varthabharthi


ಬೆಂಗಳೂರು

ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸೇವೆಗೆ ಚಿಕ್ಕ ಬಸ್ ಸೂಕ್ತ: ಮುಖ್ಯಮಂತ್ರಿ ಬೊಮ್ಮಾಯಿ

ವಾರ್ತಾ ಭಾರತಿ : 25 Jan, 2022

ಬೆಂಗಳೂರು, ಜ.25: ನಗರಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸೇವೆಗೆ ಚಿಕ್ಕ ಬಸ್‍ಗಳು ಓಡಾಟಕ್ಕೆ ಸೂಕ್ತ. ಹೀಗಾಗಿ ಮಿನಿ ಬಸ್ ಸಂಚಾರಕ್ಕೆ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಎನ್‍ಜಿ ಪರಿವರ್ತನೆ: ಸಾರಿಗೆ ವಾಹನಗಳನ್ನು ಸಿ.ಎನ್.ಜಿಗೆ ಪರಿವರ್ತಿಸಲು ಮುಂದಾಗಿರುವ ಸಂಸ್ಥೆಗೆ ಪ್ರಾಯೋಗಿಕವಾಗಿ ಇಲಾಖೆಯ ಬಸ್‍ಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.  

ಸಾರಿಗೆ ಸೇವೆಗಳ ಕುರಿತು ಅರಿವು ಮೂಡಿಸಿ: ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ನೀಡಲಾಗುವ 30 ಆನ್‍ಲೈನ್ ಸೇವೆಗಳ ಮಾಹಿತಿಯ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮುಖ್ಯಮಂತ್ರಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬೇಡಿಕೆ ಇರುವಲ್ಲಿ ಬಸ್ ಒದಗಿಸಿ: ಗ್ರಾಮೀಣ ಭಾಗಗಳಲ್ಲಿ ಸಾರಿಗೆ ಬಸ್‍ಗಳಿಗೆ ಬೇಡಿಕೆ ಹೆಚ್ಚಿದೆ. ಪ್ರಸ್ತುತ ಇರುವ ಮಾರ್ಗಗಳಲ್ಲಿ ಸಂಚರಿಸುವ ಬಸ್‍ಗಳ ಸಂಖ್ಯೆಯನ್ನು ಮರುಪರಿಶೀಲಿಸಿ, ಬೇಡಿಕೆ ಇರುವಲ್ಲಿ ಬಸ್‍ಗಳು ಹೆಚ್ಚಾಗಿ ಕಾರ್ಯಾಚರಣೆ ಮಾಡುವಂತೆ   ಹಾಗೂ ಸಂಸ್ಥೆಯಲ್ಲಿ ವಾಹನಗಳ ದುರಸ್ಥಿಗೆ ಉಂಟಾಗುವ ವೆಚ್ಚದ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದರು.

ಸಭೆಯಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕೆಎಸ್ರ್ಸಾಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)