varthabharthi


ನಿಮ್ಮ ಅಂಕಣ

ಸಂಸ್ಕೃತ ವಿಶ್ವವಿದ್ಯಾನಿಲಯ ಮತ್ತು ಭಾಷಾ ಹೇರಿಕೆಯ ಆಯಾಮಗಳು

ವಾರ್ತಾ ಭಾರತಿ : 25 Jan, 2022
ನಂದಕುಮಾರ್ ಕೆ.ಎನ್.

ಸಂಸ್ಕೃತ ಒಂದು ಪ್ರಾಚೀನ ಭಾಷೆಯಾಗಿದ್ದರೂ ಅದು ಈ ದೇಶದ ಮೂಲದ್ದಲ್ಲ. ಜನಾಂಗಗಳ ಚಲನೆ ಹಾಗೂ ವಲಸೆಗಳ ಕಾರಣದಿಂದಾಗಿ ಸಂಸ್ಕೃತ ಇಂಡಿಯಾಕ್ಕೂ ಬಂದು ಸಮಾಜದ ಆಳುವ ವರ್ಗದ ಒಂದು ಪ್ರಧಾನ ಭಾಷೆಯಾಗಿ ಬೆಳೆಯಿತು. ಆದರೆ ಜನಸಾಮಾನ್ಯರ ಬಳಕೆಯ ಭಾಷೆಯಾಗಲೇ ಇಲ್ಲ. ಅಂದಿನ ಗ್ರಾಂಥಿಕ ಜ್ಞಾನ ಜನಸಾಮಾನ್ಯರ ಕೈಗೆ ಹೋಗಬಾರದೆಂಬ ಕಾರಣದಿಂದ ಜನಸಾಮಾನ್ಯರ ಭಾಷೆಯಾಗದಂತೆ ಸ್ಥಾಪಿತ ಊಳಿಗಮಾನ್ಯ ಹಿತಾಸಕ್ತಿಗಳು ತಡೆದಿದ್ದವು. ಅದೇ ಕಾರಣದಿಂದಾಗಿ ಅದರ ಬೆಳವಣಿಗೆ ಸ್ಥಗಿತತೆಗೆ ಸರಿದು ನಿತ್ರಾಣವಾಗಿ ಕೇವಲ ಆ ಕಾಲದ ಗ್ರಂಥಗಳಿಗೆ ಸೀಮಿತವಾಗಿ ಉಳಿಯಿತು.

ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕಾಗಿ 100 ಎಕರೆಯಷ್ಟು ಭೂಮಿ ಹಾಗೂ 359 ಕೋಟಿ ರೂಪಾಯಿಗಳ ಅನುದಾನವನ್ನು ನೀಡಲು ಹೊರಟಿದೆ. ಇದಕ್ಕಾಗಿ ಒದಗಿಸುತ್ತಿರುವ ಭೂಮಿ ಮೀಸಲು ಅರಣ್ಯವೆಂದು ಗುರುತಿಸಲ್ಪಟ್ಟ ಅರಣ್ಯ ಪ್ರದೇಶವಾಗಿದೆ. ಅರಣ್ಯ ಪ್ರದೇಶಗಳಲ್ಲಿ ತಲೆತಲಾಂತರದಿಂದ ವಾಸಿಸುತ್ತಾ ಬಂದವರನ್ನು ಅರಣ್ಯ ರಕ್ಷಣೆಯ ಹೆಸರಿನಲ್ಲಿ ಒಕ್ಕಲೆಬ್ಬಿಸಿ ಬೀದಿಪಾಲು ಮಾಡುವ ಸರಕಾರ ಅಂತಹ ರಕ್ಷಿತ ಅರಣ್ಯ ಪ್ರದೇಶವನ್ನೇ ಈಗ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ನೀಡಲು ಹೊರಟಿದೆ.

ರಾಜ್ಯದಲ್ಲಿ ವ್ಯವಹಾರ ಮತ್ತು ಸಂವಹನಕ್ಕಾಗಿ ಸಂಸ್ಕೃತ ಮಾತನಾಡುವವರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಶಿವಮೊಗ್ಗ ಬಳಿಯ ಮತ್ತೂರು ಎನ್ನುವ ಹಳ್ಳಿ ಪೂರ್ಣವಾಗಿ ಸಂಸ್ಕೃತ ಮಾತನಾಡುತ್ತದೆ ಎಂಬ ಪ್ರಚಾರ ಇದ್ದರೂ ಅದು ನಿಜವಲ್ಲ. ಅಲ್ಲಿನ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕೆಲವರು ಸಂಸ್ಕೃತ ಮಾತನಾಡಬಲ್ಲರು ಎಂಬುದು ಮಾತ್ರ ನಿಜ. ಉಳಿದಂತೆ ಸಮಾಜದ ಆಳುವ ಸ್ತರದಲ್ಲಿ ಚಾಲ್ತಿಯಲ್ಲಿ ಇರುವ ವಾಸ್ತವಗಳಾದ ಉಚ್ಚ ಕುಲ, ಉಚ್ಚ ಭಾಷೆ, ಉಚ್ಚ ಸಂಸ್ಕೃತಿ ಎಂದೆಲ್ಲಾ ಬಿಂಬಿಸಿಕೊಳ್ಳುವ ನೀಚತನದ ಹುನ್ನಾರಗಳ ಪರಿಣಾಮಗಳು ಮಾತ್ರ. ಸಂಸ್ಕೃತ ಇಂದು ಜನಸಾಮಾನ್ಯರ ಭಾಷೆಯಾಗಿ ಇಲ್ಲ. ಹಿಂದೆಯೂ ಕೂಡ ಅದು ಉಚ್ಚ ಕುಲವೆಂದು ಬಿಂಬಿಸಿಕೊಂಡಿರುವವರ, ಆಳುವ ವರ್ಗದ ಭಾಷೆ ಮಾತ್ರವಾಗಿತ್ತು. ಸಾಹಿತ್ಯಿಕವಾಗಿ ಸಂಸ್ಕೃತ ಭಾಷೆಯಲ್ಲಿ ಹಲವಾರು ಪುರಾತನ ಗ್ರಂಥಗಳು ಇವೆಯಾದರೂ ಅವುಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಅನುವಾದಗಳು ಜನರಾಡುವ ಭಾಷೆಗಳಲ್ಲಿ ನಡೆಯಬೇಕಾಗಿದೆ ಅಷ್ಟೆ.

ರಾಜ್ಯದಲ್ಲಿ ಆರೂವರೆ ಕೋಟಿಯಷ್ಟು ಜನರು ಮಾತನಾಡುವ, ದಿನನಿತ್ಯದ ವ್ಯವಹಾರಗಳಲ್ಲಿ ಬಳಸುವ ಕನ್ನಡ ಭಾಷೆಯ ಕಲಿಕೆಗಾಗಿನ ಶಾಲೆಗಳು ಸರಿಯಾದ ಶಿಕ್ಷಕರಿಲ್ಲದೆ ದಿನೇ ದಿನೇ ಸೊರಗುತ್ತಿವೆ. ಸರಕಾರದ ಅಂಕಿ-ಅಂಶದ ಪ್ರಕಾರ ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 62,229 ಶಾಲೆಗಳಿವೆ. ಬಹುತೇಕ ಖಾಸಗಿ ಶಾಲೆಗಳು ಆಂಗ್ಲ ಮಾಧ್ಯಮದಲ್ಲಿ ಕಲಿಸುತ್ತಿವೆ. ಸರಕಾರಿ ಶಾಲೆಗಳು ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಸುಮಾರು ಶೇಕಡಾ 80ರಷ್ಟು ಗ್ರಾಮೀಣ ಭಾಗದಲ್ಲಿವೆ. ಗ್ರಾಮೀಣ ಭಾಗದ ಸರಕಾರಿ ಶಾಲೆಗಳು ಶಿಕ್ಷಕರ ಕೊರತೆ, ಮೂಲಭೂತ ಸೌಲಭ್ಯಗಳ ಕೊರತೆಗಳಿಂದ ಸೊರಗುತ್ತಿವೆ. ಮುಚ್ಚಿಹೊಗುತ್ತಿವೆ. ರಾಜ್ಯದಲ್ಲಿ ಸುಮಾರು ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಏಕೋಪಾಧ್ಯಾಯ ಶಾಲೆಗಳಿವೆ. ಅವುಗಳಲ್ಲಿ ಬಹುತೇಕ ಗ್ರಾಮೀಣ ಭಾಗದಲ್ಲೇ ಇವೆ. 2019ರ ಒಕ್ಕೂಟ ಸರಕಾರಿ ಅಂಕಿ-ಅಂಶದ ಪ್ರಕಾರ ಏಕೋಪಾಧ್ಯಾಯ ಶಾಲೆಗಳ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲೇ ಆರನೇ ಸ್ಥಾನವನ್ನು ಹೊಂದಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ನೀತಿಗಳನ್ನು ಆಳುತ್ತಾ ಬಂದಿರುವ ಸರಕಾರಗಳು ನಿರಂತರವಾಗಿ ಅಳವಡಿಸುತ್ತಲೇ ಇವೆ. ಜಾಗತೀಕರಣ ನೀತಿಗಳ ಅಳವಡಿಕೆಯ ನಂತರ ಈ ಪ್ರಕ್ರಿಯೆಗಳು ಬಿರುಸು ಪಡೆದುಕೊಂಡು ಈಗದು ಉನ್ನತ ಹಂತದಲ್ಲಿ ಸಾಗುತ್ತಿದೆ. ಜಾಗತೀಕರಣ ಇತರ ಎಲ್ಲಾ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವನ್ನೂ ಕೂಡ ಕಾರ್ಪೊರೇಟೀಕರಣದತ್ತ ಕೊಂಡೊಯ್ಯತೊಡಗಿತು. ಅದರಂತೆ ಈಗ ಕಾರ್ಪೊರೇಟ್ ವಿಶ್ವವಿದ್ಯಾನಿಲಯಗಳು ತುಂಬಿಕೊಳ್ಳುತ್ತಿವೆ. ಎಲ್‌ಕೆಜಿಯಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಕಾರ್ಪೊರೇಟ್ ವಿಶ್ವ ವಿದ್ಯಾನಿಲಯಗಳ ತೆಕ್ಕೆಗಳಿಗೆ ನೀಡಲಾಗುತ್ತಿದೆ. ಈ ಪ್ರಕ್ರಿಯೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿಯೂ ಈಗ ಬಹಳ ಬಿರುಸಿನಿಂದ ನಡೆಯುತ್ತಿದೆ. ಅದರ ಪರಿಣಾಮ ಹೊಸ ಶಿಕ್ಷಣ ನೀತಿಗಳ ಬದಲಿಗೆ ಇದೀಗ ರಾಷ್ಟ್ರೀಯ ಶಿಕ್ಷಣ ನೀತಿಯೆಂದು ಜಾರಿಯಲ್ಲಿದೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ 2008ರಲ್ಲಿ ಸಿಕ್ಕಿತು. ಇದಾಗಿ ದಶಕ ದಾಟಿದರೂ ಅದಕ್ಕೆ ಪೂರಕವಾಗಿ ಆಗಬೇಕಾಗಿದ್ದ ಕನ್ನಡದ ಕೆಲಸಗಳು ನೆನೆಗುದಿಗೆ ಬಿದ್ದಿವೆ. ಅದಕ್ಕೆ ಅಗತ್ಯವಾಗಿರುವ ಹಣಕಾಸು ಹಾಗೂ ಸೌಕರ್ಯಗಳನ್ನು ವ್ಯವಸ್ಥೆ ಮಾಡುತ್ತಿಲ್ಲ. ರೈತಾಪಿಗಳು, ರೈತಕೂಲಿಗಳು, ಕಾರ್ಮಿಕರು, ಸಣ್ಣ ಪುಟ್ಟ ವ್ಯವಹಾರಸ್ಥರು ಸೇರಿದಂತೆ ರಾಜ್ಯದ ಬಹುಸಂಖ್ಯಾತ ಜನರ ಅನ್ನದ ಭಾಷೆ ಕನ್ನಡವಾದರೂ ಆಳುವ ಸರಕಾರಗಳು ಆಂಗ್ಲ ಶಿಕ್ಷಿತ ಅಲ್ಪಸಂಖ್ಯಾತ ಜನರ ಹಿತಾಸಕ್ತಿಗಳನ್ನಷ್ಟೇ ನೋಡುತ್ತಾ ಬರುತ್ತಿವೆ. ಜೊತೆಗೆ ಕನ್ನಡ ಅನ್ನದ ಭಾಷೆಯಾಗಿಲ್ಲ, ಅನ್ನದ ಭಾಷೆಯಾಗಬೇಕು, ಅಂಗನವಾಡಿ, ಪ್ರಾಥಮಿಕ ಶಿಕ್ಷಣದಿಂದಲೇ ಆಂಗ್ಲ ಕಲಿಸುವಿಕೆ ಇರಬೇಕು, ಹಿಂದಿ ಕಲಿಸುವಿಕೆ ಇರಬೇಕು ಇತ್ಯಾದಿಯಾಗಿ ಬುದ್ಧಿಜೀವಿ ವಲಯದ ಪ್ರಚಾರಗಳು ನಿರಂತರವಾಗಿ ನಡೆದಿವೆ. ಭಾಷಾ ಮಾಧ್ಯಮವನ್ನು ಭಾಷಾಕಲಿಕೆಗೆ ಪರ್ಯಾಯವಾಗಿ ಮುಂದಿಡುವ ಚಾಳಿಯನ್ನು ಬೆಳೆಸಲಾಗಿದೆ. ಇದು ಕೂಡ ಪ್ರಧಾನವಾಗಿ ಆಂಗ್ಲ ಶಿಕ್ಷಿತ ವಲಯವನ್ನು (ನಮ್ಮ ದೇಶದಲ್ಲಿನ ಈ ವಲಯದ ಜನಸಂಖ್ಯೆ ಜಾಗತಿಕ ಭಾರಿ ಕಾರ್ಪೊರೇಟುಗಳಿಗೆ ದೊಡ್ಡ ಮಾರುಕಟ್ಟೆಯಾಗಿದೆ) ಗಮನದಲ್ಲಿಟ್ಟುಕೊಂಡು ನಡೆಯುತ್ತಿರುವ ವಿಚಾರಗಳಾಗಿವೆಯೇ ಹೊರತು ಒಟ್ಟಾರೆ ರಾಜ್ಯದ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿಲ್ಲ.

ವಿಜ್ಞಾನ, ಗಣಿತ, ವೈದ್ಯಕೀಯ, ಇಂಜಿನಿಯರಿಂಗ್ ಇತ್ಯಾದಿ ಉನ್ನತ ಶಿಕ್ಷಣಕ್ಕೆ ಆಂಗ್ಲ ಕಲಿಕೆ ಕಡ್ಡಾಯ ಎಂಬಂತಹ ಒತ್ತಡವನ್ನು ಉಂಟು ಮಾಡುತ್ತಾ ಬರಲಾಗುತ್ತಿದೆ. ಅದೂ ಅಲ್ಲದೇ ಕೇವಲ ಉನ್ನತ ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವ ಕೆಲವೇ ಜನರಿಗಾಗಿ ರಾಜ್ಯದ ಬಹುಸಂಖ್ಯಾತ ಮಕ್ಕಳ ಮೇಲೆ ಪ್ರಾಥಮಿಕ ಶಿಕ್ಷಣದಿಂದಲೇ ತಾಯಿ ನುಡಿಯಲ್ಲಿ ಕಲಿಕೆಯ ಅವಕಾಶವನ್ನು ಮೊಟಕುಗೊಳಿಸಿ ಆಂಗ್ಲ ಕಲಿಕೆಯ ಹೆಚ್ಚುವರಿ ಹೊರೆ ಹೇರುವುದು ಎಷ್ಟು ತರ್ಕಬದ್ದ ಹಾಗೂ ನ್ಯಾಯಯುತವಾದುದು ಎಂಬುದರ ಬಗ್ಗೆ ಗಮನ ಬಹಳ ಕಡಿಮೆ ಇದೆ.

ಕಲಿಕೆಯ ಬಗೆಗಿನ ಜಾಗತಿಕವಾದ ವೈಜ್ಞಾನಿಕ ಗ್ರಹಿಕೆಗೂ ಇದು ತದ್ವಿರುದ್ಧವಾದುದು. ಮಕ್ಕಳು ತಮ್ಮ ತಾಯಿನುಡಿ ಇಲ್ಲವೇ ಪರಿಸರದ ಭಾಷೆಯಲ್ಲಿ ಮಾತ್ರ ಸರಿಯಾಗಿ ಹಾಗೂ ಸಮರ್ಥವಾಗಿ ಕಲಿಕೆಯ ವಿಚಾರಗಳನ್ನು ಗ್ರಹಿಸಬಲ್ಲರೇ ಹೊರತು ತಮ್ಮ ತಾಯಿನುಡಿ ಹಾಗೂ ಪರಿಸರಕ್ಕೆ ಹೊರತಾಗಿರುವ ಭಾಷೆಯಲ್ಲಿ ಗ್ರಹಿಸಲಾರರು ಎಂಬ ಸಾಬೀತಾಗಿರುವ ವೈಜ್ಞಾನಿಕ ಸತ್ಯವನ್ನು ಜಾರಿಯಲ್ಲಿ ತರುವ ಪ್ರಯತ್ನ ನಮ್ಮ ರಾಜ್ಯದಲ್ಲಿ ಇಲ್ಲವಾಗಿದೆ. ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಇದು ತದ್ವಿರುದ್ಧವಾಗಿರುವುದರಿಂದ ಆಳುವ ಸರಕಾರಗಳು ಅಂತಹ ವೈಜ್ಞಾನಿಕ ಹಾಗೂ ಸಮಾಜಮುಖಿ ರಚನಾತ್ಮಕ ಕಾರ್ಯಗಳು ನಡೆಯದಂತೆ ನೋಡಿಕೊಂಡು ಬರುತ್ತಿವೆ.

ಇದುವರೆಗೂ ಕಾರ್ಯ ನಿರ್ವಹಿಸುತ್ತಾ ಬಂದಿರುವ ವಿಶ್ವವಿದ್ಯಾನಿಲಯ ಗಳನ್ನು ಉಸಿರು ಕಟ್ಟಿ ಸಾಯುವಂತೆ ಮಾಡಲಾಗುತ್ತಿದೆ. ಯುಜಿಸಿ ಅನುದಾನಗಳ ಕಡಿತ, ರಾಜ್ಯ ಸರಕಾರಗಳ ಅನುದಾನಗಳ ಕಡಿತ, ಹೊಸ ಹೊಸ ನಿರ್ಬಂಧಗಳ ಹೇರಿಕೆ, ಆಡಳಿತಾತ್ಮಕವಾಗಿ ರಾಜಕೀಯ ಮಧ್ಯ ಪ್ರವೇಶಗಳು, ಅಯೋಗ್ಯರನ್ನು, ತಮ್ಮ ಬಾಲಂಗೋಚಿಗಳನ್ನು ಕುಲಪತಿಗಳಾಗಿ ಹಾಗೂ ಆಡಳಿತಾತ್ಮಕ ಸ್ಥಾನಗಳಿಗೆ ನೇಮಿಸಿಕೊಳ್ಳುವುದು, ವಿದ್ಯಾರ್ಥಿಗಳಿಗೆ ಶುಲ್ಕಗಳ ಹೊರೆ ಹೆಚ್ಚುಮಾಡುವುದು, ವಿದ್ಯಾರ್ಥಿ ವೇತನ, ಸಹಾಯಧನಗಳ ಕಡಿತಗಳು, ಕಲಿಕೆಯ ವಿಷಯಗಳ ಕಡಿತಗಳು, ವಿಭಾಗಗಳ ಮುಚ್ಚುವಿಕೆಗಳು ಹೀಗೆ ಹತ್ತಾರು ಬಗೆಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿಶ್ವವಿದ್ಯಾನಿಲಯಗಳು ಮುಚ್ಚಿ ಹೋಗುವಂತೆ ಮಾಡುವ ಇಲ್ಲವೇ ಸುಲಭವಾಗಿ ಕಾರ್ಪೊರೇಟುಗಳ ಕೈಗಳಿಗೆ ದಾಟಿಸುವ ಹಲವಾರು ಕ್ರಮಗಳ ಜಾರಿಗಳು ಬಿರುಸು ಪಡೆದುಕೊಂಡಿವೆ. ಇದಕ್ಕೆ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ, ದಿಲ್ಲಿ ವಿಶ್ವವಿದ್ಯಾನಿಲಯ, ಜಾಮಿಯಾ ಮಿಲಿಯಾ ವಿಶ್ವವಿದ್ಯಾನಿಲಯಗಳಿಂದ ಹಿಡಿದು ನಮ್ಮ ರಾಜ್ಯದ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾನಿಲಯ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಗಳವರೆಗೂ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಬಹುದು. ಹಲವು ವಿಶ್ವವಿದ್ಯಾನಿಲಯಗಳು ಸಿಬ್ಬಂದಿ ಸಂಬಳ ನೀಡಲು ಕೂಡ ಸಾಧ್ಯವಾಗದ ಸ್ಥಿತಿಗೆ ತಲುಪಿವೆ. ಆದರೆ ಈ ವಿಶ್ವವಿದ್ಯಾನಿಲಯಗಳಲ್ಲಿನ ಶಿಕ್ಷಕ ಸಮುದಾಯವಾಗಲಿ, ಇತರ ಸಿಬ್ಬಂದಿಗಳಾಗಲಿ ವಿಶ್ವವಿದ್ಯಾನಿಲಯಗಳನ್ನು ಉಸಿರುಗಟ್ಟಿಸಿ ಸಾಯಿಸುವ ಆಳುವ ಶಕ್ತಿಗಳ ಹುನ್ನಾರಗಳ ಬಗ್ಗೆ ಸರಿಯಾಗಿ ದ್ವನಿಯೆತ್ತುತ್ತಿಲ್ಲ.

ಇಂತಹ ಸಂದರ್ಭದಲ್ಲಿ ಕರ್ನಾಟಕ ಸರಕಾರ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ನೂರಾರು ಕೋಟಿಗಳ ಅನುದಾನ ಹಾಗೂ ನೂರಾರು ಎಕರೆಗಳ ಮೀಸಲು ಅರಣ್ಯದ ಭೂಮಿಯನ್ನು ಕೊಡಲು ಹೊರಟಿದೆ. ನಮ್ಮ ದೇಶದ ಆಳುವ ಶಕ್ತಿಗಳಲ್ಲಿ ಬ್ರಾಹ್ಮಣಶಾಹಿ ಊಳಿಗಮಾನ್ಯತೆಯದು ಒಂದು ಪ್ರಧಾನ ಪಾತ್ರವಾಗಿದೆ. ಇದು ದೇಶದ ಎಲ್ಲಾ ರಂಗಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಲವಾಗಿ ಚಾಲ್ತಿಯಲ್ಲಿದೆ. ಇದರ ಭಾಗವಾಗಿಯೇ ಸಮಾಜದಲ್ಲಿ ಅಸ್ಪೃಶ್ಯತೆ, ಜಾತೀಯತೆ, ಧರ್ಮ ದೇವರುಗಳ ವಿಚಾರಗಳಲ್ಲಿ ಕುರುಡುತನ ಹಾಗೂ ಪುರೋಹಿತಶಾಹಿ ಹಿಡಿತಗಳು, ಜನಜೀವನದಲ್ಲಿ ಅಪ್ರಜಾತಾಂತ್ರಿಕತೆ ಇವೆ.

ಸಂಸ್ಕೃತ ಒಂದು ಪ್ರಾಚೀನ ಭಾಷೆಯಾಗಿದ್ದರೂ ಅದು ಈ ದೇಶದ ಮೂಲದ್ದಲ್ಲ. ಜನಾಂಗಗಳ ಚಲನೆ ಹಾಗೂ ವಲಸೆಗಳ ಕಾರಣದಿಂದಾಗಿ ಸಂಸ್ಕೃತ ಇಂಡಿಯಾಕ್ಕೂ ಬಂದು ಸಮಾಜದ ಆಳುವ ವರ್ಗದ ಒಂದು ಪ್ರಧಾನ ಭಾಷೆಯಾಗಿ ಬೆಳೆಯಿತು. ಆದರೆ ಜನಸಾಮಾನ್ಯರ ಬಳಕೆಯ ಭಾಷೆಯಾಗಲೇ ಇಲ್ಲ. ಅಂದಿನ ಗ್ರಾಂಥಿಕ ಜ್ಞಾನ ಜನಸಾಮಾನ್ಯರ ಕೈಗೆ ಹೋಗಬಾರದೆಂಬ ಕಾರಣದಿಂದ ಜನಸಾಮಾನ್ಯರ ಭಾಷೆಯಾಗದಂತೆ ಸ್ಥಾಪಿತ ಊಳಿಗಮಾನ್ಯ ಹಿತಾಸಕ್ತಿಗಳು ತಡೆದಿದ್ದವು. ಅದೇ ಕಾರಣದಿಂದಾಗಿ ಅದರ ಬೆಳವಣಿಗೆ ಸ್ಥಗಿತತೆಗೆ ಸರಿದು ನಿತ್ರಾಣವಾಗಿ ಕೇವಲ ಆ ಕಾಲದ ಗ್ರಂಥಗಳಿಗೆ ಸೀಮಿತವಾಗಿ ಉಳಿಯಿತು.

ಆದರೆ ಇಂಡಿಯಾದ ಆಳುವ ವರ್ಗದ ಒಂದು ಪ್ರಬಲ ಭಾಗವಾದ ಬ್ರಾಹ್ಮಣಶಾಹಿ ಊಳಿಗಮಾನ್ಯತೆ ಈ ಭಾಷೆಯೊಂದಿಗೆ ಹಲವು ನೆವ ಹಿಡಿದು ತಳುಕುಹಾಕಿಕೊಂಡಿರುವುದರಿಂದಾಗಿ ಈ ಭಾಷೆಯನ್ನು ಸರಕಾರದ ಆಕಾಶವಾಣಿ ಹಾಗೂ ದೂರದರ್ಶನದಂತಹ ಮಾಧ್ಯಮಗಳಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿಡಲಾಯಿತು. ಜೊತೆಗೆ ಈ ದೇಶದ ಎಲ್ಲಾ ಗ್ರಾಂಥಿಕ ಭಾಷೆಗಳಲ್ಲಿ ಸಂಸ್ಕೃತ ಶಬ್ದಗಳನ್ನು ಎಷ್ಟು ಸಾಧ್ಯವೋ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ತೂರಿಸುವ ಕಾರ್ಯಗಳನ್ನು ಮಾಡುತ್ತಾ ಬರಲಾಯಿತು. ಸಂಸ್ಕೃತ ಕಲಿಕೆಯನ್ನು ಅನೈತಿಕ ವಿಧಾನಗಳ ಮೂಲಕ ಪ್ರೋತ್ಸಾಹಿಸುವ ಚಾಳಿಗಳು ಅಧಿಕೃತವಾಗಿಯೇ ನಡೆಯತೊಡಗಿದವು. ಸಂಸ್ಕೃತ ಇಂಡಿಯಾದ ಎಲ್ಲಾ ಭಾಷೆಗಳ ತಾಯಿ ಎಂಬ ಸುಳ್ಳು ಪ್ರಚಾರ ಕೂಡ ನಿರಂತರವಾಗಿ ನಡೆಯುತ್ತಾ ಬಂದಿತು. ಜನಸಾಮಾನ್ಯರ ಭಾಷೆಯಲ್ಲದಿದ್ದರೂ, ಇಲ್ಲಿನ ದ್ರಾವಿಡ ಭಾಷೆಗಳಷ್ಟು ಹಳೆಯದಲ್ಲದಿದ್ದರೂ 2004ರಲ್ಲಿ ಇದಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನೂ ನೀಡಲಾಯಿತು.

ಬ್ರಾಹ್ಮಣಶಾಹಿ ತಮ್ಮ ಮೇಲರಿಮೆಯನ್ನು ಪ್ರದರ್ಶಿಸಲು, ಒಣ ಶ್ರೇಷ್ಠತೆಯನ್ನು ಮೆರೆಯಲು ಮಂತ್ರ ಪಠಣ, ದೇವ ಶ್ಲೋಕ, ಹೋಮ, ಯಾಗ, ಪೂಜಾ ವಿಧಿ ಇತ್ಯಾದಿಗಳನ್ನು ದೇವಭಾಷೆಯೆಂದು ಬಿಂಬಿಸುತ್ತಾ ಸಂಸ್ಕೃತದಲ್ಲೇ ಮಾಡುತ್ತಾ ಬರುತ್ತಿದೆ. ಇತರ ಜನಸಮುದಾಯಗಳ ಮೇಲೆ ಈ ಭಾಷೆಯ ಮೇಲರಿಮೆ ಹಿಡಿದು ಜನಾಂಗೀಯ, ಭಾಷಿಕ ಹಾಗೂ ಸಾಂಸ್ಕೃತಿಕ ಹಿಡಿತ ಸಾಧಿಸಲು, ಕೋಮುವಾದಿ ಕಾರ್ಯಸೂಚಿ ಜಾರಿಯಲ್ಲಿಡಲು ಬಳಸುತ್ತಾ ಬರಲಾಗುತ್ತಿದೆ.

ಅಂದರೆ ಇಂಡಿಯಾದ ಆಳುವ ವ್ಯವಸ್ಥೆಯ ಭಾಗವಾಗಿಯೇ ಸಂಸ್ಕೃತ ಭಾಷೆಯ ಪ್ರತ್ಯಕ್ಷ ಹಾಗೂ ಪರೋಕ್ಷ ಪೋಷಣೆ ಹಾಗೂ ಹೇರಿಕೆ ನಡೆದುಕೊಂಡು ಬರುತ್ತಿದೆ ಎನ್ನುವುದನ್ನು ಗಮನಿಸಬೇಕು. ಈ ಊಳಿಗಮಾನ್ಯ ಬುನಾದಿಯನ್ನು ಗಮನಿಸದೆ, ಇದನ್ನು ನೇರವಾಗಿ ಗುರಿಮಾಡದೆ ಸಂಸ್ಕೃತ ಹೇರಿಕೆ ಹಾಗೂ ಭಾಷಾರಾಜಕಾರಣದ ಯಾವುದೇ ಆಯಾಮಗಳನ್ನು ಚರ್ಚಿಸಿದರೂ ಅದು ಒಂದಷ್ಟು ಸದ್ದು ಮಾಡಬಹುದೇ ಹೊರತು ಗುರಿ ತಲುಪುವುದಿಲ್ಲ. ಯಾವ ಬದಲಾವಣೆಯೂ ಆಗುವುದಿಲ್ಲ.

ಸಂಸ್ಕೃತ ಪ್ರತಿಪಾದಕ ಬ್ರಾಹ್ಮಣಶಾಹಿ ಊಳಿಗಮಾನ್ಯ ಶಕ್ತಿಗಳ ನೇರ ಒಳತೂರುವಿಕೆಯಿಂದಾಗಿ ಈಗ ಕರ್ನಾಟಕದ ಶಿಕ್ಷಣ ಸಂಸ್ಥೆಗಳು ಮುಸ್ಲಿಂ ಸಮುದಾಯದ ಹುಡುಗಿಯರನ್ನು ದಿರಿಸಿನ ನೆಪದಲ್ಲಿ ತರಗತಿ ಪ್ರವೇಶಿಸಲು ಅವಕಾಶ ನಿರಾಕರಿಸುವ, ಶಿಕ್ಷಣದ ಅವಕಾಶವನ್ನೇ ನಿರಾಕರಿಸುವ ಹಂತ ತಲುಪಿದೆ. ಮುಸ್ಲಿಂ ವಿದ್ಯಾರ್ಥಿನಿಯರ ದಿರಿಸಿನ ವಿರುದ್ಧ ಕೇಸರೀ ಶಾಲು ಧರಿಸಿ ಪ್ರತಿಭಟನೆ ನಡೆಸುವಂತೆ ಇತರ ವಿದ್ಯಾರ್ಥಿಗಳನ್ನು ತೊಡಗಿಸಲಾಗುತ್ತಿದೆ. ಇದಕ್ಕೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ಪ್ರಾಧ್ಯಾಪಕರಲ್ಲಿ ಹಲವರು ನೇರವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ. ಶುಲ್ಕ ಹೆಚ್ಚಳ, ಮೂಲಸೌಲಭ್ಯ ಕೊರತೆಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾದ ವಿದ್ಯಾರ್ಥಿ ಸಮುದಾಯವನ್ನು ಒಂದು ಸಮುದಾಯದ ದಿರಿಸಿನ ವಿಚಾರ ಹಿಡಿದು ಪ್ರತಿಭಟನೆ ನಡೆಸುವಷ್ಟು ಅಧಃಪತನದತ್ತ ತಳ್ಳಲಾಗುತ್ತಿದೆ.

ಕರ್ನಾಟಕದ ಗ್ರಾಂಥಿಕ ಕನ್ನಡದ ಮೂಲ ಹಳೇ ಮೈಸೂರು ಭಾಗದ ಬ್ರಾಹ್ಮಣ ಸಮುದಾಯ ಮಾತನಾಡುವ ಸಂಸ್ಕೃತ ಮಿಶ್ರಿತ ಕನ್ನಡವಾಗಿದೆ. ಈ ಗ್ರಾಂಥಿಕ ಕನ್ನಡ ಭಾಷೆಯನ್ನು ಹಳೇ ಮೈಸೂರು ಪ್ರದೇಶ ಸೇರಿದಂತೆ ರಾಜ್ಯದ ಯಾವ ಪ್ರದೇಶದ ಜನಸಾಮಾನ್ಯರೂ ಸಹಜ ಮಾತುಕತೆಗಳಲ್ಲಾಗಲೀ, ನಿತ್ಯ ವ್ಯವಹಾರಗಳಲ್ಲಾಗಲೀ ಬಳಸುವುದಿಲ್ಲ.

ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಭಾರೀ ಕಾರ್ಪೊರೇಟ್‌ಗಳು ಆಸಕ್ತಿ ವಹಿಸುವುದಿಲ್ಲ. ಯಾಕೆಂದರೆ ಅವರಿಗೆ ಅದು ಆರ್ಥಿಕ ಲಾಭ ತಂದುಕೊಡುವುದಿಲ್ಲ. ಹಾಗಾಗಿ ಇಲ್ಲಿನ ಬ್ರಾಹ್ಮಣಶಾಹಿ ಊಳಿಗಮಾನ್ಯ ಹಿತಾಸಕ್ತಿಗಳನ್ನು ರಕ್ಷಿಸಲು ಸರಕಾರಗಳೇ ದೇಶಾದ್ಯಂತ ಹತ್ತಾರು ಸಂಸ್ಕೃತ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿವೆ. ಕರ್ನಾಟಕದಲ್ಲಿ ಕೆಲವು ಬ್ರಾಹ್ಮಣ ಹಾಗೂ ವೀರಶೈವ ಮಠಗಳು ಕೂಡ ಸಂಸ್ಕೃತ ವಿಶ್ವವಿದ್ಯಾನಿಲಯಗಳನ್ನು, ಸಂಸ್ಕೃತ ಪಾಠಶಾಲೆ, ಕಾಲೇಜುಗಳನ್ನು ನಡೆಸುತ್ತಿವೆ. ಈಗ ಕರ್ನಾಟಕ ಸರಕಾರ 2010ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ಬಲಗೊಳಿಸಲು ಹೊರಟಿದೆ.

ಅದೇ ವೇಳೆಯಲ್ಲಿ ಕರ್ನಾಟಕದ ಲಕ್ಷಾಂತರ ಜನರು ಮಾತನಾಡುವ, ವ್ಯವಹರಿಸುವ ಉರ್ದು, ತುಳು, ಕೊಡವ, ಬ್ಯಾರಿ, ಅರೆಬಾಸೆ ಮೊದಲಾದವುಗಳಿಗೆ ಪ್ರೋತ್ಸಾಹ, ಸಂಶೋಧನೆ, ವಿಶ್ವವಿದ್ಯಾನಿಲಯಗಳ ಕುರಿತು ಸರಕಾರ ಮಾತನಾಡುತ್ತಿಲ್ಲ. ಈ ಕುರಿತು ಜನರ ಸಂಘಟಿತ ಒತ್ತಡಗಳು ಬರಬೇಕಾಗಿದೆ.

ಹಾಗಾಗಿ ಸರಕಾರದ ಸಂಸ್ಕೃತ ವಿಶ್ವವಿದ್ಯಾನಿಲಯ ಬಲಪಡಿಸುವ ಹುನ್ನಾರದ ವಿರುದ್ಧ ಕನ್ನಡಿಗರ ಪ್ರತಿರೋಧ ಸಹಜವಾಗಿಯೇ ಬಲವಾಗಬೇಕಿದೆ. ಕರ್ನಾಟಕದ ದಲಿತ, ದಮನಿತ, ಮಹಿಳಾ ಇನ್ನಿತರ ಜನಸಾಮಾನ್ಯರ ಹಿತಾಸಕ್ತಿ ಕಾಯುವ ರೀತಿಯಲ್ಲಿ ಕನ್ನಡ ವಿಶ್ವವಿದ್ಯಾನಿಲಯ ಸೇರಿದಂತೆ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳನ್ನು ಬಲಗೊಳಿಸುವ ಕಾರ್ಯಕ್ಕಾಗಿ ಸಂಘಟಿತ ಸಾರ್ವಜನಿಕ ಒತ್ತಡ ಹೆಚ್ಚಾಗಬೇಕಾದ ಅಗತ್ಯ ಬಹಳವಿದೆ.

ಮಿಂಚಂಚೆ: nandakumarnandana67@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)