varthabharthi


ವಿಶೇಷ-ವರದಿಗಳು

ಟೆಲಿಪ್ರಾಂಪ್ಟರ್ ಬಳಕೆಯ ಹಿಂದೆ...

ವಾರ್ತಾ ಭಾರತಿ : 27 Jan, 2022
ಪ್ರಮೋದ್ ಹೊಸ್ಪೆಟ್

ಟೆಲಿಪ್ರಾಂಪ್ಟರ್ (Teleprompter) ಎಂಬ ಯಂತ್ರ ಇತ್ತೀಚೆಗೆ ಇಂಡಿಯಾ ದೇಶದಲ್ಲಿ ದೊಡ್ದ ಸುದ್ದಿಯಲ್ಲಿದೆ. ಜನ ಸಾಮಾನ್ಯರಿಗೆ ಈ ಟೆಲಿಪ್ರಾಂಪ್ಟರ್ ಯಂತ್ರದ ಬಗ್ಗೆ ಜಾಸ್ತಿ ಮಾಹಿತಿ ಇರಲು ಸಾಧ್ಯವಿಲ್ಲ..! ಯಾಕೆಂದರೆ ಅವರು ಅದನ್ನು ಬಳಸುವುದಿಲ್ಲ. ಈ ಟೆಲಿಪ್ರಾಂಪ್ಟರ್ ಯಂತ್ರವನ್ನು 1950ರಲ್ಲೇ ರೂಪಿಸಲಾಗಿತ್ತು. ಆ ಕಾಲದಲ್ಲಿ ಟಿವಿಯಲ್ಲಿ ವಾರ್ತೆ ಓದುತ್ತಿರುವ ವಾಚಕರು, ಕೈಯಲ್ಲಿ ಪೇಪರ್ ಇಟ್ಟು, ಬಗ್ಗಿ ಸುದ್ದಿಯನ್ನು ಓದಬೇಕಾಗಿತ್ತು. ಹಾಗಾಗಿ ಈ ಪದ್ಧತಿಯನ್ನು ಬದಲಾಯಿಸಲು ಒಂದು ನವೀನ ತಂತ್ರವನ್ನು ಆವಿಷ್ಕಾರ ಮಾಡಲಾಯಿತು. ವಾರ್ತಾ ವಾಚಕರ ಮುಂದೆ ಒಂದು ಕಂಪ್ಯೂಟರ್ ಪರದೆಯನ್ನು ಇಡಲಾಯಿತು. ಆ ಪರದೆಯಲ್ಲಿ ಸುದ್ದಿಗಳು ಮೂಡುತ್ತಿದ್ದವು. ವಾಚಕರು ಆ ಪರದೆಯನ್ನು ನೋಡಿ ಸುದ್ದಿ ಓದುತಿದ್ದರು. ಆ ಪರದೆಯಲ್ಲಿ ಬರುತ್ತಿದ್ದ ಬರಹಗಳನ್ನು ವಾಚಕರ ಅನುಕೂಲಕ್ಕೆ ತಕ್ಕಂತೆ ಮೇಲೆ-ಕೆಳಗೆ ತರಲು ಹಿಂಬದಿಯಲ್ಲಿ ಟೆಕ್ನೀಶಿಯನ್‌ಗಳಿದ್ದರು. ಹಾಗಾಗಿ ಟಿವಿ ನೋಡುತ್ತಿರುವ ಜನರಿಗೆ ವಾರ್ತಾವಾಚಕ ನೇರವಾಗಿ ನಮ್ಮ ಮುಖ ನೋಡಿ ಮಾತಾಡುವ ಹಾಗೆ ಕಾಣುತ್ತಾ ಇತ್ತು.

ಹೀಗೆ ಟಿವಿ ವಾಚಕರಿಗೆಂದು ರೂಪಿಸಲ್ಪಟ್ಟ ಈ ಟೆಲಿಪ್ರಾಂಪ್ಟರ್ ಯಂತ್ರ ನಂತರ ಚತುರ ರಾಜಕಾರಣಿಗಳ ಕೈಗೆ ಸೇರಿ ಬಿಟ್ಟಿತು. ಅದರ ವಿನ್ಯಾಸ ಮತ್ತು ತಂತ್ರಜ್ಞಾನವೂ ಬದಲಾಯಿತು. ಯಾರ ಕಣ್ಣಿಗೂ ಕಾಣದ ತೆಳ್ಳಗೆಯ ಗಾಜಿನ ಪಾರದರ್ಶಕ ಹಾಳೆಯಲ್ಲಿ ವಿಷಯಗಳನ್ನು ಓದಿ ಭಾಷಣ ಮಾಡುವಾಗ ಮುಂದೆ ನಿಂತ ಜನರಿಗೆ ಇದು ತಿಳಿಯುತ್ತಲೇ ಇರಲಿಲ್ಲ... !! ಜನರೆಲ್ಲಾ ‘‘ಏನ್ ಭಾಷಣ ಗುರು, ಪೇಪರ್ ನೋಡದೆ ಹೆಂಗೆಲ್ಲಾ ವಿಷಯ ಹೇಳ್ ಬಿಟ್ರು ನೋಡಿ... ಏನ್ ಮೆಮೊರಿ ಪವರ್ ಗುರು ಅವ್ರದ್ದು ..’’ ಎಂದು ನಿಬ್ಬೆರಗಾಗುತ್ತಿದ್ದರು. ಒಬಾಮ, ಟ್ರಂಪ್ ಮತ್ತು ಕೆಲವು ವಿದೇಶಿ ರಾಜಕಾರಣಿಗಳು ನಿಯಮಿತವಾಗಿ ಈ ಟೆಲಿಪ್ರಾಂಪ್ಟರ್ ಯಂತ್ರವನ್ನು ಉಪಯೋಗಿಸುತ್ತಿದ್ದರೆ, ಭಾರತದಲ್ಲಿ ಟೆಲಿಪ್ರಾಂಪ್ಟರ್ ಅನ್ನು ವ್ಯಾಪಕವಾಗಿ ಬಳಸುವುದು ನಮ್ಮ ಪ್ರಧಾನ ಮಂತ್ರಿ ಮೋದಿಜಿ.

***

ನಮ್ಮ ಪ್ರಧಾನಿಗೆ ಉತ್ತಮ ವಾಗ್ಮಿ ಎಂದು ಬಿರುದು ಬೇರೆ ಇದೆ. ಯಾವ ಭಾಷೆಯಲ್ಲಾದರೂ ಸರಿ, ಅವರು ಗಂಟೆಗಟ್ಟಲೆ ಚೀಟಿಯನ್ನು ನೋಡದೆ ಭಾಷಣ ಮಾಡುತ್ತಾರೆ ಎಂದು ಜನ ನಂಬಿದ್ದಾರೆ. ಪ್ರಧಾನಿ ಮೋದಿಯವರಿಗೆ ಹಿಂದಿ ಭಾಷೆಯ ಮೇಲೆ ಉತ್ತಮ ಹಿಡಿತ ಇದೆ. ಆದರೆ ಇಂಗ್ಲಿಷ್ ಅವರಿಗೆ ಕಬ್ಬಿಣದ ಕಡಲೆ ಎನ್ನಲಾಗುತ್ತಿದೆ. ಆದರೂ ವಿದೇಶದಲ್ಲಿ ಅವರು ಇಂಗ್ಲಿಷ್‌ನಲ್ಲಿ ಭಾಷಣ ಮಾಡುವಾಗ ಚೀಟಿ ಓದಿ ಭಾಷಣ ಮಾಡಲು ಅವರಿಗೆ ಮುಜುಗರ. ಅದಕ್ಕೆ ಅವರು ಚೀಟಿ ಬದಲು ಟೆಲಿಪ್ರಾಂಪ್ಟರ್‌ನಲ್ಲಿ ಭಾಷಣ ಓದುತ್ತಾರಂತೆ. ಮನಮೋಹನ್ ಸಿಂಗ್‌ರಂತಹ ಆಕ್ಸ್‌ಫರ್ಡ್ ಮೇಧಾವಿ, ಸುಲಲಿತವಾಗಿ ಇಂಗ್ಲಿಷ್‌ನಲ್ಲಿ ಮಾತಾಡಲು ಬಂದರೂ ಅಮೆರಿಕದ ಸಂಸತ್ತಿನಲ್ಲಿ ಭಾಷಣವನ್ನು ಚೀಟಿಯಲ್ಲಿ ಬರೆದಿಟ್ಟು ಓದಲು ನಾಚಿಕೆ ಪಡುವುದಿಲ್ಲ...! ಆದರೆ ಮೋದಿಯವರಿಗೆ ಅಮೆರಿಕದ ಸಂಸತ್ತಿನಲ್ಲಿ ಟೆಲಿಪ್ರಾಂಪ್ಟರ್ ಬೇಕು. ಇದು ಒಂದು ರೀತಿಯ ಪಿಆರ್ ತಂತ್ರವೂ ಹೌದು. ಯಾಕೆಂದರೆ ಮನೆಯ ಟಿವಿಯಲ್ಲಿ ನೋಡುತ್ತಿರುವ ಸಾಮಾನ್ಯ ಜನರಿಗೆ ಇವರು ಭಾಷಣ ಓದುತ್ತಾರೆ ಎಂದು ಖಂಡಿತಾ ತಿಳಿಯುವುದಿಲ್ಲ..! ಅವರೆಲ್ಲ ‘‘ಸಾಹೇಬರು ಎಷ್ಟು ಚೆನ್ನಾಗಿ ಇಂಗ್ಲಿಷ್ ಮಾತಾಡ್ತಾರಲ್ಲಾ’’ ಅಂದುಕೊಳ್ಳುತ್ತಾರೆ ..!!

***

 ಇತ್ತೀಚೆಗೆ ಮೋದಿಯವರು ದಿನಕ್ಕೆ ನಾಲ್ಕಾರು ರ್ಯಾಲಿಗಳನ್ನು ಉದ್ದೇಶಿಸಿ ಮಾತಾಡ್ತಾರೆ. ಹಾಗಾಗಿ ಮೋದಿಯವರಿಗೆಂದು ಸಿದ್ಧಪಡಿಸಿದ ವಿಶೇಷ ವೇದಿಕೆಯ ಭಾಷಣ ಮಾಡುವ ಸ್ಥಳದಲ್ಲಿ ಮೊದಲೇ ಟೆಲಿಪ್ರಾಂಪ್ಟರ್ ವ್ಯವಸ್ಥೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಇದಕ್ಕಾಗಿ ದೊಡ್ಡ ಸಂಖ್ಯೆಯ ವಿಶೇಷ ಸಿಬ್ಬಂದಿ ಬೇಕು. ಅವರು ಮೋದಿಯವರು ಭಾಷಣ ಮಾಡುವ ಮೈಕ್ ಪಕ್ಕದ ಸ್ಥಳದಲ್ಲಿ ಎರಡು ತೆಳ್ಳಗೆಯ ಗಾಜಿನ ಪಾರದಶರ್ಕ ಹಾಳೆಗಳನ್ನು ಎಡ ಮತ್ತು ಬಲ ಭಾಗದಲ್ಲಿ ಇಡುತ್ತಾರೆ. ಅವು ಎಷ್ಟು ತೆಳ್ಳಾಗಾಗಿವೆ ಅಂದರೆ, ಜನರ ಬರೀ ಕಣ್ಣಿಗೆ ಕಾಣುವುದೇ ಇಲ್ಲ. ಆ ಗಾಜಿನ ಹಾಳೆಗಳ ಹಿಂಬದಿಗೆ ಕ್ಯಾಮರಾ ಇಡುತ್ತಾರೆ. ಹಾಗಾಗಿ ಮೋದಿಯವರು ಆ ತೆಳ್ಳಗೆಯ ಗಾಜಿನ ಪಾರದಶರ್ಕ ಹಾಳೆಗಳನ್ನು ನೋಡದೆ, ಕ್ಯಾಮರಾವನ್ನೇ ನೋಡಿದ ಹಾಗೆ ಗೋಚರವಾಗುತ್ತದೆ. ಆ ಗಾಜಿನ ಹಾಳೆಯ ಮುಂಭಾಗದಲ್ಲಿ ಭಾಷಣದ ಮೂಲಪಾಠ ಪ್ರದರ್ಶನಗೊಳ್ಳುತ್ತದೆ. ಮೋದಿಯವರು ಅದನ್ನು ಓದಬೇಕು. ಒಂದೇ ಕಡೆ ನೋಡಿ ಓದಿದರೆ ಜನರಿಗೆ ತಿಳಿದು ಬಿಡುತ್ತದೆ ಎಂದು ಎಡ, ಬಲ ಎರಡು ಗಾಜಿನ ಹಾಳೆಗಳನ್ನು ಇಡುತ್ತಾರೆ. ಹಾಗಾಗಿ ಸ್ವಲ್ಪಸಮಯ ಎಡ ಭಾಗ, ಸ್ವಲ್ಪ ಸಮಯ ಬಲ ಭಾಗ ಆಚೆ-ಈಚಿನ ಹಾಳೆಗಳನ್ನು ನೋಡಿ ಮೋದಿಯವರು ಭಾಷಣ ಮಾಡುತ್ತಾರೆ. ವೇದಿಕೆಯ ಹಿಂಬದಿಯ ವಿಶೇಷ ಕೊಠಡಿಯಲ್ಲಿ ಟೆಲಿಪ್ರಾಂಪ್ಟರ್ ಸಿಬ್ಬಂದಿ ಕುಳಿತಿರುತ್ತಾರೆ. ಕಂಪ್ಯೂಟರ್‌ನಲ್ಲಿ ಲೋಡ್ ಮಾಡಿದ ಭಾಷಣವನ್ನು ಸಮರ್ಪಕವಾಗಿ ಮೋದಿ ಮುಂದೆ ಇರುವ ಗಾಜಿನ ಹಾಳೆಗಳಲ್ಲಿ ಭಾಷಣದ ಮೂಲಪಾಠ ಬರುವ ಹಾಗೆ ಹೊಂದಿಸುವುದು ಅವರ ಕೆಲಸ. ಇದಕ್ಕಾಗಿ ಅವರು ವಿಶೇಷವಾದ ಸಾಫ್ಟ್‌ವೇರ್ ಕೂಡ ಬಳಸುತ್ತಾರೆ...! ಒಂದು ವೇಳೆ ಅರ್ಧದಲ್ಲಿ ಟೆಲಿಪ್ರಾಂಪ್ಟರ್ ಯಂತ್ರ ಕೈ ಕೊಟ್ಟರೆ? ಅದಕ್ಕಾಗಿ ‘ಪ್ಲಾನ್-ಬಿ’ ಇರುತ್ತದೆ. ಭಾಷಣದ ಪ್ರಿಂಟ್ ಮಾಡಿದ ಕಾಗದದ ಹಾಳೆಗಳನ್ನು ಸಿಬ್ಬಂದಿ ಮೊದಲೇ ಮೋದಿಯ ಭಾಷಣದ ಡೆಸ್ಕ್‌ನಲ್ಲಿ ಇಡುತ್ತಾರೆ..!

***

 ಹಿಂದಿಯಲ್ಲಿ ಸುಲಲಿತವಾಗಿ ಭಾಷಣ ಮಾಡುವ ಮೋದಿಯವರು ಇತ್ತೀಚೆಗೆ ಹಿಂದಿಯಲ್ಲಿ ಕೂಡಾ ವ್ಯಾಪಕವಾಗಿ ಟೆಲಿಪ್ರಾಂಪ್ಟರ್ ಯಾಕೆ ಬಳಸುತ್ತಾರೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಇತ್ತೀಚೆಗೆ ದಿನಾಲೂ ನಾಲ್ಕೈದು ಭಾಷಣ ಮಾಡಬೇಕಾದ ಆನಿವಾರ್ಯತೆ ಮೋದಿಯವರಿಗಿದೆ. ಅವರ ವಯಸ್ಸು ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುತ್ತಿದೆ. ಕೆಲವು ಸಮಯಗಳಿಂದ ಅವರು ಭಾಷಣ ಮಾಡುವಾಗ ತುಂಬಾ ಪ್ರಮಾದಗಳನ್ನು ಮಾಡಿದ್ದರು. ಮಹಾತ್ಮಾ ಗಾಂಧೀಜಿಯವರಿಗೆ ಮೋಹನ್ ದಾಸ್ ಅನ್ನುವ ಬದಲು ಮೋಹನ್ ಲಾಲ್ ಗಾಂಧಿ ಎಂದು ಕರೆದಿದ್ದರು. ಹೀಗೆ ಇತಿಹಾಸ ಸಂಬಂಧವಾಗಿ ಹತ್ತು ಹಲವು ತಪ್ಪು ಮಾಹಿತಿಗಳನ್ನು ಭಾಷಣ ಸಮಯದಲ್ಲಿ ಹೇಳಿದರು. ಇದನ್ನು ತಡೆಯಲು ಅವರ ಪಿಆರ್ ತಂಡ ಹಿಂದಿಯಲ್ಲಿ ಭಾಷಣ ಮಾಡುವಾಗ ಕೂಡ ಟೆಲಿಪ್ರಾಂಪ್ಟರ್ ಇಡುತ್ತಾರೆ. ಅಂದ ಹಾಗೆ ಹಿಂದಿಯಲ್ಲಿ ಭಾಷಣ ಮಾಡುವಾಗ ಇಂಗ್ಲಿಷ್‌ನಲ್ಲಿ ಮಾಡಿದಂತೆ ಸಂಪೂರ್ಣ ಭಾಷಣ ಓದಿ ಹೇಳುವುದಿಲ್ಲ. ಪ್ರಮುಖವಾದ ಟಿಪ್ಪಣಿಗಳು ಮಾತ್ರ ಅವರ ಸ್ಕ್ರೀನ್ ಮುಂದೆ ಬರುತ್ತೆ...! ಅದಕ್ಕೆ ಮಸಾಲೆ ಸೇರಿಸಿ ಮೋದಿಯವರು ತಮ್ಮ ಶೈಲಿಯಲ್ಲಿ ವಿಸ್ತರಿಸಿ ಹೇಳುತ್ತಾರೆ. ಇದು ಮೋದಿ ಟೆಲಿಪ್ರಾಂಪ್ಟರ್ ಕಥೆ ...!!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)