varthabharthi


ವಿಶೇಷ-ವರದಿಗಳು

ಸಂದರ್ಶನ : ರಖೀಬ್ ಹಾಮಿದ್

ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಭದ್ರತಾ ಮಂಡಳಿ ಕ್ರಮ ಕೈಗೊಳ್ಳಲಿ - ಜುವಾನ್ ಇ. ಮೆಂಡೆಝ್

ವಾರ್ತಾ ಭಾರತಿ : 24 Jan, 2022

ಜುವಾನ್ ಇ. ಮೆಂಡೆಝ್

ಉತ್ತರಾಖಂಡದ ಪ್ರಮುಖ ಹಿಂದೂ ಯಾತ್ರಾಸ್ಥಳವಾದ ಹರಿದ್ವಾರದಲ್ಲಿ ಕಳೆದ ತಿಂಗಳು ನಡೆಸಿದ ಧರ್ಮಸಂಸದ್ ಸಮಾವೇಶದಲ್ಲಿ ಭಾಷಣ ಮಾಡಿದ ಹಲವಾರು ಮಂದಿ ಹಿಂದೂ ಧಾರ್ಮಿಕ ನಾಯಕರು ಹಾಗೂ ರಾಜಕಾರಣಿಗಳು ಮುಸ್ಲಿಂ ಸಮುದಾಯದ ನರಮೇಧ ನಡೆಸಲು ಶಸ್ತ್ರಸಜ್ಜಿತರಾಗುವಂತೆ ಹಿಂದೂಗಳಿಗೆ ಕರೆ ನೀಡಿದ್ದರು.

‘‘ಒಂದು ವೇಳೆ ನಮ್ಮಲ್ಲಿ ಕೇವಲ 100 ಮಂದಿ ಸೈನಿಕರಾದಲ್ಲಿ, ಅವರಿಗೆ ಇಪ್ಪತ್ತು ಲಕ್ಷ ಮಂದಿಯನ್ನು ಕೊಲ್ಲಲು ಸಾಧ್ಯವಿದೆ. ನಾವು ವಿಜಯಶಾಲಿಗಳಾಗಲಿದ್ದೇವೆ’’ ಎಂದು ಬಲಪಂಥೀಯ ಹಿಂದೂ ಮಹಾಸಭಾದ ನಾಯಕಿ ಸಾದ್ವಿ ಅನ್ನಪೂರ್ಣ ಮಾ ಘೋಷಿಸಿದ್ದಳು.

 ಈ ಸಮಾವೇಶದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಹತ್ಯಾಕಾಂಡಕ್ಕೆ ಬಹಿರಂಗವಾಗಿ ಕರೆ ನೀಡಿದವರನ್ನು ಬಂಧಿಸುವಂತೆ ಕರೆ ನೀಡಲಾಯಿತು. ಒಂದು ತಿಂಗಳಿಂದೀಚೆಗೆ ಇಬ್ಬರು ಭಾಷಣಕಾರರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನು ನಡೆಸುತ್ತಿರುವುದಾಗಿ ಪೊಲೀಸರು ಹೇಳುತ್ತಾರಾದರೂ, ಉಳಿದವರು ರಾಜಾರೋಷವಾಗಿ ಅಡ್ಡಾಡುತ್ತಿದ್ದಾರೆ.

ಈ ಮಧ್ಯೆ ಅಮೆರಿಕದಲ್ಲಿ ನಡೆದ ಸಮಾವೇಶವೊಂದರಲ್ಲಿ ‘ಜೆನೊಸೈಡ್ ವಾಚ್’ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಗ್ರೆಗರಿ ಸ್ಟಾಂಟನ್ ಅವರು ಭಾರತದಲ್ಲಿ ಜನಾಂಗೀಯ ನರಮೇಧ ನಡೆಯುವ ಸಾಧ್ಯತೆಯಿರುವುದಾಗಿ ಎಚ್ಚರಿಕೆ ನೀಡಿದ್ದರು.

ಜನಾಂಗೀಯ ನರಮೇಧಕ್ಕೆ ಕಾರಣವಾಗುವ ಹತ್ತು ಹಂತಗಳ ಮಾದರಿಗಳನ್ನು ಸ್ಟಾಂಟನ್ ರೂಪಿಸಿದ್ದು ಈಗ ಭಾರತವು 8ನೇ ಹಂತದಲ್ಲಿರುವುದಾಗಿ ತಿಳಿಸಿದ್ದರು. ಹತ್ಯಾಕಾಂಡ ಹಾಗೂ ನಿರಾಕರಣೆ ಈಗ ಬಾಕಿಯುಳಿದಿರುವ ಎರಡು ಹಂತಗಳಾಗಿವೆ ಎಂದವರು ಹೇಳಿದ್ದರು.

ಜನಾಂಗೀಯ ನರಮೇಧ ತಡೆ ಕುರಿತ ವಿಶ್ವಸಂಸ್ಥೆಯ ಪ್ರಪ್ರಥಮ ರಾಷ್ಟ್ರೀಯ ವಿಶೇಷ ಸಲಹೆಗಾರರಾಗಿ (2004-2007) ಜುವಾನ್ ಇ. ಮೆಂಡೆಝ್ ಅವರನ್ನು ಆಗಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ನೇಮಿಸಿದ್ದರು. ಮಾನವಹಕ್ಕುಗಳ ಕುರಿತ ಅಂತರ್ ಅಮೆರಿಕನ್ ಆಯೋಗದ ಆಯುಕ್ತರಾಗಿ ಹಾಗೂ ಚಿತ್ರಹಿಂಸೆ ಕುರಿತ ವಿಶ್ವಸಂಸ್ತೆಯ ವಿಶೇಷ ಸಂಧಾನಕಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಪ್ರಸಕ್ತ ಅವರು ವಾಶಿಂಗ್ಟನ್‌ನಲ್ಲಿರುವ ಅಮೆರಿಕನ್ ವಿಶ್ವವಿದ್ಯಾನಿಲಯದಲ್ಲಿ ಮಾನವಹಕ್ಕುಗಳ ಕಾನೂನಿನ ಪ್ರೊಫೆಸರ್ ಆಗಿದ್ದಾರೆ.

ಸುಮಾರು 20 ಕೋಟಿ ಮುಸ್ಲಿಮರಿರುವ ದೇಶವಾದ ಭಾರತದಲ್ಲಿ ಪರಿಸ್ಥಿತಿ ಅತ್ಯಂತ ಅಪಾಯಕಾರಿ ಹಾಗೂ ತೀವ್ರ ಕಳವಳಕಾರಿಯಾಗಿದೆ ಎಂದು ಮೆಂಡೆಝ್ ಬಣ್ಣಿಸಿದ್ದರು. ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯದ ನರಮೇಧ ನಡೆಯಬಹುದಾದ ಸಾಧ್ಯತೆಯ ಕುರಿತು ಹಾಗೂ ವಿಶ್ವಸಂಸ್ಥೆ ಸೇರಿದಂತೆ ಅಂತರ್‌ರಾಷ್ಟ್ರೀಯ ಸಮುದಾಯಗಳಿಗೆ ಅವುಗಳನ್ನು ಹೇಗೆ ತಡೆಗಟ್ಟಲು ಸಾಧ್ಯವೆಂಬ ಬಗ್ಗೆ ಅವರು ‘ಅಲ್‌ಜಝೀರಾ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

► ಅಲ್ ಜಝೀರಾ: ಹರಿದ್ವಾರದಲ್ಲಿ ಹಿಂದೂ ತೀವ್ರವಾದಿ ನಾಯಕರು ಹಿಂಸಾಚಾರಕ್ಕೆ ಕರೆ ನೀಡಿರುವುದನ್ನು ನೀವು ಯಾವ ದೃಷ್ಟಿಯಲ್ಲಿ ನೋಡುವಿರಿ?

ಜುವಾನ್ ಇ. ಮೆಂಡೆಝ್: ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ದಶಕಗಳಿಂದ ಹೊಗೆಯಾಡುತ್ತಿರುವ ವೈರತ್ವದ ವಿದ್ಯಮಾನಗಳನ್ನು ನಾನು ತೀವ್ರ ಕಳವಳದೊಂದಿಗೆ ನೋಡುತ್ತಿದ್ದೇನೆ. ಕ್ರಿಯಾತ್ಮಕವಾದ ಹಿಂಸಾಚಾರಕ್ಕಾಗಿ ಕರೆ ನೀಡುವುದು ಇನ್ನೂ ಹೆಚ್ಚು ಅಪಾಯಕಾರಿಯಾಗಿದೆ. ಈ ಗ್ರಹಿಕೆಯೊಂದಿಗೆ ಕೆಲವರು ಈ ಕರೆಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದಾರೆ, ಈ ಕರೆಗಳು ಇತರರನ್ನು ಕೂಡ ಪ್ರಚೋದಿಸಿದೆ.

ಈ ಪ್ರಕರಣವು ನನಗೆ ಅತ್ಯಂತ ಕೆಟ್ಟದ್ದಾಗಿ ಕಾಣಿಸುತ್ತದೆ. ಒಂದು ಜನಾಂಗೀಯ ಪಂಗಡವನ್ನು ಪ್ರತಿನಿಧಿಸುವವರೆಂದು ಹೇಳಿಕೊಳ್ಳುವಂತಹ ವ್ಯಕ್ತಿಗಳು ಈ ಭಾಷಣಗಳನ್ನು ಮಾಡಿದ್ದಾರೆ. ಒಟ್ಟಾರೆಯಾಗಿ ಯಾವುದೇ ಕಾನೂನಿನ ಪರಿಕಲ್ಪನೆಯಲ್ಲಿ ಲಕ್ಷಾಂತರ ಮಂದಿಯ ಹತ್ಯೆಗೆ ಕರೆ ನೀಡುವುದು ಅಪರಾಧವಾಗಿದೆ. ಸರಕಾರದಿಂದ ಇದಕ್ಕೆ ಯಾವುದೇ ಸೂಕ್ತವಾದ ಪ್ರತಿಕ್ರಿಯೆಯಿಲ್ಲ. ಅಂತರ್‌ರಾಷ್ಟ್ರೀಯ ಸಮುದಾಯವು ಇಂತಹ ಭಾಷಣದ ಸಂಭಾವ್ಯ ಪರಿಣಾಮಗಳನ್ನು ತಪ್ಪಿಸಲು ಕಾರ್ಯಪ್ರವೃತ್ತವಾಗುವ ಅಗತ್ಯವಿದೆ.

ಅಲ್ ಜಝೀರಾ:   ಅಮೆರಿಕ ಮೂಲದ ‘ಜೆನೊಸೈಡ್ ವಾಚ್ (ಜನಾಂಗೀಯ ನರಮೇಧದ ಕಣ್ಗಾವಲು) ಸಂಸ್ಥೆ ಹಾಗೂ ಅದರ ಸಂಸ್ಥಾಪಕ ಗ್ರೆಗರಿ ಸ್ಟಾಂಟನ್ ಅವರು ಭಾರತದಲ್ಲಿ ಜನಾಂಗೀಯ ನರಮೇಧ ಸಾಧ್ಯತೆಯ ಬಗ್ಗೆ ಕಟ್ಟೆಚ್ಚರ ನೀಡಿದ್ದಾರೆ. ಭಾರತವು ಜನಾಂಗೀಯ ನರಮೇಧದತ್ತ ಚಲಿಸುತ್ತಿದೆಯೇ ಎಂಬ ಪದವನ್ನು ಬಳಸಬಹುದೇ?.

ಮೆಂಡೆಝ್: ‘ಜೆನೊಸೈಡ್ ವಾಚ್’ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದೆ ಹಾಗೂ ಅದರ ಅಭಿಪ್ರಾಯಗಳನ್ನು ಅತ್ಯಂತ ಜಾಗರೂಕತೆಯಿಂದ ಪರಿಗಣಿಸಬೇಕಾಗುತ್ತದೆ. ಸ್ಟಾಂಟನ್ ಅವರು ವಿಶ್ಲೇಷಿಸಿರುವ ಜನಾಂಗೀಯ ನರಮೇಧಕ್ಕೆ ಕಾರಣವಾಗುವ 10 ಹಂತಗಳ ಮಾದರಿಯು, ಜನಾಂಗೀಯ ನರಮೇಧದ ಅಪರಾಧಗಳನ್ನು ತಡೆಗಟ್ಟುವ ಅತ್ಯುತ್ತಮ ವಿಧಾನವಾಗಿದೆ. ಈ ಮಾದರಿಯ ಉಪಯುಕ್ತತೆಯೇನೆಂದರೆ ಒಂದು ಜನವಿಭಾಗವು ಅಂದರೆ ಭಾರತದ ವಿಷಯದಲ್ಲಿ ಮುಸ್ಲಿಂ ಜನಸಂಖ್ಯೆಯು ಅಪಾಯದಲ್ಲಿದೆಯೆಂಬ ವಾಸ್ತವ ಮಾತ್ರವಲ್ಲದೆ ಈ ಪರಿಸ್ಥಿತಿಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಕೂಡಾ ಅದು ಪ್ರತಿಪಾದಿಸುತ್ತದೆ.

ಈ ಸಂಘಟನೆಯು ಕೇವಲ ಮಾದರಿಯೊಂದನ್ನು ವಿವೇಚನಾರಹಿತರಾಗಿ ಬಳಸಿಕೊಂಡು ಕೆಲಸ ಮಾಡುವುದಿಲ್ಲ. ಬದಲಿಗೆ ಅದು ತಳಮಟ್ಟದ ವಾಸ್ತವತೆಗಳನ್ನು ವಿಶ್ಲೇಷಿಸುತ್ತದೆ. ಈ ರೀತಿಯ ಜನಾಂಗೀಯ ನರಮೇಧದ ಕರೆಗಳು ಹಾಗೂ ಅಭಿವ್ಯಕ್ತಿಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಳವಳಕಾರಿಯೆಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ.

ಅಲ್‌ಜಝೀರಾ: ಜನಾಂಗೀಯ ನರಮೇಧವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಹಾಗೂ ಅದರ ನಿಷೇಧವನ್ನು ಅನುಷ್ಠಾನಗೊಳಿಸುವ ಜನಾಂಗೀಯ ನರಮೇಧದ ಅಪರಾಧದ ತಡೆ ಹಾಗೂ ಶಿಕ್ಷೆ ಕುರಿತ ಒಡಂಬಡಿಕೆಗೆ ಭಾರತವು 1959ರಲ್ಲಿ ಸಹಿಹಾಕಿತ್ತು. ಜನಾಂಗೀಯ ಹಿಂಸಾಚಾರಕ್ಕೆ ಕರೆ ನೀಡಿರುವ ಹಲವಾರು ಹಿಂದುತ್ವವಾದಿ ಉಗ್ರಗಾಮಿಗಳು ಈಗಲೂ ರಾಜಾರೋಷವಾಗಿ ಅಡ್ಡಾಡುತ್ತಿದ್ದಾರೆ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ವಿಷಯದಲ್ಲಿ ವೌನತಾಳಿರುವುದು ಎದ್ದುಕಾಣುತ್ತದೆ. ಜನಾಂಗೀಯ ನರಮೇಧದ ತಡೆ ಕುರಿತ ಒಡಂಬಡಿಕೆಯ ಬಾಧ್ಯತೆಗಳನ್ನು ಭಾರತವು ಉಲ್ಲಂಘಿಸುತ್ತಿದೆಯೇ?.

ಮೆಂಡೆಝ್:  1948ರ ಜನಾಂಗೀಯ ನರಮೇಧದ ಒಡಂಬಡಿಕೆಯು ನರಮೇಧ ನಡೆಯುವುದನ್ನು ತಡೆಗಟ್ಟಲು ತಮಗಿರುವ ಎಲ್ಲಾ ಅಧಿಕಾರವನ್ನು ಬಳಸಿಕೊಳ್ಳುವ ಬಾಧ್ಯತೆಯನ್ನು ಎಲ್ಲಾ ರಾಜ್ಯಗಳು ಹಾಗೂ ರಾಷ್ಟ್ರಗಳ ಮೇಲೆ ಹೇರುತ್ತದೆ. ಈ ಒಡಂಬಡಿಕೆಯು ನಿರ್ದಿಷ್ಟ ಪ್ರತಿಬಂಧಾತ್ಮಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸ್ಪಷ್ಟಪಡಿಸಿಲ್ಲವಾದರೂ, ನರಮೇಧವನ್ನು ತಡೆಗಟ್ಟುವ ಕಾರ್ಯದಲ್ಲಿ ಸರಕಾರವು ಅದರಲ್ಲೂ ವಿಶೇಷವಾಗಿ ಒಡಂಬಡಿಕೆಗೆ ಸಹಿಹಾಕಿರುವ ರಾಷ್ಟ್ರಗಳು ಮುಂಚೂಣಿಯಲ್ಲಿ ನಿಲ್ಲಬೇಕಾಗುತ್ತದೆ.

ಹಿಂಸಾಚಾರಕ್ಕೆ ಕರೆ ನೀಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದು ಪ್ರಧಾನಿ ನರೇಂದ್ರ ಮೋದಿ ಸರಕಾರದ ಕರ್ತವ್ಯವಾಗಿದೆ. ಹಾಗೆ ಮಾಡದೆ ಇದ್ದಲ್ಲಿ ಅದು ಜನಾಂಗೀಯ ನರಮೇಧ ವಿರುದ್ಧದ ಒಡಂಬಡಿಕೆಯ ಉಲ್ಲಂಘನೆಯಾಗುತ್ತದೆ.

ಅಲ್‌ಜಝೀರಾ:  ಜನಾಂಗೀಯ ನರಮೇಧದ ಒಡಂಬಡಿಕೆಯ ಮೂರನೇ ಕಲಮಿನಲ್ಲಿ ಜನಾಂಗೀಯ ನರಮೇಧಕ್ಕೆ ನೇರವಾಗಿ ಹಾಗೂ ಸಾರ್ವಜನಿಕವಾಗಿ ಪ್ರಚೋದನೆ ನೀಡುವುದನ್ನು ಶಿಕ್ಷಾರ್ಹಗೊಳಿಸಿದೆ. ಸಾಂವಿಧಾನಿಕವಾಗಿ ಜವಾಬ್ದಾರಿಯುತ ಆಡಳಿತಗಾರರು, ಸಾರ್ವಜನಿಕ ಅಧಿಕಾರಿಗಳು ಅಥವಾ ಖಾಸಗಿ ವ್ಯಕ್ತಿಗಳನ್ನು ಅದು ಒಳಗೊಂಡಿದೆ. ಮುಸ್ಲಿಮರ ವಿರುದ್ಧ ನರಮೇಧಕ್ಕೆ ಕರೆ ನೀಡುವವರನ್ನು ದಂಡಿಸುವ ವಿಷಯದಲ್ಲಿ ಅಂತರ್‌ರಾಷ್ಟ್ರೀಯ ಖಾಯಂ ಕ್ರಿಮಿನಲ್ ನ್ಯಾಯಾಲಯ (ಐಸಿಸಿ)ವು ಭಾರತದ ಮೇಲೆ ಯಾವುದೇ ಕಾರ್ಯವ್ಯಾಪ್ತಿಯನ್ನು ಹೊಂದಿದೆಯೇ?.

ಮೆಂಡೆಝ್: ಇಲ್ಲ, ದುರದೃಷ್ಟವಶಾತ್ ಭಾರತವು ರೋಮ್ ಒಡಂಬಡಿಕೆಗೆ ಸಹಿಹಾಕಿಲ್ಲ. ಹೀಗಾಗಿ ಭಾರತೀಯ ಪ್ರಾಂತದಲ್ಲಿರುವ ಹಾಗೂ ವಿದೇಶದಲ್ಲಿರುವ ಭಾರತೀಯರು ಐಸಿಸಿಯ ಕಾರ್ಯವ್ಯಾಪ್ತಿಯಲ್ಲಿರುವ ದೇಶಗಳಲ್ಲಿ ಅಪರಾಧಗಳನ್ನು ಎಸಗಿದಲ್ಲಿ ಅಥವಾ ಒಂದು ವೇಳೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪ್ರಕರಣವನ್ನು ಐಸಿಸಿಯ ಪ್ರಸ್ತಾವನೆಗೆ ಒಪ್ಪಿಸಿದಲ್ಲಿ ಮಾತ್ರವೇ ಹಾಗೆ ನಡೆಯಲು ಸಾಧ್ಯವಿದೆ.

ಅಲ್‌ಜಝೀರಾ: ಈ ಜಗತ್ತು ಅದರಲ್ಲೂ ವಿಶೇಷವಾಗಿ ಅಮೆರಿಕ, ಬ್ರಿಟನ್ ಹಾಗೂ ಇತರ ಐರೋಪ್ಯ ದೇಶಗಳು ಭಾರತದಲ್ಲಿರುವ ಅಲ್ಪಸಂಖ್ಯಾತರಿಗೆ ಹಿಂದೂ ರಾಷ್ಟ್ರೀಯವಾದಿಗಳ ಬೆದರಿಕೆಯ ಬಗ್ಗೆ ಕನಿಷ್ಠ ಗಮನವನ್ನಾದರೂ ನೀಡಿವೆಯೇ?

ಮೆಂಡೆಝ್: ಈಗಿನ ಪರಿಸ್ಥಿತಿ ಅತ್ಯಂತ ಅಪಾಯಕಾರಿಯೆಂದು ನಾನು ಭಾವಿಸುತ್ತೇನೆ. ಅಲ್ಲದೆ ಮೋದಿ ಸರಕಾರದ ಸಾರ್ವಜನಿಕ ನೀತಿಗಳು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದಿಂದ ಕೂಡಿದ್ದಾಗಿದೆ. ಈ ಉಲ್ಲಂಘನೆಗಳು ತಾರತಮ್ಯದಿಂದ ಹಿಡಿದು ದ್ವೇಷಭಾಷಣದವರೆಗೆ ಮತ್ತು ಬಳಿಕ ಹಿಂಸಾಚಾರದವರೆಗೆ ನಿರಂತರವಾಗಿ ಸಾಗುತ್ತವೆ. ತರುವಾಯ ಜನಾಂಗೀಯ ನರಮೇಧಕ್ಕೆ ಎಡೆ ಮಾಡಿಕೊಡುತ್ತದೆ.

ಈ ರೀತಿಯ ಹಾನಿಯಿಂದ ಅಂತರ್‌ರಾಷ್ಟ್ರೀಯ ಸಮುದಾಯವನ್ನು ರಕ್ಷಿಸುವ ನೈತಿಕ ಹೊಣೆಗಾರಿಕೆಯನ್ನು ಭಾರತ ಹೊದಿದೆ. 2005ರ ವಿಶ್ವಸಂಸ್ಥೆಯ ಮಹಾಧಿವೇಶನವು ಜನತೆಯನ್ನು ರಕ್ಷಿಸುವುದಕ್ಕಾಗಿ ಈ ಒಡಂಬಡಿಕೆಯನ್ನು ಅಂಗೀಕರಿಸಿತು. ಇದು ಯಾರನ್ನೂ ಈ ಒಡಂಬಡಿಕೆಗೆ ಬದ್ಧರಾಗುವಂತೆ ನಿರ್ಬಂಧಿಸುವುದಿಲ್ಲ. ಆದರೆ ಅಂತರ್‌ರಾಷ್ಟ್ರೀಯ ಸಮುದಾಯದ ಹೊಣೆಗಾರಿಕೆಯನ್ನು ಹಾಗೂ ಅಂತರ್‌ರಾಷ್ಟ್ರೀಯ ಸಮುದಾಯದ ಪ್ರತಿಯೊಬ್ಬ ಸದಸ್ಯನೂ ಅಪಾಯದಲ್ಲಿರುವ ಜನಸಂಖ್ಯೆಯನ್ನು ರಕ್ಷಿಸಲು ಏನಾದರೂ ಕ್ರಮವನ್ನು ಕೈಗೊಳ್ಳಬೇಕಾದ ಜವಾಬ್ದಾರಿಯನ್ನು ಪ್ರದರ್ಶಿಸುತ್ತದೆ.

ಅಲ್ ಜಝೀರಾ: ನರಮೇಧವನ್ನು ತಡೆಗಟ್ಟುವ ವಿಧಾನಗಳಲ್ಲಿ ವಿಶ್ವಸಂಸ್ಥೆ ವಿಫಲಗೊಂಡ ಹಿನ್ನೆಲೆಯಲ್ಲಿ ಇನ್ನಷ್ಟು ಕಠಿಣವಾದ ಅಂತರ್‌ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳು, ಕಾನೂನುಗಳು ಹಾಗೂ ಕ್ರಿಯಾತ್ಮಕ ಹಸ್ತಕ್ಷೇಪಕ್ಕೆ ಉತ್ತೇಜನ ನೀಡುವ ಅಗತ್ಯವಿದೆಯೇ?.

ಮೆಂಡೆಝ್: ಹೌದು, ನರಮೇಧ ತಡೆ ಸಂಸ್ಥೆಯನ್ನು ಸೃಷ್ಟಿಸಿದ ಬಳಿಕ ವಿಶ್ವಸಂಸ್ಥೆಯು 2004ರಿಂದೀಚೆಗೆ ಕೈಗೊಂಡಿರುವುದಕ್ಕಿಂತ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಹೀಗಾಗಿ, ಇದನ್ನು ಸ್ವಯಂಟೀಕೆಯ ವಿಷಯವಾಗಿ ಹಾಗೂ ಸ ಂಸ್ಥೆಯ ಟೀಕೆಯ ವಿಚಾರವೆಂಬುದಾಗಿ ಪರಿಗಣಿಸುತ್ತೇನೆ. ಸದಸ್ಯ ರಾಷ್ಟ್ರಗಳು ಹಾಗೂ ಹೆಚ್ಚು ಬಲಶಾಲಿ ರಾಷ್ಟ್ರಗಳು ಅವಕಾಶ ನೀಡುವುದರಿಂದ ವಿಶ್ವಸಂಸ್ಥೆಗೆ ಮಾತ್ರವೇ ಅದನ್ನು ಮಾಡಲು ಸಾಧ್ಯವಿದೆ. ಅದರೊಂದಿಗೆ ವಿಶ್ವಸಂಸ್ಥೆಯು ಕೈಗೊಂಡಿರುವ ಸಕಾರಾತ್ಮಕ ಕ್ರಮಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಹಾಗೂ ಅವುಗಳ ಸೀಮಿತ ಸ್ವರೂಪವನ್ನು ಟೀಕಿಸಬೇಕು ಮತ್ತು ಇನ್ನೂ ಹೆಚ್ಚಿನ ಕ್ರಮವನ್ನು ಕೈಗೊಳ್ಳುವಂತೆ ಅವುಗಳ ಮೇಲೆ ಒತ್ತಡ ಹೇರಬೇಕು.

ಅಲ್‌ಜಝೀರಾ: ಮ್ಯಾನ್ಮಾರ್ ಹಾಗೂ ಇಥಿಯೋಪಿಯಾದಲ್ಲಿ ನಾವು ಕಂಡಿರುವಂತೆ ಜನಾಂಗೀಯ ನರಮೇಧ ನಡೆಸಲು ಸಿದ್ಧರಾಗುವಂತೆ ಜನರನ್ನು ಪ್ರೇರೇಪಿಸಲು ಪದೇ ಪದೇ ಬಳಕೆಯಾಗುತ್ತಿರುವ ಸಾಮಾಜಿಕ ಜಾಲತಾಣ ಸಂಸ್ಥೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಕಾನೂನುಗಳನ್ನು ರೂಪಿಸಬೇಕೆಂದು ನೀವು ಭಾವಿಸುವಿರಾ?.

ಮೆಂಡೆಝ್: ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ಕಾನೂನುಗಳ ಭಾಗವಾಗಿರುವ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕುಗಳಿಗೆ ಸಾಮಾಜಿಕ ಜಾಲತಾಣ ಕಂಪೆನಿಗಳು ಒಳಪಡುತ್ತವೆ. ಆದರೆ ಇಂತಹ ಹಿಂಸಾಚಾರದ ಕೃತ್ಯಗಳನ್ನು ತಡೆಯಲು ಜವಾಬ್ದಾರಿಯುತವಾಗಿ ಕಾರ್ಯಾಚರಿಸುವ ಬಾಧ್ಯತೆಯನ್ನು ಕೂಡಾ ಅವು ಹೊಂದಿವೆ. ಸಾಮಾಜಿಕ ಜಾಲತಾಣ ಕಂಪೆನಿಗಳನ್ನು ನಿಯಂತ್ರಿಸಲು ವಿಶ್ವಸಂಸ್ಥೆಯು ಅತ್ಯುತ್ತಮ ಸ್ಥಳವೇ ಎಂಬ ಪ್ರಶ್ನೆಗೆ, ಕನಿಷ್ಠ ಪಕ್ಷ ಅದು ಈ ಬಗ್ಗೆ ನಾಯಕತ್ವವನ್ನು ವಹಿಸಿಕೊಳ್ಳಬೇಕೆಂದು ನಾನು ಭಾವಿಸುತ್ತೇನೆ.

ಅಲ್‌ಜಝೀರಾ:  ಇನ್ನೊಂದು ಜನಾಂಗೀಯ ನರಮೇಧವನ್ನು ತಪ್ಪಿಸಲು ಅಂತರ್‌ರಾಷ್ಟ್ರೀಯ ಸಮುದಾಯದ ಅದರಲ್ಲೂ ನಿರ್ದಿಷ್ಟವಾಗಿ ವಿಶ್ವಸಂಸ್ಥೆಯ ಹೊಣೆಗಾರಿಕೆ ಏನೆಂಬುದನ್ನು ನೀವು ಭಾವಿಸುವಿರಿ?

ಮೆಂಡೆಝ್: ವಾಸ್ತವ ಸನ್ನಿವೇಶ ಎಷ್ಟೊಂದು ಗಂಭೀರವಾಗಿದೆಯೆಂದರೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಂತಹ ಅಂತರ್‌ರಾಷ್ಟ್ರೀಯ ವೇದಿಕೆಗಳಿಂದಲೂ ಈ ಬಗ್ಗೆ ಕಳವಳ ವ್ಯಕ್ತವಾಗಿದೆ. ಮೋದಿ ಸರಕಾರದ ಪ್ರತಿಕ್ರಿಯೆ ಸಮರ್ಪಕವಾಗಿರದೆ ಇದ್ದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಒಂದು ಹೆಜ್ಜೆ ಮುಂದಿಟ್ಟು ಭಾರತೀಯ ಅಲ್ಪಸಂಖ್ಯಾತ ರನ್ನು ರಕ್ಷಿಸಬೇಕು ಹಾಗೂ ನಿರ್ಣಯದ ಅಧ್ಯಾಯ 7ರಲ್ಲಿ ಸೂಚಿಸಲಾದಂತಹ ದಾರಿಯಲ್ಲಿ ಸಾಗ ಬೇಕು. ಭಾರತದಲ್ಲಿ ಅಪಾಯದಲ್ಲಿರುವ ಅಲ್ಪಸಂಖ್ಯಾತರನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆಗಳನ್ನು ನೀಡಬೇಕೇ ಅಥವಾ ಬೇಡವೇ ಎಂಬುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪರಿಶೀಲಿಸುವುದು ಅತ್ಯಂತ ಮುಖ್ಯವಾಗಿದೆ.

ಯತಿ ನರಸಿಂಗಾನಂದ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)