varthabharthi


ಬೆಂಗಳೂರು

'ಭ್ರೂಣ ಪತ್ತೆ ಮಾಡುವವರ ವಿರುದ್ಧ ಕಠಿಣ ಕ್ರಮ'

ಕೋವಿಡ್ ಮೊದಲ ಡೋಸ್ ನಲ್ಲಿ 100% ಪ್ರಗತಿ: ಸಚಿವ ಡಾ.ಸುಧಾಕರ್

ವಾರ್ತಾ ಭಾರತಿ : 24 Jan, 2022

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ನಲ್ಲಿ 100% ಹಾಗೂ ಎರಡನೇ ಡೋಸ್ ನಲ್ಲಿ 85.3% ಪ್ರಗತಿಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 15-17 ವರ್ಷದ ಮಕ್ಕಳಲ್ಲಿ ಶೇ.67.5% ಮೊದಲ ಡೋಸ್ ಆಗಿದೆ. 4,85,818 ಬೂಸ್ಟರ್ ಡೋಸ್ ನೀಡಲಾಗಿದೆ. ಒಟ್ಟು 9,33,92,626 ಡೋಸ್ ಗಳನ್ನು ಈವರೆಗೆ ನೀಡಲಾಗಿದೆ. ಲಸಿಕಾಕರಣದಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ಉತ್ತಮ ಪ್ರಗತಿ ಇದೆ ಎಂದು ತಿಳಿಸಿದರು.

ಕೆಲ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಏರುತ್ತಿದೆ. ಮತ್ತೆ ಎರಡು ಮೂರು ವಾರಗಳಲ್ಲಿ ಕಡಿಮೆಯಾಗಲಿದೆ. ಆಸ್ಪತ್ರೆ ದಾಖಲಾತಿಗೆ ಹೆಚ್ಚು ಗಮನ ನೀಡಲಾಗಿದೆ. ಹೆಚ್ಚು ಆಸ್ಪತ್ರೆ ದಾಖಲಾತಿ ಕಂಡುಬರುವಲ್ಲಿ ಕ್ರಮ ವಹಿಸಲಾಗುತ್ತದೆ. ಆದರೆ ಅಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ. ಕಳೆದ ಮೂರು ದಿನದಲ್ಲಿ ರೋಗ ಲಕ್ಷಣ ಇಲ್ಲದವರಿಗೆ ಪರೀಕ್ಷೆ ಮಾಡುವ ಅವಶ್ಯಕತೆಯೂ ಇಲ್ಲ ಎಂದು ಐಸಿಎಂಆರ್ ಹೇಳಿದೆ. ಅದರನ್ವಯ ಕ್ರಮ ವಹಿಸಲಾಗುತ್ತಿದೆ ಎಂದರು.

ಜನವರಿಯಲ್ಲಿ 32 ಲಕ್ಷ ಜನರಿಗೆ ಕೊರೋನ ಪರೀಕ್ಷೆ ಮಾಡಲಾಗಿದೆ. ಯಾವ ರಾಜ್ಯವೂ ಇಷ್ಟು ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ಮಾಡಿಲ್ಲ. ಒಟ್ಟು 6 ಕೋಟಿ ಪರೀಕ್ಷೆಗಳನ್ನು ಮಾಡಿದ್ದು, ಇದು ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.

ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಸಮಾನತೆ ನೀಡುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯವಾಗಿದೆ. ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಹಾಗೂ ಲಿಂಗ ಸಮಾನತೆ ತರಲು ಪ್ರಯತ್ನಿಸಬೇಕಿದೆ. ಕೆಲ ವರ್ಷಗಳಿಂದ ಲಿಂಗಾನುಪಾತವೂ ಹೆಚ್ಚಾಗಿದೆ. 2001 ರಲ್ಲಿ 946 ಇದ್ದ ಲಿಂಗಾನುಪಾತ, 2018 ರಲ್ಲಿ 957 ಕ್ಕೇರಿದೆ. ಅಂದರೆ, ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ಆಶಾದಾಯಕವಾಗಿದೆ. ಅವರ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಭ್ರೂಣ ಪತ್ತೆಗೆ ರಾಜ್ಯದಲ್ಲಿ ಅವಕಾಶವಿಲ್ಲ. ಭ್ರೂಣ ಪತ್ತೆ ಮಾಡುವ ತಜ್ಞರು, ತಾಂತ್ರಿಕ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರವಾನಗಿಯನ್ನು ರದ್ದು ಮಾಡಲಾಗುವುದು. ಭ್ರೂಣ ಪತ್ತೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)