ಅಂತಾರಾಷ್ಟ್ರೀಯ
ಅಮೆರಿಕ ಸುಪ್ರೀಂಕೋರ್ಟ್‌ಗೆ ಪ್ರಥಮ ಕಪ್ಪು ಮಹಿಳೆ: ಜೋ ಬೈಡನ್

ಜೋ ಬೈಡನ್
ವಾಷಿಂಗ್ಟನ್: ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ಕಪ್ಪು ಮಹಿಳೆಯೊಬ್ಬರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಮೂಲಕ ನ್ಯಾಯಮೂರ್ತಿ ಸ್ಟೀಫನ್ ಬ್ರೇಯರ್ ಅವರಿಂದ ತೆರವಾದ ಸ್ಥಾನ ಭರ್ತಿ ಮಾಡಲಾಗುವುದು ಎಂದು ಅಧ್ಯಕ್ಷ ಜೋ ಬೈಡನ್ ಪ್ರಕಟಿಸಿದ್ದಾರೆ.
"ವಿಶೇಷ ಗುಣ ನಡತೆ ಮತ್ತು ನಿಷ್ಠೆ ಇರುವ ವ್ಯಕ್ತಿಯೊಬ್ಬರನ್ನು ನೇಮಕ ಮಾಡಬೇಕು ಎನ್ನುವುದನ್ನು ಬಿಟ್ಟರೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ವ್ಯಕ್ತಿ ಮಾತ್ರ ಅಮೆರಿಕದ ಸುಪ್ರೀಂಕೋರ್ಟ್‌ಗೆ ನೇಮಕಗೊಳ್ಳಲಿರುವ ಮೊಟ್ಟಮೊದಲ ಕಪ್ಪು ಮಹಿಳೆಯಾಗಿರುತ್ತಾರೆ" ಎಂದು ಶ್ವೇತಭವನದಿಂದ ಮಾತನಾಡಿದ ಅವರು ಸ್ಪಷ್ಟಪಡಿಸಿದರು.
ಬ್ರೇಯರ್ ಅವರ ಜತೆಗೆ ಪೋಡಿಯಂನಲ್ಲಿ ಮಾತನಾಡಿದ ಅವರು, ತ್ವರಿತ ನಾಮನಿರ್ದೇಶನ ಪ್ರಕ್ರಿಯೆಗೆ ಮನವಿ ಮಾಡುವುದಾಗಿ ತಿಳಿಸಿದರು. ಫೆಬ್ರುವರಿ ಕೊನೆಯ ಒಳಗಾಗಿ ಈ ಹುದ್ದೆಗೆ ನಾಮನಿರ್ದೇಶನ ಮಾಡುವುದಾಗಿ ಹೇಳಿದರು.
ಬ್ರೇಯರ್ (83) ಅವರ ನಿರ್ಗಮನದೊಂದಿಗೆ ಈ ಜೀವಿತಾವಧಿ ಹುದ್ದೆಗೆ ನೇಮಕ ಮಾಡಲು ಬೈಡನ್ ಆಡಳಿತಕ್ಕೆ ಒಳ್ಳೆಯ ಅವಕಾಶ ದೊರಕಿದಂತಾಗಿದೆ. ಬೈಡನ್ ಅವರ ಡೆಮಾಕ್ರಟಿಕ್ ಪಾರ್ಟಿ ಸೆನೆಟ್‌ನ ನಿಯಂತ್ರಣ ಉಳಿಸಿಕೊಂಡಿರುವುದರಿಂದ ಬೈಡನ್ ಅವರ ಹಾದಿ ಸುಗಮವಾಗಲಿದೆ.
ಸುಪ್ರೀಂಕೋರ್ಟ್ ಪ್ರಸ್ತುತ ಆರು ಮಂದಿ ಸಂಪ್ರದಾಯವಾದಿಗಳು ಮತ್ತು ಮೂವರು ಉದಾರವಾದಿ ನ್ಯಾಯಮೂರ್ತಿಗಳನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ಬೈಡನ್ ಮತ್ತೊಬ್ಬರು ಉದಾರವಾದಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ