varthabharthi


ವಿಶೇಷ-ವರದಿಗಳು

ಪ್ರಜಾಪ್ರಭುತ್ವದ ಯಶಸ್ಸಿಗಾಗಿ ಸಂವಿಧಾನದ ಅರಿವು ಅಗತ್ಯ

ವಾರ್ತಾ ಭಾರತಿ : 26 Jan, 2022
ಚೆನ್ನರಾಜ ದಾನವ - ಇರಸವಾಡಿ, ಚಾಮರಾಜನಗರ

1950ರ ಜನವರಿ 26ನೇ ದಿನ ಭಾರತವು ಸಂವಿಧಾನವೆಂಬ ಸರ್ವಸಮ್ಮತ ಆಡಳಿತ ಸಿದ್ಧಾಂತವೊಂದನ್ನು ಅಳವಡಿಸಿಕೊಂಡ ದಿನವಾಗಿದೆ. ಭಾರತದಂತಹ ವೈವಿಧ್ಯಮಯ ರಾಷ್ಟ್ರವೊಂದರಲ್ಲಿ ವಿವಿಧ ಧರ್ಮಗಳ ಅನುಯಾಯಿಗಳಿಗೆ ಹಲವಾರು ಹಬ್ಬಗಳಿರುವಂತೆಯೇ ಭಾರತದ ಪ್ರತಿಯೊಬ್ಬ ಪ್ರಜೆಯೂ ಆಚರಿಸಬೇಕಾದ ರಾಷ್ಟ್ರೀಯ ಹಬ್ಬಗಳಿವೆ. ಅದರಲ್ಲಿ ಪ್ರತಿ ಸಂವತ್ಸರದ ಜನವರಿ-26 ರಂದು ಆಚರಿಸುವ ಸಂವಿಧಾನ ಜಾರಿಗೆ ಬಂದ ದಿನವೂ ಸಹ ಒಂದು. ಭಾರತದಲ್ಲಿ ಹಿಂದಿನಿಂದಲೂ ಹಲವಾರು ರಾಜಮನೆತನಗಳು ಪ್ರಜೆಗಳ ನಾಯಕತ್ವವನ್ನು ವಹಿಸಿಕೊಂಡು ಆಡಳಿತ ನಡೆಸಿವೆ. ಅದರಲ್ಲಿ ಕೆಲವು ರಾಜರು ಮಾತ್ರ ಜನಮೆಚ್ಚುವ ಆಡಳಿತ ನಡೆಸಿ ಇಂದಿಗೂ ಪ್ರಜೆಗಳ ಮನಸ್ಸಿನಲ್ಲಿ ಗೌರವ ಸ್ಥಾನ ಪಡೆದಿದ್ದಾರೆ. 1947ರ ಆಗಸ್ಟ್-15 ರಂದು ಭಾರತವು ಬ್ರಿಟಿಷರ ಆಡಳಿತದಿಂದ ವಿಮುಕ್ತಿ ಪಡೆದು ಸ್ವಾಯತ್ತ ಸ್ಥಾನಮಾನವನ್ನು ಪಡೆಯಿತು. ನಂತರ ದೇಶದಲ್ಲಿ ಹಿಂದೆ ಇದ್ದ ರಾಜಪ್ರಭುತ್ವಗಳ ಬದಲಾಗಿ ಜನರಿಂದ ಆಯ್ಕೆಯಾದ ಪ್ರಜಾಪ್ರಭುತ್ವ ಸರಕಾರವನ್ನು ರಚಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಅದರಂತೆ ಬ್ರಿಟೀಷರು 1946ರ ಮಧ್ಯಭಾಗದಲ್ಲಿ ಭಾರತೀಯರಿಗೆ ಸ್ವಾತಂತ್ರ್ಯದ ನಂತರ ಆಡಳಿತ ನಡೆಸಲು ಅನುಕೂಲವಾಗುವಂತೆ ಒಂದು ಸಂವಿಧಾನವನ್ನು ರಚಿಸಿಕೊಳ್ಳುವಂತೆ ಕರೆಕೊಟ್ಟರು. ವಿವಿಧ ಧರ್ಮ-ಜಾತಿಗಳ ಹೆಸರಿನಲ್ಲಿ ವಿಘಟನೆಗೊಂಡಿದ್ದ ಭಾರತೀಯರಿಗೆ ಮಾನವೀಯತೆ, ಸಮಾನತೆ, ಸ್ವಾತಂತ್ರ್ಯ, ಸಹೋದರತೆಗಳೆಂಬ ತತ್ವಗಳ ತಳಪಾಯದೊಂದಿಗೆ ಸುಭದ್ರವಾದ ಸಂವಿಧಾನವನ್ನು ರಚಿಸಿಕೊಳ್ಳುವುದೆಂದರೆ ಅದೊಂದು ಕಠಿಣ ಕರ್ಮವೇ ಸರಿ. ಸಾವಿರಾರು ವರ್ಷಗಳ ಕಾಲ ಪರಾಧೀನರಾಗಿದ್ದ ಭಾರತೀಯರಿಗೆ ದೊರೆತ ಸ್ವಾತಂತ್ರ್ಯವೆಂಬ ಹೋರಾಟದ ಫಲವನ್ನು ಉಳಿಸಿಕೊಂಡು ಸಫಲತೆ ಸಾಧಿಸಬೇಕಾದರೆ ಸಂವಿಧಾನವೆಂಬ ಅಸ್ತ್ರದ ಅಗತ್ಯವಿತ್ತು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭಗಳಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಇಂದಿನ ಯುವಪೀಳಿಗೆಗೆ ಒಂದು ಕಿವಿಮಾತನ್ನು ಹೇಳುತ್ತಾರೆ. ಅದೇನೆಂದರೆ, ಇಂದು ನೀವು ಅನುಭವಿಸುತ್ತಿರುವ ಸ್ವಾತಂತ್ರ್ಯವೆಂಬ ಫಲದ ಹಿಂದೆ ಹಲವಾರು ದೇಶಪ್ರೇಮಿಗಳ ಶ್ರಮವಿದೆ. ಅದಕ್ಕಾಗಿ ಕೆಲವರು ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಮಹಾತ್ಮರು ಹೋರಾಡಿ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ನೀವು ಸ್ವೇಚ್ಛಾಚಾರವನ್ನಾಗಿಸಬೇಡಿ ಎನ್ನುತ್ತಾರೆ. ಇದರಂತೆಯೇ ಈ ದೇಶದ ಸಂವಿಧಾನದ ಹಿಂದೆಯೂ ಒಂದು ಸಂಘರ್ಷದ ಇತಿಹಾಸವಿದೆ. ಇಂದಿನ ಭಾರತದ ಸಂವಿಧಾನವು ಒಬ್ಬ ವ್ಯಕ್ತಿ ತನ್ನ ಮನೋಇಚ್ಛೆಗೆ ಬಂದಂತೆ ರಚಿಸಿ, ಬಹುಜನರ ಮೇಲೆ ಹೇರಿದ ಮನುಧರ್ಮಶಾಸ್ತ್ರದಂತೆ ಅಲ್ಲ, ಅದು ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಎಂಬ ಮಹಾನ್ ಮಾನವತಾವಾದಿಯು ಈ ದೇಶದ ಸರ್ವಜನರ ಬೇಕು-ಬೇಡಗಳನ್ನು ಅರಿತು ಜನಾಭಿಪ್ರಾಯಕ್ಕೆ ಬದ್ಧರಾಗಿ ನಿರ್ಮಿಸಿಕೊಟ್ಟಿರುವ ಒಂದು ಪ್ರಬಲ ಅಸ್ತ್ರವಾಗಿದೆ. ಇಂತಹ ಸಂವಿಧಾನ ಜಾರಿಗೆ ಬಂದ ದಿನವೇ ಇಂದು ನಾವೆಲ್ಲಾ ಆಚರಿಸುತ್ತಿರುವ ಗಣರಾಜ್ಯೋದಯ ದಿನವಾಗಿದೆ.

ಸಂವಿಧಾನ ರಚನೆಯ ಹಿಂದಿನ ಸಂಘರ್ಷದ ಇತಿಹಾಸವನ್ನು ಅರಿಯದ ಹೊರತು ಅದರ ಮಹತ್ವ ನಮಗೆ ತಿಳಿಯಲಸಾಧ್ಯ. ಬ್ರಿಟಿಷರು ಕೊಟ್ಟ ಸ್ವಾತಂತ್ರ್ಯದ ಭರವಸೆಯೊಂದಿಗೆ ಸಂವಿಧಾನದ ರಚನಾ ಕಾರ್ಯಕ್ಕಾಗಿ 1946ರಲ್ಲಿ ದೇಶದಲ್ಲಿ ಒಂದು ಪ್ರಾಂತೀಯ ಅಸೆಂಬ್ಲಿ ಚುನಾವಣೆಯು ಜರುಗುತ್ತದೆ. ಈ ಚುನಾವಣೆಯು ಸಂವಿಧಾನ ರಚನಾಕಾರರನ್ನು ಜನರೇ ನಿರ್ಧರಿಸಬೇಕಾದ ವಿಧಾನವಾಗಿರುತ್ತದೆ. ಹಿಂದೆಲ್ಲಾ ಕೆಲವು ದೇಶೀಯ ಸಂಸ್ಥಾನಗಳನ್ನು ಹೊರತುಪಡಿಸಿ ಬಹುಪಾಲು ಪ್ರಾಂತಗಳಲ್ಲಿ ಮತದಾನದ ಹಕ್ಕು ಕೇವಲ ಭೂಮಾಲಕರು, ಶ್ರೀಮಂತರು, ಪದವೀಧರರು, ಮೇಲಂತಸ್ಥಿನಲ್ಲಿ ಕುಳಿತ ಕೆಲವೇ ವರ್ಗಗಳಿಗೆ ಸೀಮಿತವಾಗಿತ್ತು. ಆದರೆ ಅಂಬೇಡ್ಕರ್ ಅವರ ಶ್ರಮದಿಂದಾಗಿ ಈ ದೇಶದ ಪ್ರತಿಯೊಬ್ಬ ವಯಸ್ಕ ಪ್ರಜೆಗೂ ಮತ ನೀಡುವ ಅಧಿಕಾರ ದೊರೆಯಿತು. ಸಂವಿಧಾನ ರಚನಾ ಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಪಾಲು ಕ್ಷೇತ್ರಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂಬ ಒಂದು ಸ್ವಾತಂತ್ರ್ಯ ಹೋರಾಟಗಾರರ ಸಂಸ್ಥೆ/ಪಕ್ಷ, ಮುಸ್ಲಿಂ ಲೀಗ್, ಹಿಂದೂ ಮಹಾಸಭಾ ಹಾಗೂ ಡಾ. ಅಂಬೇಡ್ಕರ್‌ರವರ ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟದ ಅಭ್ಯರ್ಥಿಗಳು ಸ್ಪರ್ಧಿಸಿದರು. ಆದರೆ ಕೆಲವು ಪ್ರತಿಗಾಮಿ ಶಕ್ತಿಗಳ ತಂತ್ರ-ಕುತಂತ್ರದೆದುರು ಅಂಬೇಡ್ಕರ್ ಎಂಬ ಶೋಷಿತರ ಶಕ್ತಿಯು ಕ್ಷೀಣಿಸಿ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಜಯಗೊಳ್ಳಬೇಕಾಯಿತು. ತನ್ನದೇ ಆದ ವಿಭಿನ್ನ ಆಲೋಚನೆಗಳ ಮೂಲಕ ಸಂವಿಧಾನ ರೂಪಿಸಲು ಹೊರಟಿದ್ದ ಒಬ್ಬ ರಾಜಕೀಯ ಪ್ರಬುದ್ಧರನ್ನು ಈ ರೀತಿ ವಾಮಮಾರ್ಗದ ಮೂಲಕ ಸೋಲಿಸಬೇಕಾದ ಅನಿವಾರ್ಯತೆಗೆ ಯಾರು ಹೊಣೆ? ಬಾಬಾಸಾಹೇಬರು ದುಂಡುಮೇಜಿನ ಸಭೆಯಲ್ಲಿ ಹೋರಾಟ ಮಾಡಿ ತಂದಿದ್ದ ದಲಿತರಿಗೆ ಪ್ರತ್ಯೇಕ ಚುನಾಯಕವೆಂಬ ಹಕ್ಕಿನ ವಿರುದ್ಧ ಗಾಂಧೀಜಿ ನಡೆಸಿದ ಪ್ರತಿಗಾಮಿತನದ ಮುಂದುವರಿದ ಭಾಗ ಇದಾಗಿರಬಹುದಲ್ಲವೇ? ಆನಂತರ ಪೂರ್ವ ಬಂಗಾಳ ಪ್ರಾಂತದಿಂದ ಚುನಾಯಿತರಾಗಿದ್ದ ಮುಸ್ಲಿಂ ಲೀಗ್ ಬೆಂಬಲಿತ ದಲಿತ ನಾಯಕರಾದ ಜೋಗೇಂದ್ರನಾಥ ಮಂಡಲ್ ಅವರು ರಾಜೀನಾಮೆ ನೀಡಿ ಆ ಸ್ಥಾನದಿಂದ ಸಂವಿಧಾನ ರಚನಾ ಸಭೆಗೆ ಅಂಬೇಡ್ಕರ್ ಅವರು ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದರು. ಆದರೆ ಅಂಬೇಡ್ಕರ್ ಅವರ ಪ್ರತಿಗಾಮಿ ಶಕ್ತಿಗಳು ಸುಮ್ಮನೇ ಕೂರಲಿಲ್ಲ. ಅವರು ಪ್ರತಿನಿಧಿಸಿದ್ದ ಪೂರ್ವ ಬಂಗಾಳ ಪ್ರಾಂತವನ್ನು ದೇಶವಿಭಜನೆಯಿಂದಾಗಿ ಪಾಕಿಸ್ತಾನಕ್ಕೆ ಸೇರಿಸುವಲ್ಲಿ ಸಫಲರಾದರು. ಭಾರತೀಯರೆಲ್ಲರ ಹಿತಕಾಯುವಲ್ಲಿ ಕಂಕಣಬದ್ಧರಾಗಿದ್ದ ಅಂಬೇಡ್ಕರ್‌ರವರು ರಾಜೀನಾಮೆ ನೀಡಿ ಸಂವಿಧಾನ ರಚನಾ ಸಭೆಯಿಂದ ಹೊರಗುಳಿಯಬೇಕಾಯಿತು. ವಿಶ್ವಜ್ಞಾನಿಯೊಬ್ಬರ ಅನುಪಸ್ಥಿತಿಯಲ್ಲಿ ರಚನೆಗೊಳ್ಳುವ ಸಂವಿಧಾನವನ್ನು ಕಲ್ಪಿಸಿಕೊಂಡ ಬ್ರಿಟಿಷರು ಮಾಡಿದ ತಾಕೀತಿನೊಂದಿಗೆ ಅಂಬೇಡ್ಕರ್ ಅವರನ್ನು ಅವರ ಪ್ರತಿಗಾಮಿಗಳು ಒಲ್ಲದ ಮನಸ್ಸಿನಿಂದ ಸಂವಿಧಾನ ರಚನಾ ಸಭೆಗೆ ಸ್ವಾಗತಿಸಬೇಕಾಯಿತು.

ಇಂತಹ ಒಂದು ಸಂಘರ್ಷದ ಹಾದಿ ಕ್ರಮಿಸಿ ಬಂದ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯ ಪ್ರತಿಯೊಂದು ಸಭೆಯಲ್ಲೂ ಸಕ್ರಿಯವಾಗಿ ಭಾಗವಹಿಸಿ ಚರ್ಚಿಸುತ್ತಿದ್ದರು. ಈ ಸಭೆಯಲ್ಲಿ ಅಂಬೇಡ್ಕರ್ ಸಹಿತವಾಗಿ ಪಂಡಿತ್ ಜವಾಹರಲಾಲ್ ನೆಹರೂ, ಡಾ. ಬಾಬು ರಾಜೇಂದ್ರ ಪ್ರಸಾದ್, ಮೌಲಾನಾ ಅಬುಲ್ ಕಲಾಂ ಆಝಾದ್, ಶ್ಯಾಮ್ ಪ್ರಸಾದ್ ಮುಖರ್ಜಿಯವರಂತಹ ಪ್ರಮುಖರ ಜೊತೆಗೆ ಆಂಗ್ಲೋ-ಇಂಡಿಯನ್ ಸಮುದಾಯದ ಪ್ರತಿನಿಧಿಯಾಗಿ ಫ್ರಾಂಕ್ ಆ್ಯಂಟನಿ, ಪಾರ್ಸಿ ಜನರ ಪ್ರತಿನಿಧಿಯಾಗಿ ಎಚ್.ಪಿ.ಮೋದಿ, ಭಾರತೀಯ ಕ್ರೈಸ್ತರ ಪ್ರತಿನಿಧಿಯಾಗಿ ಹರೇಂದ್ರಕುಮಾರ್ ಮುಖರ್ಜಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಬಿ.ಎನ್.ರಾವ್, ಕೆ.ಎಂ.ಮುನ್ಷಿ, ಮಹಿಳಾ ಪ್ರತಿನಿಧಿಗಳಾಗಿ ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮೀ ಪಂಡಿತ್ ಸೇರಿದಂತೆ ಅನೇಕ ಸದಸ್ಯರಿದ್ದರು. ಜೊತೆಗೆ ಮೀಸಲು ಕ್ಷೇತ್ರಗಳಲ್ಲಿ ವಿಜೇತರಾಗಿದ್ದ 30ಕ್ಕೂ ಹೆಚ್ಚು ನಿಮ್ನವರ್ಗದ ಪ್ರತಿನಿಧಿಗಳೂ ಇದ್ದರು. ರಚನಾ ಸಭೆಯ ತಾತ್ಕಾಲಿಕ ಅಧ್ಯಕ್ಷರಾಗಿ ಡಾ. ಸಚ್ಚಿದಾನಂದ ಸಿನ್ಹಾ ಅವರು ಮೊದಲು ಅಧ್ಯಕ್ಷರಾಗಿದ್ದರು. ನಂತರ ಶಾಶ್ವತ ಅಧ್ಯಕ್ಷತೆಯನ್ನು ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ವಹಿಸಿಕೊಂಡರು. 1946ರ ಡಿಸೆಂಬರ್-9 ರಂದು ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ನಡೆಯಿತು. 1947ರ ಆಗಸ್ಟ್-29ರಂದು ಸಂವಿಧಾನ ಕರಡು ಸಮಿತಿಯೊಂದನ್ನು ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಇವರ ಜೊತೆಗೆ ಪಂ. ವಲ್ಲಭ ಪಂತ್, ಕೆ.ಎಂ.ಮುನ್ಷಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಬಿ.ಎನ್.ಮಿತ್ತಲ್, ಮುಹಮ್ಮದ್ ಸಾದುಲ್ಲಾ ಮತ್ತು ಡಿ.ಪಿ.ಖೈತನ್ ಅವರನ್ನು ಸದಸ್ಯರಾಗಿ ಆಯ್ಕೆಮಾಡಲಾಯಿತು. ಬಿ.ಎನ್.ರಾವ್ ಅವರನ್ನು ಸಂವಿಧಾನಾತ್ಮಕ ಸಲಹೆಗಾರರನ್ನಾಗಿ ನೇಮಿಸಲಾಯಿತು. ನಂತರದ ದಿನಗಳಲ್ಲಿ ಒಬ್ಬ ಸದಸ್ಯರ ರಾಜೀನಾಮೆ, ಮತ್ತೊಬ್ಬ ಸದಸ್ಯರ ನಿಧನ, ಇನ್ನೊಬ್ಬರ ವಿದೇಶ ಪ್ರವಾಸ ಹಾಗೂ ಉಳಿದವರ ಗೈರುಹಾಜರಿಯಲ್ಲಿ ಅಂಬೇಡ್ಕರ್ ಅವರು ಸಿದ್ಧಪಡಿಸಿದ ಕರಡು ಪ್ರತಿಯಲ್ಲಿನ ಕೆಲವು ಅಂಶಗಳನ್ನು ತ್ಯಜಿಸಿ, 2000 ತಿದ್ದುಪಡಿಗಳ ನಂತರ ಅಂತಿಮವಾಗಿ 1949ರ ನವೆಂಬರ್ 26 ರಂದು ಕರಡು ಸಂವಿಧಾನಕ್ಕೆ ಸಮಿತಿ ಸದಸ್ಯರುಗಳ ಒಪ್ಪಿಗೆ ದೊರೆಯಿತು. 2 ವರ್ಷ, 11 ತಿಂಗಳು 18 ದಿನಗಳ ಕಾಲ ಸತತ ಪರಿಶ್ರಮದಿಂದ ಅಂಬೇಡ್ಕರ್ ರಚಿಸಿದ ಕರಡು ಪ್ರತಿಗೆ ಒಟ್ಟು 166 ದಿನಗಳ ಅಧಿವೇಶನದಲ್ಲಿ ಅಂಗೀಕಾರ ದೊರೆಯಿತು. ಪ್ರತಿಯೊಂದು ಅಧಿವೇಶನದಲ್ಲಿಯೂ ಸಂವಿಧಾನದ ಕರಡು ಪ್ರತಿಯ ಪ್ರತಿಯೊಂದು ಪದಗಳ ಕುರಿತು ಸುದೀರ್ಘ, ವಿವರಣಾತ್ಮಕ ಭಾಷಣದ ಮೂಲಕ ಸ್ಪಷ್ಟೀಕರಣ ನೀಡಿದ ಬಾಬಾಸಾಹೇಬರ ಪಾಂಡಿತ್ಯವನ್ನು ಮೆಚ್ಚಿಯೇ ಅವರಿಗೆ ವಿಶ್ವದ ಬುದ್ಧಿವಂತರ ಸಾಲಿನಲ್ಲಿ ಪ್ರಥಮ ಸ್ಥಾನ ನೀಡಲಾಗಿದೆ.

ಸಂವಿಧಾನ ಕರಡು ಪ್ರತಿಯ ಎಲ್ಲಾ ಅಂಶಗಳನ್ನು ಭಾರತದ ಸಂವಿಧಾನವಾಗಿ ಸಿದ್ಧಪಡಿಸಿದ ಹಿಂದಿ ಮತ್ತು ಇಂಗ್ಲಿಷ್ ಆವೃತ್ತಿಯ 2 ಪ್ರತಿಗಳನ್ನು ರಚನಾ ಸಭೆಯ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್, ನೆಹರೂ, ವಲ್ಲಭಬಾಯ್ ಪಟೇಲ್ ಅವರು ಸಂವಿಧಾನ ಶಿಲ್ಪಿಗಳಿಂದ ಸ್ವೀಕರಿಸಿ ದೇಶದ ಸಂವಿಧಾನವನ್ನಾಗಿ ಅಳವಡಿಸಿಕೊಳ್ಳಲಾಯಿತು. 1947ರ ಆಗಸ್ಟ್-15ರಂದು ಸ್ವಾತಂತ್ರ್ಯ ಪಡೆದು ಸ್ವಾಯತ್ತ ರಾಷ್ಟ್ರವಾದ ಭಾರತವು 1950ರ ಜನವರಿ-26ರಂದು ಪ್ರಜಾರಾಜ್ಯವಾಯಿತು. ಆದರೆ ಈ ದಿನವನ್ನು ಗಣರಾಜ್ಯೋದಯ ದಿನವನ್ನಾಗಿ ಆಚರಿಸುವ ಬದಲು ಸಂವಿಧಾನ ದಿನವನ್ನಾಗಿ ಆಚರಿಸುವುದು ಹೆಚ್ಚು ಅರ್ಥಪೂರ್ಣವಾಗಿದೆ. ಏಕೆಂದರೆ, ಗಣರಾಜ್ಯ ಎಂಬುದು ಭಾರತ ಸಂವಿಧಾನದ ಒಂದು ಭಾಗವಷ್ಟೇ ಆಗಿದೆ. ಆದರೆ ಈ ದಿನವು ಸಾರ್ವಭೌಮ ರಾಷ್ಟ್ರವಾದ ಭಾರತವು ಸಮಾಜವಾದಿ, ಸರ್ಮಧರ್ಮ ಸಮಭಾವದ, ಪ್ರಜಾಸತ್ತಾತ್ಮಕ ಗಣರಾಜ್ಯವಾದ ದಿನವಾಗಿದೆ. ಗಣರಾಜ್ಯವೆಂಬ ಅಂಶವು ಸೇರಿದಂತೆ ಹಲವಾರು ಆಡಳಿತ ಸೂತ್ರದ ಸಮಷ್ಠಿಪ್ರಜ್ಞೆಯ ಸಂಕೇತವಾದ ಸಂವಿಧಾನವು ಜಾರಿಗೆ ಬಂದ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಿ, ಈ ದೇಶದ ಪ್ರಜೆಗಳಾದ ನಾವು ಸಂವಿಧಾನದ ಅರಿವು ಪಡೆಯಬೇಕಾಗಿದೆ. ಭಾರತದ ಸಂವಿಧಾನವು ದೇಶದ ಆಡಳಿತಕ್ಕೆ ಪೂರಕವಾದ ನಿಯಮಗಳು, ಸರ್ವರೂ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವದಿಂದ ಜೀವಿಸಲು ಅವಶ್ಯಕವಾದ ಮೂಲಭೂತ ಹಕ್ಕುಗಳು, ಪ್ರಜೆಗಳು ಪಾಲಿಸಬೇಕಾದ ಕೆಲವು ಮೂಲಭೂತ ಕರ್ತವ್ಯಗಳು ಹಾಗೂ ಕಾಲಕಾಲಕ್ಕೆ ಬದಲಾವಣೆಗೊಳಪಡಲು ತಿದ್ದುಪಡಿಗಳೆಂಬ ಅಂಶಗಳ ಗಣಿಯಾಗಿದೆ. ಇಂತಹ ಒಂದು ಬೃಹತ್ ಸಂವಿಧಾನವನ್ನು ವಿಶ್ವದ ಎಲ್ಲಾ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಶ್ಲಾಘಿಸಿರುವುದೇ ಭಾರತದ ನಿಜವಾದ ಹಿರಿಮೆಯಾಗಿದೆ. ಇದಕ್ಕೆ ಕಾರಣ ಡಾ. ಅಂಬೇಡ್ಕರ್ ಅವರಂತಹ ಮೇಧಾವಿಗಳ ಕಠಿಣ ಪರಿಶ್ರಮವಾಗಿದೆ.

ಇಂದು ದೇಶದಲ್ಲಿ ನಡೆಯುತ್ತಿರುವ ಜನವಿರೋಧಿ ಚಟುವಟಿಕೆಗಳಿಗೆ ಈ ದೇಶದ ಪ್ರಜೆಗಳಾದ ನಾವೇ ಹೊಣೆ. ಇದಕ್ಕೆಲ್ಲಾ ಪರಿಹಾರವನ್ನು ಕಂಡುಕೊಳ್ಳಬೇಕಾದರೆ ಜನಪ್ರತಿನಿಧಿಗಳಿಗೂ ಮುನ್ನ ಜನರಾದ ನಮಗೆ ಸಂವಿಧಾನದ ಅರಿವು ಅಗತ್ಯವಾಗಿದೆ. ಯಾಕೆಂದರೆ, ನಾವೇ ತಾನೆ ನಮ್ಮ ಪ್ರತಿನಿಧಿಗಳನ್ನು ಆರಿಸುವುದು. ಮೊದಲು ನಾವು ತಿಳಿದುಕೊಂಡರೆ ಆನಂತರ ಸಂವಿಧಾನದ ಬಗ್ಗೆ ತಿಳುವಳಿಕೆ ಇರುವ ವ್ಯಕ್ತಿಗಳನ್ನು ನಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡುತ್ತೇವೆ. ಏಕೆಂದರೆ ಭಾರತದ ಇಂದಿನ ಸಮಸ್ಯೆಗಳಿಗೆಲ್ಲಾ ಸಂವಿಧಾನದಲ್ಲಿ ಪರಿಹಾರವಿದೆ. ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರು ಇಂದು ನಮಗೆ ಕೊಟ್ಟಿರುವ ಸಂವಿಧಾನದ ಹಿಂದೆ ಒಂದು ಸಂಘರ್ಷದ ಇತಿಹಾಸವಿದೆ. ಯಾವುದನ್ನಾದರೂ ಸರಿ ಶ್ರಮಪಟ್ಟು ಸಂಪಾದಿಸಿದರೆ ಮಾತ್ರ ಅದರ ಮಹತ್ವ ಅರ್ಥವಾಗುವುದು. ಅಂಬೇಡ್ಕರ್ ಅವರು ಶ್ರಮಪಟ್ಟು ರಚಿಸಿಕೊಟ್ಟಿರುವ ಸಂವಿಧಾನದಲ್ಲಿ ದೇಶದ ಹಿತ ಅಡಗಿದೆ. ಬನ್ನಿ... ಅದಕ್ಕಾಗಿ ಮೊದಲು ಸಂವಿಧಾನದ ಬಗ್ಗೆ ಅರಿಯೋಣ... ನಂತರ ದೇಶ ಪ್ರಗತಿಪಥದೆಡೆಗೆ ಮುನ್ನಡೆಯಲು ನಾವು ಕಾರಣರಾಗೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)