varthabharthi


ಕಾಲಂ 9

ಇವಿಎಂ ಸುಧಾರಣೆಯೂ ಮತ್ತು ವಿರೋಧ ಪಕ್ಷಗಳ ರಾಜಕೀಯ ವೈಫಲ್ಯವೂ!

ವಾರ್ತಾ ಭಾರತಿ : 26 Jan, 2022
ಶಿವಸುಂದರ್

ಈಗಲೂ ಮತಪಟ್ಟಿಯಲ್ಲಿ ಮಹಿಳೆಯರ ಮತ್ತು ಮುಸ್ಲಿಮರ ಹೆಸರುಗಳೇ ಮಾಯವಾಗುವ, ಮತಗಟ್ಟೆಗೆ ಬರದಂತೆ ಬೆದರಿಸುವ ಅಥವಾ ದುಡ್ಡುಕೊಟ್ಟು ಅವರ ಗುರುತುಚೀಟಿಗಳನ್ನು ಅಡ ಇಟ್ಟುಕೊಳ್ಳುವ ಚುನಾವಣಾ ಅಕ್ರಮಗಳು ನಿರಾತಂಕವಾಗಿ ನಡೆಯುತ್ತಲೇ ಇವೆ. ಆದರೆ ಅದು ಮತಗಟ್ಟೆಯ ಹೊರಗೆ ಮುಂದುವರಿಯುತ್ತಿರುವ ಅಕ್ರಮಗಳು. ಆದರೆ ಮತಗಟ್ಟೆಯ ಒಳಗೆ ಬ್ಯಾಲೆಟ್ ಪೇಪರ್ ವ್ಯವಸ್ಥೆಯಲ್ಲಿ ಬಲಪ್ರಯೋಗ ಮತ್ತು ಭ್ರಷ್ಟಾಚಾರದ ಮೂಲಕ ನಡೆಯುತ್ತಿದ್ದ ಮತಗಟ್ಟೆ ವಶ ಮತ್ತು ರಿಗ್ಗಿಂಗ್‌ನಂತಹ ಚುನಾವಣಾ ಅಕ್ರಮಗಳು ಇವಿಎಂ ವ್ಯವಸ್ಥೆಯಲ್ಲಿ ನಡೆಯುತ್ತಿಲ್ಲ. ಅಷ್ಟು ಮಾತ್ರ ನಿಜ.

ಆದರೆ ಚಲಾಯಿತ ಮತಗಳೇ ಮತ್ತೊಂದು ಪಕ್ಷಕ್ಕೆ ವರ್ಗಾಯಿಸಿಬಿಡುವಂತಹ ತಾಂತ್ರಿಕ ರಿಗ್ಗಿಂಗ್‌ಗಳು ನಡೆಯಬಹುದಾದ ಸಾಧ್ಯತೆಗಳು ಇಲ್ಲವೇ ಇಲ್ಲ ಎನ್ನುವ ಬಗ್ಗೆ ವಿರೋಧ ಪಕ್ಷಗಳಿಗಿನ್ನೂ ಖಾತರಿ ಬರುತ್ತಿಲ್ಲ.

ಮನುಷ್ಯ ಕಂಡುಹಿಡಿಯುವ ಯಾವುದೇ ಯಂತ್ರ ಪರಿಪೂರ್ಣವೇನಲ್ಲ. ಸದ್ಯಕ್ಕೆ ಒಂದು ಯಂತ್ರ ಸಮಸ್ಯೆ ಕೊಡುತ್ತಿಲ್ಲ ಎಂದ ಮಾತ್ರಕ್ಕೆ ಅದು ಸಮಸ್ಯಾ ಮುಕ್ತವೆಂದೇನೂ ಅಲ್ಲ. ಇದು ಇಲೆಕ್ಟ್ರಾನಿಕ್ ವೋಟಿಂಗ್ ಮೆಶೀನ್ (ಇವಿಎಂ)ಗೂ ಅನ್ವಯಿಸುತ್ತದೆ.

ಹಾಗೆ ನೋಡಿದರೆ 2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ 542 ಕ್ಷೇತ್ರಗಳಲ್ಲಿ 347 ಕ್ಷೇತ್ರಗಳ ಮತಗಳ ಎಣಿಕೆಯಲ್ಲಿ ಹಲವು ಲೋಪದೋಷಗಳಿದ್ದವು. ಒಟ್ಟಾರೆ ಚಲಾವಣೆಯಾದ ಮತಗಳಿಗಿಂತ ಇವಿಎಂ ಯಂತ್ರವು ಕೆಲವು ಕಡೆ ಹೆಚ್ಚು ಮತ್ತು ಕೆಲವು ಕಡೆ ಕಡಿಮೆ ಮತಗಳ ಎಣಿಕೆಯನ್ನು ತೋರಿಸಿತ್ತು. ಈ ವ್ಯತ್ಯಾಸ ಒಂದು ಮತದಿಂದ ಹಿಡಿದು ಒಂದು ಲಕ್ಷ ಮತದವರೆಗೂ ಇತ್ತು. ಹಾಗೆಯೇ ಇವಿಎಂ ಮತಗಳ ಮತ್ತು ವಿವಿಪ್ಯಾಟ್ ಮತಗಳ ತಾಳೆಯನ್ನು ಮಾಡಿದ 26,000 ಕ್ಷೇತ್ರಗಳಲ್ಲಿ ನಾಲ್ಕು ಕಡೆ ತಾಳೆಯಾಗಿರಲಿಲ್ಲ.

ಈ ಯಾವುದೇ ವ್ಯತ್ಯಾಸಗಳು 2019ರ ಚುನಾವಣಾ ಜಯಾಪಜಯಗಳ ಮೇಲೆ ಯಾವುದೇ ಪ್ರಭಾವ ಬೀರದಿದ್ದರೂ ಇವಿಎಂ ವ್ಯವಸ್ಥೆ ತಾಂತ್ರಿಕವಾಗಿ ಮತ್ತು ಆಡಳಿತಾತ್ಮಕವಾಗಿ ಇನ್ನೂ ಸುಧಾರಿಸಬೇಕಾದ ಅಗತ್ಯ ಇದೆಯೆಂಬುದನ್ನು ಮಾತ್ರ ಸಾರಿ ಹೇಳುತ್ತದೆ. ಆದರೆ ಸರಕಾರ ಮತ್ತು ಚುನಾವಣಾ ಆಯೋಗ ಈ ಅಗತ್ಯವನ್ನು ನಿರಾಕರಿಸುತ್ತಾ ಬಂದಿವೆ. ಅವು ಇವಿಎಂ ವ್ಯವಸ್ಥೆಯಲ್ಲಿ ಎಲ್ಲವೂ ಅದ್ಭುತವಾಗಿದೆ ಎಂದು ಪ್ರತಿಪಾದಿಸುವಾಗ ಸಹಜವಾಗಿ ಇಡೀ ಇವಿಎಂ ವ್ಯವಸ್ಥೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಒಂದು ಪಟ್ಟಭದ್ರ ಹಿತಾಸಕ್ತಿ ಇದೆ ಎಂಬ ಭಾವನೆ ಬಲಿಯುವುದು ಸಹಜ. ಅದಕ್ಕೆ ಸರಕಾರ ಮತ್ತು ಚುನಾವಣಾ ಆಯೋಗವೇ ಹೊಣೆಗಾರರು.

ಒಂದು ಪ್ರಜಾತಂತ್ರದಲ್ಲಿ ಜನರ ನೈಜ ಆತಂಕಗಳು ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಅಥವಾ ಬದಲಾಯಿಸುವ ಅವಕಾಶಗಳನ್ನು ಒದಗಿಸುತ್ತದೆ. ಇವಿಎಂಗಳ ಸುತ್ತ ಎದ್ದಿರುವ ಅನುಮಾನಗಳು ಭಾರತದ ಪ್ರಜಾತಂತ್ರಕ್ಕೆ ಅಂತಹ ಒಂದು ಅವಕಾಶವನ್ನು ಒದಗಿಸುತ್ತಿದೆ. ಆದರೆ ಈಗ ದೇಶದಲ್ಲಿ ಇವಿಎಂಗಳ ಬಗ್ಗೆ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಮತ್ತು ಆ ಬಗ್ಗೆ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳನ್ನು ನೋಡಿದರೆ ಭಾರತವು ತನ್ನ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಪ್ರಜಾತಾಂತ್ರೀಕರಿಸಬಹುದಾದ ಅವಕಾಶಗಳನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.

ಈ ದುರದೃಷ್ಟಕರ ಬೆಳವಣಿಗೆಯ ಪ್ರಧಾನ ಮತ್ತು ಮೊದಲ ಹೊಣೆಗಾರಿಕೆಯನ್ನು ಹೊರಬೇಕಾದವರು ಸರ್ವಾಧಿಕಾರಿ ಧೋರಣೆಯ ಬಿಜೆಪಿ ಸರಕಾರ, ಪಕ್ಷಪಾತಿ ಚುನಾವಣಾ ಆಯೋಗ ಹಾಗೂ ಸುಪ್ರೀಂ ಕೋರ್ಟು. ಇದರ ಜೊತೆಗೆ ತಮ್ಮೆಲ್ಲಾ ರಾಜಕೀಯ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇವಿಎಂ ಬಗ್ಗೆ ಇರುವ ಸಹಜ ಅನುಮಾನಗಳನ್ನು ನೆಪವಾಗಿ ಬಳಸಿಕೊಳ್ಳುತ್ತಿರುವ ವಿರೋಧ ಪಕ್ಷಗಳ ಅವಕಾಶವಾದಿ ಸಂಕುಚಿತ ರಾಜಕೀಯಗಳಿಗೂ ಇದರಲ್ಲಿ ತನ್ನದೇ ಆದ ಪಾಲಿದೆ.

ಇವಿಎಂ-ರೌಡಿ ರಿಗ್ಗಿಂಗ್ ತಡೆಗಟ್ಟಿತು, ಡಿಜಿಟಲ್ ರಿಗ್ಗಿಂಗ್ ?

ಭಾರತದ ಚುನಾವಣೆಗಳಲ್ಲಿ 1998ರಲ್ಲಿ ಮೊತ್ತಮೊದಲ ಬಾರಿಗೆ ಇವಿಎಂಗಳನ್ನು ಪ್ರಯೋಗಾರ್ಥವಾಗಿ ಬಳಸಲಾಯಿತು. ನಂತರದಲ್ಲಿ ನಡೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಕೆಯನ್ನು ಹಂತಹಂತವಾಗಿ ಹೆಚ್ಚಿಸುತ್ತಾ 2007ರ ವೇಳೆಗೆ ಇವಿಎಂ ಬಳಕೆಯನ್ನು ಸಾರ್ವತ್ರೀಕರಿಸಲಾಯಿತು. ಈ ಮಧ್ಯೆ ಇವಿಎಂ ಬಳಕೆಯನ್ನು ಶಾಸನಬದ್ಧಗೊಳಿಸುವ ಕಾನೂನೊಂದನ್ನು ಸಹ ಸಂಸತ್ತಿನಲ್ಲಿ ಪಾಸು ಮಾಡಲಾಯಿತು.

ಇವಿಎಂ ಬಳಕೆಗೆ ಮುಂಚೆ ಭಾರತದಲ್ಲಿ ಬ್ಯಾಲೆಟ್ ಪೇಪರ್‌ಗಳನ್ನು ಬಳಸಲಾಗುತ್ತಿತ್ತು. ಆಗ ಎಲ್ಲೆಡೆ ಅದರಲ್ಲೂ ವಿಶೇಷವಾಗಿ ಆಂಧ್ರ, ತೆಲಂಗಾಣ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಬೂತ್ ವಶಪಡಿಸಿಕೊಳ್ಳುವುದು ಮತ್ತು ನಕಲಿ ಮತಗಳನ್ನು ಹಾಕುವುದರ ಮೂಲಕ ರಿಗ್ಗಿಂಗ್ ಮಾಡುವುದು ಸಹಜ ವಿದ್ಯಮಾನವಾಗಿಬಿಟ್ಟಿತ್ತು. ಶೇಷನ್ ಅವರು ಚುನಾವಣಾ ಆಯುಕ್ತರಾಗಿದ್ದಾಗ ಬಿಹಾರದ ಎರಡು ಕ್ಷೇತ್ರಗಳಲ್ಲಿ ವ್ಯಾಪಕ ರಿಗ್ಗಿಂಗ್ ನಡೆದ ಕಾರಣಕ್ಕಾಗಿ ಆ ಚುನಾವಣೆಯನ್ನೇ ರದ್ದುಗೊಳಿಸಿದ್ದರು. ಹೀಗೆ ಆಗಿನ ಬ್ಯಾಲೆಟ್ ಪೇಪರ್ ಬಳಕೆಯ ಚುನಾವಣೆಯು ಭಾರತದ ಪ್ರಜಾತಂತ್ರದ ಅಣಕದಂತೆ ನಡೆಯುತ್ತಿತ್ತು. ಅದನ್ನು ತಡೆಗಟ್ಟುವ ಉದ್ದೇಶದಿಂದ ಇವಿಎಂ ಯಂತ್ರ ಬಳಕೆ ಪ್ರಾರಂಭವಾಯಿತು.

ಇಂದಿನ ಚುನಾವಣೆಗಳಲ್ಲಿ ಇವಿಎಂ ಅನ್ನು ಬಳಸುವ ಮೂಲಕ ಅಂತಹ ಎಲ್ಲಾ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವುದರಲ್ಲಿ ಯಶಸ್ವಿಯಾಗಿದ್ದೇವೆಯೇ?

ಇವಿಎಂ ಪರ ವಿರೋಧಿಗಳೆಲ್ಲರೂ ಇವಿಎಂ ಬಳಕೆಯಿಂದ ಬ್ಯಾಲೆಟ್ ಪೇಪರ್ ಚುನಾವಣಾ ಪದ್ಧತಿಯಲ್ಲಿದ್ದ ರಿಗ್ಗಿಂಗ್ ಮತ್ತು ಬೂತ್ ವಶದಂತಹ ಅಕ್ರಮಗಳು ನಿಂತಿವೆ ಎಂದು ಒಪ್ಪಿಕೊಳ್ಳುತ್ತಾರೆ.

ಏಕೆಂದರೆ ಇವಿಎಂ ಯಂತ್ರದಲ್ಲಿ ಒಂದು ನಿಮಿಷಕ್ಕೆ ಕೇವಲ ಐದು ಮತಗಳನ್ನು ಮಾತ್ರ ಚಲಾಯಿಸಬಹುದಾಗಿದೆ. ಹೀಗಾಗಿ ಚುನಾವಣಾ ಪರಿಣಾಮಗಳನ್ನೇ ಬದಲಿಸುವಷ್ಟು ದೊಡ್ಡ ಮಟ್ಟದಲ್ಲಿ ರಿಗ್ಗಿಂಗ್ ಮಾಡಬೇಕೆಂದರೆ ಕೆಲವು ಗಂಟೆಗಳೇ ಬೇಕಾಗುತ್ತದೆ. ಅದು ಸಾಧ್ಯವಿಲ್ಲದ ಮಾತು. ಇದಲ್ಲದೆ ಇವಿಎಂ ಯಂತ್ರದಲ್ಲಿ ‘ಕ್ಲೋಸ್’ ಬಟನ್ ನೀಡಲಾಗಿದೆ. ಒಮ್ಮೆ ಚುನಾವಣಾಧಿಕಾರಿ ಕ್ಲೋಸ್ ಬಟನ್ ಒತ್ತಿದರೆ ಆ ಯಂತ್ರವು ವೋಟುಗಳನ್ನು ತೆಗೆದುಕೊಳ್ಳುವುದಿಲ್ಲ.

ಇದರ ಬಗ್ಗೆ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಮತ್ತು ಬ್ರೂಕಿಂಗ್ ಇನ್‌ಸ್ಟಿಟ್ಯೂಟ್‌ನ ವಿದ್ವಾಂಸರು 2017ರಲ್ಲಿ ಒಂದು ಅಧ್ಯಯನ ನಡೆಸಿದ್ದಾರೆ. ಅದರಲ್ಲಿ ಅವರು 1997-2007ರ ನಡುವೆ ಬ್ಯಾಲೆಟ್ ಪೇಪರ್ ಪದ್ಧತಿಯಲ್ಲಿ ಮತ್ತು ಇವಿಎಂ ಬಳಸಿ ನಡೆದ 135ಕ್ಕೂ ಹೆಚ್ಚು ಚುನಾವಣೆಗಳ ಅಧ್ಯಯನ ಮಾಡಿ ಇವಿಎಂ ಬಳಕೆಯಿಂದ ಆದ ಸತ್ಪರಿಣಾಮಗಳನ್ನು ಪಟ್ಟಿ ಮಾಡಿದ್ದಾರೆ. ಆ ವರದಿಯ ಪ್ರಕಾರ ಇವಿಎಂ ಬಳಕೆಯಾದ ಪ್ರದೇಶಗಳಲ್ಲಿ ರಿಗ್ಗಿಂಗ್ ನಿಂತಿದೆ. ಮೊದಲಿಗಿಂತ ವೋಟಿನ ಪ್ರಮಾಣ ತಗ್ಗಿದೆ. ಅರ್ಥಾತ್ ನಕಲಿ ಮತದಾರರ ಸಂಖ್ಯೆ ಕಡಿಮೆಯಾಗಿದೆ. ಚುನಾವಣಾ ಸಂಬಂಧಿ ಹಿಂಸಾಚಾರಗಳು ಇವಿಎಂ ವ್ಯವಸ್ಥೆಯಲ್ಲಿ ಕಡಿಮೆಯಾಗಿದೆ ಮತ್ತು ಇವಿಎಂ ವ್ಯವಸ್ಥೆಯಲ್ಲಿ ಹೆಂಗಸರು, ದಲಿತರು ಮತ್ತು ವೃದ್ಧರು ವೋಟು ಹಾಕುವ ಪ್ರಮಾಣ ಬ್ಯಾಲೆಟ್ ಪೇಪರ್ ಪದ್ಧತಿಗಿಂತ ಹೆಚ್ಚಾಗಿದೆ.

ಇದೆಲ್ಲವೂ ನಿಜವೇ. ಆ ವರದಿಯಲ್ಲಿ ಇರಬಹುದಾದ ಅಲ್ಪಸ್ವಲ್ಪಉತ್ಪ್ರೇಕ್ಷೆಗಳ ಬಗ್ಗೆ ತಕರಾರಿರಬಹುದಾದರೂ ಬ್ಯಾಲೆಟ್ ಪದ್ಧತಿಯಲ್ಲಿ ನಡೆಯುತ್ತಿದ್ದ ಅಕ್ರಮಗಳು ಇವಿಎಂನಲ್ಲಿ ನಡೆಯುವುದಿಲ್ಲ ಎನ್ನುವುದನ್ನು ನಿರಾಕರಿಸಲಾಗುವುದಿಲ್ಲ.

ಆದರೆ ವಿರೋಧ ಪಕ್ಷಗಳ ಮತ್ತು ಇವಿಎಂ ವ್ಯವಸ್ಥೆಯನ್ನು ವಿರೋಧಿಸುವವರ ಪ್ರಶ್ನೆ ಇರುವುದು ಇವಿಎಂ ವ್ಯವಸ್ಥೆಯಲ್ಲಿ ನಡೆಯಬಹುದಾದ ಸುಧಾರಿತ, ಆಮೂಲಾಗ್ರ ತಾಂತ್ರಿಕ ರಿಗ್ಗಿಂಗ್‌ನ ಸಾಧ್ಯತೆಗಳ ಬಗ್ಗೆ.

ಇವಿಎಂ ವಿರೋಧಿಗಳ ವಾದ:

 ಇವಿಎಂಗೆ ಬಳಸುವ ಕಂಪ್ಯೂಟರ್‌ಗಳನ್ನು ಹೊರಗಿನಿಂದ ಟ್ಯಾಂಪರ್ ಮಾಡಬಹುದಾದ (ಅಕ್ರಮವಾಗಿ ತಿದ್ದುವ) ಮತ್ತು ಒಂದು ಪಕ್ಷಕ್ಕೆ ಹಾಕಿದ ಮತಗಳು ಸಾರಾಸಗಟಾಗಿ ಮತ್ತೊಂದು ಪಕ್ಷಕ್ಕೆ ವಿಶೇಷವಾಗಿ ಬಿಜೆಪಿಗೆ ಬೀಳುವ ಸಾಧ್ಯತೆ ಕುರಿತು ಇವಿಎಂ ವಿರೋಧಿಗಳು ಸಕಾರಣವಾದ ಆತಂಕಗಳನ್ನು ವ್ಯಕ್ತಪಡಿಸುತ್ತಾರೆ.

 ಹಾಗೆ ನೋಡಿದರೆ ಇಂತಹ ಆತಂಕವನ್ನು ಮೊದಲು ವ್ಯಕ್ತಪಡಿಸಿದ್ದು ಬಿಜೆಪಿ ಪಕ್ಷವೇ. 2009ರ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲಿಗೆ ಗುರಿಯಾದ ಬಿಜೆಪಿ ಅದಕ್ಕೆ ಇವಿಎಂ ಅನ್ನು ದೂರುತ್ತಾ ದೊಡ್ಡ ಗೊಂದಲವನ್ನೇ ಹುಟ್ಟುಹಾಕಿತ್ತು. ಬಿಜೆಪಿಯ ಜಿವಿಎಲ್ ನರಸಿಂಹರಾವ್ ಎಂಬವರು ಇವಿಎಂನ ಅಪಾಯದ ಬಗ್ಗೆ ‘ಡೆಮಾಕ್ರಸಿ ಅಟ್ ರಿಸ್ಕ್’ ಎಂಬ ಪುಸ್ತಕವನ್ನೇ ಬರೆದರು. ಆ ಪಕ್ಷದ ಸುಬ್ರಮಣಿಯನ್ ಸ್ವಾಮಿಯವರು ಇವಿಎಂನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನ ಮೆಟ್ಟಿಲನ್ನೂ ಏರಿದ್ದರು. ಇಷ್ಟೆಲ್ಲಾ ಹಗರಣ ಮಾಡಿದ ಬಿಜೆಪಿ 2014ರಲ್ಲಿ ಅಷ್ಟೇ ಅನಿರೀಕ್ಷಿತ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಮಾತ್ರ ಇವಿಎಂ ಅನ್ನು ಹಾಡಿಹೊಗಳುತ್ತಾ ಅದನ್ನು ಆಕ್ಷೇಪಿಸುವ ವಿರೋಧಿಗಳನ್ನು ಅವಹೇಳನ ಮಾಡಲು ಪ್ರಾರಂಭಿಸಿತು.

ಭಾರತದಲ್ಲಿ ಬಳಸಲಾಗುತ್ತಿರುವ ಇವಿಎಂಗಳ ಕುರಿತು ಮಿಚಿಗನ್ ವಿಶ್ವವಿದ್ಯಾನಿಲಯದ ಪ್ರೊಫೆಸರುಗಳು ಮತ್ತು ಹೈದರಾಬಾದಿನ ಇಂಜಿನಿಯರುಗಳು ಜಂಟಿಯಾಗಿ ಅಧ್ಯಯನ ನಡೆಸಿ 2010ರಲ್ಲಿ ವರದಿಯೊಂದನ್ನು ನೀಡಿದ್ದರು. ಅದರಲ್ಲಿ ಅವರು ಆಗ ಭಾರತವು ಬಳಸುತ್ತಿದ್ದ ಇವಿಎಂ ಯಂತ್ರಗಳು ಸಂಪೂರ್ಣವಾಗಿ ದುರ್ಬಳಕೆ ಮುಕ್ತವಲ್ಲವೆಂದು ಪ್ರತಿಪಾದಿಸಿದ್ದರು ಮತ್ತು ಅದನ್ನು ಸಾಬೀತು ಮಾಡಲು ಬೇಕಿದ್ದ ತಾಂತ್ರಿಕ ಕಾರಣಗಳನ್ನು ನೀಡಿದ್ದರು. ಇವಿಎಂ ಉತ್ಪಾದನೆಯ ಹಂತದಲ್ಲಿ ಜೋಡಿಸುವ ಆಪರೇಟಿಂಗ್ ಸಿಸ್ಟಮ್ ಅನ್ನು ಮತದಾನದ ನಂತರ ಬದಲಿಸುವ ಮೂಲಕ ಅಥವಾ ಇವಿಎಂಗೆ ಬಳಸುವ ಚಿಪ್ ಅನ್ನು ದೂರಸಂಪರ್ಕದಿಂದ ಮರುಪ್ರೋಗ್ರಾಮಿಂಗ್ ಮಾಡುವ ಮೂಲಕ ಇವಿಎಮ್ ಅನ್ನು ಟ್ಯಾಂಪರ್ (ಅಂದರೆ ತಮಗೇ ಬೇಕಾದಂತೆ ಅಳಿಸಿ ಬರೆಯಬಹುದು) ಮಾಡಬಹುದು ಎನ್ನುವುದು ಅವರ ಪ್ರತಿಪಾದನೆಯ ಸಾರಾಂಶ.

ಇದಲ್ಲದೆ ಭಾರತವನ್ನು ಬಿಟ್ಟರೆ ಬೇರೆಲ್ಲೂ ಇವಿಎಂ ಅನ್ನು ಬಳಸುತ್ತಿಲ್ಲವೆಂದೂ, ಜರ್ಮನಿಯಲ್ಲೂ ಮೊದಲು ಇವಿಎಂ ಬಳಸುತ್ತಿದ್ದವರು ಈಗ ಅದನ್ನು ಕೈಬಿಟ್ಟಿದ್ದಾರೆಂದೂ ಇವಿಎಂ ವಿರೋಧಿಗಳು ಹೇಳುತ್ತಾರೆ. ಮಿಚಿಗನ್ ವರದಿ ಮತ್ತು ಇತರರ ಆಕ್ಷೇಪಣೆಗಳು ಸಾರದಲ್ಲಿ ಪ್ರತಿಪಾದಿಸುವುದಿಷ್ಟು: ಭಾರತದಲ್ಲಿ ಬಳಸಲಾಗುತ್ತಿರುವ ಇವಿಎಂ ಯಂತ್ರಗಳನ್ನು ಇಂಟರ್‌ನೆಟ್ ಅಥವಾ ವೈಫೈ ಅಥವಾ ಇನ್ಯಾವುದೇ ನಿಸ್ತಂತು ತರಂಗಾಂತರ ತಂತ್ರಜ್ಞಾನವನ್ನು ಬಳಸಿ ಹ್ಯಾಕ್ ಮಾಡಬಹುದು ಮತ್ತು ಫಲಿತಾಂಶಗಳನ್ನು ಬದಲಿಸಬಹುದು.

ಇವಿಎಂ ಪರವಾದಿಗಳ ಸಮರ್ಥನೆಗಳು:

ಆದರೆ ಬಿಜೆಪಿ, ಚುನಾವಣಾ ಆಯೋಗ ಹಾಗೂ ಸುಪ್ರೀಂಕೋರ್ಟು ಈ ಬಗೆಯ ತಾಂತ್ರಿಕ ರಿಗ್ಗಿಂಗ್‌ನ ತಾಂತ್ರಿಕ ಮತ್ತು ಆಡಳಿತಾತ್ಮಕ ಸಾಧ್ಯತೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತವೆ. ಅಲ್ಲದೆ ಇತ್ತೀಚೆಗೆ ಎಡಪಂಥೀಯ ಚಿಂತನೆಗಳುಳ್ಳ ‘ಇಂಡಿಯಾ ಫೋರಂ’ ಸಂಘಟನೆ ನಡೆಸಿದ ಅಧ್ಯಯನವೂ ಭಾರತದ ಇವಿಎಂ ಅನ್ನು ಅದರ ವಿರೋಧಿಗಳು ಹೇಳುವ ರೀತಿಯಲ್ಲಿ ಹ್ಯಾಕ್ ಮಾಡಲು ಸಾಧ್ಯವಿಲ್ಲವೆಂದು ಹೇಳುತ್ತದೆ. ಒಂದು ಕಂಪ್ಯೂಟರ್ ಇಂಟರ್‌ನೆಟ್‌ನೊಂದಿಗೆ ಸಂಪರ್ಕದಲ್ಲಿದ್ದರೆ ಖಂಡಿತಾ ಅದನ್ನು ವಿಶ್ವದಲ್ಲಿ ಎಲ್ಲಿದ್ದರೂ ಹ್ಯಾಕ್ ಮಾಡಿ ಬಯಸಿದಂತೆ ಫಲಿತಾಂಶಗಳನ್ನು ಬದಲಿಸಿಕೊಳ್ಳಬಹುದು. ಆದರೆ ನಾವು ಬಳಸುವ ಇವಿಎಂಗಳಿಗೆ ಇಂಟರ್‌ನೆಟ್ ಸಂಪರ್ಕವೂ ಇಲ್ಲ ಮತ್ತು ಭಾರತದಲ್ಲಿ ಇಂಟರ್‌ನೆಟ್ ವೋಟಿಂಗ್ ಪದ್ಧತಿ ಇಲ್ಲ. ಅದಲ್ಲದೆ ಕಂಪ್ಯೂಟರ್‌ಗಳು ವಿಂಡೋಸ್ ಇತ್ಯಾದಿ ನಿರ್ದಿಷ್ಟವಾದ ಆಪರೇಟಿಂಗ್ ಸಿಸ್ಟಮ್ ಬಳಸಿದರೆ ಅದರ ಮೂಲ ಕರ್ತೃಗಳು ಇಂಟರ್‌ನೆಟ್ ಇಲ್ಲದೆಯೂ ತಿದ್ದಬಹುದು ಎನ್ನುವುದು ನಿಜ. ಆದರೆ ಈ ಇವಿಎಂಗಳಲ್ಲಿ ಆಪರೇಟಿಂಗ್ ಸಿಸ್ಟಮೇ ಇಲ್ಲ. ಅವು ಒಂದು ಬಗೆಯ ದೊಡ್ಡ ಕ್ಯಾಲ್ಕುಲೇಟರ್‌ಗಳೇ ವಿನಃ ಕಂಪ್ಯೂಟರ್ ಅಲ್ಲ ಹಾಗೂ ಅದರಲ್ಲಿ ಬಳಸುವ ಚಿಪ್‌ಗಳು ಒಮ್ಮೆ ಮಾತ್ರ ಬಳಸಿ ಬಿಸಾಕಬಹುದಾದ ಚಿಪ್‌ಗಳೇ ವಿನಃ ಮರುಪ್ರೋಗ್ರಾಮಿಂಗ್ ಸಾಧ್ಯವಿಲ್ಲ. ಇದು ಇವಿಎಂ ಟ್ಯಾಂಪರಿಂಗ್ ಸಾಧ್ಯವಿಲ್ಲ ಎನ್ನುವವರ ತಾಂತ್ರಿಕ ವಾದದ ಸಾರಾಂಶ.

ಇದಲ್ಲದೆ ಇವಿಎಂ ಮಾದರಿಯಲ್ಲಿ ಚುನಾವಣಾ ಪಕ್ಷಗಳ ಸಮ್ಮುಖದಲ್ಲಿ ಮತ್ತು ಅವರ ಸಮ್ಮತಿಯೊಂದಿಗೆ ನಡೆಯುವ ಇವಿಎಂ ಸ್ಯಾಂಪ್ಲಿಂಗ್, ಪೂರ್ವಭಾವಿ ಅಣಕು ಮತದಾನ, ಸ್ಪರ್ಧಿಗಳ ಚಿಹ್ನೆಯನ್ನು ಇವಿಎಂನಲ್ಲಿ ದಾಖಲಿಸಲು ತೆಗೆದುಕೊಳ್ಳುವ ಕೆಲವು ಆಡಳಿತಾತ್ಮಕ ಕ್ರಮಗಳು ಕೂಡಾ ತಾಂತ್ರಿಕ ರಿಗ್ಗಿಂಗ್‌ಗಳನ್ನು ಇಲ್ಲವಾಗಿಸುತ್ತದೆ ಎಂದು ಅವರು ಪ್ರತಿಪಾದಿಸುತ್ತಾರೆ. ಇದಲ್ಲದೆ ಇವಿಎಂಗಳಲ್ಲಿ ಸ್ಪರ್ಧಿಗಳ ಹೆಸರನ್ನು ದಾಖಲಿಸುವಾಗ ಪಕ್ಷಗಳ ಹೆಸರಿನ ಕಾಗುಣಿತದ ಅನುಕ್ರಮಣಿಕೆಯನ್ನು ಅನುಸರಿಸುವುದಿಲ್ಲ. ಪ್ರತಿ ಕ್ಷೇತ್ರದ ಸ್ಪರ್ಧಿಗಳ ಹೆಸರುಗಳ ಕಾಗುಣಿತದ ಅನುಕ್ರಮಣಿಕೆಯನ್ನು ಅನುಸರಿಸಲಾಗುತ್ತದೆ. ಅದು ಪ್ರತಿ ಕ್ಷೇತ್ರಕ್ಕೂ ಬದಲಾಗುತ್ತಾ ಹೋಗುತ್ತದೆ. ಇದೂ ಕೂಡಾ ದೊಡ್ಡ ಮಟ್ಟದ ತಾಂತ್ರಿಕ ರಿಂಗ್ಗಿಂಗ್ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ.

ಇವಲ್ಲದೆ 2013ರಲ್ಲಿ ಸುಪ್ರೀಂ ಕೋರ್ಟು ಇವಿಎಂನ ಜೊತೆಜೊತೆಗೆ ವೋಟರ್ ವೆರಿಫಯ್ಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಯಂತ್ರವನ್ನು ಎಂದರೆ ಇವಿಎಮ್ ಯಂತ್ರದಲ್ಲಿ ಓಟು ಹಾಕಿದಾಗ ತಾನು ಹಾಕಿದ ಪಕ್ಷಕ್ಕೆ ಮತಚಲಾವಣೆಯಾಗಿದೆಯೇ ಎಂದು ತೋರಿಸುವ ಮತ್ತು ಅದರ ಕಾಗದ ದಾಖಲೆಯನ್ನು ಸಂಗ್ರಹಿಸುವ ಯಂತ್ರವನ್ನು ಬಳಸಬೇಕೆಂದೂ ಕಡ್ಡಾಯ ಮಾಡಿದೆ. 2014ರಲ್ಲಿ ಪ್ರಯೋಗಾರ್ಥವಾಗಿ ಶುರುವಾದ ವಿವಿಪ್ಯಾಟ್‌ನ ಪ್ರಯೋಗಾರ್ಥ ಬಳಕೆ ಈಗ ಎಲ್ಲೆಡೆಯೂ ಕಡ್ಡಾಯವಾಗಿದೆ. ಅಲ್ಲದೆ ಪ್ರತಿ ಅಸೆಂಬ್ಲಿ ಕ್ಷೇತ್ರದಲ್ಲಿ ಒಂದು ಇವಿಎಂ ಯಂತ್ರದಂತೆ ದೇಶದ್ಯಂತ 4,400 ಇವಿಎಂ ಎಣಿಕೆಯು ವಿವಿಪ್ಯಾಟ್ ಎಣಿಕೆಯ ಜೊತೆ ತಾಳೆಯಾಗಬೇಕಿದೆ. ಇದಲ್ಲದೆ 21 ವಿರೋಧ ಪಕ್ಷಗಳು ಸುಪ್ರೀಂ ಕೋರ್ಟಿಗೆ ಅಹವಾಲೊಂದನ್ನು ಸಲ್ಲಿಸಿ ಅಸೆಂಬ್ಲಿ ಕ್ಷೇತ್ರಕ್ಕೆ ಒಂದರಂತಲ್ಲದೆ ಶೇ.50ರಷ್ಟು ವಿವಿಪ್ಯಾಟ್ ಸಂಗ್ರಹವನ್ನು ಇವಿಎಂ ಮತಗಳೊಂದಿಗೆ ತಾಳೆಯಾಗುವುದು ಕಡ್ಡಾಯಗೊಳಿಸಬೇಕೆಂದು ಮನವಿ ಸಲ್ಲಿಸಿದ್ದವು. ಸುಪ್ರೀಂ ಕೋರ್ಟು ಅದನ್ನು ಪ್ರಾಯಶಃ ಪುರಸ್ಕರಿಸಿ ಪ್ರತಿ ಅಸೆಂಬ್ಲಿ ಕ್ಷೇತ್ರಕ್ಕೆ ಒಂದರ ಬದಲು ಐದು ವಿವಿಪ್ಯಾಟ್‌ಗಳನ್ನು ತಾಳೆ ಮಾಡಬೇಕೆಂದು ಆದೇಶಿಸಿದೆ. ಆದರೆ ಇದರ ಬಗ್ಗೆ ವಿರೋಧಪಕ್ಷಗಳು ಮತ್ತೊಮೆ ಮೇಲ್ಮನವಿ ಸಲ್ಲಿಸಿ ಶೇ.50ರಷ್ಟು ವಿವಿಪ್ಯಾಟ್ ತಾಳೆ ಆಗಬೇಕೆಂದು ಮರುಮನವಿ ಮಾಡಿವೆ.

ಇದು ಇಲ್ಲಿಯವರೆಗಿನ ಕಥೆ.

ಆದರೆ ಇದು ಭಾರತದ ಚುನಾವಣಾ ಪ್ರಜಾತಂತ್ರದ ಇತರ ಮೂಲಭೂತ ಸಮಸ್ಯೆಗಳನ್ನೂ ಬಗೆಹರಿಸಿಬಿಟ್ಟಿವೆಯೆಂದೇನಲ್ಲ. ಈಗಲೂ ಮತಪಟ್ಟಿಯಲ್ಲಿ ಮಹಿಳೆಯರ ಮತ್ತು ಮುಸ್ಲಿಮರ ಹೆಸರುಗಳೇ ಮಾಯವಾಗುವ, ಮತಗಟ್ಟೆಗೆ ಬರದಂತೆ ಬೆದರಿಸುವ ಅಥವಾ ದುಡ್ಡುಕೊಟ್ಟು ಅವರ ಗುರುತುಚೀಟಿಗಳನ್ನು ಅಡ ಇಟ್ಟುಕೊಳ್ಳುವ ಚುನಾವಣಾ ಅಕ್ರಮಗಳು ನಿರಾತಂಕವಾಗಿ ನಡೆಯುತ್ತಲೇ ಇವೆ. ಆದರೆ ಅದು ಮತಗಟ್ಟೆಯ ಹೊರಗೆ ಮುಂದುವರಿಯುತ್ತಿರುವ ಅಕ್ರಮಗಳು. ಆದರೆ ಮತಗಟ್ಟೆಯ ಒಳಗೆ ಬ್ಯಾಲೆಟ್ ಪೇಪರ್ ವ್ಯವಸ್ಥೆಯಲ್ಲಿ ಬಲಪ್ರಯೋಗ ಮತ್ತು ಭ್ರಷ್ಟಾಚಾರದ ಮೂಲಕ ನಡೆಯುತ್ತಿದ್ದ ಮತಗಟ್ಟೆ ವಶ ಮತ್ತು ರಿಗ್ಗಿಂಗ್‌ನಂತಹ ಚುನಾವಣಾ ಅಕ್ರಮಗಳು ಇವಿಎಂ ವ್ಯವಸ್ಥೆಯಲ್ಲಿ ನಡೆಯುತ್ತಿಲ್ಲ. ಅಷ್ಟು ಮಾತ್ರ ನಿಜ.

ಆದರೆ ಚಲಾಯಿತ ಮತಗಳೇ ಮತ್ತೊಂದು ಪಕ್ಷಕ್ಕೆ ವರ್ಗಾಯಿಸಿಬಿಡುವಂತಹ ತಾಂತ್ರಿಕ ರಿಗ್ಗಿಂಗ್‌ಗಳು ನಡೆಯಬಹುದಾದ ಸಾಧ್ಯತೆಗಳು ಇಲ್ಲವೇ ಇಲ್ಲ ಎನ್ನುವ ಬಗ್ಗೆ ವಿರೋಧ ಪಕ್ಷಗಳಿಗಿನ್ನೂ ಖಾತರಿ ಬರುತ್ತಿಲ್ಲ.

ಅದಕ್ಕೆ ಕಾರಣಗಳೂ ಇವೆ. ಏಕೆಂದರೆ ಇತ್ತೀಚೆಗೆ ನಡೆದ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಕೆಲವೊಂದು ನಿರ್ದಿಷ್ಟ ಬೂತುಗಳಲ್ಲಿ ಹಾಕಿದ ಮತಗಳೆಲ್ಲಾ ಬಿಜೆಪಿಗೆ ಹೋದ ದೂರುಗಳು ದಾಖಲಾಗಿವೆ. ಕೆಲವೊಂದು ಕಡೆ ಅಣಕು ಮತದಾನ ನಡೆಸುವಾಗಲೂ ಇದೇ ರೀತಿ ಪತ್ರಕರ್ತರ ಎದುರಿಗೇ ಹಾಕಿದ ಮತಗಳೆಲ್ಲಾ ಬಿಜೆಪಿಗೆ ಹೋದದ್ದು ವರದಿಯಾಗಿದೆ. ಮಹಾರಾಷ್ಟ್ರದ ಕಾರ್ಪೊರೇಷನ್ ಚುನಾವಣೆಗಳಲ್ಲಿ ಸ್ಪರ್ಧಿಯೊಬ್ಬರಿಗೆ ಸೊನ್ನೆ ಮತ ಬಂದಿದೆ. ಅಂದರೆ ತಾನೂ ಕೂಡ ತನಗೆ ವೋಟು ಹಾಕಿಕೊಂಡಿಲ್ಲವೇ ಎಂದು ಅವರು ಹೈಕೋರ್ಟಿನಲ್ಲಿ ಇವಿಎಂ ವಿರುದ್ಧ ದಾವೆ ಹೂಡಿದ್ದಾರೆ.

ಸಿಟಿಜನ್ಸ್ ಕಮಿಟಿಯ ಸಮಗ್ರ ವರದಿ:

ಭಾರತದ ಚುನಾವಣಾ ಪ್ರಜಾತಂತ್ರ ಎದುರಿಸುತ್ತಿರುವ ಈ ಗಂಭೀರ ವಿಶ್ವಾಸದ ಬಿಕ್ಕಟ್ಟಿನ ಬಗ್ಗೆ ಈ ದೇಶದ ಗಣ್ಯರೂ, ವಿದ್ವಾಂಸರನ್ನು ಕೂಡಿದ ನಾಗರಿಕ ಸಮಿತಿಯೊಂದು ಇದರ ಬಗ್ಗೆ ಇತೀಚೆಗೆ ಕೂಲಂಕಶವಾದ ಅಧ್ಯಯನ ನಡೆಸಿ 2021ರ ಎಪ್ರಿಲ್‌ನಲ್ಲಿ ದೇಶದ ಮುಂದೆ ವರದಿಯೊಂದನ್ನು ಮುಂದಿಟ್ಟಿದೆ. ಪ್ರಾಯಶಃ ಈ ಸದ್ಯಕ್ಕೆ ಇವಿಎಂ ಬಗ್ಗೆ ಎದ್ದಿರುವ ವಿವಾದಕ್ಕೆ ಈ ಸಮಿತಿ ಈ ಸಂದರ್ಭಕ್ಕೆ ಸಾಧ್ಯ ಇರುವ ವೈಜ್ಞಾನಿಕ ಹಾಗೂ ಪ್ರಜಾತಂತ್ರಿಕ ಸುಧಾರಣಾ ಪರಿಹಾರಗಳನ್ನು ಒದಗಿಸಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

ಆ ಸಮಿತಿ ಏನು ಶಿಫಾರಸು ಮಾಡಿದೆ ಎಂದು ಅರ್ಥ ಮಾಡಿಕೊಳ್ಳುವ ಮುನ್ನ ಈ ಸಮಿತಿಯಲ್ಲಿ ಇದ್ದ ಸದಸ್ಯರು ಯಾರ್ಯಾರು ಎಂದು ತಿಳಿದುಕೊಳ್ಳುವುದು ಒಳಿತು. ಸಮಿತಿ ಸದಸ್ಯರು: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮದನ್ ಲೋಕೂರ್, ದೇಶದ ಪ್ರಥಮ ಪ್ರಧಾನ ಆರ್‌ಟಿಐ ಕಮಿಷನರ್ ಹಾಗೂ ಹಿರಿಯ ಅಧಿಕಾರಿ ವಜಾಹತ್ ಹಬೀಬುಲ್ಲಾ, ಮದ್ರಾಸ್ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಹರಿಪರಂಧಾಮನ್, ಅರ್ಥಶಾಸ್ತ್ರಜ್ಞ ಮತ್ತು ಜೆಎನ್‌ಯುವಿನ ನಿವೃತ್ತ ಪ್ರೊಫೆಸರ್ ಅರುಣ್ ಕುಮಾರ್, ಅಶೋಕ ವಿಶ್ವವಿದ್ಯಾನಿಲಯದ ಕಂಪ್ಯುಟರ್ ವಿಭಾಗದ ಮುಖ್ಯಸ್ಥ ಪ್ರೊ. ಸುಭಾಶಿಶ್ ಬ್ಯಾನರ್ಜಿ, ಹಿರಿಯ ಪತ್ರಕರ್ತೆ ಪಮೇಲ್ ಫಿಲಿಪೋಸ್, ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರೂ ಆದ ಜಾನ್ ದಯಾಳ್, ಮಹಾರಾಷ್ಟ್ರ ಸರಕಾರದ ಮಾಜಿ ಕಾರ್ಯದರ್ಶಿ ಸುಂದರ್ ಬರುವಾ, ಭಾರತ ಸರಕಾರದ ನಿವೃತ್ತ ಹಿರಿಯ ಅಧಿಕಾರಿ ಎಂಜಿ ದೇವಶ್ಯಾಮ್. ಇವರು ಕೊಟ್ಟಿರುವ ವರದಿಯ ಪೂರ್ಣಪಾಠವನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಪಡೆದುಕೊಳ್ಳಬಹುದು: https://www.cse.iitd.ac.in/~suban/reports/CCEpaper.pdf

ಈ ಸಮಿತಿಯು ಸರಕಾರದಿಂದ, ಸಾರ್ವಜನಿಕರಿಂದ, ವಿಜ್ಞಾನಿಗಳಿಂದ, ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಂದ ಪ್ರತಿಪಾದನೆಗಳನ್ನು ಆಹ್ವಾನಿಸಿ ಅವುಗಳನ್ನು ಸಮಿತಿಯ ಒಳಗಿನ ಹಾಗೂ ಹೊರಗಿನ ಪರಿಣಿತರ ಮತ್ತು ವಿಶ್ಲೇಷಕರ ಪರಿಶೀಲನೆಗೆ ಒಳಪಡಿಸಿ ಅಂತಿಮವಾಗಿ ಈ ಕೆಳಗಿನ ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ.

- ಒಟ್ಟಾರೆಯಾಗಿ ಸಮಿತಿಯು ಇವಿಎಂ ವ್ಯವಸ್ಥೆಯನ್ನು ಸಾರಾಸಗಟಾಗಿ ತಿರಸ್ಕರಿಸಿ ಬ್ಯಾಲೆಟ್ ಪದ್ಧತಿಗೆ ಮರಳಬೇಕೆಂದು ಹೇಳಿಲ್ಲವಾದರೂ ಇವಿಎಂ ವ್ಯವಸ್ಥೆ ಜನರ ಹಾಗೂ ಪ್ರಜಾತಂತ್ರದ ವಿಶ್ವಾಸಗಳಿಸಿ ಕೊಳ್ಳಬೇಕೆಂದರೆ ಸಾಕಷ್ಟು ಸುಧಾರಣೆಯನ್ನು ತುರ್ತಾಗಿ ಮಾಡಬೇಕೆಂದು ಆಗ್ರಹಿಸಿದೆ. - ಯಾವ ತಂತ್ರಜ್ಞಾನವೂ ಶಾಶ್ವತವಾಗಿ ದೋಷ ಅಥವಾ ದುರ್ಬಳಕೆ ಮುಕ್ತ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ಇವಿಎಂ ತಂತ್ರಜ್ಞಾನ ಇನ್ನೂ ವಿಕಾಸಗೊಳ್ಳುತ್ತಿದ್ದು ಈವರೆಗೆ ನಮಗೆ ಗೊತ್ತಿರುವ ಹ್ಯಾಕಿಂಗ್ ತಂತ್ರಜ್ಞಾನದಲ್ಲಿ ದುರ್ಬಳಕೆ ಸಾಧ್ಯವಿಲ್ಲ ಎಂದಷ್ಟೆ ಹೇಳಲು ಸಾಧ್ಯ. ಅದರಲ್ಲೂ ಐಟಿ ತಂತ್ರಜ್ಞಾನ ಅತ್ಯಂತ ವೇಗವಾಗಿ ಮತ್ತು ಮುಕ್ತವಾಗಿ ಬೆಳೆಯುತ್ತಿರುವ ತಂತ್ರಜ್ಞಾನವಾಗಿದೆ. ಹ್ಯಾಕಿಂಗ್ ತಂತ್ರಜ್ಞಾನ ಅದಕ್ಕಿಂತ ವೇಗವಾಗಿ ಬೆಳೆಯುತ್ತಿದೆ. ಮತ್ತದರ ಪ್ರಥಮ ಲಾಭವನ್ನು ಅಧಿಕಾರಸ್ಥರು ಮತ್ತು ಹಣವಂತರು ಪಡೆಯಬಲ್ಲರು. ಈ ವಾಸ್ತವವನ್ನು ಸರಕಾರ, ಆಯೋಗ ಮತ್ತು ಕೋರ್ಟುಗಳು ಪರಿಗಣಿಸಬೇಕು. - ಆದ್ದರಿಂದ ಇಡೀ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು. ಈ ಪ್ರಕ್ರಿಯೆಯಲ್ಲಿ ಬಳಸುವ ಎಲ್ಲಾ ತಂತ್ರಜ್ಞಾನ, ಸಾಫ್ಟ್‌ವೇರ್ ಇನ್ನಿತ್ಯಾದಿ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಮತ್ತು ಅದನ್ನು ಸ್ವತಂತ್ರ ವಿಚಕ್ಷಣೆ ಒಳಪಡಿಸಬೇಕು. ಚುನಾವಣಾ ಆಯೋಗವು ಪರಿಣಿತರ ಮೇಲಿನ ಅವಲಂಬನೆಗಿಂತ ಪ್ರಜಾತಾಂತ್ರಿಕ ಪ್ರಕ್ರಿಯೆಗಳ ಮೇಲೆ ಹೆಚ್ಚು ಅವಲಂಬಿಸಬೇಕು. -ಇವಿಎಂ ತಂತ್ರಜ್ಞಾನದಲ್ಲಿ ಬಳಸುವ ಡಿಜಿಟಲ್ ತಂತ್ರಜ್ಞಾನದ ಸಾಫ್ಟ್ ವೇರ್ ಮತ್ತು ಹಾರ್ಡ್‌ವೇರ್‌ಗಳು ಸ್ವತಂತ್ರವಾಗಿರಬೇಕು ಮತ್ತು ಸರಕಾರ ರಹಸ್ಯ ಪ್ರಕ್ರಿಯೆಯ ಹೆಸರಲ್ಲಿ ಅದರ ಪರಿಣಾಮಕತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ತಡೆಯೊಡ್ಡಬಾರದು.

- ವೋಟಿನ ನಂತರದ ಮತಯಂತ್ರಗಳ ಡಿಜಿಟಲ್ ಬೀಗಮುದ್ರೆ ಹಾಗೂ ಡಿಜಿಟಲ್ ಪ್ರಸರಣೆಗಳ ಅಸಾಧ್ಯತೆಯೂ ಸಾರ್ವಜನಿಕ ವಿಚಕ್ಷಣೆಗೆ ಒಳಪಡಬೇಕು.

- ಮತಚಲಾವಣೆ ಮಾಡಿದ ನಂತರದಲ್ಲಿ ವಿವಿಪ್ಯಾಟ್ ಮುದ್ರಿಕೆಯು ತಾನು ಚಲಾಯಿಸಿದ ಮತಕ್ಕೆ ವಿಭಿನ್ನವಾದ ಮತವನ್ನು ತೋರಿಸಿತು ಎಂದು ಮತದಾರರು ನೀಡುವ ದೂರನ್ನು ಸ್ವತಂತ್ರವಾಗಿ ಬಗೆಹರಿಸುವ ವ್ಯವಸ್ಥೆ ಇರಬೇಕು. ಈಗಿರುವಂತೆ ದೂರು ಸಾಬೀತಾಗದಿದ್ದಲ್ಲಿ ಮತದಾರನಿಗೆ ಶಿಕ್ಷೆ ಕೊಡುವಂತಹ ವ್ಯವಸ್ಥೆ ರದ್ದಾಗಬೇಕು. - ವಿವಿಪ್ಯಾಟ್ ಮತ್ತು ಇವಿಎಂಗಳ ತಾಳೆಯಲ್ಲಿ ವ್ಯತ್ಯಾಸ ಬಂದರೆ ವಿವಿಪ್ಯಾಟ್ ಎಣಿಕೆಯೇ ಮಾನ್ಯವಾಗಬೇಕು ಮತ್ತು ಎಲ್ಲಾ ತಾಳೆಗಳೂ ಪೂರ್ತಿಯಾಗದೆ ಚುನಾವಣಾ ಆಯೋಗ ಫಲಿತಾಂಶವನ್ನು ಘೋಷಿಸಬಾರದು. ಹಾಗೂ ಇದರ ಜೊತೆಗೆ ವಿರೋಧ ಪಕ್ಷಗಳೂ ಒತ್ತಾಯಿಸುತ್ತಿರುವಂತೆ ಶೇ. 50 ಇವಿಎಂಗಳ ವಿವಿಪ್ಯಾಟ್ ತಾಳೆಯಾಗದೆ ಫಲಿತಾಂಶವನ್ನು ಘೋಷಿಸದಂತೆ ತಡೆಯೊಡ್ಡುವುದನ್ನು ಸಹ ಪರಿಗಣಿಸಬೇಕು. ಒಟ್ಟಾರೆಯಾಗಿ ನೋಡುವುದಾದರೆ ಇವಿಎಂ ವ್ಯವಸ್ಥೆಯು ಬ್ಯಾಲೆಟ್ ಪೇಪರ್ ವ್ಯವಸ್ಥೆಯಲ್ಲಿದ್ದ ಬಹುಪಾಲು ಅಕ್ರಮಗಳನ್ನು ತಡೆಗಟ್ಟಿದೆಯೆಂಬುದು ಸತ್ಯ. ಹೀಗಾಗಿ ಮತ್ತೆ ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳಬೇಕೆನ್ನುವ ವಾದ ಮತದಾರರ ದೃಷ್ಟಿಯಲ್ಲಿ ಮತ್ತು ಪ್ರಜಾತಂತ್ರದ ದೃಷ್ಟಿಯಲ್ಲಿ ಆತ್ಮಹತ್ಯಾಕಾರಿ. ಆದರೆ ಅದೇ ಸಮಯದಲ್ಲಿ ಇವಿಎಂ ಫೂಲ್‌ಪ್ರೂಫ್ ಎನ್ನುವುದು ಸಹ ನಯವಂಚನೆ ಮತ್ತು ಮುಠ್ಠಾಳತನ. ಆದ್ದರಿಂದ ಇವಿಎಂ ಯಂತ್ರಗಳ ತಾಂತ್ರಿಕ ದುರ್ಬಳಕೆಗಳ ಸಾಧ್ಯತೆಗಳ ಬಗ್ಗೆ ಕಣ್ಣಾಗಿದ್ದುಕೊಂಡು ಅದರ ಸತತ ಸುಧಾರಣೆಯನ್ನು ಮಾಡುತ್ತಿರಬೇಕು ಮತ್ತು ಸದ್ಯದ ಸಂದರ್ಭದಲ್ಲಿ ಮತದಾರರಲ್ಲಿ ಮತ್ತು ವಿರೋಧಪಕ್ಷಗಳಲ್ಲಿ ವಿಶ್ವಾಸ ಮೂಡಿಸಬಹುದಾದ ಶೇ.50 ವಿವಿಪ್ಯಾಟ್ ತಾಳೆಯನ್ನು ಕಡ್ಡಾಯ ಮಾಡುವುದರ ಜೊತೆಗೆ ಸಿಟಿಜನ್ಸ್ ಕಮಿಟಿಯ ಶಿಫಾರಸುಗಳನ್ನು ಕಡ್ಡಾಯವಾಗಿ ಜಾರಿ ಮಾಡಬೇಕು. ಇದು ತುರ್ತಾಗಿ ಆಗಲೇಬೇಕಿರುವ ಚುನಾವಣಾ ಸುಧಾರಣೆಯಾಗಿದೆ.

ಇವಿಎಂನ ಇತರ ಅಪಾಯಗಳು:  

ಇವಿಎಂ ಸುತ್ತ ಇರುವ ಚರ್ಚೆಗಳು ಕೇವಲ ಅದರ ತಾಂತ್ರಿಕ ರಿಗ್ಗಿಂಗ್ ಸಾಧ್ಯತೆಯ ಸುತ್ತ ಮಾತ್ರ ಕೇಂದ್ರೀಕರಿಸಿವೆ. ಆದರೆ ಇವಿಎಂನಿಂದ ಪ್ರಜಾತಂತ್ರಕ್ಕೆ ಮತ್ತು ಮತದಾರರಿಗೆ ಆಗುತ್ತಿರುವ ಮತ್ತೊಂದು ದೊಡ್ಡ ಅಪಾಯವಿದೆ. ಒಂದು ಅರ್ಥಪೂರ್ಣ ಚುನಾವಣಾ ವ್ಯವಸ್ಥೆ ನಿಂತಿರುವುದೇ ಮತದಾರರ ರಹಸ್ಯವನ್ನು ಕಾಪಾಡುವುದರಲ್ಲಿ. ಆದರೆ ಇವಿಎಂ ವ್ಯವಸ್ಥೆಯು ಹೆಚ್ಚೂ ಕಡಿಮೆ ಯಾವ ಬೀದಿ ಅಥವಾ ಯಾವ ವಾರ್ಡು ಯಾರಿಗೆ ಮತಮಾಡಿರಬಹುದೆಂಬ ಸಂಪೂರ್ಣ ವಿವರಗಳನ್ನು ಬಯಲು ಮಾಡುತ್ತದೆ. ಒಂದು ಬೂತಿನ ಒಂದು ಇವಿಎಮ್ ಯಂತ್ರದಲ್ಲಿ 3,000 ಮತಗಳು ಶೇಖರವಾಗುತ್ತವೆ ಮತ್ತು ನಿರ್ದಿಷ್ಟ ಬೂತಿನ ಮತದಾರರು ಯಾರ್ಯಾರೆಂಬ ಪಟ್ಟಿಯನ್ನು ಚುನಾವಣಾ ಕಚೇರಿಯೇ ಎಲ್ಲಾ ರಾಜಕೀಯ ಪಕ್ಷಗಳಿಗೂ ನೀಡಿರುತ್ತದೆ. ಮತ ಎಣಿಕೆಯಾಗುವಾಗ ಯಾವ್ಯಾವ ಇವಿಎಂನಲ್ಲಿ ಯಾವ್ಯಾವ ಪಕ್ಷಕ್ಕೆ ಎಷ್ಟೆಷ್ಟು ಮತಗಳು ದೊರೆತವೆಂಬ ಬೂತುವಾರು ಮತ್ತು ಇವಿಎಂವಾರು ವಿವರಗಳು ಪಕ್ಷಗಳಿಗೆ ದೊರೆಯುತ್ತವೆ. ಇದನ್ನು ಆಧರಿಸಿಯೇ ಮೇನಕಾ ಗಾಂಧಿ ತನಗೆ ವೋಟು ಹಾಕದ ಮತದಾರರಿಗೆ ಶಾಸ್ತಿ ಮಾಡುವುದಾಗಿ ಹೇಳಿದ್ದು. ಇದನ್ನು ತಪ್ಪಿಸಬೇಕೆಂದರೆ ಒಂದು ಕ್ಷೇತ್ರದ ಎಲ್ಲ ಮತಗಳನ್ನು ಒಟ್ಟೀಕರಿಸಿ ಎಣಿಕೆ ಮಾಡುವ ತಂತ್ರಜ್ಞಾನದ (ಟೋಟಲೈಸರ್) ಅಗತ್ಯವಿದೆ. ರಾಜಕೀಯ ಪಕ್ಷಗಳು ಇವಿಎಂನ ಈ ಅಪಾಯವನ್ನು ತಪ್ಪಿಸಲು ಕೂಡಲೇ ಆಗ್ರಹಿಸಬೇಕು. ವಿರೋಧ ಪಕ್ಷಗಳ ವೈಫಲ್ಯಕ್ಕೆ ಇವಿಎಂ ಕಾರಣವಲ್ಲ
 
ಅಂತಿಮವಾಗಿ ಇವಿಎಂಗಳ ಸಂಭಾವ್ಯ ದೋಷಗಳು ವಿರೋಧ ಪಕ್ಷಗಳ ವಾಸ್ತವ ರಾಜಕೀಯ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳುವ ನೆಪಗಳಾಗಬಾರದು. ಸಮಾಜದಲ್ಲಿ ಬಿಜೆಪಿಯು 1980ರಿಂದಲೂ ಏಕಪಕ್ಷೀಯವಾಗಿ ಬೆಳೆಯುತ್ತಿದೆ. ಇತರ ಎಲ್ಲಾ ಪಕ್ಷಗಳ ಸಾಮರ್ಥ್ಯ ಏಕಪಕ್ಷೀಯವಾಗಿ ಕುಗ್ಗುತ್ತಿದೆ. 1984ರಲ್ಲಿ 1.5 ಕೋಟಿ ಮತದಾರರ ಬೆಂಬಲ ಪಡೆದಿದ್ದ ಬಿಜೆಪಿ ಇವಿಎಂ ಬಳಕೆ 1998ರಲ್ಲಿ ಶುರುವಾಗುವ ವೇಳೆಗಾಗಲೇ 10 ಕೋಟಿ ಮತದಾರರ ಬೆಂಬಲವನ್ನು ಪಡೆದುಕೊಂಡಿತ್ತು. ಅದು 2014ರಲ್ಲಿ 17 ಕೋಟಿಗೆ ಏರಿತು. 2019ರಲ್ಲಿ 23 ಕೋಟಿ... ಅದಕ್ಕೆ ಕಾರಣ ಬಿಜೆಪಿಗಿರುವ ಕಾರ್ಪೊರೇಟ್ ಧನ ಬಲ, ಮಾಧ್ಯಮ ಬಲ. ಕೋಮು ಧ್ರುವೀಕರಣ ನೀತಿಯಿಂದಾಗಿ ಹೆಚ್ಚುತ್ತಿರುವ ಉನ್ಮತ್ತ ಜನಬಲ. ಅದಕ್ಕೆ ತದ್ವಿರುದ್ಧವಾಗಿ ವಿರೋಧ ಪಕ್ಷಗಳು ಬಿಜೆಪಿ ಮುಂದಿಟ್ಟ ಹಿಂದುತ್ವ ಅಜೆಂಡಾಗಳ ಸಾಫ್ಟ್ ನಕಲಿನಂತೆ ಕೆಲಸ ಮಾಡುತ್ತವೆಯೇ ವಿನಃ ಜನರ ಮಧ್ಯೆ ನಿಂತು ಫ್ಯಾಶಿಸ್ಟ್ ರಾಜಕಾರಣಕ್ಕೆ ಪರ್ಯಾಯವಾದ ಜನರಾಜಕಾರಣವನ್ನು ರೂಪಿಸುತ್ತಿಲ್ಲ. ಈ ವಿರೋಧ ಪಕ್ಷಗಳು ಅದನ್ನು ಮಾಡಬಲ್ಲವು ಎಂದು ನಿರೀಕ್ಷಿಸುವುದೂ ತಪ್ಪೇ. ಹೀಗಾಗಿ ವಿರೋಧ ಪಕ್ಷಗಳು ತಮ್ಮ ಸೋಲಿಗೆ ಇವಿಎಂ ಅನ್ನು ಮಾತ್ರ ದೂರುವುದು ಆತ್ಮವಂಚನೆ ಮತ್ತು ಆತ್ಮಘಾತುಕವಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು