varthabharthi


ಸಂಪಾದಕೀಯ

ಅಂಬೇಡ್ಕರ್ ಭಾವಚಿತ್ರಕ್ಕೆ ಆಕ್ಷೇಪ: ಉಂಡ ಬಟ್ಟಲಿಗೆ ಉಗುಳುವುದೇ?

ವಾರ್ತಾ ಭಾರತಿ : 28 Jan, 2022

ರಾಯಚೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ತೆರವುಗೊಳಿಸಿದ ಪ್ರಕರಣ ರಾಜ್ಯಾದ್ಯಂತ ಜನರನ್ನು ಆಕ್ರೋಶಕ್ಕೀಡು ಮಾಡಿದೆ. ಈ ಕೃತ್ಯವನ್ನು ಯಾವನೋ ಧಾರ್ಮಿಕ ಮುಖಂಡ ಮಾಡಿದ್ದಿದ್ದರೆ ಆಕ್ರೋಶ, ಖಂಡನೆಯೊಂದಿಗೆ ಪ್ರಕರಣ ಮುಗಿದು ಬಿಡುತ್ತಿತ್ತೇನೋ. ಆದರೆ ಇಲ್ಲಿ ಈ ಕೃತ್ಯವನ್ನು ಎಸಗಿರುವುದು ಒಬ್ಬ ಜಿಲ್ಲಾ ನ್ಯಾಯಾಧೀಶ. ಬುಧವಾರ ಇಲ್ಲ ಇಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮತ್ತು ಮಹಾತ್ಮಾಗಾಂಧೀಜಿಯ ಭಾವಚಿತ್ರವನ್ನು ಇಡಲಾಗಿತ್ತು. ಆದರೆ ‘‘ಅಂಬೇಡ್ಕರ್ ಭಾವಚಿತ್ರವನ್ನು ತೆಗೆಯದಿದ್ದರೆ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಿಲ್ಲ’’ ಎಂದು ನ್ಯಾಯಾಧೀಶ ಹಟ ಹಿಡಿದರು. ಕೊನೆಗೂ ಅಂಬೇಡ್ಕರ್ ಭಾವಚಿತ್ರವನ್ನು ತೆರವುಗೊಳಿಸಿಯೇ ಧ್ವಜಾರೋಹಣ ನೆರವೇರಿಸಿದರು. ಗಣರಾಜ್ಯೋತ್ಸವ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಯಾಕೆ ಇಡಲಾಗುತ್ತದೆ ಎನ್ನುವುದನ್ನು ಒಬ್ಬ ‘ನ್ಯಾಯಾಧೀಶ’ನಿಗೆ ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಸಂವಿಧಾನ, ಗಣರಾಜ್ಯ ಮತ್ತು ಅಂಬೇಡ್ಕರ್‌ರಿಗೆ ಇರುವ ಅವಿನಾಭಾವ ಸಂಬಂಧದ ಅರಿವಿಲ್ಲದ ವ್ಯಕ್ತಿ ನ್ಯಾಯ ವ್ಯವಸ್ಥೆಯ ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳಲು ಅನರ್ಹ. ಒಬ್ಬ ನ್ಯಾಯಾಧೀಶ ಸಂವಿಧಾನದ ಆಳ ಅಧ್ಯಯನ ಮಾಡಿರಲೇ ಬೇಕು. ಅಂತಹ ಸಂವಿಧಾನದ ರಚನೆಕಾರರಲ್ಲಿ ಅಂಬೇಡ್ಕರ್ ಒಬ್ಬರು. ಗಣರಾಜ್ಯೋತ್ಸವ ಆ ಸಂವಿಧಾನ ಜಾರಿಗೊಂಡ ದಿನವಾಗಿದೆ. ಮಹಾತ್ಮಾಗಾಂಧಿ ಅಲ್ಲಿ ಒಂದು ಸಂಕೇತ ಮಾತ್ರ. ಆದರೆ ಅಂಬೇಡ್ಕರ್ ಇಲ್ಲದೇ ಇದ್ದರೆ ಗಣರಾಜ್ಯಕ್ಕೆ ಯಾವ ಅರ್ಥವೂ ಇರುವುದಿಲ್ಲ. ಮಹಾತ್ಮಾಗಾಂಧಿ ತಂದುಕೊಂಡ ಸ್ವಾತಂತ್ರ ಕೇವಲ ಶ್ರೀಮಂತ, ಮೇಲ್‌ಜಾತಿಗಳಿಗೆ ಸೀಮಿತವಾಗಿ ಉಳಿಯದಂತೆ ಅದನ್ನು ತಳಸ್ತರಕ್ಕೆ ತಲುಪುವಂತೆ ಮಾಡಿದವರು ಅಂಬೇಡ್ಕರ್. ಆದುದರಿಂದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮಾಗಾಂಧೀಜಿಯ ಭಾವಚಿತ್ರ ಇರಲಿ, ಬಿಡಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯವಾಗಿ ಇರಲೇಬೇಕಾಗುತ್ತದೆ.

ಇಂದು ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಇದರೊಂದಿಗೆ ಯಾವ ಸಂಬಂಧವೂ ಇಲ್ಲದವರ ಭಾವಚಿತ್ರಗಳನ್ನು ಇಡುವ ಘಟನೆಗಳು ನಡೆಯುತ್ತಿವೆ. ಸ್ವಾತಂತ್ರ ಸಂದರ್ಭದಲ್ಲಿ ಬ್ರಿಟಿಷರಿಗೆ ಸಹಕರಿಸಿದ, ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸದ ಆರೆಸ್ಸೆಸ್‌ನ ಪೂರ್ವಜರ ಭಾವಚಿತ್ರಗಳನ್ನಿಟ್ಟು ಸ್ವಾತಂತ್ರದ ಆಶಯಗಳನ್ನು ಉದ್ದೇಶಪೂರ್ವಕವಾಗಿ ಕೆಡಿಸುವ ಕೃತ್ಯಗಳನ್ನು ಕೇಳಿದ್ದೇವೆ. ಆದರೆ ಗಣರಾಜ್ಯೋತ್ಸವ ದಿನ ಅಂಬೇಡ್ಕರ್ ಭಾವಚಿತ್ರ ಇದ್ದರೆ ತಾನು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ನ್ಯಾಯಾಧೀಶ ಹೇಳಿರುವುದು ಇದೇ ಮೊದಲಿರಬೇಕು. ‘‘ಅಂಬೇಡ್ಕರ್ ಭಾವಚಿತ್ರವನ್ನು ಯಾಕೆ ಇಡಲಾಗುವುದಿಲ್ಲ?’’ ಎಂದು ಕೇಳಿದರೆ ‘‘ಅದಕ್ಕೆ ಹೈಕೋರ್ಟ್ ಆದೇಶ ಬೇಕು’’ ಎಂಬ ಬಾಲಿಶ ಉತ್ತರವನ್ನು ನೀಡಿ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಕಾರ್ಯಕ್ರಮ ನಡೆಯುತ್ತಿರುವುದು ಕೋರ್ಟಿನ ಒಳಗಲ್ಲ, ಹೊರಗಿನ ಆವರಣದಲ್ಲಿ. ಸರಕಾರ ಈಗಾಗಲೇ ‘ಅಂಬೇಡ್ಕರ್ ಭಾವಚಿತ್ರವನ್ನು ಗಣರಾಜ್ಯೋತ್ಸವದಲ್ಲಿ ಇಡಬೇಕು’ ಎಂಬ ಆದೇಶವನ್ನೂ ಹೊರಡಿಸಿದೆ. ಆದರೆ ನ್ಯಾಯಾಧೀಶರಿಗೆ ಹೈಕೋರ್ಟ್‌ನ ಪ್ರತ್ಯೇಕ ಆದೇಶ ಬೇಕಂತೆ. ಯಾವತ್ತಾದರೂ ಕೋರ್ಟ್ ‘ಅಂಬೇಡ್ಕರ್ ಭಾವಚಿತ್ರವನ್ನು ಇಡಬಾರದು’ ಎಂದು ಸುತ್ತೋಲೆಯನ್ನು ಹೊರಡಿಸಿದೆಯೇ ಎನ್ನುವ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ. ಇದೇ ಸಂದರ್ಭದಲ್ಲಿ ‘‘ಮಹಾತ್ಮಾಗಾಂಧೀಜಿಯ ಭಾವಚಿತ್ರ ಇಡಲು ಹೈಕೋರ್ಟ್ ಆದೇಶ ಇದೆಯೇ?’’ ಎಂದರೆ ಅದಕ್ಕೂ ಅವರ ಬಳಿ ಉತ್ತರವಿಲ್ಲ. ‘‘ಮಹಾತ್ಮಾಗಾಂಧೀಜಿಯ ಫೋಟೊವನ್ನು ಹಿಂದಿನಿಂದಲೇ ಇಡುತ್ತಾ ಬಂದಿದ್ದೇವೆ’’ ಎನ್ನುವ ಸಮಜಾಯಿಶಿಯನ್ನು ನ್ಯಾಯಾಧೀಶರು ನೀಡುತ್ತಾರೆ. ಗಣರಾಜ್ಯೋತ್ಸವದ ಜೊತೆಗೆ ಯಾವುದೇ ನಂಟು ಇಲ್ಲದ ಯಾವುದೋ ರಾಜಕೀಯ ಪುಢಾರಿಯ ಭಾವಚಿತ್ರವನ್ನು ಇಟ್ಟು ಕಾರ್ಯಕ್ರಮ ಮಾಡುವುದಾದರೆ ಅದನ್ನು ಆಕ್ಷೇಪಿಸುವುದು ಸಹಜ. ಆದರೆ ಗಣರಾಜ್ಯದೊಂದಿಗೆ ಅಂಬೇಡ್ಕರ್‌ಗಿರುವ ಸಂಬಂಧ ಅರಿತೂ ಅವರ ಭಾವಚಿತ್ರಕ್ಕೆ ಕಾರ್ಯಕ್ರಮದಲ್ಲಿ ಅವಕಾಶ ನೀಡದೆ ಇದ್ದುದು ಸಂವಿಧಾನಕ್ಕೆ, ಅವರು ಧರಿಸಿದ ಕಪ್ಪು ಬಟ್ಟೆಗೆ ಮಾಡಿದ ಅವಮಾನವಾಗಿದೆ. ನ್ಯಾಯಧೀಶರು ಶೂದ್ರ ಸಮುದಾಯಕ್ಕೆ ಸೇರಿದವರು.

ಮನುಶಾಸ್ತ್ರ ‘ಶೂದ್ರರು ವಿದ್ಯೆಯನ್ನು ಆಲಿಸಿದರೆ ಅವರ ಕಿವಿಗೆ ಕಾದ ಸೀಸವನ್ನು ಸುರಿಯಬೇಕು’ ಎಂದು ಆದೇಶಿಸುತ್ತದೆ. ಅಂತಹ ಮನುಶಾಸ್ತ್ರವನ್ನು ಸುಟ್ಟು, ಸಂವಿಧಾನದ ಮೂಲಕ ವಿದ್ಯೆಯನ್ನು ಶೂದ್ರ, ದಲಿತರ ಹಕ್ಕಾಗಿ ದೊರಕಿಸಿಕೊಟ್ಟವರು ಅಂಬೇಡ್ಕರ್. ಇಂದು ಆ ನ್ಯಾಯಾಧೀಶರು ಅಂತಹ ಉನ್ನತ ಹುದ್ದೆಯಲ್ಲಿ ಕೂತಿದ್ದಾರಾದರೆ ಅವರ ಮೇಲೆ ಅಂಬೇಡ್ಕರ್ ಅವರ ಋಣವಿದೆ. ವಿಪರ್ಯಾಸವೆಂದರೆ, ಋಣ ತೀರಿಸುವುದು ಪಕ್ಕಕ್ಕಿರಲಿ, ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸಿ, ಸಂವಿಧಾನಕ್ಕೂ, ಅಂಬೇಡ್ಕರ್‌ಗೂ ಕೃತಘ್ನತೆಯನ್ನು ಬಗೆದಿದ್ದಾರೆ. ಉಂಡ ಬಟ್ಟಲಿಗೆ ಅವರು ಉಗಿದಿದ್ದಾರೆ. ಮಹಾತ್ಮಾಗಾಂಧೀಜಿಯನ್ನು ಒಪ್ಪಿಕೊಳ್ಳುವ ನ್ಯಾಯಾಧೀಶರಿಗೆ ಅಂಬೇಡ್ಕರ್‌ರನ್ನು ಒಪ್ಪಿಕೊಳ್ಳಲು ಇರುವ ಸಮಸ್ಯೆಯಾದರೂ ಯಾವುದು? ಅಂಬೇಡ್ಕರ್ ದಲಿತ ಸಮುದಾಯದಿಂದ ಬಂದ ನಾಯಕರು ಎನ್ನುವುದು ಅವರಿಗೆ ಸಮಸ್ಯೆಯಾಯಿತೆ? ಇಂತಹ ಮನಸ್ಥಿತಿಯನ್ನು ಹೊಂದಿದ ನ್ಯಾಯಾಧೀಶರು ದಲಿತರು, ಶೋಷಿತರ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲಿ ಎಂತಹ ತೀರ್ಪನ್ನು ನೀಡಬಹುದು? ಸಂವಿಧಾನವನ್ನು ಓದಿ ನ್ಯಾಯಾಧೀಶರಾಗಿ, ಮನುಶಾಸ್ತ್ರದ ಆಧಾರದಂತೆ ತೀರ್ಪು ನೀಡುವ ನ್ಯಾಯಾಧೀಶರು ಈ ದೇಶದಲ್ಲಿ ಹಲವರಿದ್ದಾರೆ. ಆದುದರಿಂದಲೇ, ಸಂವಿಧಾನ ಶೋಷಿತರ ಪರವಾಗಿದ್ದರೂ, ತೀರ್ಪು ಶೋಷಿತರ ವಿರುದ್ಧ ಹೊರ ಬೀಳುತ್ತದೆ.

ಮೇಲ್‌ಜಾತಿಯ ದೌರ್ಜನ್ಯದ ವಿರುದ್ಧ ಕೆಳಜಾತಿಯ ಜನರಿಗೆ ನ್ಯಾಯ ಒದಗಿಸುವ ಹಕ್ಕನ್ನು ನಾವು ಮೇಲ್‌ಜಾತಿಯ ಜನರ ಕೈಗೇ ಕೊಟ್ಟಿರುವುದರಿಂದ ಎಲ್ಲೆಡೆ ದಲಿತರು, ಶೋಷಿತರು, ಅಲ್ಪಸಂಖ್ಯಾತರ ವಿರುದ್ಧ ನ್ಯಾಯ ಹೊರಬೀಳುತ್ತಿದೆ. ‘ಹೆಣ್ಣು ನವಿಲು ಗಂಡು ನವಿಲಿನ ಕಣ್ಣೀರು ಕುಡಿದು ಗರ್ಭ ಧರಿಸುತ್ತದೆ’ ಎಂದು ಹೇಳುವ ನ್ಯಾಯಾಧೀಶರನ್ನು ಪಡೆದ ದೇಶ ನಮ್ಮದು. ನಾವಿಂದು ಅಂಬೇಡ್ಕರ್ ಭಾವಚಿತ್ರವನ್ನು ಹೊರಗಿಟ್ಟ ಕಾರಣಕ್ಕಾಗಿ ಆತಂಕ ವ್ಯಕ್ತಪಡಿಸಬೇಕಾಗಿರುವುದಲ್ಲ, ದೇಶದ ವಿವಿಧ ನ್ಯಾಯಾಲಯಗಳಲ್ಲಿ ಸಂವಿಧಾನವನ್ನು ಹೆಸರಿಗಷ್ಟೇ ಮುಂದಿಟ್ಟು, ಮನುಶಾಸ್ತ್ರವನ್ನು ಮನದೊಳಗೆ ಆರಾಧಿಸುತ್ತಾ ತೀರ್ಪು ನೀಡುವ ನ್ಯಾಯಾಧೀಶರ ಬಗ್ಗೆ ಗಂಭೀರವಾಗಿ ಚರ್ಚಿಸುವ ಸಮಯ ಬಂದಿದೆ. ಇಂತಹ ನ್ಯಾಯಾಧೀಶರಿಂದ ಸಂವಿಧಾನವನ್ನು ರಕ್ಷಿಸುವ ಬಗೆ ಹೇಗೆ ಎನ್ನುವುದನ್ನು ಸಂವಿಧಾನ ತಜ್ಞರು ಚಿಂತಿಸಬೇಕಾಗಿದೆ. ಇದೇ ಸಂದರ್ಭದಲ್ಲಿ, ಅಂಬೇಡ್ಕರ್‌ಗೆ ಅವಮಾನಿಸಿದ ನ್ಯಾಯಾಧೀಶರ ವಿರುದ್ಧ ಸರಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕಾಗಿದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)