varthabharthi


ಬೆಂಗಳೂರು

'ವೈಜ್ಞಾನಿಕ ಮನೋವೃತ್ತಿ ಮತ್ತು ಸಂವಿಧಾನ' ಪುಸ್ತಕ ಅನಾವರಣ

ಸಂವಿಧಾನ ಸಾಕ್ಷರತೆ ಕಾಲದ ತುರ್ತು ಅಗತ್ಯ: ಪ್ರೊ.ಎಮ್.ಅಬ್ದುಲ್ ರೆಹಮಾನ್ ಪಾಷಾ

ವಾರ್ತಾ ಭಾರತಿ : 26 Jan, 2022

ಬೆಂಗಳೂರು, ಜ.26: "ಭಾರತದ ಸಂವಿಧಾನದ ಮೂಲ ವಿಷಯ ಭಾರತದ ಜನತೆಯಾಗಿದೆ. ಸಂವಿಧಾನದ ಪ್ರಸ್ತಾವನೆಯು ಅದರ ಪ್ರವೇಶಿಕೆಯಾಗಿದೆ. ಕನಿಷ್ಠ ಪಕ್ಷ ಸಂವಿಧಾನದ ಪ್ರಸ್ತಾವನೆ ಎಲ್ಲರ ಮನೆ-ಮನಗಳಲ್ಲಿ ಇರಬೇಕು. ಭಾರತೀಯರ ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕಿಗೆ ಸಂವಿಧಾನ ದಾರಿದೀಪವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರೊ.ಅಬ್ದುಲ್ ರೆಹಮಾನ್ ಪಾಷಾ ತಿಳಿಸಿದರು.

ಬುಧವಾರ ಸಂವೇದನಾ ಬೆಂಗಳೂರು ಹಾಗೂ ಆರ್.ಟಿ.ನಗರ ಕಲಾ ಸಾಹಿತ್ಯ ವೇದಿಕೆಯ ವತಿಯಿಂದ  ಆರ್.ಟಿ.ನಗರ ಕುವೆಂಪು ಪಾರ್ಕ್‍ನಲ್ಲಿ ಜರುಗಿದ ‘ನಮ್ಮ ಸಂವಿಧಾನ-ನಾವೆಷ್ಟು ತಿಳಿದಿದ್ದೇವೆ?' ಎಂಬ ವಿಷಯದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದ ಸಂವಿಧಾನ ಜಗತ್ತಿನ ಅತೀ ದೊಡ್ಡ ಲಿಖಿತ ಸಂವಿಧಾನವಾಗಿದೆ. ಮಾತ್ರವಲ್ಲ ಎಲ್ಲಾ ಭಾರತೀಯರಿಗೂ ಧಾರ್ಮಿಕ, ವೈಯಕ್ತಿಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಅದರ ಕುರಿತು ಜನತೆ ಪ್ರಜ್ಞಾವಂತರಾದರೆ ನಮ್ಮನ್ನು ಆಳುವವರು ನಮ್ಮನ್ನು ಶೋಷಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಯಾರು ಸಂವಿಧಾನವನ್ನು ನಾಶ ಮಾಡಲು ಪ್ರಯತ್ನಿಸುತ್ತಾರೋ ಅವರನ್ನು ಸಂವಿಧಾನ ನಾಶ ಮಾಡುತ್ತದೆ. ಆದರೆ ಜನತೆ ಸಂವಿಧಾನದಲ್ಲಿರುವ ವಿಷಯಗಳನ್ನು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಎಲ್ಲಾ ಕಡೆ ನಡೆಯುವಂತಾಗಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅಬ್ದುಲ್ ರೆಹಮಾನ್ ಪಾಷಾ ಅವರ ನೂತನ ಕೃತಿ 'ವೈಜ್ಞಾನಿಕ ಮನೋವೃತ್ತಿ ಮತ್ತು ಸಂವಿಧಾನ' ಎಂಬ ಕೃತಿಯನ್ನು ಅಖಿಲ ಕರ್ನಾಟಕ ವಿಚಾರವಾದಿ ವೇದಿಕೆಯ ಕಾರ್ಯದರ್ಶಿ ನಾಗೇಶ್ ಅರಳುಕುಪ್ಪೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ರಂಗಸ್ವಾಮಿ, ನಿವೃತ ಅರಣ್ಯಾಧಿಕಾರಿ ಅಶ್ಫಾಕ್ ಅಲಿ ಖಾನ್, ಸಂವೇದನಾ ಬೆಂಗಳೂರಿನ ನಿರ್ದೇಶಕ ಇಮ್ತಿಯಾಝ್ ಬೇಗ್ ಉಪಸ್ಥಿತರಿದ್ದರು. ವೀಣಾ ಶೆಟ್ಟಿಯವರು 'ಸಂವಿಧಾನ ಕ್ವಿಝ್' ನೆರವೇರಿಸಿದರು.

ಆರಂಭದಲ್ಲಿ ಕುಮಾರಿ ಮನೋಜ್ಞ ಸಂವಿಧಾನ ಪ್ರಸ್ತಾವನೆಯನ್ನು ಅನಾವರಣಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಲಾ ಸಾಹಿತ್ಯ ವೇದಿಕೆಯ ಮುಹಮ್ಮದ್ ನವಾಝ್ ಕಾರ್ಯಕ್ರಮ ನಿರ್ವಹಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)