ಬೆಂಗಳೂರು
ಕೋವಿಡ್ ಪ್ರಕರಣ ಇಳಿಕೆ; ಸೋಮವಾರದಿಂದ ಶಾಲೆ ಪುನರಾರಂಭಕ್ಕೆ ಚಿಂತನೆ: ಸಚಿವ ಬಿ.ಸಿ.ನಾಗೇಶ್

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರದಿಂದ ಶಾಲೆಗಳನ್ನು ಪುನರಾರಂಭಿಸಲು ಸಿದ್ಧತೆಗಳು ನಡೆದಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಕಟಿಸಿದ್ದಾರೆ.
"ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಇಳಿಯುತ್ತಿರುವ ಹಿನ್ನೆಲೆಯಲ್ಲಿ ಸಂಪುಟದ ಅಭಿಪ್ರಾಯ ಪಡೆಯುವ ಜತೆಗೆ ಈ ಬಗ್ಗೆ ತಜ್ಞರ ಸಲಹೆಯನ್ನೂ ಪಡೆಯಲಾಗುವುದು" ಎಂದು ಅವರು ಹೇಳಿದ್ದಾರೆ.
ಕೋವಿಡ್ ತಾಂತ್ರಿಕ ಸಲಹ ಸಮಿತಿಯಿಂದ ಈ ಬಗ್ಗೆ ಸಲಹೆ ಪಡೆಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಟಿಎಸಿ ವರದಿ ಬಂದ ತಕ್ಷಣ ಬೆಂಗಳೂರಿನಲ್ಲಿ ಶಾಲಾ ಪುನಾರಂಭದ ಜತೆಗೆ ಇತರ ನಿರ್ಬಂಧಗಳನ್ನು ಸಡಿಲಿಸುವ ಸಂಬಂಧವೂ ಚರ್ಚೆ ನಡೆಸಲು ಸಭೆ ಆಯೋಜಿಸುವುದಾಗಿ ಅವರು ಹೇಳಿದ್ದಾರೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ತಜ್ಞರ ಸಮಿತಿಯ ವರದಿ ಬಂದ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ನಿಯಮ ಸಡಿಲಿಕೆಗೆ, ಶಾಲೆ ಕಾಲೇಜು ಪುನರಾರಂಭಕ್ಕೆ ಹಲವು ಸಂಸ್ಥೆಗಳು ಮನವಿ ಮಾಡಿಕೊಂಡಿವೆ" ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ವಿವರಿಸಿದರು.
ಮುಂಜಾಗ್ರತಾ ಕ್ರಮವಾಗಿ ಒಂದರಿಂದ ಒಂಬತ್ತನೇ ತರಗತಿವರೆಗೆ ಶಾಲೆ ಮುಚ್ಚಲಾಗಿದೆ. ರಾಜ್ಯದ ಸರಾಸರಿಗಿಂತ ಧನಾತ್ಮಕತೆ ದರ ಬೆಂಗಳೂರಿನಲ್ಲಿ ಅಧಿಕ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ