varthabharthi


ನಿಮ್ಮ ಅಂಕಣ

ಸುಭಾಶ್ಚಂದ್ರ ಬೋಸ್: ಈಶಾನ್ಯ ಭಾರತದ ಆತ್ಮಚರಿತ್ರೆ

ವಾರ್ತಾ ಭಾರತಿ : 28 Jan, 2022
ಅಜೈಲಿಯು ನಿಯುಮೈ

ಸುಭಾಶ್ಚಂದ್ರ ಬೋಸರು ಈಶಾನ್ಯ ಭಾರತಕ್ಕೆ ಕಾಲಿಟ್ಟ ಸ್ವಾತಂತ್ರ್ಯಪೂರ್ವ ಭಾರತದ ಮೊದಲ ರಾಷ್ಟ್ರೀಯವಾದಿ ನಾಯಕರ ಪೈಕಿ ಒಬ್ಬರು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಮೂರು ವರ್ಷಗಳ ಮೊದಲು, ಅಂದರೆ 1944ರಲ್ಲಿ ಅವರು ಈಶಾನ್ಯ ಭಾರತಕ್ಕೆ ಹೋದರು. ಆ ಮೂಲಕ, ಅವರು ಭಾರತ ರಾಷ್ಟ್ರೀಯ ಚಳವಳಿಯ ಗಮನವನ್ನು ಈಶಾನ್ಯ ಭಾರತ ಮೇಲೆ ಹರಿಸಿದರು. ಈಶಾನ್ಯ ಭಾರತ ಮತ್ತು ಬರ್ಮ (ಈಗಿನ ಮ್ಯಾನ್ಮಾರ್)ವನ್ನು ಪ್ರವೇಶಿಸುವ ಅವರ ನಿರ್ಧಾರವು ಅತ್ಯಂತ ಯೋಜಿತ ಕಾರ್ಯತಂತ್ರವಾಗಿತ್ತು. ಎರಡನೆಯದಾಗಿ, ಈಶಾನ್ಯ ಭಾರತವು ಹಲವಾರು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಭೂಭಾಗವಾಗಿದೆ. ಆದರೆ, ನಾನು ಇಲ್ಲಿ ಅವರೆಲ್ಲರ ಹೆಸರುಗಳನ್ನು ಹೇಳಲು ಹೋಗುವುದಿಲ್ಲ. ಯಾಕೆಂದರೆ ನಾವು ಮೊನ್ನೆಯಷ್ಟೇ ನೇತಾಜಿ ಸುಭಾಶ್ಚಂದ್ರ ಬೋಸ್‌ರ ಜನ್ಮದಿನವನ್ನು ಆಚರಿಸಿದ್ದೇವೆ ಹಾಗೂ ಇಲ್ಲಿ ಅವರ ಪರಂಪರೆಯ ಮೇಲೆ ಹೆಚ್ಚಿನ ಗಮನವನ್ನು ಗಮನ ಹರಿಸಬೇಕಾಗಿದೆ.

ಅವರು ಈಶಾನ್ಯ ಭಾರತದಲ್ಲಿ ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ಧ್ವಜವನ್ನು ಹಾರಿಸಿದ್ದು 1944 ಎಪ್ರಿಲ್ 14ರಂದು ಮಣಿಪುರದ ಮೊಯಿರಾಂಗ್ ಎಂಬಲ್ಲಿ. ಅದು ಭಾರತೀಯ ನೆಲದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿದ್ದು ಎರಡನೇ ಬಾರಿಯಾಗಿತ್ತು. ಮೊದಲ ಬಾರಿಗೆ ಭಾರತೀಯ ರಾಷ್ಟ್ರೀಯ ಧ್ವಜವನ್ನು 1943 ಡಿಸೆಂಬರ್ 30ರಂದು ಅಂಡಮಾನ್ ಮತ್ತು ನಿಕೋಬಾರ್‌ನ ದ್ವೀಪದ ಪೋರ್ಟ್‌ಬ್ಲೇರ್‌ನಲ್ಲಿ. ಆದರೆ, ಈ ಐತಿಹಾಸಿಕ ವಾಸ್ತವಗಳನ್ನು ಸ್ವೀಕರಿಸಲು ನಿರಾಕರಿಸುವ ಜನರ ಕೆಲವು ಗುಂಪುಗಳಿವೆ. ಮಣಿಪುರ ಸರಕಾರವು ರಾಜ್ಯದ ಮೊಯಿರಾಂಗ್ ಪಟ್ಟಣದಲ್ಲಿ ಸುಭಾಶ್ಚಂದ್ರ ಬೋಸ್ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಅವರ ಪ್ರತಿಮೆಯೊಂದನ್ನು ನಿರ್ಮಿಸಿದೆ. ಅಲ್ಲಿ ಸುಭಾಶ್ಚಂದ್ರ ಬೋಸರ ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ)ಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಇಡಲಾಗಿದೆ. ನಾನು ಈ ವಸ್ತುಸಂಗ್ರಹಾಲಯಕ್ಕೆ ಕೆಲವು ವರ್ಷಗಳ ಹಿಂದೆ ಭೇಟಿ ನೀಡಿದ್ದೇನೆ ಹಾಗೂ ಅದು ಶೈಕ್ಷಣಿಕ ಮಹತ್ವವುಳ್ಳದ್ದು ಎನ್ನುವುದನ್ನು ಕಂಡುಕೊಂಡಿದ್ದೇನೆ.

ಐಎನ್‌ಎ ಅಥವಾ ಆಝಾದ್ ಹಿಂದ್ ಫೌಜ್ ಈಶಾನ್ಯ ಭಾರತವನ್ನು, ಅದರಲ್ಲೂ ಮುಖ್ಯವಾಗಿ ನಾಗಾಲ್ಯಾಂಡ್‌ನ ಕೊಹಿಮಾವನ್ನು, ಪ್ರಸಿದ್ಧ ‘ಕೊಹಿಮಾ ಕದನ’ ನಡೆಯುವ ಕೆಲವೇ ದಿನಗಳ ಮೊದಲು, ಅಂದರೆ 1944 ಮಾರ್ಚ್ 18ರಂದು ತಲುಪಿತು. ಬಳಿಕ ಸುಭಾಶ್ಚಂದ್ರ ಬೋಸ್ ತನ್ನ ಭಾರತೀಯ ರಾಷ್ಟ್ರೀಯ ಸೇನೆಯೊಂದಿಗೆ ಕೊಹಿಮಾದಿಂದ ಮಣಿಪುರಕ್ಕೆ ತೆರಳಿದರು. ಈಶಾನ್ಯ ಭಾರತಕ್ಕೆ ಅವರು ನೀಡಿದ ಭೇಟಿ ಮಾತ್ರವಲ್ಲ, ಬ್ರಿಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸುವ ಅವರ ಕಲ್ಪನೆ ಮತ್ತು ಯೋಜನೆ ಹಾಗೂ ಈಶಾನ್ಯ ಭಾರತದ ಎಲ್ಲ ಬುಡಕಟ್ಟು ಪಂಗಡಗಳು ಮತ್ತು ಸಮುದಾಯಗಳನ್ನು ಭಾರತಕ್ಕೆ ಸೇರ್ಪಡೆಗೊಳಿಸುವ ಅವರ ತಂತ್ರಗಾರಿಕೆ ಈಶಾನ್ಯದ ಜನರ ಗಮನ ಸೆಳೆಯಿತು. ಅಲ್ಲಿನ ಹಲವಾರು ಮಂದಿ ಐಎನ್‌ಎಗೆ ಸೇರ್ಪಡೆಗೊಂಡರು.

ಮಣಿಪುರದ ಟಾಮೆಂಗ್ಲೊಂಗ್ ಜಿಲ್ಲೆಯ ಟಾಮೆಯ್ ಎಂಬಲ್ಲಿನ ಲಿಯಾಂಗ್‌ಮೈ ನಾಗಾ ಬುಡಕಟ್ಟು ಸಮುದಾಯದ ದಿವಂಗತ ಆರ್. ಟಾಲೆ ಎಂಬ ವ್ಯಕ್ತಿಯನ್ನು ನಾನು ಬಲ್ಲೆ. ರಾಷ್ಟ್ರೀಯವಾದಿ ಚಳವಳಿಯ ವೇಳೆ 1940ರ ದಶಕದಲ್ಲಿ ಮಿತ್ರ ಜಪಾನ್ ಪಡೆಗಳಿಗಾಗಿ ಬೇಹುಗಾರಿಕೆ ನಡೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬ್ರಿಟಿಷ್ ಸರಕಾರದ ವಿರುದ್ಧ ಬೇಹುಗಾರಿಕೆ ನಡೆಸಿರುವುದಕ್ಕಾಗಿ ಆರ್. ಟಾಲೆಗೆ ಬ್ರಿಟಿಷ್ ಸರಕಾರವು ಮಣಿಪುರದ ಇಂಪಾಲದಲ್ಲಿ ಒಂದು ವಾರದ ಜೈಲುಶಿಕ್ಷೆ ವಿಧಿಸಿತು. ಅವರ ನೆನಪಿನಲ್ಲಿ ಮಣಿಪುರದ ಟಾಮೆಂಗ್ಲೊಂಗ್ ಜಿಲ್ಲೆಯಲ್ಲಿರುವ ಟಾಮೆಯ್ ಬಝಾರ್‌ನಲ್ಲಿ ಮಹಿಳೆಯರ ವಾರದ ಸಂತೆಯೊಂದನ್ನು ನಿರ್ಮಿಸಲಾಗಿದೆ. ಅವರು ಸಾಯುವ ಸ್ವಲ್ಪ ಸಮಯದ ಮೊದಲು, ನನಗೊಂದು ಪತ್ರ ಬರೆದು, ಸಮಾಜದಲ್ಲಿ ಎದ್ದು ಕಾಣುವ ಬದಲಾವಣೆಯೊಂದನ್ನು ತರಲು ಹೋರಾಡುವಂತೆ ಕೋರಿದ್ದರು. ದ್ವಿತೀಯ ಮಹಾಯುದ್ಧದ ವೇಳೆ, ನಾಗಾಲ್ಯಾಂಡ್‌ನಲ್ಲಿನ ಸುಭಾಶ್ಚಂದ್ರ ಬೋಸರ ಕೊನೆಯ ಯುದ್ಧದ ಬಗ್ಗೆ ನಾಗಾ ಬುಡಕಟ್ಟಿನ ಲೇಖಕ ಎರ್ ವೆಖೊ ಸ್ವುರೊ ಪುಸ್ತಕವೊಂದನ್ನು ಬರೆದಿದ್ದಾರೆ. ಆ ಪುಸ್ತಕವನ್ನು ಬಂಗಾಳಿ ಭಾಷೆಗೆ ಭಾಷಾಂತರಿಸಲಾಗಿದೆ. ‘ಡಿಸ್ಕವರಿ ಆಫ್ ನೇತಾಜಿ ಸುಭಾಶ್ಚಂದ್ರ ಬೋಸ್: ಡೆಲ್ಲಿ ಚಲೋ ಲಾಸ್ಟ್ ಕ್ಯಾಂಪ್ ಇನ್ ನಾಗಾಲ್ಯಾಂಡ್’ ಎಂಬ ಹೆಸರಿನ ಪುಸ್ತಕವನ್ನು ಉಮಾ ಭೌಮಿಕ್ ಬಂಗಾಳಿ ಭಾಷೆಗೆ ಅನುವಾದಿಸಿದ್ದಾರೆ. ಈಪುಸ್ತಕದಲ್ಲಿ ನಾಗಾ ಜನರೊಂದಿಗಿನ ನೇತಾಜಿಯ ಭೇಟಿ ಮತ್ತು ಅವರೊಂದಿಗಿನ ಸಂವಹನಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ.

1940ರ ದಶಕದಲ್ಲಿ ತಾನು ನೇತಾಜಿಯನ್ನು ಭೇಟಿಯಾಗಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂಬುದಾಗಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಐಎನ್‌ಎ ಸೇನೆಯ ಸದಸ್ಯರೂ ಆಗಿದ್ದ ನಾಗಾಲ್ಯಾಂಡ್‌ನ ಫೇಕ್ ಜಿಲ್ಲೆಯ ಚೆಸೆಝು ಗ್ರಾಮದ ವೆರೊ ಸ್ವುರೊ ಎಂಬವರು ಹೇಳಿದ್ದಾರೆ. ಅವರಿಗೀಗ 101 ವರ್ಷ. ಅವರು ಈಗಲೂ ನೇತಾಜಿಯ ಜನ್ಮ ದಿನದಂದು ಅವರ ಗೌರವಾರ್ಥವಾಗಿ ಐಎನ್‌ಎ ಟೊಪ್ಪಿಯನ್ನು ಧರಿಸುತ್ತಾರೆ. ನೇತಾಜಿ ಮತ್ತು ಐಎನ್‌ಎ ಸೈನಿಕರು ಮಿತ್ರ ಜಪಾನ್ ಪಡೆಗಳೊಂದಿಗೆ ಜೆಸ್ಸಾಮಿ, ಫೇಕ್, ಖುಮಾನ್ ಮತ್ತು ಮುಟ್ಸಾಲೆ ಮೂಲಕ ರುಝಾರೊ ಗ್ರಾಮಕ್ಕೆ ಆಗಮಿಸಿದರು ಹಾಗೂ 1944 ಎಪ್ರಿಲ್-ಮೇ ಅವಧಿಯಲ್ಲಿ ನಾಗಾಲ್ಯಾಂಡ್‌ನಲ್ಲಿ ಐಎನ್‌ಎ ಶಿಬಿರವೊಂದನ್ನು ಸ್ಥಾಪಿಸಿದರು ಎಂದು ಸ್ವುರೊ ಹೇಳುತ್ತಾರೆ. ನೇತಾಜಿ ಮತ್ತು ಅವರ ಐಎನ್‌ಎ ಸೈನಿಕರು ನಾಗಾಲ್ಯಾಂಡ್‌ನ ರುಝಾರೊ ಗ್ರಾಮದಲ್ಲಿ ಒಂಭತ್ತು ದಿನಗಳ ಕಾಲ ತಂಗಿದ್ದರು ಎನ್ನಲಾಗಿದೆ. ಅವರ ವಾಸ್ತವ್ಯದ ವೇಳೆ, ಮಹಿಳೆಯರು ಸೇರಿದಂತೆ ನಾಗಾ ಗ್ರಾಮಸ್ಥರು ನೇತಾಜಿ ಮತ್ತು ಅವರ ಐಎನ್‌ಎ ಸೈನಿಕರಿಗೆ ಸಹಾಯ ಮಾಡಿದ್ದರು.

ಭಾರತದ ಏಕತೆಯ ಬಗ್ಗೆ ನೇತಾಜಿ ಹೆಚ್ಚಿನ ಗಮನ ಹರಿಸಿದ್ದರು. 1930ರ ದಶಕದಲ್ಲಿ (ಅದರಲ್ಲೂ ಮುಖ್ಯವಾಗಿ 1937ರ ಬಳಿಕ) ಭಾರತದಿಂದ ಹೊರಗೇ ಇದ್ದ ಈಶಾನ್ಯ ವಲಯದ ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವಿತ್ತು. ಈಶಾನ್ಯ ವಲಯವು ಭಾರತಕ್ಕೆ ಮಹತ್ವದ್ದಾಗಿದೆ ಎನ್ನುವುದನ್ನು ಅವರು ಅರ್ಥ ಮಾಡಿಕೊಂಡಿದ್ದರು.
ಈ ವಲಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯವಾದಿ ನಾಯಕರು ಜಾಗರೂಕರಾಗಿರದಿದ್ದರೆ ಈ ವಲಯವು ಪೂರ್ವ ಪಾಕಿಸ್ತಾನಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎನ್ನುವುದನ್ನು ಅವರು ಊಹಿಸಿದ್ದರು. ಯಾವುದೇ ಕೋಮು ಭಾವನೆಯಿರದ ಅವಿಭಜಿತ ಭಾರತ ಅವರ ಕಲ್ಪನೆಯಾಗಿತ್ತು. ನೆರೆಯ ದೇಶಗಳೊಂದಿಗೆ ಈಶಾನ್ಯ ವಲಯವು ಮಹತ್ವದ ಭೌಗೋಳಿಕ ಗಡಿಯನ್ನು ಹೊಂದಿದೆ ಎನ್ನುವುದು ಅವರಿಗೆ ಸ್ಪಷ್ಟವಾಗಿ ಮನವರಿಕೆಯಾಗಿತ್ತು. ಹಾಗಾಗಿ, ಭಾರತವನ್ನು ಒಂದುಗೂಡಿಸುವಲ್ಲಿ ಈಶಾನ್ಯ ವಲಯವು ಪ್ರಮುಖ ಪಾತ್ರವನ್ನು ವಹಿಸಲಿದೆ ಎನ್ನುವುದನ್ನು ಅವರು ಅರ್ಥಮಾಡಿಕೊಂಡಿದ್ದರು. ಹಾಗಾಗಿ, ಈಶಾನ್ಯ ಭಾರತದ ಮೇಲೆ ಗಮನ ಹರಿಸುವಂತೆ ಹೊಸದಿಲ್ಲಿಯ ಕಾಂಗ್ರೆಸ್ ನಾಯಕರ ಮೇಲೆ ಅವರು ಒತ್ತಡ ಹೇರಿದರು.

ಕೊನೆಯದಾಗಿ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಹಿಂದಿನ ಅಸ್ಸಾಮ್ (ಅದರಲ್ಲಿ ನಾರ್ತ್ ಈಸ್ಟ್ ಫ್ರಂಟಿಯರ್ ಸೇರಿತ್ತು)ನಲ್ಲಿ ದಿವಂಗತ ಗೋಪಿನಾಥ್ ಬೋರ್ಡೊಲಾಯ್ ನಾಯಕತ್ವದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರವೊಂದು ರಚನೆಯಾಯಿತು. ಹೊಸದಿಲ್ಲಿಯಲ್ಲಿರುವ ಕೇಂದ್ರದಲ್ಲಿ ನೇತಾಜಿ ಹೊಂದಿದ್ದ ಪ್ರಭಾವದಿಂದಾಗಿ ಇದು ಸಾಧ್ಯವಾಯಿತು. ಅಲ್ಲಿವರೆಗೆ ಅಸ್ಸಾಮ್ ಮತ್ತು ಈಶಾನ್ಯ ಭಾರತದ ಇತರ ಭಾಗಗಳಲ್ಲಿ ನೆಲೆ ಕಂಡುಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿರಲಿಲ್ಲ. ನೇತಾಜಿಯಲ್ಲದಿದ್ದರೆ, ಈಶಾನ್ಯ ಭಾರತವು ಪೂರ್ವ ಪಾಕಿಸ್ತಾನಕ್ಕೆ ಸೇರ್ಪಡೆಗೊಳ್ಳವ ಸಾಧ್ಯತೆಯಿತ್ತು. ಇವುಗಳು ನೇತಾಜಿ ಮತ್ತು ಈಶಾನ್ಯ ಭಾರತವನ್ನು ಸಂಪರ್ಕಿಸುವ ಪ್ರಮುಖ ಕೊಂಡಿಗಳಾಗಿವೆ ಎಂದು ನನಗನಿಸುತ್ತದೆ.

ಕೃಪೆ: countercurrents.org

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)