗಾಗಿ, ಈ ಹಾದಿಯಲ್ಲಿ ನಾವು ತೆಗೆದುಕೊಂಡ ಎಲ್ಲ ಒಳ್ಳೆಯ ಮತ್ತು ಕೆಟ್ಟ ಆಯ್ಕೆಗಳತ್ತ ನೋಡುವುದು ಇಂದಿನ ಪರಿಸ್ಥಿತಿಯನ್ನು ನೋಡುವ ಒಂದು ವಿಧಾನವಾಗಿದೆ. ಆದರೆ, ಇದರಿಂದ ನಾವು ಯಾವ ನಿರ್ಧಾರಕ್ಕೆ ಬರಬಹುದೆಂದರೆ, ವಸಾಹತುಶಾಹಿ ಶಕ್ತಿಗಳು ಬರುವ ಮೊದಲೇ, ನಾವು ತೆಗೆದುಕೊಳ್ಳದ ನಿರ್ಧಾರಗಳು ನಮ್ಮ ಈಗಿನ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ.

ಯುವಕರನ್ನು ಆಡಳಿತಕ್ಕೆ ಸೇರಿಸಿಕೊಳ್ಳದಿರುವ ಪ್ರವೃತ್ತಿಯು ಹಿಂದಿನಿಂದಲೇ ಬಂದಿದೆ. ಕಳೆದು ಹೋಗಿರುವ ಏಳು ದಶಕಗಳಲ್ಲಿ, ತಮ್ಮನ್ನು ಹೊರಗಿಟ್ಟಿರುವ ಭಾವನೆಯನ್ನು ಯುವಜನತೆ ಹೊಂದಿದ್ದಾರೆ. ಇಂದು ನಮ್ಮ ರಾಜಕೀಯ ಮತ್ತು ನಮ್ಮ ಆಡಳಿತವು ಸರ್ವಾಧಿಕಾರ ಮತ್ತು ಫ್ಯಾಶಿಸಮ್‌ನತ್ತ ವಾಲಿದ್ದರೆ, ಅದಕ್ಕೆ ಈ ಪ್ರವೃತ್ತಿಗಳು ನಮ್ಮ ಮನೆಗಳಲ್ಲಿ ಕಪಟತನದಿಂದ ನೆಲೆಯೂರಲು ನಾವು ಬಿಟ್ಟಿದ್ದೇ ಕಾರಣ.

ನಮ್ಮಲ್ಲಿ ಹೆಚ್ಚಿನವರು ಹೆಚ್ಚಿನ ಸಂದರ್ಭಗಳಲ್ಲಿ ಯುವಕರ ವಿಷಯದಲ್ಲಿ ಒಂದು ವೈಪರೀತ್ಯದಿಂದ ಇನ್ನೊಂದು ವೈಪರೀತ್ಯಕ್ಕೆ ಜಿಗಿಯುತ್ತಾರೆ. ಅಂದರೆ ಅವರು ಯುವಕರಿಗಾಗಿ ಏನನ್ನೂ ಮಾಡದೆ ಪರಿಹಾರಗಳಿಗೆ ಜಿಗಿಯುತ್ತಾರೆ. ನಮ್ಮ ದೇಶದ ಯುವಜನತೆ, ಈ ವಿಷಯದಲ್ಲಿ ಯಾವುದೇ ಯುವಜನರು ನಮ್ಮ ಪರಿಹಾರಗಳಿಗಾಗಿ ಕಾಯುತ್ತಾ ಕುಳಿತಿಲ್ಲ. ಅವರು ಮೊತ್ತ ಮೊದಲು ಬಯಸುವುದು, ತಮ್ಮ ಮಾತುಗಳನ್ನು ನಾವು ಕೇಳಬೇಕೆಂದು. ಅದಕ್ಕಾಗಿ ಅವರಿಗಾಗಿ ‘ಯುವ ಘಟಕಗಳು’, ‘ವೇದಿಕೆಗಳು’ ಮತ್ತು ಇತರ ಸಾಂಕೇತಿಕ ವೇದಿಕೆಗಳನ್ನು ನಿರ್ಮಿಸುವುದಲ್ಲ. ಹಿರಿಯರ ನೇತೃತ್ವದ ವಿಷಯಗಳಿಗೆ ಎಲ್ಲ ಮಾನವ ಸಂಪನ್ಮೂಲಗಳನ್ನು ಒದಗಿಸಿ, ಯುವಜನತೆಯನ್ನು ಪ್ರಹಸನ ರೂಪದಲ್ಲಿ ಬಳಸಿಕೊಳ್ಳುವುದಲ್ಲ. ಮೊದಲೇ ನಿರ್ಧಾರಗಳನ್ನು ತೆಗೆದುಕೊಂಡು ಅವರ ಅಭಿಪ್ರಾಯಗಳನ್ನು ಕೇಳುವ ಪ್ರಹಸನ ಮಾಡುವುದಲ್ಲ. ಯುವಕರ ಮಾತುಗಳನ್ನು ಕೇಳುವುದಕ್ಕಾಗಿ ಹಿರಿಯರು ಜೀವಮಾನವನ್ನೇ ಮುಡುಪಾಗಿಡಬೇಕು; ಮನೆಯಲ್ಲಿಯೂ, ಸಮಾಜದಲ್ಲಿಯೂ.

ಕೃಪೆ: countercurrents.org

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)