varthabharthi


ಸಂಪಾದಕೀಯ

ಗಣರಾಜ್ಯವೋ, ಹೆಗ್ಗಣರಾಜ್ಯವೋ?

ವಾರ್ತಾ ಭಾರತಿ : 26 Jan, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ದೇಶ ಗಣರಾಜ್ಯೋತ್ಸವದ ಸಿದ್ಧತೆಯಲ್ಲಿರುವಾಗ, ವಿವಿಧ ರಾಜ್ಯಗಳು ಕೇಂದ್ರ ಸರಕಾರದ ಬಗ್ಗೆ ತೀವ್ರ ಮುನಿಸನ್ನು ತಾಳಿವೆ. ಗಣರಾಜ್ಯೋತ್ಸವದ ಸಾರ್ಥಕತೆ ಇರುವುದು ಒಕ್ಕೂಟ ವ್ಯವಸ್ಥೆಯ ಯಶಸ್ಸಿನಲ್ಲಿ. ರಾಜ್ಯಗಳು ತಮ್ಮ ಅಧಿಕಾರ, ಭಾಷೆ, ಸಂಸ್ಕೃತಿ, ವಿಚಾರ ಧಾರೆಗಳಿಗೆ ಕೇಂದ್ರದಿಂದ ಧಕ್ಕೆಯಾಗುತ್ತಿದೆ ಎಂದು ಆತಂಕಪಡಿಸುತ್ತಿರುವ ಹೊತ್ತಿನಲ್ಲಿ, ಗಣರಾಜ್ಯೋತ್ಸವವನ್ನು ಅದೆಷ್ಟು ಸಂಭ್ರಮದಿಂದ ಆಚರಿಸಿದರೂ, ಉದ್ದೇಶ ಈಡೇರಲಾರದು. ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ಅಂತರಗಳು ಹೆಚ್ಚುತ್ತಿವೆ. ಉತ್ತರ ಭಾರತದ ಭಾಷೆ, ಸಂಸ್ಕೃತಿಯನ್ನು ಬೇರೆ ಬೇರೆ ರೂಪಗಳಲ್ಲಿ ದಕ್ಷಿಣ ಭಾರತೀಯರ ಮೇಲೆ ಹೇರುವ ಕೇಂದ್ರದ ಪ್ರಯತ್ನದಿಂದಾಗಿ ದಕ್ಷಿಣ ಭಾರತೀಯರಲ್ಲಿ ಅಭದ್ರತೆ ಸೃಷ್ಟಿಯಾಗಿದೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡುವ ಸಂದರ್ಭದಲ್ಲೂ ಸರಕಾರ ಮಲತಾಯಿ ಧೋರಣೆಯನ್ನು ತಾಳುತ್ತಿದೆ. ಭಾರತದ ಗಣರಾಜ್ಯವನ್ನು ಅತ್ಯಂತ ಸೂಕ್ಷ್ಮವಾಗಿ ಹೆಣೆಯಲಾಗಿದೆ. ಬರಿಯ ಭಾಷೆಯ ನೆಲೆಯಲ್ಲಷ್ಟೇ ರಾಜ್ಯಗಳು ಸೃಷ್ಟಿಯಾಗಿಲ್ಲ, ಸ್ಥಳೀಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಕೂಡ ಇದು ಆಧರಿಸಿಕೊಂಡಿದೆ. ಹಲವು ಭಾಷೆ, ಹಲವು ಸಂಸ್ಕೃತಿ, ಹಲವು ಆಚಾರ ವಿಚಾರಗಳ ಒಂದು ಗುಂಪು ಭಾರತ. ಕೇಂದ್ರ ಸರಕಾರ ಇದೀಗ ಜೇನು ಗೂಡಿಗೆ ಕಲ್ಲೆಸೆಯುವಂತೆ ಆ ಗುಂಪಿಗೆ ಕಲ್ಲೆಸೆಯುವ ಪ್ರಯತ್ನವನ್ನು ನಡೆಸುತ್ತಿದೆ.

 ಗಣರಾಜ್ಯೋತ್ಸವ ಆಚರಣೆ ಎಂದರೆ, ಕೇಂದ್ರ ಸರಕಾರ ಅಧಿಕೃತವಾಗಿ ಅನುಮತಿ ನೀಡಿದ ಕೆಲವು ಸ್ತಬ್ಧಚಿತ್ರಗಳನ್ನು ಪ್ರದರ್ಶಿಸುವುದಕ್ಕಷ್ಟೇ ಸೀಮಿತವೇ ಎಂಬ ಪ್ರಶ್ನೆಗಳನ್ನು ಹಲವು ರಾಜ್ಯಗಳು ಕೇಳುತ್ತಿವೆ. ಈ ಬಾರಿ ಕೊರೋನದ ಹೆಸರಲ್ಲಿ ಗಣರಾಜ್ಯೋತ್ಸವಕ್ಕೆ ಹತ್ತು ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಅಷ್ಟೇ ಅಲ್ಲ, ಗಣರಾಜ್ಯೋತ್ಸವದೊಳಗಿನ ಹಲವು ಸಂಪ್ರದಾಯಗಳನ್ನು ಕೈ ಬಿಡಲಾಗಿದೆ. ವಿಪರ್ಯಾಸವೆಂದರೆ, ಹಲವು ರಾಜ್ಯಗಳ ಸ್ತಬ್ಧಚಿತ್ರಗಳನ್ನು ತಿರಸ್ಕರಿಸಿ, ಅದರಲ್ಲಿ ತನ್ನ ವಿಚಾರಗಳನ್ನು ತುರುಕಿಸಲು ಕೇಂದ್ರ ಸರಕಾರ ಒತ್ತಡ ಹೇರಿದೆ. ಬಹುತೇಕ ರಾಜ್ಯಗಳು ಸರಕಾರದ ನಿಲುವನ್ನು ಪ್ರತಿಭಟಿಸಿದೆ. ಅವುಗಳು ಕೇಂದ್ರ ಸರಕಾರದ ಸ್ತಬ್ಧಚಿತ್ರಕ್ಕೆ ಪರ್ಯಾಯವಾಗಿ ತಮ್ಮ ಸ್ತಬ್ಧಚಿತ್ರಗಳನ್ನು ರಾಜ್ಯಗಳಲ್ಲಿ ಪ್ರದರ್ಶಿಸುತ್ತಿವೆೆ. ಕೇರಳ ರಾಜ್ಯದ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದು, ಇಡೀ ದಕ್ಷಿಣ ಭಾರತವನ್ನು ಅಸಮಾಧಾನಕ್ಕೆ ತಳ್ಳಿದೆ. ನಾರಾಯಣ ಗುರುಗಳನ್ನು ತಿರಸ್ಕರಿಸಿರುವುದು ಮಾತ್ರವಲ್ಲ, ಆ ಜಾಗದಲ್ಲಿ ಶಂಕರಾಚಾರ್ಯರನ್ನು ಸ್ಥಾಪಿಸಲು ಕೇಂದ್ರ ಸರಕಾರ ಸೂಚನೆ ನೀಡಿತ್ತು. ಅಪಾಯಕಾರಿ ಅಂಶವೆಂದರೆ, ನಾರಾಯಣ ಗುರುಗಳ ಜಾಗದಲ್ಲಿ ಕೇವಲ ಬ್ರಾಹ್ಮಣರ ಒಂದು ಪಂಥಕ್ಕೆ ಸೀಮಿತವಾಗಿರುವ, ಜಾತೀಯತೆಯನ್ನು ಎತ್ತಿ ಹಿಡಿದ, ಬೌದ್ಧರ ನರಮೇಧಕ್ಕೆ ಕಾರಣರೆಂಬ ಆರೋಪ ಹೊತ್ತಿರುವ ಶಂಕರಾಚಾರ್ಯರ ಚಿಂತನೆಯನ್ನು ತರಲು ಕೇಂದ್ರ ಸರಕಾರ ಮುಂದಾಗಿರುವುದು. ‘ಹುಚ್ಚರ ಆಸ್ಪತ್ರೆ’ ಎಂದು ಸ್ವಾಮಿ ವಿವೇಕಾನಂದರಿಂದ ಬಣ್ಣಿಸಲ್ಪಟ್ಟ ಕೇರಳವನ್ನು ಜಾತೀಯತೆಯಿಂದ ಹೊರಗೆ ತರುವಲ್ಲಿ ನಾರಾಯಣ ಗುರುಗಳ ಪಾತ್ರ ಬಹುದೊಡ್ಡದು. ಇಂದು ಕೇರಳದಲ್ಲಿ ಬಿಲ್ಲವ ಸಮುದಾಯದ ಒಬ್ಬ ನಾಯಕ ಮುಖ್ಯಮಂತ್ರಿಯಾಗಿದ್ದಾರೆ ಎಂದರೆ ಅದಕ್ಕೆ ನಾರಾಯಣಗುರು ಅವರ ವೈಚಾರಿಕ ಕೊಡುಗೆಗಳೂ ಇವೆ. ನಾರಾಯಣ ಗುರುಗಳು ಇಲ್ಲದೇ ಇದ್ದಿದ್ದರೆ ಜಾತೀಯತೆಯಿಂದ ನರಳುತ್ತಿದ್ದ ಕೇರಳದ ಕೆಳ ಜಾತಿಯ ಜನರು, ನಂಬೂದಿರಿ ಬ್ರಾಹ್ಮಣರ ಕಿರುಕುಳದಿಂದ ನೊಂದು ಸಾಮೂಹಿಕವಾಗಿ ಇತರ ಧರ್ಮವನ್ನು ಸ್ವೀಕರಿಸಿ ಬಿಡುತ್ತಿದ್ದರು. ಕೇರಳವನ್ನು ಉಳಿಸಿದ್ದು ಶಂಕರಾಚಾರ್ಯರ ಜಾತೀಯತೆ ಅಲ್ಲ, ನಾರಾಯಣ ಗುರುಗಳ ಜಾತ್ಯತೀತತೆ. ಇಂತಹ ಮಹಾನ್ ವ್ಯಕ್ತಿಯ ಸ್ತಬ್ಧಚಿತ್ರವನ್ನು ತಿರಸ್ಕರಿಸುವ ಮೂಲಕ, ಕೇಂದ್ರ ಸರಕಾರ ಜಾತೀಯತೆಯನ್ನು ಎತ್ತಿ ಹಿಡಿದಿದೆ. ನಾರಾಯಣ ಗುರುಗಳ ತತ್ವ ವಿಚಾರಗಳಿಗೆ ಗೌರವವಿಲ್ಲದ ಗಣರಾಜ್ಯ, ಜಾತೀಯತೆಯ ಹೆಗ್ಗಣ ರಾಜ್ಯವಷ್ಟೇ.

ಕಳೆದ ಬಾರಿಯ ಗಣರಾಜ್ಯ ರೈತರಿಗೆ ಅರ್ಪಣೆಯಾಯಿತು. ಈ ಬಾರಿಯ ಗಣರಾಜ್ಯ ನಾರಾಯಣ ಗುರುಗಳಿಗೆ ಅರ್ಪಣೆಯಾಗಬೇಕಾಗಿದೆ. ಕಳೆದ ವರ್ಷ ರೈತರ ಟ್ರಾಕ್ಟರ್ ರ್ಯಾಲಿ ವಿಶ್ವಾದ್ಯಂತ ಸುದ್ದಿಯಾಗಿ, ಕೊನೆಗೂ ರೈತರಿಗೆ ಕೇಂದ್ರ ತಲೆಬಾಗುವಂತಾಯಿತು. ಹಾಗೆಯೇ, ನಾರಾಯಣ ಗುರುಗಳ ವ್ಯಕ್ತಿತ್ವ, ವಿಚಾರಧಾರೆಗಳನ್ನು ಕೇಂದ್ರಕ್ಕೆ ತಲುಪಿಸುವ ನಿಟ್ಟಿನಲ್ಲಿ ಈ ಬಾರಿಯ ಗಣರಾಜ್ಯ ಬಳಕೆಯಾಗಬೇಕು. ನಾರಾಯಣ ಗುರುಗಳನ್ನು ಎತ್ತಂಗಡಿ ಮಾಡಿ, ಆ ಜಾಗದಲ್ಲಿ ಶಂಕರಾಚಾರ್ಯರ ಜಾತೀಯತೆಯನ್ನು ಸ್ಥಾಪಿಸುವ ಹುನ್ನಾರಗಳನ್ನು ಈ ಮೂಲಕ ವಿಫಲಗೊಳಿಸಬೇಕು. ಕಳೆದೆರಡು ವರ್ಷಗಳಿಂದ ಪ್ರಭುತ್ವದ ಗಣರಾಜ್ಯೋತ್ಸವ ಒಂದೆಡೆ ನಡೆಯುತ್ತಿದ್ದರೆ ಪರ್ಯಾಯವಾಗಿ ಜನಸಾಮಾನ್ಯರ ಗಣರಾಜ್ಯೋತ್ಸವ ನಡೆಯತೊಡಗಿವೆ. ಈ ಬಾರಿ ನಮ್ಮ ಗಣರಾಜ್ಯೋತ್ಸವಕ್ಕೆ ಅಂಬೇಡ್ಕರ್ ಅವರ ಜೊತೆಗೆ, ನಾರಾಯಣ ಗುರುಗಳ ನೇತೃತ್ವ ದೊರಕುವಂತಾಗಬೇಕು. ಕೇಂದ್ರ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು ಮಾತ್ರವಲ್ಲ, ದಿಲ್ಲಿಯಲ್ಲಿ ನಾರಾಯಣ ಗುರುಗಳ ಬೃಹತ್ ಪ್ರತಿಮೆಯೊಂದನ್ನು ಸ್ಥಾಪಿಸಿ ಕೇಂದ್ರ ಸರಕಾರ ತನ್ನ ಕೃತ್ಯಕ್ಕೆ ಪ್ರಾಯಶ್ಚಿತ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲ ಶೋಷಿತ ಸಮುದಾಯ ಒಂದಾಗಿ ಗಣರಾಜ್ಯೋತ್ಸವದ ದಿನ ನಾರಾಯಣ ಗುರುಗಳ ಸ್ತಬ್ಧಚಿತ್ರದೊಂದಿಗೆ ಬೀದಿ ಬೀದಿಯಲ್ಲಿ ಮೆರವಣಿಗೆ ಹೊರಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)