varthabharthi


ಸಂಪಾದಕೀಯ

ಪದ್ಮಗೌರವಕ್ಕೆ ಗೌರವ ಮತ್ತು ಅಗೌರವ

ವಾರ್ತಾ ಭಾರತಿ : 27 Jan, 2022

ಈ ಬಾರಿ ಕರ್ನಾಟಕದ 5 ಮಂದಿ ಸಾಧಕರಿಗೆ ಪದ್ಮಶ್ರೀ ಸಿಕ್ಕಿದೆ. ಆದರೆ ಪದ್ಮಭೂಷಣ, ಪದ್ಮ ವಿಭೂಷಣ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಸಾಧಕರ ಹೆಸರೂ ಇಲ್ಲ. ಅದರ ಅರ್ಥ ಕರ್ನಾಟಕದಲ್ಲಿ ಆ ಗೌರವ ಅರ್ಹರಾದವರು ಇಲ್ಲ ಎಂದಲ್ಲ. ಆ ಸಾಧಕರನ್ನು ಕೇಂದ್ರದ ನಾಯಕರಿಗೆ ಪರಿಚಯಿಸುವಲ್ಲಿ ನಮ್ಮ ರಾಜ್ಯ ವಿಫಲವಾಗಿದೆ ಎಂದು ಅರ್ಥ. ಸಿದ್ದಲಿಂಗಯ್ಯ ಅವರು ಮರಣೋತ್ತರ ಪದ್ಮಶ್ರೀ ಪ್ರಶಸ್ತಿಗೆ ಸಕಲ ರೀತಿಯಲ್ಲೂ ಅರ್ಹರು. ಆದರೆ ಈ ಪ್ರಶಸ್ತಿ ಸಿದ್ದಲಿಂಗಯ್ಯ ಅವರ ಸಾಧನೆಗಾಗಿ ದೊರಕಿದೆಯೋ, ಕೊನೆಯ ದಿನಗಳಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಜೊತೆಗೆ ಅವರು ಹೊಂದಿದ್ದ ಅನೈತಿಕ ಸಂಬಂಧಕ್ಕಾಗಿ ಕೊಟ್ಟ ಲಂಚವೋ ಎನ್ನುವುದರ ಬಗ್ಗೆ ಕನ್ನಡಿಗರಿಗೆ ಕೆಲವು ಸಂಶಯಗಳು ಇವೆ. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಹಾಲಿಂಗ ನಾಯ್ಕ ಮತ್ತು ಧಾರವಾಡದ ಕೃಷಿಕ ಅಬ್ದುಲ್ ಖಾದರ್ ಅವರಿಗೂ ಪದ್ಮಶ್ರೀ ದೊರಕಿದೆ. ಕಳೆದ ಬಾರಿ ಹಾಜಬ್ಬರಿಂದ ಪದ್ಮಶ್ರೀ ಪ್ರಶಸ್ತಿಗೆ ಗೌರವ ಬಂದಿದ್ದರೆ, ಈ ಬಾರಿ ತಳಸ್ತರದ ಎರಡು ಶ್ರಮಜೀವಿಗಳಿಗೆ ಸಲ್ಲುವ ಮೂಲಕ ಪದ್ಮಶ್ರೀ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ. ಸಾಧನೆಗೆ ಅಕ್ಷರಸ್ಥರು, ಅನಕ್ಷರಸ್ಥರು ಎನ್ನುವ ಭೇದವಿಲ್ಲ. ತಮ್ಮ ಕೃಷಿ ಕ್ಷೇತ್ರದ ಮೇಲಿನ ಬದ್ಧತೆ, ಅವರ ಪ್ರಾಮಾಣಿಕ ಶ್ರಮ ಅವರನ್ನು ಪದ್ಮಶ್ರೀಯೆಡೆಗೆ ಕೊಂಡೊಯ್ದಿದೆ. ಸಾಧಾರಣವಾಗಿ ಪದ್ಮಶ್ರೀಗಾಗಿ ರಾಜಕಾರಣಿಗಳ ಹಿಂದೆ ಅಲೆಯುವ ಒಂದು ಸಾಧಕರ ಗುಂಪಿದೆ. ಆದರೆ ಇಲ್ಲಿ ಪದ್ಮಶ್ರೀ ಈ ಎರಡು ಸಾಧಕರನ್ನು ಹುಡುಕಿಕೊಂಡು ಬಂದಿದೆ.

ಮಹಾಲಿಂಗ ನಾಯ್ಕ ಅವರ ಸಾಧನೆ ಬಹುದೊಡ್ಡದು. ನೀರಿಗಾಗಿ ಏಳು ಸುರಂಗಗಳನ್ನು ಕೊರೆದ ಶ್ರಮ ಜೀವಿ ಇವರು. ನೀರು ಇಂದು, ಮುಂದೂ ಜಗತ್ತಿನ ಅತ್ಯಮೂಲ್ಯ ಸೊತ್ತು. ಜೀವಜಲ. ಮಹಾಲಿಂಗ ನಾಯ್ಕ ಅವರು ತನ್ನ ಕೃಷಿಗಾಗಿ ಬಡತನದ ನಡುವೆ ನೀರನ್ನು ಹುಡುಕುತ್ತಾ ಬೆಟ್ಟಗುಡ್ಡಗಳಿಗೆ ಸುರಂಗ ಕೊರೆದು, ಕೊನೆಗೂ ಎರಡು ಸುರಂಗಗಳಲ್ಲಿ ನೀರು ಉಕ್ಕಿಸಿಕೊಂಡ ಭಗೀರಥ. ಮೋದಿಯವರು ಘೋಷಿಸುವ ಮೊದಲೇ ಆತ್ಮನಿರ್ಭರತೆಯನ್ನು ಕೃಷಿ ಕ್ಷೇತ್ರದಲ್ಲಿ ಅರ್ಥಪೂರ್ಣವಾಗಿಸಿಕೊಂಡು ಬಂದವರು ಅಬ್ದುಲ್ ಖಾದರ್. ಕೃಷಿ ಯಂತ್ರೋಪಕರಣಗಳಿಗಾಗಿಯೇ ಅವರು ಗುರುತಿಸಿಕೊಂಡವರು. ಗುಡಿ ಕೈಗಾರಿಕೆಗಳು ನಾಶವಾಗುತ್ತಿರುವ ದಿನಗಳಲ್ಲಿ, ಕೃಷಿ ಕ್ಷೇತ್ರದಲ್ಲಿ ಇವರು ಮಾಡಿರುವ ಆವಿಷ್ಕಾರ ಭವಿಷ್ಯದ ಭಾರತಕ್ಕೆ ಕೈ ದೀಪವಾಗಿದೆ.

ಇದೇ ಸಂದರ್ಭದಲ್ಲಿ ಈ ಬಾರಿ ಕಾಂಗ್ರೆಸ್ ಮುಖಂಡರಾದ ಗುಲಾಂ ನಬಿ ಆಝಾದ್ ಮತ್ತು ಎಡ ಪಂಥೀಯ ನಾಯಕ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧ ದೇವ್ ಭಟ್ಚಾಚಾರ್ಯ ಅವರಿಗೆ ಸರಕಾರ ಪದ್ಮ ಗೌರವವನ್ನು ನೀಡಿದೆ. ಆದರೆ ಮೋದಿಯವರ ಕಟು ಟೀಕಾಕಾರರಾಗಿರುವ ಬುದ್ಧದೇವ್ ಅವರು ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ತತ್ವ, ಸಿದ್ಧಾಂತಗಳನ್ನು ಪ್ರಶಸ್ತಿಯ ಮೂಲಕ ಕೊಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ಅವರು ಮೋದಿಯವರಿಗೆ ರವಾನಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರಕಾರ ನೀಡುವ ಪ್ರಶಸ್ತಿಯನ್ನು ಸ್ವೀಕರಿಸುವುದು ಜನದ್ರೋಹವಾಗಬಹುದು ಎಂದು ಭಾವಿಸಿ ಪ್ರಶಸ್ತಿ ಮರಳಿಸಿದ್ದಾರೆ. ಸಂವಿಧಾನ ವಿರೋಧಿ ಚಿಂತನೆಗಳುಳ್ಳ ಸರಕಾರವೊಂದರ ಕೈಯಿಂದ ಪ್ರಶಸ್ತಿ ಸ್ವೀಕರಿಸುವುದು, ಪರೋಕ್ಷವಾಗಿ ಅದರ ನಿಲುವನ್ನು ಬೆಂಬಲಿಸಿದಂತೆ ಎನ್ನುವ ಎಚ್ಚರಿಕೆಯನ್ನು ಅವರು ಪ್ರದರ್ಶಿಸಿದ್ದಾರೆ. ಪ್ರಶಸ್ತಿಗಾಗಿ ಹಂಬಲಿಸುವ ಅದೆಷ್ಟೋ ಪ್ರಗತಿಪರರಿಗೆ ಈ ನಿಲುವಿನಿಂದ ಕಲಿಯುವುದು ಬಹಳಷ್ಟಿದೆ.

ಇದೇ ಸಂದರ್ಭದಲ್ಲಿ, ಗುಲಾಂ ನಬಿ ಆಝಾದ್ ಪ್ರಶಸ್ತಿಯಿಂದ ಸಂಭ್ರಮಿಸಿದಂತಿದೆ. ಕಾಶ್ಮೀರದ ಜನರ ಹಕ್ಕುಗಳನ್ನು ಕಿತ್ತು, ಕಳೆದೆರಡು ವರ್ಷಗಳಿಂದ ಅವರನ್ನು ಕಗ್ಗತ್ತಲಲ್ಲಿಟ್ಟಿರುವ ಸರಕಾರದ ಕೈಯಿಂದ ಪದ್ಮಶ್ರೀ ಪಡೆಯಲು ತುದಿಗಾಲಲ್ಲಿ ನಿಂತಿರುವ ಗುಲಾಂ ನಬಿ ಆಝಾದ್ ಅವರು ತಮ್ಮ ಹೆಸರಿನ ಹಿಂದಿರುವ ಗುಲಾಮ ಪದಕ್ಕೆ ನ್ಯಾಯವೊದಗಿಸಿದ್ದಾರೆ. ಕಾಶ್ಮೀರಿಗಳಿಗಾಗಿರುವ ಅನ್ಯಾಯಕ್ಕೆ ಇಡೀ ವಿಶ್ವವೇ ಮರುಗುತ್ತಿದೆ. ವಿಶ್ವಸಂಸ್ಥೆ ಭಾರತಕ್ಕೆ ಪದೇ ಪದೇ ಎಚ್ಚರಿಕೆಗಳನ್ನು ನೀಡುತ್ತಿದೆ. ಕಾಶ್ಮೀರದಲ್ಲಿ ಕೇಂದ್ರ ಸರಕಾರದ ನಡೆ ಎಷ್ಟರಮಟ್ಟಿಗೆ ಸಂವಿಧಾನ ಬದ್ಧವಾದುದು ಎನ್ನುವುದನ್ನು ಇನ್ನಷ್ಟೇ ನ್ಯಾಯಾಲಯ ಹೇಳಬೇಕು. ಕಾಶ್ಮೀರದ ಬಹುತೇಕ ನಾಯಕರನ್ನು ಕೇಂದ್ರ ಸರಕಾರ ಗೃಹ ಬಂಧನದಲ್ಲಿಟ್ಟಿದೆ. ಇಂತಹ ಹೊತ್ತಿನಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಲು ಮುಂದಾಗಿರುವ ಗುಲಾಂ ನಬಿ ಆಝಾದ್, ತನ್ನದೇ ಜನರಿಗೆ ಬೆನ್ನಲ್ಲಿ ಇರಿದಿದ್ದಾರೆ. ಮುಂದಿನ ದಿನಗಳಲ್ಲಿ ಈ ಗುಲಾಮರನ್ನೇ ಮುಂದಿಟ್ಟುಕೊಂಡು ಬಿಜೆಪಿ ಕಾಶ್ಮೀರದಲ್ಲಿ ತನ್ನ ಅಜೆಂಡಾಗಳನ್ನು ಈಡೇರಿಸಿಕೊಂಡರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಇದೇ ಸಂದರ್ಭದಲ್ಲಿ ಇಬ್ಬರು ಹಿರಿಯ ಕಲಾವಿದರು ಪದ್ಮಶ್ರೀಯನ್ನು ತಿರಸ್ಕರಿಸಿದ್ದಾರೆ. ಪದ್ಮ ಭೂಷಣ, ವಿಭೂಷಣಗಳಿಗೆ ಅರ್ಹರಾದ ಈ ಹಿರಿಯರಿಗೆ ಪದ್ಮಶ್ರೀಯನ್ನು ನೀಡುವ ಮೂಲಕ ಅವರ ಹಿರಿತನ ಮತ್ತು ಪ್ರತಿಭೆಗಳಿಗೆ ಅವಮಾನ ಮಾಡಲಾಗಿದೆ. ಪ್ರಶಸ್ತಿಗಾಗಿ ತಮ್ಮ ವ್ಯಕ್ತಿತ್ವವನ್ನು ಕಿರಿದಾಗಿಸಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಪ್ರಭುತ್ವ ಪ್ರಶಸ್ತಿಯನ್ನು ರಾಜಕೀಯಗೊಳಿಸಿದಾಗ ಇಂತಹ ತಪ್ಪುಗಳು ನಡೆಯುತ್ತವೆ. ಆ ತಪ್ಪಿಗೆ ಕಲಾವಿದರು ಸರಿಯಾದ ಶಾಸ್ತಿಯನ್ನೇ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)